‘ಗೆಲಿಲಿಯೋ’ ಎಂಬ ಬ್ರೆಕ್ಟ್‌ನ ಪ್ರವಾದಿ ನಾಟಕ | Vartha Bharati- ವಾರ್ತಾ ಭಾರತಿ

--

‘ಗೆಲಿಲಿಯೋ’ ಎಂಬ ಬ್ರೆಕ್ಟ್‌ನ ಪ್ರವಾದಿ ನಾಟಕ

ವರ್ತಮಾನ ಭಾರತದ ಅನಾರೋಗ್ಯ ಗೋಳನ್ನು ಚಿತ್ರಿಸುವ ಸಂವೇದನಾಶೀಲ ಬರಹಗಾರರು, ಚಿಂತಕರು, ಅಲ್ಬರ್ಟ್ ಕಮೂವಿನ ‘ದಿ ಪ್ಲೇಗ್’ನ್ನು ರೂಪಕವಾಗಿ ಪ್ರದರ್ಶಿಸುತ್ತಾರೆ. ಒಂದು ಸೋಂಕಿನ ಬಾಧೆೆಯಲ್ಲಿ ಸಮಾಜ ಹೇಗೆ ಸ್ಪಂದಿಸುತ್ತದೆೆಯೆಂಬುದರ ಮಾರ್ಮಿಕ ಚಿತ್ರಣವಿರುವ ಈ ಕಾದಂಬರಿಯು ಒಂದು ಅಭಿಜಾತ ಕೃತಿ (Neo-Classic)ಯಾಗಿ ಉಳಿದಿದೆ. ಆದರೆ ಇದು ಜಗತ್ತಿನ ಮತ್ತು ವಿಶೇಷವಾಗಿ ವರ್ತಮಾನದ ಭಾರತದ ಸಮಸ್ಯೆಯ ಒಂದು ಮುಖವನ್ನಷ್ಟೇ ತೋರಿಸುತ್ತದೆ ಮತ್ತು ಪ್ರಾಯಃ ಓದುಗರನ್ನು ಮತ್ತಷ್ಟು ಖಾಸಗಿಯಾಗಿ ಮಾಡುತ್ತದೆ. ಇಂದಿನ ಭಾರತದಲ್ಲಿ ಕೋವಿಡ್-19 ಮಾತ್ರ ಸಮಸ್ಯೆಯಲ್ಲ. ಇದನ್ನು ನಿಭಾಯಿಸುವಲ್ಲಿ ಸರಕಾರವು ವಿಫಲವಾಗುತ್ತಲಿರುವ ಮತ್ತು ಇಂತಹ ಹೊತ್ತಿನಲ್ಲೂ ರಾಜಕೀಯ ಲಾಭಪಡೆಯುವ ವರಾತದಿಂದಾಗಿ ಇದು ಇನ್ನಷ್ಟು ಉಲ್ಬಣವಾಗಿರುವುದನ್ನೂ ತೋರಿಸುತ್ತಿದೆ. ಇದನ್ನು ಅರ್ಥಮಾಡಿಕೊಳ್ಳಬೇಕಾದರೆ ಬರಹಗಾರರಿಗೆ ರಾಜಕೀಯ ಪ್ರಜ್ಞೆಯೂ ಇರುವುದು ಮತ್ತು ಅದನ್ನು ಬರಹಗಳಲ್ಲಿ ಕಾಣುವುದು ಮತ್ತು ತಮ್ಮ ಬರಹಗಳಲ್ಲಿ ಮೂಡಿಸುವುದು ಮುಖ್ಯ. ಆದರೆ ನಮ್ಮ ಬಹುಪಾಲು ಬರಹಗಾರರು ಅವರೆಷ್ಟೇ ವಿದ್ವಾಂಸರಾಗಿರಲಿ, ಅನುಭವಸ್ಥರಾಗಿರಲಿ, ಸಂವೇದನಾಶೀಲರಾಗಿರಲಿ, ರಾಜಕೀಯವಾಗಿ ಪ್ರಜ್ಞಾಹೀನರೂ, ಕೆಲವೊಮ್ಮೆ ಪ್ರಜ್ಞಾಶೂನ್ಯರೂ ಆಗಿದ್ದಾರೆ.

 ಅಧಿಕಾರವು ಧರ್ಮ/ಮತಾಧಾರಿತ ಅವಿವೇಕಿಗಳ ಕೈಯಲ್ಲಿ ಕೇಂದ್ರೀಕೃತವಾದರೆ ಏನಾಗುತ್ತದೆಯೆಂಬುದಕ್ಕೆ ಕಳೆದ ಕೆಲವು ದಿನಗಳಲ್ಲಿ ಭಾರತದ ಚುನಾಯಿತ ಸರ್ವಾಧಿಕಾರವು ನಡೆದುಕೊಂಡದ್ದೇ ಸಾಕ್ಷಿ. ಇತಿಹಾಸಕ್ಕೆ ಮತ್ತು ಇತಿಹಾಸವನ್ನು ಬಲ್ಲವರಿಗೆ ಇದು ಹೊಸದಲ್ಲ. ಇವೆಲ್ಲ ವಿಶ್ವವನ್ನೇ ಬಾಧಿಸಿದ ಮತ್ತು ಈಗ ಕೋವಿಡ್-19ರ ಎರಡನೇ ಅಲೆಯು ಭಾರತವನ್ನು ಚಿಂತಾಜನಕ ಸ್ಥಿತಿಗೆ ತಂದ ಸಮಯ/ಸಂದರ್ಭದಲ್ಲಿ ನಡೆಯುತ್ತಿವೆೆ ಎನ್ನುವುದಷ್ಟೇ ಈ ವಿಚಾರಗಳನ್ನು ಇನ್ನಷ್ಟು ಕೀಳಾಗಿ ಮಾಡಿದೆ.

