ಆಧುನಿಕ ಕನ್ನಡ ಸಾಹಿತ್ಯ ಮತ್ತು ಕಾನೂನು/ನ್ಯಾಯ

ನೀ ಮಾಯೆಯೊಳಗೋ ನಿನ್ನಲಿ ಮಾಯೆಯೋ ಅಥವಾ ಬಯಲು ಆಲಯದೊಳಗೋ ಆಲಯ ಬಯಲೊಳಗೋ ಎಂಬ ಹಾಗೆ ಸಾಹಿತ್ಯ ಮತ್ತು ಕಾನೂನಿನ ಸಂಬಂಧ. ಆದ್ದರಿಂದ ಸಾಹಿತ್ಯದಲ್ಲಿ ಕಾನೂನು/ನ್ಯಾಯ ಅಥವಾ ಕಾನೂನಿನಲ್ಲಿ/ನ್ಯಾಯ ನಿರ್ವಹಣೆಯಲ್ಲಿ ಸಾಹಿತ್ಯ ಎಂದು ಚರ್ಚಿಸುವುದು ಸರಿಯಾಗದು. ಇನ್ನೊಂದು ಮಗ್ಗುಲಿನಿಂದ ಗಮನಿಸುವುದಾದರೆ ಇಂತಹ ಚರ್ಚೆ ಅಗತ್ಯವೂ ಹೌದು. ಆಗ ಸಂಶಯ/ಸಂದೇಹಗಳ ಬಗ್ಗಡ ಅಳಿದು ತಿಳಿ ತಿಳಿವಳಿಕೆ ಉಳಿಯುತ್ತದೆ. ಅದಲ್ಲದಿದ್ದರೆ ಸಾಹಿತ್ಯಕ್ಕೆ ಕಾನೂನಿನ ಅಗತ್ಯವೇನು ಮತ್ತು ಕಾನೂನಿಗೆ ಸಾಹಿತ್ಯದ ಅಗತ್ಯವೇನು? ಸಾಹಿತ್ಯಕ್ಕೂ ಕಾನೂನು/ನ್ಯಾಯಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ?

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾನೂನಿನ ಉಲ್ಲೇಖಗಳಿವೆ. ಇದು ಅರ್ಥವಾಗಬೇಕಾದರೆ ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯದಲ್ಲಿರುವ ಉಲ್ಲೇಖಗಳ ಅಧ್ಯಯನ ಅಗತ್ಯ. ರಾಜಸತ್ತೆಯೇ ಬದುಕಿನ ಮತ್ತು ಚರಿತ್ರೆಯ ಮುಖ್ಯ ಅಂಗವೆನಿಸಿದ್ದ ಮತ್ತು ‘ರಾಜಾ ಪ್ರತ್ಯಕ್ಷ ದೇವತಾ’ (ಇದನ್ನೇ 13ನೇ ಶತಮಾನದವರೆಗೆ ಇಂಗ್ಲೆಂಡಿನಲ್ಲಿ ‘Divine right is Kingship, and the King can do no wrong’ಎಂದು ವಿಧಿಸಿದ್ದರು! ಇದು ಅಳಿದದ್ದು 13ನೇ ಶತಮಾನದಲ್ಲಿ ಬ್ರಿಟಿಷ್ ದೊರೆಯ ಮತ್ತು ಪ್ರಜೆಗಳ ನಡುವೆ ಮೆಗ್ನಕಾರ್ಟಾ ಎಂಬ ಒಪ್ಪಂದ ಏರ್ಪಟ್ಟ ಮೇಲೆೆ!) ಎಂಬ ಸೂತ್ರದ ಮೇಲೆ ಸಮಾಜ ನಡೆಯುತ್ತಿದ್ದ ಕಾಲ ಅದು. ಕಾನೂನು ಎಂಬ ಲಿಖಿತ ನೀತಿಯಿರಲಿಲ್ಲ. ರಾಜಾಜ್ಞೆಯೇ ನ್ಯಾಯ. ನ್ಯಾಯವೆಂಬ ಹೆಸರಿನಲ್ಲಿ ಯಾವುದು ಸರಿ, ಯಾವುದು ತಪ್ಪು ಎಂಬುದು ರಾಜನ (ಅಥವಾ ಕೆಲವೊಮ್ಮೆ ಆತನನ್ನು ಕುಣಿಸುತ್ತಿದ್ದ ಸೂತ್ರಧಾರರ) ನಿರ್ಣಯವನ್ನಾಧರಿಸಿತ್ತು. ನಿರಪರಾಧಿಗೆ ಶಿಕ್ಷೆಯಾದಾಗ ಅದು ಆತನ ಕರ್ಮ, ಗ್ರಹಚಾರ, ದೈವನಿರ್ಣಯ ಎಂದು ಜನ ಸುಮ್ಮನಾಗುತ್ತಿದ್ದರು. ಕೆಲವೊಮ್ಮೆ ಆಣೆ, ಪ್ರಮಾಣಗಳ ಆಧಾರದ ಮೇಲೂ ನ್ಯಾಯ ನಿರ್ಣಯವಾಗುತ್ತಿತ್ತು. ಸತ್ಯವೇ ಗೆಲ್ಲುತ್ತಿತ್ತು ಎಂದೇನಿಲ್ಲ. (ಕಾನೂನು ಎಂಬ ವ್ಯಾಖ್ಯೆ ಬಂದ ಮೇಲೂ ಕಾನೂನಿನ ಮತ್ತು ಅದರ ವಿಧಿವಿಧಾನಗಳ ಬೆಂಬಲದ ಹೊರತಾಗಿ, ಸತ್ಯ, ನ್ಯಾಯವೇ ಜಯಗಳಿಸಬೇಕೆಂದೇನಿಲ್ಲ!) ಆದ್ದರಿಂದ ಕಾನೂನು ಎಂಬ ವ್ಯಾಖ್ಯಾನಕ್ಕೆ ಆಗ ಬೇರುಗಳಿರಲಿಲ್ಲ. ಆದ್ದರಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ನಾವು ಚರ್ಚಿಸುವ ಕಾನೂನಿಗೂ ಅದಕ್ಕೆ ಪೂರ್ವದಲ್ಲಿ ಸಾಹಿತ್ಯವು ಒಳಗೊಂಡ ವಿಚಾರಗಳಿಗೂ ಸಾಕಷ್ಟು ಭಿನ್ನತೆಯಿದೆಯೆಂಬುದನ್ನು ನೆನಪಿಡಬೇಕು.

ನೀ ಮಾಯೆಯೊಳಗೋ ನಿನ್ನಲಿ ಮಾಯೆಯೋ ಅಥವಾ ಬಯಲು ಆಲಯದೊಳಗೋ ಆಲಯ ಬಯಲೊಳಗೋ ಎಂಬ ಹಾಗೆ ಸಾಹಿತ್ಯ ಮತ್ತು ಕಾನೂನಿನ ಸಂಬಂಧ. ಆದ್ದರಿಂದ ಸಾಹಿತ್ಯದಲ್ಲಿ ಕಾನೂನು/ನ್ಯಾಯ ಅಥವಾ ಕಾನೂನಿನಲ್ಲಿ/ನ್ಯಾಯ ನಿರ್ವಹಣೆಯಲ್ಲಿ ಸಾಹಿತ್ಯ ಎಂದು ಚರ್ಚಿಸುವುದು ಸರಿಯಾಗದು. ಇನ್ನೊಂದು ಮಗ್ಗುಲಿನಿಂದ ಗಮನಿಸುವುದಾದರೆ ಇಂತಹ ಚರ್ಚೆ ಅಗತ್ಯವೂ ಹೌದು. ಆಗ ಸಂಶಯ/ಸಂದೇಹಗಳ ಬಗ್ಗಡ ಅಳಿದು ತಿಳಿ ತಿಳಿವಳಿಕೆ ಉಳಿಯುತ್ತದೆ. ಅದಲ್ಲದಿದ್ದರೆ ಸಾಹಿತ್ಯಕ್ಕೆ ಕಾನೂನಿನ ಅಗತ್ಯವೇನು ಮತ್ತು ಕಾನೂನಿಗೆ ಸಾಹಿತ್ಯದ ಅಗತ್ಯವೇನು? ಸಾಹಿತ್ಯಕ್ಕೂ ಕಾನೂನು/ನ್ಯಾಯಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯ? ಸಾಹಿತ್ಯವೆಂದರೆ (ಹಳೆಯದಿರಲಿ, ಹೊಸದಿರಲಿ) ಭಾಷೆಯ ಮೂರ್ತ ಮತ್ತು ಸಂವಹನಾತ್ಮಕ, ಸಂವೇದನಾತ್ಮಕ ಸ್ವರೂಪವೇ ಹೊರತು ತನ್ನ ಸುತ್ತಲಿನ ಬದುಕು, ಸಮಾಜ ಹೀಗೇ ಇರಬೇಕೆಂದು ಸೂಚಿಸುವ ಪ್ರಭುಸಂಹಿತೆಯಲ್ಲ. ಅದು ಹೆಚ್ಚೆಂದರೆ ಮಿತ್ರ ಸಂಹಿತೆ. ಸಂಕೇತಗಳ ಮೂಲಕ ಹೇಳುವುದರಿಂದ ಅದು ಕಾಂತಾಸಂಹಿತೆಯೂ ಆಗಬಹುದು. ಸಾಹಿತ್ಯಕ್ಕೆ ಕಾನೂನಿನ ಹೊರತಾದ ಚೌಕಟ್ಟಿಲ್ಲ. ಆದ್ದರಿಂದಲೇ ಸಾಹಿತ್ಯವನ್ನೂ ಕಾನೂನೇ ನಿಯಂತ್ರಿಸುತ್ತದೆಯಲ್ಲದೆ ಕಾನೂನನ್ನು ಸಾಹಿತ್ಯ ನಿಯಂತ್ರಿಸಲಾಗದು. (ಮಾನನಷ್ಟ, ಅಶ್ಲೀಲತೆ, ಅಸಭ್ಯತೆ ಮುಂತಾದ ಕಾನೂನುಗಳಲ್ಲಿ ಈ ಬಗ್ಗೆ ಹೆಚ್ಚು ಮಾದರಿಗಳಿವೆ.) ಹೀಗೆ ಸಾಹಿತ್ಯಕ್ಕೆ ಅದರದ್ದೇ ಆದ ಮಿತಿಯಿದೆ. ಈ ಲೇಖನದಲ್ಲಿ ಕನ್ನಡದ ಗಡಿಯೊಳಗಿನ ಚರ್ಚೆ ಮಾತ್ರ ನಡೆಸಲಾಗಿದೆ.

ಕಾನೂನೆಂದರೆ ನ್ಯಾಯದ ಅರ್ಥಪೂರ್ಣ ಮತ್ತು ಮೂರ್ತ ಸ್ವರೂಪ. ಈ ದೇಶದಲ್ಲಿ ಕಾನೂನು ನ್ಯಾಯನಿರ್ವಹಣೆಯ ಸಾಧನವಾಗಿ ಬಳಕೆಯಾಗುತ್ತಿದೆ. ನ್ಯಾಯವನ್ನು ಕಾನೂನಿನಂತೆ ನಿರ್ವಹಿಸಲಾಗುತ್ತಿದೆ (Administration of justice in accordance with law). ಆದ್ದರಿಂದ ಕೊನೆಗೂ ಕಾನೂನೇ ಜಯಗಳಿಸುತ್ತದೆಯಲ್ಲದೆ ಸಾಮಾಜಿಕ ಅಥವಾ ಮೌಲಿಕ ನ್ಯಾಯವಲ್ಲ. ಆದ್ದರಿಂದಲೇ ಪ್ರಸಿದ್ಧ ಆಂಗ್ಲ ನ್ಯಾಯವೇತ್ತ ಲಾರ್ಡ್ ಡೆನ್ನಿಂಗ್ ಹೇಳಿದ May you ever be so high, the Law is above you ಎಂಬ ಮಾತುಗಳು ಕಾನೂನಿನಡಿ ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಸೂತ್ರವಾಗಿರುವುದು. ಕಾನೂನಿಗೆ ಮತ್ತು ಅದರಲ್ಲಿ ಅಭಿವ್ಯಕ್ತಿಗೊಳ್ಳುವ ನ್ಯಾಯಕ್ಕೆ ದೇಶದ ಸಂವಿಧಾನವೇ ಚೌಕಟ್ಟು. ಆದ್ದರಿಂದ ಸಂವಿಧಾನವು ಕಾನೂನಿನ ಮಿತಿ.

