-

ಡಾ. ಬಿ. ಆರ್. ಅಂಬೇಡ್ಕರ್ ಅವರ ಆಯ್ದ ಭಾಷಣ-ಬರಹಗಳು

ಬಹುಜನ ಸಮಾಜದ ಮೇಲೆ ಅನ್ಯಾಯ ಆಗಕೂಡದೆಂಬ ಕಾನೂನು ರಚಿಸಬೇಕು

-

ಮುಕ್ಕಾಮ ಮಸೂರ ಜಿ. ಸಾತಾರಾದಲ್ಲಿ ಈ ಪೂರ್ವದಲ್ಲಿ ನಿರ್ಧರಿಸಿದಂತೆ ದಿ: ನವೆಂಬರ್ 9, 1937ರಂದು ಸಾತಾರಾ ಜಿಲ್ಲಾ 7ನೇ ಮಹಾರ ಪರಿಷತ್ತಿನ ಅಧಿವೇಶನವು ಡಾ. ಬಾಬಾಸಾಹೇಬ ಅಂಬೇಡ್ಕರರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಡಾಕ್ಟರ್ ಅಂಬೇಡ್ಕರರ ಮುಗಿಲು ಮುಟ್ಟುವ ಜಯಘೋಷಗಳು ಮೊಳಗುತ್ತಿದ್ದವು. ಸ್ಪಶ್ಯ ಸಮುದಾಯ ಬಾಂಧವರು ಈ ಅಪೂರ್ವ ಮತ್ತು ಉತ್ಸಾಹದ ವಾತಾವರಣ ಕಂಡು ಕುತೂಹಲ ಮತ್ತು ಅಚ್ಚರಿಯಾಗಿರುವುದರಲ್ಲಿ ಅನುಮಾನವಿಲ್ಲ. ಈ ಮೆರವಣಿಗೆಯಲ್ಲಿ ಅಧ್ಯಕ್ಷರ ಜೊತೆಗೆ ಸ್ವಾಗತಾಧ್ಯಕ್ಷ ಶಾಸಕ ಕೆ.ಎಸ್. ಸಾವಂತರವರು ವಾಹನದಲ್ಲಿದ್ದರು. ಅವರ ಹಿಂದಿನ ವಾಹನದಲ್ಲಿ ಶಾಸಕ ರಾಜಾರಾಮ ಭಾವು ಭೋಳೆ, ಅಡ್ವೊಕೇಟ್ ವಿನಾಯಕರಾವ್ ಗಡಕರಿ, ಅಣ್ಣಾಸಾಹೇಬ ಪೋತನೀಸ ಮುಂತಾದ ಮುಂದಾಳುಗಳು ಕುಳಿತಿದ್ದರು. ಸಂಜೆ 3 ಗಂಟೆಗೆ ಈ ಭವ್ಯ ಮೆರವಣಿಗೆಯ ಪರಿಷತ್ತಿನ ಬೃಹತ್ ಮಂಟಪಕ್ಕೆ ಆಗಮಿಸಿತು. ಡಾ. ಬಾಬಾಸಾಹೇಬರ ದರ್ಶನ ಪಡೆಯಲು ಮಂಟಪದ ಪ್ರವೇಶದ್ವಾರದಲ್ಲಿ ನೂಕುನುಗ್ಗಲು ಉಂಟಾಯಿತು. ಸಮತಾ ಸೈನಿಕ ದಳದ ಉತ್ಕೃಷ್ಟ ಕಾರ್ಯದಿಂದ ಎಲ್ಲ ವ್ಯವಸ್ಥೆಗಳು ಉತ್ತಮರೀತಿಯಾಗಿತ್ತು.

ಸ್ವಾಗತ ಗೀತೆಯ ಬಳಿಕ ಡಾ. ಬಾಬಾಸಾಹೇಬ ಅಂಬೇಡ್ಕರರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಆಗ ಜೈಕಾರ ಮೊಳಗಿತು. ಚಪ್ಪಾಳೆಗಳ ಸುರಿಮಳೆ ನಡೆಯಿತು. ನಂತರ ಸ್ವಾಗತಾಧ್ಯಕ್ಷ ಮಿ. ಖಂಡೆರಾವ ಎಸ್. ಸಾವಂತ ಅವರ ಭಾಷಣ ನಡೆಯಿತು. ಅವರು ತಮ್ಮ ಮಾತಿನಲ್ಲಿ ಡಾ.ಬಾಬಾಸಾಹೇಬರನ್ನು ಪರಿಚಯಿದರು. ‘‘ಬಹಳ ಜನ ಹೋದರು, ಬಹಳ ಜನ ಇರಲೂ ಬಹುದು, ಮುಂದೆಯೂ ಬರಬಹುದು. ಆದರೆ ಇವರ ಸಮರಾರಿಲ್ಲ’ ಇವು ಡಾಕ್ಟರ್ ಸಾಹೇಬರ ಬಗೆಗಿನ ಬಣ್ಣನೆಯ ಪದಗಳು ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ!

