EIA-2020

‘ಸರಾಗ ಉದ್ಯಮ’ಕ್ಕಾಗಿ ಪರಿಸರ ಹತ್ಯೆಗೆ ಪರವಾನಿಗೆ

ಈ EIA-2020 ಕರಡು ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ಯಾವುದೇ ಶಾಸನಾತ್ಮಕ ನಿರ್ಬಂಧಗಳಿಲ್ಲದೆ ಕಾರ್ಪೊರೇಟುಗಳಿಗೆ ಪರಭಾರೆ ಮಾಡುವ ಕಡೆಗೆ ಮೋದಿ ಸರಕಾರದ ಮತ್ತೊಂದು ಬೃಹತ್ ಹೆಜ್ಜೆಯಾಗಿದೆ. ಇದರ ಬಗ್ಗೆ ತಕರಾರುಗಳನ್ನು ಸಲ್ಲಿಸಲು ಆಗಸ್ಟ್ 11ರ ವರೆಗೆ ಅವಕಾಶವಿದೆ. ವಿಶೇಷ ನಿರೀಕ್ಷೆಗಳಿಲ್ಲದೆ ತಕರಾರು ಸಲ್ಲಿಸೋಣ. ಆದರೆ ಸಂಭವನೀಯ ಪರಿಸರ ಹತ್ಯೆಯ ವಿರುದ್ಧ ಈಗಿನಿಂದಲೇ ಜನರನ್ನು ಜಾಗೃತಗೊಳಿಸೋಣ.


1984ರಲ್ಲಿ ವಿಶ್ವದಲ್ಲೇ ಅತ್ಯಂತ ಘೋರವಾದ ಕೈಗಾರಿಕಾ ದುರಂತವೆಂದು ಪರಿಗಣಿಸಲಾಗಿರುವ ಕೈಗಾರಿಕಾ ವಿಷಾನಿಲ ದುರಂತವು ಭಾರತದ ಭೋಪಾಲ್‌ನಲ್ಲಿ ಸಂಭವಿಸಿತು. ಯೂನಿಯನ್ ಕಾರ್ಬೈಡ್ ಕಂಪೆನಿಯ ಮಾಲಕರು ಲಾಭದ ಲಾಲಸೆಯಿಂದ ಕಾರ್ಮಿಕರ ಹಾಗೂ ಸುತ್ತಮುತ್ತಲಿನ ಪರಿಸರದ ಕಾಳಜಿಯೇ ಇಲ್ಲದೆ ತೋರಿದ ಬೇಜವಾಬ್ದಾರಿಯೇ ಭೋಪಾಲ್ ದುರಂತಕ್ಕೆ ಕಾರಣವೆಂದು ನಂತರ ಸ್ಪಷ್ಟವಾಯಿತು. ಹೀಗಾಗಿ ಭಾರತದಲ್ಲಿ ಉದ್ಯಮಗಳಿಗೆ ಪರಿಸರ ಮಾಲಿನ್ಯ ಮಾಡದಂತೆ ಶರತ್ತುಗಳನ್ನು ಹೇರುವ ನಿಯಮಗಳು 1986ರಲ್ಲಿ ಜಾರಿಯಾಯಿತು. ವಿಶೇಷವಾಗಿ ಗಾಳಿ ಹಾಗೂ ನೀರಿನ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶವನ್ನು ಈ ಪ್ರಾರಂಭಿಕ ಕ್ರಮಗಳು ಹೊಂದಿದ್ದವು. 1992ರಲ್ಲಿ ಬ್ರೆಝಿಲ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಪರಿಸರ ಸಮಾವೇಶವು ನಡೆದ ನಂತರ ಲಾಭಾಸಕ್ತ ಕೈಗಾರಿಕೋದ್ಯಮಗಳು ನಿರಂತರ ನಡೆಸುತ್ತಿರುವ ಪರಿಸರ ಹಾನಿಯಿಂದಾಗಿ ಏರುತ್ತಿರುವ ಜಾಗತಿಕ ತಾಪಮಾನ ಹಾಗೂ ಭೂಗ್ರಹದಲ್ಲಿನ ಸಕಲ ಜೀವಸಂಕುಲವು ಎದುರಿಸುತ್ತಿರುವ ಅಪಾಯದ ಪ್ರಮಾಣಗಳು ಜಾಗತಿಕ ಸಮುದಾಯದ ಅರಿವಿಗೆ ಬಂದಿತು. ಹೀಗಾಗಿ ಎಲ್ಲಾ ದೇಶಗಳು ಇನ್ನು ಮುಂದೆ ಕೈಗಾರಿಕೋದ್ಯಮಿಗಳಿಗೆ ಪರವಾನಿಗೆ ಕೊಡುವಾಗ ಅದರಿಂದ ಪರಿಸರ ಹಾಗೂ ಸಮಾಜದ ಮೇಲಾಗುವ ಪರಿಣಾಮಗಳ ಮೇಲಾಗುವ ಅಧ್ಯಯನ ಮಾಡುವುದನ್ನು ಕಡ್ಡಾಯ ಮಾಡುವ ಕಾಯ್ದೆಗಳನ್ನು ಮಾಡಿದವು.

ಈ ಹಿನ್ನೆಲೆಯಲ್ಲೇ ಭಾರತದಲ್ಲೂ 1994ರಿಂದ ಕೈಗಾರಿಕೋದ್ಯಮಗಳಿಗೆ ಪರವಾನಿಗೆ ಕೊಡುವಾಗ ಪರಿಸರ ನಾಶದ ಮೌಲ್ಯಮಾಪನ- EIA- Environment Impact Assessment ಮಾಡುವುದನ್ನು ಕಡ್ಡಾಯಗೊಳಿಸಲಾಯಿತು ಹಾಗೂ ಅದರ ಭಾಗವಾಗಿಯೇ ದೊಡ್ಡದೊಡ್ಡ ಉದ್ಯಮಗಳ ಸ್ಥಾಪನೆಗೆ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಸ್ಥಳೀಯ ಜನರಿಗೆ ಮಾಹಿತಿ ನೀಡಿ ಸಾರ್ವಜನಿಕ ಚರ್ಚೆ (ಪಬ್ಲಿಕ್ ಹಿಯರಿಂಗ್- ಕನ್ಸಲ್ಟೇಷನ್) ಮಾಡುವುದೂ ಕಡ್ಡಾಯವಾಯಿತು. ಅಧ್ಯಯನ- ಮೌಲ್ಯಮಾಪನದಲ್ಲಿ ಪ್ರಸ್ತಾವಿತ ಯೋಜನೆಯಿಂದ ಪರಿಸರದ ಮೇಲೆ ಹಾಗೂ ಜನಜೀವನದ ಮೇಲಾಗುವ ಪ್ರಭಾವಗಳೇನು? ಎಷ್ಟು ಹಾನಿಕರ? ಈ ಯೋಜನೆಯನ್ನು ಬಿಟ್ಟು ಅದೇ ಲಾಭವನ್ನು ಬೇರೆ ಮಾರ್ಗಗಳಿಂದ ಪಡೆದುಕೊಳ್ಳಲಾಗುವುದಿಲ್ಲವೇ? ಇದೇ ಯೋಜನೆ ಜಾರಿಯಾಗಬೇಕೆಂದರೆ ಯಾವ ಬಗೆಯ ಮುನ್ನೆಚ್ಚರಿಕೆಗಳನ್ನು ಹಾಗೂ ತಿದ್ದುಪಡಿಗಳನ್ನು ಉದ್ಯಮಿಗಳು ಮಾಡಿಕೊಳ್ಳಬೇಕು ಎಂಬ ಶಿಫಾರಸುಗಳನ್ನು ಮಾಡುವುದು ಇಐಎಗಳ ಹಿಂದಿನ ಉದ್ದೇಶವಾಗಿತ್ತು. ಆದರೆ ಪ್ರಾರಂಭದಿಂದಲೇ ಇದರ ಅನುಷ್ಠಾನ ಅಷ್ಟೇನೂ ಕಡ್ಡಾಯವಾಗಿ ರಲಿಲ್ಲ. ಏಕೆಂದರೆ ಇದೇ ಸಮಯದಲ್ಲೇ ವಿದೇಶಿ ಹಾಗೂ ಖಾಸಗಿ ಬಂಡವಾಳ ಹೂಡಿಕೆಯೇ ದೇಶದ ಅಭಿವೃದ್ಧಿಯ ಸಾಧನ ಎಂಬ ನವಉದಾರವಾದಿ ಅಭಿವೃದ್ಧಿ ಚಿಂತನೆಯೂ ಚಾಲ್ತಿಗೆ ಬಂತು. ಆದ್ದರಿಂದ ಪರಸರ ರಕ್ಷಣಾ ಕಾಯ್ದೆಗಳು ಅಭಿವೃದ್ಧಿಗೆ ಅರ್ಥಾತ್ ಖಾಸಗಿ ಬಂಡವಾಳ ಹೂಡಿಕೆಗೆ ಅಡ್ಡಿ ಎಂಬ ಡಿಸ್ಕೊರ್ಸ್ ಅನ್ನು ಕೂಡಾ ಅಷ್ಟೇ ಬಿರುಸಿನಿಂದ ಹುಟ್ಟುಹಾಕಲಾಯಿತು.

ಇದರ ಪರಿಣಾಮವಾಗಿಯೇ 2006ರಲ್ಲಿ ಯುಪಿಎ ತಂದ ತಿದ್ದುಪಡಿಗಳು ಸಹ ಪರಿಸರಕ್ಕಿಂತ ಜಾಸ್ತಿ ಉದ್ಯಮದ ರಕ್ಷಣೆಗೆ ನಿಂತಿತ್ತು. ಆದರೆ ಅದು ನೆಪಕ್ಕಾದರೂ ಪರಿಸರ ರಕ್ಷಣೆಯ ಚೌಕಟ್ಟನ್ನು ಉಳಿಸಿಕೊಂಡಿತ್ತು. 

EIA-2020:

ಅದರೆ ಇಂದು ಕೋವಿಡ್ ಸಂದರ್ಭದಲ್ಲೂ ಅತ್ಯಂತ ತರಾತುರಿಯಿಂದ ಮೋದಿ ಸರಕಾರ ಜಾರಿಗೆ ತಂದಿರುವ ಕರಡು ತಿದ್ದುಪಡಿಗಳು ಪರಿಸರ ರಕ್ಷಣೆಯ ಹಂದರವನ್ನೇ ಕಿತ್ತೊಗೆಯುವ ಪ್ರಸ್ತಾಪವನ್ನು ಹೊಂದಿದೆ ಹಾಗೂ ಮೂಲಭೂತವಾಗಿ ದೊಡ್ಡ ದೊಡ್ಡ ಸ್ವದೇಶಿ ಹಾಗೂ ವಿದೇಶಿ ಕಾರ್ಪೊರೇಟ್ ಗಳಿಗೆ 'Ease Of Doing Business' ಒದಗಿಸುವ ಉದ್ದೇಶವನ್ನೇ ಹೊಂದಿದೆ. ಇದೇ ಕಾರಣಕ್ಕಾಗಿ ಈಗಾಗಲೇ ಕಾರ್ಮಿಕ ಕಾನೂನುಗಳನ್ನೂ ಕಿತ್ತೊಗೆದಿರುವುದು ಇನ್ನೂ ಹಸಿಹಸಿಯಾಗಿ ಇರುವಾಗಲೇ ಪರಿಸರದ ಮೇಲೆ ದೊಡ್ಡ ದಾಳಿ ಆರಂಭವಾಗಿದೆ. ಮೊದಲನೆಯದಾಗಿ ಒಂದು ಪ್ರಜಾತಂತ್ರದಲ್ಲಿ ಇಂತಹ ನೀತಿ ನಿಯಮಾವಳಿ ಗಳಿಗೆ ಸಂಬಂಧಪಟ್ಟ ಕರಡಿನ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳನ್ನು ಪಡೆದುಕೊಳ್ಳುವ ನಾಟಕವನ್ನಾದರೂ ಆಡಲಾಗುತ್ತಿತ್ತು. ಆದರೆ ಮೋದಿ ಸರಕಾರ ಜನಾಭಿಪ್ರಾಯದ ಅಗತ್ಯವೇ ಇಲ್ಲವೆಂಬಂತೆ ಈ ಕರಡನ್ನು ಕೋವಿಡ್ ಸಂದರ್ಭದಲ್ಲಿ ಪ್ರಸ್ತಾಪಿಸಿದೆ.

