‘ಚಾರುಲತಾ’-ತೆರೆಯ ಮೇಲೆ ಅರಳಿದ ಕಾವ್ಯ | Vartha Bharati- ವಾರ್ತಾ ಭಾರತಿ

--

ಟಾಗೋರ್ ಕೃತಿಗಳು-ರೇ ಚಿತ್ರಗಳು-2

‘ಚಾರುಲತಾ’-ತೆರೆಯ ಮೇಲೆ ಅರಳಿದ ಕಾವ್ಯ

 ಟಾಗೋರ್ 1901ರಲ್ಲಿ ಬರೆದ ನೊಷ್ಟನೀರ್ ಎಂಬ ಕಿರುಕಾದಂಬರಿ ಅಥವಾ ನೀಳ್ಗತೆಯನ್ನು ಆಧರಿಸಿದ ಚಾರುಲತಾ ಚಿತ್ರವು ಬಿಡುಗಡೆಯಾದದ್ದು 1964ರಲ್ಲಿ. ಅದು ಬಿಡುಗಡೆಯಾದ ಕೂಡಲೇ ಅದರ ಕಲಾತ್ಮಕ ಸೊಬಗು ಸರ್ವ ಮನ್ನಣೆ ಗಳಿಸಿತು. ಚಾರುಲತಾ ಅನೇಕ ಒಳನೋಟಗಳ ಚಿತ್ರ. ಅನೇಕ ವೈರುಧ್ಯಗಳನ್ನು ಇಲ್ಲಿ ನಿರ್ದೇಶಕರು ಮುಖಾಮುಖಿಯಾಗಿಸುವ ವಿಧಾನವೇ ಅದ್ಭುತವೆನಿಸುತ್ತದೆ.

‘ಚಾರುಲತಾ’(1964), ಸತ್ಯಜಿತ್ ರೇ ಅವರು ಅಪಾರವಾಗಿ ಮೆಚ್ಚಿಕೊಂಡ ಚಿತ್ರ. ‘ತನ್ನ ಕಾವ್ಯಕ್ಕೆ ಕವಿ ತಾ ಮಣಿವಂತೆ’ ರೇ ಅವರು ಚಾರುಲತಾ ಸಿನೆಮಾ ಬಗ್ಗೆ ಮೋಹಗೊಂಡಿದ್ದರು. ‘‘ನನಗೆ ನನ್ನ ಚಿತ್ರಗಳನ್ನು ಮತ್ತೆ ನಿರ್ದೇಶಿಸುವ ಅವಕಾಶ ಸಿಕ್ಕರೆ, ಒಂದು ಸಂಭಾಷಣೆಯ ತುಣುಕು, ದೃಶ್ಯ-ಸಂಗೀತ ಸಂಯೋಜನೆ, ಇತ್ಯಾದಿ ಯಾವುದನ್ನೂ ಸ್ವಲ್ಪವೂ ಬದಲಿಸದೆ ಮಾಡುವ ಸಿನೆಮಾವೆಂದರೆ ಚಾರುಲತಾ ಮಾತ್ರ’’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹಾಗೆಯೇ ಪ್ರೇಕ್ಷಕ ಮತ್ತು ವಿಮರ್ಶಕ ಜಗತ್ತು ಸಹ ತೆರೆಯ ಮೇಲೆ ಅರಳಿದ ಕಾವ್ಯವಿದು ಎಂದೇ ಅನುಮೋದಿಸಿದೆ.

ಟಾಗೋರ್ ಅವರ ಸಣ್ಣ ಕತೆ ನೊಷ್ಟನೀರ್ (Broken Nest- ಮುರಿದ ಗೂಡು) ಎಂಬ ಕತೆಯನ್ನು ಆಧರಿಸಿದ ಚಾರುಲತಾ ಸಿನೆಮಾ ಅದ್ಭುತವಾಗಿ ಅರಳಿದ್ದು ರೇ ಅವರ ಸೃಜನಶೀಲ ಪ್ರತಿಭೆಯಿಂದಲೇ. 1870ರ ವಸಾಹತುಶಾಹಿ ಬಂಗಾಳ ಪ್ರಾಂತದ ಬುದ್ಧಿಜೀವಿ ಶ್ರೀಮಂತ(ಭದ್ರಲೋಕ್) ಕುಟುಂಬದಲ್ಲಿ ಸಂಭವಿಸುವ ಸಂಬಂಧಗಳ ಬಿರುಕು, ದ್ರೋಹ ಮತ್ತು ಮತ್ತೆ ಬದುಕನ್ನು ಕಟ್ಟುವ ಕತೆಯಿದು. ಇಂಗ್ಲೆಂಡಿಗೆ ಭೇಟಿ ನೀಡುವುದು ವಿಮೋಚನೆಯ ಮಾರ್ಗವೆಂದು ನಂಬಿದ, ದಿನನಿತ್ಯದ ಸಂಭಾಷಣೆಯಲ್ಲಿ ಮೆಕಾಲೆ, ಗ್ಲಾಡ್‌ಸ್ಟೋನ್ ಅವರ ಪದಗಳನ್ನು ಉರುಳಿಸುವುದು, ಬೌದ್ಧಿಕತೆಯ ಚಹರೆಯೆಂದು, ಅಚ್ಚುಕಟ್ಟಾದ ಬೈಂಡ್ ಹಾಕಿದ ಪುಸ್ತಕಗಳ ಕಪಾಟು, ಉತ್ತಮ ಪೀಠೋಪಕರಣದ, ಸುಂದರ ಪರದೆಗಳ, ಅಲಂಕೃತ ಮನೆಯು ನಾಗರಿಕ ಲಕ್ಷಣವೆಂದು ಭಾವಿಸಿದ್ದ ಬಂಗಾಳಿ ಅರಿಸ್ಟೋಕ್ರೆಸಿ (ಧನಿಕವರ್ಗ) ನಂಬಿದಂತಹ ಕಾಲ. ಆ ಕಾಲಘಟ್ಟದಲ್ಲಿ ಸೂಕ್ಷ್ಮ ಮನಸ್ಸಿನ ಹೆಣ್ಣಿನ ಅಂತರಂಗವನ್ನು ಅರಿಯಲಾರದ ಶ್ರೀಮಂತವರ್ಗದ ಕುಟುಂಬದಲ್ಲಿ ಬಂಧಿಯಾದ ಪ್ರತಿಭಾವಂತೆ ಚಾರುಲತಾ ಎಂಬ ಹೆಣ್ಣಿನ ಸಂಬಂಧಗಳಲ್ಲಾಗುವ ಪಲ್ಲಟಗಳನ್ನು ಅನ್ವೇಷಿಸುವ ಚಿತ್ರವಿದು.

ಚಾರುಲತಾ ಅನೇಕ ಒಳನೋಟಗಳ ಚಿತ್ರ. ಅನೇಕ ವೈರುಧ್ಯಗಳನ್ನು ಇಲ್ಲಿ ನಿರ್ದೇಶಕರು ಮುಖಾಮುಖಿಯಾಗಿಸುವ ವಿಧಾನವೇ ಅದ್ಭುತವೆನಿಸುತ್ತದೆ. ಹೆಂಡತಿಯನ್ನು ಪ್ರೀತಿಸುವ ಗಂಡನಿದ್ದಾನೆ. ಆದರೆ ಅದಕ್ಕಿಂತಲೂ ತನ್ನ ನ್ಯೂಸ್ ಪೇಪರ್, ಸಿದ್ಧಾಂತದ ಚರ್ಚೆಯೇ ಅವನಿಗೆ ಹೆಚ್ಚು ಪ್ರಿಯ. ನ್ಯೂಸ್‌ಪ್ರಿಂಟ್‌ನ ವಾಸನೆ ಜಗತ್ತಿನಲ್ಲೇ ಮೌಲ್ಯಯುತವಾದದ್ದೆಂದು ಭಾವಿಸಿದ ಬುದ್ಧಿಜೀವಿ. ವಿಶಾಲವಾದ ಮನೆಯಲ್ಲಿ ಕಣಕಣವೂ ಸಂಪತ್ತನ್ನು ಕಕ್ಕುತ್ತದೆ. ಅಲ್ಲಿ ಹೆಂಡತಿ ಏಕಾಂಗಿ. ಬೀದಿಯಲ್ಲಿನ ಬದುಕು ಕ್ಷಣಕ್ಷಣವೂ ಕ್ರಿಯಾಶೀಲ ವಾಗಿದ್ದರೆ ಶವಪೆಟ್ಟಿಗೆಯಂಥ ಶ್ರೀಮಂತ ಮನೆ. ಅಲ್ಲಿನ ಬೌದ್ಧಿಕ ಚರ್ಚೆಗಳು ಒಂಟಿ ಹೆಣ್ಣಿನ ಮೌನಕ್ಕೆ ಗುಂಡಿಕ್ಕಲಾರವು. ಬಿಡುಗಡೆಯೇ ಕಾಣದ ಹೆಣ್ಣಿನ ಬದುಕು, ಅಂತರಂಗದ ಬಯಕೆಗಳು ಸಂಬಂಧಗಳ ಜಾಲದಲ್ಲಿ ಮೊಳೆಯಲು ಬಿಡದ ಪಾಪಪ್ರಜ್ಞೆ, ಸಂಬಂಧಗಳು ದ್ರೋಹದಲ್ಲಿ ಕೊನೆಯಾಗುವ ಸಿರಿವಂತಿಕೆಯ ಪೊಳ್ಳನ್ನು ಈ ಚಿತ್ರ ಬಿಚ್ಚಿಡುತ್ತದೆ.

 ಕತೆಯ ಕಾಲ ಹತ್ತೊಂಬತ್ತನೆಯ ಶತಮಾನದ ಎಂಬತ್ತರ ದಶಕ. ಭೂಪತಿ ದತ್ತ ರಾಷ್ಟ್ರೀಯವಾದಿ. ಶ್ರೀಮಂತರಿ ಗಿರುವ ರಾಜಕೀಯ ಸಿದ್ಧಾಂತಗಳ ಖಯಾಲಿಯ ಮನುಷ್ಯ. ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಿಸುವ ಮ್ಯಾಗಝಿನ್ ಜೊತೆ ಅವನದು ಬಹುಕಾಲ ಒಡನಾಟ. ಮುದ್ರಣವಾಗಿ ಬಂದ ಪತ್ರಿಕೆಯ ಸುಗಂಧ ಅವನಿಗೆ ಸುಂದರಿ ಹೆಂಡತಿಗಿಂತ ಹೆಚ್ಚು ಅಮಲು ತರುವ ಸಂಗತಿ. ಅವನ ಎಳೆಯ ಹೆಂಡತಿ ಚಾರುಲತಾ-ಬಂಗಾಳದ ಶ್ರೀಮಂತ ಕುಟುಂಬದ ಸಂಪ್ರದಾಯದಂತೆ ಭವ್ಯ ಬಂಗಲೆಯ ಕೋಣೆಗಳಿಗೆ ಸೀಮಿತಗೊಂಡವಳು. ಕಸೂತಿ ಹಾಕುವುದು, ಕಾದಂಬರಿ ಓದುವುದರ ಮೂಲಕ ದಿನದ ಬಹುಪಾಲು ಕಳೆಯುತ್ತಾಳೆ.. ಕಿಟಕಿ ತೆರೆದು ಓಪ್ರಾ ಗ್ಲಾಸ್‌ನಲ್ಲಿ ಬೀದಿಯನ್ನು ದಿಟ್ಟಿಸುವ ಚಾರುವಿನ ಬದುಕು ಮತ್ತೆ ಜೀವ ತುಂಬುವುದು ಮೈದುನನ ಆಗಮನದಿಂದ.

ಭೂಪತಿಯ ಸೋದರ ಸಂಬಂಧಿ ಅಮಲದತ್ತ ರಜಾಗೆಂದು ಮನೆಗೆ ಅಕ್ಷರಶಃ ಬಿರುಗಾಳಿಯಂತೆ ಬರುತ್ತಾನೆ. ಚಾರುವಿನ ಪಾಲಿಗೆ ಭಾವನೆಗಳನ್ನು ಬಡಿದೆಬ್ಬಿಸುವ ಬಿರುಗಾಳಿಯೂ ಆಗುತ್ತಾನೆ. ಏಕಾಂಗಿ ಹೆಂಡತಿಯ ಬೇಸರವನ್ನು ನೀಗಿಸಲೆಂದೇ ಭೂಪತಿ ಅಮಲನನ್ನು ಕರೆಸಿರುತ್ತಾನೆ. ಅವರಿಬ್ಬರಿಗೂ ಸಮಾನ ಆಸಕ್ತಿಗಳಿವೆ. ಇಬ್ಬರೂ ಕಾದಂಬರಿ ಬಗ್ಗೆ, ಸಾಹಿತ್ಯದ ಬಗ್ಗೆ, ಸಾಹಿತ್ಯದ ನಿಯತಕಾಲಿಕೆಗಳ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಚಾರುಳ ಅಣ್ಣ ಉಮಾಪಾದ ಮತ್ತು ಅತ್ತಿಗೆ ಮಂದಾ ಕೂಡ ಬೀಡುಬಿಡುತ್ತಾರೆ. ಉಮಾಪಾದನು ಭೂಪತಿಯ ವ್ಯವಹಾರದಲ್ಲಿ ಸಹಾಯಕನಾಗಿ ನಿಂತರೆ ಶ್ರೀಮಂತರ ಮನೆಯ ಹೆಣ್ಣಿನಂತೆ ಮಂದಾ ಹರಟೆ ಆಟಗಳ ಬದುಕಿನಲ್ಲಿ ನೆಮ್ಮದಿ ಕಾಣುತ್ತಾಳೆ.

