ಉಡುಪಿ ಎಂಜಿಎಂ ಕಾಲೇಜಿಗೆ ನ್ಯಾಕ್ ಎ ಪ್ಲಸ್ ಮಾನ್ಯತೆ
ಉಡುಪಿ : ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿಗೆ ಎ ಪ್ಲಸ್ ದರ್ಜೆಯ ಮಾನ್ಯತೆಯನ್ನು ನೀಡಿದೆ.
ಕಾಲೇಜಿನ ಶ್ರೇಷ್ಠತೆ, ಉತ್ತಮ ಗುಣಮಟ್ಟದ ಬೋಧನಾ ಪದ್ಧತಿ, ಕಲಿಕಾ ಮಟ್ಟ, ಶೈಕ್ಷಣಿಕ ಸಾಧನೆ, ಹದಿನೇಳು ವಿಭಾಗಗಳ ಕಾರ್ಯಶೈಲಿ, ಸಂಶೋಧನೆ, ಪ್ರಯೋಗಾಲಯಗಳು, ಮ್ಯೂಸಿಯಂಗಳು, ಗ್ರಂಥಾಲಯ, ಗಾಂಧಿ ಅಧ್ಯಯನ ಕೇಂದ್ರ, ಇಂಡಸ್ಟ್ರಿ ಇಂಟರ್ಫೇಸ್ ಲ್ಯಾಬ್, ಎನ್ಎಸ್ಎಸ್, ಎನ್ಸಿಸಿ, ವೈಆರ್ಸಿ, ರೇಂಜರ್ಸ್-ರೋವರ್ಸ್ ಚಟುವಟಿಕೆಗಳು, ಸಮಾಜ ಸೇವೆ- ವಿಸ್ತರಣಾ ಕಾರ್ಯ, ಉತ್ತಮ ದರ್ಜೆಯ ಮೂಲ ಸೌಕರ್ಯ, ಅತ್ಯಾಧುನಿಕ ಕಂಪ್ಯೂಟರ್ ವಿಭಾಗ, ಮಾಹಿತಿ ತಂತ್ರಜ್ಞಾನ ಆಧಾರಿತ ಕಲಿಕಾ ಸೌಲಭ್ಯಗಳು, ಲಭ್ಯ ಸಂಪನ್ಮೂಲ ಗಳ ಸಮರ್ಪಕ ಬಳಕೆಯ ಮಾರ್ಗೋಪಾಯ, ಸಾಂಸ್ಕೃತಿಕ ಸಾಧನೆ, ಸಾಂಸ್ಕೃತಿಕ ಪರಿಸರ, ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಕಾರ್ಯಗತ ಗೊಳಿಸಿರುವ ಚಟುವಟಿಕೆಗಳು, ಪ್ಲೇಸ್ಮೆಂಟ್, ಉದ್ಯೋಗ ಮಾರ್ಗದರ್ಶನ, ಮೌಲಿಕ ಶಿಕ್ಷಣ ವ್ಯವಸ್ಥೆ, ಕೌಶಲ್ಯಾಭಿವೃದ್ಧಿ, ಕ್ರೀಡಾ ವ್ಯವಸ್ಥೆ, ಹಳೆ ವಿದ್ಯಾರ್ಥಿ ಘಟಕ, ಶಿಕ್ಷಕ ರಕ್ಷಕ ಸಮಿತಿ, ವಿದ್ಯಾರ್ಥಿ ಕ್ಷೇಮಪಾಲನಾ ಮಂಡಳಿ, ಆಂತರಿಕ ಗುಣಮಟ್ಟ ಖಾತರಿ ಘಟಕ, ಸಂಸ್ಥೆಯ ಸಮರ್ಥ ಆಡಳಿತ ಹಾಗೂ ನಾಯಕತ್ವ, ವಿದ್ಯಾರ್ಥಿ ಕೇಂದ್ರಿತ ಸೃಜನಶೀಲ ಚಟುವಟಿಕೆಗಳು, ವಿದ್ಯಾರ್ಥಿಗಳ ಗುಣಮಟ್ಟ, ಪರಿಸರ ಸ್ನೇಹಿ ವ್ಯವಸ್ಥೆ, ಸಂಸ್ಥೆಯ ವೈಶಿಷ್ಟ್ಯ ಮುಂತಾದವುಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಎರಡು ಹಂತಗಳ ಪರಿಶೀಲನೆ ಹಾಗೂ ಮೌಲ್ಯ ಮಾಪನ ನಡೆಸಿ ನ್ಯಾಕ್ ಈ ಉತ್ತಮ ಶ್ರೆಣಿಯನ್ನು ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ ಹಾಗೂ ಐಕ್ಯೂಎಸಿ ಸಂಯೋಜಕ ಅರುಣ್ ಕುಮಾರ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ.30 ಹಾಗೂ 31ರಂದು ಮಧ್ಯಪ್ರದೇಶದ ರೀವಾದ ಅವಧೇಶ್ ಪ್ರಸಾದ್ ವಿಶ್ವವಿದ್ಯಾಲಯದ ಪೂರ್ವ ಕುಲಪತಿ ಡಾ.ಆರ್.ಎಂ.ಮಿಶ್ರ ನೇತೃತ್ವದ ತ್ರಿಸದಸ್ಯರಿದ್ದ ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಅಮೃತ ಮಹೋತ್ಸವ ವರ್ಷಾಚರಣೆಯ ಹೊಸ್ತಿಲಲ್ಲಿರುವ ಕಾಲೇಜು ಎ ಪ್ಲಸ್ ಶ್ರೇಣಿಯನ್ನು 3.36 ಸಿಜಿಪಿಎ ಪಡೆಯುವುದರೊಂದಿಗೆ ತನ್ನ ಹಿಂದಿನ ದಾಖಲೆಯನ್ನು ಗಣನೀಯವಾಗಿ ಉತ್ತಮಪಡಿಸಿಕೊಂಡಂತೆ ಆಗಿದೆ.
ಕಾಲೇಜಿನ ಸಾಧನೆಗೆ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಸತೀಶ್ ಯು ಪೈ, ಅಕಾಡೆಮಿ ಆಫ್ ಜನರಲ್ ಮಣಿಪಾಲ್ ರಿಜಿಸ್ಟ್ರಾರ್ ಡಾ.ರಂಜನ್ ಆರ್ ಪೈ, ಹಾಗೂ ಮಾಹೆ ಸಹಕುಲಾಧಿಪತಿ ಡಾ. ಹೆಚ್ ಎಸ್ ಬಲ್ಲಾಳ್ ಕಾಲೇಜನ್ನು ಅಭಿನಂದಿಸಿದ್ದಾರೆ.