ಬೆಳ್ತಂಗಡಿ | ಸೋಮಾವತಿ ನದಿಯಲ್ಲಿ ಸಾವಿರಾರು ಮೀನುಗಳ ಸಾವು: ನೀರಿಗೆ ವಿಷಪ್ರಾಶನ ಶಂಕೆ

ಬೆಳ್ತಂಗಡಿ, ಎ.27: ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಪ್ರಮುಖ ಮೂಲವಾಗಿರುವ ಸೋಮಾವತಿ ನದಿಯಲ್ಲಿ ಸಾವಿರಾರು ಮೀನು ಸತ್ತು ಬಿದ್ದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ನದಿಗೆ ಕಿಡಿಗೇಡಿಗಳು ವಿಷ ಪದಾರ್ಥ ಹಾಕಿರುವ ಶಂಕೆ ವ್ಯಕ್ತವಾಗಿದೆ.
ಈ ನದಿ ನೀರು ಬೆಳ್ತಂಗಡಿ ನಗರಕ್ಕೆ ನೀರು ಪೂರೈಸುವ ಪ್ರಮುಖ ಮೂಲವಾಗಿದೆ. ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು, ಇದೇ ನದಿ ನೀರನ್ನು ಪೂರೈಸಲಾಗುತ್ತಿತ್ತು. ಆದರೆ ವಿಷಪ್ರಾಶನವಾಗಿರುವ ಹಿನ್ನೆಲೆಯಲ್ಲಿ ಸದ್ಯ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಸಿಲಿನ ತಾಪಕ್ಕೆ ಎಲ್ಲ ನದಿಗಳೂ ಬತ್ತಿ ಹೋಗಿದ್ದು, ಕೃಷಿಗೆ ಮಾತ್ರವಲ್ಲ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನದಿ ನೀರಿನ ಘಟಕ ಈ ರೀತಿ ಆಗಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.