 ದಿನ ನಿತ್ಯದ ಒಡನಾಟದಿಂದ, ಸಮಾನ ಆಸಕ್ತಿಯ ಕಾರಣದಿಂದ ಅಮಲ-ಚಾರು ತಮಗರಿವಿಲ್ಲದಂತೆ ಹತ್ತಿರ ಬರುತ್ತಾರೆ. ಚಾರುವಿನಲ್ಲಿ ಸಾಹಿತ್ಯ ರಚನೆಯ ಪ್ರತಿಭೆ ಅಮಲನ ಒಡನಾಟದಿಂದ ಅಭಿವ್ಯಕ್ತಿ ಪಡೆಯುತ್ತದೆ. ತಮ್ಮ ಸಂಬಂಧ ಪ್ರಣಯವಾಗಿ ಮಾರ್ಪಟ್ಟಿರುವುದು ಅಮಲನಿಗೆ ತಡವಾಗಿ ಅರಿವಾಗುತ್ತದೆ. ಪಾಪಪ್ರಜ್ಞೆಯಿಂದ ತನ್ನ ಸಂಬಂಧವನ್ನು ಕಡಿತಗೊಳ್ಳುತ್ತಾ ಮನೆಯಿಂದ ಹೊರಟುಹೋಗುತ್ತಾನೆ. ಆ ವೇಳೆಗೆ ಉಮಾಪಾದ ಮತ್ತು ಮಂದಾ ಸಹ ಭೂಪತಿಯ ಸಂಪತ್ತನ್ನು ದೋಚಿ ಓಡಿಹೋಗುತ್ತಾರೆ. ಆದರೆ ಈ ಜೈವಿಕ ಸಂಬಂಧ, ಈ ಮೂಲಕ ಜಗತ್ತನ್ನು ಅರ್ಥಮಾಡಿಕೊಳ್ಳುವ, ವಿಮೋಚನೆಯ ಹಾದಿಯನ್ನು ಹುಡುಕಿಕೊಳ್ಳಬೇಕೆಂದಿದ್ದ ಚಾರುಗೆ ಸಂಬಂಧಗಳನ್ನು ತೊರೆಯುವುದು ಸುಲಭವಲ್ಲ. ಚಾರು ತನ್ನ ಅಂತರಂಗದಲ್ಲಿ ಬಚ್ಚಿಟ್ಟ ಅಮಲನ ಬಗೆಗಿನ ‘ಹಂಬಲ’ವನ್ನು ತಿಳಿದ ಭೂಪತಿಯು ಎರಡು ಬಗೆಯ ದ್ರೋಹದಿಂದ ತಲ್ಲಣಿಸುತ್ತಾನೆ. ಹೆಂಡತಿಯನ್ನು ಉಪೇಕ್ಷಿಸಿದ ಪಾಪ ಅರಿವಾಗಿ ಚಾರುವನ್ನು ಸಂಧಿಸಲು ಮನೆಗೆ ಬರುವ ಭೂಪತಿ ಮತ್ತು ಗಂಡನಿಗಾಗಿ ಬರುವ ಚಾರು- ಇಬ್ಬರ ಕೈಗಳು ಪರಸ್ಪರ ಕೂಡುವ ಮುನ್ನವೇ ಸ್ಥಿರ ಬಿಂಬವಾಗುವ ದೃಶ್ಯದಿಂದ ಕೊನೆಗೊಳ್ಳುತ್ತದೆ. ಅವರಿಬ್ಬರು ಒಂದಾದರೆ? ಸಂಬಂಧಗಳ ಬಿರುಕು ಬೆಸೆಯಿತೇ? ಅವರಿಬ್ಬರ ಬದುಕು ಹಿಂದಿನಂತೆ ಮುಂದುವರಿಯುವುದೇ? ಈ ಪ್ರಶ್ನೆಗಳನ್ನೆಲ್ಲ ನಿರ್ಧರಿಸಲು ನಿರ್ದೇಶಕರು ಪ್ರೇಕ್ಷಕನಿಗೇ ಬಿಡುತ್ತಾರೆ.

ಟಾಗೋರ್ 1901ರಲ್ಲಿ ಬರೆದ ‘ನೊಷ್ಟನೀರ್’ ಎಂಬ ಕಿರುಕಾದಂಬರಿ ಅಥವಾ ನೀಳ್ಗತೆಯನ್ನು ಆಧರಿಸಿದ ಚಾರುಲತಾ ಚಿತ್ರವು ಬಿಡುಗಡೆಯಾದದ್ದು 1964ರಲ್ಲಿ. ಅದು ಬಿಡುಗಡೆಯಾದ ಕೂಡಲೇ ಅದರ ಕಲಾತ್ಮಕ ಸೊಬಗು ಸರ್ವ ಮನ್ನಣೆ ಗಳಿಸಿತು. ಜೊತೆಗೆ ಸತ್ಯಜಿತ್ ರೇ ಅವರು ಬಹಳ ತೀವ್ರವಾದ ವಿವಾದದಲ್ಲಿ ಸಿಲುಕಿಕೊಂಡರು. ಪ್ರಶ್ನೆ-ಅವರು ಮೂಲಕತೆಯಲ್ಲಿ ಮಾಡಿಕೊಂಡ ಮಾರ್ಪಾಡುಗಳನ್ನು ಕುರಿತು. ಒಬ್ಬ ಪ್ರಖ್ಯಾತ ವಿಮರ್ಶಕರಂತೂ ‘ಚಾರುಲತಾ’ ಚಲನಚಿತ್ರವಾಗಿ ಶ್ರೇಷ್ಠ ಚಿತ್ರವಾಗಿರಬಹುದು. ಆದರೆ ಅದು ಟ್ಯಾಗೋರ್ ಅವರ ಮೂಲಕತೆಯನ್ನು ತಿರುಚಿದ ನಂತರ ಅವರ ಕೃತಿಯನ್ನು ಆಧರಿಸಿದ ಚಿತ್ರ ಎಂದು ಹೇಳುವುದು ಎಷ್ಟು ಉಚಿತ ಎಂದು ಪ್ರಶ್ನಿಸಿದ್ದರು.

