-

ವೀಣೆಯ ‘ದೊರೆ’ಗೆ ಜನ್ಮಶತಾಬ್ದಿ ನಮನ

-

ದೊರೆಸ್ವಾಮಿ ಅಯ್ಯಂಗಾರರ ವೀಣಾವಾದನದ ಕೀರ್ತಿ ಸೀಮೋಲ್ಲಂಘನ ಮಾಡಿ ಅಮೆರಿಕ, ಇಂಗ್ಲೆಂಡ್, ಇರಾನ್, ರಶ್ಯ, ಜರ್ಮನಿ ಮೊದಲಾದ ದೇಶಗಳಿಗೆ ವ್ಯಾಪಿಸಿದೆ. ಈ ದೇಶಗಳಲ್ಲಿ ಕಛೇರಿಗಳನ್ನು ನಡೆಸಿ ರಸಿಕರ ಮೆಚ್ಚುಗೆ, ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ. ವಿದ್ಯೆ, ಪ್ರತಿಭೆ, ಪಾಂಡಿತ್ಯ, ಮೇಲಾಗಿ ಕೀರ್ತಿ, ಜನಪ್ರಿಯತೆಗಳು-ಇವು ಯಾವುದೂ ದೊರೆಸ್ವಾಮಿ ಅಯ್ಯಂಗಾರರ ಶೀಲಗೆಡಿಸಲಿಲ್ಲ. ಇದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ, ತಾವಾಯಿತು ತಮ್ಮ ವೀಣೆಯಾಯಿತು ಎನ್ನುವ ಕಲಾವಿದನ ಮುಗ್ಧತೆ ಅವರದಾಗಿತ್ತು. ಬಿ.ವಿ.ಕೆ. ಹೇಳಿರುವಂತೆ ಅವರೊಂದು ಬಗೆಯ ಸ್ಥಿತಪ್ರಜ್ಞರಾಗಿದ್ದರು. ಆದರೆ ನಾಡು ಅವರಿಗೆ ಹಲವಾರು ಪ್ರಶಸ್ತಿಪುರಸ್ಕಾರಗಳನ್ನು ನೀಡಿ ತನ್ನ ಕರ್ತವ್ಯ, ಕೃತಜ್ಞತೆಗಳನ್ನು ಮೆರೆದಿದೆ.


ವೀಣೆಯ ಬೆಡಗದು ಮೈಸೂರು

-ಎಂದು ಕನ್ನಡದ ಆಚಾರ್ಯ ಪುರುಷ, ಕವಿ ‘ಶ್ರೀ’ ಹಾಡಿರುವಂತೆ ಮೈಸೂರಿನ ವೀಣೆಯ ಆ ಬೆಡಗಿನ ಪರಂಪರೆ ಭವ್ಯವಾದದ್ದು. ಹತ್ತೊಂಬತ್ತನೇ ಶತಮಾನದ ಪ್ರಾರಂಭದ ದಶಕಗಳಲ್ಲಿ ಬೇರುಬಿಡಲಾರಂಭಿಸಿದ ಮೈಸೂರು ವೀಣೆ ಮುಮ್ಮಡಿ ಕೃಷ್ಣರಾಜ ಒಡೆಯರ ರಾಜಾಶ್ರಯ ಮತ್ತು ಪೋಷಣೆಗಳಿಂದ ಬೆರಗುಗೊಳಿಸುವ ಪರಿಯಲ್ಲಿ ಬೆಳೆದು ಒಂದು ಭವ್ಯ ಪರಂಪರೆಯಾಗಿ ದೇಶವಿದೇಶಗಳಲ್ಲಿ ಕೀರ್ತಿಶಿಖರವನ್ನು ಮುಟ್ಟಿದೆ. ಭಕ್ಷಿ ವೆಂಕಟಸುಬ್ಬಯ್ಯ, ಸಾಂಬಯ್ಯ, ಚಿಕ್ಕರಾಮಪ್ಪ, ಶೇಷಣ್ಣ, ಸುಬ್ಬಣ್ಣ, ಸುಬ್ಬರಾವ್, ವೆಂಕಟಗಿರಿಯಪ್ಪಮೊದಲಾದ ಮಹನೀಯರು ಬೆಳೆಸಿದ ಭವ್ಯ ಪರಂಪರೆ ಇದು. ಈ ಪರಂಪರೆಯಲ್ಲಿ ನಿಲ್ಲುವ ಇನ್ನೊಂದು ದೊಡ್ಡ ಹೆಸರು, ಇಪ್ಪತ್ತನೇ ಶತಮಾನದ ಮಹಾನ್ ವೈಣಿಕ ಪ್ರತಿಭೆ ಡಾ. ವಿ. ದೊರೆಸ್ವಾಮಿ ಅಯ್ಯಂಗಾರರು. ವೆಂಕಟೇಶ ದೊರೆಸ್ವಾಮಿ ಅಯ್ಯಂಗಾರ್, ವೀಣೆ ದೊರೆಸ್ವಾಮಿ ಅಯ್ಯಂಗಾರ್ ಎಂದೇ ಸುಪ್ರಸಿದ್ಧರು. ತಮ್ಮ ವೀಣಾ ವಾದನ ಕೌಶಲದಿಂದ ಮೈಸೂರು ಬಾನಿಯ ವೀಣೆಯ ಬೆಡಗಿನ ಭವ್ಯ ಪರಂಪರೆಯನ್ನು ಕೀರ್ತಿಯ ಹೊಸ ಶಿಖರಗಳಿಗೆ ಏರಿಸಿದ ಪ್ರತಿಭಾವಂತ ಕಲಾವಿದ, ವೀಣಾ ಮಾಂತ್ರಿಕ ದೊರೆಸ್ವಾಮಿ ಅಯ್ಯಂಗಾರರ ಜನ್ಮಶತಾಬ್ದಿಯ ವರ್ಷವಿದು.