ಕಲೆಯು ನೈಜ ಪ್ರವಾದಿ. ತನ್ನ ಕಾಲದಲ್ಲಿ ಸಾಮಾಜಿಕ, ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ಅದನ್ನು ಪ್ರತಿಭಟಿಸುವ ಸಿದ್ಧಾಂತವನ್ನು ಕಲೆಯ ಮೂಲಕ ಅಭಿವ್ಯಕ್ತಿಗೊಳಿಸಿದ ವ್ಯಕ್ತಿಗಳನ್ನು ಭವಿಷ್ಯವು ಕಲೆಯೊಳಗೂ ಹೊರಗೂ ನೆನಪಿಸುತ್ತದೆ. ಇಂತಹ ಒಂದೊಂದರ ಕುರಿತೂ ನೆನಪನ್ನು ಚಾಚಿದರೆ ವರ್ತಮಾನ ಪೂರ್ತಿ ಅವರದೇ ಕತೆಯಾದೀತು.

 ಸದ್ಯ ದೇಶದಲ್ಲಿ ವಿಚಾರ ಮತ್ತು ನಂಬಿಕೆಗಳ ನಡುವೆ ಘರ್ಷಣೆಯಿದೆ. ಧರ್ಮದ ಹೆಸರಿನಲ್ಲಿ ಸಮಾಜವನ್ನೊಡೆಯುವ, ತಮ್ಮನ್ನು ಒಪ್ಪದವರನ್ನು ದ್ವೇಷಿಸುವ ಮತ್ತು ಅವಕಾಶವಾದಲ್ಲೆಲ್ಲ ಹಿಂಸಿಸುವ ನೀತಿಯನ್ನು ಎಲ್ಲ ಕಾಲದಲ್ಲೂ ಅಧಿಕಾರವು ಪ್ರದರ್ಶಿಸಿದೆ. 16ನೇ ಶತಮಾನದಲ್ಲಿದ್ದ ಖಗೋಳಶಾಸ್ತ್ರಜ್ಞ ಗೆಲಿಲಿಯೋ (1564-1642)ನ ಪ್ರತಿರೋಧವು ಇಂದಿಗೂ ಮಾದರಿ. ಇದನ್ನು ಅಜ್ಞಾನದ ಅಧಿಕಾರಶಕ್ತಿ ಮತ್ತು ವಿಜ್ಞಾನದ ಜ್ಞಾನಶಕ್ತಿಯ ನಡುವಣ ಘರ್ಷಣೆಯಾಗಿ ತನ್ನ ‘ಗೆಲಿಲಿಯೋ’ ನಾಟಕದ ಮೂಲಕ 20ನೇ ಶತಮಾನದ ಆದಿಯಲ್ಲಿದ್ದ ಜರ್ಮನ್ ನಾಟಕಕಾರ, ಕವಿ ಬರ್ಟೋಲ್ಟ್ ಬ್ರೆಕ್ಟ್ (1898-1956) ರಚಿಸಿದ್ದಾನೆ. ತನ್ನ ನಾಟಕಗಳನ್ನು ಕಲೆಯಿಂದ ಹೊರಕ್ಕೂ ವಿಸ್ತರಿಸಿ ಭವಿಷ್ಯಕ್ಕೂ ಉಳಿಯುವ ಚಿತ್ರಗಳನ್ನು ಸೃಷ್ಟಿಸಿದ್ದಕ್ಕಾಗಿಯೇ ನಮ್ಮ ನಡುವಣ ಮುಖ್ಯ ನಾಟಕಕಾರನಾಗಿದ್ದಾನೆ. ಬ್ರೆಕ್ಟ್ ಬರೆದ ಇತರ ನಾಟಕಗಳಲ್ಲೂ ಸಾಮಾಜಿಕವಾಗಿ ಪ್ರಸ್ತುತವಾಗುವ ವಿಚಾರಗಳೇ ಮುಖ್ಯವಾಗಿವೆ. ಮಹಾರಂಗಭೂಮಿಯೆಂಬ ಹೊಸ ವಿನ್ಯಾಸದ ಮೂಲಕ ಪ್ರೇಕ್ಷಕರು ಭಾವುಕತನ ಮತ್ತು ತನ್ಮಯತೆಯಿಂದ ವೈಚಾರಿಕರಾಗಬೇಕೆಂದು ಆತ ಹೇಳಿದ. ಕೆ.