ಪಲಾನ್ನದ ಪರಿಮಳ | Vartha Bharati- ವಾರ್ತಾ ಭಾರತಿ

--

ಪಲಾನ್ನದ ಪರಿಮಳ

ಏಶ್ಯ ಖಂಡದ ಬಹುಭಾಗವನ್ನು ಶತಮಾನಗಳಿಂದ ಹತ್ತು ಹಲವು ಹೆಸರುಗಳಿಂದ ಹಬ್ಬಿ ಆವರಿಸಿಕೊಂಡಿರುವ ಆಹಾರ ಪುಲಾವ್. ಇದರ ಉಚ್ಚರಣೆಯು ಒಂದೊಂದು ಭೌಗೋಳಿಕ ಮತ್ತು ಭಾಷಿಕ ಪ್ರದೇಶದಲ್ಲೂ ಬೇರೆಯ ತೆರೆನಾಗಿದೆ. ಆದರೆ ಅದು ಮೂಲಧಾತುವಿನಿಂದ ಹೊರತಾಗಿಲ್ಲ. ಪಿಲಾಫ್, ಪಿಲು, ಪಿಲಾವ್ ಎಂಬಿತ್ಯಾದಿಯಾಗಿ ದೊಡ್ಡ ಪಟ್ಟಿಯೇ ಇದೆ. ಇದರ ಮೂಲ ಪದ ಪರ್ಷಿಯನ್ ಭಾಷೆಯ ಪಿಲಾಫ್ (Pilaf) ಎನ್ನುವುದು ಸಂಶೋಧಕರ ಅಂಬೋಣ. ಅದಕ್ಕೆ ಭಾಷಿಕವಾಗಿ ಮತ್ತು ಪಾಕಶಾಸ್ತ್ರೀಯವಾಗಿ ಹತ್ತಾರು ಕಾರಣಗಳನ್ನು, ಪುರಾವೆಗಳನ್ನು ಪಟ್ಟಿ ಮಾಡುತ್ತಾರೆ. ಅದೆಲ್ಲವನ್ನು ಗಮನಿಸಿದರೆ ‘ಹೌದು’ ಎನ್ನದೆ ವಿಧಿಯಿಲ್ಲ.

ಹೆಸರಿನ ಸುಳಿವು ಇದ್ದ ಮಾತ್ರಕ್ಕೆ ಒಪ್ಪಿಬಿಡಬೇಕೇ, ಅದನ್ನು ಒಮ್ಮೆ ನಮ್ಮ ಪ್ರಾಚೀನ ಆಹಾರ ಕ್ರಮಗಳ ಜೊತೆಗೆ ಪರಾಮರ್ಶಿಸಬಹುದಲ್ಲವೇ? ಎಂದರೆ ಅಗತ್ಯವಾಗಿ ಮಾಡಬಹುದು. ಹೀಗೆ ಮಾಡುವಾಗ ನಾವು ಪೂರ್ವಾಗ್ರಹ ಪೀಡಿತರಾಗಿರಬಾರದು ಅಷ್ಟೇ. ಯಾಕೆಂದರೆ ನಮಗೆ ಯಾವುದೇ ಪುರಾವೆ ಸಿಕ್ಕರೂ ನಾವು ನಿರ್ಧರಿಸಬಹುದಾದದ್ದು ಅರ್ಧಸತ್ಯವನ್ನು ಮಾತ್ರ. ಪೂರ್ಣ ಸತ್ಯ ಅನ್ನುವುದು ನಮ್ಮ ಕೈಗೆಟುಕದ ಹಣ್ಣು. ಆ ನಿಟ್ಟಿನಲ್ಲಿ ಪುಲಾವ್ ಅನ್ನು ಇಟ್ಟುಕೊಂಡು ನಮ್ಮ ಪ್ರಾಚೀನ ಕಾಲದ ಒಂದೆರಡು ಮೂರು ಅಡುಗೆ ಉಲ್ಲೇಖಗಳ ಜೊತೆಗೆ ಅವಲೋಕನ ಮಾಡಬಹುದಾಗಿದೆ. ಪುಲಾವ್ ಎಂದರೆ ಮಾಂಸ ಅಥವಾ ತರಕಾರಿ/ಕಾಳುಗಳೊಂದಿಗೆ ಮಸಾಲೆ ಬೆರೆಸಿ ಬೇಯಿಸಿದ ಅನ್ನ ಎಂಬುದು ಸಾಮಾನ್ಯ ವಿವರಣೆ. ಇದು ಭತ್ತ ಬೆಳೆಯುವ ಪ್ರಪಂಚದ ಎಲ್ಲ ಪ್ರದೇಶಗಳಲ್ಲೂ ಬೇರೆ ಬೇರೆ ಅಡುಗೆಯ ಕ್ರಮವಿದ್ದುವು.

ಆದರೆ ಈ ಪರ್ಷಿಯನ್ ಆಹಾರ ಕ್ರಮವು ಅಬಾಸಿದ್ ಖಲೀಫರ ಕಾಲದಲ್ಲಿ ಪೂರ್ವದಲ್ಲಿ ಭಾರತ, ಪಶ್ಚಿಮದಲ್ಲಿ ಸ್ಪೇನ್‌ವರೆಗೆ ಹರಡಿಕೊಂಡಿತ್ತೆಂದು ಅಭಿಪ್ರಾಯಪಡಲಾಗಿದೆ. ಆದರೆ ಇವತ್ತು ದೊರಕುತ್ತಿರುವ ಇತಿಹಾಸ ಮತ್ತು ಪುರಾವೆಗಳನ್ನು ಗಮನಿಸಿದರೆ ಇದಕ್ಕೂ ಹಿಂದೆ ಇದೇ ತೆರನಾದ ಬೇರೆ ಬೇರೆ ಅಡುಗೆಯ ಕ್ರಮಗಳು ಇದ್ದುವೆಂದು ತೋರುತ್ತಿವೆ. ಅದರ ಒಂದು ಕ್ರಮ ಭಾರತ ಉಪಖಂಡದಲ್ಲಿದ್ದ ‘ಪಲಾನ್ನ’. ಪುಲಾವ್ ಎನ್ನುವುದು ತರಕಾರಿ/ಕಾಳು ಅಥವಾ ಮಾಂಸ ಮಿಶ್ರಣ ಎಂಬ ಸಂಯುಕ್ತ ಅರ್ಥವನ್ನು ಒಳಗೊಂಡಿದ್ದರೆ ಪಲಾನ್ನ ಪದವು ನೇರವಾಗಿ ‘ಮಾಂಸದ ಅನ್ನ’ ಎನ್ನುವ ಅರ್ಥವನ್ನೇ ಕೊಡುತ್ತದೆ. ಸಂಸ್ಕೃತದಲ್ಲಿ ’ಪಲ’ ಎಂದರೆ ’ಮಾಂಸ’. ಮಾಂಸದ ಜೊತೆಗೆ ಬೇಯಿಸಿದ ಅನ್ನ ‘ಪಲಾನ್ನ’. ಇದರ ಬಗ್ಗೆ ಸುಶ್ರುತನ ‘ಚರಕ ಸಂಹಿತೆಯಲ್ಲಿ (ಉತ್ತರ ತಂತ್ರ ಭಾಗ) ಕೂಡ ಉಲ್ಲೇಖವಿರುವುದನ್ನು ಖುದ್ದು ಸ್ವಯಂ ಓದಿದ್ದೇನೆ. ಈ ಕೃತಿಯ ಕಾಲ ಕ್ರಿ.ಪೂ. 200 ರಿಂದ ಕ್ರಿ.ಶ. 600ರ ವರೆಗೆ ಗುರುತಿಸಲ್ಪಟ್ಟಿದೆ. ಚರಕ ಮಹರ್ಷಿಯ ಅವಧಿ ಕ್ರಿ.