ಮೋದಿ ಕೈಗೆ ಸಿಕ್ಕ ‘ಮಹಾರತ್ನಗಳು’

ಇದ್ದಕ್ಕಿದ್ದಂತೆ ಈವರೆಗೆ ಮಾರುವ ಪಟ್ಟಿಯಲ್ಲಿ ಇಲ್ಲದಿದ್ದ ಮಹಾರತ್ನ ಬಿಪಿಸಿಎಲ್ ಅನ್ನು ತರಾತುರಿಯಲ್ಲಿ ಮಾರಿ ರೂ. 60,000 ಕೋಟಿಗಳನ್ನು ಸಂಗ್ರಹಿಸಹೊರಟಿದೆ. ಇದನ್ನು ಕೊಂಡುಕೊಳ್ಳಲು ತುದಿಗಾಲಲ್ಲಿ ನಿಂತಿರುವುದು ಭಾರತದ ಅಂಬಾನಿಯ ಮೂಲಕ ಸೌದಿಯ ಅರಾಮ್ಕೋ, ಬ್ರಿಟನ್ನಿನ ಬಿಪಿ ಮತ್ತು ಶೆಲ್ ಆಯಿಲ್ ಕಂಪೆನಿಗಳು. ಈವರೆಗೆ ತೈಲ ವಿತರಣೆಯು ಸರಕಾರದ ಒಡೆತನದಲ್ಲಿ ಇದ್ದಿದ್ದಕ್ಕೆ ಭಾರತದ ತೈಲ ಬೆಲೆ ಏರಿಕೆ ಲ್ಯಾಟಿನ್‌ಅಮೆರಿಕದಲ್ಲಿ ಆದಷ್ಟು ಏರಲಿಲ್ಲ. ಹಾಗೆಯೇ ತೈಲ ವಿತರಣೆಯ ಸಾರ್ವಭೌಮತೆ ಇನ್ನೂ ಸರಕಾರದ ಒಡೆತನದಲ್ಲೇ ಇದೆ. ಆದರೆ ನಾಳೆ ಅದರಲ್ಲೂ ಈ ವಿದೇಶಿ ಕಂಪೆನಿಗಳದ್ದೇ ಮೇಲುಗೈ ಆದರೆ ಭಾರತವು ತನ್ನ ಪರಾವಲಂಬನೆಯಿಂದಾಗಿಯೇ ಜನರ ಹಾಗೂ ದೇಶದ ಅಭಿವೃದ್ಧಿಯ ಬಗೆಗಿನ ಸಾರ್ವಭೌಮತೆಯನ್ನೇ ಕಳೆದುಕೊಳ್ಳುತ್ತದೆ.

ಮೋದಿ ಸರಕಾರದ ಸಚಿವ ಸಂಪುಟವು ಮೊನ್ನೆ ಬಿಪಿಸಿಎಲ್ ಅನ್ನೂ ಒಳಗೊಂಡಂತೆ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಕಂಟೈನರ್ ಕಾರ್ಪೊರೇಷನ್ ಇನ್ನಿತ್ಯಾದಿ ಐದು ಮಹತ್ವದ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳನ್ನು ತ್ವರಿತವಾಗಿ ಖಾಸಗೀಕರಿಸುವ ತೀರ್ಮಾನ ತೆಗೆದುಕೊಂಡಿದೆ. ಇದು ಒಂದು ವಾರದ ಹಿಂದೆ ಖಾಸಗೀಕರಿಸಲು ನಿಗದಿಯಾದ 28 ಕಂಪೆನಿಗಳ ಜೊತೆಗೆ ಹೊಸದಾಗಿ ಸೇರಿಸಲಾದ ಪಟ್ಟಿ!

ಈ ಎರಡೂ ಪಟ್ಟಿಗಳ ನಡುವೆ ಒಂದು ಪ್ರಮುಖ ವ್ಯತ್ಯಾಸವಿದೆ. ವಾರದ ಹಿಂದೆ ಪ್ರಕಟಿಸಲಾದ 28 ಕಂಪೆನಿಗಳು ನಷ್ಟ ಮಾಡುತ್ತಿದ್ದ ಸಾರ್ವಜನಿಕ ಕಂಪೆನಿಗಳು ಮತ್ತು ಅದರಲ್ಲಿರುವ ಬಹುಪಾಲು ಕಂಪೆನಿಗಳನ್ನು ಖಾಸಗೀಕರಿಸಲು ಕಳೆದ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ಯಾವ ಖಾಸಗಿ ಕಂಪೆನಿಗಳೂ ಅವನ್ನು ಕೊಳ್ಳಲು ಮುಂದೆ ಬರುತ್ತಿಲ್ಲ.