ವಿ.ಸುಬ್ಬಣ್ಣನವರು ಬ್ರೆಕ್ಟ್‌ನ ಕೆಲವು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ಹೇಳುವಂತೆ ‘‘ವಿಶ್ವನಾಟಕಗಳ ಇತಿಹಾಸ ಮಾನವಕುಲದ ಸಾಂಸ್ಕೃತಿಕ ಇತಿಹಾಸದ ಘಟ್ಟಗಳನ್ನು ಅಷ್ಟು ಕರಾರುವಾಕ್ಕಾಗಿ ಬಿಂಬಿಸುತ್ತದೆಂಬುದು ಆಶ್ಚರ್ಯಕರವಾದ ಗಣನೀಯ ಸಂಗತಿ.’’ ಮೊದಲೆರಡು ಘಟ್ಟಗಳ ಕುರಿತು ಹೇಳಿದ ಆನಂತರ ಅವರು ‘‘ತರತಮ ನಿಶ್ಚಿತಿಗಳನ್ನೂ ಶೋಷಣೆ ಶರಣಾಗತಿಗಳನ್ನೂ ಧಿಕ್ಕರಿಸಿ ಸ್ವತಂತ್ರ-ಸಮಾನ ವ್ಯಕ್ತಿಗಳ ಮಾನವೈಕ ಸಂಬಂಧದ ಸಮಾಜಸಂಸ್ಕೃತಿ ನಿರ್ಮಾಣವಾಗಬೇಕೆಂದು ಮನುಷ್ಯಕುಲ ಅವಸರಿಸಲು ತೊಡಗಿರುವ ಸಂದರ್ಭ ನಮ್ಮದು. ಪ್ರಾಯಃ ಮುಂದೆ ಬರಲಿರುವ ಈ ಮೂರನೇ ಘಟ್ಟದ ಅರಿವನ್ನು ತೆರೆದು ಕಾಣಿಸಿದ ಮಹತ್ವದ ನಾಟಕಕಾರ, ಬ್ರೆಕ್ಟ್’’ ಎನ್ನುತ್ತಾರೆ. ಇಂದಿನ ಭಾರತವನ್ನು ಗಮನಿಸಿದರೆ ಈ ನಾಟಕಗಳು ಭವಿಷ್ಯವನ್ನೂ ಪ್ರವಾದಿತನದಿಂದ ಹೇಳಿವೆ. ಬ್ರೆಕ್ಟ್ ಚಿತ್ರಿಸಿದ ‘ಗೆಲಿಲಿಯೋ’ ರಂಗದಲ್ಲೂ ಸಾಹಿತ್ಯ-ಸಾಮಾಜಿಕ ಓದಿನಲ್ಲೂ ಯಶಸ್ಸನ್ನು ಕಂಡ ನಾಟಕ. ಇದನ್ನು ಎಚ್.ಕೆ.ರಾಮಚಂದ್ರ ಮೂರ್ತಿ ಮತ್ತು ಜೆ. ಆರ್. ಲಕ್ಷ್ಮಣರಾವ್ ಒಟ್ಟುಗೂಡಿ ಕನ್ನಡಕ್ಕೆ ತಂದಿದ್ದಾರೆ ಮತ್ತು ಅಷ್ಟೇ ಯಶ ಪಡೆದಿದ್ದಾರೆ.

   

ಬ್ರೆಕ್ಟ್‌ನ ಗೆಲಿಲಿಯೋ ವಾಸ್ತವವನ್ನು ತಿರುಚದೆ ಅದರ ಚಾರಿತ್ರಿಕ ಆಧಾರದಲ್ಲೇ ಸೈದ್ಧಾಂತಿಕವಾಗಿ ಸತ್ಯಶೋಧನೆಗೆ ಎಳಸಿದ ಕೃತಿ. ಹಾಗೆಂದು ನಾಟಕವೊಂದರ ಕಲಾತ್ಮಕತೆಯನ್ನು ಬಿಟ್ಟುಕೊಡದ ಕೃತಿ. ಹೀಗಾಗಿ ಅದು ರಂಗಪ್ರಯೋಗದಲ್ಲಿ ಹೇಗೋ ಹಾಗೆಯೇ ಸಾಹಿತ್ಯಕೃತಿಯಾಗಿಯೂ ಮುಖ್ಯವಾಗುತ್ತದೆ.