ಬಳಿಕ ಡಾ. ಬಾಬಾಸಾಹೇಬ ಅಂಬೇಡ್ಕರರ ಭಾಷಣ ಪ್ರಾರಂಭವಾಯಿತು. ಅವರು ಹೇಳಿದರು ಸೋದರಿಯರೇ ಮತ್ತು ಸೋದರರೇ,

ಈ ಮಸೂರ ಊರನ್ನು ನೆನೆದರೆ ನನ್ನ ಅಸ್ಪಶ್ಯತೆಯ ಬಾಲ್ಯದ ದಿನಗಳಲ್ಲಿಯ ಕಹಿ ಅನುಭವಗಳು ನೆನಪಾಗಿ ಕಣ್ಣು ತುಂಬುತ್ತದೆ. ಕಳೆದ 35 ವರ್ಷಗಳಲ್ಲಿ ಈ ಊರಿಗೆ ಎರಡನೇ ಬಾರಿ ಬಂದಿರುವೆ. ಈ ಪರಿಸರದ ಗೋರೆಗಾವ್‌ನಲ್ಲಿ ಕೆರೆಕಟ್ಟಿಸುವಾಗ ಆ ಕೆಲಸದಲ್ಲಿ ನನ್ನ ತಂದೆ ಕ್ಯಾಶಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಾನು, ನನ್ನ ಇಬ್ಬರು ಸಹೋದರರು ಮತ್ತು ಸಹೋದರಿಯ ಮಗ ಹೀಗೆ ನಾಲ್ಕು ಜನರು ಸತಾರಾದಲ್ಲಿ ಶಿಕ್ಷಣ ಪಡೆಯುತ್ತಿದ್ದೆವು. ನನ್ನ ತಾಯಿಯವರು ಆಗ ತೀರಿಹೋಗಿದ್ದರು. ನಮ್ಮೆಲ್ಲ ಮಕ್ಕಳ ಮೇಲೆ ತಂದೆಯ ಮಿತ್ರರು ನೆರೆಯಲ್ಲಿ ವಾಸವಾಗಿದ್ದವರು ಲಕ್ಷವಿಟ್ಟಿರುತ್ತಿದ್ದರು. ಬೇಸಿಗೆಯ ರಜೆಗೆ ತಂದೆಯವರು ಗೋರೆಗಾವಿಗೆ ಕರೆಸಿಕೊಂಡರು. ನಾವಲ್ಲಿಗೆ ಬರುವುದರ ಬಗ್ಗೆ ಒಂದು ಪತ್ರವನ್ನು ಮುಂಚೆಯೇ ಒಬ್ಬ ಹಮಾಲಿನ ಕೈಯಲ್ಲಿಟ್ಟು ಕಳಿಸಿದ್ದರು. ರೈಲಿಗೆ ಹೋಗುವುದೆಂದರೆ ನಮಗೆಲ್ಲ ತುಂಬಾ ಸಂತೋಷವಾಗಿತ್ತು. ಕಾರಣ ನಾವು ಇಂಜಿನಿನ ಮೂಲಕ ಗಾಡಿ ಹೇಗೆ ಓಡುತ್ತದೆಯೆಂದು ಎಂದೂ ನೋಡಿರಲಿಲ್ಲ. ಅದಕ್ಕೆ ನಮಗೆಲ್ಲ ಕಾತುರ. ಪ್ರವಾಸಕ್ಕಾಗಿ ಹೊಸಬಟ್ಟೆ, ಜರಿಯ ಟೊಪ್ಪಿಗೆ ಮುಂತಾದ ವಸ್ತು ಖರೀದಿಸಿ ನಾವು ಸತಾರಾ ಮೂಲಕ ಪಾಡಲಿ ಸ್ಟೇಶನ್‌ಗೆ ಬಂದು ರೈಲು ಹತ್ತಿದೆವು. ಅಲ್ಲಿಂದ ಮಸೂರ ತನಕದ ಪಯಣ ಅತ್ಯಂತ ಆನಂದದಲ್ಲಿ ಕಳೆಯಿತು. ಮಸೂರ ಸ್ಟೇಶನ್ ತಲುಪಿದೊಡನೆ ನಮ್ಮನ್ನು ಇಳಿಸಿಕೊಳ್ಳಲು ಯಾರೂ ಬರದಿರುವುದನ್ನು ಕಂಡು ಅಚ್ಚರಿಯೆನಿಸಿತು. ಮಧ್ಯಾಹ್ನ 4ರಿಂದ ರಾತ್ರಿ 7ರ ತನಕ ಮಸೂರ ನಿಲ್ದಾಣದಲ್ಲಿಯೇ ಕಳೆದೆವು. ನಾವು ದಾರಿ ಕಾಯುತ್ತಾ ಕುಳಿತಿರುವುದನ್ನು ಕಂಡ ಸ್ಟೇಷನ್ ಮಾಸ್ತರರು ಬಂದು ವಿಚಾರಿಸಿದರು. ನಾವು ನಮ್ಮ ಜಾತಿಯನ್ನು ಹೇಳಿದ ತಕ್ಷಣ ಆತ ಬೆರಗಾದ. ಕೊನೆಗೆ ಆತ ಕಷ್ಟಪಟ್ಟು ಗೋರೆಗಾವ್‌ಗೆ ಹೋಗಲು ಒಂದು ಗಾಡಿ ಗೊತ್ತು ಮಾಡಿದ. ಆದರೆ ಗಾಡಿಯವ ಸಹ ನಮ್ಮ ಜಾತಿಯನ್ನು ಹೇಳಿದೊಡನೆ ಬೆದರಿದ. ನಾವು ಹೊಲೆಯರ ಹುಡುಗರೆಂದು ಕೊಂಡೊಯ್ಯಲು ನಿರಾಕರಿಸಿದ. ಕೊನೆಗೆ ನಮ್ಮ ಸಹೋದರ ಒಂದು ಒಪ್ಪಂದ ಒಪ್ಪಿಸಿದ. ಒಂದು ರೂಪಾಯಿ ನಿರ್ಧರಿಸಿದ ಬಾಡಿಗೆಗಿಂತ ಜಾಸ್ತಿಕೊಡುವುದು ಮತ್ತು ಗಾಡಿಯನ್ನು ನಾವೇ ಹೊಡೆಯುವುದು ಮತ್ತು ಗಾಡಿವಾಲಾ ನಮ್ಮ ಹಿಂದೆ ನಡೆಯುತ್ತ ಬರುವುದು. ಹೀಗೆ ಹೊಂದಿಸಿ ಚಕ್ಕಡಿಗಾಡಿಗೆ ಆತ ಎತ್ತುಗಳನ್ನು ಹೂಡಿದ. ನಾವು ಹೊಡೆಯ ಹತ್ತಿದೆವು. ಮುಂದೆ ಮಸೂರನ ಹಳ್ಳದಬಳಿ ಗಾಡಿ ನಿಂತಿತು. ನಮಗೆಲ್ಲ ತುಂಬಾ ಬಾಯಾರಿಕೆ ಆಗಿತ್ತು. ನಾವು ಆತನಿಗೆ ಎಲ್ಲಿ ನೀರು ಕುಡಿಯೋಣ ಎಂದು ಕೇಳಿದಾಗ ಆತ ಅಸ್ಪಶ್ಯರಿಗಾಗಿದ್ದ ಸೆಗಣಿ ಕೆಸರು ತುಂಬಿದ ಹೊಂಡ ತೋರಿಸಿದ. ಆ ದುರ್ಗಂಧದ ನೀರು ಕುಡಿಯಲು ಸಾಧ್ಯವಿರಲಿಲ್ಲ. ನಮಗಂತೂ ವಿಪರೀತ ನೀರಡಿಕೆ. ಆದರೆ ನೀರಿನ ಅನನುಕೂಲತೆಯಿಂದ ತೆಪ್ಪಗೆ ಮುಂದಿನ ದಾರಿ ಹಿಡಿದೆವು. ರಾತ್ರಿಯಾಗುತ್ತಿತ್ತು. ನೀರು ಮತ್ತು ಹಸಿವಿನಿಂದ ಜೀವ ತಳಮಳಿಸುತ್ತಿತ್ತು. ಬೇರೆ ಸ್ಪಶ್ಯರ ಹಳ್ಳದ ನೀರನ್ನು ಕುಡಿಯಲು ಇಲ್ಲವೆ ಬೇಡಿ ಪಡೆಯಲು ನಿಷೇಧವಿತ್ತು. ಮಧ್ಯರಾತ್ರಿ ನಾವು ಟೋಲನಾಕೆಗೆ ಬಂದೆವು. ಅಲ್ಲಿಯೂ ಮಹಾರರೆಂದು ನೀರು ಸಿಗಲಿಲ್ಲ. ಕೊನೆಗೆ ಇಂಥ ನೊಂದ ಅವಸ್ಥೆಯಲ್ಲಿ ಗೋರೆಗಾವ್ ತಲುಪಿದೆವು. ತಂದೆಯವರು ಹೀಗೆ ಮುಂಚೆಯೇ ಕೇಳದೆ ಬಂದುದ್ಯಾಕೆಂದು ಕೇಳಿದರು. ಹೇಳಿ ಕಳಿಸದೆ ಬರ ಕೂಡದು ಎಂಬುದು ಅವರ ವಿಚಾರವಾಗಿತ್ತು. ನಮ್ಮಾಬ್ಬ ವ್ಯಕ್ತಿ ಕಡೆಯಿಂದ ಕಳಿಸಿದ ಪತ್ರ ತಂದೆಯವರ ಕೈ ಸೇರಿರಲಿಲ್ಲ. ದಾರಿಯಲ್ಲಿ ನಮಗಾದ ಶೋಚನೀಯ ಅವಸ್ಥೆ ಕೇಳಿ ಗಂಟಲುಬ್ಬಿಬಂತು. ಈ ಪ್ರವಾಸವು ನಾವು ‘ಅಸ್ಪಶ್ಯರು’ ಎಂಬುದನ್ನು ಹೇಳಿದಂತಿತ್ತು. ನಮ್ಮನ್ನು ಕೀಳರಿಮೆಯಿಂದ ಕಾಣುತ್ತಾರೆ. ನಮ್ಮ ನೀರು ಹೊಲಸು ಸ್ಥಳದಲ್ಲಿರುತ್ತದೆ. ಸ್ಪಶ್ಯರು ನಮ್ಮನ್ನು ಮೈಲಿಗೆಯಾಗಿ ನೋಡುತ್ತಾರೆ ಮುಂತಾದವು ಮೊದಲಿಗೆ ನಮ್ಮ ಬದುಕಿನಲ್ಲಿ ಅನುಭವ ಬಂದವು. ನನ್ನ ಬಾಲ್ಯದ ಕೋಮಲ ಮನಸ್ಸಿಗೆ ಈ ಸಂಗತಿ ತೀವ್ರವಾಗಿ ನಟ್ಟಿತು. ಇಂದು ಇಲ್ಲಿ ನೆರೆದ ಸಾವಿರಾರು ಸಂಖ್ಯೆಯ ಜನರೆದುರು ಹೇಳುವಂತಹ ಪ್ರಸಂಗ ಬಂದೀತೆಂದು ನನ್ನ ಕನಸು ಮನಸ್ಸಿನಲ್ಲೂ ನೆನೆಸಿರಲಿಲ್ಲ, ಇರಲಿ.

ಇಂದಿಲ್ಲಿ ನಾವು ಸ್ವತಂತ್ರ ಮಜೂರ ಪಕ್ಷದ ಸ್ಥಾಪನೆಗಾಗಿ ಎಲ್ಲರೂ ಸೇರಿದ್ದೇವೆ. ತಮ್ಮ ಪಕ್ಷದ ಕಾರ್ಯಕ್ರಮ ಸ್ವರೂಪಗಳ ಅರಿವು ಇದ್ದೇ ಇದೆ. ಹಿಂದೂಸ್ಥಾನದ ಮೇಲೆ ಹೇರಿದ ಹೊಸ ಸುಧಾರಣೆಗಳಲ್ಲಿ ಸಾಕಷ್ಟು ದೋಷಗಳು ಮತ್ತು ಕೊರತೆಗಳಿರುವುದರಿಂದ ಅವು ಪೂರ್ಣ ಹೊಣೆಯಿಂದ ಸ್ವರಾಜ್ಯ ತಂದುಕೊಡುವಲ್ಲಿ ಅಸಮರ್ಥ ಆಗಿವೆ. ಪ್ರಾಂತಿಕ ರಾಜ್ಯಾಡಳಿತದ ಅನೇಕ ಘಟನೆಗಳು, ವಿಶೆೇಷವಾಗಿ ಸೆಕೆಂಡ್ ಚೇಂಬರ್‌ನ ಘಟನೆಗಳನ್ನು ನಮ್ಮ ಪಕ್ಷವು ಆಕ್ಷೇಪಿಸುತ್ತದೆ. ಆದರೂ, ಈ ಹೊಸ ಸುಧಾರಣಾ ಕ್ರಮವನ್ನು ದುಡಿಸಿಕೊಳ್ಳಲು ಅಭ್ಯಂತರವಿಲ್ಲ. ಹೊಣೆಗಾರಿಕೆಯ ಸ್ವರಾಜ್ಯದ ಸ್ವರೂಪ ನಿಸ್ತೇಜಗೊಳಿಸಿ ಒಗೆಯುವಂತಿರುವ ಮುಖ್ಯ ಮತ್ತು ಅನಿಯಂತ್ರಿತ ಸ್ವರೂಪದ ಅಧಿಕಾರವು ಗವರ್ನರ್‌ಗೆ ಸಿಕ್ಕಿದೆ. ಅದರ ಪ್ರಯೋಜನವು ಈ ಅವಧಿಯಲ್ಲಿ ಆಗಕೂಡದೆಂಬ ಬಾಬತ್ತಿಗೆ ಸ್ವತಂತ್ರ ಮಜೂರವು ಎಚ್ಚರವಾಗಿರುತ್ತದೆ. ಹಾಗೆಯೇ ಅಸ್ಪಶ್ಯ ಬಂಧುಗಳು, ಕೂಲಿಕಾರ್ಮಿಕರು ಮತ್ತು ರೈತರ ಸಂಬಂಧಗಳು ಒಳ್ಳೆಯದಾಗಿ ಹೇಗೆ ಹೊರ ಹೊಮ್ಮುವವು ಎಂಬುದನ್ನು ಯೋಚಿಸಿ, ಸಾಮಾನ್ಯ ಶ್ರಮಜೀವಿ ಸಮೂಹಕ್ಕಾಗಿ ರಚನಾತ್ಮಕ ಕಾರ್ಯ ಮಾಡುವ ಸಂಕಲ್ಪ ನಮ್ಮ ಪಕ್ಷಕ್ಕಿದೆ. ನಿಮಗೆ ಗೊತ್ತಿರಬಹುದು. ಗಿರಣಿ ಕಾರ್ಮಿಕರಲ್ಲಿ ಅಸ್ಪಶ್ಯ ಮತ್ತು ಸ್ಪಶ್ಯ ಕಾರ್ಮಿಕರ ಮಧ್ಯೆ ಭೇದಭಾವವು ರಹಸ್ಯವಾಗಿಲ್ಲ. ಸ್ಪಶ್ಯ ಕಾರ್ಮಿಕನಿಗೆ ಬಟ್ಟೆ ವಿಭಾಗದೊಳಗೆ ಕೆಲಸ ದೊರಕುತ್ತದೆ. ಆತ ಜಾಬರ್ ತನಕ ಮೇಲೆ ಹೋಗುತ್ತಾನೆ. ಆದರೆ ಅಸ್ಪಶ್ಯ ಕಾರ್ಮಿಕನಿಗೆ ಆತ ಎಷ್ಟೇ ಯೋಗ್ಯನಾಗಿದ್ದರೂ ಬಟ್ಟೆ ವಿಭಾಗದಲ್ಲಿ ಕೆಲಸ ಸಿಗುವುದಿಲ್ಲ. ಆತ ತೇಲವಾಲಾ ಆಗಿಯೇ ಉಳಿಯುತ್ತಾನೆ. ಸಾಧಾರಣವಾಗಿ ಕಾರ್ಮಿಕನ ಪರಿಸ್ಥಿತಿ ದಾರಿದ್ರ ಹಾಗೂ ಕಷ್ಟದ್ದಾಗಿರುತ್ತದೆ. ಸ್ಪಶ್ಯ ಕಾರ್ಮಿಕನ ದಾರಿದ್ರ ಮಾಲಕಶಾಹಿಯಿಂದಾದರೆ ಅಸ್ಪಶ್ಯ ಕಾರ್ಮಿಕನ ದಾರಿದ್ರವು ಮಾಲಕಶಾಹಿ ಮತ್ತು ಅಸ್ಪಶ್ಯತನ ಇವೆರಡರಿಂದ ಕೂಡಿದೆ. ಆದರೆ ದುಃಖ ಪಡುವ ಸಂಗತಿಯೆಂದರೆ ಕಾಂಗ್ರೆಸ್‌ನೊಳಗಿನ ಮತ್ತು ಹೊರಗಿನ ಕಾರ್ಮಿಕರ ನಾಯಕರು ಈ ವಿಚಾರದತ್ತ ತಿಳಿದು ತಿಳಿದೂ ನಿರ್ಲಕ್ಷ ಮಾಡುತ್ತಿದ್ದಾರೆ. ಸ್ವತಂತ್ರ ಮಜೂರ ಪಕ್ಷದ ವಿಂಗಡಿಸುವಿಕೆಗೆ ಯಾವ ಕಾರಣಗಳಿವೆಯೋ ಅದರಲ್ಲಿ ಇದೂ ಕೂಡ ಒಂದು. ಕಾರ್ಮಿಕರಿಗೆ ಜಾತಿಭೇದದಿಂದ ಇಲ್ಲವೆ ವರ್ಗಭೇದದಿಂದಲೋ ಅವರ ಯೋಗ್ಯತೆಗೆ ಧಕ್ಕೆಬರುವುದಿಲ್ಲ ಮತ್ತು ಅವರ ಪ್ರಗತಿಯ ದಾರಿ ಸುಖಮಯವಾಗುವ ಪ್ರಯತ್ನವನ್ನು ಕಾಂಗ್ರೆಸ್ ಅಥವಾ ಬೇರೆ ಪಕ್ಷ ಬಂಡವಾಳದಾರರ ಕೈಗೊಂಬೆಗಳಾಗಿರುವುದರಿಂದ ಬಡಕೂಲಿಕಾರರ ಮತ್ತು ರೈತರ ಏಳ್ಗೆಯನ್ನು ಮಾಡುವುದು ಅವರಿಂದ ಸಾಧ್ಯವಿಲ್ಲ. ಕಾಂಗ್ರೆಸ್ ‘‘ಬಂಡವಾಳದಾರರರ ಹಿತವನ್ನು ಮತ್ತು ಬಡವರ ಕಲ್ಯಾಣವನ್ನು ಮಾಡುವೆವು’’ ಎಂದು ಘೋಷಣೆ ಮಾಡುತ್ತದೆ. ಇಂಥ ಇಬ್ಬಗೆ ಪರಿಸ್ಥಿತಿಯಲ್ಲಿ ಒಂದು ಕತ್ತಿಯ ಒರೆಯಲ್ಲಿ ಎರಡು ಖಡ್ಗಗಳು ಇರಲು ಸಾಧ್ಯವಿಲ್ಲ. ನಮ್ಮ ಶ್ರಮಜೀವಿ ವರ್ಗ ಈ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನೊಂದಿಗಿರುವುದು ವ್ಯರ್ಥ.