ಮಾರ್ಚ್ 23ರಂದು, ಕೋವಿಡ್ ವಿರುದ್ಧ ಜಾಗಟೆ ಬಡಿದುಕೊಳ್ಳಲು ಹೇಳಿದ ದಿನವೇ ಈ ಕರಡನ್ನು ಮೋದಿ ಸರಕಾರ ಬಿಡುಗಡೆ ಮಾಡಿತು. ಆನಂತರ ಸತತವಾಗಿ ದೇಶಾದ್ಯಂತ 77 ದಿನಗಳ ಕಾಲ ಲಾಕ್‌ಡೌನ್ ಮಾಡಲಾಯಿತು. ಆದರೂ ಇದೇ ಅವಧಿಯಲ್ಲೇ ಜನಾಭಿಪ್ರಾಯ ನೀಡಬೇಕೆಂದು ಕಡ್ಡಾಯ ಮಾಡಿದ ಮೋದಿ ಸರಕಾರ ಇದಕ್ಕಾಗಿ ಕೊಟ್ಟ ಅವಕಾಶ ಕೇವಲ 60 ದಿನಗಳು ಮಾತ್ರ. ಆದರೆ 83 ಪುಟಗಳ ಈ ಕರಡು ಪ್ರಸ್ತಾಪಗಳು ಕೋವಿಡ್ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಳೀಯ ಭಾಷೆಗಳಿಗೆ ಅನುವಾದಗೊಂಡು ಗ್ರಾಮ ಪಂಚಾಯತ್ ಮತ್ತು ಗ್ರಾಮ ಸಭೆಗಳ ಮಟ್ಟಕ್ಕೆ ಮುಟ್ಟಿ, ಜನರು ಅದನ್ನು ಓದಿ-ಅರ್ಥ ಮಾಡಿಕೊಂಡು ತಮ್ಮ ಅಭಿಪ್ರಾಯ ತಿಳಿಸಲು ಸಾಧ್ಯವೇ? ಆದರೂ ಕೇಂದ್ರ ಪರಿಸರ ಮಂತ್ರಿ ಜಾವ್ಡೇಕರ್ ಜನರು ತಮ್ಮ ಅಭಿಪ್ರಾಯವನ್ನು ನೀಡಲು ಇದ್ದ ಕೊನೆ ದಿನಾಂಕವನ್ನು ಮುಂದೂಡಲು ಸುತಾರಾಂ ಒಪ್ಪಿರಲಿಲ್ಲ. ಕೊನೆಗೆ ಮಧ್ಯಪ್ರವೇಶ ಮಾಡಿದ ದಿಲ್ಲಿ ಹೈಕೋರ್ಟು ಜನಾಭಿಪ್ರಾಯವನ್ನು ನೀಡುವ ಕೊನೆ ದಿನಾಂಕವನ್ನು ಆಗಸ್ಟ್ 11ಕ್ಕೆ ಮುಂದೂಡಿದೆ. ಕೆಲ ದಿನಗಳ ಕೆಳಗೆ ಕರ್ನಾಟಕ ಹೈಕೋರ್ಟು ಇಐಎ ಕರಡನ್ನು ಸ್ಥಳೀಯ ಭಾಷೆಗಳಲ್ಲಿ ಒದಗಿಸಲು ಸೂಚಿಸಿದೆ. ಆದರೆ, ಆಗಸ್ಟ್ 11ರೊಳಗೆ ನೈಜ ಜನಾಭಿಪ್ರಾಯ ಸಂಗ್ರಹಣೆ ಸಾಧ್ಯವೂ ಇಲ್ಲ. ಸರಕಾರಕ್ಕೆ ಅದು ಬೇಕಾಗಿಯೂ ಇಲ್ಲ. ಕೋರ್ಟುಗಳು ಸಹ ಇಂದಿನ ಸಂದರ್ಭದಲ್ಲಿ ಜನರು ಓದಿ ಅಭಿಪ್ರಾಯ ಹೇಳಲು ನೈಜವಾಗಿ ಬೇಕಿರುವಷ್ಟು ಸಮಯವನ್ನು ಒದಗಿಸಲು ಸಿದ್ಧವಿಲ್ಲದೆ ಹಾವು ಸಾಯದ ಕೋಲು ಮುರಿಯದ ಆಟವಾಡುತ್ತಿದೆ.

Post-Facto Clearance- ಅರ್ಥಾತ್-ನಾಶ ಮಾಡಿ ನಂತರ ಅನುಮತಿ ಕೇಳಿ

ಇಐಎ ಹಿಂದಿನ ಪರಿಕಲ್ಪನೆಯೇ ಯಾವುದೇ ಯೋಜನೆ ಪ್ರಾರಂಭವಾಗುವ ಮುನ್ನ ಅದರಿಂದ ಪರಿಸರಕ್ಕೆ ಆಗುವ ಹಾನಿಯ ಮೌಲ್ಯಮಾಪನವಾಗಿ ಪರ್ಯಾಯ ಯೋಜನೆಗಳನ್ನೋ ಅಥವಾ ಹಾನಿಯನ್ನು ಕಡಿಮೆ ಮಾಡುವ ಕ್ರಮಗಳನ್ನೋ ಕೈಗೊಳ್ಳಬೇಕೆಂಬುದಾಗಿದೆ. ಆದರೆ 2006ರಲ್ಲಿ ಯುಪಿಎ ಸರಕಾರ ತಂದ ತಿದ್ದುಪಡಿ ಕಾಯ್ದೆಯಲ್ಲಿ ಯಾವ್ಯಾವ ಉದ್ಯಮಗಳು ಪರಿಸರ ಅನುಮತಿಯಿಲ್ಲದೆ ಯೋಜನೆಯನ್ನು ಪ್ರಾರಂಭಿಸಿವೆಯೋ ಅವಕ್ಕೆ ಒಂದು ಬಾರಿ Post-Facto Clearance ನಿರ್ಮಾಣೋತ್ತರ ಅನುಮತಿಯನ್ನು ನೀಡುವ ಪ್ರಸ್ತಾಪವನ್ನು ಮಾಡಿತ್ತು. ಆದರೆ ಅದನ್ನು ಹಸಿರು ಪೀಠ ನಿರಾಕರಿಸಿತ್ತು ಮತ್ತು ಗುಜರಾತ್ ಸರಕಾರ ಇತ್ತೀಚೆಗೆ ಮೂರು ದೊಡ್ಡ ಕಾರ್ಖಾನೆಗಳಿಗೆ ನಿರ್ಮಾಣೋತ್ತರ ಅನುಮತಿ ನೀಡಿದ ಕ್ರಮವನ್ನು ಸಹ ಸುಪ್ರೀಂ ಕೋರ್ಟು ನಿಯಮ ಮತ್ತು ನೀತಿ ಬಾಹಿರ ಎಂದು ರದ್ದು ಮಾಡಿತ್ತು. ಇಷ್ಟೆಲ್ಲ ಆದ ನಂತರವೂ ಮೋದಿ ಸರಕಾರದ ಕರಡಿನಲ್ಲಿ ಮತ್ತೆ ನಿರ್ಮಾ ಣೋತ್ತರ ಅನುಮತಿಯ ಅವಕಾಶವನ್ನು ಪರೋಕ್ಷವಾಗಿ ತೂರಿಸಲಾಗಿದೆ.

