ಮುಗಿಯದ ಕಾವೇರಿ ವಿವಾದ: ಅಂಬೇಡ್ಕರ್ ಒದಗಿಸುವ ಪರಿಹಾರಗಳು | Vartha Bharati- ವಾರ್ತಾ ಭಾರತಿ

--

ಮುಗಿಯದ ಕಾವೇರಿ ವಿವಾದ: ಅಂಬೇಡ್ಕರ್ ಒದಗಿಸುವ ಪರಿಹಾರಗಳು

ನದಿನೀರು ಹಂಚಿಕೆಯ ಬಗ್ಗೆ ಅಂಬೇಡ್ಕರ್ ಅವರ ಚಿಂತನೆ ಕೇವಲ ನೀರಾವರಿ ತಜ್ಞರ ಅಥವಾ ನೀರು ಹಂಚಿಕೆಯ ಪರಿಣತಿಯ ದೃಷ್ಟಿಕೋನ ಮಾತ್ರವಾಗಿರಲಿಲ್ಲ. ನೀರಾವರಿ ಮತ್ತು ನದಿ ನೀರು ಹಂಚಿಕೆಯ ಬಗ್ಗೆ ಅವರ ಯೋಜನೆ, ಸಲಹೆ ಮತ್ತು ಮಾರ್ಗದರ್ಶನದ ಮಾನದಂಡಗಳು 1943-49ರ ನಡುವೆ ಅವರು ಮಾಡಿದ ಭಾಷಣ, ಬರಹ ಮತ್ತು ನೀಡಿದ ಮಾರ್ಗದರ್ಶನಗಳಲ್ಲಿ ದಕ್ಕುತ್ತವೆ.

ಅದರಲ್ಲೂ ವಿಶೇಷವಾಗಿ ದಾಮೋದರ್ ಕಣಿವೆ, ಸೋನ್ ನದಿ ಯೋಜನೆ ಮತ್ತು ಮಹಾನದಿ ಯೋಜನೆಗಳನ್ನು ರೂಪಿಸುವಲ್ಲಿ ಅವರು ರೂಪಿಸಿದ ತಾತ್ವಿಕತೆ ಮತ್ತು ಮಾರ್ಗದರ್ಶನಗಳು ಹಾಗೂ ಸ್ವಾತಂತ್ರ್ಯಾನಂತರದಲ್ಲೂ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಅಂತರ್‌ರಾಜ್ಯ ಜಲ ವಿವಾದ ಕಾಯ್ದೆ, ಅಂತರ್‌ರಾಜ್ಯ ಜಲ ನಿಗಮ ಕಾಯ್ದೆ ಮತ್ತು ಆರ್ಟಿಕಲ್ 262 - ಇವುಗಳಲ್ಲಿ ಅಂತರ್‌ರಾಜ್ಯ ನದಿ ನೀರು ಹಂಚಿಕೆ ಮತ್ತು ನಿರ್ವಹಣೆಗಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳೇನಿದ್ದವು ಎಂಬುದನ್ನು ಎತ್ತಿ ತೋರಿಸುತ್ತವೆ.


ಬೇಸಿಗೆಯ ಬಿಸಿ ಏರುತ್ತಿದ್ದಂತೆ ಕಾವೇರಿ ಸಂಬಂಧಿತ ವಿವಾದಗಳಿಗೂ ಬಿಸಿ ಏರತೊಡಗಿದೆ. ಕಾವೇರಿ ಜಲಮಂಡಳಿ ಕೊಟ್ಟ ಅಂತಿಮ ಪರಿಹಾರದ ಬಗ್ಗೆ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತನ್ನ ಅಂತಿಮ ತೀರ್ಮಾನ ಕೊಟ್ಟ ನಂತರವೂ ಕಾವೇರಿ ಜಲಹಂಚಿಕೆಯ ಬಗೆಗಿನ ಅಸಮಾಧಾನಗಳು ಹಾಗೂ ವಿವಾದಗಳು ಸುಲಭವಾಗಿ ಬಗೆಹರಿಯುತ್ತಿಲ್ಲ. ಈ ಬಾರಿ ಕರ್ನಾಟಕ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ರೂಪಿಸಿಕೊಂಡಿರುವ ಮೇಕೆ ದಾಟು ಯೋಜನೆ ಹಾಗೂ ತಮಿಳುನಾಡು ಕಾವೇರಿಯಲ್ಲಿ ದಕ್ಕಬಹುದಾದ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ರೂಪಿಸಿಕೊಂಡಿರುವ ಯೋಜನೆಗಳ ಬಗ್ಗೆ ಎರಡೂ ರಾಜ್ಯಗಳಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ.

ಅಂಬೇಡ್ಕರ್ ಮತ್ತು ಸಂಪನ್ಮೂಲಗಳ ಪ್ರಜಾತಾಂತ್ರಿಕ ಮರುಹಂಚಿಕೆ

ನದಿ ನೀರು ಹಂಚಿಕೆಯಂತಹ ಸಮಸ್ಯೆಗಳು ಸಾರಾಂಶದಲ್ಲಿ ಸೀಮಿತ ಸಂಪನ್ಮೂಲಗಳ ಪ್ರಜಾತಾಂತ್ರಿಕ ಮರುಹಂಚಿಕೆಯ ಸಮಸ್ಯೆಯಾಗಿವೆ. ಆದರಲ್ಲೂ ನೀರಿನ ಸಂಪನ್ಮೂಲ ದಿನೇದಿನೇ ಕುಸಿಯುತ್ತಿದ್ದರೂ ಅದರ ಮೇಲಿನ ರೈತಾಪಿಗಳ ಅವಲಂಬನೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವಾಗ ನೀರಿನ ಹಂಚಿಕೆಯ ರೈತಾಪಿಗಳ ಜೀವನ್ಮರಣದ ಪ್ರಶ್ನೆಯಾಗಿಬಿಡುತ್ತಿದೆ. ಅದೇ ಅವಕಾಶವಾದಿ ರಾಜಕಾರಣಿಗಳ ರಾಜಕೀಯಕ್ಕೆ ಮೇವನ್ನೂ ಒದಗಿಸುತ್ತಿದೆ. ಇಂತಹ ಸಮಸ್ಯೆಗಳನ್ನು ಭಾವನಾತ್ಮಕ ನೆಲೆಯಿಂದಲೋ, ತತ್‌ಕ್ಷಣದ ರಾಜೀ ಸೂತ್ರಗಳಿಂದಲೋ ಬಗೆಹರಿಸಲು ಸಾಧ್ಯವಿಲ್ಲ. ಅದಕ್ಕೆ ಸಂಪನ್ಮೂಲಗಳ ಮರುಹಂಚಿಕೆಗಳ ಬಗ್ಗೆ ಪ್ರಬಲವಾದ ಪ್ರಜಾತಾಂತ್ರಿಕ ಮೌಲ್ಯಗಳ ನೆಲೆಗಟ್ಟು ಹಾಗೂ ನೀರು ಮತ್ತು ಕೃಷಿಗಳ ಬಗ್ಗೆ ವೈಜ್ಞಾನಿಕ ಹಾಗೂ ಪ್ರಜಾತಾಂತ್ರಿಕ ದೂರಗಾಮಿತ್ವ ಎರಡೂ ಬೇಕಾಗುತ್ತದೆ.

ಆದರೆ ಸ್ಪರ್ಧಾತ್ಮಕ ಅವಕಾಶವಾದಿ ರಾಜಕಾರಣದಲ್ಲಿ ಇವುಗಳ ಅತ್ಯಂತ ದೊಡ್ಡ ಕೊರತೆಯನ್ನು ದೇಶ ಅನುಭವಿಸುತ್ತಿದೆ. ಆದರೆ ಸೀಮಿತ ಸಂಪನ್ಮೂಲಗಳ ಪ್ರಜಾತಾಂತ್ರಿಕ ಮರುಹಂಚಿಕೆಯ ಬಗ್ಗೆ ಭಾರತ ಅಂಬೇಡ್ಕರ್ ಮುಂದಿಟ್ಟ ಸೂತ್ರಗಳಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಅದು ನದಿನೀರು ಹಂಚಿಕೆಯಲ್ಲೂ ಹೌದು, ರಾಜಕೀಯ-ಆರ್ಥಿಕ-ಸಾಮಾಜಿಕ ಸಂಪನ್ಮೂಲಗಳ ಹಂಚಿಕೆಯಲ್ಲೂ ಹೌದು. ಆದರೆ ಅವಕಾಶವಾದಿ ರಾಜಕಾರಣದಿಂದಾಗಿ ಪ್ರಜಾತಾಂತ್ರಿಕ ಹಾಗೂ ವೈಜ್ಞಾನಿಕ ಹಂಚಿಕೆಗೆ ಪೂರಕವಾಗಬಹುದಾದ ಸಾಧನಗಳ ಬಗ್ಗೆಯೂ ಸಕಾರಣ ಅನುಮಾನ ಹುಟ್ಟಿಕೊಂಡಿದೆ. ಉದಾಹರಣೆಗೆ ನದಿನೀರಿನ ಹಂಚಿಕೆಯಲ್ಲಿ ರಾಜ್ಯಗಳ ಪಾಲಿನ ನಿಗದಿ ಮಾಡುವ ಬಗ್ಗೆ ನಡೆಯುವ ರಾಜಕಾರಣವು, ರಾಜ್ಯಗಳ ಎಲ್ಲೆಯನ್ನು ಮೀರಿ ಇಡೀ ನದಿ ಜಲಾನಯನ ಪ್ರದೇಶವನ್ನು ಒಂದು ಘಟಕವಾಗಿ ತೆಗೆದುಕೊಂಡು ಬೆಳೆ, ರೈತಾಪಿಗಳ ಅಗತ್ಯ ಇತ್ಯಾದಿಗಳನ್ನು ಆಧರಿಸಿ ವೈಜ್ಞಾನಿಕ ಹಂಚಿಕೆ ಮಾಡುವ ಸಾಧ್ಯತೆಯನ್ನು ಮರೆಮಾಚುತ್ತದೆ. ಆದರೆ ಎರಡೂ ರಾಜ್ಯಗಳ ನಡುವೆ ಐತಿಹಾಸಿಕ ತಾರತಮ್ಯ, ಕೇಂದ್ರ ಸರಕಾರದ ಮಲತಾಯಿ ಧೋರಣೆ ಹಾಗೂ ರಾಜ್ಯಗಳಲ್ಲಿನ ಅವಕಾಶವಾದಿ ರಾಜಕಾರಣಗಳಿದ್ದಾಗ ರೈತರ, ಕೃಷಿಯ ಮತ್ತು ದೇಶದ ಹಿತಾಸಕ್ತಿಗಳು ಹೇಗೆ ಮೂಲೆಗುಂಪಾಗುತ್ತವೆ ಎಂಬುದಕ್ಕೆ ಕಾವೇರಿ ವಿವಾದವೂ ಒಂದು ಜೀವಂತ ಸಾಕ್ಷಿ.

ಕಾವೇರಿ-ನಿರಂತರ ಅವಕಾಶವಾದ, ಮುಗಿಯದ ವಿವಾದ 
2018ರಲ್ಲಿ ಸುಪ್ರೀಂ ಕೋರ್ಟು ಕಾವೇರಿ ವಿವಾದದ ಬಗ್ಗೆ ತನ್ನ ಅಂತಿಮ ಆದೇಶವನ್ನು ನೀಡುತ್ತಾ ಕಾವೇರಿ ನದಿ ನೀರಿನಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸಿ ಕಾವೇರಿ ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸುವ ಆದೇಶವನ್ನು ನೀಡಿದೆ. ಆದರೆ ಇದರ ಬಗ್ಗೆ ತಮಿಳುನಾಡು ತೃಪ್ತವಾಗಿದ್ದರೂ ಕರ್ನಾಟಕ ಸಕಾರಣವಾಗಿ ಆತಂಕಗೊಂಡಿದೆ. ಏಕೆಂದರೆ ಈ ಪ್ರಾಧಿಕಾರ/ಮಂಡಳಿ ಇಡೀ ಕಾವೇರಿ ಕಣಿವೆಯ ಎಲ್ಲಾ ಅಣೆಕಟ್ಟುಗಳನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡು ಕಾವೇರಿ ನ್ಯಾಯಮಂಡಳಿಯು ಕೊಟ್ಟಿರುವ ಅಂತಿಮ ಆದೇಶದಂತೆ ನೀರು ಹಂಚಿಕೆ ಮತ್ತು ಬಳಕೆಯಾಗುವಂತೆ ನೋಡಿಕೊಳ್ಳುತ್ತದೆ. ಆಗ ತಮ್ಮ ತಮ್ಮ ರಾಜ್ಯಗಳಲ್ಲಿ ಹರಿದುಹೋಗುವ ನದಿ ನೀರಿನ ಮೇಲೆ ಯಾವ ರಾಜ್ಯವೂ ಅಂತಿಮ ಪರಮಾಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ.

