ಒಂದೇ ಗುರಿ, ಬೇರೆ ದಾರಿ! | Vartha Bharati- ವಾರ್ತಾ ಭಾರತಿ

--

ಒಂದೇ ಗುರಿ, ಬೇರೆ ದಾರಿ!

ಕೃತಿಯ ಒಂದು ಸಂದರ್ಭದಲ್ಲಿ ಲೇಖಕರು ಹೇಳುವ ಈ ಮಾತುಗಳು ಇಡೀ ಕೃತಿಯ ದರ್ಶನವನ್ನು ದಾಖಲಿಸುತ್ತವೆ:
‘‘ಇತಿಹಾಸದ ನಿರ್ದಯತೆಯೇ ಅಂಥದ್ದು:
ಸತ್ಯ ಅಹಿಂಸೆ ಮತ್ತು ಧರ್ಮಗಳೇ ಉಸಿರು ಎಂದು ತಿಳಿದಿದ್ದ ಶ್ರೇಷ್ಠ ಹಿಂದೂ ಸನಾತನಿ, ಮತಾಂಧ ಸನಾತನಿಗೆ ಬಲಿಯಾದರು.
ಹುಟ್ಟಿನಿಂದಷ್ಟೇ ಹಿಂದೂವಾಗಿದ್ದೇನೆ, ಅದೇ ಧರ್ಮದಲ್ಲಿ ಸಾಯಲಾರೆ ಎಂದಿದ್ದ ಅವೈದಿಕ ಬಂಡಾಯಗಾರ ಬುದ್ಧ ಧರ್ಮವನ್ನು ಸ್ವೀಕರಿಸಿದರು.’’


ಕಳೆದ ಅಂದಾಜು ಏಳು ದಶಕಗಳಲ್ಲಿ ಬೆಳೆದ ಆಡಳಿತ, ಅಭಿವೃದ್ಧಿ ಮತ್ತು ರಾಜಕಾರಣವನ್ನು ನೆನಪು ಮಾಡಿಕೊಂಡರೆ, ಅವನ್ನು ಅವಲೋಕಿಸಿದರೆ ರಾಜಕೀಯವು ಚುನಾವಣೆಗಷ್ಟೇ ಸೀಮಿತವಾಗಿರುತ್ತಿತ್ತು ಮತ್ತು ಉಳಿದಂತೆ ಘನತೆಯುಳ್ಳ ರಾಜಕಾರಣ ದೇಶವನ್ನಾಳುತ್ತಿತ್ತು. ಜನಪ್ರತಿನಿಧಿಗಳ ಚರ್ಚೆಯು ಅರ್ಥ/ಜ್ಞಾನ-ಪೂರ್ಣವೂ ಆಗಿರುತ್ತಿತ್ತು. ಹಾಸ್ಯವಿದ್ದರೂ ವ್ಯಂಗ್ಯವಿರಲಿಲ್ಲ; ದ್ವೇಷಕ್ಕೆ ಸ್ಥಾನವಿರಲಿಲ್ಲ. ವೈಯಕ್ತಿಕ ಅವಮಾನದ ಪ್ರಶ್ನೆಯಿರಲಿಲ್ಲ. ಸಾರ್ವಜನಿಕ ಬೊಕ್ಕಸದ ಕುರಿತು ಸದಾ ಜಾಗೃತಿ, ಎಚ್ಚರವಿರುತ್ತಿತ್ತು. ಅಭಿವೃದ್ಧಿಯಲ್ಲಿ ಪಕ್ಷರಾಜಕೀಯವು ಮುಖ್ಯವಾಗಿರಲಿಲ್ಲ. ಯಾವ ಸಾಧನೆಯೂ ದೇಶದ ಸಾಧನೆಯೆನಿಸಿಕೊಳ್ಳುತ್ತಿತ್ತು, ಮತ್ತು ಎಲ್ಲರೂ ಇದರಲ್ಲಿ ತೊಡಗಿಕೊಳ್ಳುತ್ತಿದ್ದರು. ಇನ್ನೊಂದು ಚುನಾವಣೆಯನ್ನು ತಡೆಯುವ ಸಲುವಾಗಿ ಪಂಜಾಬಿನಲ್ಲಿ ಆಗಿನ ಜನಸಂಘವೂ ಕಮ್ಯುನಿಸ್ಟರೂ ಸಮ್ಮಿಶ್ರ ಸರಕಾರವನ್ನು ರಚಿಸಿದ್ದರು. ನೆಹರೂ ಅವರಂತಹವರೇ ಪ್ರತಿಪಕ್ಷದವರು ಟೀಕಿಸಿದರೆ ಅದನ್ನು ಅವಮಾನಿಸುತ್ತಿರಲಿಲ್ಲ, ಬದಲಾಗಿ ಅದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದರು ಮತ್ತು ಪರಿಹಾರವನ್ನು, ಉತ್ತರವನ್ನು ಹುಡುಕುತ್ತಿದ್ದರು. ರಾಜಕೀಯ ಭಿನ್ನಾಭಿಪ್ರಾಯಗಳು ವ್ಯಕ್ತಿಗತ ಸೇಡಿಗೆ ಕಾರಣವಾಗುತ್ತಿರಲಿಲ್ಲ.

