ಗ್ಯಾರಂಟಿ ಯೋಜನೆ ಎಲ್ಲರನ್ನು ಸಮಾನ ರೀತಿಯಲ್ಲಿ ನೋಡುವ ಕಾರ್ಯಕ್ರಮವಾಗಿದೆ: ದಿನೇಶ್ ಗುಂಡೂರಾವ್
ಶಕ್ತಿ ಯೋಜನೆಗೆ ಚಾಲನೆ ನೀಡಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವರು

ಮಂಗಳೂರು, ಜೂ.11: ಐದು ಗ್ಯಾರಂಟಿ ಯೋಜನೆ ಜಾತಿ, ಧರ್ಮ , ಭಾಷೆ, ಪಕ್ಷ ಎಲ್ಲವನ್ನು ಮೀರಿದ ಮತ್ತು ಎಲ್ಲರನ್ನು ಒಂದೇ ರೀತಿಯಲ್ಲಿ ನೋಡುವ ಕಾರ್ಯಕ್ರಮವಾಗಿದೆ .ಇದು ಸರಕಾರದ ಐದು ಗ್ಯಾರಂಟಿ ಸ್ಕೀಮ್ನ ವಿಶೇಷತೆಯಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಯೋಜನೆ ಶಕ್ತಿಗೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ರವಿವಾರ ಚಾಲನೆ ನೀಡಿ ಮಾತನಾಡಿದರು.
ಇವತ್ತಿನಿಂದ ಎಲ್ಲ ಸರಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ಪ್ರಯಾಣ ಉಚಿತವಾಗಿರುತ್ತದೆ.ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಸೌಲಭ್ಯದೊಂದಿಗೆ ಅವರಿಗೆ ಹೆಚ್ಚಿನ ಶಕ್ತಿ, ಪ್ರೋತ್ಸಾಹ, ಧೈರ್ಯ ತುಂಬಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ, ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲ್ ದೀಪ್ ಕುಮಾರ್ ಜೈನ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ರಾಜ್ಯ ಸಭಾ ಮಾಜಿ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕ ಜೆ.ಆರ್ .ಲೋಬೊ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ ಸೋಜ, ಜಿ.ಪಂ ಮಾಜಿ ಸದಸ್ಯೆ ಮಮತಾ ಗಟ್ಟಿ, ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಕವಿತಾ ಸನೀಲ್, ಮನಪಾ ವಿಪಕ್ಷ ನಾಯಕ ನವೀನ್ ಡಿ ಸೋಜ, ಮೂಡಾದ ಮಾಜಿ ಅಧ್ಯಕ್ಷ ಸುರೇಶ್ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
ಕೆಎಸ್ ಆರ್ಟಿಸಿ ಮಂಗಳೂರು ಒಂದನೇ ಘಟಕದ ಹಿರಿಯ ವ್ಯವಸ್ಥಾಪಕ ಎಚ್.ಆರ್.ಕಮಲ್ ಕುಮಾರ್ ಸ್ವಾಗತಿಸಿದರು. ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.