ಮೇಲಾಗಿ ಸುಪ್ರೀಂ ಕೋರ್ಟು ಆದೇಶಿಸಿರುವ ಕಾವೇರಿ ನಿರ್ವಹಣಾ ಮಂಡಳಿಯು ಕಾವೇರಿ ನ್ಯಾಯಮಂಡಳಿಯ ಅಂತಿಮ ಆದೇಶವನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರಲಿರುವ ಮಂಡಳಿಯೇ ವಿನಃ ಅದರಲ್ಲಾಗಿರುವ ಅನ್ಯಾಯವನ್ನು ಸರಿಪಡಿಸಬಲ್ಲ ವೇದಿಕೆಯಲ್ಲ. ಹೀಗಾಗಿ ಹಾಲಿ ವ್ಯವಸ್ಥೆಯಲ್ಲಿ ಹಾಗೂ ಐತಿಹಾಸಿಕ ತಾರತಮ್ಯಗಳು ಮುಂದುವರಿಯುತ್ತಿರುವ ಸಂದರ್ಭದಲ್ಲಿ ಕಾವೇರಿ ಪ್ರಾಧಿಕಾರದ ಪಾತ್ರ ಯಥಾಸ್ಥಿತಿಯನ್ನು ಕಾಯುತ್ತದೆಯೇ ವಿನಾ ಪರಿಹಾರ ಒದಗಿಸುವುದಿಲ್ಲ. ಈ ಹಿನ್ನೆಲೆಯಲ್ಲೇ ಈ ಬೇಸಿಗೆಯಲ್ಲೂ ಮತ್ತೊಮ್ಮೆ ಬಿಸಿಯೇರುತ್ತಿದೆ. ಆದರೆ ಒಂದು ಅಂತರ್‌ರಾಜ್ಯ ನದಿ ನೀರಿನ ಹಂಚಿಕೆಯಲ್ಲಿ ಅಂತರ್‌ರಾಜ್ಯ ನದಿ ನಿರ್ವಹಣಾ ಮಂಡಳಿಗೆ ಒಂದು ವೈಜ್ಞಾನಿಕ ಪಾತ್ರವಿರುವುದಿಲ್ಲವೇ? ಸದ್ಯದ ಅನ್ಯಾಯದ ವಿರುದ್ಧ ಹೋರಾಡುತ್ತಿರುವಾಗ ಶಾಶ್ವತವನ್ನು ಅಲಕ್ಷಿಸುವ ಒಂದು ದುಡುಕು ಮತ್ತು ಕುರುಡು ಸಾಮಾನ್ಯವಾಗಿ ಎಲ್ಲಾ ಬಗೆಯ ಹೋರಾಟಗಳನ್ನೂ ಆವರಿಸುತ್ತದೆ. ಅಂತಹ ಕುರುಡು ಹುಟ್ಟಿಸುವ ವಾದ ಮತ್ತು ತರ್ಕಗಳು ಕೆಲವೊಮ್ಮೆ ಅಪ್ರಜಾತಾಂತ್ರಿಕ ಹಾಗೂ ದೀರ್ಘಕಾಲೀನವಾಗಿ ನಷ್ಟವನ್ನುಂಟು ಮಾಡುವ ಸಾಧ್ಯತೆಯನ್ನು ಹೊಂದಿರುತ್ತದೆ.

ನದಿನೀರು ಹಂಚಿಕೆ-ಅಂಬೇಡ್ಕರ್ ಪರಿಹಾರೋಪಾಯಗಳು 
ಈ ಹಿನ್ನೆಲೆಯಲ್ಲಿ ನೋಡಿದಾಗ ಅಂತರ್‌ರಾಜ್ಯ ನದಿ ನೀರು ಹಂಚಿಕೆಯ ವಿಷಯದಲ್ಲಿ ಅಂತರ್‌ರಾಜ್ಯ ನದಿ ನೀರು ನಿರ್ವಹಣಾ ಮಂಡಳಿಗಳ ಪಾತ್ರದ ಬಗ್ಗೆ ಅಂಬೇಡ್ಕರ್‌ರವರ ದೃಷ್ಟಿಕೋನ ಇದರ ಬಗ್ಗೆ ಒಂದು ಸ್ಪಷ್ಟ ಜನಪರ ಮತ್ತು ರಾಷ್ಟ್ರೀಯ ತಿಳುವಳಿಕೆಯನ್ನು ನೀಡುತ್ತದೆ.

ನಮಗೆಲ್ಲಾ ತಿಳಿದಿರುವಂತೆ ಅಂಬೇಡ್ಕರ್ ಅವರು 1943-45ರ ಅವಧಿಯ ಬ್ರಿಟಿಷ್ ಮಂತ್ರಿಮಂಡಲದಲ್ಲಿ ಕಾರ್ಮಿಕ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಗಳ ಮುಖ್ಯಸ್ಥರಾಗಿದ್ದರು. ನಂತರದಲ್ಲಿ ಭಾರತ ಸಂವಿಧಾನ ರಚನಾ ಸಭೆಯ ಕರಡು ರಚನೆಯ ಮುಖ್ಯಸ್ಥರಾಗಿದ್ದು ಮಾತ್ರವಲ್ಲದೆ 1951ರ ತನಕ ಕಾನೂನು ಮಂತ್ರಿಯೂ ಆಗಿದ್ದರು. ಎಲ್ಲಕ್ಕಿಂತ ವಿಶೇಷವಾಗಿ ಇಡೀ ದೇಶ ಕೇವಲ ಬ್ರಿಟಿಷರಿಂದ ಪಡೆಯಬೇಕಾದ ರಾಜಕೀಯ ‘ಸ್ವಾತಂತ್ರ್ಯ’ದ ಬಗ್ಗೆ ಮಾತ್ರ ಮಾತಾಡುತ್ತಿದ್ದಾಗ ದೇಶದೊಳಗೆ ದಮನಿತ ಜನಕ್ಕೆ ಬೇಕಾದ ಜಾತಿ ಮತ್ತು ವರ್ಗ ದಮನಗಳಿಂದ ‘ಸ್ವಾತಂತ್ರ್ಯ’ದ ಬಗ್ಗೆ ಸಮಾನತೆಯಿಂದ ಕೂಡಿದ ನೈಜ ಸ್ವಾತಂತ್ರ್ಯದ ಬಗ್ಗೆ ಹೋರಾಡುತ್ತಿದ್ದರು. ದೇಶದ ಹಲವು ಪ್ರಮುಖ ನೀರಾವರಿ ಯೋಜನೆ, ಹಣಕಾಸು ಯೋಜನೆ ಮತ್ತು ಆರ್ಥಿಕ ವ್ಯವಸ್ಥೆ, ಶಿಕ್ಷಣ ನೀತಿ, ಕಾರ್ಮಿಕ ನೀತಿ ಇವೆಲ್ಲವುಗಳಲ್ಲಿ ಸಮಪಾಲು ಮತ್ತು ಸಮಬಾಳಿನ ಗುರಿಯನ್ನು ಸ್ಥಾಪಿಸಲು ಶ್ರಮಿಸಿದರು. ಹೀಗಾಗಿ ನದಿನೀರು ಹಂಚಿಕೆಯ ಬಗ್ಗೆ ಅಂಬೇಡ್ಕರ್ ಅವರ ಚಿಂತನೆ ಕೇವಲ ನೀರಾವರಿ ತಜ್ಞರ ಅಥವಾ ನೀರು ಹಂಚಿಕೆಯ ಪರಿಣತಿಯ ದೃಷ್ಟಿಕೋನ ಮಾತ್ರವಾಗಿರಲ್ಲಿಲ್ಲ. ನೀರಾವರಿ ಮತ್ತು ನದಿ ನೀರು ಹಂಚಿಕೆಯ ಬಗ್ಗೆ ಅವರ ಯೋಜನೆ, ಸಲಹೆ ಮತ್ತು ಮಾರ್ಗದರ್ಶನದ ಮಾನದಂಡಗಳು 1943-49ರ ನಡುವೆ ಅವರು ಮಾಡಿದ ಭಾಷಣ, ಬರಹ ಮತ್ತು ನೀಡಿದ ಮಾರ್ಗದರ್ಶನಗಳಲ್ಲಿ ದಕ್ಕುತ್ತವೆ.

 ಅದರಲ್ಲೂ ವಿಶೇಷವಾಗಿ ದಾಮೋದರ್ ಕಣಿವೆ, ಸೋನ್ ನದಿ ಯೋಜನೆ ಮತ್ತು ಮಹಾನದಿ ಯೋಜನೆಗಳನ್ನು ರೂಪಿಸುವಲ್ಲಿ ಅವರು ರೂಪಿಸಿದ ತಾತ್ವಿಕತೆ ಮತ್ತು ಮಾರ್ಗದರ್ಶನಗಳು ಮತ್ತು ಸ್ವಾತಂತ್ರ್ಯಾನಂತರದಲ್ಲೂ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಅಂತರ್‌ರಾಜ್ಯ ಜಲ ವಿವಾದ ಕಾಯ್ದೆ, ಅಂತರ್‌ರಾಜ್ಯ ಜಲ ನಿಗಮ ಕಾಯ್ದೆ ಮತ್ತು ಆರ್ಟಿಕಲ್ 262 - ಇವುಗಳಲ್ಲಿ ಅಂತರ್‌ರಾಜ್ಯ ನದಿ ನೀರು ಹಂಚಿಕೆ ಮತ್ತು ನಿರ್ವಹಣೆಗಳಲ್ಲಿ ಅಂಬೇಡ್ಕರ್ ಅವರ ಚಿಂತನೆಗಳೇನಿದ್ದವು ಎಂಬುದನ್ನು ಎತ್ತಿ ತೋರಿಸುತ್ತವೆ.

ಎಲ್ಲಾ ಬರಹಗಳಲ್ಲಿ ಹರಿದಿರುವ ಅಂಬೇಡ್ಕರ್ ಚಿಂತನೆಗಳಲ್ಲಿ ನದಿ ನೀರು ಹಂಚಿಕೆಯ ಬಗ್ಗೆ ಅವರು ನೀಡಿರುವ ಸಲಹೆಗಳನ್ನು ಹೀಗೆ ಸಾರಾಂಶೀಕರಿಸಬಹುದು:

1. ನೀರು ಮತ್ತು ನದಿ ಒಂದು ಅಪೂರ್ವವಾದ ಹಾಗೂ ಎಲ್ಲರಿಗೂ ಸೇರಬೇಕಾದ ಸಂಪನ್ಮೂಲ ಮತ್ತು ಒಂದು ಕೃಷಿ ಆಧಾರಿತ ದೇಶದಲ್ಲಿ ಅದರ ಸಂಪೂರ್ಣ ಮತ್ತು ಸದ್ಬಳಕೆ ಅತ್ಯಗತ್ಯ.

2. ನೀರು ಬಳಕೆಯ ಕುರಿತಾದ ನೀತಿ ಪ್ರಧಾನವಾಗಿ ಈ ದೇಶದ ಅತ್ಯಂತ ಕೆಳಗಿನ ಹಂತದಲ್ಲಿರುವ ಜನತೆಯ ಜೀವನ ಮಟ್ಟವನ್ನು ಸುಧಾರಿಸುವುದೇ ಆಗಿರಬೇಕು.

3. ಅಂತರ್‌ರಾಜ್ಯ ನದಿಗಳ ಬಗ್ಗೆ ಯೋಜನೆಯನ್ನು ರೂಪಿಸುವಾಗ ನೀರಾವರಿ, ವಿದ್ಯುತ್ ಮತ್ತು ಜಲಮಾರ್ಗ ಅಭಿವೃದ್ಧಿ ಎಂಬ ಬಹುಪಯೋಗಿ ನದಿ ಯೋಜನೆಗಳನ್ನು ರೂಪಿಸಬೇಕು.

4. ಅಂತರ್‌ರಾಜ್ಯ ನದಿ ನೀರು ಹಂಚಿಕೆ ಮಾಡಿಕೊಳ್ಳುವಾಗ ಇಡೀ ನದಿ ಕಣಿವೆಯನ್ನು ಒಂದು ಸಮಗ್ರ ಏಕ ಜಲಘಟಕವನ್ನಾಗಿ ಪರಿಗಣಿಸಿ ಯೋಜನೆಯನ್ನು ರೂಪಿಸಿಕೊಳ್ಳಬೇಕು.

5. ಅದಕ್ಕಾಗಿ ಅಂತರ್‌ರಾಜ್ಯ ನದಿ ನೀರಿನ ಬಳಕೆಯ ಬಗ್ಗೆ ಸ್ಥಳೀಯ (local) ದೃಷ್ಟಿಕೋನವನ್ನು ತೊರೆದು ಪ್ರಾದೇಶಿಕ (regional) ಅರ್ಥಾತ್ ನದಿ ನೀರು ಹರಿವ ಅಷ್ಟೂ ರಾಜ್ಯಗಳ ಪ್ರದೇಶವನ್ನು ಒಂದು ಪ್ರಾದೇಶಿಕ ಘಟಕವನ್ನಾಗಿ ಭಾವಿಸುವ ಧೋರಣೆಯನ್ನು ಬೆಳೆಸಿಕೊಳ್ಳಬೇಕು.

6. ಅಂತಹ ನದಿ ನೀರಿನ ನಿರ್ವಹಣೆ, ಬಳಕೆ ಇತ್ಯಾದಿಗಳನ್ನು ಗಮನಿಸಿಕೊಳ್ಳಲು ಒಂದು ಪ್ರಾದೇಶಿಕ ನದಿ ನೀರು ನಿರ್ವಹಣಾ ನಿಗಮವನ್ನು ರಚಿಸಿಕೊಳ್ಳಬೇಕು.

7. ಅದಕ್ಕೆ ಬೇಕಿರುವ ತಾಂತ್ರಿಕ ಪರಿಣತಿ, ಇತ್ಯಾದಿಗಳನ್ನು ಕೇಂದ್ರವೇ ಒದಗಿಸಬೇಕು.

 8. ಇದರಿಂದ ಆಗುವ ಅಭಿವೃದ್ಧಿಯ ಫಲವು ಅಗ್ಗದ ನೀರು, ಧಾನ್ಯ, ವಿದ್ಯುತ್ ಜಲಮಾರ್ಗಗಳ ರೂಪದಲ್ಲಿ ದೇಶದ ಕಟ್ಟಕಡೆಯ ಜನರಿಗೆ ದಕ್ಕಬೇಕು.

ಇವಿಷ್ಟೂ ಅಂಬೇಡ್ಕರ್ ಅವರು ನದಿ ನೀರು ಬಳಕೆ ಮತ್ತು ಹಂಚಿಕೆಯ ಕುರಿತು ರೂಪಿಸಿದ ಸೂತ್ರಗಳು. ಈ ಸೂತ್ರದನ್ವಯ ದೇಶದಲ್ಲೇ ಪ್ರಥಮವಾಗಿ ರಚಿತವಾದ ದಾಮೋದರ್ ಕಣಿವೆ ನಿಗಮ ಈಗಲೂ ಬಿಹಾರ, ಬಂಗಾಳಗಳ ನೆರೆ ಭೀತಿಯನ್ನು ತಗ್ಗಿಸಿ ಸಾಕಷ್ಟು ಪ್ರಾದೇಶಿಕ ಅಭಿವೃದ್ಧಿಗೆ ಕಾರಣವಾಗಿದೆ. ಹಾಗೆಯೇ ಮಹಾನದಿಗೆ ಅಡ್ಡವಾಗಿ ಕಟ್ಟಲಾದ ಹಿರಾಕುಡ್ ಅಣೆಕಟ್ಟು ಸಹ. ಒಂದು ನದಿ ಕಣಿವೆಯನ್ನು ಒಂದೇ ಜಲಘಟಕವನ್ನಾಗಿ ಮತ್ತು ಇಡೀ ಪ್ರದೇಶವನ್ನು ಒಂದೇ ಪ್ರಾದೇಶಿಕ ಘಟಕವನ್ನಾಗಿ ಪರಿಗಣಿಸಿ ಯೋಜನೆಯನ್ನು ರೂಪಿಸುವ ಮೂಲಕ ಪ್ರತಿ ಹನಿ ನೀರಿನ ಗರಿಷ್ಠ ಪ್ರಯೋಜನ ಸಾಧ್ಯವಾಗುತ್ತದೆ. ಆಯಾ ಪ್ರದೇಶದ ಭೂಮಿ, ಸಾರ, ಹವಾಮಾನಗಳನ್ನು ಆಧರಿಸಿ ಮತ್ತು ಲಭ್ಯವಿರುವ ನೀರಿನ ಗರಿಷ್ಠ ಬಳಕೆಯ ಸಾಧ್ಯತೆಯನ್ನು ಗಮನದಲ್ಲಿರಿಸಿಕೊಂಡು ಬೆಳೆ ಮತ್ತು ಕೃಷಿ ಪದ್ಧತಿಯನ್ನೂ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಯು ಅಂದಿಗಿಂತ ಇನ್ನೂ ಅತ್ಯಂತ ಸಂಕೀರ್ಣವಾದ ಬಳಕೆ, ತಾಳಿಕೆ ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ಸಂದರ್ಭದಲ್ಲೂ ಈ ಪರಿಕಲ್ಪನೆ ಅತ್ಯುತ್ತಮ ಮಾದರಿಯಾಗಿದೆ.