ಪೂ. 200 ರಿಂದ ಕ್ರಿ.ಪೂ. 100 ವರೆಗೆ ಇದ್ದಿರಬಹುದು. ಆದರೆ ನಮಗೆ ಉಪಲಬ್ದವಿರುವ ಆವೃತ್ತಿಯು 5-6 ನೇ ಶತಮಾನದಲ್ಲಿ ದ್ರುಧ್ಬಾಲನು ಕ್ರೋಢೀಕರಿಸಿದ ಆವೃತ್ತಿ. ಇವತ್ತಿಗೂ ಪಲಾನ್ನದ ಉಲ್ಲೇಖವನ್ನು ಹುಡುಕಿ ಹೊರಟರೆ ಬಂಗಾಳಿಯ ಪಲಾನ್ನ ಸಿಗುತ್ತದೆ. ಬಂಗಾಳಿ ಭಾಷೆಯಲ್ಲಿ ಪಲಾನ್ನ ಎಂದರೆ ಮಾಂಸದೊಂದಿಗೆ ಬೇಯಿಸಿದ ಅನ್ನ ಎಂದು ಅರ್ಥ. ಕನ್ನಡದಲ್ಲೂ ಇದೇ ಅರ್ಥವನ್ನು ನಿಘಂಟುವಿನಲ್ಲಿ ಕಂಡೆ. ಸಂಸ್ಕೃತ ಪದವು ಭಾರತೀಯ ಭಾಷೆಗಳ ಜೊತೆ ಬೆರೆತಿರುವುದು ಸಾಮಾನ್ಯ ಸಂಗತಿ. ಮೊದಲಿಗೆ ರಾಮಾಯಣದಲ್ಲಿಯೇ ಮಾಂಸಭೂತೌದನ (ಮಾಂಸ ಭರಿತ ಅನ್ನ)ದ ಕುರಿತ ಉಲ್ಲೇಖವಿದೆ. ರಾಮನು ವನವಾಸಕ್ಕೆ ಹೊರಟು ಗಂಗಾ ನದಿಯನ್ನು ದಾಟುವ ಮೊದಲು ಜೊತೆಯಲ್ಲಿದ್ದ 

ಸೀತೆಯು ಗಂಗೆಯಲ್ಲಿ ‘ನಮ್ಮನ್ನು ಕ್ಷೇಮವಾಗಿ ಆಚೆಗಿನ ದಡವನ್ನು ತಲುಪಿಸಿದರೆ ಹಿಂದಿರುಗಿ ಬಂದಾಗ ನಿನಗೆ ಸಾವಿರ ಗಡಿಗೆಗಳ ಮದ್ಯವನ್ನು ಮತ್ತು ಮಾಂಸಭೂತೌದನ (ಮೆದು ಮಾಂಸದ ಜೊತೆಗೆ ಬೇಯಿಸಿದ ಅನ್ನ)ವನ್ನು ಅರ್ಪಿಸುತ್ತೇನೆ ಎಂದು ಪ್ರಾರ್ಥಿಸುತ್ತಾಳೆ.