ಮೈಸೂರು ದೊರೆಸ್ವಾಮಿ ಅಯ್ಯಂಗಾರ್ ಜನಿಸಿದ್ದು ಸಂಗೀತಗಾರರ ಮನೆತನದಲ್ಲಿ. 1920ರ ಆಗಸ್ಟ್ 11ರಂದು. ಹಾಸನ ಜಿಲ್ಲೆಯ ದೊಡ್ಡಗದ್ದುವಳ್ಳಿ ಅವರ ಹುಟ್ಟೂರು. ದೇವರನಾಮ ಹಾಡುವುದು ಮೊದಲಗೊಂಡು ಸಂಗೀತದಲ್ಲಿ ಆಸಕ್ತಿ, ಅಭಿರುಚಿಗಳನ್ನು ಹೊಂದಿದ್ದ ತಾತ ಜನಾರ್ದನ ಅಯ್ಯಂಗಾರ್, ಮಗ ವೆಂಕಟೇಶನ ಸಂಗೀತ ಕಲಿಕೆಗೆ ಅನುವಾಗಲೆಂದು ಹಳ್ಳಿ ತೊರೆದು ಮೈಸೂರು ಸೇರಿದವರು. ಮೈಸೂರು ವೈಣಿಕ ಪರಂಪರೆಯಲ್ಲಿ ಖ್ಯಾತರಾದ ಚಿಕ್ಕಸುಬ್ಬರಾಯರಲ್ಲಿ ವೀಣೆ ಕಲಿತ ತಂದೆ ವೆಂಕಟೇಶ ಅಯ್ಯಂಗಾರ್ ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದರು. ವೀಣೆ, ಕೊಳಲು ಎರಡರಲ್ಲೂ ಪರಿಣಿತರಾಗಿದ್ದ ವೆಂಕಟೇಶ ಅಯ್ಯಂಗಾರರು ಅರಮನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಳಲು ಕಲಿಸುವ ಗುರುಗಳಾಗಿದ್ದರು. ಮನೆಯಲ್ಲಿ ಸದಾ ಗುಂಯ್ಗುಡುತ್ತಿದ್ದ ವೀಣೆಯ ನಾದ. ತಾಯಿಯ ಗರ್ಭದಲ್ಲಿದ್ದಾಗಿನಿಂದಲೇ ವೀಣೆಯ ನಾದದ ವಾತಾವರಣದಲ್ಲಿ ಬೆಳೆದ ದೊರೆಸ್ವಾಮಿ ಅಯ್ಯಂಗಾರ್ ಈ ಮಾಂತ್ರಿಕ ವಾದ್ಯದಿಂದ ಆಕರ್ಷಿತರಾದುದರಲ್ಲಿ ಆಶ್ಚರ್ಯವೇನಿಲ್ಲ. ಐದಾರು ವರ್ಷದ ಎಳವೆಯಲ್ಲೇ ತಂದೆಯೊಂದಿಗೆ ವೀಣೆ ಶೇಷಣ್ಣನವರ ಕಚೇರಿಗೆ ಹೋದಾಗ ದೊರೆಸ್ವಾಮಿ ಶೇಷಣ್ಣನವರ ಅಸಾಧಾರಣ ವ್ಯಕ್ತಿತ್ವದ ವರ್ಚಸ್ಸಿಗೆ ಮತ್ತು ಅವರ ವೀಣಾವಾದನದ ಸೊಗಸಿಗೆ ಮರುಳಾದರು.

