ಆಧುನಿಕ ಕನ್ನಡ ಸಾಹಿತ್ಯ ಮತ್ತು ಕಾನೂನು/ನ್ಯಾಯ

ಬೆನ್ನೆಲುಬು ತಾನು ಕಾಣದಂತೆ ಹಿಂದೆ ನಿಂತು ಹೇಗೆ ನಮ್ಮನ್ನು ಕಶೇರುಕಗಳನ್ನಾಗಿ ಮಾಡಿ ನೆಟ್ಟಗೆ ನಿಲ್ಲಿಸಿದೆಯೋ ಹಾಗೆಯೇ ಕಾನೂನು ಸ್ತಬ್ಧವಾಗಬಹುದಾಗಿದ್ದ ಸಮಾಜವನ್ನು ಕ್ರಿಯಾಶೀಲವನ್ನಾಗಿಸಿದೆ; ಚಲನಶೀಲವನ್ನಾಗಿಸಿದೆ. ನಮ್ಮ ಆರೋಗ್ಯವನ್ನು ಮತ್ತು ಸಮಾಜದ ಆರೋಗ್ಯವನ್ನು ಹೆಚ್ಚಿಸಿದೆ.


ಭಾಗ-4

ಕನ್ನಡದ ಖ್ಯಾತ ಸಾಹಿತಿ ಯು. ಆರ್.ಅನಂತಮೂರ್ತಿಯವರು ಒಳ್ಳೆಯ ಕತೆಗಾರರು. 1966ರಲ್ಲಿ ಪ್ರಕಟವಾದ ಅವರ ಕತೆ ‘ಮೌನಿ’ ಹಲವಾರು ಕಾರಣಗಳಿಂದಾಗಿ ಒಂದು ಮೌಲಿಕ ಸಾಹಿತ್ಯವಾಗಿದೆ. ಇಲ್ಲಿ ಶ್ರೀಮಠದ ಆಣತಿಯಂತೆ ಎಲ್ಲವೂ ನಡೆಯುವ ಬ್ರಾಹ್ಮಣ ಪರಿಸರದ ನಡುವೆ ಒಂದು ಆಸ್ತಿಜಪ್ತಿಯ ಕಥನ ನಿರೂಪಣೆಯಾಗಿದೆ. ಅಮೀನರು ಉಗ್ರಾಣಿ ಸಹಿತ ಬಂದು ಹರಾಜಿಗೆ ಕೋರ್ಟಿನ ಅಪ್ಪಣೆ ಚೀಟಿ (ಡಿಕ್ರಿಯ ಅಮಲ್ಜಾರಿಯಲ್ಲಿ ಮಾರಾಟ)ಯನ್ನು ತೋರಿಸಿ ಎಲ್ಲ ಸ್ವತ್ತುಗಳನ್ನು ಮನೆಯಿಂದ ಹೊರಗಿಡುವ ವಿವರಣೆಯಿದೆ ಮತ್ತು ಇಂತಹ ಸಂದರ್ಭಗಳಲ್ಲಿ ತೀರ್ಪುಋಣಿಗಳು ಮಾಮೂಲಾಗಿ ತೋರುವ ಪ್ರತಿಭಟನೆ, ಅದರಿಂದುಂಟಾಗುವ ಗೊಂದಲ ಇದಕ್ಕೆ ಬದಲಾಗಿ ಅಸಹಾಯಕರಾಗಿ, ಮೌನವಾಗಿ ಕುಕ್ಕುರುಗಾಲಿನಲ್ಲಿ ಗೋಡೆಗೊರಗಿ ಕೂರುವ ಕುಪ್ಪಣ್ಣ ಭಟ್ಟರ ಪಾತ್ರ ಕತೆ ಓದಿ ದಶಕಗಳೇ ಕಳೆದರೂ ನಮ್ಮ ನ್ಯಾಯ, ಕಾನೂನಿನ ವ್ಯವಸ್ಥೆಯ ಕುರಿತ ಕ್ರೂರ ಭಾಷ್ಯದಂತೆ ಸ್ಮರಣೆಗೆ ಬರುವುದು ಖಂಡಿತ. ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಕೃತಿಗಳಲ್ಲಿ ಇತರ ಅನೇಕ ಸಾಹಿತಿಗಳ ಕೃತಿಗಳಲ್ಲಿರುವಂತೆ ನ್ಯಾಯ, ವಿವಾದ, ಕಾನೂನು ಇವು ಪ್ರಾಸಂಗಿಕವಾಗಿ ಬರುತ್ತವೆ. ಅವರ ‘ಆವರಣ’ ಕಾದಂಬರಿಯಲ್ಲಿ ಸಾಂದರ್ಭಿಕವಾಗಿ ಮತಾಂತರ (conversion), ಸಾಮಾನ್ಯ ವ್ಯವಹಾರ ಸಂಹಿತೆ (common civil code) ಇವು ಉಲ್ಲೇಖವಾಗಿವೆ; ಸ್ವಲ್ಪವಿವರಣೆಗಳೂ ಇವೆ. ಇಲ್ಲಿನ ಇಸ್ಲಾಂ ಧರ್ಮಕ್ಕೆ ಸೇರಿದ ಅಮೀರ್ ಎಂಬಾತನನ್ನು ವಿವಾಹವಾದ ಲಕ್ಷ್ಮೀ ಎಂಬ ಹಿಂದೂ ಹುಡುಗಿ ರಝಿಯಾ ಎಂದು ಮತಾಂತರಗೊಳ್ಳುತ್ತಾಳೆ. ಆದರೆ ಮುಂದೊಂದು ದಿನ ಆಕೆ ಗಂಡನಿಂದ ಬೇರ್ಪಡಲು ಇಚ್ಛಿಸುತ್ತಾಳೆ. ಆಕೆಯ ಬಾಯಿಂದ ಲೇಖಕರು ಈ ಮಾತುಗಳನ್ನಾಡಿಸುತ್ತಾರೆ:
‘‘ತಲಾಕ್ ನಿಬಂಧನೆಯಿರುವ ಧರ್ಮದಿಂದ ಕಾನೂನು ಪ್ರಕಾರವೇ ಹೊರಬರುವ ಅಧಿಕಾರ ಈ ದೇಶದ ಪ್ರಜೆಯಾಗಿ ನನಗಿದೆಯಲ್ಲವೆ? ನಾನು ಈಗಿರುವ ಧರ್ಮವನ್ನು ಬದಲಾಯಿಸಿಕೊಂಡಿದ್ದೀನಿ. ಮತ್ತೆ ಹಿಂದೂ ಆಗಿದ್ದೀನಿ ಅಥವಾ ನನಗೆ ಯಾವ ಧರ್ಮವೂ ಇಲ್ಲ ಅಂತ ಒಂದು ಅಧಿಕೃತ ಘೋಷಣೆಗೆ ಸಹಿ ಹಾಕಿದರೆ ನನ್ನ ನಿನ್ನ ಮದುವೆಯ ಸಂಬಂಧ ತನಗೆ ತಾನೆ ಮುರಿದುಬೀಳುತ್ತೆ.’’ (ಆವರಣ: ಮೊದಲನೇ ಮುದ್ರಣ 2007 ಪುಟ 242)

ಆದರೆ ಮದುವೆಯು ಯಾವ ಧರ್ಮದನುಸಾರವಾಗಿ ನಡೆದಿದೆಯೋ ಆ ಧರ್ಮದನುಸಾರವೇ ಮುರಿದು ಬೀಳಬೇಕೇ ಹೊರತು ಏಕಮುಖವಾಗಿ ಸ್ವಯಿಚ್ಛೆಯಿಂದ, ಮತಾಂತರದಿಂದ, ಮುರಿದು ಬೀಳುವುದಿಲ್ಲವೆನ್ನುತ್ತದೆ ಕಾನೂನು. ಸರ್ವೋಚ್ಚ ನ್ಯಾಯಾಲಯವು ಈ ಕುರಿತು ಸ್ಪಷ್ಟವಾದ ತೀರ್ಪುಗಳನ್ನು ನೀಡಿದೆ. ಇಷ್ಟಕ್ಕೂ ‘ಅಧಿಕೃತ ಘೋಷಣೆ’ಯೆಂದರೆ ಏನೆಂದು ಲೇಖಕರು ವಿವರಿಸುವುದಿಲ್ಲ. ಹೀಗಾಗಿ ಕಾನೂನು ಬಲ್ಲವರಿಗೆ ಅಥವಾ ಕಾನೂನನ್ನು ಅಧ್ಯಯನಮಾಡುವವರಿಗೆ ಇದೊಂದು ಅಸಮರ್ಪಕ, ನಿರಾಧಾರ ಮತ್ತು ಅಸಮರ್ಥನೀಯ ವಾದವಾಗಿ ಕಾಣುತ್ತದೆ ಮಾತ್ರವಲ್ಲ, ಕಾದಂಬರಿಯ ತಾಂತ್ರಿಕ ದೋಷವಾಗಿಯೂ ಕಾಣಿಸಬಹುದು. ಇದೇ ರೀತಿಯ ಕಾನೂನಿನ ಅಸಮರ್ಪಕ ನಿರೂಪಣೆಯು ಅವರ ‘ಕವಲು’ ಕಾದಂಬರಿಯಲ್ಲೂ ಕಾಣಿಸುತ್ತದೆ: ಇಲ್ಲಿ ಹಿಂದೂ ಪಾತ್ರವೊಂದು ‘‘ಈ ಬಸುರು ಮಗುವಾಗಿ ಹೊರಬಂದ ತಾರೀಕಿನಿಂದ ಅದಕ್ಕೆ ಪಿತ್ರಾರ್ಜಿತ ಜಮೀನಿನ ಮೇಲೆ ಅಧಿಕಾರ ಬಂದುಬಿಡುತ್ತೆ.’’ (ಕವಲು: ಮೊದಲ ಮುದ್ರಣ 2010 ಪುಟ 87) ಎಂಬ ವಾಕ್ಯವಿದೆ. ಹಿಂದೂ ಮಿತಾಕ್ಷರ ಕಾನೂನಿನಂತೆ ಬಸುರಲ್ಲಿದ್ದಾಗಲೇ ಮಗುವಿಗೆ ತಂದೆಯ ಪಿತ್ರಾರ್ಜಿತ ಆಸ್ತಿಗಳಲ್ಲಿ ಆನುವಂಶಿಕ ಹಕ್ಕು ಬರುತ್ತದೆ. ಹುಟ್ಟು ಬಸುರಿನ ಧನಾತ್ಮಕ ಕ್ರಿಯೆ ಮಾತ್ರ. (ಹಿಂದೂ ವಾರಸುದಾರಿಕೆ ಕಾಯ್ದೆಯಲ್ಲಿ ತುಸು ವ್ಯತ್ಯಾಸಗಳಿವೆ. ಅದು 2005ರಲ್ಲಿ ಇನ್ನೂ ತಿದ್ದುಪಡಿಗಳನ್ನು ಕಂಡಿದೆ.)

ಇದೇ ಕೃತಿಯಲ್ಲಿ ಅನೈತಿಕ ವ್ಯವಹಾರ ದಮನ ಕಾಯ್ದೆ (Suppression of Immoral Traffic Act)ಯನ್ವಯ ನಾಯಕನನ್ನು ದಸ್ತಗಿರಿ ಮಾಡುವ ಮತ್ತು ಆತ ನ್ಯಾಯಿಕ ಪ್ರಕ್ರಿಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿಯನ್ನು ಸರಳವಾಗಿ ಮತ್ತು ಸಹಜವಾಗಿ ವಿವರಿಸಲಾಗಿದೆ.

ಅಶ್ಲೀಲತೆಯ, ಮಾನಹಾನಿಯ ಕುರಿತು ಸಾಹಿತ್ಯದ ಅಂಶಗಳನ್ನು ಕಾನೂನಿನ ಪರಿಧಿಗೆ ತರಲಾಗಿದೆ. ‘ಧರ್ಮಕಾರಣ’ ಎಂಬ ಕಾದಂಬರಿಯು ಒಂದು ಸಮುದಾಯಕ್ಕೆ ನೋವು ತರುವ ಭಾಗಗಳನ್ನೊಳಗೊಂಡಿದೆಯೆಂಬ ಕಾರಣಕ್ಕೆ ಅದನ್ನು ನಿಷೇಧಿಸಲಾಯಿತು. ಈ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ವರೆಗೂ ಹೋಯಿತು. ಕೊನೆಗೂ ಅದರ ಆಕ್ಷೇಪಣಾಕಾರಿ ಅಂಶಗಳನ್ನು ನ್ಯಾಯಾಲಯವು ಪುರಸ್ಕರಿಸಲಿಲ್ಲ. ಸಾಹಿತ್ಯದಲ್ಲಿ ಬಳಸಲಾಗುವ ಪದಗಳು ಕೆಲವೊಮ್ಮೆ ಮಾನಹಾನಿಗೆ ಕಾರಣವಾಗುತ್ತವೆ. ಒಂದು ಕಾಲದಲ್ಲಿ ಜಾತಿನಿಂದೆ ಒಂದು ಅಪರಾಧವಾಗುತ್ತಿರಲಿಲ್ಲ. ನಮ್ಮ ಅನೇಕ ಕತೆ-ಕಾದಂಬರಿಗಳಲ್ಲಿ ಹಾರುವ, ಹಜಾಮ, ಹೊಲೆಯ, ಇಂತಹ ಪದಗಳು ಬೈಗುಳವಾಗಿ ಯಥೇಚ್ಛವಾಗಿ ಬಳಸಲ್ಪಟ್ಟಿವೆ. ಇಂದು ಅಂತಹ ಪದಗಳು ತಕ್ಷಣ ಕಾನೂನಿನಡಿ ಅಪರಾಧವಾಗುತ್ತವೆ. ಇಂಥಲ್ಲಿ ಪದಬಳಕೆಗೂ ಕಾನೂನಿನ ನೆರವು ಪಡೆಯಬೇಕಾದದ್ದು ಅಗತ್ಯ. ವಿಶೇಷವೆಂದರೆ ಸಹಜವಾಗಿಯೇ ನ್ಯಾಯಾಲಯಗಳು ತಾವು ಸರ್ವಜ್ಞರೆಂದು ಭಾವಿಸಿಕೊಳ್ಳದೆ ಇಂತಹ ಸಂದರ್ಭದಲ್ಲಿ ಸಾಹಿತಿಗಳ, ವಿದ್ವಾಂಸರ ಸಾಕ್ಷ್ಯವನ್ನೋ ಅದಲ್ಲದಿದ್ದರೆ ನೆರವನ್ನೋ ಪಡೆಯುತ್ತವೆ.