ಕರಡಿನ ಸೆಕ್ಷನ್4 (3)ರ ಪ್ರಕಾರ ಎಂತಹ ಹಾನಿಕರ ಉದ್ಯಮಗಳು ಸಹ ಯಾವುದೇ ಪರಿಸರ ಅನುಮತಿಗೆ ಕಾಯದೆ ತಮ್ಮ ಹಾನಿಕರ ಯೋಜನೆಗೆ ಬೇಕಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು, ಬೇಲಿ ಹಾಕಿ, ಭೂಮಿ ಕೆಲಸ ಪ್ರಾರಂಭಿಸಬಹುದು. ಆ ನಂತರ ಪರಿಸರ ಅನುಮತಿ. ಹಾನಿಯ ಮೌಲ್ಯಮಾಪನ ಇತ್ಯಾದಿಗಳ ಶಾಸ್ತ್ರವನ್ನು ಪ್ರಾರಂಭಿಸಬಹುದು. ಆದರೆ ಒಮ್ಮೆ ಉದ್ಯಮಿಗಳು ಭೂ ಸ್ವಾಧೀನ ಇತ್ಯಾದಿ ನಿರ್ಮಾಣ ಕೆಲಸಗಳಿಗೆ ಬಂಡವಾಳವನ್ನು ಹೂಡಿಕೆ ಮಾಡಿದರೆ ಅದನ್ನೇ ಮುಂದಿಟ್ಟುಕೊಂಡು ಯಾವುದೇ ಹಾನಿಕರ ಯೋಜನೆಗಳು ರದ್ದಾಗದಂತೆ ಒತ್ತಡ ತರುತ್ತವೆ. ನಿರ್ಮಾಣ ಸಂಬಂಧಿ ಚಟುವಟಿಕೆಗಳಲ್ಲಿ ಹಣಹೂಡಿಕೆ ಮಾಡಿದ ಉದ್ಯಮಗಳನ್ನು ರದ್ದು ಮಾಡಲು ನ್ಯಾಯಾಲಯಗಳು ಹಿಂಜರಿಯುತ್ತವೆ. ಕಟ್ಟಿದ್ದರೂ ಕೆಡವಲು ಅದೇನು ಬಾಬರಿ ಮಸೀದಿಯಲ್ಲವಲ್ಲ..

ಹೀಗೆ ಈ ಹೊಸ ಕರಡು ಈಗಾಗಲೇ ಕಾರ್ಯನಿರತವಾಗಿರುವ ಉದ್ಯಮ ಗಳಿಗೆ ಮಾತ್ರವಲ್ಲದೆ ಹೊಸ ಉದ್ಯಮಗಳಿಗೂ ಯೋಜನೆಯನ್ನು ಪ್ರಾರಂಭಿಸಿ ಆ ನಂತರದಲ್ಲಿ ನಿಧಾನವಾಗಿ ಪರಿಸರ ಅನುಮತಿ ಪಡೆದುಕೊಳ್ಳಬಹುದಾದ ನಿರ್ಮಾಣೋತ್ತರ ಪರಿಸರ ಪರವಾನಿಗೆ ಅವಕಾಶವನ್ನು ಒದಗಿಸುತ್ತದೆ. ಆ ಮೂಲಕ ಪರಿಸರ ಅನುಮತಿ ಎಂಬ ಪರಿಕಲ್ಪನೆಯನ್ನೇ ಸರ್ವನಾಶ ಮಾಡಲಿದೆ.