ಆದರೆ ಮೊನ್ನೆ ಖಾಸಗೀಕರಣಗೊಳ್ಳಲು ಕ್ಯಾಬಿನೆಟ್‌ನಲ್ಲಿ ಅನುಮೋದನೆಗೊಂಡ ಬಿಪಿಸಿಎಲ್ ಹಾಗೂ ಇನ್ನಿತರ ನಾಲ್ಕು ಕಂಪೆನಿಗಳು ಲಾಭ ತರುತ್ತಿದ್ದ ಸಾರ್ವಜನಿಕ ಸಂಸ್ಥೆಗಳು ಮತ್ತು ಅವುಗಳನ್ನು ಕೂಡಲೇ ಖಾಸಗೀಕರಿಸುವ ಯೋಜನೆ ಇದಕ್ಕೆ ಮುಂಚೆಯಂತೂ ಇರಲೇ ಇಲ್ಲ.

ಉದಾಹರಣೆಗೆ ಭಾರತದ ಪೆಟ್ರೋಲಿಯಂ ಕ್ಷೇತ್ರದ ಎರಡನೇ ದೈತ್ಯ ಕಂಪೆನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್- ಬಿಪಿಸಿಎಲ್ ಕಂಪೆನಿಯನ್ನೇ ಗಮನಿಸಿ. ಈಗಾಗಲೇ ಇದೇ ಅಂಕಣದಲ್ಲಿ ವಿವರಿಸಿದ್ದಂತೆ ಬಿಪಿಸಿಎಲ್ ಸಂಸ್ಥೆಯು ಕಳೆದ ಐದು ವರ್ಷದಿಂದ ಸತತವಾಗಿ ಸರಾಸರಿ 5,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಲಾಭ ಗಳಿಸುತ್ತಿರುವ ಕಂಪೆನಿ. ಕಳೆದ ಐದು ವರ್ಷಗಳಲ್ಲಿ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ತೆರಿಗೆ ಇನ್ನಿತ್ಯಾದಿ ರೂಪಗಳಲ್ಲಿ ಸರಕಾರಕ್ಕೆ 30,000 ಕೋಟಿಗಳಷ್ಟು ಹಣವನ್ನು ಒದಗಿಸಿದೆ. ಇಂತಹ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಸರಕಾರವು ಕೇವಲ 60,000 ಕೋಟಿ ರೂ.ಗಳಿಗೆ ತನ್ನ ಇಡೀ ಶೇ.53ರಷ್ಟು ಶೇರನ್ನು ಮಾರಿಬಿಡುತ್ತಿದೆ. ವಾಸ್ತವವಾಗಿ ಬಿಪಿಸಿಎಲ್ ಸಂಸ್ಥೆಯನ್ನು ಇದೇ ಸರಕಾರವೇ 2016ರಲ್ಲಿ ‘ಮಹಾರತ್ನ’ ಎಂದು ಕರೆದು ಗೌರವಿಸಿದೆ. ದೇಶ ಕಟ್ಟಿದ ‘ಮಹಾರತ್ನ’ಗಳು!

ಸರಕಾರದ ನೀತಿಗಳ ಪ್ರಕಾರ ಒಂದು ಸಾರ್ವಜನಿಕ ಸಂಸ್ಥೆಗೆ ‘ಮಹಾರತ್ನ’ ಎಂಬ ಗೌರವ ಸಿಗಬೇಕೆಂದರೆ, ಅದು ಸತತವಾಗಿ ಮೂರು ವರ್ಷಗಳ ಕಾಲ 5,000 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ನಿವ್ವಳ ಲಾಭ ಮಾಡಿರಬೇಕು. ಸತತವಾಗಿ ಮೂರು ವರ್ಷಗಳ ಕಾಲ 25,000 ಕೋಟಿಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸಿರಬೇಕು. ಒಟ್ಟು 15,000 ಕೋಟಿಗೆ ಕಡಿಮೆ ಇರದಷ್ಟು ಆಸ್ತಿಪಾಸ್ತಿಯನ್ನು ಹೊಂದಿರಬೇಕು ಹಾಗೂ ಜಾಗತಿಕವಾಗಿಯೂ ತನ್ನ ಛಾಪನ್ನು ಮೂಡಿಸಿರಬೇಕು.

