ಸ್ವಾತಂತ್ರ್ಯದ ವ್ಯಂಗ್ಯಚಿತ್ರಗಳು

ಮುಗ್ಧರ, ಎಳೆಯರ, ಬದ್ಧಭಾವುಕರ ಹೊರತಾಗಿ ಇನ್ಯಾರೂ ದೇಶದ ಸ್ವಾತಂತ್ರ್ಯವನ್ನು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಪ್ರತೀ ಹೆಜ್ಜೆಯೂ, ಪಥಸಂಚಲನವೂ, ದಾಪುಗಾಲೂ, ಭಾಷಣವೂ, ಪ್ರಶಸ್ತಿ-ಪುರಸ್ಕಾರಗಳೂ ಒಂದೊಂದು ನಿರಾಸೆಯನ್ನು, ಹತಾಶೆಯನ್ನು, ವ್ಯಂಗ್ಯವನ್ನು, ಅತೃಪ್ತಿಯನ್ನು, ಅಸಮಾಧಾನವನ್ನು ಸೃಷ್ಟಿಸಿವೆ.


ಎಷ್ಟೇ ಕಷ್ಟಗಳಿರಲಿ, ಪ್ರಜೆಗಳು ಸಹಜವಾಗಿಯೇ ಸ್ವಾತಂತ್ರ್ಯದಿನದ ಸಂದರ್ಭಕ್ಕೆ ಬಲಾತ್ಕಾರವಾಗಿ ಅಥವಾ ಕೃತಕವಾಗಿ ನಗುವನ್ನೂ, ಉತ್ಸಾಹವನ್ನೂ, ಗಾಂಭೀರ್ಯವನ್ನೂ, ಆಸೆ-ಆಶಯಗಳನ್ನೂ ತುಂಬಿಸಿಕೊಂಡು ಅಭಿವ್ಯಕ್ತಿಸುತ್ತಾರೆ. ಇದು ವಿದೇಶದಲ್ಲಿರುವ ಪ್ರಜೆಗಳನ್ನೂ ಬಿಟ್ಟಿಲ್ಲ; ಹಾಗೆಯೇ ಜೈಲಿನಲ್ಲಿರುವವರನ್ನೂ ಬಿಟ್ಟಿಲ್ಲ. ತಮಾಷೆಯೂ, ವಿಷಾದವೂ, ವ್ಯಂಗ್ಯವೂ ಅಂದರೆ ಕೈದಿಗಳೂ ಸ್ವಾತಂತ್ರ್ಯದ ದಿನವನ್ನು ಆಚರಿಸುವುದು! ಪಂಜರದಲ್ಲಿರುವ ಹಕ್ಕಿ ಹಾಡುತ್ತದೆಯೆಂದು ನಾವು ತಿಳಿಯುತ್ತೇವೆ; ಆದರೆ ಅದು ಅಳುತ್ತಿರುತ್ತದೆ. ಆ ಧ್ವನಿಯೂ ನಮಗೆ ಹಾಡಿನಂತೆ ಕೇಳುತ್ತಿರುತ್ತದೆ ಅಲ್ಲವೇ? ರಂಗಸ್ಥಳದಿಂದ ನೇಪಥ್ಯಕ್ಕೆ ಜಾರಿದ ಆನಂತರ-ರಾಜನ ಪಾತ್ರ ವಹಿಸಿದ ಸೇವಕನು ಸೇವಕನಾಗಿಯೂ ಸೇವಕನ ಪಾತ್ರ ವಹಿಸಿದ ಮಾಲಕನು ಮಾಲಕನಾಗಿಯೂ ಉಳಿವಂತೆ- ಪಾತ್ರಧಾರಿಗಳ ನೈಜಸ್ಥಿತಿ ಮರುಕಳಿಸಿ ಸ್ವಾತಂತ್ರ್ಯದ ಈ ಎಲ್ಲ ಕನಸು-ಉತ್ಸಾಹಗಳ ಸುಮುಹೂರ್ತ ಕಳೆದು ಮತ್ತೆ ನೆಲದ ಮೇಲೇ ನಿಲ್ಲಬೇಕಾದ ಸ್ಥಿತಿಯಲ್ಲಿ ಕನಸುಗಳೊಡೆದು ವಾಸ್ತವದ ಅರಿವಾಗುವುದು. ಮುಗ್ಧರ, ಎಳೆಯರ, ಬದ್ಧಭಾವುಕರ ಹೊರತಾಗಿ ಇನ್ಯಾರೂ ದೇಶದ ಸ್ವಾತಂತ್ರ್ಯವನ್ನು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಪ್ರತೀ ಹೆಜ್ಜೆಯೂ, ಪಥಸಂಚಲನವೂ, ದಾಪುಗಾಲೂ, ಭಾಷಣವೂ, ಪ್ರಶಸ್ತಿ-ಪುರಸ್ಕಾರಗಳೂ ಒಂದೊಂದು ನಿರಾಸೆಯನ್ನು, ಹತಾಶೆಯನ್ನು, ವ್ಯಂಗ್ಯವನ್ನು, ಅತೃಪ್ತಿಯನ್ನು, ಅಸಮಾಧಾನವನ್ನು ಸೃಷ್ಟಿಸಿವೆ. ಸರಳಿನ ಹಿಂದೆಯಿರುವ ಕೆಲವರಿಗಷ್ಟೇ ಸ್ವಾತಂತ್ರ್ಯದ ನಿರ್ಬಂಧವಲ್ಲ.