ಕಾಂಗ್ರೆಸ್‌ನ ಪಂಚಪ್ರಾಣವೆನಿಸುವ ಮಹಾತ್ಮಾಗಾಂಧಿಯವರ ಮನದ ಇಂಗಿತ ನನಗೆ ಚೆನ್ನಾಗಿ ಗೊತ್ತು. ಅವರ ಅಂತರಾಳ ನನಗೆಷ್ಟು ಗೊತ್ತಿದೆಯೋ ಅಷ್ಟು ನಿಮಗಿಲ್ಲ. ನನಗೆ ಅವರ ಪರಿಚಯವಿರುವುದರಿಂದ ಹೇಳ್ತೀನಿ. ನಮ್ಮಿಬ್ಬರ ದಾರಿಗಳು ತೀರಾ ಭಿನ್ನವಾಗಿವೆ. ಯಾರಿಗೆ ರೊಟ್ಟಿಬೇಕೋ ಅವನು ದೇವಾಲಯ ಇಟ್ಟುಕೊಂಡು ಏನು ಮಾಡುವನು? ಕಳೆದ ದುಂಡುಮೇಜಿನ ಪರಿಷತ್ತಿನಲ್ಲಿ ಅಸ್ಪಶ್ಯ ಸಮಾಜದ ಸಂದರ್ಭದಲ್ಲಿ ಒಂದು ಕ್ಲಿಷ್ಟಕರ ಸಮಸ್ಯೆಯಿತ್ತು. ನೌಕರಶಾಹಿಯ ಅಧಿಕಾರ ಕಿತ್ತುಕೊಂಡು ಅದನ್ನು ಬಹುಜನ ಸಮಾಜದ ಕೈಗೆ ನೀಡುವಾಗ ಅದರಲ್ಲಿಯ ಕೆಲವು ಅಂಶಗಳನ್ನು ಅಸ್ಪಶ್ಯರ ಕೈಗೆ ನೀಡಿ ಎಂಬ ಅಭಿಪ್ರಾಯ ಎಲ್ಲರದಾಗಿತ್ತು. ಆದರೆ ಇದೇ ಮಹಾತ್ಮಾಜೀ ಅವರೇ ಈಗ ಅಸ್ಪಶ್ಯರ ಹಕ್ಕಿನ ವಿರುದ್ಧ ಹೋದರು. ಇಂಥ ಬಿಕ್ಕಟ್ಟಿನ ಪ್ರಸಂಗದಲ್ಲಿ ಈ ಹಿಂದೂ ಮಹಾನ್ ನಾಯಕರುಗಳ ಜೊತೆಗೆ ಸ್ವತಂತ್ರ ಹಕ್ಕಿಗಾಗಿ ಹೋರಾಟ ಮಾಡಬೇಕಾಯಿತು. ಅಸ್ಪಶ್ಯರ ಕಲ್ಯಾಣಕರ್ತನೆಂದು ಹೇಳಿಕೊಳ್ಳುವ ಈ ಹಿಂದೂಸ್ಥಾನದ ಮಹಾತ್ಮಾ ಈ ಸಮಯದಲ್ಲಿ ನಮ್ಮ ವಿರುದ್ಧ ಹೋಗಬಾರದಿತ್ತು. ಅವರು ನಿಜವಾದ ಕಲ್ಯಾಣ ಬಯಸುವವರಾಗಿದ್ದರೆ ಅವರ ಸಂಗಡ ವಾದವಿವಾದ ಮಾಡುವುದರ ಮೂಲಕ ನನ್ನ ಶಕ್ತಿಯನ್ನು ವ್ಯಯ ಮಾಡುತ್ತಿರಲಿಲ್ಲ.

ಸ್ವರಾಜ್ಯಕ್ಕಾಗಿ ತಕ್ಷಣ ಮಹಾತ್ಮಾಜಿ ಅವರಿಗೆ ಒಂದು ಕೋಟಿ ರೂ. ನೀಡುವ ಸ್ಪಶ್ಯರು ಅಸ್ಪಶ್ಯತೆಯ ನಿವಾರಣೆಗಾಗಿ ಐದಾರು ಲಕ್ಷ ರೂ. ನೀಡಲು ಸಮರ್ಥರಿಲ್ಲವೇ? ಇದರಿಂದ ಗೊತ್ತಾಗುತ್ತದೆ ಸ್ಪಶ್ಯರಿಗೆ ಅಸ್ಪತ್ಯೆಯ ಹೋಗಲಾಡಿಸುವ ಕಾಳಜಿ ಎಷ್ಟಿದೆಯೆಂಬುದು. ಈ ಅತ್ಯಾಚಾರದ ರಾಮನಾಮ ಹೇಳುವ ಗಾಂಧೀಜಿಯವರ ಚಳವಳಿಯು ನಮ್ಮ ಏಳಿಗೆಯನ್ನು ಹೇಗೆ ಮಾಡೀತು? ನಿಮ್ಮ ಮೈಲಿಗೆ, ನಿಮ್ಮ ಮೇಲಾಗುವ ತೀವ್ರ ಅನ್ಯಾಯ, ಸಾಮಾಜಿಕ ನೋವು, ಕಷ್ಟ, ಅವಮಾನ, ದಾರಿದ್ಯವನ್ನು ಈ ಜನ ಹೇಗೆ ನಾಶ ಮಾಡುವರು? ಖರೆ ಮಾತೆಂದರೆ ಸ್ಪಶ್ಯ ಹಿಂದೂಗಳು ತೋರಿಕೆ ಕಾರ್ಯ ಮಾಡುವುದರಲ್ಲಿ ನಿಷ್ಣಾತರು. ಒಳದಾರಿಯಿಂದ ನಿಮ್ಮ ಸಾಮಾಜಿಕ ಜೀವನದೊಳಗೆ ಮುಳ್ಳುಗಳನ್ನು ಹರಡಲು ನಿತ್ಯ ಗಟ್ಟಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಶ್ರೀಮಂತ, ಸಾಹುಕಾರ, ಗೌಡ, ಬಂಡವಾಳದಾರ ಇವರೆಲ್ಲ ನಿಮ್ಮ ಆರ್ಥಿಕ ಜೀವನವನ್ನು ಅಧಿಕ ಕಷ್ಟದಾಯಕವಾಗಿಸುತ್ತಾರೆ. ಇನ್ನೊಂದು ಕಡೆ ಬಹುಜನ ಸಮಾಜದ ಪ್ರಾತಿನಿಧಿಕ ಪಕ್ಷ ಕಾಂಗ್ರೆಸ್ ಅತ್ಯಂತ ದಿಮಾಕಿನಿಂದ ನಮ್ಮ ಪಕ್ಷವೇ ಅಸ್ಪಶ್ಯರ, ಬಡವರೆಂದೆನಿಸಿಕೊಳ್ಳುವ ಜನರ, ದೀನದಲಿತರ ಪಕ್ಷವೆಂದೂ ತಲೆಯೆತ್ತಿ ಹೇಳುತ್ತದೆ. ಇವೆಲ್ಲವನ್ನು ಗಮನಿಸಿದಾಗ ಕಾಂಗ್ರೆಸ್ ನಮ್ಮ ಏಳಿಗೆಯನ್ನು ನಿಜವಾಗಿ ಬಯಸಿದ್ದರೆ. ನಾನು ಅತ್ಯಂತ ಸಂತೋಷದಿಂದ ಅದರಲ್ಲಿ ಶಾಮೀಲಾಗುತ್ತಿದ್ದೆ. ಆದರೆ ಕಾಂಗ್ರೆಸ್‌ನಿಂದ ನಮ್ಮ ಸಮಾಜದ, ಕಾರ್ಮಿಕರ, ರೈತರ ಮತ್ತು ಕಡುಬಡವರ ಹಿತವು ಸಾಧ್ಯವಿಲ್ಲ ಎಂದನಿಸಿದಾಗಲೇ ಸ್ವತಂತ್ರ ಮಜೂರ ಪಕ್ಷವನ್ನು ಸ್ಥಾಪಿಸಿದೆ.

  ಈ ದೇಶದಿಂದ ಒಂದು ವೇಳೆ ಬ್ರಿಟಿಷರು ಹೋಗಬಹುದು. ಆದರೆ ಎಲ್ಲ ಬಡವರನ್ನು ಶೋಷಿಸಿ ಅವರ ರಕ್ತ ಹೀರುವ ಜಿಗಣೆ ತರದ ಯಾವ ಶ್ರೀಮಂತ ಬಂಡವಾಳ ವರ್ಗವಿದೆಯೋ ಅದು ಈ ದೇಶದಿಂದ ತೊಲಗುವುದಿಲ್ಲ. ಅದು ಕಾಂಗ್ರೆಸ್‌ನಲ್ಲಿ ಲೀನಗೊಂಡಿದೆ. ನಮ್ಮ ಮುಂಬೈ ಇಲಾಖೆಯ ಬ್ರಾಹ್ಮಣೇತರ ಪಕ್ಷ ಬಡವರಿಗಾಗಿ ಏನಾದರು ಕೆಲಸ ಮಾಡಿಯಾರು ಅಂದು ಕೊಂಡಿದ್ದೆ. ಇದಷ್ಟೆ ಅಲ್ಲ ಅವರ ಬಗ್ಗೆ ಕೆಲವು ಸಮಯ ಅಭಿಮಾನವೆನಿಸುತ್ತಿತ್ತು. ಆದರೆ ಕೊನೆಗೆ ಶಿಸ್ತು ಮತ್ತು ಸಂಘಟನೆ ಅಭಾವದಿಂದ ಹಾಗೂ ಹರಿಯುವ ನದಿಯಲ್ಲಿ ಕೈತೊಳೆದುಕೊಳ್ಳುವ ಸ್ವಭಾವದಿಂದ ಪಕ್ಷದ ಬಲ ಕುಸಿಯಿತು. ತಾವು ಉಚ್ಚವೆಂದೆನಿಸಿಕೊಳ್ಳುವ ಬ್ರಾಹ್ಮಣ ಸಮಾಜದ ಆಕ್ರಮಣಶೀಲ ಧೋರಣೆ ಹಾಳು ಮಾಡುವ ಉದ್ದೇಶವು ಎಲ್ಲಿಂದೆಲ್ಲಿಗೆ ನಾಶಕ್ಕೆ ಕರೆದೊಯ್ದಿತು. ಒಂದು ಪ್ರಬಲ ಪಕ್ಷದ ಇಂದಿನ ಶೋಚನೀಯ ಅವಸ್ಥೆಯನ್ನು ನಾವು ಗಮನದಲ್ಲಿಡಬೇಕು. ನಮ್ಮ ಪ್ರತಿಯೊಬ್ಬ ವ್ಯಕ್ತಿ ಪಕ್ಷದ ಜೊತೆಗೆ ಪೂರ್ಣ ಪಾಮಾಣಿಕನಾಗಿರಬೇಕು. ಆತ ನಾಯಕರ ಆಜ್ಞೆಯನ್ನು ಗೌರವಿಸಬೇಕು. ಪಕ್ಷದ ಕಾರ್ಯಕ್ರಮಗಳ ಮೇಲೆ ನಂಬಿಕೆಯಿಟ್ಟು ಮೋಸವೆಸಗದೆ ಜಾರಿಗೊಳಿಸಲು ತೀವ್ರ ಯತ್ನ ಮಾಡಬೇಕು. ವೈಯಕ್ತಿಕ ಸ್ವಾರ್ಥವನ್ನು ಬಿಡಬೇಕು. ಪಕ್ಷಕ್ಕಾಗಿ ಕಷ್ಟನಷ್ಟ, ನೋವು ಅನುಭವಿಸಬೇಕು. ಶಿಸ್ತಿನಿಂದ ಎಲ್ಲ ಕೆಲಸಕಾರ್ಯ ಮಾಡುವ ಧ್ಯೇಯವಿಟ್ಟುಕೊಳ್ಳಬೇಕು. ಆದ್ದರಿಂದ ಸ್ವತಂತ್ರ ಮಜೂರು ಪಕ್ಷ ಸೇರುವವರು ಇವೆಲ್ಲ ವಿಚಾರಗಳನ್ನು ಅರಿಯಬೇಕು.

