ಕಾಂಗ್ರೆಸ್ ಮನಸ್ಸು ವಿಷಪೂರಿತವಾಗಿದೆ: ಸುನಿಲ್ ಕುಮಾರ್

ಕಾರ್ಕಳ: ಜಗತ್ತಿನ ಶ್ರೇಷ್ಠ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾದ ನರೇಂದ್ರ ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿರುವುದು ಕಾಂಗ್ರೆಸ್ ಪಕ್ಷದ ಹೀನ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಸಚಿವ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹೇಳಿದರು.
ಅವರು ಶುಕ್ರವಾರ ಕಾರ್ಕಳ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಅಕ್ಷೇಪಾರ್ಹ ಹೇಳಿಕೆ ಪ್ರತಿಕ್ರಿಯಿಸಿ ಮಾತನಾಡಿದರು.
ದೇಶದ ಮಹಾನ್ ಪ್ರಧಾನಿಯ ವಿರುದ್ಧ ಹೇಳಿಕೆ ನೀಡುವ ಕಾಂಗ್ರೆಸ್ ಪಕ್ಷದ ಮನಸ್ಸು, ನಡವಳಿಕೆ, ಭರವಸೆಗಳು ಎಲ್ಲವೂ ವಿಷಪೂರಿತವಾಗಿದೆ. ತಮ್ಮ ರಾಜಕೀಯ ಭಾಷಣಕ್ಕಾಗಿ ದೇಶದ ಪ್ರಧಾನ ಮಂತ್ರಿಯವರನ್ನು ಅವಹೇಳನ ಮಾಡುವುದನ್ನು ಜನತೆ ಕ್ಷಮಿಸುವುದಿಲ್ಲ, ಈ ಹಿಂದೆ ಸಿದ್ದರಾಮಯ್ಯನವರು ಪ್ರಧಾನಿ ವಿರುದ್ಧ ನರಹಂತಕ ಹೇಳಿಕೆ ನೀಡಿದ್ದರು, ಇದು ದೇಶವನ್ನು ಅವಮಾನಿಸಿದಂತೆ ಎಂದು ಸುನಿಲ್ ಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷವು ಗಾಂಧಿಕುಟುಂಬದ ಕೃಪಾಕಟಾಕ್ಷದಲ್ಲಿ ಬದುಕುತ್ತಿದೆ. ಖರ್ಗೆ ನಾಮಕಾವಸ್ಥೆ ಅಧ್ಯಕ್ಷರಾಗಿದ್ದು, ಗಾಂಧಿ ಕುಟುಂಬದ ಅಡುಗೆ ಮನೆಯಲ್ಲಿ ಆಗಿರುವ ಚರ್ಚೆಯನ್ನು ಭಾಷಣ ರೂಪದಲ್ಲಿ ಹೇಳುವ ಮೂಲಕ ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬವನ್ನು ಓಲೈಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸುನಿಲ್ ಕುಮಾರ್ ವ್ಯಂಗ್ಯವಾಡಿದರು.
ಮುತಾಲಿಕ್ ಸ್ಪರ್ಧೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮುತಾಲಿಕ್ ಪಕ್ಷ ಕಾಂಗ್ರೆಸ್ ಪಕ್ಷದ ಬಿ ಟೀಮ್ ಆಗಿದೆ. ಮುತಾಲಿಕ್ ಜತೆಗಿರುವ ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿದ್ದಾರೆ. ಇದರಿಂದ ಬಿ ಟೀಮ್ ಯಾರು ಎನ್ನುವುದು ಮತದಾರರಿಗೆ ಗೊತ್ತಿದೆ ಎಂದರು.
ಪಿಎಫ್ಐ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಪಿಎಫ್ಐ ಸಂಘಟನೆಯನ್ನು ಬೆಳೆಸಿರುವುದೇ ಕಾಂಗ್ರೆಸ್. ದೇಶದ್ರೋಹಿ ಸಂಘಟನೆಯಾಗಿರುವ ಪಿಎಫ್ಐ ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆಗೊಳಿಸಿರುವ ಕಾಂಗ್ರೆಸ್ ನ ಬಣ್ಣ ಬಯಲಾಗಿದೆ. ದೇಶದ್ರೋಹಿ ಪಿಎಫ್ಐ ಸಂಘಟನೆಯನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಿರುವುದೇ ಬಿಜೆಪಿ ಎಂದರು.
ಸುದ್ದಿಗೋಷ್ಟಿಯಲ್ಲಿ ವಿಧಾನಷರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು