ಕೊರೋನಾವತಾರ

ಕೊರೋನಕ್ಕೆ ಮಾತು ಬಂದರೆ ಅದು ಹೀಗೆ ಹೇಳಬಹುದು: ಪುರಾಣಗಳಿರುವುದೇ ಬದುಕಿನ ಹಾದಿಗೆ ಬೆಳಕು ತೋರುವುದಕ್ಕೆ. ಅವು ನಾವಿಂದು ಮತವೆಂಬ ಹೆಸರಿನಲ್ಲಿ ವ್ಯಾಖ್ಯಾನಿಸುವ ಧರ್ಮದ ಸ್ಥಾಪನೆಗಾಗಲೀ, ಧರ್ಮದ ಹೆಸರಿನಲ್ಲಿ ದ್ವೇಷವನ್ನು ಪ್ರೇರೇಪಿಸವುದಕ್ಕಾಗಲೀ ಅಲ್ಲ. ಧರ್ಮಗ್ರಂಥಗಳೆಂದೇ ಬರೆದವೂ ಕೂಡ ಬದುಕನ್ನು ಹಸನು ಮಾಡುವುದಕ್ಕಿಂತ ಹೆಚ್ಚಾಗಿ ಸ್ಥಾಪಿತ ಹಿತಾಸಕ್ತಿಗಳನ್ನು ಪೋಷಿಸುವ ಕೆಲಸವನ್ನೇ ಮಾಡುತ್ತಿರುವುದು ಜಗತ್ತಿನ ವಿದ್ಯಮಾನಗಳಲ್ಲೊಂದು.


ದಶಾವತಾರದ ಕತೆ ಪ್ರಸಿದ್ಧವಾದದ್ದು. ಕೊರೋನ ಕಾಲದ ವ್ಯಥೆಯಲ್ಲಿ ಹರಿಕತೆಯಷ್ಟು ಒಳ್ಳೆಯ ಕಥಾಕಾಲಕ್ಷೇಪ ಇನ್ನೊಂದಿರಲಿಕ್ಕಿಲ್ಲ! ಅದಕ್ಕಾಗಿ ಈ ಕೊಲಾಜ್ ಕಥೆ: ಈ ದೇವರುಗಳು ಸೃಷ್ಟಿ-ಸ್ಥಿತಿ-ಲಯಕಾರಕರಾಗಿ ವಿಚಿತ್ರವಾದ ಬಿಕ್ಕಟ್ಟುಗಳನ್ನೂ ಇಕ್ಕಟ್ಟುಗಳನ್ನೂ ತಂದುಹಾಕುತ್ತಾರೆ. ಹಿರಣ್ಯಕಶಿಪುವಿನ ವಧೆಗಾಗಿಯೇ ದೇವರೆಂಬ ಮಹಾವಿಷ್ಣುವು ನರಸಿಂಹಾವತಾರವನ್ನು ಎತ್ತಬೇಕಾಯಿತು. ರಾಮ, ಪರಶುರಾಮ, ಕೃಷ್ಣ, ಈ ಅವತಾರಗಳ ಹೊರತಾಗಿ ಇನ್ನುಳಿದ ಅವತಾರಗಳೆಲ್ಲ ಒಂದೊಂದು ಅಂಕದ ನಾಟಕಕ್ಕೆ ಪಾತ್ರವಹಿಸಿ ಪ್ರದರ್ಶನ ನೀಡಿದಂತಿದೆ. ಹಿರಣ್ಯಕಶಿಪು ಭಾರೀ ತಪಸ್ಸು ಮಾಡಿ ವರ ಪಡೆದ. ಸಾವೇ ಬರಬಾರದೆಂಬ ವರ ಬೇಡಿದರೂ ಅದು ದಕ್ಕಲಿಲ್ಲ. ದೇವರುಗಳ ವ್ಯವಹಾರಗಳೇ ಹಾಗೆ. ಅವು ಬೇಷರತ್ ಅಲ್ಲ. ಷೇರ್ ಅಪ್ಲಿಕೇಷನ್‌ಗಳ ಹಾಗೆ ನಿಯಮಗಳಿಗೆ ಬಂಧಿತವಾದದ್ದು. ಕೊನೆಗೂ ಆತನಿಗೆ ಹಗಲು-ಇರುಳಿನಲ್ಲಾಗಲೀ, ಭೂಮಿ-ಆಕಾಶಗಳಲ್ಲಿ, ಹೊರಗೂ-ಒಳಗೂ, ಮನುಷ್ಯ-ಪ್ರಾಣಿಗಳಿಂದ ಕೈ-ಆಯುಧದಿಂದಲೂ ಸಾವಿಲ್ಲದಂತಹ ಒಂದು ವರ ದಕ್ಕಿತು. ಇದನ್ನು ಮೀರಿ ಆತ ಸಾಯಬೇಕಾದರೆ ಅದಕ್ಕೆ ನಿಮಿತ್ತಗಳನ್ನು ಕಂಡುಹಿಡಿಯಬೇಕು; ತೀವ್ರ ಸಂಶೋಧನೆೆಯಾಗಬೇಕು. ಹಿರಣ್ಯಕಶಿಪು ಪುಣ್ಯವಂತ. ಪ್ರಹ್ಲಾದನೆಂಬ ಭಾಗವತಭಕ್ತನನ್ನು ಮಗನಾಗಿ ಪಡೆದ. ಆದರೆ ವರಮಹಾಬಲ ಗರ್ವಿತನಾದ ಹಿರಣ್ಯಕಶಿಪುವಿಗೆ ವಿಷ್ಣುವಿನ ಮೇಲೆ ಜನ್ಮಾಂತರದ ದ್ವೇಷ. (ಯಶವಂತ ಸಿನ್ಹಾ ಮೋದಿಯವರನ್ನು ವಿರೋಧಿಸಿದರೂ ಅವರ ಮಗ ಜಯಂತ ಸಿನ್ಹಾ ಮೋದಿ ಸಂಪುಟದ ಮಂತ್ರಿಯಾದ ಹಾಗೆ!) ಆತನ ತಮ್ಮ ಹಿರಣ್ಯಾಕ್ಷನನ್ನು ಇದೇ ಮಹಾವಿಷ್ಣು ವರಾಹಾವತಾರವೆತ್ತಿ ಕೊಂದಿದ್ದ. ಹಿರಣ್ಯಕಶಿಪು ಸಾಯಬೇಕಲ್ಲ! ಮಹಾವಿಷ್ಣು ಅದನ್ನೂ ಸಾಧಿಸಿದ. ತನ್ನ ಸ್ಫುರದ್ರೂಪಕ್ಕೊಲ್ಲದ ಮತ್ಸ್ಯ, ಕೂರ್ಮ, ವರಾಹಗಳಂತಹ ಮಾಂಸಾಹಾರಿ ಅವತಾರಗಳನ್ನೆತ್ತಿ ಆತನಿಗೆ ಅನುಭವವಿತ್ತು. ಇವು ಡಾರ್ವಿನ್ನನ ಜೀವ ವಿಕಾಸವಾದದ ಒಂದೊಂದು ಹಂತದಂತಿದ್ದವು. ಇವುಗಳ ಮುಂದುವರಿದ ಹೆಜ್ಜೆಯಾಗಿ ದೇವರು ಮನುಷ್ಯನೂ ಅಲ್ಲದ, ಪ್ರಾಣಿಯೂ ಅಲ್ಲದ ಹೊಸಬಗೆಯ ವೇಷವನ್ನು ತೊಟ್ಟ. ಕಂಭದೊಳಗಿಂದ ನೇರ ಹಾರಿ ಹಗಲೂ-ಇರುಳೂ ಅಲ್ಲದ, ಮುಸ್ಸಂಜೆಯ ಹೊತ್ತಿನಲ್ಲಿ, ಹೊರಗೂ-ಒಳಗೂ ಅಲ್ಲದ ಹೊಸ್ತಿಲಲ್ಲಿ, ಭೂಮಿಯೂ-ಆಕಾಶವೂ ಅಲ್ಲದ ತೊಡೆಯ ಮೇಲೆ ಮಲಗಿಸಿಕೊಂಡು, ಆಯುಧವೂ-ಕೈಯೂ ಅಲ್ಲದ ಉಗುರಿನಿಂದಲೇ ಹಿರಣ್ಯಕಶಿಪುವಿನ ಹೊಟ್ಟೆಯನ್ನು ಸೀಳಿದ. ತಂದೆಯನ್ನು ಕೊಂದು ಮಗನನ್ನು ಸ್ಥಾಪಿಸಿದ. ಹರಿದಾಸರು ಈ ನರಸಿಂಹನು ದುರುಳ ರಕ್ಕಸನ ಹೊಟ್ಟೆಯನ್ನು ಸೀಳಿದ್ದಕ್ಕೂ ಒಂದು ಹೃದ್ಯ ವಿವರಣೆಯನ್ನು ನೀಡುತ್ತಾರೆ: ಆತನ ಹೊಟ್ಟೆಯೊಳಗೆ ಪ್ರಹ್ಲಾದನಂತಹ ಇನ್ನೊಬ್ಬನಿದ್ದಾನೆಯೇ ಎಂದು ನರಸಿಂಹ ಹುಡುಕಿದನಂತೆ! ಹೀಗೆ ಸತ್ತ ಹಿರಣ್ಯಕಶಿಪುವಿನ ಮಗ ಪ್ರಹ್ಲಾದನು ಹಿರಣ್ಯಕಶಿಪುವಿನಷ್ಟು ಪುಣ್ಯವಂತನಲ್ಲ. ಬಲಿಯಂತಹ ರಾಜಸ ಸ್ವರೂಪದ ಮಗನನ್ನು ಪಡೆದ. ಆತನನ್ನು ಪಾತಾಳಕ್ಕೆ ತಳ್ಳಲು ಮತ್ತೆ ಇದೇ ವಿಷ್ಣು ವಾಮನಾವತಾರ ತಾಳಿ ಬರಬೇಕಾಯಿತು. ಅತ್ತ ತಂದೆಯೂ ಇತ್ತ ಮಗನೂ ಭಗವಂತನಿಂದಲೇ ಪತನಹೊಂದಿದ್ದು ಪ್ರಹ್ಲಾದನ ದುರದೃಷ್ಟ.