ಕೋವಿಡ್-19ರಂತಹ ಜಾಗತಿಕ ಸೋಂಕು ಎರಗಿ ಎಲ್ಲರಿಗೂ ಮುಖಕವಚ ಅನಿವಾರ್ಯವಾಗಿ ಮುಖಮುಚ್ಚಿ ಅಡ್ಡಾಡುವ ಸ್ಥಿತಿಯಲ್ಲಿರುವಾಗ ಸ್ವಾತಂತ್ರ್ಯ ಎಲ್ಲಿಯದು? ಆದರೂ ನಾವು ‘ಆತ್ಮ ನಿರ್ಭರತೆ’ಯ ಬಲೂನುಗಳನ್ನು ಹಾರಿಸಿದ್ದೇವೆ. ನಿಜಕ್ಕೂ ಕೋವಿಡ್-19ನ್ನು ಭಾರತವಾಗಲೀ ಜಗತ್ತಾಗಲೀ ಎದುರಿಸುತ್ತಿದೆಯೇ? ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಯೋಚಿಸಿದರೆ ನಾವು ಈ ಸೋಂಕಿನಿಂದ ತಪ್ಪಿಸಿಕೊಳ್ಳಲು ಅಡಗುದಾಣಗಳನ್ನು ಹುಡುಕುತ್ತಿದ್ದೇವೆ. 18 ದಿನಗಳ ಕುರುಕ್ಷೇತ್ರ ಯುದ್ಧವನ್ನು 21 ದಿನಗಳ ಕಾಲ ವಿಸ್ತರಿಸಿದಾಗ, ಇರಲಿ; ಕಲಿಕಾಲದಲ್ಲಿ ಈ 3 ದಿನಗಳ ವಿಸ್ತರಣೆಯೇನೂ ವಿಶೇಷವಲ್ಲ ಎಂದು ಭಾವಿಸಿದೆವು. ಆದರೆ 21 ದಿನಗಳು ಮುಗಿದು ಅರ್ಧ ವರ್ಷ ಸಮೀಪಿಸುತ್ತಿದೆ. 18ನೇ ದಿನದಂದು ದುರ್ಯೋಧನನು ವೈಶಂಪಾಯನ ಕೊಳದಲ್ಲಿ ಅಡಗಲು ಹೋದಾಗ ಯಾರಿಗೂ ಸುಳಿವು ಸಿಗದಿರಲಿ ಎಂದು ಹಿಮ್ಮುಖವಾಗಿ ಹೆಜ್ಜೆ ಹಾಕಿ ಕೊಳಕ್ಕಿಳಿದನಂತೆ. ಅವನ ಭೌತಿಕ ದೃಷ್ಟಿ ಮುಂದಕ್ಕೇ ಇದ್ದರೂ ಉದ್ದೇಶ ಹಿಂದಕ್ಕೆ ಚಲಿಸುವುದಿತ್ತು.