ನೆಪಮಾತ್ರದ ಸಾರ್ವಜನಿಕ ಸಮಾಲೋಚನೆ: 

ಈ ವರೆಗೆ ಯಾವುದೇ ದೊಡ್ಡ ಯೋಜನೆಗೆ ಅವಕಾಶ ಕೊಡುವ ಮುನ್ನ ಪರಿಸರ ಪ್ರಭಾವ ಮೌಲ್ಯಮಾಪನದ ಭಾಗವಾಗಿ ಸಾರ್ವಜನಿಕರ ಸಮಾಲೋಚನೆ ಮಾಡುವುದು ಕಡ್ಡಾಯವಾಗಿತ್ತು ಹಾಗೂ ಅದು ಅರ್ಥಪೂರ್ಣವಾಗಿ ಆಗಲು ಸ್ಥಳೀಯ ಭಾಷೆಯಲ್ಲಿ ಯೋಜನೆಯ ವಿವರಗಳನ್ನು ಒದಗಿಸುವುದು ಮಾತ್ರವಲ್ಲದೆ ಸಾರ್ವಜನಿಕರಿಗೆ 30 ದಿನಗಳಷ್ಟು ಮುಂಚಿತವಾಗಿ ಮಾಹಿತಿ ಒದಗಿಸಲಾಗುತ್ತಿತ್ತು. ಈಗ ಈ ಅವಧಿಯನ್ನು ಯಾವುದೇ ಕಾರಣವಿಲ್ಲದೆ 20 ದಿನಕ್ಕೆ ಇಳಿಸಲಾಗಿದೆ. (ಪು. 47, Appendix 1, ಸೆಕ್ಷನ್3.1)

ಕೊಲೆಗಾರನೇ ಕೊಲೆಯ ವರದಿ ಮಾಡಬೇಕು:

ಮೋದಿ ಸರಕಾರ ಪ್ರಸ್ತಾಪಿಸಿರುವ ಈ ಕರಡಿನಲ್ಲಿ ಜಗತ್ತಿನಲ್ಲಿ ಎಲ್ಲೂ ಇಲ್ಲದ ನಿಯಮವನ್ನು ಸೇರಿಸಿ ಕಾರ್ಪೊರೇಟ್ ಉದ್ಯಮಿಗಳನ್ನು ಜನರಿಂದ ರಕ್ಷಿಸಲಾಗಿದೆ. ಇನ್ನು ಮುಂದೆ ಯಾವುದಾದರೂ ಕಾರ್ಖಾನೆಯು ಪರಿಸರ ನಿಯಮಗಳ ಉಲ್ಲಂಘನೆಯನ್ನು ಮಾಡಿದರೆ ಅದಕ್ಕೆ ಬಲಿಯಾದ ಜನರಾಗಲಿ ಅಥವಾ ಸ್ವತಂತ್ರ ವ್ಯಕ್ತಿಗಳಾಗಲಿ ಅದನ್ನು ಸರಕಾರದ ಗಮನಕ್ಕೆ ತರುವಂತಿಲ್ಲ. ತಂದರೂ ಅದನ್ನು ಸರಕಾರ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.!! ತಾವು ಮಾಡಿರುವ ಪರಿಸರ ನಿಯಮಗಳ ಉಲ್ಲಂಘನೆಯ ವರದಿಯನ್ನು ಉಲ್ಲಂಘನೆ ಮಾಡಿದ ಉದ್ಯಮಿಗಳೇ ಸರಕಾರಕ್ಕೆ ಒದಗಿಸಬೇಕು ಅಥವಾ ಸರಕಾರದ ಅಧಿಕಾರಿಗಳು ಅಥವಾ ಅವರಿಂದ ನಿಯುಕ್ತರಾದವರು ಕೊಟ್ಟ ವರದಿಯನ್ನು ಮಾತ್ರ ಸರಕಾರ ಒಪ್ಪಿಕೊಳ್ಳುತ್ತದೆ. ಕೊಲೆಗಾರನ ವರದಿಯನ್ನು ಒಪ್ಪಿಕೊಳ್ಳುವ ಈ ತಿದ್ದುಪಡಿ ಕೊಲೆಯಾದವರಿಗೆ ಇನ್ನೇನು ನ್ಯಾಯ ಒದಗಿಸುತ್ತದೆ? (ಪು. 29, ಸೆಕ್ಷನ್22.1.)

