ಉಚ್ಚಿಲ: ದೇವಸ್ಥಾನದೊಳಗೆ ಹೋಗಲು ನಿರಾಕರಿಸಿದ ರಾಹುಲ್ !
"ನಾನು ಮೀನು ಮುಟ್ಟಿರುವುದರಿಂದ ಒಳಗೆ ಹೋಗಲು ಆಗುವುದಿಲ್ಲ"

ಉಚ್ಚಿಲ (ಪಡುಬಿದ್ರಿ), ಎ.27: ಗುರುವಾರ ಕಾಪು ತಾಲೂಕಿನ ಉಚ್ಚಿಲಕ್ಕೆ ಆಗಮಿಸಿ ಇಲ್ಲಿನ ಶಾಲಿನಿ ಡಾ.ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಜಿಲ್ಲೆಯ ಮೀನುಗಾರರೊಂದಿಗೆ ಸಂವಾದ ನಡೆಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕಾರ್ಯಕ್ರಮದ ಬಳಿಕ ಪಕ್ಕದಲ್ಲೇ ಇರುವ ಪುನರ್ನಿಮಾಣಗೊಂಡ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದರಾದರೂ ದೇವಸ್ಥಾನ ದೊಳಗೆ ತೆರಳಲು ನಿರಾಕರಿಸಿದರು.
ಸಂವಾದ ಕಾರ್ಯಕ್ರಮದ ಕೊನೆಯಲ್ಲಿ ಮೀನುಗಾರ ಮಹಿಳೆಯೊಬ್ಬರು ನೀಡಿದ ಭಾರೀ ಗಾತ್ರದ ‘ಅಂಜಲ್’ ಮೀನನ್ನು ಸ್ವೀಕರಿಸಿದ ರಾಹುಲ್ ಗಾಂಧಿ ಬಳಿಕ ಅದನ್ನು ಪಕ್ಕದಲ್ಲಿದ್ದ ಕಾಂಗ್ರೆಸ್ ಮುಖಂಡ ಪ್ರತಾಪನ್ ಅವರಿಗೆ ನೀಡಿದರು.
ಇಲ್ಲಿಗೆ ಬರುವ ಸ್ವಲ್ಪ ಮೊದಲು ತಾನು ಹಸಿ ಮೀನು ಮುಟ್ಟಿದ್ದರಿಂದ ದೇವಸ್ಥಾನದ ಒಳಗೆ ಹೋಗಲು ರಾಹುಲ್ ಗಾಂಧಿ ನಿರಾಕರಿಸಿದರು. ದೇವಸಾನಕ್ಕೆ ಭೇಟಿ ನೀಡಿದ ಅವರನ್ನು ಒಳಗೆ ಬರಲು ಹೇಳಿದಾಗ ನಾನು ಮೀನು ಮುಟ್ಟಿರುವುದರಿಂದ ಒಳಗೆ ಹೋಗಲು ಆಗುವುದಿಲ್ಲ ಎಂದು ಒಳಗೆ ಹೋಗಲು ನಿರಾಕರಿಸಿದರು.
ಬಳಿಕ ದೇವಸ್ಥಾನದ ಅರ್ಚಕರು ಸುತ್ತುಪೌಳಿ ಬಳಿ ರಾಹುಲ್‌ಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಯ ಸಿ. ಕೋಟ್ಯಾನ್, ವಾಸುದೇವ ಸಾಲ್ಯಾನ್, ಗುಂಡು ಬಿ ಅಮೀನ್, ಸುಧಾಕರ ಕುಂದರ್, ಸುಭಾಶ್‌ಚಂದ್ರ ಕಾಂಚನ್, ಭರತ್‌ಕುಮಾರ್ ಎರ್ಮಾಳು, ಮ್ಯಾನೇಜರ್ ಸತೀಶ್ ಅಮೀನ್ ಉಪಸ್ಥಿತರಿದ್ದರು.
