ಸೋಲಿಗೆ ಹೆದರಿ ಕ್ಷೇತ್ರ ಬಿಟ್ಟು ಓಡಿ ಹೋಗುವುದಿಲ್ಲ: ಮಾಜಿ ಸಚಿವ ನಾರಾಯಣಗೌಡ
ಕೆ.ಆರ್.ಪೇಟೆ, ಮೇ 19: ಚುನಾವಣೆಯಲ್ಲಿ ಆದ ಸೋಲಿಗೆ ಹೆದರಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಬಿಟ್ಟು ಎಲ್ಲಿಯೂ ಓಡಿ ಹೋಗುವವನಲ್ಲ. ಜನತಾ ಜನಾರ್ದನರ ತೀರ್ಪಿಗೆ ನಾನು ಬದ್ಧನಾಗಿದ್ದೇನೆ. ನನ್ನ ಅಳಿವು ಉಳಿವು ಏನಿದ್ದರೂ ನನ್ನ ಜನ್ಮಭೂಮಿಯಾದ ಕೆ.ಆರ್.ಪೇಟೆಯಲ್ಲಿ ಮಾತ್ರ ಎಂದು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನಾ ಸಭೆಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಸೋಲು ಗೆಲುವು ಎರಡನ್ನೂ ನಾನು ಸಮಾನವಾಗಿ ಕಂಡಿದ್ದೇನೆ. ಸತತವಾಗಿ ಮೂರು ಅವಧಿಗೆ ಗೆದ್ದು ಶಾಸಕನಾಗಿ, ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಕ್ಷೇತ್ರದ ಶಾಸಕನಾಗಿ ತಾಲೂಕಿನ ಸಮಗ್ರವಾದ ಅಭಿವೃದ್ಧಿಯ ಬಗ್ಗೆ ಹಮ್ಮಿಕೊಂಡು ಅನುಷ್ಠಾನಗೊಳಿಸಿರುವ ಕೆಲಸ-ಕಾರ್ಯಗಳ ಬಗ್ಗೆ ನನಗೆ ಆತ್ಮತೃಪ್ತಿಯಿದೆ ಎಂದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣಗೊಳಿಸಿ ಜನತೆಯ ಸೇವೆಗೆ ಸಮರ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ವ್ಯವಹರಿಸುವ ಜೊತೆಗೆ ತಾಲೂಕಿನ ಅಭಿವೃದ್ಧಿಗೆ ಸಲಹೆ ಮಾರ್ಗದರ್ಶನ ಕೇಳಿದರೆ ಶಾಸಕರಿಗೆ ಸಹಕಾರ ನೀಡುತ್ತೇನೆ ಎಂದು ಅವರು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷರಾದ ಶೀಳನೆರೆ ಅಂಬರೀಶ್, ಕಿಕ್ಕೇರಿ ಪ್ರಭಾಕರ್, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭಾ ಸದಸ್ಯ ಬಸ್ ಸಂತೋಷ್ ಕುಮಾರ್, ತಾಪಂ ಮಾಜಿ ಅಧ್ಯಕ್ಷ ಜವರಾಯಿಗೌಡ, ಬಂಡಿಹೊಳೆ ಅಶೋಕ್, ಚೋಕನಹಳ್ಳಿ ಪ್ರಕಾಶ್, ಇತರ ಮುಖಂಡರು ಉಪಸ್ಥಿತರಿದ್ದರು.