ಆದರೆ ಸಾರಾಂಶದಲ್ಲಿ ಒಂದು ‘ಮಹಾರತ್ನ’ ಕಂಪೆನಿ ಎಂದರೆ ದೇಶಕ್ಕೆ ಹೆಮ್ಮೆ, ಆದಾಯ ಹಾಗೂ ಅಭಿವೃದ್ಧಿಗಳನ್ನು ತರುವಂತಹ ಕಂಪೆನಿಯೆಂದರ್ಥ. ಹಾಗೂ ಒಂದು ನಿಜವಾದ ದೇಶಪ್ರೇಮಿ ಸರಕಾರ ಅಂತಹ ಮಹಾರತ್ನಗಳನ್ನು ಕಾಪಾಡಬೇಕೆ ವಿನಾ ಖಾಸಗಿಯವರಿಗೆ ಮಾರಬಾರದಲ್ಲವೇ?

ಆದರೆ ಮೋದಿ ಸರಕಾರ ಕಳೆದ ಐದು ವರ್ಷಗಳಿಂದ ಖಾಸಗೀಕರಣದ ಹೆಸರಿನಲ್ಲಿ ಮಾರುತ್ತಿರುವುದು ಮಹಾರತ್ನಗಳನ್ನೇ ಹೊರತು ನಷ್ಟದ ಉದ್ದಿಮೆಗಳನ್ನಲ್ಲ ಎಂಬುದನ್ನು ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣಕ್ಕೆಂದೇ ಸೃಷ್ಟಿಸಲಾಗಿರುವ ಡಿಪಾರ್ಟ್ ಮೆಂಟ್ ಆಫ್ ಇನ್‌ವೆಸ್ಟ್ ಮೆಂಟ್ ಆ್ಯಂಡ್ ಪಬ್ಲಿಕ್ ಅಸೆಟ್ ಮ್ಯಾನೇಜ್‌ಮೆಂಟ್- ದೀಪಂ (!?)-ನ ಅಂಕಿಅಂಶಗಳನ್ನು ಹಾಗೂ ವಾರ್ಷಿಕ ವರದಿಗಳನ್ನು ನೋಡಿದರೆ ಅರ್ಥವಾಗುತ್ತದೆ. ಪ್ರಸ್ತುತ ಅಂದರೆ 2019ರ ಅಕ್ಟೋಬರ್ ವೇಳೆಗೆ ದೇಶದ ಹತ್ತು ಸಾರ್ವಜನಿಕ ಸಂಸ್ಥೆಗಳನ್ನು ‘ಮಹಾರತ್ನ’ಗಳೆಂದು ಘೋಷಿಸಲಾಗಿದೆ. ಅವುಗಳೆಂದರೆ 1. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) 2. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) 3. ಕೋಲ್ ಇಂಡಿಯಾ ಲಿಮಿಟೆಡ್ 4. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಜಿಎಐಎಲ್) 5. ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) 6. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿ) 7. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ) 8. ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ಒಎನ್‌ಜಿಸಿ) 9. ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು 10. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್)

ಮೇಲ್ನೋಟಕ್ಕೆ ಕಾಣುವಂತೆ ಮೇಲಿನ ಹತ್ತೂ ಕಂಪೆನಿಗಳೂ ಸಹ ದೇಶದ ಆರ್ಥಿಕತೆಯ ಕೀಲಕವಾದ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಕಲ್ಲಿದ್ದಲು, ವಿದ್ಯುತ್, ತೈಲ, ಅನಿಲ ಇವುಗಳು ಯಾವುದೇ ಆರ್ಥಿಕತೆಯ ಪ್ರಮುಖ ಎಂಟು ಕ್ಷೇತ್ರಗಳಲ್ಲಿ ಸೇರುತ್ತವೆ. ಆ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಮತ್ತು ಪರಿಣಾಮಕಾರಿ ಉತ್ಪಾದಕತೆಯನ್ನು ಹೊಂದಿದ್ದರೆ ಆ ದೇಶದ ಅಭಿವೃದ್ಧಿ ಸುಗಮವಾಗುತ್ತದೆ. ಯಾವ ದೇಶಗಳು ಈ ಕ್ಷೇತ್ರಗಳನ್ನು ಖಾಸಗೀಕರಿಸಿ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಪರಭಾರೆ ಮಾಡುತ್ತವೆಯೋ ಆ ದೇಶದ ಅಭಿವೃದ್ಧಿ ದಿಕ್ಕೆಡುವುದು ಮಾತ್ರವಲ್ಲದೆ ಆ ದೇಶಗಳು ಸ್ವಾತಂತ್ರ್ಯವನ್ನೂ ಕಳೆದುಕೊಳ್ಳುತ್ತವೆ. ಆದರೆ ಭಾರತವು ಹಾಗಾಗದೆ ಒಂದಷ್ಟು ಮಟ್ಟಿಗಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಕಡೆ ಮೇಲಿನ ಮಹಾರತ್ನಗಳು ತಮ್ಮ ಕೊಡುಗೆಯನ್ನು ನೀಡುತ್ತಿದ್ದವು.

ಆದರೆ ಮೋದಿ ಸರಕಾರ ಬಂದಮೇಲೆ ಆಗುತ್ತಿರುವುದೇ ಬೇರೆ. ಸರಕಾರದ ಸಂಪನ್ಮೂಲಗಳನ್ನು ಹೆಚ್ಚಿಸಿಕೊಳ್ಳುವ ಹೆಸರಿನಲ್ಲಿ ಸರಕಾರಗಳು ತೆರಿಗೆ ಆದಾಯದ ಜೊತೆಗೆ ನಷ್ಟದಲ್ಲಿರುವ ಸರಕಾರಿ ಉದ್ದಿಮೆಗಳನ್ನು ಮಾರಿ ಅದರ ಆದಾಯವನ್ನು ಸರಕಾರದ ವೆಚ್ಚಕ್ಕೆ ಸೇರಿಸಿಕೊಳ್ಳುವುದನ್ನು ಕಾಂಗ್ರೆಸ್ ಸರಕಾರವೇ ಪ್ರಾರಂಭಿಸಿತ್ತು. ಆದರೆ ಅದನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿರುವುದು ಮೋದಿ ಸರಕಾರ. ಆದರೆ ಅದು ಖಾಸಗೀಕರಿಸುತ್ತಿರುವುದು ನಷ್ಟದ ಕಂಪೆನಿಗಳನ್ನೇ?

ಅದನ್ನು ವಿಶ್ಲೇಷಿಸುವ ಮುಂಚೆ ಭಾರತದ ಸರಕಾರಿ ಕಂಪೆನಿಗಳನ್ನು ಅಸಲು ಲಾಭದಾಯಕ ಮತ್ತು ನಷ್ಟದಾಯಕ ಎಂದು ವಿಂಗಡಿಸುವುದು ಸರಿಯೇ ಎಂದು ನೋಡೋಣ. ಉದ್ಯೋಗ ನೀಡುವ ಕಂಪೆನಿಗಳು- ನಷ್ಟ ತೋರಿಸುವ ಸರಕಾರಗಳು

2018ರ ಡಿಸೆಂಬರ್ ವೇಳೆಗೆ ಭಾರತದಲ್ಲಿ ಕೇಂದ್ರ ಸರಕಾರದ ಸ್ವಾಮ್ಯಕ್ಕೆ ಸೇರಿದ 339 ಸಾರ್ವಜನಿಕ ಸಂಸ್ಥೆಗಳಿದ್ದವು. ಅವುಗಳಲ್ಲಿ ಒಟ್ಟಾರೆಯಾಗಿ 13 ಲಕ್ಷ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ತೊಡಗಿಸಲಾಗಿದೆ. 2017-18ರ ಸಾಲಿನಲ್ಲಿ ಆ 339 ಕಂಪೆನಿಗಳಲ್ಲಿ 184 ಕಂಪೆನಿಗಳು ಲಾಭ ಮಾಡುತ್ತಿದ್ದರೆ, 84 ಕಂಪೆನಿಗಳು ನಷ್ಟಕ್ಕೆ ಗುರಿಯಾಗಿದ್ದವು. ಆದರೂ ಅದೇ ಸಾಲಿನಲ್ಲಿ ಲಾಭ ಮಾಡುತ್ತಿದ್ದ ಕಂಪೆನಿಗಳು 1,31,000 ಕೋಟಿ ರೂ.ಗಳಷ್ಟು ಲಾಭ ಮಾಡಿದ್ದರೆ, ನಷ್ಟ ಮಾಡುತ್ತಿದ್ದ ಕಂಪೆನಿಗಳು ಕೇವಲ 30,000 ಕೋಟಿ ನಷ್ಟ ಮಾಡಿದ್ದವು. ಅಂದರೆ ಒಟ್ಟಾರೆಯಾಗಿ ಭಾರತದ ಆರ್ಥಿಕತೆಗೆ ಸಾರ್ವಜನಿಕ ಉದ್ಯಮಗಳಿಂದ ನಷ್ಟವೇನೂ ಆಗಿರಲಿಲ್ಲ. ಅಷ್ಟು ಮಾತ್ರವಲ್ಲ. ಈ ಎಲ್ಲಾ ಕಂಪೆನಿಗಳು 2018ರ ಸಾಲಿನಲ್ಲಿ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್ ಟ್ಯಾಕ್ಸ್‌ಗಳ ರೂಪದಲ್ಲಿ ಸರಕಾರಕ್ಕೆ 31,000 ಕೋಟಿ ರೂ.ಗಳನ್ನು ಪಾವತಿ ಮಾಡಿದ್ದವು. ಜೊತೆಗೆ 11 ಲಕ್ಷದಷ್ಟು ಉದ್ಯೋಗಗಳನ್ನು ನೀಡಿದ್ದವು ಮತ್ತು ಅವರಿಗೆ 2018ರ ಸಾಲಿನಲ್ಲಿ 1,52,000 ಕೋಟಿ ರೂಪಾಯಿಗಳನ್ನು ಸಂಬಳ ಸಾರಿಗೆಯ ರೂಪದಲ್ಲಿ ನೀಡಲಾಗಿತ್ತು. ಸಹಜವಾಗಿಯೇ ಆ ಮೊತ್ತವು ಆರ್ಥಿಕತೆಯಲ್ಲಿ ಅಷ್ಟರ ಮಟ್ಟಿಗಿನ ಬೇಡಿಕೆಯನ್ನು ಸೃಷ್ಟಿಸುತ್ತಷ್ಟೆ. ಇವತ್ತು ಈ ದೇಶದ ಆರ್ಥಿಕತೆ ಕಂಗೆಟ್ಟಿರುವುದೇ ಜನರ ಕೊಳ್ಳುವ ಶಕ್ತಿಯ ಕುಸಿತದಿಂದ, ಅದಕ್ಕೆ ಕಾರಣವಾಗಿರುವ ನಿರುದ್ಯೋಗದಿಂದ ಎನ್ನುವುದರ ಹಿನ್ನೆಲೆಯಲ್ಲಿ ಈ ಉದ್ಯೋಗಗಳ ಮಹತ್ವ ಅರ್ಥವಾಗುತ್ತದೆ ಮತ್ತು ಸರಕಾರಿ ಕಂಪೆನಿಗಳನ್ನು ನಷ್ಟದಾಯಕ ಎಂದು ವರ್ಗೀಕರಿಸುವುದರ ಅಸಂಬದ್ಧತೆಯನ್ನು ತೋರಿಸುತ್ತದೆ.