ಆಧುನಿಕ ಕನ್ನಡ ಸಾಹಿತ್ಯ ಎಂದರೆ ಸುಮಾರಾಗಿ 20ನೇ ಶತಮಾನದ ಆದಿಯಿಂದ ಅಥವಾ ಇನ್ನೂ ಸ್ವಲ್ಪಹಿಗ್ಗಿಸಿ 19ನೇ ಶತಮಾನದ ಕೊನೆಯ ದಶಕಗಳಿಂದ ಎಂದು ಅಳೆಯಬಹುದು. ಹಳೆಗನ್ನಡ ಮತ್ತು ನಡುಗನ್ನಡ ಕಾಲವು 16ನೇ ಶತಮಾನದ ಕೊನೆಗೆ ಅಂದರೆ ಕುಮಾರವ್ಯಾಸ, ದಾಸಪಂಥದೊಂದಿಗೆ ಮುಗಿಯಿತು. ಆನಂತರ ಒಂದೆರಡು ಶತಮಾನಗಳ ಕಾಲ ಕನ್ನಡ ಸಾಹಿತ್ಯ ಪ್ರಬುದ್ಧ ಕೊಡುಗೆಗಳ ವಸಂತಕಾಲವನ್ನು ಕಾಣಲೇ ಇಲ್ಲ. ಪ್ರಾಯಃ ಈ ದೇಶದ ಮತ್ತು ನಾಡಿನ ಅನೇಕ ರಾಜ್ಯಗಳು ವಿದೇಶೀಯರ ಅದರಲ್ಲೂ ಮುಖ್ಯವಾಗಿ ಬ್ರಿಟಿಷ್ ವಸಾಹತುಶಾಹಿಗೆ ತುತ್ತಾಗುತ್ತಿದ್ದ ಕಾಲವಾದ್ದರಿಂದ ನಮ್ಮ ಸಂಸ್ಕೃತಿಯ ಕಲಬೆರಕೆಯು ಅನೇಕ ಸೃಜನಶೀಲ ಮನಸ್ಸುಗಳನ್ನು ಕಂಗೆಡಿಸಿರಬೇಕು. ಅದನ್ನು ಮೀರಿ ಬರೆಯುವ ದೈತ್ಯಪ್ರತಿಭೆ ಮತ್ತು ಹಿಂದಣ ಜೈನ ಅರಸರಿಂದ ಮೊದಲ್ಗೊಂಡು ವಿಜಯನಗರ ಸಾಮ್ರಾಜ್ಯದವರೆಗಿನ ಕಾಲದಲ್ಲಿದ್ದ (ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ) ಪ್ರೋತ್ಸಾಹದಾಯಕ ವಾತಾವರಣ, ಪೋಷಣೆ ಆ ಕಾಲದಲ್ಲಿ ಇದ್ದಿರಲಾರದು. ಇಲ್ಲವೆನ್ನಲಾಗದಂತೆ ಕೆಂಪುನಾರಾಯಣ, ನಿಜಗುಣ ಶಿವಯೋಗಿ, ರತ್ನಾಕರ ವರ್ಣಿ ಹೀಗೆ ಕೆಲವು ಕಾವ್ಯಗಳು ಹುಟ್ಟಿದವಾದರೂ ಅದಕ್ಕಿಂತ ಮೊದಲಿನ ಸಾಹಿತ್ಯಗಳಿಗೆ ಹೋಲಿಸಿದರೆ ಗಾತ್ರ ಮತ್ತು ಮೌಲ್ಯಗಳೆರಡರಲ್ಲೂ ಕುಂದಿದವು. ಅದಾದ ಮೇಲೆ 19ನೇ ಶತಮಾನದ ಅಂತ್ಯಕ್ಕೆ ಹಾಗೂ 20ನೇ ಶತಮಾನದ ಆದಿಯಲ್ಲಿ ಮುದ್ದಣನು ತನ್ನ ಶ್ರೀರಾಮಾಶ್ವಮೇಧದ ಮೂಲಕ ಅಂಥದ್ದೊಂದು ಪ್ರಯತ್ನವನ್ನು ಮಾಡಿದನಾದರೂ ಅದು ಹಳೆಗನ್ನಡದ ಹಂಸಗೀತೆಯಾಯಿತೇ ವಿನಾ ಪರಂಪರೆಯ ಮುಂದುವರಿಕೆಯೂ ಆಗಲಿಲ್ಲ, ಹೊಸಗನ್ನಡದ ಮುಂಗೋಳಿಯೂ ಆಗಲಿಲ್ಲ. ಕುವೆಂಪು, ಪುತಿನ, ಸುಜನಾ ಮುಂತಾದವರು ಹಳೆಗನ್ನಡದ ಭಾಷೆಯನ್ನು ಬಳಸಿ ಮಹಾಕಾವ್ಯ ಪರಂಪರೆಯನ್ನು ಮುಂದುವರಿಸಲು ಪ್ರಯತ್ನಿಸಿದರು. ಈ ಪೈಕಿ ಕುವೆಂಪು ಅವರೊಬ್ಬರೇ ಜನಪ್ರಿಯತೆಯನ್ನು ಪಡೆದರು. ಇಂದಿಗೂ ಹಳೆಗನ್ನಡವನ್ನೇ ಭಾಷಾ ಮಾಧ್ಯಮವಾಗಿರಿಸಿ ಹಲವು ಮಹಾಕಾವ್ಯಗಳು ಬರುತ್ತಿವೆಯಾದರೂ ಅವು ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎಂಬ ಹಾಗಿವೆ. ಇದಕ್ಕೆ ಕಾರಣವೆಂದರೆ ಬದಲಾಗುತ್ತಿರುವ ಜೀವನ ವಿಧಾನದೊಂದಿಗೆ ಬದುಕು ಮತ್ತು ಬದುಕಿನೊಂದಿಗೆ ಸಂಸ್ಕೃತಿ ಹಾಗೂ ಸಂಸ್ಕೃತಿಯೊಂದಿಗೆ ಭಾಷೆಯೂ ಬದಲಾಗುವ ಮತ್ತು ಅಂತಹ ಬದಲಾದ ವಿಚಾರಗಳಷ್ಟೇ ಪ್ರಸ್ತುತವಾಗುವ ಸಂಗತಿ. ಪ್ರಾಯಃ ಜಾನಪದವೊಂದೇ ಇದಕ್ಕೆ ಹೊರತು. ಆದ್ದರಿಂದ ಜಾನಪದ ನಂಬಿಕೆಗಳು, ಆಚಾರ-ವಿಚಾರಗಳು, ಕಲೆ ಇವು ಸದಾ ಪ್ರಸ್ತುತವಾಗಿವೆ. (ಕರಾವಳಿಯ ಯಕ್ಷಗಾನ, ಜಾನಪದ ಹಾಡುಗಳು, ಜಾನಪದ ಕುಣಿತ ಇವನ್ನು ನೆನಪಿಸಿಕೊಳ್ಳಬಹುದು.)

