ಮಣಿಪುರ: ಗಲಭೆ ಪೀಡಿತ ಮೊರೆಹಾ ನಗರಕ್ಕೆ ಅಮಿತ್ ಶಾ ಭೇಟಿ

ಹೊಸದಿಲ್ಲಿ, ಮೇ 31: ಸುಮಾರು ಒಂದು ತಿಂಗಳಿನಿಂದ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾದ ಮಣಿಪುರ ರಾಜ್ಯದ ಮೊರೆಹಾ ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಭೇಟಿ ನೀಡಿದ್ದು,ಅಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಪರಾಮರ್ಶನಾ ಸಭೆ ನಡೆಸಿದರು.
ತನ್ನ ಮಣಿಪುರ ಭೇಟಿಯ ಮೂರನೇ ದಿನವಾದ ಇಂದು, ಶಾ ಅವರು ಕುಕಿ ಹಾಗೂ ಇತರ ಸಮುದಾಯಗಳ ಪ್ರತಿನಿಧಿಗಳನ್ನೊಳಗೊಂಡ ನಿಯೋಗದ ಜೊತೆ ಮಾತುಕತೆ ನಡೆಸಿದರು. ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ಸರಕಾರದ ಪ್ರಯತ್ನಗಳಿಗೆ ನಿಯೋಗದ ಸದಸ್ಯರು ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿದರು.
ಮಣಿಪುರ ಪೊಲೀಸ್ ಪಡೆ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಹಾಗೂ ಸೇನಾಪಡೆ ಅಧಿಕಾರಿಗಳ ಜೊತೆಗೂ ಅವರು ಮಾತುಕತೆ ನಡೆಸಿದರು.ಮಣಿಪುರದಲ್ಲಿ ಶಾಂತಿ ಹಾಗೂ ಸಮೃದ್ಧಿಯನ್ನು ಕಾಪಾಡುವುದು ಸರಕಾರದ ಪ್ರಮುಖ ಆದ್ಯತೆಯಾಗಿದ್ದು, ಶಾಂತಿ ಕದಡುವಂತಹ ಯಾವುದೇ ಚಟುವಟಿಕೆಗಳನ್ನು ದೃಢವಾಗಿ ಮಟ್ಟಹಾಕುವಂತೆ ಅವರು ಸೂಚನೆ ನೀಡಿದರು.
ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಘರ್ಷಣೆ ಆರಂಭಗೊಂಡ ಬಳಿಕ ಗೃಹಸಚಿವರು ರಾಜ್ಯಕ್ಕೆ ನೀಡಿದ ಮೊದಲ ಭೇಟಿ ಇದಾಗಿದೆ.