ಹಿಂದಿನ ಸರಕಾರವು ಸೃಷ್ಟಿಸಿದ್ದ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಲು ರೂಪ್ಸಾ ಒತ್ತಾಯ

ಬೆಂಗಳೂರು, ಮೇ 22: ಇದೇ ತಿಂಗಳ ಅಂತ್ಯದಲ್ಲಿ 2023-24ನೆ ಸಾಲಿನ ಶೈಕ್ಷಣಿಕ ವರ್ಷವು ಆರಂಭವಾಗುತ್ತಿದ್ದು, ಹಿಂದಿನ ನಾಲ್ಕ ವರ್ಷದಲ್ಲಿ ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿದ್ದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ರೂಪ್ಸಾ ಕರ್ನಾಟಕ ಒತ್ತಾಯಿಸಿದೆ.
ಸೋಮವಾರ ಈ ಕುರಿತು ರೂಪ್ಸಾದ ರಾಜ್ಯಾದ್ಯಕ್ಷ ಲೋಕೇಶ್ ತಾಳಿಕಟ್ಟೆ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದು, ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕ್ರಿಯೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದು ಮಾಡಬೇಕು ಎಂದು ತಿಳಿಸಿದ್ದಾರೆ.
ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಅವರ ಅಧ್ಯಕ್ಷತೆಯಲ್ಲಿ ನಮ್ಮ ನಾಡಿಗೆ ಪೂರಕವಾಗುವ ಒಂದು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಒಂದು ಉನ್ನತ ಮಟ್ಟದ ರಾಜ್ಯ ಶಿಕ್ಷಣ ಆಯೋಗ ಅಥವಾ ಪ್ರಾಧಿಕಾರವನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಖಾಸಗಿ ಶಾಲೆಗಳನ್ನು ಗುರಿಯಾಗಿಸಿ ರಚಿಸಿರುವ ಅಗ್ನಿ ಅವಘಡ ಸುರಕ್ಷೆ, ಕಟ್ಟಡ ದಕ್ಷತೆ, ಸ್ಥಿರ ನಿಧಿ, ಅನಧಿಕೃತ ಶಾಲೆಗಳ ಪಟ್ಟಿ ಇತ್ಯಾದಿ ಅವೈಜ್ಞಾನಿಕ ನಿರ್ಧಾರಗಳ ಪರಿಣಾಮ ಅಗಿರುವ ಸಮಸ್ಯೆಗಳ ಕುರಿತು ಸಮಗ್ರವಾಗಿ ಅಧ್ಯಯನ ನಡೆಸಿ ವರದಿಯ ಅಧಾರದ ಮೇಲೆ ತಕ್ಷಣ ಕ್ರಮ ಜರುಗಿಸಬೇಕು ಎಂದು ಅವರು ತಿಳಿಸಿದ್ದಾರೆ.
1995ರ ನಂತರ ಪ್ರಾರಂಭವಾಗಿರುವ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳಿಗೆ ಅನುದಾನ ನೀಡಬೇಕು. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ಮಕ್ಕಳಿಗೂ ಬಿಸಿಯೂಟದ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.