ಮೇ 5ರಿಂದ ವೈದ್ಯಕೀಯ ಉಪಕರಣಗಳ ರಾಷ್ಟ್ರೀಯ ಹ್ಯಾಕಥಾನ್- 2023

ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಎಐಸಿ ನಿಟ್ಟೆ ಇನ್ಕ್ಯುಬೇಷನ್ ಕೇಂದ್ರದಲ್ಲಿ ಮೇ 5, 6 ಮತ್ತು 7ರಂದು ವೈದ್ಯಕೀಯ ಉಪಕರಣಗಳ ರಾಷ್ಟ್ರೀಯ ಹ್ಯಾಕಥಾನ್ - 2023 ಆಯೋಜಿಸಲಾಗಿದೆ ಎಂದು ವೈಸ್ ಚಾನ್ಸ್ಲರ್ ಡಾ.ಸತೀಶ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯಶಸ್ವಿ ವೈದ್ಯಕೀಯ ಸಂಶೋಧನೆಗೆ ಆರೋಗ್ಯ ವಿಜ್ಞಾನ ಕ್ಷೇತ್ರದ ಪಾಲುದಾರರಾದ ವೈದ್ಯರು, ರೋಗಿಗಳು, ವಿಜ್ಞಾನಿಗಳು, ಇಂಜಿನಿಯರುಗಳು, ಉದ್ಯಮಿಗಳು ಮುಂತಾದವರ ಸಮಾನ ಪಾಲುದಾರಿಕೆ ಅತ್ಯಗತ್ಯವಾಗಿರುತ್ತದೆ ಎಂದರು.
ಆರೋಗ್ಯ ಹ್ಯಾಕಥಾನ್ಗಳನ್ನು ಅಯೋಜಿಸುವುದರಿಂದ ಈ ಎಲ್ಲ ಮೇಲಿನ ಪಾಲುದಾರರನ್ನು ಒಂದೆಡೆ ಸೇರಿಸಿ ಜ್ಞಾನ ವಿನಿಮಯ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ಜಾಗತಿಕವಾಗಿ ಆರೋಗ್ಯ ಹ್ಯಾಕಥಾನ್ಗಳು ವೈದ್ಯಕೀಯ ಸಂಶೋಧನೆಗಳಿಗೆ ಮಾರ್ಗಸೂಚಿಯನ್ನು ಹಾಕಿಕೊಟ್ಟಿವೆ. ವೈದ್ಯಕೀಯ ಸಂಶೋಧನೆಗಳಿಗೆ ದೊಡ್ಡ ಪ್ರಮಾಣದ ಬಂಡವಾಳದ ಅಗತ್ಯವೂ ಇದ್ದು, ಇಂತಹ ಹ್ಯಾಕಥಾನ್ಗಳು ಸಂಶೋಧನೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ, ಆರೋಗ್ಯ ಸೇವೆಗಳನ್ನು ಕಡಿಮೆ ಬೆಲೆಯಲ್ಲಿ ಪಡೆದುಕೊಳ್ಳಲು, ದೇಸೀಯವಾಗಿ ಆರೋಗ್ಯ ಸಂಬಂಧಿತ ಉಪಕರಣ, ಔಷಧ ಇತ್ಯಾದಿಗಳ ತಯಾರಿಗೂ ಈ ಹ್ಯಾಕಥಾನ್ಗಳು ಸಹಾಯ ಮಾಡಬಲ್ಲವು ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಕ್ಷೇತ್ರದ ಪ್ರಮುಖ ವೇದಿಕೆಗಳಲ್ಲಿ ಹೊಸ ಸಂಶೋಧನೆಗಳನ್ನು ಉತ್ತೇಜಿಸುವುದು, ಪೋಷಿಸುವುದು ಹಾಗೂ ಪ್ರಮುಖ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಈ ಹ್ಯಾಕಥಾನ್ನ ಮುಖ್ಯ ಧೈಯವಾಗಿದೆ. ದೇಶದ ಪ್ರಮುಖ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ನವೋದ್ಯಮಿಗಳು, ಆರೋಗ್ಯ ವಿಜ್ಞಾನಿಗಳು, ವೃತ್ತಿಪರರು ಈ ಹ್ಯಾಕಥಾನ್ನಲ್ಲಿ ಭಾಗವಹಿಸಿ ತಮ್ಮ ನವೀನ ಯೋಚನೆಗಳನ್ನು ಮಂಡಿಸಬಹುದಾಗಿದೆ.ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳನ್ನು ನೀಡಲಾಗುವುದು, ಸುಮಾರು 50 ಲಕ್ಷ ರೂಪಾಯಿಗಳವರೆಗೆ ಪ್ರೋತ್ಸಾಹಧನ ನೀಡಲಾಗುವುದು.ಈ ಹ್ಯಾಕಥಾನ್ನಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 50 ಆರೋಗ್ಯ ಸಂಬಂಧಿತ ವೃತ್ತಿಪರರು ಭಾಗವಹಿಸುತ್ತಿದ್ದಾರೆ.
ಉದ್ಘಾಟನಾ ಕಾರ್ಯಕ್ರಮ, ಈ ಹ್ಯಾಕಥಾನ್ನ ಉದ್ಘಾಟನಾ ಕಾರ್ಯಕ್ರಮವನ್ನು ಮೇ 6ರಂದು ಬೆಳಗ್ಗೆ 9:30ಕ್ಕೆ ನಿವೃತ್ತ ಪರಿಗಣಿತ ವಿಶ್ವವಿದ್ಯಾನಿಲಯದ ಪನೀರ್ ಕ್ಯಾಂಪಸ್ನಲ್ಲಿರುವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕ ಡಾ.ವಿಶಾಲ್ ರಾವ್ ಉದ್ಘಾಟಿಸುವರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಸತೀಶ ಕುಮಾರ ಭಂಡಾರಿ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಐಸಿ ನಿಟೆ ಇನ್ಕ್ಯುಬೇಷನ್ ಕೇಂದ್ರದ ಸಿಇಒ ಡಾ.ಎ.ಪಿ.ಆಚಾರ, ಇನ್ಸ್ಟಿಟ್ಯೂಷನ್ ಇನ್ನೊವೇಶನ್ ಕೌನ್ಸಿಲ್ನ ಅಧ್ಯಕ್ಷ ಡಾ.ಜಿ.ಶ್ರೀನಿಕೇತನ್, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಂಶೋಧನೆ ಮತ್ತು ಪೇಟೆಂಟ್ ವಿಭಾಗದ ನಿರ್ದೇಶಕ ಡಾ. ಇಡ್ಯಾ, ಕರುಣಾಸಾಗರ, ಡಾ. ಇಂದ್ರಾಣಿ ಕರುಣಾ ಸಾಗರ್ ಉಪಸ್ಥಿತರಿದ್ದರು.