ಇಲ್ಲೇ ಸುಖವಾದ ಬದುಕು ಎಂದರೇನು ಎಂಬ ಜಿಜ್ಞಾಸೆ ಹುಟ್ಟುತ್ತದೆ. ತಾನು ಸುಖಿಯಾಗಿದ್ದರೆ ಸಾಕೋ, ಅಥವಾ ತನ್ನ ಪರಂಪರೆ ಅಂದರೆ ಗತ, ಮತ್ತು ಪ್ರಯೋಗ ಅಂದರೆ ಭವಿಷ್ಯವೂ ಸುಖಿಯಾಗಿರಬೇಕೋ ಎಂಬ ತಾರ್ಕಿಕ ಪ್ರಶ್ನೆಗಳನ್ನೆತ್ತುತ್ತದೆ. ತಾನೆಷ್ಟೇ ಕಷ್ಟಪಟ್ಟರೂ ಲೋಕ ಸುಖವಾಗಿರಬೇಕೆಂಬ ನಿಲುವೇ ಸುಖವೇ ಎಂಬುದೂ ಪ್ರಶ್ನಾರ್ಹವೇ. ಲೋಕ ಎಂದೂ ಸುಖವಾಗಿರುವುದಿಲ್ಲ. ಅಲ್ಲಿ ದಳ್ಳುರಿಗಳಿರುತ್ತವೆ; ತಲ್ಲಣಗಳಿರುತ್ತವೆ. ಆದ್ದರಿಂದ ಇರುವ ಕೆಲವೇ ವರ್ಷಗಳ ಬದುಕಿನಲ್ಲಿ ಸಾಲಮಾಡಿಯಾದರೂ ತುಪ್ಪತಿನ್ನಬಹುದೆಂಬ ಚಾರ್ವಾಕ ತರ್ಕವೂ ಸರಿಯೇ. ಪುರಾಣಗಳು ಇವನ್ನೂ ಒದಗಿಸಿವೆ.

ಮುಂದೆ ರಾಮಾಯಣ-ಮಹಾಭಾರತಕ್ಕೆ ಬರೋಣ. ಎರಡೂ ಕತೆಗಳು ನಮ್ಮ ಜನಪ್ರಿಯ ಮಸಾಲಾ ಸಿನೆಮಾಗಳಿಂದ ಸ್ಫೂರ್ತಿ ಹೊಂದಿದಂತೆ ಕಾಣಿಸುತ್ತವೆ ಅಥವಾ ಇದು ತಿರುಗಾಮುರುಗಾ ಇರಬೇಕೆಂದು ವಾದಿಸುವುದೇ ಸರಿಯೆನ್ನುತ್ತದೆ ಸಾಂಪ್ರದಾಯಿಕ ನಂಬಿಕೆ. ಸಿನೆಮಾಗಳಲ್ಲಿ ನಾಯಕ-ನಾಯಕಿ ಎಲ್ಲ ತರದ ಕಷ್ಟಗಳನ್ನನುಭವಿಸಿ ಕೊನೆಯ ರೀಲಿನಲ್ಲಿ ಖಳನಾಯಕ ಸತ್ತು ನಾಯಕ-ನಾಯಕಿ ಮತ್ತೆ ಮರಸುತ್ತುವಲ್ಲಿಗೆ ಭದ್ರಂ-ಶುಭಂ-ಮಂಗಳಂ! ಹಾಗೆಯೇ ಅಥವಾ ಅದಕ್ಕೂ ಮೀರಿದ ಸಂಕಟ ರಾಮ-ಕೃಷ್ಣರದ್ದು. ದೇವರೇ ಮಗನಾಗಿ ಹುಟ್ಟಿದರೂ ದಶರಥನಿಗೆ ರಾಮಲಕ್ಷ್ಮಣರನ್ನು ಅವರ ಹದಿಹರೆಯದಲ್ಲೇ ವಿಶ್ವಾಮಿತ್ರರೊಂದಿಗೆ ಕಳುಹಿಸುವ ಯಾತನೆ. ಕೊನೆಗಾಲಕ್ಕೆ ಯಾವ ಮಕ್ಕಳೂ ಬಳಿಯಿಲ್ಲದಾಯಿತು. ಪುತ್ರಕಾಮೇಷ್ಟಿಯಿಂದ ಆರಂಭವಾದ ದಶರಥನ ಬದುಕು ಪುತ್ರಶೋಕದಲ್ಲಿ ಪರ್ಯಾವಸಾನವಾಯಿತು. (ಮಕ್ಕಳನ್ನು ಹಾಸ್ಟೆಲ್‌ನಲ್ಲಿರಿಸಿ ಓದಿಸಿ ಆನಂತರ ಮಕ್ಕಳು ಇಂಗ್ಲೆಂಡ್, ಅಮೆರಿಕದಲ್ಲಿದ್ದಾರೆಂದು ಬೀಗುವ ನಮ್ಮ ಅನೇಕ ತಂದೆತಾಯಿಗಳ ಆನ್‌ಲೈನ್ ಕತೆಯೂ ಇದಕ್ಕಿಂತ ಬೇರೆಯಲ್ಲ!) ರಾಮ ವನವಾಸ ಮಾಡಿದ್ದೂ ಮಾಡಿದ್ದೇ. ಜೊತೆಗೆ ಲಕ್ಷ್ಮಣನೂ ಇದ್ದ; ಸೀತೆಯೂ ಬಂದಳು. ಆಕೆ ಬರಲೇಬೇಕು; ಶತಕೋಟಿ ರಾಮಾಯಣಗಳಲ್ಲೆಲ್ಲ ಆಕೆ ಬಂದಿದ್ದಳಲ್ಲ! ಅಯೋಧ್ಯೆಯ ಪ್ರಜೆಗಳಿಗೆ ರಾಮನ ಪಾದುಕೆಗಳ ಹೆಸರಿನಲ್ಲಿ ಭರತನ ಆಳ್ವಿಕೆ ನಡೆಯಿತು-ಇಂದಿನ ಭಾರತದ ಪ್ರಜಾಪ್ರಭುತ್ವದ ರಾಷ್ಟ್ರಪತಿ ಅಳ್ವಿಕೆಯಂತೆ. ಮುಂದೆ ಸೀತಾಪಹಾರ ನಡೆಯಿತು. ಅಶೋಕವನದಲ್ಲೂ ಸೀತೆಗೆ ವನವಾಸವಷ್ಟೇ ಅಲ್ಲ; ಸೆರೆಮನೆಯೂ-ಮಹಿಳಾ ಪೊಲೀಸರ ಕೈಗಾವಲಿನಲ್ಲಿ. ಭಾರತೀಯ ದಂಡ ಸಂಹಿತೆಯ 376ನೇ ಕಲಮು ಆಗಲೇ ಪ್ರಚಲಿತವಿದ್ದಿರಬೇಕು.

ಏನೇ ಇರಲಿ, ಇಂದಿನ ಉತ್ತರಪ್ರದೇಶಕ್ಕಿಂತ ಹೆಚ್ಚು ರಕ್ಷಣೆ ಮಹಿಳೆಯರಿಗೆ ರಾವಣ ರಾಜ್ಯದಲ್ಲೂ ಇತ್ತು! ರಾಮಾವತಾರದ ಉದ್ದೇಶ ನೆರವೇರಿದ್ದು ರಾವಣ-ಕುಂಭಕರ್ಣ ವಧೆಯಲ್ಲಿ. ಉಳಿದ ಸಾವುಗಳೆಲ್ಲ ಅನುಷಂಗಿಕ. ಆದರೆ ಸೀತೆಗೂ ಅಗ್ನಿದಿವ್ಯದ ಸ್ಪರ್ಶವಾಯಿತು. ಇಷ್ಟಾದರೂ ಮನುಷ್ಯನಾಗಿ ಹುಟ್ಟಿದ ತಪ್ಪಿಗೆ ದೊರೆಯಾಗಿದ್ದವನಿಗೂ ಸಂಕಟ ತಪ್ಪಲೇ ಇಲ್ಲ. ಸೀತೆಗೆ ಮತ್ತೆ ವನವಾಸ. ಈಗ ಆಕೆಯ ಜೊತೆ ರಾಮನೂ ಇಲ್ಲ; ಲಕ್ಷ್ಮಣನೂ ಇಲ್ಲ. ಕಲ್ಯಾಣ ರಾಮಾಯಣದಲ್ಲಿ ಎಲ್ಲವೂ ದುರಂತವೇ. ಭೂಮಿಯೇ ಬಂದು