 ಗೆಲಿಲಿಯೋನ ಕಾಲದಲ್ಲಿ ಕ್ರೈಸ್ತಚರ್ಚುಗಳು ಬಹಳ ಶಕ್ತವಾಗಿದ್ದವು. ಅರಸೊತ್ತಿಗೆಗಳು ಧರ್ಮಕ್ಕೆ ವಿನೀತವಾಗಿದ್ದವು. ಧರ್ಮದಷ್ಟು ದೊಡ್ಡ ಅಮಲುಪದಾರ್ಥ ಯಾವುದೂ ಇಲ್ಲವೆನ್ನುವುದು ಮತ್ತು ಅಧಿಕಾರವನ್ನು ಪಡೆಯಲು ಮತ್ತು ಉಳಿಸಿಕೊಳ್ಳುವಲ್ಲಿ ಅದರಷ್ಟು ಶಕ್ತ ಮಾಧ್ಯಮ ಬೇರಿಲ್ಲವೆನ್ನುವುದು ಜಗತ್ತಿನ ರಾಜಕೀಯ ಇತಿಹಾಸ ಮತ್ತು ವಿಶೇಷವಾಗಿ ವರ್ತಮಾನದ ಭಾರತವನ್ನು ಗಮನಿಸಿದರೆ ಗೊತ್ತಾಗುತ್ತದೆ. ಭೂಮಿಯೇ ವಿಶ್ವದ ಕೇಂದ್ರವೆಂಬ ಕುರುಡು ನಂಬಿಕೆಗೆ ಆತುಕೊಂಡ ಚರ್ಚಿಗೆ ಇದಕ್ಕೆ ವಿರುದ್ಧವಾದ ವೈಚಾರಿಕತೆಯೂ, ಜ್ಞಾನವೂ ದೇಶದ್ರೋಹವೆಂದು ಕಂಡಿತ್ತು. ಕ್ರಿ.ಪೂ. 4ನೇ ಶತಮಾನದ ಅರಿಸ್ಟಾಟಲ್, 3ನೇ ಶತಮಾನದ ಅರಿಸ್ಟಾರ್ಕಸ್, ಕ್ರಿ.ಶ.2ನೇ ಶತಮಾನದ ಟಾಲೆಮಿ ಮುಂತಾದವರು ತಮ್ಮ ಕಾಲದ ಶ್ರೇಷ್ಠಜ್ಞಾನಿಗಳಾಗಿದ್ದರೂ ಅವರ ಪ್ರತಿಪಾದನೆಗಳು ತಾತ್ವಿಕವಾಗಿದ್ದು ಭೂಕೇಂದ್ರ ತರ್ಕವನ್ನು ಅಂಗೀಕರಿಸಿದ್ದರಿಂದ ಚರ್ಚಿನ ಆಡಳಿತಕ್ಕೆ ಭಂಗ ತರಲಿಲ್ಲ. ಕಾಪರ್ನಿಕಸ್ ಎಂಬವನು ಇದನ್ನು ಧಿಕ್ಕರಿಸಿ ವೈಜ್ಞಾನಿಕ ತಳಹದಿಯನ್ನು ಸ್ಥಾಪಿಸಿದನಾದರೂ ಅದನ್ನು ಚರ್ಚ್ ಖಗೋಳಪಂಚಾಂಗದ ಅನುಕೂಲಕ್ಕಾಗಿ ಸ್ವೀಕರಿಸಿತು. ಉಳಿದಂತೆ ಆತನ ಸಂಶೋಧನೆಗಳೂ ವೈಜ್ಞಾನಿಕ ತರ್ಕಗಳೂ ಜನರಿಂದ ದೂರವೇ ಉಳಿದವು; ಆತನೂ ಅವನ್ನು ಹಠಹಿಡಿದು ಮುಂದಿಡಲಿಲ್ಲ. ಇವೆಲ್ಲವೂ ಮನುಷ್ಯನ ಶ್ರೇಷ್ಠತೆಯನ್ನು ಮತ್ತು ಭೂಮಿಯ ಅಚಲತೆಯನ್ನು ಒಪ್ಪಿಕೊಂಡಿದ್ದವು. ಕಾಪರ್ನಿಕಸ್‌ನ ಸಿದ್ಧಾಂತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದ ಜೋರ್ಡನೋ ಬ್ರೂನೋ ಎಂಬ ವಿಜ್ಞಾನಿ (1548-1600) ತನ್ನ ವಾದವನ್ನು ಆಡಳಿತದ ಧಾರ್ಮಿಕ ನಂಬಿಕೆಗೆ ವಿರೋಧವಾಗಿ ಪ್ರತಿಪಾದಿಸಿದ್ದರಿಂದ ಆತನನ್ನು ಜೀವಂತ ದಹಿಸಿ ಕೊಲ್ಲಲಾಯಿತು.

ಗೆಲಿಲಿಯೋವಿನ ವಿಜ್ಞಾನಕ್ಕೆ ಜ್ಞಾನದ ದಾಹವಿದೆ. ಆದರೆ ಮತಾಂಧರ ಎದುರು ಇದು ನಡೆಯುವುದಿಲ್ಲವೆಂಬುದು ಅವನಿಗೆ ಸ್ಪಷ್ಟವಿದೆ. ಪ್ರಾಕ್ಯುರೇಟರ್ ಹೇಳುತ್ತಾನೆ: ‘‘ನಮಗೆಷ್ಟೇ ವಿಚಾರಸ್ವಾತಂತ್ರ್ಯ ಅದೆಲ್ಲಾ ಇದ್ದರೂ ಚರ್ಚಿನೋರಿಗೆ ನಿಷಿದ್ಧವಾಗಿರೋ ಆ ಹೆಸರನ್ನ ಗಟ್ಟಿಯಾಗಿ ಹೇಳೋದು ನಿಮಗೆ ಒಳ್ಳೆಯದಲ್ಲ ಅಂತ ಕಾಣತ್ತೆ. ಇಲ್ಲಿ ಕೂಡಾ ನೀವು ಅವನ ಹೆಸರನ್ನ ಎತ್ತಬಾರದು-ಇಲ್ಲಿ ಕೂಡ, ತಿಳೀತೆ?’’ ನಮ್ಮ ಸರ್ವೋಚ್ಚ ನ್ಯಾಯಾಲಯದಲ್ಲಿ ತುಷಾರ್‌ಮೆಹ್ತಾ ನಿತ್ಯ ಹೇಳೋದು ಇದನ್ನೇ. ಇನ್ನೊಂದೆಡೆ ‘‘ತರ್ಕ, ವಿಚಾರ, ಜಿಜ್ಞಾಸೆ, ಇವುಗಳಿಗೆ ಅಲ್ಲಿ ಏನಾದರೂ ಸ್ವಾತಂತ್ರ್ಯ ಇದೆಯೇ?’’ ಎಂಬ ಮಾತು ಬರುತ್ತದೆ. ಸದ್ಯದ ಭಾರತದಲ್ಲಿ ದೇಶದ್ರೋಹದ ಆರೋಪಪಟ್ಟಿಯ ಸಂಬಂಧ ಇದನ್ನು ನೆನಪಿಸಬಹುದು.