ಇಪ್ಪತ್ತು ಸಣ್ಣ ಅಧ್ಯಾಯಗಳಲ್ಲಿ ಹರಡಿರುವ ದೀರ್ಘವಾದ ‘ನೊಷ್ಟನೀರ್’ ಒಂದು ಬಿಗಿಯಾದ ಚಿತ್ರಕತೆಯನ್ನು ರೂಪಿಸಲು ಸವಾಲೊಡ್ಡುವಂಥ ಕತೆ. ರೇ ಅವರು ನೊಸ್ಟನೀರ್‌ನ ಕೊನೆಯ ಏಳು ಅಧ್ಯಾಯಗಳನ್ನು ತೆಗೆದುಹಾಕಿ, ತಮ್ಮದೇ ಕತೆಯನ್ನು ಮೂಲ ಕತೆಯೊಡನೆ ಹೆಣೆದು ಕುಲಗೆಡಿಸಿದ್ದಾರೆ ಎಂಬುದು ವಿಮರ್ಶಕರ ಆಕ್ಷೇಪಣೆಯಾಗಿತ್ತು. ಹಾಗೆ ಕತ್ತರಿಸಿದ ಜಾಗಕ್ಕೆ ತಮ್ಮ ಭಾಗಗಳನ್ನು ಕಸಿ ಮಾಡಿದ್ದು ಟಾಗೋರ್ ಅವರ ಕತೆಗೆ ಎಸಗಿದ ಅಪಚಾರವೆಂಬುದು ಅವರ ನಿಲುವು. ಒಂದು ಮೂಲಕತೆಯಿಂದ ಹೊರಳು ದಾರಿ ಹಿಡಿಯುವುದೇ ಸಾಹಿತ್ಯ ಕೃತಿಯನ್ನು ಸಿನೆಮಾಗೆ ಅಳವಡಿಸುವ ರೂಢಿಗತ ವಿಧಾನವಾಗಿರಬಹುದೇ? ಎಂದು ಅನೇಕರು ಕೊಂಕು ನುಡಿದಿದ್ದರು.

ಇಂಥ ಹಲವಾರು ಪ್ರಶ್ನೆಗಳಿಗೆ ರೇ ಅವರು ಸುದೀರ್ಘವಾದ ಉತ್ತರ ಕೊಟ್ಟರು. ಅದು ರೇ ಅವರು ತಮ್ಮ ಚಿತ್ರಗಳ ಬಗ್ಗೆ ಎಂದೂ ಮಾಡದೇ ಇದ್ದ ವಿಮರ್ಶೆಯೂ ಆಗಿತ್ತು. ಮೂಲಕತೆಯಿಂದ ಭಿನ್ನವಾಗಬೇಕಾದ ಅನಿವಾರ್ಯತೆಯನ್ನು ಅವರು ಸಮರ್ಥಿಸಿಕೊಂಡಿದ್ದರು. ಮೂಲಕತೆಯ ರಚನೆಯ ಸಂದರ್ಭವು ಸಮಕಾಲೀನ ಸಮಾಜದಲ್ಲಿನ ಸಾಮಾಜಿಕ ಸನ್ನಿವೇಶದಲ್ಲಿ ಬದಲಾಗಬೇಕಾದ ಅಗತ್ಯ, ಸಿನೆಮಾದಲ್ಲಿ ಕತೆಯನ್ನು ಹೇಳುವ ನಿರೂಪಣಾ ವಿಧಾನವು ಮೂಲಕತೆಯ ನಿರೂಪಣೆಯ ವಿಧಾನಕ್ಕಿಂತ ಹೇಗೆ ಬದಲಾಗುತ್ತದೆ ಎಂದು ಬಹಳ ಸುದೀರ್ಘವಾಗಿ ಚರ್ಚಿಸಿದ್ದರು. ಅವರು ನಡೆಸಿದ ಚರ್ಚೆ, ವ್ಯಾಖ್ಯಾನಗಳು ಸಾಹಿತ್ಯ ಕೃತಿಯನ್ನು ಸಿನೆಮಾ ಮಾಧ್ಯಮಕ್ಕೆ ಅಳವಡಿಸುವಾಗ ನಿರ್ದೇಶಕನೊಬ್ಬ ತೆಗೆದುಕೊಳ್ಳಬಹುದಾದ ಸ್ವಾತಂತ್ರ್ಯದ ಜೊತೆಗೆ ಮೂಲಕೃತಿಯ ಆಶಯವನ್ನು ವಿಸ್ತರಿಸಿ ಹೊಸ ಕಥನ ಕಟ್ಟುವ ಸಿನೆಮಾ ಮೀಮಾಂಸೆಯ ಪಠ್ಯಗಳಂತಿದ್ದವು.