ಹೀಗೆಯೇ ದೇಶವಿಡೀ ಹಿಂದಕ್ಕೆ ಚಲಿಸಿ ಭೀತಮನವಾಗಿದೆ. ಆ ದೇಶದಲ್ಲಿ ಬಂತು ಸಾವು ಈ ದೇಶದಲ್ಲಿ ಬಂತು ಸಾವು ಎಂದುಕೊಳ್ಳುತ್ತಿರುವಾಗಲೇ ಸಾವಿನ ಧಪಧಪ ಹೆಜ್ಜೆಗಳು ನಮ್ಮ ಸನಿಹದಲ್ಲೇ ದಾಟುತ್ತಿರುವುದನ್ನು ಕೇಳುತ್ತಿದ್ದೇವೆ; ನೋಡುತ್ತಿದ್ದೇವೆ. ಯುದ್ಧಭೂಮಿಯಂತೆ ಹೆಣದ ಬಣವೆಗಳು ಸೃಷ್ಟಿಯಾಗುತ್ತಿವೆ. ಇಷ್ಟಾದರೂ ನಮ್ಮ ನಾಯಕರು ‘ಬಿದ್ದರೂ ಮೀಸೆಗೆ ಮಣ್ಣಾಗಿಲ್ಲ’ ಎಂದುಕೊಂಡು ಧೂಳನ್ನು ಕೊಡವಿಕೊಂಡು ಮೀಸೆ ತಿರುವುತ್ತಿದ್ದಾರೆ. ಆತ್ಮನಿರ್ಭರತೆಯ ಬದಲು ಆತ್ಮಾಭಿಮಾನವಿದ್ದರೆ ಭವಿಷ್ಯವಾದರೂ ನಮ್ಮನ್ನು ನೆನಪಿನಲ್ಲಿಟ್ಟೀತು. ಹಿನ್ನಡೆಯನ್ನು ಪರಂಪರೆಯತ್ತ ಸಾಗುವ ಹೆಜ್ಜೆಗಳೆಂದು ಸಮರ್ಥಿಸಿಕೊಳ್ಳುತ್ತ ಇಂಡಿಯಾವು ಭಾರತವಾಗುತ್ತಿದೆಯೆಂದು ಭ್ರಮಿಸುತ್ತ, ಆತ್ಮಸಮ್ಮಾನಗೊಳಿಸುತ್ತ ವಿದೂಷಕರಾಗುತ್ತಿದ್ದೇವೆ.

ದೇಶವು ಚುನಾಯಿತ ಸರ್ವಾಧಿಕಾರವನ್ನು ಹೊಂದಿದಂತಿದೆ. ಶೇ. 37 ಮತಪಡೆದು ಬಹುಮತ ಸ್ಥಾನಗಳನ್ನು ಪಡೆದ ಸರಕಾರವು 130 ಕೋಟಿ ಪ್ರಜೆಗಳ ಆಶೋತ್ತರವನ್ನು ತಾನು ಬಿಂಬಿಸುತ್ತಿದ್ದೇನೆಂದು ಬೀಗುತ್ತಿದೆ. ಜನಮತಗಣನೆ ಯಿಲ್ಲದೆಯೇ ಅತ್ಯಂತ ಮುಖ್ಯ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಎಲ್ಲದಕ್ಕೂ ಪ್ರಾತಿನಿಧಿಕ ಬಹುಮತ! ಐದು ವರ್ಷಗಳಿಗೆ ಜನರ ಭವಿಷ್ಯವು ಅಡವಿಟ್ಟಂತಿದೆ. ಒಪ್ಪದವರ ಸಂಖ್ಯೆ ಹೆಚ್ಚು. ಆದರೆ ಅವು ಹರಿಹಂಚಾದ ಮತಗಳು. ಈಗ ಹೇಗೇ ನಡೆದರೂ ಅದು ಬಹುಮತವೇ! ಸರಕಾರದ ಒಲವು- ನಿಲುವುಗಳನ್ನು ಚರ್ಚಿಸುವವರು ಯಾರು? ಆಳುವ ಪಕ್ಷದವರಿಗೆ ತಮ್ಮದೇ ಸರಕಾರದ ಸರಿ-ತಪ್ಪುಗಳನ್ನು ವ್ಯಾಖ್ಯಾನಿಸುವ, ವಿಮರ್ಶಿಸುವ ಸ್ವಾತಂತ್ರ್ಯವಿಲ್ಲ. ಇದು ಸಾಮಾನ್ಯ ಕಾರ್ಯಕರ್ತರನ್ನು ಮಾತ್ರವಲ್ಲ, ರಾಜ್ಯ-ಕೇಂದ್ರದ ಸಚಿವರ ಸಂಸದ/ಶಾಸಕರ ಪಾಡು ಕೂಡಾ. ಈ ದೇಶದ ಪ್ರಜಾತಂತ್ರದ ಬಹುದೊಡ್ಡ ವ್ಯಂಗ್ಯವೆಂದರೆ ಯಾವುದೇ ಪಕ್ಷದಲ್ಲೂ ರಾಜಕೀಯ ನಿಲುವುಗಳ ಬಗ್ಗೆ ಆಂತರಿಕ ಸ್ವಾತಂತ್ರ್ಯವೆಂಬುದೇ ಇಲ್ಲ. ಸರಕಾರಗಳ ಆಯವ್ಯಯ ಪಟ್ಟಿ ಮತ್ತಿತರ ಕಾನೂನುಗಳು ಮಂಡನೆಯಾದಾಗ ಇದು ಸ್ಪಷ್ಟವಾಗುತ್ತದೆ. ದಿಲ್ಲಿಯಿಂದ ಆರಂಭವಾಗಿ ಗ್ರಾಮಪಂಚಾಯತ್‌ನ ವರೆಗೆ ನಮ್ಮ ರಾಜಕೀಯ ನಾಯಕರು/ಕಾರ್ಯಕರ್ತರು ತಮ್ಮ ಪಕ್ಷದ ಅನುಕೂಲಕ್ಕಾಗಿ ಹೊಗಳುವುದನ್ನು/ಹಳಿಯುವುದನ್ನು ಅಭ್ಯಾಸಮಾಡಿಕೊಂಡು ಗಿಣಿಪಾಠ ಹೇಳುತ್ತಾರೆಯೇ ವಿನಾ ಯಾವುದನ್ನೂ ವಿಮರ್ಶಿಸುವುದಿಲ್ಲ.

ಇವರ ಅಭಿಪ್ರಾಯಗಳನ್ನು ಯಥಾವತ್ತಾಗಿ ಪ್ರಕಟಿಸುವ ಮಾಧ್ಯಮಗಳು ಒಂದೇ ಒಂದು ಅಡ್ಡ ಪ್ರಶ್ನೆಯನ್ನೆಸೆಯುವುದಿಲ್ಲ. ಬದಲಾಗಿ ಶೀಘ್ರಲಿಪಿಕಾರರ ಹಾಗೆ ಉಗುಳಿದ್ದನ್ನೆಲ್ಲ ಪುನರುಕ್ತತೆ ಮಾಡುತ್ತಾರೆ. ಸ್ವಾತಂತ್ರ್ಯದ ಪ್ರಯೋಜನಗಳನ್ನು ಯಾರೂ ಪಡೆಯುತ್ತಿಲ್ಲ; ಮುಖ್ಯವಾಗಿ ಬಹುಪಾಲು ಜನರಿಗೆ ಅಂತಹ ಇಚ್ಛಾಶಕ್ತಿಯೇ ಇಲ್ಲ. ಒಂದು ರೀತಿಯಲ್ಲಿ ವಿರೋಧ ಪಕ್ಷದವರು, ಇಲ್ಲವೇ ಮುಕ್ತಪ್ರಜೆಗಳು ಮಾತ್ರ ಈ ದೇಶದಲ್ಲಿ ಸ್ವಾತಂತ್ರ್ಯ ವನ್ನು ಹೊಂದಿದ್ದಾರೆ. ಏಕೆಂದರೆ ಅವರು ಆಳುವವರ ಲೋಪದೋಷಗಳನ್ನು ಟೀಕಿಸಬಹುದು. ಆದರೆ ಒಂದು ಹಂತ ತಲುಪಿದ ಆನಂತರ ಇಂತಹ ಟೀಕೆಗಳೂ ಪ್ರಯೋಜನಕ್ಕೆ ಬಾರದಿದ್ದಾಗ ಹತಾಶ ಸ್ಥಿತಿ ಬರುವುದೂ ಇದೆ. ಸರಕಾರದ ಗುಣಾವಗುಣಗಳನ್ನು ವಿಮರ್ಶಿಸಲು ಇರುವ ಒಂದು ಸಾಧನವೆಂದರೆ ಅವನ್ನು ಕಾನೂನಿನ ನಿಕಷಕ್ಕೆ ಒಡ್ಡುವುದು. ಆದರೆ ಅಲ್ಲೂ ಈಗ ಮೊದಲಿನ ವಿಶ್ವಾಸ ಉಳಿದಿಲ್ಲ. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಪ್ರಜಾಪ್ರಭುತ್ವದ ಸಾಕ್ಷಿಪ್ರಜ್ಞೆಯಂತೆ ಇರುತ್ತಿದ್ದವು. ಸರಕಾರ ಎಡವಿದಾಗೆಲ್ಲ ನ್ಯಾಯದ ತಕ್ಕಡಿ ಅವನ್ನು ಒಂದು ತಹಬಂದಿಗೆ ತರುತ್ತಿದ್ದವು. ಆದರೆ ಸದ್ಯದ ಸ್ಥಿತಿಯು ಬಹಳ ಉತ್ಸಾಹದಾಯಕವಾಗಿಲ್ಲ. ಇವು ನ್ಯಾಯಾಲಯಗಳ ಬದ್ಧತೆಯ ಪ್ರಶ್ನೆ ಮಾತ್ರವಲ್ಲ, ಗುಣಮಟ್ಟದ ಪ್ರಶ್ನೆಯೂ ಹೌದು. ಹಿಂದೆಲ್ಲ ನ್ಯಾಯಾಲಯಗಳ ತೀರ್ಪುಗಳು ಬಹುಕಾಲ ಊರ್ಜಿತದಲ್ಲಿರುತ್ತಿದ್ದವು.

ಆದರೆ ಈಗ ತೀರ್ಪುಗಳು ಯಾವಾಗ ಅನೂರ್ಜಿತವಾಗುತ್ತವೋ ಹೇಳುವುದು ಕಷ್ಟ. ಶಬರಿಮಲೆ ತೀರ್ಪಿನ ಕುರಿತ ಪುನರ್ವಿಮರ್ಶೆಯ ನೀತಿ ನಮ್ಮ ಕಣ್ಣಮುಂದಿದೆ. ಸರಕಾರವು ವಿವಿಧ ಕ್ರೂರ ಕಾನೂನುಗಳ ಮೂಲಕ ತನಗಾಗದವರನ್ನು ತನ್ನ ಕಬಂಧ ಬಾಹುಗಳೊಳಗೆ ಸಿಲುಕಿಸಿದಾಗ ಅವರ ಬಿಡುಗಡೆ ನ್ಯಾಯಾಲಯಗಳ ಹಕ್ಕು ಮಾತ್ರವಲ್ಲ, ಕರ್ತವ್ಯವೂ ಆಗಿದೆ ಎಂದು ನಂಬುವ ನ್ಯಾಯಾಂಗ ನಮ್ಮಲ್ಲಿತ್ತು; ಈಗ ಅವು ತಮ್ಮ ಮನಸೋ ಇಚ್ಛೆ ವರ್ತಿಸಲಾರಂಭಿಸಿವೆ. ಸಂವಿಧಾನದ ತಿದ್ದುಪಡಿಗಾದರೂ ಒಂದು ಗೊತ್ತಾದ ನಿಯಮಾವಳಿಯಿದೆ; ನ್ಯಾಯಾಲಯಗಳ ತೀರ್ಪು ಬದಲಾಗುವುದಕ್ಕೆ ಯಾವ ಗೊತ್ತಾದ ನಿಯಮವೂ ಇಲ್ಲವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ನಮ್ಮ ನ್ಯಾಯಾಲಯಗಳ ವೈಫಲ್ಯವು ಸ್ಪಷ್ಟವಿದೆ. ಸರಕಾರದ ಅನುಕೂಲವು ನ್ಯಾಯಾಲಯಗಳ ಅನುಕೂಲವಾಗಿರಬಾರದು ಎಂಬ ಸಿದ್ಧಾಂತವು ಸಡಿಲವಾಗುತ್ತಿದೆ. ಸದ್ಯ ದೇಶದಲ್ಲಿ ಆಳುವ ಮತ್ತು ವಿರೋಧ ಪಕ್ಷಗಳೆರಡೂ ಸ್ವಾತಂತ್ರ್ಯದ ವ್ಯಂಗ್ಯಗಳಾಗಿವೆ. ಜನರು ಸರಕಾರದ ಹಂಗಿನಲ್ಲಿ ಬದುಕುವಂತಿದ್ದಾರೆ. ಯಾರಿಗೂ ಧನಾತ್ಮಕವಾದ ಕಾರ್ಯಕ್ರಮಗಳಿಲ್ಲ. ಸರಕಾರವು ಆರ್ಥಿಕತೆ, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಜನರ ನಂಬಿಕೆಯನ್ನು ಹುಸಿಗೊಳಿಸುವಷ್ಟು ತಪ್ಪುಹೆಜ್ಜೆಗಳನ್ನಿಡುತ್ತಿದ್ದರೂ ಧರ್ಮ, ದೇವರು, ಜಾತಿ-ಮತ ಇಂತಹ ಕೃತಕ ಗಡಿರೇಖೆಗಳನ್ನೇ ಉಲ್ಬಣಗೊಳಿಸುತ್ತ ಮೋಡಿಮಾಡುತ್ತ ಮುಂದುವರಿಯುತ್ತಿದೆೆ; ಜನರು ಯಾವುದೋ ಸಮ್ಮೋಹಿನಿಗೊಳಪಟ್ಟವರಂತೆ ಸುಮ್ಮನಿದ್ದಾರೆ. ಇದಕ್ಕೆ ಸರಿಯಾಗುವಂತೆ ವಿರೋಧ ಪಕ್ಷಗಳು ಗೊತ್ತುಗುರಿಯಿಲ್ಲದೆ ವರ್ತಿಸುತ್ತಿವೆ.