ಪಕ್ಷ ಬಿಟ್ಟುಹೋದವರಿದ್ದರು; ಪ್ರತ್ಯೇಕ ಪಕ್ಷ ಕಟ್ಟಿದವರಿದ್ದರು. ಆದರೆ ಪಕ್ಷಾಂತರವಿರಲಿಲ್ಲ. ಬಹುಮತಕ್ಕೆ ಗೌರವವಿತ್ತು. ಆದರೆ ಆಡಳಿತ ಸುಧಾರಣೆಗೆ, ಹೊಸ ಯೋಜನೆಗಳಿಗೆ, ಅದೇ ಮಾನದಂಡವಾಗಿರಲಿಲ್ಲ. (ಅಪರೂಪದ ಅಪವಾದಗಳಿದ್ದಿರಬಹುದು.) ಬಹಳಷ್ಟು ಬದಲಾವಣೆಯಾಗಿದೆ. ಯಾವುದು ಅಪವಾದವೋ ಅದು ನಿಯಮವಾಗಿದೆ. ರಾಜಕೀಯಕ್ಕೆ ಘನತೆ ಬೇಕಿಲ್ಲವೆಂಬುದು ಹೊಸ ಪ್ರಮೇಯವಾಗಿದೆ. ‘ಹೇಗಾದರೂ’ ಅಧಿಕಾರಕ್ಕೆ ಬಂದರಾಯಿತು. ಅದನ್ನು ಉಳಿಸಿಕೊಳ್ಳಲು ‘ಏನು ಬೇಕಾದರೂ’ ಮಾಡಬಹುದು. ಕೊನೆಯಕ್ಷಣದಲ್ಲಿ ಕೈಕೊಟ್ಟು ಸರಕಾರವನ್ನುರುಳಿಸುವ ಜಾಯಮಾನ ಆರಂಭವಾಗಿದೆ. ಐದು ವರ್ಷಗಳ ಚುನಾಯಿತ ಸರಕಾರಗಳು ಐದು ದಿನವೂ ಉಳಿಯದ ದುಸ್ಥಿತಿ ಆರಂಭವಾಗಿದೆ. ಪಕ್ಷದ ಕುರಿತ ಶ್ರದ್ಧೆ ವೈಯಕ್ತಿಕ ಅಧಿಕಾರವನ್ನು ಪಡೆಯುವತ್ತ ಹೊರಳಿದೆ. ಪದವಿ, ಪ್ರತಿಷ್ಠೆಗಳು, ಅಧಿಕಾರಗಳು ಹರಾಜಿನ ವಸ್ತುವಾಗಿವೆ. ಮಾನ ಕಳೆದುಕೊಂಡರೂ ಸರಿ, ವೈಯಕ್ತಿಕ ಹಣಕಾಸು ವೃದ್ಧಿಯಾಗಬೇಕು ಎಂಬ ಹಗುರು ಮನಸ್ಥಿತಿಯೇ ವ್ಯವಸ್ಥೆಯಾಗಿದೆ.