ಅದೇನೇ ಇರಲಿ. ಮೋದಿ ಸರಕಾರ 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ನಷ್ಟಕ್ಕೆ ಗುರಿಯಾಗಿರುವ ಆ 84 ಕಂಪೆನಿಗಳನ್ನು ಖಾಸಗೀಕರಿಸುವುದಾಗಿ ಹೇಳುತ್ತಾ ಬಂದಿತ್ತು. ವಾಸ್ತವವಾಗಿ ಪ್ರತಿ ಬಜೆಟ್‌ನಲ್ಲೂ ಮೋದಿ ಸರಕಾರ ಸಾರ್ವಜನಿಕ ಸಂಸ್ಥೆಗಳ ಮಾರಾಟದಿಂದ ಎಷ್ಟು ಸಂಪನ್ಮೂಲ ಕ್ರೋಡೀಕರಿಸಲಾಗುವುದೆಂದು ಘೋಷಿಸುತ್ತಲೇ ಬಂದಿದೆ ಹಾಗೂ ಈ ಬಗೆಯಲ್ಲಿ ದೇಶದ ಸ್ವತ್ತುಗಳ ಹರಾಜಿನ ಮೂಲಕ 2014-2018ರ ನಡುವೆ 3 ಲಕ್ಷ ಕೋಟಿಗಳನ್ನು ಸಂಗ್ರಹಿಸಿದೆ.

ಆದರೆ ಅದು ನಷ್ಟದ ಕಂಪೆನಿಯನ್ನು ಹರಾಜು ಮಾಡಿಯಲ್ಲ. ಬದಲಿಗೆ ಮಹಾರತ್ನಗಳನ್ನು ಮಾರಿ. ಮೋದಿಯ ಕೈಯಲ್ಲಿ ಮಹಾರತ್ನಗಳು

ಉದಾಹರಣೆಗೆ ಕರ್ನಾಟಕದ ಬಿಜೆಪಿ ಎಂಪಿ ಶಿವಕುಮಾರ್ ಉದಾಸಿಯವರು ಕೇಳಿರುವ ಚುಕ್ಕೆ ರಹಿತ ಪ್ರಶ್ನೆಯೊಂದಕ್ಕೆ 2019ರ ನವೆಂಬರ್ 18ರಂದು ಹಣಕಾಸು ಮಂತ್ರಿಗಳು ಕೊಟ್ಟಿರುವ ವಿವರ ಇಂತಿದೆ:

