ಸೋಮೇಶ್ವರ: ಸಮುದ್ರಕ್ಕೆ ಬಿದ್ದು ಕಾಲೇಜು ವಿದ್ಯಾರ್ಥಿನಿ ಮೃತ್ಯು

ಉಳ್ಳಾಲ: ಸೋಮೇಶ್ವರ ರುದ್ರಪಾದೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಆಯತಪ್ಪಿ ಸಮುದ್ರಕ್ಕೆ ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮಂಗಳೂರಿನಲ್ಲಿ ಬಿಕಾಂ ಕಲಿಯುತ್ತಿದ್ದ ಮೂಲತ: ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲೂಕು ತೆಗ್ಗಿ ಗ್ರಾಮದ ನಿವಾಸಿ ಕಾವೇರಿ (20) ಮೃತ ಯುವತಿ.
ಕಾವೇರಿ ನಿನ್ನೆ ತನ್ನ ಹುಟ್ಟು ಹಬ್ಬ ಆಚರಿಸಿದ್ದು ಇಂದು ತನ್ನ ಬಾಲ್ಯ ಸ್ನೇಹಿತೆಯೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ನಂತರ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದರು. ಸ್ನೇಹಿತೆಯರಿಬ್ಬರು ಸಮುದ್ರ ತೀರದ ರುದ್ರ ಪಾದೆಯಲ್ಲಿ ವಿಹರಿಸುತ್ತಿದ್ದ ವೇಳೆ ಕಾವೇರಿ ಆಯ ತಪ್ಪಿ ಜಾರಿ ಸಮುದ್ರಕ್ಕೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ.
ಕೂಡಲೇ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಈಜು ರಕ್ಷಕ ಸಿಬ್ಬಂದಿ ಮೋಹನ್ ಚಂದ್ರ, ಸ್ಥಳೀಯ ಮೀನುಗಾರರಾದ ಯೋಗೀಶ್, ಪ್ರವೀಣ್, ಸೋಮೇಶ್ವರ ದೇವಸ್ಥಾನದ ಸಿಬ್ಬಂದಿ ವಿನಾಯಕ್ ಮತ್ತು ಸ್ಥಳೀಯರು ಸೇರಿ ಸಮುದ್ರದಲ್ಲಿ ಈಜಾಡಿ ಕಾವೇರಿಯನ್ನು ದಡಕ್ಕೆ ಎಳೆದು ತಂದರೂ ಅಷ್ಟರಲ್ಲೇ ಕಾವೇರಿ ಮೃತಪಟ್ಟಿರುವು ದಾಗಿ ಸ್ಥಳೀಯರು ತಿಳಿಸಿದ್ದಾರೆ.
ಕಾವೇರಿ ಪೋಷಕರು ಕೂಲಿ ಕೆಲಸಗಾರರಾಗಿದ್ದು ತಮ್ಮ ಏಕೈಕ ಮಗಳನ್ನು ಮಂಗಳೂರು ನಗರದ ಕಾಲೇಜಿನಲ್ಲಿ ಬಿಕಾಂ ಓದಿಸುತ್ತಿದ್ದರು. ಪ್ರತಿಭಾನ್ವಿತೆಯಾಗಿದ್ದ ಕಾವೇರಿ ಬಿಕಾಂ ವ್ಯಾಸಂಗದ ಜೊತೆಗೆ ಸಿಎ ಕೂಡ ಅಧ್ಯಯನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.