ಇವತ್ತು ಅಸೆಂಬ್ಲಿಯಲ್ಲಿ ನಮ್ಮ ಪಕ್ಷದ ಪ್ರತಿನಿಧಿಗಳು ಕಡಿಮೆ ಸಂಖ್ಯೆಯಲ್ಲಿದ್ದರೂ ಬೇರೆ ಪಕ್ಷಗಳಿಗೆ ಅದರ ಭೀತಿಯಿದೆ. ಇದಕ್ಕೆ ಕಾರಣ ಜನಕಲ್ಯಾಣಕ್ಕಾಗಿ ನಾವು ಹಾಕಿಕೊಂಡ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಲು ನಾವು ತೀವ್ರವಾಗಿ ಯತ್ನಿಸುತ್ತೇವೆಂಬ ವಿಶ್ವಾಸದ ಕ್ರಿಯೆ. ಬಹುಜನ ಸಮಾಜಕ್ಕೆ ಸುಖದೊರಕಬಹುದು. ಅವರ ಮೇಲೆ ಅನ್ಯಾಯ ಆಗುವುದಿಲ್ಲ ಎಂಬ ಕಾನೂನು ಅಧಿಕಾರ ಹೊಂದಿದ ಪಕ್ಷದಿಂದ ಮಾಡಿಕೊಳ್ಳಬೇಕಿದೆ. ಫೌಜದಾರ, ಮಾಮಲೆದಾರ, ಸರ್ಕಲ್ ಇನ್‌ಸ್ಪೆಕ್ಟರ್, ತಲಾಠಿ ಮತ್ತು ಪಾಟೀಲರ ಬಳಿ ಅಧಿಕಾರವಿಲ್ಲ. ಮಹಾರ ಯಾವ ರೀತಿಯಲ್ಲಿ ಸರಕಾರಿ ನೌಕರರಾಗಿದ್ದಾರೆ ಹಾಗೆಯೇ ಅವರೂ ನೌಕರರು, ನಿಜವಾದ ರಾಜ್ಯಾಧಿಕಾರ ಜನರ ಕೈಯಲ್ಲಿದೆ, ಅಂದರೆ ಕೌನ್ಸಿಲ್ ಹತ್ತಿರವಿದೆ. ಆದ್ದರಿಂದ ಸರಕಾರಿ ನೌಕರರು ಹೆದರುವ ಕಾರಣವಿಲ್ಲ. ಅವರಾಗಲಿ, ಬೇರೆಯವರಾಗಲಿ ನಿಮಗೆ ತೊಂದರೆ ಕೊಟ್ಟರೆ ಅದನ್ನು ಗಮನಿಸಿ ನಿಮ್ಮ ನಿವೇದನೆ, ದುಃಖ ಮತ್ತು ಅನ್ಯಾಯವನ್ನು ಬೀದಿಗೆ ತಂದು, ಅದನ್ನು ಇಲ್ಲವಾಗಿಸುವ ಪ್ರಯತ್ನವನ್ನು ಸ್ವತಂತ್ರ ಮಜೂರ ಪಕ್ಷವು ಮಾಡುತ್ತದೆ. ಈ ಆಶ್ವಾಸನೆಯನ್ನು ನಾನು ನೀಡುತ್ತೇನೆ. ಸ್ವತಂತ್ರ ಮಜೂರ ಜಿಲ್ಲಾ ಶಾಖೆ ಸ್ಥಾಪನೆಯಾಗುವುದಿದೆ. ನನ್ನ ಬಾಲ್ಯ ಮತ್ತು ಪ್ರಾಥಮಿಕ ಶಿಕ್ಷಣ ಈ ಜಿಲ್ಲೆಯಲ್ಲಿ ಆಗಿರುವುದರಿಂದ ಈ ಜಿಲ್ಲೆಯ ಶಾಖೆ ಸ್ಥಾಪಿಸಲು ನನಗೆ ಅತೀವ ಸಂತೋಷವಾಗುತ್ತಿದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top