ದಂಡ ಕಟ್ಟಿ ದರೋಡೆ ಮುಂದುವರಿಸು:

ಮೋದಿ ಸರಕಾರವು ಈ ಹೊಸ ಪರಿಸರ ನೀತಿಯನ್ನು ತರುತ್ತಿರುವುದು ಪರಿಸರವನ್ನು ರಕ್ಷಿಸುವುದಕ್ಕಿಂತ ಹೆಚ್ಚಾಗಿ ಪರಿಸರ ಕಾನೂನುಗಳಿಂದ ಉದ್ಯಮಗಳನ್ನು ರಕ್ಷಿಸುವುದಕ್ಕಾಗಿ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ. ಈವರೆಗೆ ಪರಿಸರ ನಿಯಮಗಳ ಉಲ್ಲಂಘನೆಯನ್ನು ಮಾಡಿದರೆ ಕೂಡಲೇ ಅಂತಹ ಕಾರ್ಖಾನೆಗಳ ಪರವಾನಿಗೆಯನ್ನು ರದ್ದು ಪಡಿಸಿ ಉತ್ಪಾದನಾ ಚಟುವಟಿಕೆಗಳನ್ನು ನಿಲ್ಲಿಸಲಾಗುತ್ತಿತ್ತು. ಮತ್ತೆ ಉತ್ಪಾದನೆಯನ್ನು ಪ್ರಾರಂಭಿಸಲು ಆ ಕಂಪೆನಿಯು ಅಪಾರ ದಂಡವನ್ನು ಮಾತ್ರವಲ್ಲದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಖಾತರಿಯನು ್ನಒದಗಿಸಬೇಕಾಗಿತ್ತು. ಈ ಹೊಸ ನೀತಿಯಲ್ಲಿ ಅವೆಲ್ಲಾ ಅದಲು-ಬದಲಾಗಿದೆ. ಇನ್ನು ಮುಂದೆ ಪರಿಸರ ನೀತಿಗಳ ಉಲ್ಲಂಘನೆಗೆ ಇಲಾಖೆ ವಿಧಿಸುವ ದಂಡದ ಮೊತ್ತ ದಿನಕ್ಕೆ ಕೇವಲ 5,000 ರೂ. ಮಾತ್ರ ಹಾಗೂ ಉತ್ಪಾದನೆ ಚಟುವಟಿಕೆಗಳೂ ನಿಲ್ಲಬೇಕಿಲ್ಲ. ಬಳ್ಳಾರಿ ರೆಡ್ಡಿಗಳು ನಿಮಿಷಕ್ಕೆ 16,000ರೂ. ಮೌಲ್ಯದ ಅದಿರು ದರೋಡೆ ಮಾಡುತ್ತಿದ್ದುದನ್ನು ನೆನಪಿಸಿಕೊಂಡರೆ ದಿನಕ್ಕೆ 5,000 ರೂ. ದಂಡವಲ್ಲ..ಸರಕಾರ ಕೊಡುವ ಬಹುಮಾನ. (ಪು. 30,ಸೆಕ್ಷನ್22.8)

ಸರಕಾರ ನಿಮ್ಮ ಜೊತೆ ಇದ್ದರೆ ಎಲ್ಲಕ್ಕೂ ವಿನಾಯಿತಿ:
ಈ ವರೆಗೆ ರಕ್ಷಣಾ ಉದ್ದೇಶದ ಯೋಜನೆಗಳ ಬಗ್ಗೆ ಮಾತ್ರ ಸಾರ್ವಜನಿಕರಿಗೆ ಮಾಹಿತಿ ಕೊಡುತ್ತಿರಲಿಲ್ಲ. ಈಗ ಈ ಹೊಸ ನೀತಿಯಲ್ಲಿ projects of Strategic Consideration ಅಂದರೆ ಸರಕಾರವು ಯಾವೆಲ್ಲಾ ವ್ಯೆಹಾತ್ಮಕವಾಗಿ ಮಹತ್ವದ್ದು ಎಂದು ಘೋಷಿಸುವುದೋ ಅಂತಹ ಯಾವುದೇ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನು ಒದಗಿಸಲಾಗದು. (ಪು.9, ಸೆಕ್ಷನ್5 (7))

ನಿಯಮಾನುಷ್ಠಾನ ವರದಿ ಸಲ್ಲಿಕೆಗೂ ವಿನಾಯಿತಿ:
ಈ ವರೆಗೆ ಪ್ರತಿ ಆರು ತಿಂಗಳಿಗೊಮ್ಮೆ ಸರಕಾರ ಪರಿಸರ ನಿಯಮಗಳ ಅನುಷ್ಠಾನ ವರದಿಯನ್ನು ಸಲ್ಲಿಸಬೇಕಿತ್ತು. ಈಗ ಅದನ್ನು ವರ್ಷಕ್ಕೊಮ್ಮೆ ಮಾಡಿದರೆ ಸಾಕೆಂದು ವಿನಾಯಿತಿ ನೀಡಲಾಗಿದೆ. ಏಕಿರಬಹುದೆಂಬುದನ್ನು ವಿಶೇಷವಾಗಿ ವಿವರಿಸುವ ಅಗತ್ಯವಿದೆಯೇ?

