ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ

ಮಂಗಳೂರು: ದ.ಕ. ಜಿಲ್ಲಾ ನೂತನ ಉಸ್ತುವಾರಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿ ಸಿದ ದಿನೇಶ್ ಗುಂಡೂರಾವ್ ರವಿವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದರು.
ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ದ.ಕ.ಜಿಲ್ಲೆಗೆ ಉಸ್ತುವಾರಿ ಸಚಿವನಾಗಿ ಬಂದಿರುವುದು ನನಗೆ ಹೆಮ್ಮೆ ತಂದಿದೆ. ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಆಡಳಿತಾತ್ಮಕವಾಗಿ ಜಿಲ್ಲೆಯ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಎಲ್ಲರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತೇನೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಲು ಹಿಂದುತ್ವವೊಂದೇ ಕಾರಣವಲ್ಲ. ಹಿಂದುತ್ವದ ಅಲೆ ಇದ್ದ ಕಡೆಯೂ ಕಾಂಗ್ರೆಸ್ ಗೆದ್ದಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿ ಮುಂದಿನ ಲೋಕಸಭಾ, ಜಿಪಂ, ತಾಪಂ ಚುನಾವಣೆಗೆ ಪಕ್ಷ ಸಂಘಟನೆ ಮಾಡಬೇಕಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ರಾಜ್ಯ ಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಜಿ.ಕೃಷ್ಣಪ್ಪ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜೆ.ಎ.ಬಾವ, ಪದ್ಮರಾಜ್ ಆರ್, ಮುಂಚೂಣಿ ಘಟಗಳ ಜಿಲ್ಲಾಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ್, ಶಾಲೆಟ್ ಪಿಂಟೊ, ಜೋಕ್ಕಿಂ ಡಿಸೋಜ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶೇಖರ್ ಕುಕ್ಕೇಡಿ, ಲಾರೆನ್ಸ್ ಡಿಸೋಜ, ಶುಭಾಷ್ ಕೊಳ್ನಾಡ್, ಬಿ.ಎಂ.ಅಬ್ಬಾಸ್ ಅಲಿ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ವಂದಿಸಿದರು.