ಸ್ಪರ್ಧೆಯ ರಾಜಕೀಯ ಅಳಿದು ಸೇಡಿನ ರಾಜಕೀಯ ಮುನ್ನೆಲೆಗೆ ಬಂದಿದೆ. ನಾವು ಭಾರತೀಯರು ಎಂಬುದು ಅಳಿದು ಹಿಂದೂ, ಮುಸ್ಲಿಮ್, ಕ್ರೈಸ್ತ ಎಂದು ಒಡೆದಾಳುವ ನೀತಿ ಆರಂಭವಾಗಿ ಅದೀಗ ಜಾತಿ-ಮತಾಧಾರಿತ ಧ್ರುವೀಕರಣದಲ್ಲಿ, ದ್ವೇಷ ರಾಜಕಾರಣದಲ್ಲಿ, ಬೀದಿಯ ರಕ್ತಪಾತದಲ್ಲಿ ತೊಡಗಿದೆ. ಪ್ರಜಾಪ್ರಭುತ್ವದ ಬುನಾದಿಗಳಲ್ಲೊಂದಾದ ಜನಸಂಹಿತೆ ಗೌಣವಾಗಿದೆ; ಪ್ರಶ್ನಿಸುವ ಮೂಲಕ ಸಂವಾದಕ್ಕೆ ಸರಕಾರವನ್ನು ಎಳೆಯುವುದೇ ದೇಶದ್ರೋಹವಾಗುವತ್ತ ದೇಶ ಜಾರಿದೆ. ಸದ್ಯದ ಭಾರತ ಯು. ಆರ್. ಅನಂತಮೂರ್ತಿಯವರು ಹೇಳಿದಂತೆ ‘ಮಾತು ಸೋತ ಭಾರತ’. ಸಂವಾದ ಸಾಧ್ಯವಾಗದ ಸ್ಥಿತಿ ನಮ್ಮ ರಾಜಕಾರಣದಲ್ಲೂ ಆಡಳಿತದಲ್ಲೂ ಇದೆ. ಯಾಕೆ ಹೀಗಾಗಿದೆ ಎಂಬುದನ್ನು ಪ್ರತ್ಯೇಕವಾಗಿ ಚರ್ಚಿಸೋಣ. ಆದರೆ ಪೂರ್ವದ ಬೆಳಕು ಹೇಗಿತ್ತು ಎಂಬುದನ್ನು ಪರಿಶೀಲಿಸುವ ಕೆಲಸ ಅಗತ್ಯದ್ದು. ಅದರಲ್ಲಿ ಜನರು ಪಾಲ್ಗೊಳ್ಳಬೇಕು, ಅಷ್ಟೇ. ಅನಾದಿಯಿಂದ ಪ್ರಕಟವಾದ ವೇದೋಪನಿಷತ್ತುಗಳೆಂಬ ಸಂಸ್ಕೃತಿಸಂಹಿತೆಗಳು, ಪುರಾಣಗಳು, ಕಾವ್ಯಗಳು, ಭವಿಷ್ಯದಲ್ಲೂ ಪ್ರಸ್ತುತವಾಗುವುದೇ ಅವುಗಳ ದೊಡ್ಡಸ್ತಿಕೆ. ಕಾಳಿದಾಸ-ಷೇಕ್ಸ್‌ಪಿಯರುಗಳು ಇಂದೂ ಓದಿನ ಆಸಕ್ತಿಗೆ ಒಗ್ಗುವುದು ಅವರು ಯಾವುದೋ ಕಾಲದಲ್ಲಿ ಬರೆದರೆಂಬ ಚಾರಿತ್ರಿಕ ಅಂಶಕ್ಕಲ್ಲ; ಅವರು ಬರೆದದ್ದು ಇಂದಿಗೂ ಸಂ್ಪದಿಸುತ್ತವೆಯಾದ್ದರಿಂದ. ಜಾರ್ಜ್ ಆರ್ವೆಲ್‌ನ ‘1984’ ಅಥವಾ ‘ಅನಿಮಲ್ ಫಾರ್ಮ್’ ಕಾದಂಬರಿಗಳು ರಾಜಕೀಯದ ಹಿಡಿತದ ಸಾರ್ವಕಾಲಿಕ ಸಮಾಜಚಿತ್ರಣದಿಂದಾಗಿ ಸಮಕಾಲೀನ ಮತ್ತು ಆನಂತರದ ತಲೆಮಾರಿನವರು ಜ್ಞಾಪಿಸಿಕೊಳ್ಳುತ್ತಾರೆ. (ಇಂತಹ ಅನೇಕ ಕೃತಿಗಳನ್ನು ಅವರವರ ಓದಿನ ಆಸಕ್ತಿಗನುಗುಣವಾಗಿ ನೆನಪುಮಾಡಬಹುದು.)

ಕನ್ನಡದ ಒಳ್ಳೆಯ ಕತೆಗಾರರೂ ಅನುವಾದಕರೂ, ವೈಚಾರಿಕ ಲೇಖಕರೂ ಆಗಿರುವ ಕೇಶವ ಮಳಗಿಯವರು ತಮ್ಮ ‘ಒಂದೇ ಗುರಿ, ಬೇರೆ ದಾರಿ’ ಎಂಬ ಸಮಾಜ ಶಾಸ್ತ್ರೀಯ ಕೃತಿಯಲ್ಲಿ ಪರಂಪರೆಯಿಂದ ಭಾರತಕ್ಕೆ ಸ್ವಾತಂತ್ರ್ಯದ ವರೆಗೂ ಬಂದ ಕೆಲವು ಉದಾಹರಣೆಗಳನ್ನು ಪರಿಶೀಲಿಸಿ ಮಾತುಕತೆ ಅಥವಾ ಸಂವಾದದಿಂದ ಸಮಾಜ ಮತ್ತು ಭವಿಷ್ಯ ಹೇಗೆ ಉಪಕೃತವಾಗಬಹುದೆಂಬುದನ್ನು ವಿವರಿಸಿದ್ದಾರೆ. ಇನ್ನೂ ಅನೇಕರ (ಭಗತ್ ಸಿಂಗ್, ಜಿನ್ನಾ ಮುಂತಾದವರ) ಅತ್ಯಗತ್ಯ ಉದಾಹರಣೆಗಳನ್ನು ಹೇಳಬಹುದಾಗಿದ್ದರೂ ಹೇಳಬೇಕಾಗಿದ್ದರೂ ‘ಸಮಯಾಭಾವದಿಂದ’ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. (242 ಪುಟಗಳ ಈ ಕೃತಿಯನ್ನು ಗಮನಿಸಿದರೆ ಅದು ‘ಸ್ಥಳಾಭಾವದಿಂದ’ ಆಗಬೇಕಿತ್ತೇನೋ ಎನಿಸುತ್ತದೆ.)