ವಿರೋಧ ಪಕ್ಷಗಳವರು ಸಮಯ-ಸಂದರ್ಭ ನೋಡದೆ, ತಮ್ಮಿಳಗಿನ ಅತಂತ್ರ ಸ್ಥಿತಿಯನ್ನು ಸರಿಪಡಿಸದೆ ಒಂದೋ ಸರಕಾರವನ್ನು ಹಾಸ್ಯಾಸ್ಪದವಾಗಿ ಕಾಣುವಂತೆ ಟೀಕಿಸುವುದು ಇಲ್ಲವೇ ತಮ್ಮಾಳಗೆ ತತ್ವ-ಸಿದ್ಧಾಂತಗಳನ್ನು ಮೀರಿ ಜಗಳಾಡುವುದು ಎಂಬಂತೆ ವರ್ತಿಸುತ್ತಿದ್ದಾರೆ. ಪ್ರಾಯಃ ವಿರೋಧ ಪಕ್ಷಗಳ ಇಂತಹ ರಾಜಕಾರಣವೇ ಆಳುವವರಿಗೆ ಸುಗ್ರಾಸವನ್ನು ನೀಡಿದೆ. ಈಚೆಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿನೀತಿಯು ಅದರ ಆಳುವ ಸಾಮರ್ಥ್ಯವನ್ನೇ ಪ್ರಶ್ನಿಸುವಂತಿದೆ. ಸಂಕುಚಿತ ಆಸೆ ಆಕಾಂಕ್ಷೆಗಳು ಈ ದೇಶದ ಈ ತಲೆಮಾರಿನ ರಾಜಕೀಯದ ಹುಟ್ಟುಗುಣಗಳೇನೋ ಎಂಬಂತಿದೆ. ಮಹಾಭಾರತವು ನಾಯಕತ್ವದ ಕುರಿತು ಹೇಳುವ ಮಾತುಗಳು, ನೀಡುವ ದೃಷ್ಟಾಂತಗಳು ಇಂದು ಬಹುಮುಖ್ಯವಾಗುತ್ತವೆ. ಮಾಸ್ತಿ ಇದನ್ನು ಉದಾಹರಿಸಿದ್ದಾರೆ: ರಾಜಸತ್ತೆಯಲ್ಲಿ ಒಬ್ಬ ನಾಯಕನಿದ್ದ; ಒಂದು ಮಂತ್ರ-ಅಂದರೆ ಒಂದು ರಾಜನೀತಿ-ಇತ್ತು. ಒಂದು ಕಾಲ (ವರ್ಣಾಶ್ರಮಗಳು ಪ್ರಚಲಿತವಾಗಿದ್ದ- ಪ್ರಾಯಃ ವೇದಪೂರ್ವ-)ದಲ್ಲಿ ಬ್ರಾಹ್ಮಣರು, ವೈಶ್ಯರು, ಶೂದ್ರರು ಕ್ಷತ್ರಿಯರನ್ನು ಎದುರಿಸಬೇಕಾಯಿತು. ಇವರ ಸಂಖ್ಯೆ ಹೆಚ್ಚು; ಕ್ಷತ್ರಿಯರ ಸಂಖ್ಯೆ ಕಡಿಮೆ. ಆದರೂ ಒಂದೊಂದು ಸಲವೂ ಇವರು ಆ ಅಲ್ಪಸಂಖ್ಯೆಯ ವಿರೋಧಿಗಳೆದುರು ಸೋತರು. ಕೊನೆಗೆ ಮೂರೂ ವರ್ಣಗಳ ನಾಯಕರು ಕ್ಷತ್ರಿಯರ ಬಳಿಗೆ ಹೋಗಿ ‘‘ನೀವು ಕಡಿಮೆ ಸಂಖ್ಯೆಯವರಾದರೂ ಪ್ರತೀ ಸಲವೂ ಗೆಲ್ಲುತ್ತೀರಲ್ಲ, ಇದು ಹೇಗೆ?’’ ಎಂದು ಕೇಳಿದರು.