ತಮ್ಮ ಪ್ರಬಂಧದಲ್ಲಿ ರೇ ಅವರು ತಾವು ಮಾಡಿಕೊಂಡ ಬದಲಾವಣೆಗಳಿಗೆ ಸಮರ್ಥನೆಯನ್ನು ಕೊಡುತ್ತಾರೆ. ಸ್ಕ್ರೀನ್‌ಪ್ಲೇ ಬರವಣಿಗೆ ಮತ್ತು ನಿರ್ದೇಶನದ ಮೂಲ ನಿಯಮಗಳನ್ನು ವಿವರಿಸುತ್ತಾರೆ. ಹೊಸ ಮಾಧ್ಯಮದ ಬೇಡಿಕೆಗಳನ್ನು ಪಟ್ಟಿ ಮಾಡುತ್ತಾರೆ. ಮೂಕಿ ಯುಗ ಮುಗಿದು ಧ್ವನಿಯ ಸಾಧ್ಯತೆ ಚಿತ್ರರಂಗಕ್ಕೆ ಬಂದ ಕೂಡಲೇ ಚಿತ್ರದ ಭಾಷೆ, ಪರಿಸರದ ವಿವರಗಳು, ಸಮಕಾಲೀನ ಸಮಾಜದ ವಿವರಗಳು ಅವುಗಳ ಪಾತ್ರಗಳ ಮೇಲೆ ಬೀರಿರುವ /ಬೀರುವ ಪ್ರಭಾವಗಳು ಮುಂತಾದ ವಿಷಯಗಳನ್ನು ಚಿತ್ರ ಕಥನಕ್ಕೆ ಒದಗಿಸಬೇಕಾಗುತ್ತದೆ. ಪಾತ್ರಗಳ ಒಳತೋಟಿಗಳನ್ನು ಹಿಡಿದಿಡಲು ಸಿನೆಮಾ ಶಬ್ದಗಳಿಂದ ಪಾರಾಗಿ ದೃಶ್ಯಗಳ ನೆರವಿಗೆ ಮೊರೆಹೋಗಬೇಕಾಗುತ್ತದೆ. ಸಿನೆಮಾ ಮಾಧ್ಯಮದ ಸ್ವಾಯತ್ತತೆಯ ಹಿನ್ನೆಲೆಯಲ್ಲಿ ಚಾರುಲತಾವನ್ನು ವಿಶ್ಲೇಷಿಸಿ ಮಾಡಿಕೊಂಡ ಬದಲಾವಣೆಗಳ ಕುರಿತು ರೇ ಅವರು ನೀಡಿದ ವ್ಯಾಖ್ಯಾನಗಳು ಸಿನೆಮಾ ಅಧ್ಯಯನದ ದೃಷ್ಟಿಯಿಂದ ಮಹತ್ವ ಪಡೆದಿವೆ. ಟಾಗೋರ್ ಅಂಥ ಮಹತ್ವದ ಲೇಖಕನ ಕೃತಿಗಳನ್ನು ರೇ ಅಂಥ ಪ್ರತಿಭಾನ್ವಿತ ನಿರ್ದೇಶಕ ಚಿತ್ರ ರೂಪಕ್ಕೆ ಅಳವಡಿಸಿದ ಸಂದರ್ಭದಲ್ಲಿ ಸಂಭವಿಸಿದ ಮಥನದಲ್ಲಿ ಹುಟ್ಟಿದ ಮೀಮಾಂಸೆಯಿದು.