ಈ ಕೃತಿಯ ಚರ್ಚೆಯ ಸೂಚನೆ ಹೀಗಿದೆ: ‘‘ಸಮರ್ಪಕ ಕಾಲದಲ್ಲಿ, ಸಮರ್ಪಕ ಪ್ರಶ್ನೆಗಳನ್ನು ಕೇಳಬೇಕೆಂಬ ವಿವೇಚನೆಯನ್ನು ಬಿಟ್ಟುಕೊಟ್ಟು, ಎಲ್ಲರಿಗೂ ಪ್ರಿಯವಾಗುವ, ಸ್ವಾರ್ಥ ಹಿತಾಸಕ್ತಿ ಸಾಧಿಸುವ, ಅವಕಾಶವಾದದ ಅಭಿಪ್ರಾಯಗಳಿಗೆ ಮನ್ನಣೆ ದೊರಕುತ್ತಿದೆ. ಒಂದು ಸಮಾಜಕ್ಕೆ ಇದಕ್ಕಿಂತ ಅಪಾಯಕಾರಿ ಸ್ಥಿತಿ ಬೇಕಿಲ್ಲ. ಜನಪ್ರಿಯ ಸಂಸ್ಕೃತಿ ಟೊಳ್ಳಾದ, ಪ್ರತಿಗಾಮಿಯಾದ ಹಾಗೂ ಕಾಲಹರಣಕ್ಕೆ ಕಾರಣವಾಗುತ್ತಿರುವ ಸಂವಾದವನ್ನಷ್ಟೇ ಹುಟ್ಟು ಹಾಕುತ್ತಿದೆ. ಕಪ್ಪುಬಿಳುಪುಗಳ ನಡುವೆ ಹರಡಿ, ಸೂಕ್ಷ್ಮ ಪದರಗಳಲ್ಲಿ ಅಡಗಿರುವ ವಿವಿಧ ವಿನ್ಯಾಸಗಳಲ್ಲಿ ಸಾಪೇಕ್ಷಿತ ಸತ್ಯವೆನ್ನುವುದು ಇರಲು ಸಾಧ್ಯ ಎನ್ನುವುದು; ವಿಷಯ-ಸಮಸ್ಯೆಗೆ ಇರುವ ಸಂಕೀರ್ಣ ಸ್ವರ ಮತ್ತು ಆಯಾಮಗಳನ್ನು ಅರಿತುಕೊಳ್ಳುವುದು ಜನಪ್ರಿಯ, ಮುಖ್ಯವಾಹಿನಿಯ ಸಂಸ್ಕೃತಿಗೆ ಬೇಕಿಲ್ಲ. ಇಲ್ಲಿ ವಿವೇಚನೆ, ಸಂಯಮ, ಸಹನೆಗಿಂತ ಧಿಡೀರ್ ನಿರ್ಧಾರದ ಧ್ರುವೀಕರಣಕ್ಕೆ ಹೆಚ್ಚು ಮಹತ್ವ. ‘ದಾರಿ ನೂರಾರುಂಟು ಬೆಳಕಿನರಮನೆಗೆ’, ಎಂಬ ವಿಶ್ವಾಸಕ್ಕಿಂತ ರಾಜಬೀದಿ ಮೆರವಣಿಗೆಯಲ್ಲಿಯೇ ಅಪರಿಮಿತ ನಂಬಿಕೆ.’’