ಭಾಷೆ ಆಧುನಿಕವಾದಂತೆಲ್ಲ ಬರೆಯುವ, ಮುದ್ರಿಸುವ ವಿಧಿವಿಧಾನಗಳು ಬದಲಾದವು. ಮೌಖಿಕ ಪರಂಪರೆಯಲ್ಲಿ ಕೇಳಿದ್ದನ್ನು ಮನನ ಮಾಡಿಕೊಂಡು ಪುನರುಚ್ಚರಿಸಬೇಕಿತ್ತು. ಇಂತಹ ರಚನೆಗಳಲ್ಲಿ ಕೃತಿಸ್ವಾಮ್ಯದ ಪ್ರಶ್ನೆಯಿರಲಿಲ್ಲ. ಹೀಗಾಗಿ ಹೇಳುವವನಿಗೂ ಕೇಳುವವನಿಗೂ ಕೃತಿ ನಾಲಗೆಯಲ್ಲಿ ಸ್ಥಾಪನೆಯಾಗಬೇಕಿತ್ತು. ಲಿಪಿ ಆರಂಭವಾದ ಮೇಲೆ ಓಲೆಗರಿ, ಆನಂತರ ಕಾಗದ, ಈಗ ಗಣಕೀಕರಣ ಹೀಗೆ ಕೃತಿಯನ್ನು ಅಚ್ಚೊತ್ತುವ ಮಾಧ್ಯಮವು ಸುಲಭತರವಾಗಿದೆ. ಇದರಿಂದಾಗಿ ಕೃತಿಸ್ವಾಮ್ಯದ ಪ್ರಶ್ನೆಯು ಸಹಜವಾಗಿಯೇ ಉದ್ಭವವಾಯಿತು. ಪರಿಣಾಮದಲ್ಲಿ ಉಂಟಾದ ಹೊಸ ಪಿಡುಗೆಂದರೆ ಕೃತಿಸ್ವಾಮ್ಯವನ್ನು ಅವಗಣಿಸಿ ಕೃತಿಚೌರ್ಯವೆಸಗುವುದು. ಈ ಕಾರಣದಿಂದಾಗಿಯೇ ಕೃತಿಸ್ವಾಮ್ಯದ ಕಾನೂನು ಅನುಷ್ಠಾನಕ್ಕೆ ಬಂತು. ಕೃತಿಚೌರ್ಯದ ಹಲವಾರು ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಿವೆ. ಅವುಗಳನ್ನು ತೀರ್ಮಾನಿಸಲು ಕಷ್ಟವಿಲ್ಲ.

ತೌಲನಿಕ ಓದು ಮತ್ತು ಯಾವುದು ಕಾಲಾನುಕ್ರಮದಲ್ಲಿ ಮತ್ತು ಯೋಚನಾ ಕ್ರಮದಲ್ಲಿ ಮೂಲ ರಚನೆ ಯಾವುದು ಎಂದು ನೋಡಿದರೆ ಸಾಕು. ಮೂಲ ಕೃತಿ ಪ್ರಕಟವಾದದ್ದು ತನಗೆ ಗೊತ್ತೇ ಇರಲಿಲ್ಲ ಎಂಬ ಸಬೂಬು ಒಂದು ಪದಕ್ಕೋ ವಾಕ್ಯಕ್ಕೋ ಅನ್ವಯಿಸಬಹುದೇ ಹೊರತು ಪುಟಗಟ್ಟಲೆ ವ್ಯಾಪಿಸಲು ಸಾಧ್ಯವಿಲ್ಲ. ಕನ್ನಡದಲ್ಲಿ ಹೀಗೆ ಕೃತಿಚೌರ್ಯವನ್ನು ಮಾಡಿ ಪ್ರಕಟಿಸಿದ ಸಂಶೋಧನಾ ಪ್ರಬಂಧಗಳೂ ಇವೆಯೆಂದರೆ ವಿದ್ಯೆಯ ಪಾಡನ್ನು ಅರ್ಥಮಾಡಿಕೊಳ್ಳಬಹುದು. ಈ ಕುರಿತೇ ಒಂದು ಸಂಶೋಧನಾ ಪ್ರಬಂಧವನ್ನು ಬರೆಯಬಹುದು. ಆದರೆ ಒಂದೇ ಕಥಾ ಹಂದರವನ್ನವಲಂಬಿಸಿ ಪ್ರತ್ಯೇಕ ಕೃತಿಗಳು ಪ್ರಕಟವಾದರೆ ಅವನ್ನು ಕೃತಿಚೌರ್ಯವೆನ್ನುವಂತಿಲ್ಲ. ಉದಾಹರಣೆಗೆ ರಾಮಾಯಣ, ಮಹಾಭಾರತ ಇವುಗಳನ್ನು ಆಧರಿಸಿ ಅನೇಕ ಕೃತಿಗಳು ಬಂದಿವೆ. ಅವೆಲ್ಲ ಒಂದೇ ವಸ್ತುವನ್ನು ಒಳಗೊಂಡರೂ ಕೃತಿಚೌರ್ಯಗಳಲ್ಲ. ಆದ್ದರಿಂದ ಕೃತಿಚೌರ್ಯವನ್ನು ಆಧಾರ ಇಲ್ಲವೇ ಪ್ರೇರಣೆಯಿಂದ ಸ್ವತಂತ್ರಗೊಳಿಸಿ ಪರಿಗಣಿಸಬೇಕು. ಕನ್ನಡದ ಸಂದರ್ಭದಲ್ಲಿ ಗಿರೀಶ ಕಾರ್ನಾಡರ ‘ನಾಗಮಂಡಲ’ ಮತ್ತು ಚಂದ್ರಶೇಖರ ಕಂಬಾರರ ‘ಸಿರಿ ಸಂಪಿಗೆ’ ನಾಟಕಗಳು ಒಂದೇ ಕಥಾವಸ್ತುವನ್ನು ಹೊಂದಿದರೂ ಪರಸ್ಪರ ಕೃತಿಚೌರ್ಯಗಳಲ್ಲವೆಂಬುದು ಸರ್ವವಿಧಿತ. ಅನುವಾದಗಳೂ ಹೀಗೆಯೇ.