ಕೃಷಿ ಕಾರ್ಪೊರೇಟೀಕರಣದ ಕಾಲದಲ್ಲಿ ನದಿ ಪ್ರಾಧಿಕಾರಗಳು ಪರಿಹಾರದ ಭಾಗವಾಗಬಲ್ಲವೇ? 
ಆದರೆ ಅಂಬೇಡ್ಕರ್ ಅವರ ಜಲನೀತಿ ಮತ್ತು ನದಿನೀರು ಹಂಚಿಕೆ ನೀತಿಗಳನ್ನು ಅವರ ಕೃಷಿ ಮತ್ತು ಆರ್ಥಿಕ ನೀತಿಗಳಿಂದ ಹೊರಗಿಟ್ಟು ನೋಡಲೂ ಸಾಧ್ಯವಿಲ್ಲ. ಅವರ ಇತರ ಆರ್ಥಿಕ ಬರಹಗಳಲ್ಲಿ ಅವರು ದೇಶದ ಕೃಷಿ ಸಮಸ್ಯೆ ಬಗೆಹರಿಯಬೇಕೆಂದರೆ ಕೃಷಿಯ ರಾಷ್ಟ್ರೀಕರಣವಾಗಬೇಕೆಂದು ಪ್ರತಿಪಾದಿಸುತ್ತಾರೆ. ಅದಿಲ್ಲದೆ ದೊಡ್ಡ ಭೂ ಮಾಲಕ ಮತ್ತು ಸಣ್ಣ ರೈತರು ಕೂಡಿರುವ ಗ್ರಾಮಗಳ ಕೃಷಿ ಘಟಕವು ದಿನೇದಿನೇ ಸಣ್ಣ ರೈತರನ್ನು, ಹಾಗೆಯೇ ಕೃಷಿ ರಂಗವನ್ನು ದಿವಾಳಿ ಎಬ್ಬಿಸುತ್ತದೆ ಎಂದೂ ಅವರು ಪ್ರತಿಪಾದಿಸಿದ್ದರು. ಭಾರತದ ಆರ್ಥಿಕತೆಯ ಗುರಿ ಆರ್ಥಿಕ ಪುನರುಜ್ಜೀವನವೇ ಆದರೂ ಅದು ಸಂಪತ್ತಿನ ಸಮಾನ ಹಂಚಿಕೆಯ ಜೊತೆಜೊತೆಗೆ ಆಗಬೇಕೆಂಬುದು ಮತ್ತು ದೇಶದ ಕೀಲಕ ಆರ್ಥಿಕ ಕ್ಷೇತ್ರಗಳಲ್ಲಿ ಪ್ರಭುತ್ವವು ಪ್ರಧಾನ ಜವಾಬ್ದಾರಿ ಯನ್ನು ಹೊತ್ತುಕೊಂಡು ಈ ಗುರಿಯನ್ನು ಸಾಧಿಸಬೇಕೆಂಬುದು ಪ್ರತಿಪಾದಿಸಿದ್ದರು. ಅಂಬೇಡ್ಕರ್ ಅವರ ಅಂತರ್‌ರಾಜ್ಯ ನದಿ ನೀರು ನಿಗಮ ಮತ್ತು ಹಂಚಿಕೆಯ ಯೋಜನೆಗಳೂ ಈ ಆರ್ಥಿಕ ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲೇ ಹುಟ್ಟಿಕೊಂಡಿವೆ. ನದಿ ಕಣಿವೆ ಪ್ರದೇಶದಲ್ಲಿ ಭೂಮಾಲಕ ಮತ್ತು ಸಣ್ಣ ರೈತರೆಂಬ ವಿಂಗಡಣೆ ಇರುವುದಿಲ್ಲ ಮತ್ತು ತಮಿಳು ಮತ್ತು ಕನ್ನಡ ರೈತರೆಂಬ ವಿಂಗಡಣೆಯೂ ಇರುವುದಿಲ್ಲ. ಮೇಲಾಗಿ ಕೃಷಿಯು ರಾಷ್ಟ್ರೀಕರಣವಾಗಿರುತ್ತದಾದ್ದರಿಂದ ಮಳೆ ಕೊರತೆ-ನೀರು ಹರಿವಿನಿಂದ ಆಗುವ ಏರುಪೇರುಗಳು ಅಂತಿಮವಾಗಿ ರೈತನ ಬದುಕನ್ನೇನೂ ಏರುಪೇರು ಮಾಡುವುದಿಲ್ಲ. ಹೀಗಾಗಿ ಸಂಕಷ್ಟ ಮತ್ತು ಲಾಭ ಎರಡನ್ನು ಇಡೀ ಕೃಷಿ ಸಮುದಾಯ ಮತ್ತು ದೇಶ ಒಂದು ಘಟಕವಾಗಿ ಎದುರಿಸುತ್ತದೆ.