ಮುಂದುವರಿದ ಮಾತುಗಳು ಹೀಗಿವೆ: ‘‘ಈ ಸಮಾಜದ ಗಂಭೀರ ವಿಷಯ-ಸಮಸ್ಯೆಗಳ ಕುರಿತು ಸಂವಾದ-ಚರ್ಚೆಗಳನ್ನು ಹುಟ್ಟುಹಾಕಬೇಕಾದ ಬುದ್ಧಿಜೀವಿಗಳು ವೇದಕಾಲದ ಬ್ರಹ್ಮವಾದಿಗಳಿಗಿಂತ ಕರ್ಮಠರು, ಅಸೂಕ್ಷ್ಮರು, ಋಜುತ್ವ ಕಳೆದುಕೊಂಡವರೂ ಆಗಿ ಕಾಣುತ್ತಿದ್ದಾರೆ. ನೈತಿಕತೆ, ಪ್ರಜ್ಞೆ ಮತ್ತು ಸನ್ನಡತೆಗಳನ್ನು ಎಚ್ಚರವಾಗಿಟ್ಟುಕೊಳ್ಳುವ, ಅವುಗಳ ಶುದ್ಧಿಗಾಗಿ ಸದಾ ಪ್ರಯತ್ನಿಸುವ ಲೋಕಹಿತ ಚಿಂತಕರನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಪೋಷಿಸದ ಸಮಾಜ ಅತ್ಯಂತ ನತದೃಷ್ಟ ಸಮಾಜವೇ ಸರಿ. ನೈಜ ಸಂವಾದ, ವಾಗ್ವಾದ, ಚರ್ಚೆ, ಮಾತುಕತೆಗಳ ಗೈರುಹಾಜರಿಯಲ್ಲಿ ಯುವಜನರಿಗೆ ತೀವ್ರ ನಿರಾಸೆ, ಭ್ರಮನಿರಸನಕ್ಕೆ ಒಳಗಾಗುತ್ತಿದೆ. ಕನಸು ಮತ್ತು ಭರವಸೆಗಳಿಲ್ಲದ, ಸ್ವಾರ್ಥ, ಉದ್ವಿಗ್ನತೆ, ಕೃತಕ ಉನ್ಮಾದ, ತೋರಿಕೆಯ ಗದ್ದಲ ತುಂಬಿರುವ ಕತ್ತಲೆಯ ದಾರಿ ಯುವಸಮುದಾಯವನ್ನು ಗೊಂದಲಕ್ಕೀಡುಮಾಡುತ್ತಿವೆ. ಇಂತಹ ಅವ್ಯವಸ್ಥೆ ಅವರನ್ನು ಧ್ರುವೀಕರಣಕ್ಕೆ ಒಳಪಡಿಸುತ್ತಿದೆ. ಧ್ರುವೀಕರಣಕ್ಕೆ ನಾನಾ ಸೈದ್ಧಾಂತಿಕ ಬಣ್ಣಗಳನ್ನು ಲೇಪಿಸಲಾಗುತ್ತದೆಯಾದರೂ ಅದು ಆಳದಲ್ಲಿ ಕರಾಳ ಮುಖವನ್ನೇ ಹೊಂದಿದೆ.’’

ಈ ಕೃತಿ ಪ್ರಕಟವಾಗಿರುವುದು 2018ರಲ್ಲಿ. (ಪಲ್ಲವ ಪ್ರಕಾಶನ, ಚನ್ನಪಟ್ಟಣ. ಬೆಲೆ:ರೂ.220.) ಅದಕ್ಕೆ ಮೊದಲು ‘ಸುಮಾರು ನಾಲ್ಕು ವರ್ಷಗಳಿಂದ’ ಈ ಪುಸ್ತಕ ರಚನೆಯಾಗುತ್ತಲಿತ್ತು. ಹೇಗೇ ಇರಲಿ, ದಿಕ್ಸೂಚಿ/ಆಶಯ ರೂಪದ ಮೊದಲ ಅಧ್ಯಾಯದಲ್ಲಿ ಲೇಖಕರ ಆತಂಕ ಪ್ರವಾದಿಸ್ಥಾನದಲ್ಲಿತ್ತೆಂಬುದು ಮತ್ತು ಇಷ್ಟು ಬೇಗ ಅದು ಸಾಕಾರವಾಗಿ ಮೆರೆಯಬಲ್ಲುದೆಂಬುದು ಇಂದಿನ ಭಾರತದ ಸ್ಥಿತಿಯನ್ನು ಅವಲೋಕಿಸಿದರೆ ಅರಿವಾಗುತ್ತದೆ.