ಇಂಗ್ಲಿಷಿನ ಪ್ರಸಿದ್ಧ ಕವಿ ಡಬ್ಲ್ಯು.ಬಿ.ಯೇಟ್ಸನ ಲಿಡಾ ಮತ್ತು ಹಂಸ (Lida and the Swan) ಕವಿತೆಯನ್ನು ಕನ್ನಡದ ಮೂವರು ಹಿರಿಯ ಬರಹಗಾರರು- ರಾಮಚಂದ್ರ ಶರ್ಮ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಮತ್ತು ಯು. ಆರ್.ಅನಂತಮೂರ್ತಿ ಅನುವಾದಿಸಿ ಪ್ರಕಟಿಸಿದ್ದಾರೆ. ಇವುಗಳಲ್ಲ್ಲಿ ಕೆಲವು ಪದಗಳೋ ಸಾಲುಗಳೋ ಹೋಲಿಕೆಯಲ್ಲಿ ನಿಕಟವಾಗಿವೆ. ಇದು ಸಹಜ. ಮೂಲ ಒಂದೇ ಅಲ್ಲವೇ? ಒಬ್ಬ ತಂದೆತಾಯಿಯರ ಮಕ್ಕಳು ಹೇಗೆ ಭಿನ್ನ ರೂಪವನ್ನು ಹೊಂದಿಯೂ ಪರಸ್ಪರ ಹೋಲುತ್ತಾರೋ ಹಾಗೆ ಇವು. ಇಂತಹ ಅನೇಕ ಉದಾಹರಣೆಗಳು ಕನ್ನಡದ ಆಧುನಿಕ ಸಾಹಿತ್ಯವನ್ನೋದಿದರೆ ಸಿಗುತ್ತವೆ. ಸಂಶೋಧನೆಗಾಗಿ ಅಧ್ಯಯನ ಮಾಡುವವರಿಗೆ ಈ ವಿಚಾರದಲ್ಲೇ ಒಂದು ಜ್ಞಾನಕೋಶ ಸಿಗಬಹುದು. ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಸೃಜನಶೀಲ ಸಾಹಿತ್ಯದಲ್ಲಿ ಕಾನೂನಿನಂತಹ ತಾಂತ್ರಿಕ ಅಂಶಗಳನ್ನು ನಿರೂಪಿಸುವಾಗ ಸಂಬಂಧಪಟ್ಟವರ ನೆರವು ಪಡೆಯುವುದು ಅಥವಾ ಅವರಿಗೆ ಕತೆಯೋ ಕಾದಂಬರಿಯೋ ಯಾವುದೇ ಆಗಲಿ ಆ ಪ್ರಸಂಗದಲ್ಲಿ ಬರುವ ಅಥವಾ ಬರಬೇಕಾದ ಕಾನೂನಿನ ಕುರಿತು ಮಾಹಿತಿಯನ್ನು ಪಡೆಯುವುದು ಮಾತ್ರವಲ್ಲ, ಅದರ ಫಲಾಫಲಗಳ, ಗುಣಾವಗುಣಗಳ ಕುರಿತು ಚರ್ಚಿಸುವುದು. ಕಾನೂನು ನೋಡುವುದಕ್ಕೆ ಬರಡು. ಸತ್ಯ ಮತ್ತು ಸೌಂದರ್ಯಗಳ ನಡುವೆ ಅದು ಸತ್ಯ ಪಕ್ಷಪಾತಿ.

