ಜೂ.11ರಿಂದ ಉಚಿತ ಪ್ರಯಾಣ: ಮಹಿಳೆಯರಿಗೆ ವಿಶೇಷ ಟಿಕೆಟ್ ಜಾರಿ ಮಾಡಲು ಮುಂದಾದ BMTC

ಬೆಂಗಳೂರು, ಜೂ. 4; ಕಾಂಗ್ರೆಸ್ ಪಕ್ಷದ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗೆ ಸಾರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ ಯೋಜನೆಯನ್ನು ಇದೇ ಜೂ.11ರಿಂದ ಪ್ರಾರಂಭಿಸಲಾಗುತ್ತಿದ್ದು, ಮಹಿಳೆಯರಿಗೆ ಟಿಕೆಟ್ ನೀಡುವ ಸಲುವಾಗಿ ವಿಶೇಷ ಟಿಕೆಟ್ ರೂಪಿಸಿದೆ.
ವಿದ್ಯಾರ್ಥಿನಿಯರು ಸೇರಿ ಎಲ್ಲ ವರ್ಗದ ಮಹಿಳೆಯರು ‘ಶಕ್ತಿ' ಯೋಜನೆಯಡಿ ಹವಾನಿಯಂತ್ರಿತ(ಎಸಿ) ಹಾಗೂ ಐಷಾರಾಮಿ (ಲಕ್ಷುರಿ) ಬಸ್‍ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‍ಗಳಲ್ಲಿ ರಾಜ್ಯದೊಳಗೆ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಬಿಎಂಟಿಸಿ ಈ ‘ಶಕ್ತಿ' ಯೋಜನೆ ಜಾರಿಗೊಳಿಸಲು ವಿಶೇಷ ಟಿಕೆಟ್ ರೂಪಿಸಿದೆ. ಮಹಿಳೆಯರು ಬಸ್‍ನಲ್ಲಿ ಟಿಕೆಟ್ ಪಡೆಯಬೇಕು. ಆದರೆ ಅದಕ್ಕೆ ಯಾವುದೇ ಹಣವನ್ನು ಪಾವತಿ ಮಾಡಬೇಕಿಲ್ಲ. ಈ ಟಿಕೆಟ್ ‘ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ' ಎಂಬ ಬರಹ ಒಳಗೊಂಡಿದೆ.
ಹಾಗೆಯೇ ಎಲ್ಲಿಂದ, ಎಲ್ಲಿಗೆ ಪ್ರಯಾಣ ಮಾಡುತ್ತಾರೆಂಬ ಮಾಹಿತಿ ಹೊಂದಿರುತ್ತದೆ. ಆದರೆ ದರಗಳು ನಮೂದು ಆಗಿರುವ ಜಾಗದಲ್ಲಿ ಖಾಲಿ ಇರಲಿದೆ. ಈ ಚೀಟಿಯನ್ನು ಯಾವುದೇ ಹಣ ಪಾವತಿ ಮಾಡದೇ ಮಹಿಳೆಯರು ಪಡೆಯಬೇಕು.
‘ಶಕ್ತಿ' ಯೋಜನೆ ಜಾರಿಗೊಳಿಸುತ್ತಿರುವ ಕರ್ನಾಟಕ ಸರಕಾರ ಬಸ್‍ನಲ್ಲಿ ಒಂದು ಟ್ರಿಪ್‍ನಲ್ಲಿ ಸಂಚಾರ ನಡೆಸಿದ ಮಹಿಳೆಯರು ಎಷ್ಟು?. ಒಂದು ದಿನ ಬೆಂಗಳೂರು ನಗರದಲ್ಲಿ ಎಷ್ಟು ಮಹಿಳೆಯರು ಸಂಚಾರ ನಡೆಸಿದರು? ಹೀಗೆ ಯೋಜನೆ ಫಲಾನುಭವಿಗಳ ಕುರಿತು ಮಾಹಿತಿ ಸಂಗ್ರಹ ಮಾಡಲು ಈ ಮಾದರಿ ಟಿಕೆಟ್ ರೂಪಿಸಿದೆ.
ಇದನ್ನೂ ಓದಿ: ಇನ್ನು ಮುಂದೆ ಆಟ ನಡೆಯದು, ಗಲಾಟೆ ಮಾಡಿದರೆ ಜೈಲೇ ಗತಿ: ಸೂಲಿಬೆಲೆಗೆ ಸಚಿವ ಎಂ.ಬಿ ಪಾಟೀಲ್ ಎಚ್ಚರಿಕೆ