ಈ ಕೃತಿಯು ಉಪನಿಷತ್ತು ಮತ್ತು ಜಾತಕ ಕಥೆಗಳಿಂದ ಆಯ್ದ ಮೂರು ಆರ್ಷೇಯ ಸಂಕಥನಗಳನ್ನು ವಿಶ್ಲೇಷಿಸಿ ಆನಂತರ ಗಾಂಧಿ ಮತ್ತು ಇತರರು ಎಂಬ ಪ್ರಸಂಗಗಳ ಮೂಲಕ ಆಧುನಿಕ ಭಾರತದ ಅಸದೃಶ ವ್ಯಕ್ತಿ(ತ್ವ)ಗಳನ್ನು ಹೊಂದಿಸಿಕೊಂಡಿದೆ. ಮೊದಲ ಭಾಗದಲ್ಲಿ ಕಥೋಪನಿಷತ್ತಿನ ನಚಿಕೇತನ ಪ್ರಸಂಗ ಮತ್ತು ಮುಖ್ಯವಾಗಿ ಆತನಿಗೂ ಯಮನಿಗೂ ನಡೆಯುವ ಸಂವಾದ, ಆನಂತರ ಬೃಹದಾರಣ್ಯಕದ ಯಾಜ್ಞವಲ್ಕ-ಮೈತ್ರೇಯಿಯರ ಸಂವಾದ ಮತ್ತು ಕೊನೆಗೆ ಬುದ್ಧ-ಅಜಾತಶತ್ರುವಿನ ನಡುವಣ ಸಂವಾದದ ಮುಖ್ಯ ಭಾಗಗಳನ್ನು ವಿವರಿಸಲಾಗಿದೆ. ಇವು ತಮ್ಮಷ್ಟಕ್ಕೆ ತಾವೇ ಸಾಂದ್ರವಾದವುಗಳು; ಸ್ವವಿವರಿಸಿಕೊಳ್ಳಬಲ್ಲವು. ಆದ್ದರಿಂದ ಒಮ್ಮೆ ವಿಚಾರವನ್ನು ಮೂಡಿಸಿದ ಮೇಲೆ ಲೇಖಕರು ಅದನ್ನು ಹಾಗೆಯೇ ಓದುಗನ ಮನಸ್ಸಿನಲ್ಲಿ ಒಡಮೂಡಿಸಲು ಯಶಸ್ವಿಯಾಗುತ್ತಾರೆ. ಸತ್ಯವನ್ನು ಹುಡುಕಿದರೆ ಸಾವೇ ಗತಿ ಎಂಬ ನಚಿಕೇತನ ಪ್ರಸಂಗದ ನೀತಿಯಿಂದ ಆರಂಭವಾಗಿ ಭೌತಿಕಸಂಪತ್ತು ಮನುಷ್ಯನಿಗೆ ಶಾಶ್ವತನೆಮ್ಮದಿಯನ್ನು ನೀಡದೆಂಬ ನಂಬಿಕೆಯನ್ನು ಹೇಳುವ ಯಾಜ್ಞವಲ್ಕ-ಮೈತ್ರೇಯಿಯರ ನಂಬಿಕೆಯನ್ನು ದಾಟಿ, ವೈರಾಗ್ಯ ಬದುಕಿನ ಸತ್ಫಲಗಳನ್ನು ವಿಚಾರಿಸುವ ಮುದದೊಂದಿಗೆ ಮುಗಿಯುತ್ತದೆ. ಇವೆಲ್ಲ ಪರಾರ್ಥ ಸಂಪನ್ನವಾದವುಗಳು.

ಎರಡನೇ ಭಾಗವು ಗಾಂಧಿಯನ್ನು ಕೇಂದ್ರೀಕರಿಸಿ ಅವರೊಂದಿಗೆ ಈ ಸಂವಾದದ ನಿಕಷಕ್ಕೊಡ್ಡಿಕೊಂಡ ಟಾಗೋರ್, ನೆಹರೂ, ಸುಭಾಸ್ ಹಾಗೂ ಅಂಬೇಡ್ಕರ್ ಎಂಬ ನಾಲ್ಕು ವಿಚಾರಶ್ರೇಷ್ಠರನ್ನು ಗಮನಿಸಿದೆ. ಇವೆಲ್ಲವುಗಳಲ್ಲಿ ಬಹುತ್ವ ಮತ್ತು ವೈವಿಧ್ಯಗಳೇ ಅಭಿವ್ಯಕ್ತಿಗಳಾಗಿರುವುದರಿಂದ ಭಿನ್ನಾಭಿಪ್ರಾಯಗಳು ವೈಚಾರಿಕ ಬೆಳಕಾಗಿ ಪ್ರಕಾಶಗೊಳ್ಳುತ್ತವೆ. ಇವನ್ನು ‘ನಿರುದ್ವಿಗ್ನತೆ, ನಿರಾಳತೆ ಮತ್ತು ನಿಸ್ವಾರ್ಥತೆ’ಯಿಂದ ಯೋಚಿಸಿದಾಗ ಅವು ಸಮಾಜಕ್ಕೆ ಮಾರ್ಗದರ್ಶನವಾಗುತ್ತವೆ. ಹೊಸ ವಿಚಾರಗಳನ್ನು ಮೂಡಿಸುತ್ತವೆ. ವೈಯಕ್ತಿಕ ಮತ್ತು ಸಾಮಾಜಿಕ ಬದುಕಿನ ಆಶೋತ್ತರಗಳನ್ನು ಸಮಷ್ಟಿಭಾವದಿಂದ ಕಾಣುವಂತೆ ಮಾಡುತ್ತವೆ. ಗಾಂಧಿ ಮತ್ತು ಟಾಗೋರ್ 19-20ನೇ ಶತಮಾನದಲ್ಲಿ ಈ ದೇಶ ಕಂಡ ಎರಡು ವೈಚಾರಿಕ ಆಧಾರಸ್ತಂಭಗಳು.

