ಕರ್ನಾಟಕದಲ್ಲಿ ಪೂರ್ಣಬಹುಮತದ ಕಾಂಗ್ರೆಸ್ ಸರಕಾರವನ್ನು ಜನತೆ ಬಯಸಿದ್ದಾರೆ: ಹನುಮಂತಯ್ಯ

ಮಂಗಳೂರು: ಕರ್ನಾಟಕದಲ್ಲಿ ಪೂರ್ಣಬಹುಮತದ ಕಾಂಗ್ರೆಸ್ ಸರಕಾರವನ್ನು ಜನತೆ ಬಯಸಿದ್ದಾರೆ. ಮೇ 13ರ ಹೊತ್ತಿಗೆ ರಾಜ್ಯದಲ್ಲಿ ಕಾಂಗ್ರೆಸ್ನ ಹೊಸ ಶಾಖೆ ಆರಂಭವಾಗಲಿದೆ ಎಂದು ರಾಜ್ಯ ಸಭಾ ಸದಸ್ಯ ಡಾ.ಎಲ್.ಎನ್. ಹನುಮಂತಯ್ಯ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಕರ್ನಾಟಕಕ್ಕೆ ಶಾಪವಾಗಿರುವ ಭ್ರಷ್ಟ 40 ಪರ್ಸೆಂಟ್ ಬಿಜೆಪಿ ಸರಕಾರವನ್ನು ಕಿತ್ತೆಸೆಯಲು ಮೇ 10ನೇ ದಿನಾಂಕವನ್ನು ಕಾಯುತ್ತಿದ್ದಾರೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಭ್ರಷ್ಟ ಆಡಳಿತವನ್ನು ನೀಡಿದೆ. ಚುನಾವಣೆಯ ಹೊಸ್ತಿಲಲ್ಲಿ ಇರುವಾಗಲೇ ಸಂಪೂರ್ಣವಾಗಿ ಜನರನ್ನು ಗೊಂದಲದಲ್ಲಿ ಸಿಲುಕಿಸುವ ಅಸ್ಪಷ್ಟ ಮೀಸಲಾತಿಯನ್ನು ಪ್ರಕಟಿಸಿದೆ. ಇದರೊಂದಿಗ ಜನರ ಮೂಗಿಗೆ ತುಪ್ಪ ಸವರಿ ಅಧಿಕಾರವನ್ನು ಹಿಡಿಯುವ ಪ್ರಯತ್ನ ನಡಸಿದ್ದಾರೆ. ಆದರೆ ಅದರ ಕನಸು ಈಡೇರದು ಎಂದರು.
ಇದೇ ಮೊದಲ ಬಾರಿ ಕರ್ನಾಟಕದಲ್ಲಿ ಎಲ್ಲ ಪಕ್ಷಗಳಿಗಿಂತಲು ಮುಂಚಿತವಾಗಿ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಎರಡನೇ ಪಟ್ಟಿ ಪ್ರಕಟಗೊಂಡಿದ್ದು ಇನ್ನೂ ಶೀಘ್ರದಲ್ಲಿ ಅಂದರೆ ಎರಡು ಮೂರು ದಿನಗಳಲ್ಲಿ ಮೂರನೇ ಹಾಗೂ ಅಂತಿಮ ಪ್ರಕಟಗೊಳ್ಳಲಿದೆ. ಉಳಿದಿರುವ ಕ್ಷೇತ್ರಗಳಲ್ಲಿ ಸುಮಾರು 40 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಈ ವರೆಗೆ ಮೊದಲ ಪಟ್ಟಿಯನ್ನು ಪ್ರಕಟಿಸಿಲ್ಲ. ಕಾಂಗ್ರೆಸ್ನಿಂದ ಮತ್ತು ಬೇರೆ ಪಕ್ಷಗಳಿಂದ ಬರುವ ಅಭ್ಯರ್ಥಿಗಳಿಗಾಗಿ ಕಾಯುತ್ತಿದ್ದಾರೆ. ಅನೈತಿಕ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಬಯಸಿದ್ದಾರೆ. ಹಿಂದೆ ಚುನಾವಣೆ ಬಳಿಕ ಶಾಸಕರನ್ನು ಖರೀದಿಸಿ ಆಡಳಿತ ಹಿಡಿಯುತ್ತಿದ್ದರು. ಆದರೆ ಈಗ ಚುನಾವಣೆಯ ಮೊದಲೇ ಅನೈತಿಕ ಮಾರ್ಗದಲ್ಲಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಗೆ ಜನರಿಂದ ಆಯ್ಕೆಯಾದ ಶಾಸಕರಿಂದ ಆಡಳಿತ ಬೇಕಾಗಿಲ್ಲ. ಅವರು ಬ್ಲಾಕ್ಮೇಲ್ ಮಾಡಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕುದುರೆ ವ್ಯಾಪಾರ ಮೂಲಕ ಮತ್ತೆ ಅಧಿಕಾರ ಹಿಡಿಯುವ ಇಂತಹ ಪ್ರಯತ್ನ ನಡೆಯದು ಎಂದರು.