ಸುರಾಘಟಸಹಸ್ರೇಣ ಮಾಂಸಭೂತೌದನೇನ ಚ
ಯಕ್ಷ್ಯೇ ತ್ವಾಂ ಪ್ರ ುತಾ ದೇವಿ ಪುರೀಂ ಪುನರುಪಾಗತಾ II 52- 89 (ಅಯೋಧ್ಯಾ ಕಾಂಡ, ಶ್ರೀಮದ್ವಾಲ್ಮೀಕಿ ರಾಮಾಯಣ)
   ಮಹಾಭಾರತದ ಅನುಶಾಸನ ಪರ್ವದಲ್ಲಿ ಕೈಮಾ ರೀತಿ ಸಣ್ಣಗೆ ಹಚ್ಚಿ ದ ಮಾಂಸವನ್ನು ಅನ್ನದ ಜೊತೆಗೆ ಬೇಯಿಸುವ ‘ಪಿಸ್ಟಯುದನ’ದ ಉಲ್ಲೇಖವಿದೆ. ಮಧ್ಯಕಾಲೀನ ಯುಗದಲ್ಲಿ ರಚಿತವಾಗಿರಬಹುದಾದ ನಳನ ಪಾಕದರ್ಪಣ ಕೃತಿಯು ‘ಮಾಂಸೋದನ’ ಬಗ್ಗೆ ಬಹಳಷ್ಟು ವಿವರಣೆಗಳನ್ನು ಒಳಗೊಂಡಿದೆ. ಬೇಯುತ್ತಿರುವ ಅಕ್ಕಿಯ ಜೊತೆಗೆ ಈಗಾಗಲೇ ಅರ್ಧ ಬೇಯಿಸಿದ ಅಥವಾ ಬೇಯದ ಮಾಂಸದ ತುಂಡುಗಳನ್ನು ಹಾಕಿ ಕುದಿಸಿ ಅದಕ್ಕೆ ತೆಂಗಿನ ಹಾಲು, ತುಪ್ಪ, ಕರ್ಪೂರ, ಒಣಹೂವು ಮತ್ತಿತರ ಸುಗಂಧಭರಿತ ಸಂಬಾರ ಪದಾರ್ಥಗಳನ್ನು ಸೇರಿಸಿ ಹದವಾಗಿ ಬೇಯಿಸಿ ನಂತರ ಬದಿಸಬೇಕೆಂದು ಹೇಳುತ್ತದೆ. ಅದರಲ್ಲಿ ‘ಕುಕ್ಕುಟ ಮಾಂಸೋದನ’ (ಕೋಳಿ ಪಲಾವ್), ‘ಲಾವಕ ಮಾಂಸೋದನ’ (ಗುಬ್ಬಿಯ ಪಲಾವು) ಮುಂತಾದ ವಿವರಗಳಿವೆ. ಆದರೆ ಇದರಲ್ಲಿ ಮಾಂಸ ಮತ್ತು ಅನ್ನವನ್ನು ಸೇರಿಸಿ ‘ಮಾಂಸೋದನ್ನ/ ಮಾಂಸೋದನ’ ಎಂದು ಕರೆಯಲಾಗಿದೆ. ಇದೇ ತರಹದ ಹಲವು ಮಾಂಸ ಭರಿತ ಅನ್ನದ ಉಲ್ಲೇಖಗಳು ಭಾರತೀಯ ಸಾಹಿತ್ಯದ ಹಲವು ಭಾಷೆಯ ಕೃತಿಗಳಲ್ಲಿ, ಆಚರಣೆಗಳಲ್ಲಿ ಕಂಡು ಬರುತ್ತದೆ. ಪುಲಾವ್ ಮತ್ತು ಬಿರಿಯಾನಿ ಸದಾ ಕಾಲ ಅಲ್ಲಲ್ಲಿ ಇವೆರಡರ ಕುರಿತು ಚರ್ಚೆ, ವಾಗ್ವಾದ ಆಗುತ್ತಲೇ ಇರುತ್ತದೆ. ಯಾವುದನ್ನೂ ಬಿರಿಯಾನಿ ಅನ್ನಬೇಕು ಯಾವುದನ್ನು ಪುಲಾವ್ ಎನ್ನಬೇಕು.