2014-15ರ ಸಾಲಿನಲ್ಲಿ ಭಾರತ ಸರಕಾರವು ಸರಕಾರಿ ಕಂಪೆನಿಗಳಲ್ಲಿನ ಸರಕಾರದ ಶೇರುಗಳನ್ನು ಮಾರಿ 24,348 ಕೋಟಿ ರೂಪಾಯಿಗಳನ್ನು ಕ್ರೋಡೀಕರಿಸಿದೆ. ಆದರೆ ಇದರಲ್ಲಿ ನಷ್ಟ ಮಾಡುತ್ತಿದೆ ಎಂದು ಹೇಳಲಾಗುತ್ತಿದ್ದ ಕಂಪೆನಿಗಳ ಶೇರು ಮಾರಾಟದಿಂದ ಪಡೆದುಕೊಂಡದ್ದು 24 ಕೋಟಿ ರೂಪಾಯಿಗಳು ಮಾತ್ರ. ಆದರೆ ಮಹಾರತ್ನ ಕಂಪೆನಿಯಾದ ಕೋಲ್ ಇಂಡಿಯಾದಲ್ಲಿ ಶೇ.10ರಷ್ಟು ಶೇರನ್ನು ಮಾರಾಟ ಮಾಡಿ 22,000 ಕೋಟಿ ರೂಪಾಯಿಗಳನ್ನೂ ಹಾಗೂ ಮತ್ತೊಂದು ಮಹಾರತ್ನವಾದ ಸ್ಟೀಲ್ ಅಥಾರಿಟಿಯ ಶೇ.5ರಷ್ಟು ಮಾರಾಟದಿಂದ 1,700 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಯಿತು. 2015-16ರ ಸಾಲಿನಲ್ಲಿ ಸರಕಾರಿ ಕಂಪೆನಿಗಳಲ್ಲಿನ ತನ್ನ ಪಾಲನ್ನು ಮಾರುವುದರಿಂದ 24,000 ಕೋಟಿ ಸಂಗ್ರಹಿಸಿದ್ದರೆ ಅದರಲ್ಲಿ 14,000 ಕೋಟಿ ರೂ. ಬಂದದ್ದು ಮಹಾರತ್ನ ಕಂಪೆನಿಯಾದ ಇಂಡಿಯನ್ ಆಯಿಲ್ ಮತ್ತು ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್‌ನಲ್ಲಿನ ಸರಕಾರದ ಪಾಲಿನ ಮಾರಾಟದಿಂದ. 2016-17ರ ಸಾಲಿನಲ್ಲಿ ಈ ಮಾರ್ಗದಲ್ಲಿ 44,000 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದರೆ ಅದರಲ್ಲಿ ಶೇ.70ರಷ್ಟು ಮೊತ್ತವನ್ನು 10 ಮಹಾರತ್ನಗಳನ್ನು ಮತ್ತು ಇತರ 12 ಲಾಭದಾಯಕ ಸರಕಾರಿ ಕಂಪೆನಿಗಳನ್ನು ಸೇರಿಸಿ ರೂಪಿಸಲಾದ ‘ಭಾರತ್ 22’ ಎಂಬ ಸ್ಟಾಕನ್ನು ಮಾರುವ ಮೂಲಕ ಹಾಗೂ ವಿಶೇಷವಾಗಿ ಕೋಲ್ ಇಂಡಿಯಾ ಮತ್ತು ಇಂಡಿಯನ್ ಆಯಿಲ್ ಕಂಪೆನಿಯ ಶೇರುಗಳನ್ನು ಮಾರುವ ಮೂಲಕ ಸಂಗ್ರಹಿಸಲಾಯಿತು. 2017-18ರ ಸಾಲಿನಲ್ಲಿ ಈ ದಾರಿಯಲ್ಲಿ 1,00,056 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಯಿತು. ಇದರ ಪ್ರಧಾನ ಪಾಲು ಬಂದದ್ದು ಭಾರತ್ 22ರ ಮಾರಾಟದಿಂದ ಮತ್ತು ನಷ್ಟದಾಯಕ ಕಂಪೆನಿಗಳನ್ನು ಲಾಭದಾಯಕ ಸರಕಾರಿ ಕಂಪೆನಿಗಳು ಕೊಂಡುಕೊಳ್ಳುವಂತೆ ಮಾಡುವ ಮೂಲಕ. 2018-19ರ ಸಾಲಿನಲ್ಲಿ 84,971 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದ್ದರೆ ಅದರಲ್ಲಿ ಭಾರತ್ 22, ಕೋಲ್ ಇಂಡಿಯಾ, ಇಂಡಿಯನ್ ಆಯಿಲ್, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಇತ್ಯಾದಿ ಮಹಾರತ್ನಗಳ ಮಾರಾಟದಿಂದಲೇ..