ಏಳು ವರ್ಷದ ಬಾಲಕನಾಗಿದ್ದಾಗ ತಂದೆಯಿಂದ ವೀಣೆಯಲ್ಲಿ ವಿದ್ಯಾಭ್ಯಾಸ ಆರಂಭ. ಸ್ನೇಹಿತರು ಗೋಲಿ ಬುಗುರಿ ಆಡುತ್ತಿದ್ದರೆ, ದೊರೆಸ್ವಾಮಿ ಪದ್ಮಾಸನ ಹಾಕಿ ವೀಣೆಯ ಮುಂದೆ ಕುಳಿತಿರುತ್ತಿದ್ದರು. ಹೀಗಿರಲು ಒಮ್ಮೆ ಪ್ರಸಿದ್ಧ ವೈಣಿಕರಾದ ವೆಂಕಟಗಿರಿಯಪ್ಪನವರು, ‘‘ದೊರೆಸ್ವಾಮಿಗೆ ಎಂಟು ವರ್ಷ ಆಗ್ತಾ ಬಂತಲ್ಲವೇ? ಅವನಿಗೇನಾದ್ರೂ ಪಾಠ-ಗೀಠ ಹೇಳ್ತಾ ಇದಿಯೋ ಹೇಗೆ?’’ ಎಂದು ತಂದೆಯಲ್ಲಿ ವಿಚಾರಿಸುತ್ತಾರೆ. ‘‘ನಾನು ಏನೋ ಪಾಠ ಹೇಳ್ತಾ ಇದೀನಿ. ಆದ್ರೆ ಅವನೇ ಯಾಕೋ ಉದಾಸೀನನಾಗಿದ್ದಾನೆ. ಅವನಿಗೆ ವೀಣೆಮೇಲೆ ಅಷ್ಟೊಂದು ಇಷ್ಟ ಇದ್ದಹಾಗೆ ಕಾಣೋದಿಲ್ಲ’’ ಎಂದು ಪೇಚಾಡಿಕೊಂಡ ತಂದೆ ವೆಂಕಟೇಶ ಅಯ್ಯಂಗಾರರಿಗೆ, ‘‘ಯಾವುದಕ್ಕೂ ನೀನು ದೊರೆಸ್ವಾಮಿನ ನನ್ನ ಹತ್ರ ಕಳಿಸಿಬಿಡು. ನಿನ್ನ ಹತ್ತಿರವೇ ಇದ್ರೆ ಅವನಿಗೆ ಭಯ ಇರೋಲ್ಲ’’ ಎಂದು ವೆಂಕಟಗಿರಿಯಪ್ಪ ಸೂಚಿಸುತ್ತಾರೆ. ಗುರುವೇ ಶಿಷ್ಯನನ್ನು ಅರಸಿಕೊಂಡು ಬಂದಂತಹ ಸಂದರ್ಭವಿದು. ಎಂಟನೇ ವಯಸ್ಸಿನಿಂದಲೇ ಅರಮನೆಯ ವಿದ್ವಾಂಸರಾದ ಗುರು ವೆಂಕಟಗಿರಿಯಪ್ಪನವರಲ್ಲಿ ಶಿಷ್ಯವೃತ್ತಿಯಲ್ಲಿ ತೊಡಗಿದರು ದೊರೆಸ್ವಾಮಿ ಅಯ್ಯಂಗಾರ್. ಬೆಳಗಿನ ಹೊತ್ತೆಲ್ಲವೂ ಗುರುಗಳ ಮನೆಯಲ್ಲಿ, ಮಧ್ಯಾಹ್ನವೆಲ್ಲ ಸ್ಕೂಲೆಂಬ ಶಿಕ್ಷೆ, ಸಂಜೆ ವೀಣೆ ಅಭ್ಯಾಸ- ಇದು ಬಾಲಕ ದೊರೆಸ್ವಾಮಿಯ ದಿನಚರಿಯಾಯಿತು. ‘‘ದೊರೆಸ್ವಾಮಿ ನೀನು ಹುಟ್ಟಿರೋದು ವೀಣೆಗೆ ಕಣೋ...ನಿನ್ನ ಏಕೈಕ ಗುರಿ ವೀಣೆಯ ಸೇವೆ. ಈ ಸೇವೆಯನ್ನು ಶ್ರದ್ಧೆಯಿಂದ ಮಾಡುತ್ತಾ ಹೋಗು. ಆ ತಾಯಿ ಎಂದಿಗೂ ನಿನ್ನ ಕೈಬಿಡೋಲ್ಲ’’ ಎಂದು ಗುರುಗಳು ಪ್ರೀತಿವಾತ್ಸಲ್ಯಗಳಿಂದ ಕಲಿಸಿದರು. ಶಿಷ್ಯ ಶ್ರದ್ಧೆಯಿಂದ ಕಲೆಯನ್ನು ಕರತಲಾಮಲಕ ಮಾಡಿಕೊಳ್ಳುವ ಹಾದಿಯಲ್ಲಿ ಅಡಿ ಇಡಲಾರಂಭಿಸಿದ.