ಕೆಲವರು ಕುರಿ ಮಾಂಸದಿಂದ ಮಾಡಿದ್ದು ಮಾತ್ರ ಬಿರಿಯಾನಿ ಉಳಿದದ್ದು ಪುಲಾವ್ ಎಂದೆಲ್ಲ ವಾದ ಮಾಡುವುದು ಇದೆ. ಕೆಲವರು ಪುಲಾವ್ ಎಂದರೆ ತರಕಾರಿಯ ಭಾತು ಎನ್ನುವುದೂ ಇದೆ. ಪುಲಾವ್ ಮತ್ತು ಬಿರಿಯಾನಿಯನ್ನು ಪರಸ್ಪರ ವಿಂಗಡಿಸಿ ವ್ಯತ್ಯಾಸಗಳನ್ನು ತಿಳಿಸುವುದು ಚೂರು ಕಷ್ಟಸಾಧ್ಯವಾದ ಕೆಲಸ. ಅದರೂ ನಮಗೆ ಪಟ್ಟಿ ಮಾಡಲು ಎರಡು ಮೂರು ಮುಖ್ಯ ಕಾರಣಗಳು ಸಿಗುತ್ತವೆ. 1. ಪುಲಾವ್ ಅನ್ನು ಬಿರಿಯಾನಿಯ ಹಾಗೇ ಮಾಂಸ ಮತ್ತು ಅನ್ನವನ್ನು ಬೇರೆ ಬೇರೆ ಮಾಡಿ ನಂತರ ಬೆರೆಸುವುದಿಲ್ಲ. ಒಂದೇ ಪಾತ್ರೆಯಲ್ಲಿ ಮಾಂಸ/ತರಕಾರಿಗಳನ್ನು ಹುರಿದು ಅದರಲ್ಲೇ ಅಕ್ಕಿಯನ್ನು ಸೇರಿಸಿ ಮಾಡಲಾಗುತ್ತದೆ. 2. ಪುಲಾವ್‌ಗೆ ಯಾವ ತರಹದ ಅಕ್ಕಿ ಬಳಸಿದರೂ ಚೆನ್ನಾಗಿ ಮಾಡಬಹುದು. ಆದರೆ ಬಿರಿಯಾನಿ ಸಣ್ಣದಾದ ಉದ್ದನೆಯ ಅಕ್ಕಿಗೆ ಪ್ರಾಶಸ್ತ್ಯ ದೊರೆಯುತ್ತದೆ. 3. ಬಿರಿಯಾನಿ ಮಾಡುವಾಗ ಅನ್ನ ಮತ್ತು ಮಾಂಸವನ್ನು ಹಂತ ಹಂತವಾಗಿ (ಲೇಯರ್ ) ಸುರುವಿ ಅದಕ್ಕೆ ಮಸಾಲೆ, ಹುರಿದ ಈರುಳ್ಳಿ ಹಾಕಲಾಗುತ್ತದೆ. ಪಲಾವ್ ನಲ್ಲಿ ಮಾಂಸದ ಜೊತೆಗೆ ಹಲವು ಸಂಬಾರ ಪದಾರ್ಥಗಳನ್ನು ಒಟ್ಟಿಗೆ ಬೆರೆಸಿ ಮಾಡಲಾಗಿರುತ್ತದೆ. 