ತನ್ನ ಮಗಳ ಸಂಕಟ ನೋಡಲಾಗದೆ ಮತ್ತೆ ಬಸಿರೊಳಗೆಳೆದುಕೊಂಡದ್ದು ಮುಂದಿನ ಯುಗಕ್ಕೆ ಮಾರ್ಗದರ್ಶಿ. ‘ಪುನರಪಿ ಜನನೀ ಜಠರೇ ಶಯನಂ’ ಎಂಬುದು ವಾಸ್ತವದಲ್ಲಿ ನಡೆಯಿತು. ರಾಮನೂ ತನ್ನ ಸೊದರರೊಂದಿಗೆ ಸರಯೂ ನದಿಯಲ್ಲಿ ಮುಳುಗಿ ಕೊನೆ ಕಂಡ. ನಮ್ಮ ಪೊಲೀಸರು ಅನೇಕ ಕೊಲೆಗಳನ್ನು ಆತ್ಮಹತ್ಯೆಯೆಂದು ಮತ್ತು ಕಿರುಕುಳಕ್ಕೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡವರನ್ನು ಸಹಜ ಸಾವೆಂದು ಪರಿಗಣಿಸಿ ಅಂತಿಮ ವರದಿ ಸಲ್ಲಿಸಿದ ಹಾಗೆ ಇದಕ್ಕೆ ‘ನಿರ್ಯಾಣ’ವೆಂಬ ಸುಂದರ ಚೌಕಟ್ಟನ್ನು ರಾಮಭಕ್ತರು ಸೃಷ್ಟಿಸಿದರು.

ಮಹಾಭಾರತದಲ್ಲೂ ಇದಕ್ಕೆ ಭಿನ್ನ ಚಿತ್ರಣವಿಲ್ಲ. ಹದಿನಾಲ್ಕು ವರ್ಷಗಳಿಗೆ ಪರ್ಯಾಯವಾಗಿ ಹನ್ನೆರಡು ವರ್ಷದ ವನವಾಸ+ಒಂದು ವರ್ಷದ ಅಜ್ಞಾತವಾಸ. ಅಜ್ಞಾತವಾಸಕ್ಕೆ ಹೋಲಿಸಿದರೆ ವನವಾಸವೇ ವಾಸಿಯೆಂದು ಇಂದಿನ ಕ್ವಾರಂಟೈನ್‌ವಾಸಿಗಳು ಹೇಳಬಹುದು. ಕೃಷ್ಣನೆಂಬ ದೇವರು ಜಗದೋದ್ಧಾರದ ಎಲ್ಲ ಬಿರುದುಬಾವಲಿಗಳನ್ನು ಹೊದ್ದರೂ ಬಾಣಾಘಾತಕ್ಕೆ ಸಿಕ್ಕಿ ಸತ್ತ. ಸಾವೆಂಬ ಪಿಡುಗು ಅವನನ್ನೂ ಕೈಬಿಡಲಿಲ್ಲ. ಧರ್ಮಸಂಸ್ಥಾಪನೆಗಾಗಿ, ದುಷ್ಕೃತರ ವಿನಾಶಕ್ಕೂ ಸಾಧುಗಳ ಉದ್ಧಾರಕ್ಕೂ ಮತ್ತೆಮತ್ತೆ ಹುಟ್ಟಿ ಬರುತ್ತೇನೆಂದ ದೇವರು ಮತ್ತೆಮತ್ತೆ ಸಾಯುತ್ತೇನೆಂಬುದನ್ನು ಅರಿಯಲಿಲ್ಲ. ಆತನ ಪಂಚಪ್ರಾಣಗಳಾದ ಪಾಂಡವರೂ ಗೆದ್ದು ಸೋತರು. ಶಾಂತಿಪರ್ವ, ಸ್ವರ್ಗಾರೊಹಣ ಪರ್ವಗಳು ಬದುಕಿನ ಎಲ್ಲ ವಿಘಟನೆಗಳನ್ನು ಸಾರಿ ಹೇಳಿದವು.