ಇನ್ನು 2019-20ರ ಸಾಲಿನಲ್ಲಿ ಈವರೆಗೆ 17,364 ಕೋಟಿ ರೂ.ಗಳನ್ನು ಮಾತ್ರ ಸಂಗ್ರಹಿಸಿದ್ದರೂ, ಅದರಲ್ಲೂ ಸಹ ಭಾರತ್ 22 ಮತ್ತು ಮಹಾರತ್ನಗಳ ಪಾಲೇ 15,000 ಕೋಟಿ ರೂ.ಗಳಾಗಿದೆ.

(ಮತ್ತಷ್ಟು ವಿವರಗಳನ್ನು ಆಸಕ್ತರು ಲೋಕಸಭಾ ವೆಬ್‌ಸೈಟಿನ ಈ ವಿಳಾಸದಲ್ಲಿ ಪಡೆಯಬಹುದು http://164.100.47.194/Loksabha/Questions/QResult15.aspx?qref=6361&lsno=17)

ಸಣ್ಣ ತೂತು ಮುಚ್ಚಿಕೊಳ್ಳಲು ದೊಡ್ಡ ತೂತು ಕೊರೆದರೆ?

ಆದರೆ ಈ ವರ್ಷ ಮೋದಿ ಸರಕಾರ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದೆ. ಈ ವರ್ಷ ಬಜೆಟ್ ಮಂಡಿಸುವಾಗಲೇ ಸರಕಾರಿ ಕಂಪೆನಿಗಳ ಮಾರಾಟದ ಮೂಲಕ 1,10,000 ಕೋಟಿ ರೂ.ಗಳನ್ನು ಸಂಗ್ರಹಿಸುವುದಾಗಿ ಸರಕಾರ ಘೋಷಿಸಿತ್ತು ಹಾಗೂ ತೆರಿಗೆ ಮೂಲಗಳಿಂದಲೇ ಹೋದ ವರ್ಷಕ್ಕಿಂತ 2 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವುದಾಗಿ ಕೊಚ್ಚಿಕೊಂಡಿತ್ತು. ಆದರೆ 1991ರಿಂದ ಕಾಂಗ್ರೆಸ್ ಪ್ರಾರಂಭಿಸಿದ ಜನವಿರೋಧಿ ಆರ್ಥಿಕ ನೀತಿಗಳನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಜಾರಿ ಮಾಡಲಾರಂಭಿಸಿದ ಮೋದಿ ಸರಕಾರದ ಕ್ರಮಗಳು ಜನರ ಅದರಲ್ಲೂ ಗ್ರಾಮೀಣ ರೈತಾಪಿಯ ಬೆನ್ನೆಲುಬನ್ನೇ ಮುರಿಯಲಾರಂಭಿಸಿತ್ತು. ಅದರ ಜೊತೆಗೆ 2016ರ ನೋಟು ನಿಷೇಧ ಹಾಗೂ 2017ರಲ್ಲಿ ಜಾರಿಗೆ ತಂದ ಜಿಎಸ್‌ಟಿ ನೀತಿಗಳು ಸಣ್ಣಪುಟ್ಟ ಉದ್ಯಮಿಗಳ, ರೈತಾಪಿಗಳ, ಅಸಂಘಟಿತ ವಲಯದ ಕೋಟ್ಯಂತರ ಜನರ ಕೊಳ್ಳುವ ಶಕ್ತಿಯನ್ನೇ ಕಿತ್ತುಕೊಂಡ ಮೇಲೆ ಒಟ್ಟಾರೆ ದೇಶದ ಆರ್ಥಿಕತೆ ಹಿಂದಿನ ಹಲವು ದಶಕಗಳಿಗಿಂತಲೂ ಪಾತಾಳವನ್ನು ಮುಟ್ಟಿದೆ. ಹೀಗಾಗಿ ಈ ವರ್ಷದ ತೆರಿಗೆ ಸಂಗ್ರಹ ಹೋದ ವರ್ಷಕ್ಕಿಂತ 2 ಲಕ್ಷ ಕೋಟಿ ಜಾಸ್ತಿಯಾಗುವುದಿರಲಿ, ಒಂದೂವರೆ ಲಕ್ಷ ಕೋಟಿ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರ ಘೋಷಿಸಿರುವ ಕಾರ್ಯಕ್ರಮಗಳನ್ನು ಅರ್ಧದಷ್ಟು ಜಾರಿ ಮಾಡಬೇಕಾದರೂ ತೆರಿಗೆಯೇತರ ಸಂಪನ್ಮೂಲದಿಂದ ಸಂಗ್ರಹಿಸಬೇಕಾಗಿದೆ. ಆದರೆ ನವೆಂಬರ್ ಕಳೆಯುತ್ತಾ ಬಂದರೂ ಪ್ರಮುಖ ತೆರಿಗೆಯೇತರ ಆದಾಯ ಮೂಲವಾಗಿರುವ ಖಾಸಗೀಕರಣದಿಂದ ಸಂಗ್ರಹವಾಗಿರುವುದು ಕೇವಲ 17,000 ಕೋಟಿ ರೂ.ಗಳು ಮಾತ್ರ.