ದ.ಕ. ಜಿಲ್ಲೆಯಲ್ಲಿ 8 ಸ್ಥಾನಗಳ ಪೈಕಿ 8ನ್ನು ಕಾಂಗ್ರೆಸ್ ಗೆಲಲ್ಲಿದೆ. ಕರ್ನಾಟಕದ ಚುನಾವಣೆ ದೇಶದ 24ರ ಲೋಕಸಭಾ ಚುನಾವಣೆಗೆ ರಾಜ್ಯದ ದಿಕ್ಷೂಚಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಂದಿನ ಚುನಾವಣೆಗೆ ಸಂಬಂಧಿಸಿ ಕರ್ನಾಟಕಕ್ಕೆ ಸಾವಿರಾರು ಐಟಿ ಅಧಿಕಾರಿಗಳು ಆಗಮಿಸಿರುವ ಮಾಹಿತಿ ಇದೆ. ಇವರೆಲ್ಲ ವಿಪಕ್ಷದ ಚುನಾವಣಾ ಅಭ್ಯರ್ಥಿಗಳ ಮೇಲೆ ಐಟಿ ದಾಳಿ ನಡೆಸುವ ಮೂಲಕ ಅವರಲ್ಲಿ ನೈತಿಕ ಭಯ ಹುಟ್ಟಿಸುವ ‘ಚುನಾವಣಾ ಕಾಲದ ಭಯೋತ್ಪಾದನೆ’ ಪ್ರಯತ್ನ ನಡೆಸಲಿದ್ದಾರೆ ಎಂದು ಆರೋಪಿಸಿದರು.
ಐಟಿ, ಈ.ಡಿ. ಮತ್ತು ಸಿಬಿಐ ದಾಳಿ ವಿಪಕ್ಷ ನಾಯಕರ ಮೇಲೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ ಅವರು ದಾಳಿಯ ಭಯ ಇರುವ ಯಾರಾರರೂ ಬಿಜೆಪಿ ಸೇರಿದರೆ ಅವರು ಸ್ವಚ್ಛವಾಗಿ ಬಿಡುತ್ತಾರೆ. ಅವರ ಮೇಲೆ ಇರುವ ಆರೋಪಗಳು ಇಲ್ಲವಾಗುತ್ತದೆ ಎಂದರು.
ಪಕ್ಷದ ಧುರೀಣರಾದ ನವೀನ್ ಡಿ ಸೋಜ, ಹಬೀಬ್ ಕಣ್ಣೂರು, ಶಬೀರ್ ಸಿದ್ದಕಟ್ಟೆ, ಸುಬೋದಯ ಆಳ್ವ, ಧೀರಜ್ ಪಾಲ್, ಜಯಶೀಲ ಅಡ್ಯಂತಾಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.