ಕವಿ ಟಾಗೋರ್ ಗಾಂಧಿಗೆ ಗುರುದೇವರಾದರೆ, ರಾಜಕೀಯಸಂತ ಗಾಂಧಿ ಟಾಗೋರರಿಗೆ ಮಹಾತ್ಮ. ದೇಶದ, ಸಮಾಜದ ದುರ್ದೆಶೆಯನ್ನು ಪರಿಹರಿಸಬೇಕೆಂಬ ಉದ್ದೇಶದಲ್ಲಿ ಇಬ್ಬರು ಕೈಜೋಡಿಸಿದರು. ಆದರೆ ಇತರ ಯಾವ ವಿಚಾರದಲ್ಲೂ ಅವರಿಗೆ ಒಮ್ಮತವಿರಲಿಲ್ಲ. ಗಾಂಧಿಯ ದಾರಿ ಸತ್ಯಾಗ್ರಹದ್ದು; ಟಾಗೋರರದ್ದು ಮಾನವೀಯ ನೆಲೆ. ಈ ಎರಡೂ ಗಂಧದ ಕೊರಡುಗಳು ಪರಸ್ಪರ ಪತ್ರಗಳ ಮೂಲಕ ಮಾಡಿಕೊಂಡ ವಿಚಾರ ವಿನಿಮಯ, ಪ್ರತ್ಯಕ್ಷ ಭೇಟಿಯಲ್ಲಿ ಮಾಡಿದ ಮಾತುಕತೆ, ಇವು ಅವರನ್ನು ಮಾತ್ರವಲ್ಲ, ಇತರರನ್ನು ಕೂಡಾ ಚಿಂತನೆಗೆ ಹಚ್ಚುತ್ತಿತ್ತೇ ಹೊರತು ವಿವಾದಕ್ಕಲ್ಲ. ಬಹು ಜನಪ್ರಿಯವಾದ ಅವರ ಪತ್ರೋತ್ತರಗಳ ಅನುವಾದ ಈ ಕೃತಿಯಲ್ಲಿದೆ. ಭಾಷೆ, ಭಾವ ಮತ್ತು ವಿಚಾರ ಇವೆಲ್ಲವುಗಳನ್ನೂ ಪದಗಳಲ್ಲಿ ಜೋಡಿಸಿದ ಈ ಪತ್ರಗಳು ವ್ಯಕ್ತಿತ್ವ ಸಮಗ್ರವಾಗಿವೆ. ಪ್ರಾಯಃ ಬಹುದೀರ್ಘವಾದ ಈ ಸ್ನೇಹ ಸಂಬಂಧವು ಎಂದೂ ವ್ಯಕ್ತಿಗತ ಸಂಘರ್ಷಕ್ಕೆ ಎಡೆಮಾಡಿಕೊಡದೆ ಇದ್ದದ್ದು ಇಂದಿನ ಭಾರತಕ್ಕೆ ಒಂದು ಮಾದರಿ, ಆದರ್ಶ, ಪಾಠ, ಅನುಭವ ಎಲ್ಲವೂ ಆಗಬೇಕಿತ್ತು. ಆದರೆ ವರ್ತಮಾನದ ದುರ್ದೆಶೆ ಇವುಗಳ ಯುಟೋಪಿಯನ್ ಮನಸ್ಥಿತಿಯನ್ನೂ ಈ ಕಾಲದ ಅಸಂಗತತೆಯನ್ನೂ ಹೇಳುತ್ತಿದೆಯೇನೋ?

ಇದಾದ ನಂತರ ಗಾಂಧಿ-ನೆಹರೂ, ಗಾಂಧಿ-ಸುಭಾಸ್ ಮತ್ತು ಗಾಂಧಿ-ಅಂಬೇಡ್ಕರ್ ಇವರ ಸಂವಾದವು ಹೇಗೆ ಸಂವಾದ ಪರಂಪರೆಯನ್ನು ಬೆಳೆಸಿದೆಯೆಂಬುದನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ. ನೆಹರೂ ಎಂದೂ ಗಾಂಧಿಯ ಹಿಂದ್‌ಸ್ವರಾಜ್ ಧ್ಯೇಯಗಳನ್ನು ಒಪ್ಪಿದವರಲ್ಲ. ಅವರು ಆಧುನಿಕ ಭಾರತವನ್ನು ಕಂಡ ರೀತಿಯೇ ಬೇರೆ. ಗಾಂಧಿಗೆ ನೆಹರೂ ತಮ್ಮ ಉತ್ತರಾಧಿಕಾರಿ. ಗಾಂಧಿ ದ್ರೋಣನಾದರೆ ನೆಹರೂ ಅರ್ಜುನ. ಇದಕ್ಕೆ ಪರ್ಯಾಯವಾಗಿದ್ದದ್ದು ಗಾಂಧಿ-ಸುಭಾಸರ ನಡುವಣ ಸಂಬಂಧ. ಸುಭಾಸರು ಗಾಂಧಿಯ ಪ್ರಭೆಯಲ್ಲಿ ಮಸುಕಾಗದೆ ತಮ್ಮ ಸ್ವಂತ ಪ್ರಭಾವಳಿಯನ್ನು ಬೆಳೆಸಿಕೊಂಡ ಒಂದು ಮಹಾನ್ ವ್ಯಕ್ತಿತ್ವ. ಪ್ರಾಯಃ ಸುಭಾಸರು ಗಾಂಧಿಯ ದ್ರೋಣನಿಗೆ ಏಕಲವ್ಯ. ಹಾಗೆಯೇ ಅಂಬೇಡ್ಕರ್ ಮತ್ತು ಗಾಂಧಿ ತೀರ ಭಿನ್ನ ಮತ್ತು ಸಮಾನಾಂತರವಾದ ದೃಷ್ಟಿಕೋನವನ್ನು, ತತ್ವ-ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡಂತೆ ಒಂದು ಸಂದಿನಿಂದ ಕಂಡರೂ ಅವರ ನಡುವಣ ಚರ್ಚೆಯಲ್ಲಿ ಅಂಬೇಡ್ಕರ್ ಗಾಂಧಿಯ ಬಗ್ಗೆ ತನಗಿದ್ದ ಗೌರವವನ್ನು ಎಂದೂ ಮಸುಕಾಗಿಸದ ಜೀವನ ಧರ್ಮವನ್ನು ಹೊಂದಿದ್ದನ್ನು ಕಾಣುತ್ತೇವೆ.