ಅದಕ್ಕೆ ಕ್ಷತ್ರಿಯರು ‘‘ನಾವು ನಮ್ಮಲ್ಲೇ ಹೆಚ್ಚು ಬುದ್ಧಿವಂತನಾದ ಒಬ್ಬನನ್ನು ನಾಯಕನನ್ನಾಗಿ ಮಾಡಿಕೊಂಡು ಅವನು ಹೇಳಿದಂತೆ ಕೇಳುತ್ತೇವೆ. ನೀವುಗಳಾದರೋ ಪ್ರತಿಯೊಬ್ಬರೂ ಬುದ್ಧಿವಂತರು. ಒಬ್ಬೊಬ್ಬನೂ ಅವರವರಿಗೆ ತೋರಿದಂತೆ ನಡೆಯುತ್ತೀರಿ’’ ಎಂದರು. ಈ ದೇಶದ ಪ್ರಸಕ್ತ ಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ರಾಜಸ್ಥಾನದ ರಾಜಕೀಯ ಮೇಲಾಟದಲ್ಲಿ ಬಹುಜನ ಸಮಾಜ ಪಕ್ಷ ನಡೆದುಕೊಂಡ ರೀತಿಯು ಭಾಜಪಕ್ಕೆ ಬಹುದೊಡ್ಡ ಅನುಕೂಲವನ್ನೇ ಮಾಡಿಕೊಡಬಹುದಾಗಿತ್ತು. ಮಾಸ್ತಿ ಇನ್ನೂ ಒಂದು ಕತೆಯನ್ನು ಹೇಳುತ್ತಾರೆ: ಬೇಡನೊಬ್ಬನು ಕಾಡಿನಲ್ಲಿ ಬಲೆಯೊಡ್ಡಿದನು. ಎರಡು ಹಕ್ಕಿಗಳು ಅದರಲ್ಲಿ ಸಿಲುಕಿಕೊಂಡವು. ಅವು ಒಗ್ಗಟ್ಟಾಗಿ ರೆಕ್ಕೆ ಬಡಿದು ಬಲೆಯೊಂದಿಗೇ ಹಾರಿಹೋದವು. ಅವು ಓಡುತ್ತಿರುವ ದಿಕ್ಕಿನಲ್ಲೇ ಬೇಡನು ನೆಲದ ಮೇಲೆ ಓಡುತ್ತಿದ್ದನು. ಇದನ್ನು ನೋಡಿದ ಒಬ್ಬನು ‘‘ಅಯ್ಯಿ, ಇದೇನು? ಬಲೆಯನ್ನು ಹೊತ್ತು ಓಡುತ್ತಿರುವ ಹಕ್ಕಿಗಳು ನಿನಗೆ ಸಿಕ್ಕಿಯಾವೇ?’’ ಎಂದು ಕೇಳಿದನು. ಅದಕ್ಕೆ ಬೇಡನು ‘‘ಎರಡೂ ಸೇರಿ ಈಗ ಏನೋ ಹೊತ್ತು ಹಾರುತ್ತಿವೆ ನಿಜ. ಯಾವಾಗ ಇವುಗಳೊಳಗೆ ವಿವಾದ ಹುಟ್ಟುತ್ತದೆ, ಆಗ ಇವುಗಳ ಜೊತೆ ತಪ್ಪುತ್ತದೆ ಮತ್ತು ಈ ಹಾರಾಟ ನಿಲ್ಲುತ್ತದೆ. ಹಕ್ಕಿಗಳು ಬಲೆಯೊಡನೆ ನೆಲಕ್ಕೆ ಬೀಳುತ್ತವೆ, ನನ್ನ ಕೈಗೆ ಸಿಗುತ್ತವೆ’’ ಎಂದನು.