ಇಲ್ಲಿಗೇ ಮುಗಿಯಲಿಲ್ಲ ಕಂಟಕ: ಪಾಂಡವರು ಮೂವತ್ತಾರು ವರ್ಷ (ಅಷ್ಟೇ! ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ಶ್ರಮ ನೋಡಾ!) ಆಳಿ ಅಳಿದಾಗ ಅವರ ಮಕ್ಕಳ್ಯಾರೂ ಇರಲಿಲ್ಲ. ಅಶ್ವತ್ಥಾಮನ ಬಾಣಕ್ಕೆ ಸಿಕ್ಕಿ ಗರ್ಭದೊಳಗೇ ಮೃತನಾದರೂ ಕೃಷ್ಣಕೃಪೆಯಿಂದ ವಾರಸುದಾರನಾಗಿ ಉಳಿದ ದ್ವಿಜ ಮೊಮ್ಮಗ ಪರೀಕ್ಷಿತ. ಅರ್ಜುನನ ತೀರ್ಥಯಾತ್ರೆಯ ನಡುವೆ ನಡೆದ ಸುಭದ್ರಾ ಕಲ್ಯಾಣವು ಫಲಕೊಟ್ಟದ್ದು ಹೀಗೆ. ಆತ್ಮನಿರ್ಭರವೋ ದುರ್ಭರವೋ ಅಂತೂ ಚಂದ್ರವಂಶದ ಕುಡಿ. ಕಸಿಕಟ್ಟಿ ಬಿಟ್ಟ ಮಿಡಿ.

ರಾಜರಿಗೆ ರಾಜಸ ಮನೋವೃತ್ತಿ ಇರಬೇಕಾದ್ದೇ. ತನ್ನ ಪಾಡಿಗೆ ತಪಸ್ಸಿನಲ್ಲಿದ್ದ ಶಮೀಕಮುನಿಯ ಕೊರಳಿಗೆ ಸತ್ತ ಹಾವನ್ನು ಹಾಕಿ ಹೋದ ಪರೀಕ್ಷಿತ ಆ ಋಷಿಪುತ್ರ ಶೃಂಗಿಯಿಂದ ಸರ್ಪದಂಶದಿಂದ ಸಾಯುವ ಶಾಪವನ್ನು ಪಡೆದ. ಕ್ಯಾಲಿಫೋರ್ನಿಯಾ ಅರಣ್ಯದಂತೆ ಸುಡುತ್ತಿದ್ದ ಖಾಂಡವವನ ದಹನದ ಉರಿಯಿಂದ ಪಾರಾದವರ ಪೈಕಿ ವೃಷಸೇನನೆಂಬ ಸರ್ಪವು ಅಸ್ತ್ರವಾಗಿ ತೀರಿಸಿಕೊಳ್ಳಲಾಗದ ಸೇಡನ್ನು ವಂಶಾಂತರದಲ್ಲಿ ತೀರಿಸಿಕೊಳ್ಳಲು ಬಹುಕಾಲದ ಮೇಲೆ ತಕ್ಷಕನಿಗೆ ಅವಕಾಶ. ಆದರೆ ರಾಷ್ಟ್ರನಾಯಕರಿಗೆ ಮತ್ತು ಒಲವಿನ ಸಿನೆಮಾತಾರೆಯರಿಗೆ ನೀಡಿದಂತೆ ದೊರೆಗೂ ಎಯಿಂದ ಝೆಡ್ ವರೆಗಿನ ಬಿಗಿಭದ್ರತೆ. ಸರ್ಪಗಾವಲು ಎಂಬ ಪದ ವ್ಯಂಗ್ಯವಾದೀತು. ಏಕೆಂದರೆ ಸರ್ಪದಿಂದ ರಕ್ಷಿಸಿಕೊಳ್ಳಲು ಅರಸನಿಗೆ ಸಮುದ್ರದ ನಡುವೆ ಒಂಟಿಸ್ತಂಭದ ತುದಿಯಲ್ಲೊಂದು ಅರಮನೆ. ಅಲ್ಲಿ ಎಲ್ಲರಿಗೂ ಪ್ರವೇಶವಿಲ್ಲ. ಆದರೂ ಬ್ರಾಹ್ಮಣರಿಗೆ ಪ್ರವೇಶ. ಅವರು ಆಗಲೇ ವಿಶೇಷ ಅತಿಥಿಗಳು. ಹೀಗೆ ಅರಸನಲ್ಲಿಗೆ ಹೊರಟ ಕಶ್ಯಪನೆಂಬ ಬ್ರಾಹ್ಮಣನೊಬ್ಬನನ್ನು ದಾರಿಯಲ್ಲಿ ನಿಲ್ಲಿಸಿದ ಮನುಷ್ಯರೂಪಿ ತಕ್ಷಕನು ಅವನಲ್ಲಿ ಹಣ್ಣುಗಳನ್ನು ನೀಡಿ ಅರಸನಿಗೆ ತಲುಪಿಸುವಂತೆ ಹೇಳಿದ. ಬಿಟ್ಟಿ ಸಿಕ್ಕಿದರೆ ಯಾರಿಗೆ ಬೇಡ? ಅವುಗಳಲ್ಲಿ ಒಂದು ಹಣ್ಣಿನೊಳಗೆ ತಕ್ಷಕ ಅವಿತ. ಒಂದು ಕ್ಷಣ ತಕ್ಷಕ ಹಣ್ಣಿನ ಹೊರಗೂ-ಒಳಗೂ ಇದ್ದನೇನೋ ಎಂಬಂತಹ ಸನ್ನಿವೇಶ. ಅದನ್ನು ಬ್ರಾಹ್ಮಣ ನೇರ ಪರೀಕ್ಷಿತನಿಗೆ ತಲುಪಿಸಿದ. ಆಗ ಇದನ್ನು ಶೋಧಿಸಬಲ್ಲ ಮಂತ್ರವಾಗಲೀ, ಲೋಹಶೋಧಕದಂತಹ ತಂತ್ರವಾಗಲೀ ಇರಲಿಲ್ಲವೇನೋ? ತಕ್ಷಕ ಹಣ್ಣೊಳಗಿಂದ ಹುಳವಾಗಿ ಹೊರಬಂದು ದೈತ್ಯಗಾತ್ರ ತಾಳಿ ಪರೀಕ್ಷಿತನನ್ನು ಮುಗಿಸಿದ. ಮಾರುಕಟ್ಟೆಯಲ್ಲಿ ಸಿಗುವ ಹಣ್ಣಿನೊಳಗೆ ಹುಳವಿದ್ದರೆ ಇದೇ ಭೀತಿ!

ಇಲ್ಲಿಗೇ ಕತೆ ಮುಗಿಯುವುದಿಲ್ಲ. ನಮ್ಮ ದೇಶದ ಚರಿತ್ರೆಯೆಲ್ಲ ‘ಕಯಾಮತ್ ಸೇ ಕಯಾಮತ್ ತಕ್’. ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳು, ಐಎಎಸ್‌ಗಳ ಮಕ್ಕಳು ಐಎಎಸ್‌ಗಳು, ಹುಡುಕಿದರೆ ನ್ಯಾಯಾಧೀಶರ ಮಕ್ಕಳೂ ನ್ಯಾಯಾಧೀಶರೇ! ಸೈನಿಕರ ಮಕ್ಕಳು ಸೈನಿಕರಾಗುವುದು, ರೈತರ ಮಕ್ಕಳು ರೈತರಾಗುವುದು ಈಗೀಗ ಅಪರೂಪ. ಜೈಜವಾನ್ ಗುರುತು ಕಚೇರಿಗೂ ಜೈಕಿಸಾನ್ ಗುರುತು ಗೊಬ್ಬರದ ಚೀಲಕ್ಕೂ ಸೀಮಿತವಾಗಿದೆ. ಹೀಗೆ ಪರೀಕ್ಷಿತನ ಸಾವು ಆತನ ಮಗ ಜನಮೇಜಯನಿಗೆ ಸರ್ಪಯಾಗ ಮಾಡಲು ಪ್ರೇರಣೆಯನ್ನೋ ಸ್ಫೂರ್ತಿಯನ್ನೋ ನೀಡಿತು. ಪುರೋಹಿತರಲ್ಲಿ ಕೇಳಿದರೆ ಅವರು ಯಾವುದಕ್ಕೂ ಪರಿಹಾರಾರ್ಥ ಒಂದು ಯಾಗದ ಹೆಸರು ಹೇಳಿ ಅದಕ್ಕೆ ಬೇಕಾದ ‘ಕೇಳು ಜನಮೇಜಯ’ ಚಿತ್ರಕತೆ ಬರೆಯಬಲ್ಲರು. ಈಗಿನ ಸಿಬಿಐ, ಈಡಿ, ಎನ್‌ಐಎಗಳಿಂದ ಬಂದಂತೆ ತಕ್ಷಕನಿಗೆ ಯಜ್ಞದೇವನ ನ್ಯಾಯಾಲಯದಿಂದ ಋತ್ವಿಜರ ನೋಟಿಸ್ ಬಂತು. ಆತ ಹೆದರಿ ವಿಜಯಮಲ್ಯ, ಲಲಿತ್‌ಮೋದಿ, ಚೋಕ್ಸಿಯವರಂತೆ ಜನಮೇಜಯನ ಅಧಿಕಾರ ವ್ಯಾಪ್ತಿಯನ್ನು ತೊರೆದು ದೇವಲೋಕಕ್ಕೆ ಓಡಿದ. ದೇವೇಂದ್ರನ ಕುದುರೆ ಉಚ್ಚೈಶ್ರವದ ಬಿಳಿಯ ಬಾಲಕ್ಕೆ ಸುತ್ತಿಕೊಂಡ. ಬಿಳಿಯರೊಂದಿಗೆ ಈ ಕರಿಯನೂ ಶಾಮೀಲಾದ. ಆದರೆ ಇಲ್ಲಿನ ಮಂತ್ರಕ್ಕೆ ತಕ್ಷಕ, ಆತನ ಜೊತೆಗೆ ಕುದುರೆ ಮತ್ತು ಕೊನೆಗೆ ಕುದುರೆಯ ಜೊತೆಗೆ ದೇವೇಂದ್ರನೂ ಯಜ್ಞಕುಂಡಕ್ಕೆ ಇನ್ನೇನು ಬೀಳಬೇಕು ಅಷ್ಟರಲ್ಲಿ ಆಸ್ತಿಕನು ಯಾಗ ನಿಲ್ಲಿಸಿದ; ಪರಿಸ್ಥಿತಿ ಶಾಂತವಾಯಿತು.