ವಿದ್ಯಾರ್ಥಿಯಾಗಿದ್ದಾಗಲೇ ಸಂಗೀತ ಪ್ರಿಯರೂ ಕಲಾಪೋಷಕರೂ ಆಗಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗಮನ ಸೆಳೆದ ಪ್ರತಿಭೆ ದೊರೆಸ್ವಾಮಿ ಅಯ್ಯಂಗಾರ್. ವೀಣೆಯಲ್ಲಿ ವಿಶೇಷ ಅಭಿರುಚಿ ಹೊಂದಿದ್ದ ಮಹಾರಾಜರು ಒಮ್ಮೆ ‘‘ವೆಂಕಟಗಿರಿಯಪ್ಪನವರೇ ವೀಣೆಯಲ್ಲಿ ಯಾರ್ಯಾರನ್ನು ತಯಾರು ಮಾಡ್ತಿದ್ದೀರ’’ ಎಂದು ಮಕ್ಕಳ ನುಡಿಸಾಣಿಕೆಯನ್ನು ಕೇಳಬಯಸಿದರು. ಅರಮನೆಯಲ್ಲಿ ವಿಶೇಷವಾಗಿ ವ್ಯವಸ್ಥೆಯಾದ ಗೋಷ್ಠಿಯಲ್ಲಿ ಬಾಲಕ ದೊರೆಸ್ವಾಮಿ ವೀಣೆ ನುಡಿಸಿದರು. ಮಹಾರಾಜರು ಪ್ರಸನ್ನವದನರಾಗಿ ‘‘ವೆಂಕಟಗಿರಿಯಪ್ಪನವರೇ, ಈ ಹುಡುಗ ಯಾರು? ಇವನು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಕೀರ್ತಿ ತರಲಿದ್ದಾನೆ. ಇವನನ್ನು ಪೋಷಿಸಿ, ಬೆಳೆಸಿ ಇವನ ಭವಿಷ್ಯ ರೂಪಿಸುವುದು ನಿಮ್ಮ ಜವಾಬ್ದಾರಿ. ಆದರೆ ಶಾಲಾ ಶಿಕ್ಷಣಕ್ಕೆ ತೊಂದರೆಯಾಗಬಾರದು.’’ ಎಂದು ಅಪ್ಪಣೆ ಮಾಡುತ್ತಾರೆ. ಅಷ್ಟೇ ಅಲ್ಲ, ತತ್‌ಕ್ಷಣದಿಂದಲೇ ದೊರೆಸ್ವಾಮಿಯವರನ್ನು ಅರಮನೆಯ ವಾದ್ಯಗೋಷ್ಠಿಗೆ(1933) ನೇಮಕಮಾಡುತ್ತಾರೆ. ಹೀಗೆ ಗುರುಮನೆ ಅರಮನೆ ಎರಡರ ಕೃಪಾಕಟಾಕ್ಷಕ್ಕೆ ಪಾತ್ರರಾದ ದೊರೆಸ್ವಾಮಿಯವರು ವೀಣೆಯ ಒಂದು ವಿಸ್ಮಯವಾಗಿ ಪ್ರವರ್ಧಮಾನರಾಗುತ್ತಾರೆ. ಗುರುಗಳ ಜೊತೆ ಅವರ ಕಛೇರಿಗಳಿಗೆ ಸಹವಾದಕರಾಗಿ ಹೋಗುವುದರೊಂದಿಗೆ ಕಛೇರಿಯ ರಂಗತಾಲೀಮು ಶುರುವಾಗುತ್ತದೆ. ತಿರುಚಿನಾಪಳ್ಳಿಯ ಆಕಾಶವಾಣಿ ಕೇಂದ್ರದಲ್ಲಿ ಮೊತ್ತಮೊದಲು ವೀಣೆ ನುಡಿಸಿದಾಗ (1939) ದೊರೆಸ್ವಾಮಿ ಆಗಿನ್ನೂ ಪೌಗಂಡ ಪ್ರಾಯದ ತರುಣ. ರಾಮೋತ್ಸವ, ಕೃಷ್ಣಜನ್ಮಾಷ್ಟಮಿ, ಗಣೇಶೋತ್ಸವ ಮುಂತಾದ ಕಡೆಗಳಿಂದ ಆಮಂತ್ರಣ ಬರಲಾರಂಭಿಸಿತು. ತನಿ ಕಛೇರಿಗಳಲ್ಲಿ ಮಿಂಚತೊಡಗಿದರು. ಈ ಮಧ್ಯೆ ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಬಿಎ ಪದವೀಧರರಾದರು(1945) ಇದಕ್ಕೆ ಹಿಂದಿನ ವರ್ಷವಷ್ಟೆ ಶಾರದಮ್ಮನವರನ್ನು ವಿವಾಹವಾಗಿ ಚತುರ್ಭುಜರಾಗಿದ್ದರು.

 ಆಲ್ ಇಂಡಿಯಾ ರೇಡಿಯೊದಲ್ಲಿ ರಾಷ್ಟ್ರೀಯ ಸಂಗೀತ ಕಾರ್ಯಕ್ರಮ ಶುರುವಾದದ್ದು 1952ರಲ್ಲಿ. ಈ ಮಾಲಿಕೆಯಲ್ಲಿ ಪ್ರಥಮ ಪ್ರಯೋಗವೇ ದೊರೆಸ್ವಾಮಿ ಅಯ್ಯಂಗಾರರ ವೀಣಾ ವಾದನ. 1955ರಲ್ಲಿ ಆಲ್ ಇಂಡಿಯಾ ರೇಡಿಯೊ ಅವರನ್ನು ಬೆಂಗಳೂರು ಆಕಾಶವಾಣಿಯ ಸಂಗೀತ ವಿಭಾಗದಲ್ಲಿ ಪ್ರೊಡ್ಯೂಸರ್ ಹುದ್ದೆಯನ್ನು ವಹಿಸಿಕೊಳ್ಳುವಂತೆ ಆಹ್ವಾನಿಸಿತು. ಈ ಸರಕಾರಿ ಕೆಲಸಗಳೆಲ್ಲ ನನಗೇಕೆ? ನನ್ನ ಕಾಪಾಡುವ ವೀಣೆ ನನಗಿದೆ ಎಂದು ಮೀನಮೇಷ ಎಣಿಸಿಯೇ ದೊರೆಸ್ವಾಮಿಯವರು ಮೈಸೂರಿಗೆ ವಿದಾಯ ಹೇಳಿ ಬೆಂಗಳೂರು ಆಕಾಶವಾಣಿ ಸೇರಿದರು. ಅವರ ಸ್ವಭಾವಕ್ಕೆ ವಿರುದ್ಧವಾದ ಧಾವಂತದ ಬದುಕು. ಅವರ ಪ್ರತಿಭೆ, ಪ್ರಯೋಗಶೀಲತೆಗಳಿಗೆ ಒದಗಿಬಂದ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಬೇಕೆಂಬ ಸವಾಲು. ಆಕಾಶವಾಣಿಯಲ್ಲಿ ಗೀತರೂಪಕಗಳ ಪ್ರಸಾರ ದೊರೆಸ್ವಾಮಿ ಅಯ್ಯಂಗಾರರ ಪ್ರಯೋಗಶೀಲತೆಯ ಫಲ. ಮೊದಲ ಗೀತ ರೂಪಕ ಕನ್ನಡದ ರತ್ನತ್ರಯ ಕವಿಗಳಲ್ಲಿ ಒಬ್ಬರಾದ ಪು.ತಿ.ನ. ಅವರ ‘ಹಂಸದಮಯಂತಿ’. ದೊರೆಸ್ವಾಮಿಯವರೇ ಹೇಳುವಂತೆ ಅವರ ಸಂಗೀತ ನಿರ್ದೇಶನದ ‘ಹಂಸದಮಯಂತಿ’ ನಿರೀಕ್ಷಿಸಿದ ಯಶಸ್ಸುಗಳಿಸದೆ ಅವರು ತಮ್ಮನ್ನು ವಿಮರ್ಶೆಗೆ ಒಡ್ಡಿಕೊಳ್ಳುವಂತಾಯಿತು. ಈ ಸಂದರ್ಭದಲ್ಲಿ ಒಮ್ಮೆ ಸಂಗೀತಜ್ಞರಾದ ಬಿ.ವಿ.ಕೆ. ಶಾಸ್ತ್ರಿಯವರು ನನ್ನಲ್ಲಿ ಹೇಳಿದ ಮಾತು ನೆನಪಾಗುತ್ತಿದೆ.

ಪು.ತಿ.ನ ಶಾಸ್ತ್ರೀಯವಾಗಿ ಸಂಗೀತ ಕಲಿತಿರಲಿಲ್ಲವಾದರೂ ಸಂಗೀತ ಜ್ಞಾನ, ರಸಾಭಿಜ್ಞತೆ ಅವರಲ್ಲಿ ಚೆನ್ನಾಗಿತ್ತು. ಅವರು ತಮ್ಮ ಕವನಗಳಿಗೆ ಮತ್ತು ಗೀತರೂಪಕದ ಹಾಡುಗಳಿಗೆ ತಾವೇ ರಾಗ ಸಂಯೋಜನೆ ಮಾಡುತ್ತಿದ್ದರು. ಹೊಸ ಗೀತರೂಪಕ ಬರೆದಾಗಲೆಲ್ಲ ಬೆಳಗಿನ ಜಾವಕ್ಕೇ ಎದ್ದು ಅದರ ಹಾಡುಗಳಿಗೆ ರಾಗಸಂಯೋಜನೆ ಮಾಡಿ ಬೆಳಗ್ಗೆ ಬೆಳಗ್ಗೆಯೇ ದೊರೆಸ್ವಾಮಿ ಅಯ್ಯಂಗಾರರ ಮನೆಗೆ ಧಾವಿಸಿ ಅವರ ಮುಂದೆ ತಮ್ಮ ರಾಗಸಂಯೋಜನೆಯನ್ನು ಮಂಡಿಸುತ್ತಿದ್ದರಂತೆ. ನೀವು ಶಾಸ್ತ್ರೀಯ ಸಂಗೀತ ವಿದ್ವಾಂಸರು. ನಿಮ್ಮ ಅಂಗೀಕಾರ ಸಿಕ್ಕರೆ ಅಧಿಕೃತ ಮುದ್ರೆ ಬಿದ್ದಂತಾಗುತ್ತದೆ ಎನ್ನುತ್ತಿದ್ದರಂತೆ. ಪು.ತಿ.