ಗೋ ರುದ್ರಭೂಮಿ ಸ್ಥಾಪನೆ ಅಸ್ಪಶ್ಯತೆ ಆಚರಣೆಯ ಸಂಕೇತ: ಸುಂದರ ಮಾಸ್ಟರ್
ಉಡುಪಿ: ಪರಿಶಿಷ್ಟ ಜಾತಿಯವರು ತಮ್ಮ ಶವ ಸಂಸ್ಕಾರಕ್ಕೆ ಇರುವ ಉಚ್ಚಿಲದ ಸಾರ್ವಜನಿಕ ಹಿಂದೂ ರುದ್ರ ಭೂಮಿ ವಿಚಾರದಲ್ಲಿ ಹಲವು ವರ್ಷ ಗಳಿಂದ ನಡೆಸುತ್ತಿರುವ ಹೋರಾಟವನ್ನು ಕಂಡು ಕಣ್ಣು ಮುಚ್ಚಿ ಕುಳಿತಿರುವ ಕಾಪು ಬಿಜೆಪಿ ಅಭ್ಯರ್ಥಿ ಸುರೇಶ ಶೆಟ್ಟಿ ಗುರ್ಮೆ, ಈಗ ದನಗಳಿಗೆ ರುಧ್ರಭೂಮಿ ಕಟ್ಟಿಸುವ ಸಂಕಲ್ಪ ಮಾಡಿರುವುದು ಪರಿಶಿಷ್ಟರಿಗೆ ಮಾಡಿರುವ ಅವಮಾನ ಮತ್ತು ಅಸ್ಪಶ್ಯತೆ ಆಚರಣೆಯ ಸಂಕೇತವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ಟರ್ ಟೀಕಿಸಿದ್ದಾರೆ.
ಪರಿಶಿಷ್ಟ ಜಾತಿಯ ಮುಖಂಡ ತೀರಿಕೊಂಡು ಶವ ಸಂಸ್ಕಾರ ಮಾಡಲು ಸ್ಥಳ ಇಲ್ಲದೇ ಉಚ್ಚಿಲ ಗ್ರಾಪಂ ಕಚೇರಿ ಎದುರು ಶವ ಇಟ್ಟು ಶವ ಸುಡಲು ದಲಿತರು ಮುಂದಾಗಿದ್ದರು. ಆಗ ಬಾಯಿ ಮುಚ್ಚಿ ಕುಳಿತಿದ್ದ ಗುರ್ಮೆಯವರಿಗೆ ಈಗ ಪರಿಶಿಷ್ಟ ಜಾತಿಯ ಮನುಷ್ಯರಿಗಿಂತ ಪ್ರಾಣಿಗಳೇ ಮುಖ್ಯ ಮತ್ತು ಶ್ರೇಷ್ಠವಾಗಿ ಕಾಣುವುದು ಅವರಲ್ಲಿರುವ ಕೊಳಕು ಜಾತಿ ಪಧ್ಧತಿಯ ಅನುಷ್ಠಾನದ ಪ್ರತೀಕ ವಾಗಿದೆ ಎಂದು ಅವರು ದೂರಿದರು.
ಈ ಗೋ ರುದ್ರಭೂಮಿಯ ಸಂಕಲ್ಪದ ಮರ್ಮವನ್ನು ಇಡೀ ಜಿಲ್ಲೆಯ ದಲಿತರು ಅರ್ಥ ಮಾಡಿಕೊಳ್ಳಬೇಕು. ತಮ್ಮದೇ ಕಾಪು ಕ್ಷೇತ್ರದ ಉಚ್ಚಿಲದ ಹಿಂದು ರುದ್ರಭೂಮಿಯಲ್ಲಿ ದಲಿತರ ಶವ ಸುಡಲು ಅವಕಾಶ ಕೊಡದಾಗ ಸೊಲ್ಲೆತ್ತದ ಈ ಬಿಜೆಪಿಯವರ ಹಿಡನ್ ಅಜೆಂಡಾವನ್ನು ಜಿಲ್ಲೆಯ ಸಮಸ್ತ ದಲಿತರು ಅರ್ಥೈಸಿಕೊಂಡು ಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಜಾತಿವಾದಿ ಪಕ್ಕದ ಅಭ್ಯರ್ಥಿಗಳು ಸೋಲಿಸುವ ಕೆಲಸ ಮಾಡಬೇಕು. ಸಂವಿ ಧಾನದ ಜಾತ್ಯಾತೀತ ತತ್ವವನ್ನು ಎತ್ತಿ ಹಿಡಿಯಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.