2023ರ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಶಂಕರ್ ಸಿಹಿಮೊಗ್ಗೆ ಕವನ ಸಂಕಲನ ಆಯ್ಕೆ

ಉಡುಪಿ, ಮೇ 11: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ನೀಡುವ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ- 2023ಕ್ಕೆ ಲೇಖಕ, ಕವಿ ಶಂಕರ್ ಸಿಹಿಮೊಗ್ಗೆ ಅವರ ಅಪ್ರಕಟಿತ ಕಾವ್ಯ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು 10,000ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.
ಪ್ರಶಸ್ತಿ ಆಯ್ಕೆ ಸಮಿತಿಯು ಶಂಕರ್ ಸಿಹಿಮೊಗ್ಗೆ ಅವರ ‘ಇರುವೆ ಮತ್ತು ಗೋಡೆ’ ಅಪ್ರಕಟಿತ ಕವನ ಸಂಕಲನ ವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕವಿ, ಕಾದಂಬರಿಕಾರ, ನಾಟಕಕಾರ, ಕಥೆಗಾರ, ಪತ್ರಿಕೋದ್ಯಮಿ ಹೀಗೆ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸಿದ್ಧರಾದ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡಲಾ ಗುತ್ತದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲತ: ಶಿವಮೊಗ್ಗದವರಾದ ಶಂಕರ್ ಸಿಹಿಮೊಗ್ಗೆ ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಓದು, ಬರವಣಿಗೆ, ಚಾರಣ ಮತ್ತು ನಾಟಕ ಮುಂತಾದ ಸೃಜನಶೀಲ ಕಾರ್ಯಗಳಲ್ಲಿ ಇವರು ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ.
ಇವರ ಮೊದಲ ಕವನ ಸಂಕಲನ ‘ಕುದುರೆಯ ವ್ಯಥೆ’. ಇವರ ಹಲವು ಪದ್ಯ, ಕತೆ, ನಾಟಕ, ವಿಮರ್ಶೆ ಮತ್ತು ಲೇಖನಗಳು, ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಬಾನ ಬಯಲ ಚುಕ್ಕಿಗಳು’, ‘ಕಾವ್ಯಯಾನ’, ‘ಕಿರಂ ಹೊಸ ಕತೆ ಸಂಪುಟ 1,2,3’, ‘ಕತೆ- 2022’ ಇವರ ಸಂಪಾದಿತ ಕೃತಿಗಳು. ಇವರ ಹೊಳಲೂರಿನ ಹಾಸ್ಟೆಲ್ ಹುಡುಗರು ಕತೆಯು ಬೆಂಗಳೂರು ವಿವಿಯ ಬಿವಿಎ ಮತ್ತು ಬಿಎಫ್ಎ ಪದವಿಗೆ ಕನ್ನಡ ಭಾಷೆಯ ಪಠ್ಯವಾಗಿದೆ. ಶಂಕರ್ ಅವರು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇವುಗಳಲ್ಲಿ ಮ್ಯಾಕ್ಬೆತ್, ಮಹಾಬಲಯ್ಯನ ಕೋಟು, ವಸುದೈವ ಕುಟುಂಬಕಂ, ದಕ್ಷಯಜ್ಞ ಮುಖ್ಯವಾದವು.