ಅಂಬೇಡ್ಕರ್ ಅಪ್ರತಿಮ ದೇಶಭಕ್ತರು ಹೇಗೋ ಹಾಗೆಯೇ ವಿಶಾಲವಿಚಾರಪರರು ಎಂದು ಗಾಂಧಿ ಹೇಳುತ್ತಾರೆ. ಇಂದಿನ ಹೊಸ ವ್ಯಾಖ್ಯಾನಕಾರರು ಸುಭಾಸ್ ಮತ್ತು ಗಾಂಧಿ ಹಾಗೂ ಸುಭಾಸ್ ಮತ್ತು ನೆಹರೂ, ಹಾಗೆಯೇ ಗಾಂಧಿ-ಅಂಬೇಡ್ಕರ್-ನೆಹರೂ ಇವರುಗಳ ನಡುವೆ ಕಡಲಿನ ಅಂತರವಿತ್ತೆಂದು ವಾದಿಸುತ್ತಾರೆ. ಆದರೆ ಅವರಲ್ಲಿದ್ದದ್ದು ವೈಚಾರಿಕ ಸಂಘರ್ಷವೇ ಹೊರತು ಆತ್ಮೀಯತೆಯ ಅಭಾವವಲ್ಲ. ಅವೆಲ್ಲ ಲೋಕೋತ್ತರ ಆದರ್ಶಗಳ ನಕ್ಷತ್ರ ಲೋಕ. ಅವರ ನಡುವಣ ಸಾಂಗತ್ಯದಿಂದ ಲೋಕಹಿತದ ಸಂವಾದ ಸೃಷ್ಟಿಯಾಯಿತೇ ವಿನಾ ದ್ವೇಷ ರಾಜಕೀಯವಲ್ಲ. ಈ ಸಂವಾದಗಳಲ್ಲಿ ಜಾತಿ, ಮತ, ರಾಷ್ಟ್ರೀಯತೆ, ಸಾಮಾಜಿಕ ಸುಧಾರಣೆ ಮುಂತಾದ ಅನೇಕ ಪ್ರಚಲಿತ ವಿಚಾರಗಳ ಕುರಿತು ಚರ್ಚೆಗಳಾಗಿವೆ. ಇಂದಿನ ಮಾರಣಾಂತಿಕ ಏಕರೂಪತೆಯನ್ನು ಈ ಕೃತಿ ಭಂಗಿಸುತ್ತದೆ. ಕೃತಿಯ ಒಂದು ಸಂದರ್ಭದಲ್ಲಿ ಲೇಖಕರು ಹೇಳುವ ಈ ಮಾತುಗಳು ಇಡೀ ಕೃತಿಯ ದರ್ಶನವನ್ನು ದಾಖಲಿಸುತ್ತವೆ:
‘‘ಇತಿಹಾಸದ ನಿರ್ದಯತೆಯೇ ಅಂಥದ್ದು:

ಸತ್ಯ ಅಹಿಂಸೆ ಮತ್ತು ಧರ್ಮಗಳೇ ಉಸಿರು ಎಂದು ತಿಳಿದಿದ್ದ ಶ್ರೇಷ್ಠ ಹಿಂದೂ ಸನಾತನಿ, ಮತಾಂಧ ಸನಾತನಿಗೆ ಬಲಿಯಾದರು.
ಹುಟ್ಟಿನಿಂದಷ್ಟೇ ಹಿಂದೂವಾಗಿದ್ದೇನೆ, ಅದೇ ಧರ್ಮದಲ್ಲಿ ಸಾಯಲಾರೆ ಎಂದಿದ್ದ ಅವೈದಿಕ ಬಂಡಾಯಗಾರ ಬುದ್ಧ ಧರ್ಮವನ್ನು ಸ್ವೀಕರಿಸಿದರು.’’
ಈ ಕೃತಿ ಎಲ್ಲರ ಕೈಯಲ್ಲಿರಬಹುದಾದ ಹಳೆಯ ಮರುಕಳಿಕೆ; ಒಂದು ದರ್ಶನವಾಚಿಕೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top