ವಿಜ್ಞಾನಿಯೊಬ್ಬನ ಕುರಿತು ಸಾಹಿತ್ಯ ಪ್ರಕಾರವಾದ ಯಾವುದೇ ಕೃತಿ ಬಂದರೂ ಅದು ಒಂದಲ್ಲ ಒಂದು ಪಂಗಡದ ಆದರ-ಅನಾದರಕ್ಕೆ ತುತ್ತಾಗುವ ಸಾಧ್ಯತೆಯಿದೆ. ಇವುಗಳ ನಡುವೆ ಬ್ರೆಕ್ಟ್‌ನ ಕ್ಷ-ಕಿರಣ ಹಾದುಹೋಗಿದೆ. ಆತ ಶ್ರೇಷ್ಠ ಸಾಹಿತಿ ಮತ್ತು ವಿಚಾರವಂತ (ಒಳ್ಳೆಯ ಕವಿಯೂ ಹೌದು.). ಜೊತೆಗೆ ಕಮ್ಯುನಿಸ್ಟ್ ಅದರ್ಶಗಳನ್ನು ಹೊಂದಿದ್ದು, ತನ್ನ ಕಾಲದ ರಾಜಕೀಯ, ಸಾಮಾಜಿಕ ಅಗುಹೋಗುಗಳಿಗೆ ಕಣ್ಣುಮುಚ್ಚಿದ ಅಥವಾ ದೃಷ್ಟಿದೋಷವನ್ನು ಹೊಂದಿದ ಸಾಹಿತಿಯಾಗಿರದೆ ಇದ್ದುದರಿಂದ ಗೆಲಿಲಿಯೋ ಒಂದು ಕಾಲದ ಸತ್ಯವನ್ನಷ್ಟೇ ಕಲಾತ್ಮಕವಾಗಿ ಮೂಡಿಸದೆ ಸಾರ್ವಕಾಲಿಕವಾಗಿ ಅಭಿವ್ಯಕ್ತಿಗೊಂಡಿದೆ. ಗೆಲಿಲಿಯೋ ದೂರದರ್ಶಕವನ್ನು ಕಂಡುಹಿಡಿದದ್ದಷ್ಟೇ ಮುಖ್ಯವಲ್ಲ. ಅದರ ಮೂಲಕ ಆತನ ದೃಷ್ಟಿ ವಿಜ್ಞಾನದ ವೈಶಾಲ್ಯವನ್ನು, ಬೆರಗನ್ನು, ಸತ್ಯವನ್ನು ಕಂಡಿತ್ತು. ಭೂಮಿಯೇ ವಿಶ್ವದ ಕೇಂದ್ರವೆಂದು ನಂಬಿದ್ದ ಮತ್ತು ನಂಬಿಸಿಕೊಂಡಿದ್ದ ಚರ್ಚಿಗೆ ಇದು ಸವಾಲಾಯಿತು. ಗೆಲಿಲಿಯೋ ತನ್ನ ಕಾಲದ ಅತ್ಯಂತ ಗೌರವಾನ್ವಿತ ವಿಜ್ಞಾನಿಯಾದ್ದರಿಂದ ಮತ್ತು ಅತ್ಯಂತ ಸರಳವಾಗಿ ಬದುಕಿದ್ದರಿಂದ ಚರ್ಚ್ ಆತನನ್ನು ತಕ್ಷಣ ವಿರೋಧಿಸುವಂತಿರಲಿಲ್ಲ.