ಈ ಕಾರಣದಿಂದಾಗಿಯೇ ಇದ್ದಕ್ಕಿದ್ದಂತೆ ಈ ವರೆಗೆ ಮಾರುವ ಪಟ್ಟಿಯಲ್ಲಿ ಇಲ್ಲದಿದ್ದ ಮಹಾರತ್ನ ಬಿಪಿಸಿಎಲ್ ಅನ್ನು ತರಾತುರಿಯಲ್ಲಿ ಮಾರಿ ರೂ. 60,000 ಕೋಟಿಗಳನ್ನು ಸಂಗ್ರಹಿಸಹೊರಟಿದೆ. ಇದನ್ನು ಕೊಂಡುಕೊಳ್ಳಲು ತುದಿಗಾಲಲ್ಲಿ ನಿಂತಿರುವುದು ಭಾರತದ ಅಂಬಾನಿಯ ಮೂಲಕ ಸೌದಿಯ ಅರಾಮ್ಕೋ, ಬ್ರಿಟನ್ನಿನ ಬಿಪಿ ಮತ್ತು ಶೆಲ್ ಆಯಿಲ್ ಕಂಪೆನಿಗಳು. ಈವರೆಗೆ ತೈಲ ವಿತರಣೆಯು ಸರಕಾರದ ಒಡೆತನದಲ್ಲಿ ಇದ್ದಿದ್ದಕ್ಕೆ ಭಾರತದ ತೈಲ ಬೆಲೆ ಏರಿಕೆ ಲ್ಯಾಟಿನ್‌ಅಮೆರಿಕದಲ್ಲಿ ಆದಷ್ಟು ಏರಲಿಲ್ಲ. ಹಾಗೆಯೇ ತೈಲ ವಿತರಣೆಯ ಸಾರ್ವಭೌಮತೆ ಇನ್ನೂ ಸರಕಾರದ ಒಡೆತನದಲ್ಲೇ ಇದೆ. ಆದರೆ ನಾಳೆ ಅದರಲ್ಲೂ ಈ ವಿದೇಶಿ ಕಂಪೆನಿಗಳದ್ದೇ ಮೇಲುಗೈ ಆದರೆ ಭಾರತವು ತನ್ನ ಪರಾವಲಂಬನೆಯಿಂದಾಗಿಯೇ ಜನರ ಹಾಗೂ ದೇಶದ ಅಭಿವೃದ್ಧಿಯ ಬಗೆಗಿನ ಸಾರ್ವಭೌಮತೆಯನ್ನೇ ಕಳೆದುಕೊಳ್ಳುತ್ತದೆ. ಮೇಲಿನ ವಿವರಗಳು ಸ್ಪಷ್ಟಪಡಿಸುವಂತೆ ಖಾಸಗಿ ಕಂಪೆನಿಗಳು ಲಾಭದಾಯಕ ಸರಕಾರಿ ಕಂಪೆನಿಗಳನ್ನು ಕೊಳ್ಳುತ್ತವೆಯೇ ವಿನಾ ನಷ್ಟದ ಕಂಪೆನಿಗಳನ್ನಲ್ಲ ಮತ್ತು ಮೋದಿ ಸರಕಾರವು ಈ ದೇಶದ ಮಹಾರತ್ನಗಳನ್ನು ಬಿಡಿಬಿಡಿಯಾಗಿ ಮತ್ತು ಇಡಿಯಾಗಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಿ ದೇಶದ ಸಾರ್ವಭೌಮತೆಯನ್ನು ಹರಾಜಿಗಿಡುತ್ತಿದೆ.

ಇದಕ್ಕಿಂತ ದೊಡ್ಡ ದೇಶದ್ರೋಹ ಮತ್ತೊಂದಿರಬಹುದೇ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top