ಅಕ್ರಮ ಭೂ ಮಂಜೂರಾತಿ: ಶಾಸಕ ಲಿಂಗೇಶ್ ವಿರುದ್ಧ ಕೋರ್ಟ್ ಆದೇಶದಂತೆ ಎಫ್ಐಆರ್ ದಾಖಲು
ಬೆಂಗಳೂರು, ಎ.12: ಸರಕಾರಿ ಜಮೀನನ್ನು ಅನರ್ಹರಿಗೆ ಮಂಜೂರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಎಸ್.ಲಿಂಗೇಶ್ ಸೇರಿ 16 ಮಂದಿಯ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನಿರ್ದೇಶನದಂತೆ ಬೇಲೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ದೂರು ಆಧರಿಸಿ ಶಾಸಕ ಹಾಗೂ ತಾಲೂಕಿನ ಬಗರ್ಹುಕುಂ ಸಾಗುವಳಿ ಸಮಿತಿಯ(ಭೂ ಮಂಜೂರಾತಿ) ಅಧ್ಯಕ್ಷರಾಗಿದ್ದ ಕೆ.ಎಸ್.ಲಿಂಗೇಶ್, ತಹಶೀಲ್ದಾರ್ಗಳು ಸೇರಿ ಒಟ್ಟು 16 ಮಂದಿ ಆರೋಪಿಗಳಾಗಿದ್ದಾರೆ.
ಬೇಲೂರು ತಾಲೂಕಿನ ಅಂದಾಜು ಮಾರುಕಟ್ಟೆ ದರ 775 ಕೋಟಿಗೂ ಹೆಚ್ಚಿನ ಮೌಲ್ಯದ 2,750 ಎಕರೆ 86 ಗುಂಟೆಯಷ್ಟು ಸರಕಾರಿ ಜಮೀನನ್ನು ಬಲಾಢ್ಯ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ. ಶಾಸಕ ಕೆ.ಎಸ್.ಲಿಂಗೇಶ್ ಸೇರಿದಂತೆ ಒಟ್ಟು 16 ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ಕೋಲಾರ ಗಾಂಧಿನಗರದ ನಿವಾಸಿ ಕೆ.ಸಿ.ರಾಜಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ವಿವರಗಳಂತೆ, ‘ಬೇಲೂರು ತಾಲೂಕು ಕಸಬಾ ಹೋಬಳಿಯ ಪುರಸಭೆ ವ್ಯಾಪ್ತಿಯ 3 ಕಿ.ಮೀ ಒಳಗಿನ ಮಾವಿನಕೆರೆ, ಬಂಟೇನಹಳ್ಳಿ, ಮುದಿಗೆರೆ ಹಾಗೂ ರಾಯಪುರದ ಸರ್ವೇ ನಂಬರ್ಗಳ ಪೈಕಿ 18 ಜನರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸರಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. 2016ರ ಅ.28ರಿಂದ 2022ರ ಡಿ.11ರ ಮಧ್ಯದ ಅವಧಿಯಲ್ಲಿ ನಡೆದ ಭೂ ಸಕ್ರಮೀಕರಣದ 26 ಸಭೆಗಳಲ್ಲಿ ಒಟ್ಟು 1,430 ಅರ್ಜಿದಾರರ ಪೈಕಿ 2,750 ಎಕರೆ 86 ಗುಂಟೆ ಜಮೀನಿನ ಅಕ್ರಮ ಮಂಜೂರಾತಿ ಪ್ರಕ್ರಿಯೆ ಜರುಗಿದೆ’ ಎಂದು ದೂರುದಾರರು ಆರೋಪಿಸಿದ್ದಾರೆ.
ಸುಳ್ಳು ದಸ್ತಾವೇಜುಗಳನ್ನು ಸೃಷ್ಟಿಸಿರುವ ಈ ಸರಕಾರಿ ನೌಕರರು ನಂಬಿಕೆ ದ್ರೋಹ ಎಸಗಿರುತ್ತಾರೆ. ಹೀಗಾಗಿ, ಇವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಫಿರ್ಯಾದುದಾರರು ಕೋರಿದ್ದಾರೆ.