‘ಪ್ರಗತಿ ಗ್ರೂಪ್’ ಅಡಿಯಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಭ್ರಷ್ಟಾಚಾರ: ಗೌರವ್ ವಲ್ಲಭ್ ಆರೋಪ
ಬೆಂಗಳೂರು, ಎ. 30: ‘ಸಚಿವ ಡಾ.ಅಶ್ವತ್ಥ ನಾರಾಯಣ ತಮ್ಮ ‘ಪ್ರಗತಿ ಗ್ರೂಪ್’ ಅಡಿಯಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದು, ಅಕ್ರಮವಾಗಿ ಭೂಮಿ ಮಾರಾಟ ಮಾಡಿದ್ದಾರೆ’ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ ಆರೋಪಿಸಿದ್ದಾರೆ.
ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಶ್ವತ್ಥನಾರಾಯಣ ತಮ್ಮ ಇಲಾಖೆಯಡಿ ಪ್ರಗತಿ ಗ್ರೂಪ್ಗೆ 40 ಎಕರೆ ಭೂಮಿಯನ್ನು 199 ಕೋಟಿ ರೂ.ಗೆ ಮಾರಾಟ ಮಾಡಿದ್ದು, 120ಕೋಟಿ ರೂ.ಮಾತ್ರ ಟಿಡಿಎಸ್ ತೋರಿಸಿದ್ದಾರೆ. ಆದರೆ, ಸೇಲ್ ಡೀಡ್ನಲ್ಲಿ 199ಕೋಟಿ ರೂ. ಎಂದು ನಮೂದಿಸಿದ್ದಾರೆ. ಹಾಗಾದರೆ, ಉಳಿದ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.
ಅಶ್ವತ್ಥನಾರಾಯಣ ಉಳಿದ ಹಣವನ್ನು ಆದಾಯ ತೆರಿಗೆಯಲ್ಲಿಯೂ ತೋರಿಸಿಲ್ಲ. ಮೂರು ಸೇಲ್ಸ್ ಡೀಡ್ ಮಾಡಿದ್ದು, ಚೆಕ್ನಲ್ಲಿ ಹಣ ಕೊಟ್ಟಿದ್ದಾರೆ. ಆದರೂ, ಟಿಡಿಎಸ್ ಹಣ ಕಡಿಮೆ ಮಾಡಿದ್ದಾರೆ. ಉಳಿದ 79 ಕೋಟಿ ರೂ.ಎಲ್ಲಿ ಹೋಯಿತು. ಎಂದು ಗೌರವ್ ವಲ್ಲಭ್ ಪ್ರಶ್ನಿಸಿದರು.
ಅದು ಬ್ಲಾಕ್ ಮನಿಯಾ ಅಥವಾ ಮನಿ ಲಾಂಡರಿಂಗ್ ಮಾಡಲಾಗಿದೆಯೇ ಎಂಬುದಕ್ಕೆ ಸಚಿವರೇ ಉತ್ತರಿಸಬೇಕು. ಈ ಅಕ್ರಮವನ್ನು ಕಂಡು ಐಟಿ, ಇಡಿ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ. 40 ಪರ್ಸೆಂಟ್ ಕಮಿಷನ್ ದಾಖಲೆ ಕೇಳುತ್ತಾರೆ. ನಾವು ದಾಖಲೆ ಇಟ್ಟು ಮಾತನಾಡುತ್ತಿದ್ದೇವೆ. ಪ್ರಗತಿ ಗ್ರೂಪ್ನಲ್ಲಿ ಅಶ್ವಥ್ ನಾರಾಯಣ ಹಾಗೂ ಕುಟುಂಬದ ಪಾಲುದಾರಿಕೆ ಇದೆ. ಈ ಬಗ್ಗೆ ನಮ್ಮ ಬಳಿ ದಾಖಲೆಗಳಿದ್ದು, ಈ ಹಗರಣದ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ಗೌರವ್ ವಲ್ಲಭ್ ತಿಳಿಸಿದರು.
ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಮಾತನಾಡಿ, ‘ರಾಜ್ಯದಲ್ಲಿ ಮತಪ್ರಚಾರ ಮಾಡುತ್ತಿರುವ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಗೆ ಅವಮಾನ ಮಾಡಿದೆ ಎಂಬ ಅವರ ಹೇಳಿಕೆ ಸರಿಯಲ್ಲ. ಕಾಂಗ್ರೆಸ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದೆ ಅನ್ನುವುದು ನಿಜ. ಆದರೆ, ದುರುದ್ದೇಶದಿಂದ ಸೋಲಿಸಿಲ್ಲ. ಎದುರಾಳಿ ಅಭ್ಯರ್ಥಿ ಎಂದು ಸೋಲಿಸಲಾಗಿದೆ. ಇದನ್ನೇ ಅಂಬೇಡ್ಕರ್ ಗೆ ಅವಮಾನ ಮಾಡಲಾಗಿದೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಹೊರ ದೇಶದಲ್ಲಿ ಓದಿ ಬಂದವರು. ಅವರ ಜೊತೆ ಸಾವರ್ಕರ್ ಹೋಲಿಕೆ ಸಲ್ಲ. ಇಬ್ಬರ ಹೋಲಿಕೆ ಮಾಡಿದರೆ ಅಂಬೇಡ್ಕರ್ ಗೆ ಅವಮಾನ ಮಾಡಿದ ಹಾಗೆ ಆಗುತ್ತದೆ. ಸಾವರ್ಕರ್ ಹಿಂದುತ್ವ ಪ್ರತಿಪಾದಿಸಿದವರು. ಬದಲಾಗಿ ಅಂಬೇಡ್ಕರ್ ಹಿಂದುತ್ವದ ಪರ ಇರಲಿಲ್ಲ. ಅಂಬೇಡ್ಕರ್ ತತ್ವಗಳನ್ನು ಕಾಂಗ್ರೆಸ್ ಮಾತ್ರ ಜಾರಿಗೆ ತಂದಿದೆ. ಜಾತ್ಯತೀತ ಭಾರತ ಕಟ್ಟಲು ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದು ಹನುಮಂತಯ್ಯ ಹೇಳಿದರು.