ನ. ಅವರ ಹನ್ನೆರಡು ಗೀತರೂಪಕಗಳನ್ನು ನಿರ್ದೇಶಿಸಿ ಪ್ರಸಾರಮಾಡಿದ ಖ್ಯಾತಿ ದೊರೆಸ್ವಾಮಿ ಅಯ್ಯಂಗಾರರದು. ಅವುಗಳಲ್ಲಿ ‘ಗೋಕುಲ ನಿರ್ಗಮನ’ ಪು.ತಿ.ನ. ಮತ್ತು ದೊರೆಸ್ವಾಮಿ ಇಬ್ಬರಿಗೂ ರಾಷ್ಟ್ರಮಟ್ಟದ ಮನ್ನಣೆ ತಂದು ಕೊಟ್ಟ ಕೃತಿ. ರಾಷ್ಟ್ರೀಯ ಸರಣಿಯಲ್ಲಿ ಪ್ರಸಾರವಾದ ‘ಗೋಕುಲ ನಿರ್ಗಮನ’ ಪಂಡಿತಪಾಮರರಿಬ್ಬರ ಮೆಚ್ಚುಗೆಯನ್ನು ಗಳಿಸಿದ್ದು ಒಂದು ವಿಶೇಷ.‘ಗೋಕುಲ ನಿರ್ಗಮನ’ ಕೇಳಿದ ಕರ್ನಾಟಕ ಸಂಗೀತದ ಸುಪ್ರಸಿದ್ಧ ಗಾಯಕ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು ನಾಟಿಕುರಂಜಿ ರಾಗದ ‘‘ಆಡುಬಾ, ಮುದವೂಡು ಬಾ, ಭಯದೂಡು ಬಾ’’ ಹಾಡಿನ ರಾಗಸಂಯೋಜನೆಗೆ ಮಾರುಹೋದರಂತೆ. ಈ ರಾಗ ಸಂಯೋಜನೆ ಮಾಡಿದವರೂ ಕವಿ ಪು.ತಿ.ನ. ಅವರೇ ಎಂದು ತಿಳಿದು ಆಶ್ಚರ್ಯಚಕಿತರಾದ ಶೆಮ್ಮಂಗುಡಿಯವರು ತಾವು ಸಂತೋಷಪಟ್ಟಿದ್ದನ್ನು ಪು.ತಿ.ನ. ಅವರಿಗೆ ತಿಳಿಸುವಂತೆ ಅರುಹಿದರಂತೆ.

ಸಾಹಿತ್ಯವನ್ನು ಸಂಗೀತ ನುಂಗಿಬಿಡಬಾರದು, ಸಾಹಿತ್ಯವೇ ಸಂಗೀತವನ್ನು ಮೆಟ್ಟಿಬಿಡಬಾರದು ಎನ್ನುವುದು ಕವಿಗಳು ಮತ್ತು ಸಂಗೀತಗಾರರ ನಡುವಣ ಹಳೆಯ ಚರ್ಚೆ. ಸಾಹಿತ್ಯವೇ ಸಂಗೀತವನ್ನು ಮೆಟ್ಟಿಬಿಡಬಾರದು ಎನ್ನುವುದು ದೊರೆಸ್ವಾಮಿ ಅಯ್ಯಂಗಾರ್ ಅವರ ನಿಲುವಾದರೆ, ‘‘ಸಾಹಿತ್ಯಕ್ಕೆ ಮನ್ನಣೆ ಕೊಡದೆ ಸಂಗೀತ ಹೇಗಿರುತ್ತದೆ’’ ಎನ್ನುವುದು ಡಿ.ವಿ.ಜಿ.ಯವರ ವಾದ. ‘‘ರೇಷ್ಮೆ ವಸ್ತ್ರಗಳನ್ನು ಉಟ್ಟು, ಮುತ್ತುರತ್ನಗಳ ಆಭರಣಗಳನ್ನು ಧರಿಸಿದ ಸುಂದರಿ ಬಾಯಿಬರದ ಮೂಕಿಯಾದರೆ ಹೇಗೆ ಅಥವಾ ಬಾಯಿಬಿಟ್ಟರೆ ಬಣ್ಣಗೇಡು ಎನ್ನುವಂತಾದರೆ ಹೇಗೆ’’ ಎನ್ನುವ ಸಾಮತಿ ನೀಡಿದ ಡಿ.ವಿ.ಜಿ., ಸಂಗೀತ-ಸಾಹಿತ್ಯಗಳ ನಡುವಣ ಸಾಮರಸ್ಯದ ಅಗತ್ಯವನ್ನು ಪ್ರತಿಪಾದಿಸುತ್ತಾರೆ. ದೊರೆಸ್ವಾಮಿ ಅಯ್ಯಂಗಾರರು ಆಕಾಶವಾಣಿಯ ಗೀತರೂಪಕ ಮೊದಲಾದ ಕಾರ್ಯಕ್ರಮಗಳಲ್ಲಿ ಈ ಸಾಮರಸ್ಯವನ್ನು ಸಾಧಿಸಿದವರು. ದೊರೆಸ್ವಾಮಿ ಅಯ್ಯಂಗಾರರ ಪರಂಪರಾನುಗತವಾಗಿ ಬಂದ ಸಂಗೀತ ಶಾಸ್ತ್ರದ ಶುದ್ಧಿ, ಅನನ್ಯತೆಗಳನ್ನು ಬಿಟ್ಟುಕೊಡದ ಹಾಗೂ ಪ್ರಯೋಗಶೀಲತೆ, ಹೊಸತನಗಳನ್ನು ನಿರಾಕರಿಸದ ಸಾಮರಸ್ಯದ ಮನೋಧರ್ಮಕ್ಕೆ ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ಇದೂ ಬಿ.