ನಿಟ್ಟೆ ಎನ್‌ಎಂಎಎಂಐಟಿ: ಟೊಯೊಟಾ ಮೋಟಾರ್ ಎಕ್ಸಲೆನ್ಸ್ ಕೇಂದ್ರಕ್ಕೆ ಚಾಲನೆ

ಉಡುಪಿ, ಮೇ 11: ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎನ್‌ಎಂಎಎಂಐಟಿ) ಎಕ್ಸಲೆನ್ಸ್ ಕೇಂದ್ರವನ್ನು (ಸಿಒಇ) ಸ್ಥಾಪಿಸಿದೆ.
ಈ ಕೇಂದ್ರವು ಎಂಜಿನ್, ಪವರ್‌ಟ್ರೇನ್ ಹಾಗೂ ಅದರ ಕಾರ್ಯ ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಅನುಭವ ನೀಡುವ ಗುರಿ ಯನ್ನು ಹೊಂದಿದೆ. ಸುಧಾರಿತ ತಂತ್ರಜ್ಞಾನಗಳು ಮತ್ತು ಅದರ ಅನ್ವಯಗಳ ಬಗ್ಗೆ ಕಲಿಯಲು ಅವಕಾಶ ನೀಡಲಿದೆ. ವಿದ್ಯಾರ್ಥಿಗಳ ಕೌಶಲ್ಯ ಮಟ್ಟವನ್ನು ಹೆಚ್ಚಿಸುವ ಮತ್ತು ಸಮಗ್ರ ಕಲಿಕೆಯ ಮೂಲಕ ಆಟೋಮೋಟಿವ್ ಉದ್ಯಮಕ್ಕೆ ತರಬೇತಿ ಪಡೆದ ಮತ್ತು ಸಮರ್ಥ ಕಾರ್ಯ ಪಡೆಯನ್ನು ಒದಗಿಸುವ ಟೊಯೊಟಾದ ಗುರಿಯಿಂದ ಸ್ಫೂರ್ತಿ ಪಡೆದ ಸಂಸ್ಥೆ, ತಜ್ಞ ತರಬೇತುದಾರರು, ಸೌಲಭ್ಯಗಳು ಮತ್ತು ಸಲಕರಣೆ ಗಳನ್ನು ಒದಗಿಸುವ ಮೂಲಕ ಉತ್ತಮ ಗುಣಮಟ್ಟದ ಕೌಶಲ್ಯ ಶಿಕ್ಷಣ ನೀಡಲು ಪಠ್ಯಕ್ರಮವನ್ನು ಹೊಂದಿರುತ್ತದೆ.
ಕ್ಯಾಂಪಸ್ ಒಳಗೆ ಸ್ಥಾಪಿಸಲಾದ ಸಿಒಇ ಟೊಯೋಟಾ ಎಂಜಿನ್, ಟ್ರಾನ್ಸ್‌ಮಿಷನ್ ಮತ್ತು ಪವರ್ ಟ್ರೇನ್‌ಕಟ್ ಸೆಕ್ಷನ್ ಮತ್ತು ಡು-ಇಟ್ -ಯುವರ್‌ಸೆಲ್ಫ್ ಮಾದರಿಗಳನ್ನು ಹೊಂದಿದೆ.
ಟೊಯೊಟಾದ ಬೆಂಬಲದ ಬಗ್ಗೆ ಮಾತನಾಡಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಎನ್.ವಿನಯ ಹೆಗ್ಡೆ, ಟೊಯೊಟಾದಂತ ಕಾರ್ಪೊರೇಟ್ ಮತ್ತು ಎನ್‌ಎಂಎಎಂಐಟಿಯಂತ ಸಂಸ್ಥೆಗಳ ನಡುವಿನ ಸಹಯೋಗವು ಪರಸ್ಪರ ಪ್ರಯೋಜನಕಾರಿಯಾಗಿದೆ. ಎರಡೂ ಸಂಸ್ಥೆಗಳು ಪ್ರಸ್ತುತ ಕೈಗಾರಿಕಾ ಅಗತ್ಯಗಳನ್ನು ಅರ್ಥಮಾಡಿ ಕೊಳ್ಳುವ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಕೊಡುಗೆ ನೀಡಬಹುದು. ಈ ಸಹಯೋಗವನ್ನು ಮತ್ತಷ್ಟು ಬಲಪಡಿ ಸಲು ನಿಟ್ಟೆ ಆಡಳಿತ ಮಂಡಳಿಯು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದರು.
ಟಿಕೆಎಂನ ಹಿರಿಯ ಉಪಾಧ್ಯಕ್ಷ, ನಿರ್ದೇಶಕ ಮತ್ತು ಮುಖ್ಯ ಸಂವಹನ ಅಧಿಕಾರಿ ಸುದೀಪ್ ಎಸ್. ದಾಲ್ವಿ, ಬೆಳೆಯುತ್ತಿರುವ ವಾಹನ ಉದ್ಯಮದ ಅಗತ್ಯಗಳನ್ನು ಪೂರೈಸಲು ನುರಿತ ಎಂಜಿನಿಯರಿಂಗ್ ಸಂಪನ್ಮೂಲಗಳ ಲಭ್ಯತೆಯನ್ನು ಈ ಕೇಂದ್ರ ಖಚಿತಪಡಿಸಲಿದೆ. ಸೆಂಟರ್ ಆಫ್ ಎಕ್ಸಲೆನ್ಸ್ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿ ಸುವ ಗುರಿ ಹೊಂದಿದೆ. ಇದರಿಂದ ವಿದ್ಯಾರ್ಥಿಗಳು ಪರಿಕಲ್ಪನೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಉತ್ತಮ ತಿಳುವಳಿಕೆಯನ್ನು ಬೆಳೆಸಿಕೊಳ್ಳಬಹುದು ಎಂದರು.
ಉದ್ಘಾಟನೆಯ ಸಂದರ್ಭದಲ್ಲಿ ನಿಟ್ಟೆ ಡೀಮ್ಡ್ ವಿವಿಯ ಉಪ ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಎನ್‌ಎಂಎಎಂಐಟಿ ಪ್ರಾಂಶುಪಾಲ ಡಾ. ನಿರಂಜನ್ ಎನ್.ಚಿಪ್ಲುಂಕರ್ ಮತ್ತಿತರರು ಉಪಸ್ಥಿತರಿದ್ದರು.