ಬೆಂಗಳೂರು: ಪ್ರೇಯಸಿಯ ಹುಟ್ಟುಹಬ್ಬ ಆಚರಿಸಿ ಬಳಿಕ ಕತ್ತು ಕೊಯ್ದು ಕೊಲೆಗೈದ ಪ್ರಿಯಕರ

ಬೆಂಗಳೂರು, ಎ.15: ಪ್ರೇಯಸಿಯ ಹುಟ್ಟುಹಬ್ಬ ಆಚರಿಸಿ ಬಳಿಕ ಪ್ರಿಯಕರನೇ ಆಕೆಯ ಕತ್ತು ಕೊಯ್ದು ಕೊಲೆ(Murder)ಗೈದ ಘಟನೆ ಬೆಂಗಳೂರಿನ ಲಗ್ಗೆರೆ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ನವ್ಯಾ (24) ಕೊಲೆಯಾದ ಯುವತಿ. ಪ್ರಶಾಂತ್ ಕೊಲೆ ಆರೋಪಿಯಾಗಿದ್ದು, ಆತನನ್ನು ರಾಜಗೋಪಾಲನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಪೊಲೀಸ್ ಇಲಾಖೆಗೆ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯಾ ಹಾಗೂ ಪ್ರಶಾಂತ್ ದೂರದ ಸಂಬಂಧಿಕರಾಗಿದ್ದು, ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ನಡುವೆ ನವ್ಯಾ ಬೇರೆಯವರ ಜೊತೆ ಚಾಟಿಂಗ್ ಮಾಡುತ್ತಿದ್ದಾಳೆ ಎಂದು ಅನುಮಾನಿಸಿ ಪ್ರಶಾಂತ್ ತಗಾದೆ ಮಾಡುತ್ತಿದ್ದನೆನ್ನಲಾಗಿದೆ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಪದೇಪದೇ ಜಗಳ ಆಗುತ್ತಿತ್ತೆನ್ನಲಾಗಿದೆ.
ಕಳೆದ ಮಂಗಳವಾರ ನವ್ಯಾ ಅವರ ಹುಟ್ಟುಹಬ್ಬ ಇತ್ತು. ಆದರೆ ಅಂದು ಬ್ಯುಸಿ ಇದ್ದೇನೆ ಎಂದು ಹೇಳಿ ತಪ್ಪಿಸಿಕೊಂಡಿದ್ದ ಪ್ರಶಾಂತ್ ಕಳೆದ ರಾತ್ರಿ ನವ್ಯಾಳ ಹುಟ್ಟುಹಬ್ಬ ಆಚರಣೆಗೆ ವ್ಯವಸ್ಥೆ ಮಾಡಿದ್ದ. ಅದರಂತೆ ಆಗಮಿಸಿದ ನವ್ಯಾಳಿಂದ ಕೇಕ್ ಕಟ್ ಮಾಡಿಸಿದ್ದ. ಬಳಿಕ ಆರೋಪಿ ಪ್ರಶಾಂತ್ ಅಲ್ಲೇ ಹರಿತವಾದ ಚಾಕುವಿನಿಂದ ನವ್ಯಾಳ ಕುತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
