ಆಧುನಿಕ ಕನ್ನಡ ಸಾಹಿತ್ಯ ಮತ್ತು ಕಾನೂನು/ನ್ಯಾಯ

ಕಾನೂನು, ಪೊಲೀಸು, ನ್ಯಾಯಾಲಯಗಳ ವಿಚಾರವು ಇತ್ತೀಚೆಗಿನದ್ದು. ಕಳೆದ ಕೆಲವು ದಶಕಗಳಲ್ಲಿ ಅಥವಾ ಹೆಚ್ಚೆಂದರೆ ಒಂದು ಶತಮಾನದಿಂದ ಕತೆ-ಕಾದಂಬರಿಗಳಲ್ಲಿ ಅದರಲ್ಲೂ ಪತ್ತೇದಾರಿಗಳಲ್ಲಿ ಚರ್ಚಿತವಾಗಿದ್ದರೂ ಅವು ಸುಮಾರಾಗಿ ಸಿನೀಮಿಯವಾಗಿವೆ. ಆ ರೀತಿ ನಮ್ಮ ಕಾನೂನು ಹೆಜ್ಜೆಯಿಡುವುದಿಲ್ಲವೆಂಬ ಅರಿವು ಕಾನೂನಿನ ವರ್ತುಲದೊಳಗೆ ಕೆಲಸಮಾಡುವವರಿಗೆ ಗೊತ್ತೇ ಇದೆ.


ಭಾಗ-2

ಸಾಹಿತ್ಯ ಎಂದರೆ ಯಾವುದೇ ಅಭಿವ್ಯಕ್ತಿಗೆ ಬೇಕಾದ ಪರಿಕರ. ಅದಕ್ಕೆ ಬಹುಮುಖಿತ್ವವಿದೆಯೇ ಹೊರತು ಬಹುವಚನವಿಲ್ಲ. ಅದನ್ನು ಅನುಭವಿಸಬೇಕೇ ಹೊರತು ಅದು ಅರ್ಥಕ್ಕೆ ನಿಲುಕದು. ಆದ್ದರಿಂದ ಕಾನೂನು ಮತ್ತು ನ್ಯಾಯದ ಕಲ್ಪನೆಯೇ ತನ್ನ ಉದ್ದೇಶ ಮತ್ತು ಜೀವಾಳವಾಗಿರುವ ಯಾವುದೇ ಸಾಹಿತ್ಯವು ಸೃಜನಶೀಲವಾಗದು. ಅದು ಸಂಕೀರ್ಣವೆಂಬ ಪ್ರಕಾರಕ್ಕೆ ಒಗ್ಗುತ್ತದೆ; ಬಗ್ಗುತ್ತದೆ. ಅದನ್ನು ಅರ್ಥವಿಸಬೇಕು. ಅರ್ಥಕ್ಕೆ ಸಿಗದ ಕಾನೂನು ಎಷ್ಟೇ ನ್ಯಾಯಪರವಾಗಿರಲಿ, ಅದು ಸಿಂಧುವಾಗುವುದಿಲ್ಲ. ಉದಾಹರಣೆಗೆ ಕನ್ನಡದಲ್ಲಿ ಬರುವ ಕಾಯ್ದೆ ಕಾನೂನುಗಳು ನಿಖರತೆಗೆ, ಖಚಿತತೆಗೆ ಶರಣಾಗಬೇಕಾದದ್ದು ಅನಿವಾರ್ಯ. ಅವಕ್ಕೆ ಸೌಂದರ್ಯ, ರೂಪಕ, ಹೋಲಿಕೆ ಮುಂತಾದ ಸಾಹಿತ್ಯದ ಇತರ ಸೌಕರ್ಯಗಳಿಲ್ಲ. ಈ ಮೊದಲೇ ಹೇಳಿದ ಕವನದ ಸಾಲುಗಳ ಉದಾಹರಣೆಯನ್ನು ನೆನಪಿಸಿಕೊಳ್ಳಿ!) ಹೆಚ್ಚೆಂದರೆ ಅವುಗಳ ವ್ಯಾಖ್ಯಾನದಲ್ಲಿ ಕೆಲವು ಉದಾಹರಣೆಗಳಿರಬಹುದಷ್ಟೇ. ಆದ್ದರಿಂದಲೇ ಕೆಲವು ಬಾರಿ ನಮಗೆ ಕಾನೂನಿನ ಭಾಷೆ ಅರ್ಥವಾದರೂ ಅದರ ಅಂತರಾರ್ಥ ಅರ್ಥವಾಗುವುದಿಲ್ಲ. ಆಂಗ್ಲ ಅವತರಣಿಕೆಯಲ್ಲಿ ಬರುವ Not withstanding anything contained in any other Act, Unless otherwise provided for ಅಥವಾ Subject to the exceptions contained hereinafter ಮುಂತಾದ ಬಳಕೆಗಳು ಸಾಹಿತ್ಯಕ್ಕೆ ಒಗ್ಗುವುದಿಲ್ಲ. ಆದ್ದರಿಂದ ಕಾನೂನನ್ನು ಸಾಹಿತ್ಯಕ್ಕೆ ಬಳಸುವವರು ಮತ್ತು ಸಾಹಿತ್ಯದಲ್ಲಿ ಕಾನೂನನ್ನು ಬಳಸುವವರು ಈ ನಡುವಣ ತೆಳುಗೆರೆಯನ್ನು ಗಮನಿಸಬೇಕು. ಅರಸೊತ್ತಿಗೆ ಅಳಿದರೂ ಕನ್ನಡದ ಆಧುನಿಕ ಸಾಹಿತ್ಯಗಳಲ್ಲಿ ದೊರೆಗಳ ನ್ಯಾಯಪದ್ದತಿಯ ಉಲ್ಲೇಖ ಅನೇಕ ಕೃತಿಗಳಲ್ಲಿ ಬರುತ್ತದೆ. ಇವನ್ನು ವ್ಯಂಗ್ಯ, ವಿಷಾದ, ವಿಡಂಬನೆ, ಹಾಸ್ಯಗಳ ಮೂಲಕ ತೋರಿಸಲಾಗಿದೆ. ಕತೆ, ಕಾದಂಬರಿ, ನಾಟಕಗಳಲ್ಲಿ ಪಾತ್ರಗಳ ಮೂಲಕ ಹೇಳಿಸುವ ಮಾತು ಹಾಗೂ ಇನ್ನಿತರ ಸಂದರ್ಭಗಳಲ್ಲಿ ಲೇಖಕ, ನಿರೂಪಕ, ಸೂತ್ರಧಾರಿ ಮುಂತಾದವರ ಮೂಲಕ ಹೇಳಿಸುವ ಮಾತು ನ್ಯಾಯದ ದ್ವಿಮುಖ ಮತ್ತು ಕೆಲವೊಮ್ಮೆ ಬಹುಮುಖಿತ್ವವನ್ನು ಚಿತ್ರಿಸುತ್ತವೆ. ಎಲ್ಲವನ್ನೂ ಹೇಳುವುದು ಈ ಲೇಖನದ/ಕೃತಿಯ ಇತಿಮಿತಿಗಳಲ್ಲಿ ಹೇಳುವುದು ವಿಹಿತವಾಗದು. ಕೆಲವು ಉದಾಹರಣೆಗಳೊಂದಿಗೆ ಇವನ್ನು ಸ್ಪಷ್ಟೀಕರಿಸಬಹುದು.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿವಾದ, ಕಲಹ, ಜಗಳ, ಚರ್ಚೆ ಇವು ಹಾಸುಹೊಕ್ಕಾಗಿವೆೆ. ನಮ್ಮ ಪುರಾಣಗಳೂ ಚರಿತ್ರೆಯೂ ಇದಕ್ಕೆ ಹೊರತಾಗಿಲ್ಲ. ಸತ್ಯ ಮತ್ತು ನ್ಯಾಯದ ಜಿಜ್ಞಾಸೆಯನ್ನು ಅನಾದಿಯಿಂದ ಬಹಳಷ್ಟು ಮಾಡಲಾಗಿದೆ. ಕಾನೂನು ಗಾತ್ರ-ಪಾತ್ರದ ದೃಷ್ಟಿಯಿಂದ ಬಹಳಷ್ಟು ಉಲ್ಲೇಖವಾಗಿದೆ. ಈ ಮೊದಲೇ ಸೂಚಿಸಿದಂತೆ ಆಧುನಿಕ ಕನ್ನಡ ಸಾಹಿತ್ಯವು ಎಲ್ಲೆಲ್ಲಿ ಪೌರಾಣಿಕವಾಗಿದೆಯೋ ಅಥವಾ ಚಾರಿತ್ರಿಕ/ಐತಿಹಾಸಿಕವಾಗಿದೆಯೋ ಅಲ್ಲಿ ಕಾನೂನಿನ ಹೆಸರಿನಲ್ಲಿ ಚರ್ಚಿಸಲ್ಪಟ್ಟಿರುವುದು ನ್ಯಾಯವೇ ಹೊರತು ಕಾನೂನಲ್ಲ. ಕಾನೂನು, ಪೊಲೀಸು, ನ್ಯಾಯಾಲಯಗಳ ವಿಚಾರವು ಇತ್ತೀಚೆಗಿನದ್ದು. ಕಳೆದ ಕೆಲವು ದಶಕಗಳಲ್ಲಿ ಅಥವಾ ಹೆಚ್ಚೆಂದರೆ ಒಂದು ಶತಮಾನದಿಂದ ಕತೆ-ಕಾದಂಬರಿಗಳಲ್ಲಿ ಅದರಲ್ಲೂ ಪತ್ತೇದಾರಿಗಳಲ್ಲಿ ಚರ್ಚಿತವಾಗಿದ್ದರೂ ಅವು ಸುಮಾರಾಗಿ ಸಿನೀಮಿಯವಾಗಿವೆ. ಆ ರೀತಿ ನಮ್ಮ ಕಾನೂನು ಹೆಜ್ಜೆಯಿಡುವುದಿಲ್ಲವೆಂಬ ಅರಿವು ಕಾನೂನಿನ ವರ್ತುಲದೊಳಗೆ ಕೆಲಸ ಮಾಡುವವರಿಗೆ ಗೊತ್ತೇ ಇದೆ.

ಕೆಲವು ನಿದರ್ಶನಗಳೊಂದಿಗೆ ಈ ವಿಚಾರವನ್ನು ಮನದಟ್ಟುಮಾಡ ಬಹುದು. ಹುಡುಕಿದರೆ ಬೇಕಷ್ಟು ಉದಾಹರಣೆಗಳು ಸಿಗಬಹುದು. ಆದರೆ ಕಾನೂನು ಶಿಕ್ಷಣದ ಪಠ್ಯಾನುಕೂಲಕ್ಕಾಗಿ ಕೆಲವು ಪ್ರಕರಣಗಳ ಪ್ರಸಂಗಾಧ್ಯಯನ (case study)ಗಳನ್ನು ಇಲ್ಲಿ ನೀಡಲಾಗಿದೆ. ಇವು ಮಾರ್ಗದರ್ಶಕ ಮಾತ್ರ. ಈ ಮೂಲಕ ಅಥವಾ ಓದಿನ ಮುಖಾಂತರ ಇಂತಹ ಉದಾಹರಣೆ, ನಿದರ್ಶನಗಳನ್ನು ಕಾನೂನಿನ ಮತ್ತು ಸಾಹಿತ್ಯದ ಸಂಬಂಧಾಸಕ್ತರು ಹುಡುಕಿ ತಮ್ಮ ಅನುಭವಕ್ಕೊಳಪಡಿಸಿ ತಮ್ಮ ಅರಿವನ್ನು ವಿಸ್ತರಿಸಿಕೊಳ್ಳಬಹುದು:

 ನಿತ್ಯನೂತನವಾದ ಜಾನಪದ ಮೂಲದ ಒಂದು ಗಾದೆಯನ್ನೇ ನೋಡೋಣ: ''ತಕ್ಕಡಿ ಬಲ್ಲುದೇ ಮನೆಯ ಬಡತನವ?'' ಬಡತನವನ್ನು ಹಲವು ಮಾನದಂಡಗಳಿಂದ ತೂಗಿ ಅಳೆಯುತ್ತೇವಾದರೂ ಅದನ್ನು ತಕ್ಕಡಿಯಲ್ಲಿ ಅಳೆಯಲಾಗುವುದಿಲ್ಲ. ಅಳುವನ್ನು, ನಗುವನ್ನು, ಭಾವನೆಗಳನ್ನು ತಕ್ಕಡಿಯಿಂದ ಅಳೆಯಲಾಗದು. ಇನ್ನೆಲ್ಲ ಸಂದರ್ಭಗಳಲ್ಲೂ ಅಳೆಯಬಲ್ಲ ತಕ್ಕಡಿಯು ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ಸೋಲುತ್ತದೆ; ನಿರರ್ಥಕವಾಗುತ್ತದೆ; ಅದಕ್ಕೆ ಅದರದ್ದೇ ಆದ ಮಿತಿಯಿದೆ ಎಂಬ ತಾತ್ಪರ್ಯ. ಅಪಘಾತ ಪರಿಹಾರಗಳಲ್ಲಿ, ಭೂಸ್ವಾಧೀನ ಪರಿಹಾರಗಳಲ್ಲಿ ಇದು ಅನ್ವಯವಾಗುತ್ತದೆ. ನಿರಂತರವಾಗಿ, ಶಾಶ್ವತವಾಗಿ ಕಳೆದುಕೊಂಡ ಜೀವಕ್ಕೋ ಅಂಗಕ್ಕೋ ಬೆಲೆ ನಿರ್ಧರಿಸುವುದು ಸಾಧ್ಯವಿಲ್ಲ. ಮಣ್ಣನ್ನು ಪ್ರೀತಿಸುವವನಿಗೆ, ತನ್ನ ಬದುಕನ್ನೆಲ್ಲ ಅದೇ ಜಾಗ, ಮನೆಯಲ್ಲಿ ಕಳೆದವನಿಗೆ ಅದನ್ನು ಕಿತ್ತೊಯ್ದು ನೀಡುವ ಯಾವ ಪರಿಹಾರವೂ ಸರಿಯಾಗದು. ಆದರೂ ಕಾನೂನು ಅದಕ್ಕೊಂದು ಮಿತಿಯನ್ನು ಹಾಕಿಕೊಂಡಿದೆ.

ಕಾನೂನು ಅಪರಿಹಾರ್ಯಕ್ಕೂ ಪರಿಹಾರವನ್ನು ನೀಡುತ್ತದೆಯೆಂದರೆ ಅದು ಭೌತಿಕ ಮತ್ತು ವ್ಯಾವಹಾರಿಕ ಮಾತ್ರ; ಬೌದ್ಧಿಕವೂ ಅಲ್ಲ, ಭಾವುಕವೂ ಅಲ್ಲ. ಇದು ನ್ಯಾಯದ ತಕ್ಕಡಿಯೆಂದು ಭಾವಿಸಲಾದ ಕಾನೂನಿನ ಮಿತಿ. ಆದ್ದರಿಂದಲೇ ಕೈಯಲ್ಲಿ ತಕ್ಕಡಿಯನ್ನು ಹಿಡಿದರೂ ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ತಕ್ಕಡಿಯಲ್ಲಿ ತೂಗುತ್ತಿರುವುದೇನು ಎಂಬುದು ಕಣ್ಣಿಗೆ ಕಾಣುವಂತಹದಲ್ಲ. ಕಾನೂನು ನೆಲದಲ್ಲಿ ಪಾದವಿಡುತ್ತದೆ; ಆದರೆ ಆಕಾಶಕ್ಕೆ ಇನ್ನೊಂದು ಪಾದವನ್ನು ಚಾಚುವ ತ್ರಿವಿಕ್ರಮಾವತಾರವನ್ನು ಸಾಧಿಸಲು ಸಾಧ್ಯವಿಲ್ಲ. ಅನಿವಾರ್ಯವಾದಾಗ ಮೂರನೆಯ ಹೆಜ್ಜೆಯನ್ನು ಬಲಿಯ/ಬಲಿಪಶುವಿನ ಮೇಲೆ ಇಡುತ್ತದೆ. ಇದು ಮೂರನೆಯ ಹೆಜ್ಜೆಯೂ ಹೌದು; ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳ ಅನೇಕ ತೀರ್ಪುಗಳು ನ್ಯಾಯ ನ್ಯೂನತೆಯ ಈ ಅಂಶವನ್ನು ಒಪ್ಪಿಕೊಂಡು ವಿಷಾದಿಸಿದ್ದೂ ಇದೆ. ಇವು ನೆನಪಿದ್ದರೆ ಕಾನೂನಿನ ಬಲೆ ಮತ್ತು ನ್ಯಾಯದ ಬೆಲೆ ಅರ್ಥವಾಗಬಹುದು. ಆಧುನಿಕ ಕನ್ನಡ ಸಾಹಿತ್ಯ ಆರಂಭವಾಗುವ ಕಾಲದಲ್ಲಿ ಪ್ರಕಟವಾದ ಕನ್ನಡದ ಮೊತ್ತಮೊದಲ ನಾಟಕ 'ಇಗ್ಗಪ್ಪಹೆಗಡೆಯ ವಿವಾಹ ಪ್ರಹಸನ'ವು (ಪ್ರ: 1887) ಭಾರತೀಯ ದಂಡ ಸಂಹಿತೆಯ ಕಲಂ 312ರಿಂದ 316ರ ವರೆಗಿನ ಅಪರಾಧಗಳಲ್ಲಿ ವಿವರಿಸಲಾದ ಗರ್ಭಖೂನಿ (miscarriage)ಯ ಕಾನೂನನ್ನು ಉಲ್ಲೇಖಿಸುತ್ತದೆ. ಇದನ್ನು ಭ್ರೂಣಹತ್ಯೆ, ಘಟಶ್ರಾದ್ಧ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ.

ಭಾರತೀಯ ದಂಡ ಸಂಹಿತೆಯು 1860ರಲ್ಲಿ ರಚಿಸಲಾದ ಕಾಯ್ದೆ. ಅದು 1887ರ ಹೊತ್ತಿಗೆ ಇನ್ನೂ ಶೈಶವಾವಸ್ಥೆಯಲ್ಲಿತ್ತೆಂದೇ ಭಾವಿಸಬಹುದು. ಆದರೆ ನಾಟಕಕಾರರ ಕಾನೂನಿನ ಅರಿವಿನ ದ್ಯೋತಕವಾಗಿ ಈ ನಾಟಕದಲ್ಲಿ ಉತ್ತರಕನ್ನಡದ ಹವ್ಯಕ ಬ್ರಾಹ್ಮಣ ಕುಟುಂಬವೊಂದರ ಹೆಣ್ಣು ಇಜ್ಜೋಡಿನ (ಇಜ್ಜೋಡು ಅಥವಾ ವಿಷಮ ವಿವಾಹವೆಂದರೆ ತುಂಬಾ ವಯಸ್ಸಾದ ವರನೊಬ್ಬ ವಯಸ್ಸಿನಲ್ಲಿ ಸಾಕಷ್ಟು ಅಂತರವಿರುವ ಎಳೆಯ ಹುಡುಗಿಯನ್ನು ಮದುವೆಯಾಗುವ ಅಸಭ್ಯ ಅಮಾನವೀಯ ಸಂಪ್ರದಾಯ) ಮದುವೆಗೆ ಗುರಿಯಾಗಿ ಗಂಡನನ್ನು ಕಳೆದುಕೊಳ್ಳುವುದು ನಾಟಕದ ಅರ್ಧಾಂಶದಲ್ಲಿ ಮುಗಿದುಹೋಗುತ್ತದೆ. ಆನಂತರದ್ದು ಕುಟಿಲ ವ್ಯವಹಾರ. ಶೀರ್ಷಿಕೆಯು ವಿವಾಹ ಪ್ರಹಸನವೆಂದಿದ್ದರೂ ಪ್ರಹಸನದ ಆನಂತರ ವಧು ಸಾವಿತ್ರಿ ವಿಧವೆಯಾಗಿ ಗರ್ಭಿಣಿಯಾಗಿ (ಈ ಗರ್ಭವು ಇಗ್ಗಪ್ಪಹೆಗಡೆಯದ್ದೋ ಬೇರೆಯವರದ್ದೋ ಎಂಬುದರ ಸೂಚನೆ ನಾಟಕದಲ್ಲಿಲ್ಲ! ನಾಟಕದ ಸಂದರ್ಭದಲ್ಲಿ ಅದು ಅಗತ್ಯವೂ ಇಲ್ಲ!) ನೆಂಟರ ಒತ್ತಡದಿಂದ ಗರ್ಭದೊಳಗಿನ ಕೂಸನ್ನು ಕೊಲ್ಲುವುದು ಮತ್ತು ಅದು ವದಂತಿಯಾಗಿ ಬೆಳಕಿಗೆ ಬಂದು ಕ್ರಿಮಿನಲ್ ಪ್ರಕರಣ ದಾಖಲೆಯಾಗುವುದು ಮತ್ತು ಆಕೆಗೆ ಸಾದಾ ಶಿಕ್ಷೆ ಹಾಗೂ ಗರ್ಭಸ್ರಾವಕ್ಕೆ ಕುಮ್ಮಕ್ಕು ನೀಡಿದ ಇಬ್ಬರಿಗೆ ಕಠಿಣ ಶಿಕ್ಷೆಯಾಗುವುದು ವಿವರಿಸಲ್ಪಡುತ್ತದೆ. ಪ್ರಾಯಃ ಕಾನೂನಿನ ಸೂಕ್ಷ್ಮವನ್ನು ನಾಟಕಕಾರರು ಹೇಳದಿದ್ದರೂ ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಆರೋಪಿಗಳಾಗಿಸಿದ್ದರಿಂದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 34ನ್ನು ಅನ್ವಯಿಸಲಾಗಿದೆಯೆಂಬುದು ಗೊತ್ತಾಗುತ್ತದೆ. ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಕಾನೂನಿನ ತೀರ್ಪಿನ ವಿಧಾನ ಮತ್ತು ಅದರ ಕುರಿತು ಜನರ ಕುತೂಹಲ. ಶಿರ್ಶಿ (ಈಗಿನ ಸಿರ್ಸಿ)ಯ ಸೆಷನ್ಸ್ ನ್ಯಾಯಾಲಯವು ತೀರ್ಪಿಗೆ ಮೊದಲು ಜನ ಸಮುದಾಯಕ್ಕೆ ಉಪದೇಶಪರವಾದ ಭಾಷಣವನ್ನು ಮಾಡುತ್ತದೆ. ಆ ಮೂಲಕ ನಾಟಕಕಾರರು ಓದುಗರಿಗೆ ಹೇಳಬೇಕಾದ್ದನ್ನು ತಲುಪಿಸುತ್ತಾರೆ. ಈ ಭಾಷಣದಲ್ಲಿ ಆಡಳಿತದ ಲೋಪವನ್ನು, ಲಂಚಗುಳಿತನವನ್ನು, ಮತ್ತು ಧರ್ಮಸಂಬಂಧವಾಗಿ ಸರಕಾರದ ಅಸಹಾಯಕತೆಯನ್ನು ಮತ್ತು ಮಠಾಧಿಪತಿಗಳೂ ಸುಮ್ಮನಿರುವುದನ್ನು ಟೀಕಿಸಲಾಗಿದೆ. ಈ ಮೂಲಕ ಒಟ್ಟಾರೆ ಸಮಾಜದ ಅನ್ಯಾಯವನ್ನು, ಅಕ್ರಮವನ್ನು ನಾಟಕಕಾರರು ಬಿಚ್ಚಿಡುತ್ತಾರೆ.