ರಾಜ್ಯಗಳ ಅಧಿಕಾರಕ್ಕೆ ಅಂಕುಶ
ಈ ವರೆಗೆ ರಾಜ್ಯ ಸರಕಾರಗಳು ತಮ್ಮ ತಮ್ಮ ಪರಿಸರ ಪ್ರಭಾವ ಅಂದಾಜು ಸಮಿತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದವು. ಈ ಹೊಸ ಕರಡಿನ ಪ್ರಕಾರ ರಾಜ್ಯ ಸರಕಾರಗಳು 45 ದಿನಗಳೊಳಗೆ ಸಮಿತಿಯ ಅಧ್ಯಕ್ಷರ ಬಗ್ಗೆ ತಮ್ಮ ಸಲಹೆಗಳನ್ನು ಕಳಿಸಬಹುದು. ಅದನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ಕೇಂದ್ರಕ್ಕೆ ಇರುತ್ತದೆ. (ಪು.12 ಸೆಕ್ಷನ್7 (6) )

ಹೀಗೆ ಈ ಕರಡು ಒಂದೊಮ್ಮೆ ಕಾಯ್ದೆಯಾಗಿಬಿಟ್ಟರೆ ಪ್ರಕೃತಿಯ ಮೇಲೆ ದೊಡ್ಡ ಕಾರ್ಪೊರೇಟ್‌ಗಳು ನಡೆಸುವ ಹಾಗೂ ನಡೆಸುತ್ತಿರುವ ಎಲ್ಲಾ ದಾಳಿಗಳು ಶಾಸನಬದ್ಧವಾಗಿ ಬಿಡುತ್ತದೆ. ಅದೇ ಸಮಯದಲ್ಲಿ ಈ ಕಾಯ್ದೆಯು ಜನರಿಗಿದ್ದ ಎಲ್ಲಾ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಅಥವಾ ಅರ್ಥಹೀನಗೊಳಿಸುತ್ತದೆ. ಹಾಗೆಯೇ ರಾಜ್ಯ ಸರಕಾರದ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಇತ್ತೀಚೆಗೆ ಅಸ್ಸಾಮಿನ ತೈಲ ಸ್ಥಾವರದಲ್ಲಿ ಆದ ಸ್ಫೋಟ, ವಿಶಾಖಪಟ್ಟಣದ ಎಲ್ಜಿ ಪಾಲಿಮರ್ಸ್‌ನಲ್ಲಿ ಆದ ಸ್ಫೋಟಗಳು ಪರಿಸರ ನಿಯಮಗಳನ್ನು ಅನುಸರಿಸುವಲ್ಲಿ ತೋರಿದ ಬೇಜವಾಬ್ದಾರಿಯಿಂದ ಸಂಭವಿಸಿದ ಅವಘಡಗಳು. ಅಂತಹ ಬೇಜವಾಬ್ದಾರಿಗಳನ್ನು ನಿಯಂತ್ರಿಸಬೇಕಿದ್ದ ಸರಕಾರ ಈಗ ಅವನ್ನು ಅಧಿಕೃತವಾಗಿ ದೋಷಮುಕ್ತಗೊಳಿಸಲು ಹೊರಟಿದೆ.

ಹೀಗಾಗಿ ಈ EIA-2020 ಕರಡು ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ಯಾವುದೇ ಶಾಸನಾತ್ಮಕ ನಿರ್ಬಂಧಗಳಿಲ್ಲದೆ ಕಾರ್ಪೊರೇಟುಗಳಿಗೆ ಪರಭಾರೆ ಮಾಡುವ ಕಡೆಗೆ ಮೋದಿ ಸರಕಾರದ ಮತ್ತೊಂದು ಬೃಹತ್ ಹೆಜ್ಜೆಯಾಗಿದೆ. ಇದರ ಬಗ್ಗೆ ತಕರಾರುಗಳನ್ನು ಸಲ್ಲಿಸಲು ಆಗಸ್ಟ್11ರ ವರೆಗೆ ಅವಕಾಶವಿದೆ. ವಿಶೇಷ ನಿರೀಕ್ಷೆಗಳಿಲ್ಲದೆ ತಕರಾರು ಸಲ್ಲಿಸೋಣ. ಆದರೆ ಸಂಭವನೀಯ ಪರಿಸರ ಹತ್ಯೆಯ ವಿರುದ್ಧ ಈಗಿನಿಂದಲೇ ಜನರನ್ನು ಜಾಗೃತಗೊಳಿಸೋಣ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top