ಪುತ್ತೂರು: ಚುನಾವಣೆ ಸಿದ್ಧವಾಗುತ್ತಿರುವ ಸಿಬ್ಬಂದಿ

ಪುತ್ತೂರು: ವಿಧಾನಸಭಾ ಚುನಾವಣೆಯು ಮೇ 10 ರಂದು ನಡೆಯಲಿರುವ ಹಿನ್ನೆಲೆಯಲ್ಲಿ 206 -ಪುತ್ತೂರು ಕ್ಷೇತ್ರದ ಮಸ್ಟರಿಂಗ್ ಕೇಂದ್ರವಾದ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಚುನಾವಣಾಧಿಕಾರಿಯಾಗಿರುವ ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರ ನೇತೃತ್ವದಲ್ಲಿ ಸಿದ್ಧತೆ ನಡೆದ ಬಳಿಕ ಚುನಾವಣಾ ಕರ್ತವ್ಯ ನಿರ್ವಹಿಸಲಿರುವ ಸಿಬ್ಬಂದಿಗಳನ್ನು ಬೀಳ್ಕೊಡಲಾಯಿತು.
ಚುನಾವಣಾ ಕರ್ತವ್ಯ ನಿರ್ವಹಿಸಲಿರುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಶಾಲೆಯ 20 ಕೊಠಡಿಗಳಲ್ಲಿ ಮತಗಟ್ಟೆಗಳಲ್ಲಿ ನಿರ್ವಹಿಸುವ ಕರ್ತವ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದ ಬಳಿಕ ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್, ಮತದಾನಕ್ಕೆ ಆವಶ್ಯಕವಾದ ಪರಿಕರಗಳನ್ನು ಪರಿಶೀಲಿಸಿ ವಿತರಿಸಲಾಯಿತು. ಮಧ್ಯಾಹ್ನದ ಭೋಜನದ ಬಳಿಕ ನಿಗದಿಪಡಿಸಿದ ರೂಟ್ಗಳಲ್ಲಿ ಮತಗಟ್ಟೆಗಳಿಗೆ ಅಧಿಕಾರಿ, ಸಿಬ್ಬಂದಿಗಳನ್ನು ಕಳುಹಿಸಿಕೊಡಲಾಯಿತು.
ಈ ಸಂದರ್ಭ ಮಾದ್ಯಮಗಳಿಗೆ ಮಾಹಿತಿ ನೀಡಿದ ಗಿರೀಶ್ ನಂದನ್ ಅವರು ಮೇ 10ರಂದು ಬೆಳೆಗ್ಗೆ 7ರಿಂದ ಸಾಯಂಕಾಲ 6ಗಂಟೆಯವರೆಗೆ ಮತದಾನಕ್ಕೆ ಅವಕಾಶವನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ಮತದಾನ ಸುಗಮ ವಾಗಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಗಿರೀಶ್ ನಂದನ್ ಎಂ. ತಿಳಿಸಿದ್ದಾರೆ. ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣೆಯ ಸಿದ್ದತೆ ಬಗ್ಗೆ ಮಾಹಿತಿ ನೀಡಿದರು.
ಪುತ್ತೂರು ಭಾಗದ 115 ಮತಗಟ್ಟೆಗಳಿಂದ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿದ್ದು, ಜಿಲ್ಲಾಡಳಿತದಿಂದಲ್ಲೇ ನೇರವಾಗಿ ಮತಗಟ್ಟೆಯಲ್ಲಿ ಏನು ನಡೆಯುತ್ತದೆ ಎಂಬುದನ್ನು ನೋಡಲಾಗುತ್ತದೆ. 40 ಮತಗಟ್ಟೆಗಳಿಗೆ ಸೆಂಟ್ರಲ್ ಆರ್ಮ್ ಫೋರ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. 66 ಮತಗಟ್ಟೆಗಳಿಗೆ ಮೈಕ್ರೋ ಒಬ್ಸಸರ್ವರ್, ಸಿಆರ್ ಪಿಎಫ್ 2, ಸಿ.ಐ.ಎಸ್.ಎಫ್. 2, ಹರಿಯಾಣ ಪೊಲೀಸ್ 1 ಮತ ಕೇಂದ್ರದಲ್ಲಿ ಹಾಕಲಾಗಿದೆ. ಪುತ್ತೂರು ವಿವೇಕಾನಂದ ಪಾಲಿಟಿಕ್ನಿಕ್ ನಲ್ಲಿರುವ ಮತಗಟ್ಟೆಯನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ.
ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 1,04,918 ಪುರುಷ, 1,07,832 ಮಹಿಳೆ ಹಾಗೂ 3 ಇತರ ಮತದಾರರು ಸೇರಿದಂತೆ ಒಟ್ಟು 2,12,753 ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ 4,482 ಮತ ಹಾಗೂ ಅಂಗವಿಕಲ 2,047 ಮತಗಳಿವೆ. ಪೊಸ್ಟಲ್ ಬ್ಯಾಲೆಟ್ ಮೂಲಕ ಸುಮಾರು 3,048 ಮತಗಳಿದ್ದು, 80 ವರ್ಷ ಮೇಲ್ಪಟ್ಟ 1,299 ಮತದಾರಲ್ಲಿ 1,229 ಮತ, ಅಂಗವಿಕಲರಲ್ಲಿ 298 ಮತದಾರಲ್ಲಿ 288 ಮತ, ಎಸೆನ್ಸಿಯಲ್ ಮತದಾರರ 30 ಮತದಲ್ಲಿ 28 ಮತ ಈಗಾಗಲೇ ಚಲಾವಣೆಯಾಗಿದೆ. ಪೊಲಿಂಗ್ ಸ್ಟಾಪ್ ಗಳಲ್ಲಿ 1421 ಮತ ದಲ್ಲಿ 417 ಚಲಾವಣೆಯಾಗಿದ್ದು, 1004 ಅಂಚೆ ಮೂಲಕ ಕಳಿಹಿಸುತ್ತಿದ್ದಾರೆ. 80 ವರ್ಷಕ್ಕೆ ಮೇಲ್ಪಟ್ಟವರಲ್ಲಿ 3 ಮಂದಿ ಮತದಾನ ಮಾಡಲು ನಿರಾಕರಿಸಿದ್ದು, 50 ಮಂದಿ ಗೈರಾಗಿದ್ದು, 27 ಮಂದಿ ನಿಧನವಾಗುವ ಮೂಲಕ ಸುಮಾರು 80 ಮತ ಚಲಾವಣೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ವಿಧಾನಸಭಾ ಕ್ಷೇತ್ರದಲ್ಲಿ 220 ಮತಗಟ್ಟೆಗಳಿದ್ದು, ನಗರದಲ್ಲಿ 61 ಹಾಗೂ 159 ಗ್ರಾಮೀಣ ಭಾಗದ ಮತಗಟ್ಟೆ ಗಳಾಗಿದೆ. ಒಂದು ಮತಗಟ್ಟೆ ಇರುವ 66 ಕೇಂದ್ರಗಳು, ಎರಡು ಮತಗಟ್ಟೆ ಇರುವ 57 ಕೇಂದ್ರಗಳು, ಮೂರು ಮತಗಟ್ಟೆ ಇರುವ 6 ಕೇಂದ್ರಗಳು, ನಾಲ್ಕು ಮತಗಟ್ಟೆ ಇರುವ 4 ಕೇಂದ್ರ, ಆರು ಮತಗಟ್ಟೆಗಳಿರುವ 1 ಕೇಂದ್ರ ಸೇರಿ ಒಟ್ಟು 134 ಕೇಂದ್ರಗಳನ್ನು ಹೊಂದಲಾಗಿದೆ. ಇದರಲ್ಲಿ 13 ವಿಶೇಷ ಮತಗಟ್ಟೆಗಳಾಗಿ ಮತದಾರರನ್ನು ಆಕರ್ಷಿಸುವ ಕಾರ್ಯ ಮಾಡಲಿದೆ. ಎಲ್ಲಾ ಭಾಗದಲ್ಲಿ ಹೆಚ್ಚಿನ ನಿಗಾ ಇಡುವಂತೆ ತಂಡಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಸೆಕ್ಟರ್ ಆಫೀಸರ್ ಗೆ ರಿಸರ್ವ್ ಇವಿಎಂಎಸ್ ನೀಡಲು ಅವಕಾಶವನ್ನು ನೀಡಲಾಗಿದೆ. 20 ಸೆಕ್ಟರ್ ಆಗಿ ವಿಭಾಗಿಸಿದ್ದು, 3 ಪ್ಲೈಯಿಂಗ್ ಸ್ಕ್ವಾಡ್, 4 ಎಸ್.ಎಸ್.ಟಿ., 4 ವಿಎಸ್ಟಿ, 1 ವಿವಿಟಿ ಜತೆಗೆ ಆರ್ ಪಿಎಫ್, ಸಿಐಎಸ್ಎಫ್, ಹರಿಯಾಣ ಪೆÇಲೀಸ್ ಮತ್ತುರಾಜ್ಯ ಪೆÇಲೀಸರು ಭದ್ರತೆಯನ್ನು ನೀಡಲಿದ್ದಾರೆ ಎಂದು ತಿಳಿಸಿದರು.
ಮೇ 10 ಬೆಳಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆಗಳು ಪ್ರಾರಂಭಗೊಳ್ಳಲಿದ್ದು, ಸಂಜೆ 6 ಗಂಟೆಯ ತನಕ ಮತದಾನ ನಡೆದು ಸಂಜೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಡಿ ಮಸ್ಟರಿಂಗ್ ಕಾರ್ಯಗಳು ನಡೆಯಲಿದೆ. ಬಳಿಕ ಮತಯಂತ್ರಗಳು ಜಿಲ್ಲಾ ಕೇಂದ್ರ ಮಂಗಳೂರು ಸುರತ್ಕಲ್ನ ಎನ್ಐಟಿಕೆಗೆ ಗರಿಷ್ಠ ಭದ್ರತೆ ಹಾಗೂ ವೀಡಿಯೋ ಚಿತ್ರೀಕರಣದೊಂದಿಗೆ ವಾಹನಗಳ ಮೂಲಕ ಸ್ಥಳಾಂತರಗೊಳ್ಳಲಿವೆ. ಮೇ 13 ರಂದು 8 ಗಂಟೆಯಿಂದ ಅಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