ಆದರೆ ಸತ್ಯವೆಂಬುದು ಕಾನೂನಿನ ನಿಯಮ ಮತ್ತು ನಿಬಂಧನೆಗೊಳಗಾಗಿರುವುದರಿಂದ ಕೆಲವೊಮ್ಮೆ ಅದು ಉಪನಿಷತ್ತಿನ ‘ಹಿರಣ್ಮಯೇಣ ಪಾತ್ರೇಣ..’ ಎಂಬ ಸೂತ್ರವಾಕ್ಯದಂತೆ ಬೆಳಕಿಗೆ ಬಾರದೆ ಕತ್ತಲಲ್ಲಿ ಅಡಗುತ್ತದೆ. ಕಾಲಗರ್ಭದಲ್ಲಿ ಹೀಗೆ ಅಡಗಿದ ಸತ್ಯಗಳು ಎಷ್ಟೋ ಇರಬಹುದು. ಅದರ ಬಗ್ಗೆ ಕಾನೂನು ತಲೆಕೆಡಿಸಿಕೊಳ್ಳುವುದಿಲ್ಲ. ಕಂಗೆಡಲಾಗದ ಮತ್ತು ಈ ಕಾರಣಕ್ಕೇ ಕೆಡಲಾರದ ವಸ್ತು ಅದು. ಆದರೆ ಅದು ಜೀರ್ಣಿಸಿಕೊಂಡಷ್ಟು ಜೀವನಾನುಭವವನ್ನು ಬದುಕಿನ ಇನ್ಯಾವುದೇ ಕ್ಷೇತ್ರ, ಅಂಗ ಹೊಂದಿರುವುದಿಲ್ಲ. ಉಳಿದೆಲ್ಲ ಜ್ಞಾನನೆಲೆಗಳು ನೆಲದ ಮೇಲೆ ಕಾಂಡ, ಗೆಲ್ಲು, ಎಲೆ, ಹೂ, ಹಣ್ಣಿನಂತೆ ಪ್ರತ್ಯಕ್ಷವಾಗಿದ್ದರೆ ಕಾನೂನು ನೆಲದಡಿಯೇ ಹರಿದು ಬದುಕಿನ ಸಾರವನ್ನು ಹೀರಿ ಇತರ ಎಲ್ಲ ಶಾಖೋಪಶಾಖೆಗಳನ್ನು ಬಾನೆತ್ತರ ಕಾಣುವಂತೆ, ಚಿಗುರುವಂತೆ ಮತ್ತು ಶೋಭಿಸುವಂತೆ ಮಾಡುತ್ತದೆ. ಬೆನ್ನೆಲುಬು ತಾನು ಕಾಣದಂತೆ ಹಿಂದೆ ನಿಂತು ಹೇಗೆ ನಮ್ಮನ್ನು ಕಶೇರುಕಗಳನ್ನಾಗಿ ಮಾಡಿ ನೆಟ್ಟಗೆ ನಿಲ್ಲಿಸಿದೆಯೋ ಹಾಗೆಯೇ ಕಾನೂನು ಸ್ತಬ್ಧವಾಗಬಹುದಾಗಿದ್ದ ಸಮಾಜವನ್ನು ಕ್ರಿಯಾಶೀಲವನ್ನಾಗಿಸಿದೆ; ಚಲನಶೀಲವನ್ನಾಗಿಸಿದೆ. ನಮ್ಮ ಆರೋಗ್ಯವನ್ನು ಮತ್ತು ಸಮಾಜದ ಆರೋಗ್ಯವನ್ನು ಹೆಚ್ಚಿಸಿದೆ.
(ಮುಗಿಯಿತು)

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top