ನಾವು ಚಾರುಲತಾ ಚಿತ್ರವನ್ನು ನೋಡುತ್ತಿದ್ದಂತೆ ಟಾಗೋರ್ ಅವರ ಆರಂಭದ ಅಧ್ಯಾಯದ ಗಿಡುಕಿರದ ಪದಗಳು, ಶಬ್ದಹೀನವಾಗಿ ಬಿಂಬವಾಗಿ ಪರಿವರ್ತಿತವಾಗುವ ಚಮತ್ಕಾರವನ್ನು ಕಾಣುತ್ತೇವೆ. ಅಲ್ಲಿನ ಶಬ್ದಜಾಲವು ಚಾರುಲತಾಳ ರೂಪವಾಗಿ ಬಂಗಲೆಯ ಕರುಳಿರಿಯುವ ಏಕಾಕಿತನದಲ್ಲಿ ಚಲಿಸುವ ಜೀವಂತಿಕೆಯನ್ನು ಕಾಣುತ್ತೇವೆ. ಇಲ್ಲಿ ಕ್ಯಾಮರಾ ಕತೆ ಹೇಳುವ ವ್ಯಕ್ತಿಯಂತೆ ಮೂಲೆ ಮೂಲೆಯನ್ನು ಹುಡುಕಿ ಪ್ರೇಕ್ಷಕರ ಮುಂದೆ ಪರಂಪರೆಯನ್ನು ಇತಿಹಾಸವನ್ನು ಅನಾವರಣಗೊಳಿಸುತ್ತದೆ. ಸಿನೆಮಾ ಸಾಧ್ಯತೆಯ ಬಹುದೊಡ್ಡ ನಿದರ್ಶನ ಇಲ್ಲಿ ಕಾಣುತ್ತದೆ.

ಟಾಗೋರರ ಈ ಕೃತಿಯು ದೀರ್ಘಾವಧಿಯಲ್ಲಿ ನಡೆಯುವ, ಅನೇಕ ಪ್ರಕರಣಗಳಿರುವ, ಪಾತ್ರಗಳ ಬೆಳವಣಿಗೆ ಮತ್ತು ಸಂದರ್ಭಗಳನ್ನು ಒಳಗೊಂಡಿದೆ. ರೇ ಅವರ ಚಾರುಲತಾದ ಆರಂಭದ ದೃಶ್ಯವೇ ಅನೇಕ ಅಧ್ಯಾಯಗಳಲ್ಲಿನ ಪಾತ್ರ, ಪರಿಸ್ಥಿತಿ, ಕಾಲದ ಒತ್ತಡಗಳನ್ನು ಹೇಳಿಬಿಡುತ್ತದೆ. ವಿವರಣಾತ್ಮಕವಾದ ಅನೇಕ ಅಧ್ಯಾಯಗಳನ್ನು ಸಂಕುಚಿತಗೊಳಿಸಿ ಬಿಂಬಗಳಾಗಿ ಪರಿವರ್ತಿಸುವ ರೇ ಅವರ ತಂತ್ರವಿಧಾನ ಅಲ್ಲಿ ಪರಾಕಾಷ್ಠೆ ಕಾಣುತ್ತದೆ.

ಒಂದೇ ಒಂದು ಮಾತು ಇಲ್ಲದೆಯೇ ಚಾರುಲತಾ ಬದುಕಿನ ಒಂದು ಮಾದರಿ ಮಧ್ಯಾಹ್ನವನ್ನು ಆರಂಭದ ದೃಶ್ಯ ಸಾಬೀತುಪಡಿಸುತ್ತದೆ. ಆಕೆಯ ಏಕಾಂಗಿತನ, ಕಾದಂಬರಿಗಳ ಓದು, ತನಗಿರುವ ಚಲನೆಯ ಮಿತಿ, ಗೋಡೆಯ ಮೇಲಿನ ಚಿತ್ರಗಳು, ಪೀಠೋಪಕರಣ, ದಿನಬಳಕೆಯ ವಸ್ತು, ಬೀದಿಯ ಸದ್ದು, ಬಿಂಬಗಳೆಲ್ಲವೂ ದೇಶಕಾಲ ಬಂಧಿಯಾಗಿ. ಓಪ್ರಾ ಗ್ಲಾಸ್‌ನಲ್ಲಿ ಮನೆಯ ಮಾತಿನಿಂದ ಬೀದಿಯ ಬದುಕನ್ನು ನೋಡಿ ಆನಂದಿಸುವುದು ಸಾಮಾಜಿಕವಾಗಿ ಮಿತಿಗೆ ಒಳಪಟ್ಟ ಅವಳ ಚಲನೆಯು ಕ್ಷಣಮಾತ್ರದಲ್ಲಿ ಒಂದು ತಮಾಷೆಯ ರೂಪಕವಾಗಿ ಪರಿವರ್ತನೆಯಾಗುತ್ತದೆ. ಪುಸ್ತಕದಲ್ಲೇ ತಲ್ಲೀನನಾಗಿ ಕಾರಿಡಾರ್‌ನಲ್ಲಿ ನಡೆಯುವ ಭೂಪತಿ ಎದುರು ನಿಂತ ಹೆಂಡತಿಯನ್ನು ನೋಡದೆ ಹೋಗುವ ಚಿತ್ರವು ಚಾರುಲತಾಳ ಮಸೂರದಲ್ಲಿ ನಿಧಾನಕ್ಕೆ ಮಸಿಯಾಗುತ್ತದೆ. ಮನೆಯ ಬೇರೆಲ್ಲ ವಸ್ತುಗಳ ಭಾಗ, ಆಕೆಯ ಪಾಲಿಗೆ ಗಂಡ. ಕೃತಿಯಲ್ಲಿ ಸುದೀರ್ಘ ವರ್ಣನೆಯಲ್ಲಿ ದೊರೆಯುವ ಚಾರುಲತಾಳ ಬದುಕು, ಅವಳ ಸ್ಥಿತಿ, ಅಲ್ಲಿನ ಸಂಬಂಧಗಳು ಮಾತಿಲ್ಲದ ಆರಂಭದ ದೃಶ್ಯದಲ್ಲಿ ಕೃತಿಯ ಪದಗಳೆಲ್ಲವೂ ನಮ್ಮ ಕಣ್ಣಮುಂದೆ ಬಿಂಬಗಳ ಹೆಣಿಗೆಯಾಗಿ ಬಂಧಗೊಳ್ಳುವ ಅದ್ಭುತ ಅನುಭವ ನೀಡುತ್ತದೆ.