ವಿ.ಕೆ.ಯವರು ಹೇಳಿದ್ದು. 1961ರ ಸುಮಾರಿನಲ್ಲಿ ಸುಪ್ರಸಿದ್ಧ ಸರೋದ್ ವಾದಕ ಉಸ್ತಾದ್ ಅಲೀ ಅಕ್ಬರ್ ಖಾನ್ ಬೆಂಗಳೂರಿಗೆ ಬಂದಾಗ ದೊರೆಸ್ವಾಮಿ ಅಯ್ಯಂಗಾರ್ ಅವರೊಟ್ಟಿಗೆ ಜುಗಲ್‌ಬಂದಿ ಕಛೇರಿ ನಡೆಸಬೇಕೆಂಬ ತಮ್ಮ ಮನದ ಹಂಬಲವನ್ನು ಶಾಸ್ತ್ರಿಗಳ ಮುಂದೆ ವ್ಯಕ್ತಪಡಿಸುತ್ತಾರೆ.

ಸರೋದ್ ಮತ್ತು ವೀಣೆ ನಡುವೆ ಅನುರೂಪತೆ, ಹೊಂದಾಣಿಕೆಗಳು ಸಾಧ್ಯವೇ? ಶೃತಿ ಕೂಡಬೇಕಲ್ಲ? ಇಂತಹ ಕೆಲವು ತಾಂತ್ರಿಕ ತೊಡಕುಗಳನ್ನು ಕುರಿತು ಘನ ವಿದ್ವಾಂಸರುಗಳಿಬ್ಬರೂ ಚರ್ಚಿಸುತ್ತಾರೆ. ಒಂದು ವಾದ್ಯದ ಶೃತಿಯಲ್ಲಿ ಎರಡು ಮನೆಗಳನ್ನು ತಗ್ಗಿಸಬೇಕು, ಮತ್ತೊಂದು ವಾದ್ಯದ ಎರಡು ಮನೆಗಳನ್ನು ಏರಿಸಬೇಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಈ ಪ್ರಯೋಗಶೀಲ ಜುಗಲ್‌ಬಂದಿ ಪ್ರಚಂಡ ಯಶಸ್ಸನ್ನು ಗಳಿಸುತ್ತದೆ. ನಾಲ್ಕು ಗಂಟೆ ಕಾಲ ನಡೆದ ಈ ಜುಗಲ್ ಬಂದಿ ಕಛೇರಿಯಲ್ಲಿ ಚತುರಲಾಲರು ಖಾನರಿಗೆ ತಬಲಾ ಸಾಥಿಯಾದರೆ, ದೊರೆಸ್ವಾಮಿ ಅಯ್ಯಂಗಾರರಿಗೆ ಮೃದಂಗದಲ್ಲಿ ಎಂ.ಎಸ್.ರಾಮಯ್ಯ ಮತ್ತು ಖಂಜಿರದಲ್ಲಿ ಶೇಷಗಿರಿದಾಸ್ ಸಾಥ್ ನೀಡಿದ್ದರು. ಅಂದು ಈ ಜುಗಲ್ ಬಂದಿಯಲ್ಲಿ ದೊರೆಸ್ವಾಮಿ ಅಯ್ಯಂಗಾರರ ಸೃಜನಶೀಲ ಪ್ರತಿಭೆ ಪರಿಪಕ್ವತೆ, ಪರಿಪೂರ್ಣತೆಗಳಲ್ಲಿ ಮೇರು ಮುಟ್ಟಿತ್ತೆಂದು ಬಿ.ವಿ.ಕೆ.ಶಾಸ್ತ್ರಿಯವರು ದಾಖಲಿಸಿದ್ದಾರೆ. ದೊರೆಸ್ವಾಮಿ ಅಯ್ಯಂಗಾರರ ವೀಣಾವಾದನದ ಕೀರ್ತಿ ಸೀಮೋಲ್ಲಂಘನ ಮಾಡಿ ಅಮೆರಿಕ, ಇಂಗ್ಲೆಂಡ್, ಇರಾನ್, ರಶ್ಯ, ಜರ್ಮನಿ ಮೊದಲಾದ ದೇಶಗಳಿಗೆ ವ್ಯಾಪಿಸಿದೆ. ಈ ದೇಶಗಳಲ್ಲಿ ಕಛೇರಿಗಳನ್ನು ನಡೆಸಿ ರಸಿಕರ ಮೆಚ್ಚುಗೆ, ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ. ವಿದ್ಯೆ, ಪ್ರತಿಭೆ, ಪಾಂಡಿತ್ಯ, ಮೇಲಾಗಿ ಕೀರ್ತಿ, ಜನಪ್ರಿಯತೆಗಳು-ಇವು ಯಾವುದೂ ದೊರೆಸ್ವಾಮಿ ಅಯ್ಯಂಗಾರರ ಶೀಲಗೆಡಿಸಲಿಲ್ಲ. ಇದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ, ತಾವಾಯಿತು ತಮ್ಮ ವೀಣೆಯಾಯಿತು ಎನ್ನುವ ಕಲಾವಿದನ ಮುಗ್ಧತೆ ಅವರದಾಗಿತ್ತು.