ಆದರೆ ಕೃಷಿಯು ಇಂದು ರಾಷ್ಟ್ರೀಕರಣವಾಗುವುದಿರಲಿ, ಕಾರ್ಪೊರೇಟೀಕರಣ ವಾಗುತ್ತಿದೆ. ನದಿ ನೀರಿನ ಆಸರೆ ಹೆಚ್ಚಿರುವ ಕಡೆಗಳಲ್ಲೇ ಕಾರ್ಪೊರೇಟ್ ಕೃಷಿ ಹಿತಾಸಕ್ತಿಗಳು ಡೇರೆ ಹಾಕುತ್ತಿವೆ. ದೊಡ್ಡ ಮಟ್ಟದಲ್ಲಿ ಸಣ್ಣ ಹಿಡುವಳಿದಾರರು ಕೃಷಿಯಿಂದ ಒಕ್ಕಲೇಳುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ನದಿ ಪ್ರಾಧಿಕಾರಗಳು ಅಂಬೇಡ್ಕರ್ ಸೂಚಿಸಿದ ಪರಿಹಾರವನ್ನು ಒದಗಿಸುವುದಿಲ್ಲ. ಜೊತೆಗೆ ಇಂದಿನ ಭಾರತದಲ್ಲಿ ನದಿನೀರು ಅತ್ಯಂತ ಗರಿಷ್ಠ ಮಟ್ಟದಲ್ಲಿ ಬಳಕೆಯಲ್ಲಿರುವ ಕಾವೇರಿಯಂತಹ ನದಿ ಕಣಿವೆಗಳಲ್ಲಿ ಕೃಷಿಯ ಕಾರ್ಪೊರೇಟೀಕರಣವು ಸಾಮಾನ್ಯ ರೈತಾಪಿಗೆ ಮತ್ತು ಸಾಮಾನ್ಯ ಜನರಿಗೆ ಕಾವೇರಿಯ ಲಭ್ಯತೆಯನ್ನು ಇನ್ನಷ್ಟು ಸೀಮಿತಗೊಳಿಸಲಿದೆ. ಇವು ಈಗಾಗಲೇ ಪ್ರದೇಶ-ಪ್ರದೇಶಗಳ ನಡುವೆ, ಒಂದು ಪ್ರದೇಶದ ವರ್ಗ ಮತ್ತು ಜಾತಿಗಳ ನಡುವೆ ಇರುವ ಸಂಪನ್ಮೂಲ ತಾರತಮ್ಯಗಳನ್ನು ಇನ್ನಷ್ಟು ಹೆಚ್ಚಿಸಲಿವೆ. ಹೀಗಾಗಿ ಅಂಬೇಡ್ಕರ್ ಪ್ರತಿಪಾದಿಸಿದ ಭೂಮಿ, ಸಂಪತ್ತು, ರಾಜಕೀಯ ಅವಕಾಶಗಳ ಪ್ರಜಾತಾಂತ್ರೀಕರಣ, ರಾಷ್ಟ್ರೀಕರಣ ಮತ್ತು ಸಮಾಜವಾದೀಕರಣ ವಾಗದಿದ್ದರೆ, ‘ಅಂತರ್‌ರಾಜ್ಯ ನದಿ ನೀರು ನಿರ್ವಹಣಾ ಮಂಡಳಿ’ಯಾಗಿರುವ ಕಾವೇರಿ ಪ್ರಾಧಿಕಾರವೂ ಪರಿಹಾರದ ಭಾಗಕ್ಕಿಂತ ಸಮಸ್ಯೆಯ ಭಾಗವಾಗುವ ಅವಕಾಶವೇ ಹೆಚ್ಚು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top