 ದ.ರಾ.ಬೇಂದ್ರೆಯವರ 'ಸಾಯೋ ಆಟ' ಎಂಬ ಏಕಾಂಕ ನಾಟಕದಲ್ಲಿ ನ್ಯಾಯದ ಅಣಕವಿದೆ. ಅದು ಕಾನೂನು ಇನ್ನೂ ರಚನೆಯಾಗದಿದ್ದ ಕಾಲದ ಚಿತ್ರವನ್ನು ನೀಡುತ್ತದೆ. ಶ್ರೀರಂಗರು ಹೇಳುವಂತೆ ''ಕೇವಲ ಶ್ರದ್ಧೆಯಿಂದಲೆ ಒಂದು ಮಾತನ್ನು ನಂಬಿ ಅದರ ಅರ್ಥವನ್ನು ತಿಳಿಯದೆ ಹೋದರೆ ಎಂತಹ ಟ್ರಾಜಿಡಿಯಾಗಬಹುದು ಎಂಬುದನ್ನು ದ.ರಾ. ಬೇಂದ್ರೆಯವರು 'ಸಾಯೋ ಆಟ'ವನ್ನಾಗಿ ಮಾಡಿದ್ದಾರೆ.''

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡದ ನವೋದಯದ ಕಾಲದ ಪ್ರಸಿದ್ಧ ಕತೆಗಾರರು. ಅವರ ಕತಾಕೌಶಲ್ಯ ಎಷ್ಟಿತ್ತೆಂದರೆ ಇಂದಿಗೂ ಕನ್ನಡ ಕತೆಗಳು ಅವರ ಪ್ರಭಾವಲಯದಿಂದ ಪೂರ್ಣ ಹೊರಗೆ ಬಂದಿಲ್ಲ. ನ್ಯಾಯ ನಿರ್ಣಯದ ಕುರಿತು ಅವರು ಐತಿಹಾಸಿಕವೆನ್ನಬಹುದಾದ ಬಾದಷಹನ ನ್ಯಾಯ, ಇಲ್ಲಿಯ ತೀರ್ಪು, ಬಾದಷಹನ ದಂಡನೆ ಮುಂತಾದ ಕತೆಗಳನ್ನು ಬರೆದಿದ್ದಾರೆ. ಅವರ 'ಚಿಕವೀರ ರಾಜೇಂದ್ರ' ಕಾದಂಬರಿಯಲ್ಲೂ ನ್ಯಾಯ, ದಂಡನೆ ಮುಂತಾದ ವಿವರಗಳಿವೆ. ಅಸಹಾಯಕನೊಬ್ಬನನ್ನು ವಿನಾಕಾರಣ ಅಪರಾಧಿಯಾಗಿಸಿ ನಡೆಯುವ ಅನ್ಯಾಯದಾನವನ್ನು ಜೋಗ್ಯೋರ ಅಂಜಪ್ಪನ ಕೋಳೀಕತೆ ಹೃದ್ಯವಾಗಿ ಚಿತ್ರಿಸುತ್ತದೆ. ಆದರೆ ಕಾನೂನಿನ ಕುರಿತೇ ಅನ್ವಯವಾಗುವಂತಹ ಅವರ ಕತೆಗಳಲ್ಲಿ ಇಲ್ಲಿ ಮಾದರಿಯಾಗಿ ಆರಿಸಿಕೊಂಡಿರುವುದು 'ದುರದೃಷ್ಟದ ಹೆಣ್ಣು' ಎಂಬ ಕತೆಯನ್ನು.

(ಮುಂದುವರಿಯುವುದು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top