ಬಿ.ವಿ.ಕೆ. ಹೇಳಿರುವಂತೆ ಅವರೊಂದು ಬಗೆಯ ಸ್ಥಿತಪ್ರಜ್ಞರಾಗಿದ್ದರು. ಆದರೆ ನಾಡು ಅವರಿಗೆ ಹಲವಾರು ಪ್ರಶಸ್ತಿಪುರಸ್ಕಾರಗಳನ್ನು ನೀಡಿ ತನ್ನ ಕರ್ತವ್ಯ, ಕೃತಜ್ಞತೆಗಳನ್ನು ಮೆರೆದಿದೆ. ಕೇಂದ್ರ ಸಂಗೀತ ನಾಟಕ ಆಕಾಡಮಿ(1971), ರಾಜ್ಯ ಸಂಗೀತ ನಾಟಕ ಅಕಾಡಮಿ(1971) ಪ್ರಶಸ್ತಿಗಳು, ಗಾಯನ ಸಮಾಜದ ಸಂಗೀತ ಕಲಾರತ್ನ ಬಿರುದು, ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೆಟ್(1966), ಪದ್ಮ ಭೂಷಣ(1983) ಹೀಗೆ ಹಲವಾರು ಪ್ರಶಸ್ತಿಪುರಸ್ಕಾರಗಳು ಅವರನ್ನು ಅರಸಿ ಬಂದಿರುವುದುಂಟು. ‘ವೀಣೆಯ ನೆರಳಲ್ಲಿ...’ ದೊರೆಸ್ವಾಮಿ ಅಯ್ಯಂಗಾರರ ಆತ್ಮವೃತ್ತ.ಇದನ್ನು, ಕಲಾವಿದರ ಬದುಕನ್ನು ಬಿಂಬಿಸುವ ‘ನನ್ನ ನಾ ಕಂಡಂತೆ’ ಮಾಲಿಕೆಯಲ್ಲಿ ‘ಸುಧಾ’ ವಾರ ಪತ್ರಿಕೆಯಲ್ಲಿ ಪ್ರಕಟಿಸುವ ಭಾಗ್ಯ ಈ ಅಂಕಣಕಾರನದಾಗಿತ್ತು. ಆತ್ಮವೃತ್ತ ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದಕ್ಕೆ ಕೆಲವೇ ದಿನಗಳ ಮುಂಚೆ, 1997ರ ಅಕ್ಟೋಬರ್ 28ರಂದು ದೊರೆಸ್ವಾಮಿ ಅಯ್ಯಂಗಾರರು ಕೀರ್ತಿಶೇಷರಾದರು. ಆಗ ಅವರಿಗೆ 77ರ ಪ್ರಾಯ. ಜನ್ಮ ಶತಾಬ್ದಿ ಅಂಗವಾಗಿ ದೊರೆಸ್ವಾಮಿ ಅಯ್ಯಂಗಾರರ ಕೊಡುಗೆಯನ್ನು ಸ್ಮರಿಸುವ ಹಲವಾರು ಕಾರ್ಯಕ್ರಮಗಳು ನಡೆಯುತ್ತಿರವುದು ಶ್ಲಾಘನೀಯ. ಇದೇ ಸಂದರ್ಭದಲ್ಲಿ ‘ವೀಣೆಯ ನೆರಳಲ್ಲಿ’ ಪುನರ್ ಮುದ್ರಣಗೊಂಡರೆ ಇಂದಿನ ಪೀಳಿಗೆಗೆ ಅದೊಂದು ಸಂಗೀತ ಮತ್ತು ರಸಾಭಿಜ್ಞತೆ ಕುರಿತ ಉತ್ತಮ ಅಧ್ಯಯನ ಗ್ರಂಥವಾಗಲಿದೆ. ತಂದೆಯಂತೆ ಪ್ರತಿಭಾನ್ವಿತ ವೀಣಾ ವಾದನ ಪಟುವಾಗಿರುವ ಪುತ್ರ ಬಾಲಕೃಷ್ಣ ಗಮನಹರಿಸಿದಲ್ಲಿ ಇದು ಸಾಧ್ಯವಾದೀತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top