ತ್ಯಜೀದೇಕಂ ಎಂಬ ತತ್ವವು ಹಿಂದೆ ಇತ್ತು: ಸಂಸಾರಕ್ಕಾಗಿ ವೈಯಕ್ತಿಕತೆಯನ್ನು, ಗ್ರಾಮಹಿತಕ್ಕಾಗಿ ಸಂಸಾರವನ್ನು, ರಾಷ್ಟ್ರಹಿತಕ್ಕಾಗಿ ಜನಪದರ ಹಿತವನ್ನು, ಬಿಡಬೇಕಾದ್ದು ಮನುಷ್ಯಧರ್ಮ. ಹಿರಿಯ ಆಶಯಕ್ಕಾಗಿ ಕಿರಿಯ ಆಶಯವನ್ನು ಬಿಡಬೇಕು.

ಇವೆಲ್ಲ ಮನುಷ್ಯನಿಗೆ ಪಾಠ, ಅನುಭವ ಎರಡನ್ನೂ ಕಲಿಸಬೇಕು. ಆದರೆ ಮನುಷ್ಯನಿಗೆ ಎಲ್ಲಕ್ಕಿಂತ ಮುಖ್ಯ ಸ್ವಾತಂತ್ರ್ಯ. ಅದಕ್ಕಿಂತಲೂ ಮುಖ್ಯ ಸ್ವೇಚ್ಛೆ. ಈ ಸ್ವೇಚ್ಛೆಗೆ ಸಮೂಹ ಪ್ರಜ್ಞೆಯಾಗಲೀ ಸಾಮಾಜಿಕ ಹೊಣೆಯಾಗಲೀ ಇರುವುದಿಲ್ಲ. ಸ್ವೇಚ್ಛೆಯೆಂಬುದು ಯಾವಾಗಲೂ ಸ್ವಾರ್ಥಪರ. ಆದ್ದರಿಂದ ಅವು ವಿವೇಕವನ್ನು ಬಲಿಕೊಟ್ಟು ತಾವೂ ಸಾಯುತ್ತವೆ. ದೀಪಕ್ಕೆ ಬೀಳುವ ಹುಳಗಳಿಗೆ ಬೆಂಕಿ ತಂದೊಡ್ಡುವ ಅಪಾಯದ ಪಾಠ ಹೇಳುವವರು ಯಾರು?
ಗೆಲುವು ಅನ್ನುವುದು ದೇವರ ವರದಂತೆ. ಅದನ್ನು ದೇವತೆಗಳೂ ಪಡೆಯುತ್ತಿದ್ದರು; ದಾನವರೂ ಪಡೆಯುತ್ತಿದ್ದರು. ಒಂದಷ್ಟು ಕಾಲ ಎಲ್ಲರಿಗೂ ವೈಭೋಗ. ಎಷ್ಟೇ ಕೆಟ್ಟದ್ದಾದರೂ ಪ್ರತೀ(ಯೊಬ್ಬನ) ಯುಗವೂ ಒಂದು ಅಂತ್ಯವನ್ನು ಕಾಣುತ್ತದೆ; ಹೊಸದಕ್ಕೆ ದಾರಿ ಮಾಡಿಕೊಡುತ್ತದೆ. ಆ ಹೊಸದು ಒಳ್ಳೆಯದಾಗುವುದು ಕಾಲದ ಅದೃಷ್ಟ; ದೇಶದ ಅದೃಷ್ಟ.

ಸ್ವಾತಂತ್ರ್ಯವು ಇಂತಹ ಅನೇಕ ವ್ಯಂಗ್ಯಗಳಿಗೆ ದಾರಿಯಾಗುತ್ತದೆ. ಕೋವಿಡ್ ಅಲ್ಲ, ಇದಕ್ಕಿಂತ ಮಹಾಮಾರಿ ಬಂದರೂ ದೇಶವನ್ನು ಬಲಿಕೊಡುವವರು ಆ ಕೆಲಸವನ್ನು ಬಿಟ್ಟುಕೊಡುವುದಿಲ್ಲ. ಮರವನ್ನು ಕಡಿದು ನೆರಳನ್ನು ಬಯಸುವವರಿಂದ ಎಂತಹ ಸುಕ್ಷೇಮವನ್ನು ನಿರೀಕ್ಷಿಸಬಹುದು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top