ಇಂತಹ ಕಾಲಘಟ್ಟದ ಸಾಹಿತ್ಯ ಮತ್ತು ಕಾನೂನು/ನ್ಯಾಯ ನಿರ್ವಹಣೆಯ ಸಂಬಂಧ ಮತ್ತು ಬೆಳವಣಿಗೆಯನ್ನು ಶೋಧಿಸುವುದು ಈ ಪ್ರಬಂಧದ ಉದ್ದೇಶ. ಕಾನೂನು ಮತ್ತು ನ್ಯಾಯದ ಸಂಬಂಧವು ಅವಿನಾವಾದ್ದರಿಂದ ಈ ಎರಡೂ ಪದಗಳನ್ನು ಸಂದರ್ಭೋಚಿತವಾಗಿ ಬಳಸಲಾಗಿದೆ.

ಬೆಟ್ಟದ ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಇರುವ ಸಂಬಂಧವೇ ಈ ಎರಡು ವಿಭಿನ್ನ ಕ್ಷೇತ್ರಗಳ ನಡುವಣ ಸಂಬಂಧ. ಉಪನಿಷತ್ತಿನಲ್ಲಿ ‘ತದ್ದೂರೇ ತದಂತಿಕೇ’ ಎಂಬ ಮಾತಿದೆ. ಬಲು ದೂರ ಆದರೆ ಬಲು ಹತ್ತಿರ ಎಂಬ ಸೂಚನೆ. ಇದು ತದ್ವಿರುದ್ಧವಾಗಿಯೂ ಬಳಕೆಯಾಗಬಹುದು. ನೀರಿನಲ್ಲಿ ಅಥವಾ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವು ಕಾಣುತ್ತದೆಯಾದರೂ ಅದನ್ನು ಮುಟ್ಟುವಂತಿಲ್ಲ. ಅದಕ್ಕೆ ತನ್ನದೇ ಆದ ಭೌತಿಕ ಅಸ್ತಿತ್ವವಿಲ್ಲ. ನೀರು ಕಲಕಿದರಂತೂ ಪ್ರತಿಬಿಂಬವೇ ಇಲ್ಲ. ಹೀಗೆ ಕಲಕಿದರೆ ಈ ಎರಡೂ ಕ್ಷೇತ್ರಗಳು ಪರಸ್ಪರ ಸಂಬಂಧವನ್ನು ಕಳೆದುಕೊಳ್ಳುತ್ತವೆ ಮತ್ತು ಹಾಸ್ಯಾಸ್ಪದವಾಗುತ್ತವೆ. ಎರಡು ಪುಟ್ಟ ಉದಾಹರಣೆಯೊಂದಿಗೆ ಇದನ್ನು ವಿವರಿಸಿ ಮುಂದುವರಿಯೋಣ: ಒಂದು- ಒಬ್ಬ ವಿದ್ಯಾರ್ಥಿ ‘‘ಘಳಿಗೆಗೊಬ್ಬ ಹುಟ್ಟುವನು, ಘಳಿಗೆಗೊಬ್ಬ ಸಾಯುವನು..’’ ಎಂಬ ಸಾಲುಗಳೊಂದಿಗೆ ಒಂದು ಕವನವನ್ನು ಬರೆದನಂತೆ. ಅದನ್ನು ಕಾನೂನಿನ ಅಥವಾ ಗಣಿತದ ಅಧ್ಯಾಪಕರು ನೋಡಿದರೆ ಇದು ಸರಿಯಲ್ಲ, ಜನಸಂಖ್ಯೆ ಬೆಳೆಯುತ್ತಲೇ ಇದೆ, ಇದು ಹೇಗೆ ಸರಿಯಾದೀತು? ಆದ್ದರಿಂದ ಇದನ್ನು ಸ್ವಲ್ಪಬದಲಾಯಿಸಿ ‘‘ಘಳಿಗೆಗೊಬ್ಬ ಹುಟ್ಟುವನು, ಒಂದೂವರೆ ಘಳಿಗೆಗೊಬ್ಬ ಸಾಯುವನು’’ ಎಂದು ಬದಲಾಯಿಸಿದರೆ ತರ್ಕ/ನ್ಯಾಯ/ಲೆಕ್ಕ ಸರಿಯಾಗುತ್ತದೆ ಎಂದು ಹೇಳಬಹುದು. ಬಹುತೇಕ ಆಂಗ್ಲ ಭಾಷೆ ಬಳಕೆಯಾಗುವ ನಮ್ಮ ನ್ಯಾಯಾಲಯವೊಂದರಲ್ಲಿ ಒಬ್ಬ ಆಂಗ್ಲಸಾಹಿತ್ಯಪ್ರೇಮಿ ವಕೀಲರೊಬ್ಬರು ‘Something is rotten in the State of Denmark’  ಎಂದು ತಮ್ಮ ವಾದಮಧ್ಯದಲ್ಲಿ ಹೇಳಿದರಂತೆ. ಅವರು ಹೇಳಿದ್ದು ಶೇಕ್ಸ್ ಪಿಯರ್ ಕೃತ ನಾಟಕವೊಂದರ ಮಾತುಗಳು; ನಮ್ಮ ಭಾಷೆಯಲ್ಲಿ ಅಲ್ಲಿ ಎಲ್ಲವೂ ಸರಿಯಿಲ್ಲ ಎಂಬ ನುಡಿಗಟ್ಟಾಗಿ, ಉಕ್ತಿಯಾಗಿ, ರೂಪಕವಾಗಿ ಬಳಕೆಯಾದಂತೆ. ಅವರು ಉದ್ದೇಶಿಸಿದ್ದು ಎದುರಾಳಿಯ ಪ್ರತಿಪಾದನೆಯ ವಿಚಾರಗಳು ಕಾರ್ಯಸೂಚಿಯಲ್ಲಿ ಬೇರೆಯೇ ಆಗಿವೆ ಎಂದು ಹೇಳುವುದಕ್ಕೆ. (ನಮ್ಮಲ್ಲಿ The plaintiff has not come with clean hands ಎಂದು ಇರುವ ಹಾಗೆ!) ಆದರೆ ಆ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಈ ಮಾತುಗಳನ್ನು ಉಲ್ಲೇಖಿಸಿ ಈ ಪ್ರಕರಣದಲ್ಲಿ ಯಾರೂ ಡೆನ್ಮಾರ್ಕ್ ದೇಶಕ್ಕೆ ಹೋದ ಪುರಾವೆಯಿಲ್ಲ. ಆದ್ದರಿಂದ ಅವರ ಈ ವಾದವನ್ನು ತಳ್ಳಿಹಾಕಿದ್ದೇನೆ ಎಂದು ಬರೆದರಂತೆ!

ಆದ್ದರಿಂದ ಸಮಯ, ಸಂದರ್ಭ, ಔಚಿತ್ಯ, ಪ್ರಾಧಾನ್ಯ ಇವುಗಳನ್ನು ಗಮನಿಸದೇ ಭಾಷೆಯ ಮತ್ತು ನುಡಿಗಟ್ಟಿನ ಮಹತ್ವವನ್ನು ಅರಿಯದಿದ್ದರೆ ಅದು ನಮ್ಮನ್ನು ಉದ್ದೇಶಿತ ಗುರಿಯನ್ನು ಬಿಟ್ಟು ಇನ್ನೆಲ್ಲೋ ಕರೆದೊಯ್ಯಬಹುದು. ಮುಖ್ಯ ಬೇಕಾದದ್ದು ಜ್ಞಾನ, ಕನಿಷ್ಠ ಪ್ರಾಥಮಿಕ ಜ್ಞಾನ; ಮತ್ತು ಸಾಮಾನ್ಯ ಜ್ಞಾನ. ಅದು ಭಾಷೆ ಮತ್ತು ಅದರ ಕೊಡುಗೆಯಾದ ಸಾಹಿತ್ಯದಿಂದ ಮಾತ್ರ ಸಾಧ್ಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top