ಹಿಂದೂ ಸಮಾಜದ ರಕ್ಷಣೆ ನನ್ನ ಮುಖ್ಯ ಧ್ಯೇಯ: ಯಶ್ಪಾಲ್ ಸುವರ್ಣ

ಉಡುಪಿ : ರಾಷ್ಟ್ರೀಯ ಚಿಂತನೆ, ಹಿಂದೂ ಸಮಾಜದ ರಕ್ಷಣೆ ನನ್ನ ಮುಖ್ಯ ಧ್ಯೇಯವಾಗಿದೆ. ನಾನು ಹಿಂದೂ, ಆದರೆ ನಾನು ಒಂದು ಜಾತಿಗೆ ಸೀಮಿತವಾಗಿಲ್ಲ. ನಾನು ಹುಟ್ಟುವಾಗ ಮೊಗವೀರ ಜಾತಿಯಲ್ಲಿ ಹುಟ್ಟಿದ್ದೇನೆ. ಅದಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ನನ್ನ ವಿಚಾರ, ಸಿದ್ಧಾಂತವನ್ನು ಮುಂದಿಟ್ಟುಕೊಂಡು ನಾನು ಕೆಲಸವನ್ನು ಮಾಡುತ್ತೇನೆ ಎಂದು ಉಡುಪಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರವನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತೇನೆ. ಪಕ್ಷ ಕೊಟ್ಟ ಸಲಹೆ ಸೂಚನೆಯನ್ನು ಪಾಲಿಸುತ್ತೇನೆ. ಕರಾವಳಿ ಭಾಗದ ಉದ್ದಗಲಕ್ಕೂ ಓಡಾಡುತ್ತೇನೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತವಾಗಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಪಕ್ಷದ ಚಟುವಟಿಕೆಗಳನ್ನು ಬಹಳ ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದರು.
ದೇಶದಲ್ಲಿ ಶೇ.50ರಷ್ಟು ಹಿಂದುಳಿದ ವರ್ಗದವರಿದ್ದಾರೆ. ಕಾಂಗ್ರೆಸ್ ಹಿಂದುಳಿದ ವರ್ಗವನ್ನು ಕಡೆಗಣಿಸಿ, ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಕಾಂಗ್ರೆಸ್‌ನವರು ಹಿಂದುಳಿದ ವರ್ಗ, ದಲಿತರನ್ನು ಸೈಡ್ ಲೈನ್ ಮಾಡಿದ್ದರು. ಮೋದಿ ಎಲ್ಲ ವರ್ಗದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಶಾಸಕ ರಘುಪತಿ ಭಟ್ ಅವರನ್ನು ಇವತ್ತು ಭೇಟಿಯಾಗುತ್ತೇನೆ. ಬಹಳ ವರ್ಷಗಳಿಂದ ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ರಘುಪತಿ ಭಟ್ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಚುನಾವಣೆಯನ್ನು ಎದುರಿಸುತ್ತೇನೆ. ಶಾಸಕರ ಜೊತೆ ಜನಗಳ ಬಳಿ ಹೋಗಿ ಮತಪ್ರಚಾರ ಮಾಡುತ್ತೇನೆ ಎಂದು ಅವರು ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ
ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಬಿಜೆಪಿ ಉಡುಪಿ ಜಿಲ್ಲಾ ಕಚೇರಿಗೆ ಆಗಮಿಸಿದ ಯಶ್ಪಾಲ್ ಎ. ಸುವರ್ಣ ಅವರನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸ್ವಾಗತಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್ ಹಾಗೂ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.