ಚಾರುಲತಾ ಮೂಲಕತೆಯ ಸಾಹಿತ್ಯ ಸಿನೆಮಾ ಬಿಂಬವಾಗಿ ಪರಿವರ್ತನೆ ಯಾಗುವುದರ ಜೊತೆಗೆ ಮೂಲಕತೆಯಲ್ಲಿಲ್ಲದ ಅನೇಕ ಹೊಳಹುಗಳನ್ನು ರೇ ಇಲ್ಲಿ ಹೆಣೆಯುತ್ತಾರೆ. ಚಾರು ತನ್ನ ನೆಚ್ಚಿನ ಕಾದಂಬರಿಕಾರ ಬಂಕಿಮಚಂದ್ರ ಚಟರ್ಜಿ ಅವರ ಹೆಸರನ್ನು ಅನೇಕ ಬಾರಿ ಉಚ್ಚರಿಸುತ್ತಾಳೆ. ಹತ್ತೊಂಬತ್ತನೆಯ ಶತಮಾನದಲ್ಲಿ ಬಂಕಿಮ ಅವರು ಮಹಿಳೆಯನ್ನು ಕುರಿತ ಪ್ರಬಂಧ ಆಧುನಿಕ ಮತ್ತು ಸಂಪ್ರದಾಯವಾದಿ-ಮಹಿಳೆಯನ್ನು ಕಾದಂಬರಿಗಳನ್ನು ಚರ್ಚಿಸುತ್ತಲೇ ಚಾರು-ಅಮಲ ಹತ್ತಿರವಾಗುತ್ತಾರೆ. ರೇ ಅವರು ಇದೆಲ್ಲವನ್ನು ಟಾಗೋರ್ ಅವರ ಮೂಲಕತೆಗೆ ಸೇರಿಸಿದ್ದಾರೆ.

ಚಾರುಲತಾ ಮಹಿಳೆಯರ ಬದುಕನ್ನು ಆಧರಿಸಿ ತೆಗೆದ ಬೇರೆ ಚಿತ್ರಗಳಂತಲ್ಲ. ಅದು ಮಹಿಳೆಯೊಬ್ಬಳ ಭಾವನೆಗಳನ್ನು, ಅವಳು ಬಂಧಿಯಾಗಿರುವ ಚಿನ್ನದ ಗೂಡನ್ನು, ಮಹಿಳೆಯರ ಬದುಕಿನ ಸುತ್ತ ಸರಾಗವಾಗಿ ನಿರ್ಮಾಣವಾಗುವ ಬಗೆಬಗೆಯ ಗೂಡುಗಳನ್ನು ಕುರಿತು ವ್ಯಾಖ್ಯಾನಿಸುವ ಚಿತ್ರ. ಅದೂ ಒಂದು ನಿರೂಪಣೆಯಲ್ಲ. ಒಬ್ಬ ವ್ಯಕ್ತಿಯ ಬದುಕಿನ ಅನೇಕ ಕಥಾನಕಗಳು ಅಲ್ಲಿ ಹೆಣೆದುಕೊಂಡಿವೆ. ಅಲ್ಲದೆ ಒಂದು ಸಾಹಿತ್ಯ ಕೃತಿಯು ಸಿನೆಮಾ ಮಾಧ್ಯಮವಾಗಿ ಬೇರೊಂದು ಎತ್ತರಕ್ಕೆ ರೂಪುಗೊಳ್ಳುವ ಸಾಧ್ಯತೆಯನ್ನು ತೆರೆದು ತೋರಿಸಿದ ಚಿತ್ರ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top