ಎಲ್ಲವೂ ಮತ್ತೆ ಭದ್ರಂ ಶುಭಂ ಮಂಗಲಂ! ಹೀಗೆ ಭಗವಂತನ ಅವತಾರದಿಂದ ಮನುಷ್ಯ-ಪ್ರಾಣಿಗಳ ಅವತಾರದ ವರೆಗೂ ಜಗತ್ತೂ ಬದುಕೂ ಹೆಣಗಾಡುತ್ತಲೇ ಇದೆ. ಯಾಕೋ ಹತ್ತವತಾರಕ್ಕೆ ಸಮಾಪ್ತಿಯಾದ ಪುರಾಣಗಳು ಕಲ್ಕಿಗೆ ಮನಸ್ಸು ಮಾಡಿದಂತಿಲ್ಲ. ಪ್ರಾಯಃ ಕುದುರೆ ಹೋಗಿ ವಾಹನಗಳು ಬಂದಿರುವುದರಿಂದ ಆ ಅವತಾರಕ್ಕೆ ಬೇಕಾದ ಭೂಮಿಕೆಯಿಲ್ಲ. ಆದ್ದರಿಂದ ಭಗವಂತನ ‘‘ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ!’’ಯನ್ನು ಸಮರ್ಥಿಸಲು ಈಗ ಕೊರೋನಾವತಾರ ಪುರಾಣವನ್ನು ಸೃಷ್ಟಿಸಬೇಕಾಗಿದೆ. ಕೊರೋನಕ್ಕೆ ಮಾತು ಬಂದರೆ ಅದು ಹೀಗೆ ಹೇಳಬಹುದು: ಪುರಾಣಗಳಿರುವುದೇ ಬದುಕಿನ ಹಾದಿಗೆ ಬೆಳಕು ತೋರುವುದಕ್ಕೆ. ಅವು ನಾವಿಂದು ಮತವೆಂಬ ಹೆಸರಿನಲ್ಲಿ ವ್ಯಾಖ್ಯಾನಿಸುವ ಧರ್ಮದ ಸ್ಥಾಪನೆಗಾಗಲೀ, ಧರ್ಮದ ಹೆಸರಿನಲ್ಲಿ ದ್ವೇಷವನ್ನು ಪ್ರೇರೇಪಿಸವುದಕ್ಕಾಗಲೀ ಅಲ್ಲ. ಧರ್ಮಗ್ರಂಥಗಳೆಂದೇ ಬರೆದವೂ ಕೂಡ ಬದುಕನ್ನು ಹಸನು ಮಾಡುವುದಕ್ಕಿಂತ ಹೆಚ್ಚಾಗಿ ಸ್ಥಾಪಿತ ಹಿತಾಸಕ್ತಿಗಳನ್ನು ಪೋಷಿಸುವ ಕೆಲಸವನ್ನೇ ಮಾಡುತ್ತಿರುವುದು ಜಗತ್ತಿನ ವಿದ್ಯಮಾನಗಳಲ್ಲೊಂದು.

ಆದ್ದರಿಂದ ಲಯಕಾರಕ ಕೊರೋನದ ನಡುವೆ ‘‘ಅಳುವ ಕಡಲೊಳೂ ತೇಲಿ ಬರುತಲಿದೆ ನಗೆಯ ಹಾಯಿದೋಣಿ’’ ಎಂಬ ಕವಿವಾಣಿಯಂತೆ ಯಾರಾದರೊಬ್ಬ ಅಭಿನವ ವ್ಯಾಸ-ವಾಲ್ಮೀಕಿಯರು ಇಂದಿನ ದುರಂತ ಪಥದಲ್ಲಿ ಇಂಥದ್ದೊಂದು ಲಘುಸೃಷ್ಟಿಯನ್ನು ಮಾಡಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top