ಕಾಪು ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ ಚಾಲನೆ

ಕಾಪು: ನವ ನಿರ್ಮಾಣದತ್ತ ಕಾಪು ಘೋಷಣೆಯೊಂದಿಗೆ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ರಥ ಯಾತ್ರೆಗೆ ಇಂದು ಕಾಪುವಿನಲ್ಲಿ ಚಾಲನೆ ನೀಡಲಾಯಿತು.
ರಥಯಾತ್ರೆಯನ್ನು ಕಾಪು ಶಾಸಕ ಲಾಲಾಜಿ ಮೆಂಡನ್ ಮತ್ತು ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಜೊತೆಯಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಲಾಲಾಜಿ ಮೆಂಡನ್, ಕಳೆದ ಬಾರಿ ಗೆದ್ದಂತಹ ಈ ಕ್ಷೇತ್ರವನ್ನು ಈ ಬಾರಿ ಪುನರಪಿ ಭಾರೀ ಅಂತರದಿಂದ ಗೆದ್ದು ಕರ್ನಾಟಕದಲ್ಲಿ ನಂಬರ್ ಒನ್ ಕ್ಷೇತ್ರವನ್ನಾಗಿ ರೂಪಿಸಬೇಕು. ಇದಕ್ಕಾಗಿ ಎಲ್ಲರೂ ಕಮಲದ ಗುರುತಿಗೆ ಮತ ಹಾಕಬೇಕು ಎಂದರು.
ದೆಹಲಿ ಶಾಸಕ ಹಾಗು ಚುನಾವಣಾ ಪ್ರವಾಸಿ ಪ್ರಭಾರಿ ವಿಜಯೇಂದ್ರ ಗುಪ್ತ ಮಾತನಾಡಿ, ಶಕ್ತಿ ಕೇಂದ್ರಗಳಲ್ಲಿ ಸರಿಯಾಗಿ ಕೆಲಸ ನಡೆದರೆ ವಿಜಯ ಖಚಿತ. ಇಲ್ಲಿ ಲಾಲಾಜಿ ಮತ್ತು ಗುರ್ಮೆ ರಾಮ ಲಕ್ಷ್ಮಣರಂತೆ ಕೆಲಸ ಮಾಡುತ್ತಿರುವುದ ರಿಂದ ಗೆಲುವು ಶತಸಿದ್ಧ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಪು ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಚುನಾವಣಾ ಉಸ್ತುವಾರಿ ಸುಲೋಚನ ಭಟ್, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ ಮೊದಲಾದವರು ಉಪಸ್ಥಿರಿದರು.