4, ಪುಲಾವ್ ಮತ್ತು ಬಿರಿಯಾನಿ ಎರಡಕ್ಕೂ ಸುವಾಸನೆಗಾಗಿ ಯಾಲಕ್ಕಿ, ಕಲ್ಲುಹೂವು, ದಾಲ್ಚಿನ್ನಿ ಎಲೆ ಮತ್ತು ಬಾಸ್ಮತಿ ಅಕ್ಕಿ ಬಳಸುವುದು ಇದೆ. ಆದರೆ ಬಿರಿಯಾನಿ ಬಳಸುವ ‘ಧಮ್’ ಕಟ್ಟುವ ಪ್ರಕ್ರಿಯೆ ಪುಲಾವ್ ನಲ್ಲಿ ಇರುವುದಿಲ್ಲ ( ಎಲ್ಲೋ ಕೆಲವು ಕಡೆ ಪುಲಾವ್ ಗೂ ಧಮ್ ಕಟ್ಟುವುದಿದೆ. ಆದರೆ ಅಪರೂಪ)

ಬಿರಿಯಾನಿಗೆ ಕುರಿಮಾಂಸದಂತಹ ರೆಡ್ ಮೀಟ್ Red Meat) ಸರಿ. ಇದರ ಎಳೆ ಎಳೆ ನಡುವಿನ ಕೊಬ್ಬಿನ ಅಂಶ ಮಸಾಲೆಯ ಜೊತೆಗೆ ಬೆಂದಷ್ಟು ಕರಗಿ ಎಳೆ ಎಳೆಯಾಗಿ ಬಿಟ್ಟುಕೊಂಡು ಮಾಂಸ ರುಚಿಸುವುದರ ಜೊತೆಗೆ ಹೆಚ್ಚು ಘಮ ಬರುತ್ತದೆ. ಇಂತಹದ್ದು ಕೋಳಿಯಂತಹ ವೈಟ್ ಮೀಟ್‌ನಲ್ಲಿ ಸಾಧ್ಯವಿಲ್ಲ. ಅದನ್ನು ಹೆಚ್ಚು ಮಸಾಲೆ ಬಳಸುವ ಪುಲಾವ್ ನಲ್ಲಿ ಬಳಸಬಹುದು. ಇದು ಅಡುಗೆ ಮಾಡುತ್ತಾ ನಾನು ಗಮನಿಸಿದ ಅಂಶ. ನಾವಿಂದು ಬಳಸುತ್ತಿರುವ ಪುಲಾವ್ ಎಂಬ ಹೆಸರು ಪರ್ಷಿಯನ್ ಮೂಲದ್ದೇ ಇರಬಹುದು, ಆದರೆ ಕ್ರಮವು ಪರ್ಷಿಯನ್ ಮೂಲದ್ದು ಮಾತ್ರವಲ್ಲ. ಅನ್ನದೊಂದಿಗೆ ಮಾಂಸ, ಮಸಾಲೆಗಳನ್ನು ಬೆರೆಸಿ ಅಡುಗೆ ಮಾಡುವುದು ಉಪಖಂಡದಲ್ಲಿ ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದೆ. ಅಷ್ಟೇವಕೆ ಮಾಂಸವನ್ನು ಸಂಸ್ಕರಿಸಿ ಬೇರೆ ಬೇರೆ ತರಹದ ತಿಂಡಿಗಳನ್ನು ಮಾಡುವ ಬಗ್ಗೆ ಚಾಲುಕ್ಯ ಚಕ್ರವರ್ತಿ ಮೂರನೇ ಸೋಮೇಶ್ವರನ ಮಾನಸೋಲ್ಲಾಸದಲ್ಲಿ ಸವಿವರವಾಗಿ ಹೇಳಲಾಗಿದೆ. ಸಂಬಾರ ಪದಾರ್ಥಗಳ ಬಳಕೆಯೂ ಯಥೇಚ್ಛವಾಗಿದೆ.

ಆದರೆ ವಿಶೇಷವಾಗಿ ಮೆಣಸಿನಕಾಯಿಯ ಉಲ್ಲೇಖ ಕಂಡು ಬರುವುದಿಲ್ಲ. ಇಂತಹ ಪಲಾನ್ನ, ಮಾಂಸೋದನ, ಮಾಂಸಭೂತೌದನ, ಮಾಂಸೋಗರ ಎಂಬ ಸಂಸ್ಕೃತದ ಗ್ರಂಥಸ್ಥ ಹೆಸರುಗಳ ಜೊತೆಗೆ ಸ್ಥಳೀಯ ಭಾಷೆಗಳಲ್ಲಿ ಕರೆಯುತ್ತಿದ್ದ ಬೇರೆ ಬೇರೆ ಹೆಸರುಗಳು ಕೂಡ ಇದ್ದಿರಬೇಕು.. ಮಾಂಸದ ಬಳಕೆ ಮತ್ತು ಜನಪ್ರಿಯತೆಯನ್ನು ನಳ ಮತ್ತು ಸೋಮೇಶ್ವರನ ಕೃತಿಗಳಲ್ಲಿ ಉಲ್ಲೇಖಿಸಿರುವ ಅಸಂಖ್ಯ ಅಡುಗೆಯ ಕ್ರಮಗಳು, ವಿಧಗಳಲ್ಲಿಯೇ ನಾವು ಅಂದಾಜಿಸಬಹುದಾಗಿದೆ. ಅದರೂ ಪರ್ಷಿಯನ್ ಅಡುಗೆಗಳ ಪ್ರಭಾವ ನಮ್ಮಲ್ಲಿ ಬಹಳವಾಗಿ ಆಗಿದೆ. ಅದರ ಪರಿಣಾಮವಾಗಿ ‘ದಿಲ್ಲಿ’ ಸುತ್ತಮುತ್ತ ಬಿರಿಯಾನಿಯು ಹುಟ್ಟಿಕೊಂಡಿದ್ದು, ಜನಪ್ರಿಯತೆಯನ್ನು ಪಡೆದುಕೊಂಡಿದ್ದು.

ಮತ್ತಿದು ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿ ಬೇರೆ ಬೇರೆ ರುಚಿ, ಘಮಲು, ಬಣ್ಣಗಳಿಂದ ಗುರುತಿಸಿಕೊಂಡಿದೆ. ಈ ಬಿರಿಯಾನಿಯ ಮೂಲ ಪ್ರೇರಣೆಯಾಗಿ ಉಳಿಯುವ ‘ಪುಲಾವ್’ಗೆ ಅಂತಹ ವಿಸ್ತಾರತೆಯು ಇಲ್ಲ. ಕಡೆ ಕಡೆಗೆ ಪುಲಾವ್ ಎಂಬುದು ತರಕಾರಿಯಿಂದ ಮಾಡಬಹುದಾದ ಒಂದು ಭಾತು ಎಂಬಲ್ಲಿಗೆ ಬಂದು ವಾದಗಳು ನಿಲ್ಲುತ್ತವೆ. ಆದರೆ ಭಾರತ ಉಪಖಂಡದ ಅಡುಗೆಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ‘ಪಲಾನ್ನ’ ತರಕಾರಿಯನ್ನು ಒಳಗೊಳ್ಳದೆ ನಿಗದಿತವಾಗಿ ಮಾಂಸದ ಅನ್ನವಾಗಿಯೇ ಚಾಲ್ತಿಯಲ್ಲಿದ್ದು ನಂತರ ಪರ್ಷಿಯನ್ ಅಡುಗೆಯ ಜೊತೆಗೆ ಸಮ್ಮಿಳಿತವಾಗಿ ಉಳಿದಿರುವ ಸಾಧ್ಯತೆಗಳು ದಟ್ಟವಾಗಿವೆ. ಇಂತಹ ಸ್ಥಳೀಯ ವಿಧವಾಗಿ ಮೈಸೂರಿನ ಹನುಮಂತು ಮಟನ್ ಪಲಾವ್ ಅನ್ನು ನೆನೆಸಿಕೊಳ್ಳಬಹುದು. ಅದು ಮೊಘಲ್ ಅಥವಾ ದಿಲ್ಲಿ ಪ್ರೇರಿತ ಬಿರಿಯಾನಿಗಳನ್ನು ಹೋಲುವುದೇ ಇಲ್ಲ. ಅದು ತುಂಬಾ ವಿಶಿಷ್ಟ ಬಗೆಯ ಮೈಸೂರು ಶೈಲಿಯ ಪಲಾವ್ .

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top