ಆ ಕಾಲಕ್ಕೂ ಇಂದಿನ ಭಾರತಕ್ಕೂ ಇರುವ ಸಾಮ್ಯತೆಯಿಂದ ಈ ನಾಟಕವನ್ನೇ ಪ್ರಸ್ತಾವಿಸಲಾಗಿದೆ. ಗೆಲಿಲಿಯೋನ ಕಾಲದಲ್ಲೂ ಮಾರಕ ಪ್ಲೇಗಿನ ಸೋಂಕು ಯುರೋಪನ್ನು ಕಾಡಿತ್ತು. ಅದರ ಭಯಾನಕತೆಯನ್ನು ನಾಟಕದಲ್ಲಿ ಸಂಕ್ಷಿಪ್ತವಾಗಿಯಾದರೂ ಪರಿಣಾಮಕಾರಿಯಾಗಿಯೇ ಮೂಡಿಸಲಾಗಿದೆ. ಅಲ್ಲಿನ ಸಂಭಾಷಣೆ ಹೀಗಿದೆ: ‘‘ಕಾನ್ವೆಂಟ್ ಮುಚ್ಚಿಬಿಟ್ಟು ನಮ್ಮನ್ನೆಲ್ಲಾ ಮನೆಗೆ ಕಳಿಸಿಬಿಟ್ಟರು. ಅರ್ಸೆಟ್ರಿಯಲ್ಲಿ ಐದು ಜನಕ್ಕೆ ಪ್ಲೇಗ್ ತಗಲಿದೆಯಂತೆ!’’ ‘‘ನಿನ್ನೆ ರಾತ್ರಿ ಅಂಗಡಿಗಳನ್ನೆಲ್ಲ ಮುಚ್ಚಿಬಿಟ್ಟರು. ಊರೊಳಗೆ ಇಬ್ಬರು ಸತ್ತುಹೋದರಂತೆ. ಆಸ್ಪತ್ರೇಲಿ ಮೂರು ಜನ ಸಾಯೋ ಸ್ಥಿತೀಲಿದಾರಂತೆ.’’ ‘‘ಯಥಾಪ್ರಕಾರ ಕೊನೆಯವರೆಗೂ ಜನಗಳಿಗೆ ಇದನ್ನ ತಿಳಿಸೇ ಇಲ್ಲ ಅವರು.’’ ‘‘ಊರೊಳಗೆ ಪ್ಲೇಗು!’’ ‘‘ಅಯ್ಯೋ ದೇವರೆ! ಗಂಟು ಮೂಟೆ ಕಟ್ಟಬೇಕು ಹಾಗಾದರೆ.’’ ‘‘ಪ್ಲೇಗು ಹಾವಳಿ ಜಾಸ್ತಿಯಾಯಿತು ಅಂತ ಪ್ರಭುಗಳು ಬೊಲೋನ್ಯಾಕ್ಕೆ ಹೊರಟುಹೋದರು.’’ ‘‘ಪ್ಲೇಗು ಅಂದರೆ ಏನೂ ಹುಡುಗಾಟ ಅಲ್ಲ!’’ ‘‘ಇನ್ನೊಂದು ಗಂಟೆ ಆಯಿತೂ ಅಂದರೆ... ಆಮೇಲೆ ಯಾರನ್ನೂ ಊರಿನಿಂದ ಹೊರಕ್ಕೆ ಬಿಡಲ್ಲ.’’ (ಯಾರನ್ನೋ ನೋಡಿ) ‘‘ಓಡು! ಬೇಗ ಓಡು! ಅವರಿಗೆ ಪ್ಲೇಗು!’’ ‘‘ಆಕೆ ಬೀದೀಲಿ ಹೋಗ್ತಾ ಹೋಗ್ತಾ ಕುಸಿದು ಬಿದ್ದುಬಿಟ್ಟಳು, ಅಲ್ಲಿ ಮೇಲುಗಡೆ! ತನಗೆ ರೋಗ ತಗಲಿತು ಅಂತ ಗೊತ್ತಾಗಿ ಹೋಯಿತು ಅಂತ ಕಾಣುತ್ತೆ. ಅದಕ್ಕೆ ನಿಮ್ಮ ಮನೆ ಬಿಟ್ಟು ಹೊರಟು ಬಿಟ್ಟಳು. ಏನಪ್ಪ, ಜನಕ್ಕೆ ಸ್ವಲ್ಪವೂ ದಯ ದಾಕ್ಷಿಣ್ಯ ಇಲ್ಲ! ಅವರನ್ನೆಲ್ಲ ಬೇವಾರ್ಸಿ ಸ್ಮಶಾನಕ್ಕೆ ತಗೊಂಡುಹೋಗ್ತಾರೆ.’’ (ಮನೆಗೆ ಬೆಂಕಿ ಬಿದ್ದಾಗ) ‘‘ಅಲ್ಲಿ ಪ್ಲೇಗು ಸೋಂಕಿದೆ ಅನ್ನೋದು ಗೊತ್ತಾದರೆ, ಬೆಂಕಿ ಆರಿಸೋವವರು ಅಲ್ಲಿಗೆ ಕಾಲಿಡೋದೇ ಇಲ್ಲ. ಅವರಿಗೆ ಪ್ಲೇಗಿನದೊಂದೇ ಯೋಚನೆ.’’ ‘‘ಅವರ ಯೋಗ್ಯತೆಯೇ ಅಷ್ಟು! ಅವರ ಸರಕಾರವೂ ಅಷ್ಟೆ. ಮುದಿ ಎತ್ತನ್ನು ಕೈಬಿಟ್ಟ ಹಾಗೆ ಕೈಬಿಟ್ಟುಬಿಡ್ತಾರೆ.’’ ‘‘ಛೆ! ಛೆ! ನೀವು ಹಾಗೆ ಹೇಳಬಾರದು. ಅವರು ಇನ್ನೇನು ತಾನೇ ಮಾಡೋಕೆ ಆಗುತ್ತೆ?’’ ಒಂದು ದೃಶ್ಯದಲ್ಲಿ ‘ಮುಸುಕು ಹಾಕಿಕೊಂಡ ಇಬ್ಬರು ಉದ್ದವಾದ ಕೋಲುಗಳನ್ನೂ ಬಕೆಟ್ಟುಗಳನ್ನೂ ಹಿಡಿದುಕೊಂಡು ಬರುತ್ತಾರೆ. ಕೋಲಿನ ತುದಿಯಲ್ಲಿ ಬ್ರೆಡ್ ಸಿಕ್ಕಿಸಿ ಅದನ್ನು ಗೆಲಿಲಿಯೋಗೂ, ಮುದುಕಿಗೂ ನೀಡುತ್ತಾರೆ’ ಎಂಬ ಸೂಚನೆಯಿದೆ. ನಮ್ಮೆದುರಿರುವ ಕೋವಿಡ್-19ರ ಚಿತ್ರಕ್ಕೂ ಇದಕ್ಕೂ ಏನಾದರೂ ಭಿನ್ನತೆಯಿದೆಯೇ? ಇಲ್ಲ. ಇಂತಹ ದಾರುಣ ಸ್ಥಿತಿ ಗೆಲಿಲಿಯೋನ ಜೀವನದಲ್ಲಿ ಬರುತ್ತದೆ. ಅದನ್ನು ಬ್ರೆಕ್ಟ್ ಬಿಟ್ಟುಕೊಟ್ಟಿಲ್ಲ. (ಗೆಲಿಲಿಯೋನ ಸಮಕಾಲೀನನಾಗಿದ್ದ ಖ್ಯಾತ ತತ್ವಜ್ಞಾನಿ ಕ್ರೊಮೆನಿನಿ ಈ ಪ್ಲೇಗಿಗೆ ತುತ್ತಾದ. 1629-31ರ ಅವಧಿಯ ಈ ಸೋಂಕಿಗೆ ಸುಮಾರು 1 ಮಿಲಿಯ ಜನ ಬಲಿಯಾದರು.)

ಆದರೆ ಈ ನಾಟಕದಲ್ಲಿ ಬರುವ ರಾಜಕೀಯವಾದ ಮುಖ ಅಂದಿನ ಸತ್ಯವಾಗಿದ್ದು, ಭಾರತವೂ ಸೇರಿದಂತೆ ಎಲ್ಲೆಡೆ ಇಂದಿಗೂ ಸತ್ಯವಾಗಿದೆ. ಧರ್ಮ-ಮತ ಇವೇ ಮನುಷ್ಯನ ಅಭಿಪ್ರಾಯಗಳನ್ನು ರೂಪಿಸುವ ಇಂದಿನ ಭಾರತದಲ್ಲಿ ಜ್ಞಾನ, ವಿಜ್ಞಾನ, ವಿಚಾರ ಇವೆಲ್ಲ ಗೌಣವಾಗಿವೆ. ವಿಶ್ವವಿಡೀ ಕಾಲೋಚಿತವಾಗಿ ಮುಂದುವರಿಯುತ್ತಿದ್ದರೆ ನಾವು ಮಾತ್ರ ಇತಿಹಾಸದ ಕತ್ತಲಯುಗದತ್ತ ಹಿಂದಿರುಗುತ್ತಿದ್ದೇವೆ. ಇದನ್ನು ಈ ನಾಟಕದಲ್ಲಿ ಯಥೇಚ್ಛವಾಗಿ ದರ್ಶಿಸಲಾಗಿದೆ. ‘‘ನಮ್ಮ ದೊಡ್ಡ ದೊಡ್ಡ ಪಟ್ಟಣಗಳು ಅನ್ನಿಸಿಕೊಂಡೋವೆಲ್ಲಾ ಈಗ ಇಕ್ಕಟ್ಟಾದ ಓಣಿಗಳಾಗಿಬಿಟ್ಟಿವೆ. ಮನುಷ್ಯರ ಬುದ್ಧಿಯೂ ಅಷ್ಟೆ; ಬರೀ ಕುರುಡು ನಂಬಿಕೆ, ಮೌಢ್ಯ.’’ ಭಾರತೀಯರು ಇವನ್ನೆಲ್ಲ ಕಾಣುವುದಿಲ್ಲವೆಂದು ಅರ್ಥವಲ್ಲ. ಆದರೆ ಕುತ್ಸಿತ ಮನೋಧರ್ಮದಲ್ಲಿ ಇವು ಪರಿತ್ಯಕ್ತವಾಗುತ್ತವೆ. ಗೆಲಿಲಿಯೋ ಹೇಳುತ್ತಾನೆ: ‘‘ಕಾಣಿಸುತ್ತಂತೆ ಕಾಣಿಸುತ್ತೆ! ಏನು ಕಾಣಿಸೋದು ನಿನಗೆ? ಕಾಣಿಸೋದಕ್ಕೂ ಕಾಣಿಸಿದ್ದನ್ನ ಅರ್ಥ ಮಾಡಿಕೊಳ್ಳೋದಕ್ಕೂ ತುಂಬಾ ವ್ಯತ್ಯಾಸ ಇದೆ.’’ ಗೆಲಿಲಿಯೋವಿನ ವಿಜ್ಞಾನಕ್ಕೆ ಜ್ಞಾನದ ದಾಹವಿದೆ. ಆದರೆ ಮತಾಂಧರ ಎದುರು ಇದು ನಡೆಯುವುದಿಲ್ಲವೆಂಬುದು ಅವನಿಗೆ ಸ್ಪಷ್ಟವಿದೆ. ಪ್ರಾಕ್ಯುರೇಟರ್ ಹೇಳುತ್ತಾನೆ: ‘‘ನಮಗೆಷ್ಟೇ ವಿಚಾರಸ್ವಾತಂತ್ರ್ಯ ಅದೆಲ್ಲಾ ಇದ್ದರೂ ಚರ್ಚಿನೋರಿಗೆ ನಿಷಿದ್ಧವಾಗಿರೋ ಆ ಹೆಸರನ್ನ ಗಟ್ಟಿಯಾಗಿ ಹೇಳೋದು ನಿಮಗೆ ಒಳ್ಳೆಯದಲ್ಲ ಅಂತ ಕಾಣತ್ತೆ. ಇಲ್ಲಿ ಕೂಡಾ ನೀವು ಅವನ ಹೆಸರನ್ನ ಎತ್ತಬಾರದು-ಇಲ್ಲಿ ಕೂಡ, ತಿಳೀತೆ?’’ ನಮ್ಮ ಸರ್ವೋಚ್ಚ ನ್ಯಾಯಾಲಯದಲ್ಲಿ ತುಷಾರ್‌ಮೆಹ್ತಾ ನಿತ್ಯ ಹೇಳೋದು ಇದನ್ನೇ. ಇನ್ನೊಂದೆಡೆ ‘‘ತರ್ಕ, ವಿಚಾರ, ಜಿಜ್ಞಾಸೆ, ಇವುಗಳಿಗೆ ಅಲ್ಲಿ ಏನಾದರೂ ಸ್ವಾತಂತ್ರ್ಯ ಇದೆಯೇ?’’ ಎಂಬ ಮಾತು ಬರುತ್ತದೆ. ಸದ್ಯದ ಭಾರತದಲ್ಲಿ ದೇಶದ್ರೋಹದ ಆರೋಪಪಟ್ಟಿಯ ಸಂಬಂಧ ಇದನ್ನು ನೆನಪಿಸಬಹುದು.

 ದೇವರು, ಧರ್ಮ ಇತ್ಯಾದಿಗಳ ಬಗ್ಗೆ ನಾಟಕದಲ್ಲಿ ತೀವ್ರ ತಾರ್ಕಿಕ, ಆಸಕ್ತಿಕರ ಚರ್ಚೆಯಿದೆ. ಸ್ಯಾಗ್ರೆಟೊ ಹೇಳುತ್ತಾನೆ: ‘‘ಜನಗಳಿಗೆ ವಿಚಾರ ಅನ್ನೋದು ಒಗ್ಗೋದಿಲ್ಲ. ಧೂಮಕೇತುವಿನ ಕೆಂಪು ಬಾಲ ಅವರಿಗೆ ತೋರಿಸಿ ಗಾಬರಿ ಹಿಡಿಸಿಟ್ಟು ನೋಡು. ಸತ್ತೆವೋ, ಕೆಟ್ಟೆವೋ ಅಂತ ಮನೆ ಬಿಟ್ಟು ಈಚೆಗೆ ಓಡಿ ಬಂದು ಬಿಡ್ತಾರೆ. ಅದೇ ನ್ಯಾಯವಾದ ವಿಷಯ ಹೇಳಿ, ಅದಕ್ಕೆ ಹತ್ತು ಕಾರಣ ಕೊಡು. ನಿನ್ನ ನೋಡಿ ನಗ್ತಾರೆ.’’ ಇದಕ್ಕೆ ಗೆಲಿಲಿಯೋ ಉತ್ತರಿಸುವುದು ಹೀಗೆ: ‘‘ವಿಚಾರದ ಪ್ರಭಾವಕ್ಕೆ ಒಳಗಾಗದೇ ಇರೋರು ಏನಿದ್ದರೂ ಸತ್ತೋರು ಮಾತ್ರ.’’ ಸತ್ತೋರಲ್ಲದಿದ್ದರೂ ಸತ್ತಂತಿಹ ಜನ. ಅವರನ್ನೇ ಬಡಿದೆಚ್ಚರಿಸು ಎಂದದ್ದು ಕುವೆಂಪು. ಗೆಲಿಲಿಯೋ ಹೇಳುವ ‘‘ಯೋಚನಾಶಕ್ತಿ ಅನ್ನೋದು ಮಾನವಕುಲಕ್ಕೆ ಒಂದು ವರ ಇದ್ಹಾಗೆ. ಅದು ಕೊಡೋ ಸಂತೋಷ ಇನ್ಯಾವುದು ತಾನೇ ಕೊಟ್ಟೀತು. ಪ್ರತಿಯೊಬ್ಬನೂ ಎಲ್ಲವನ್ನೂ ಸ್ವಂತವಾಗಿ ವಿಚಾರಮಾಡಿ ನೋಡಬೇಕು, ವಿಚಾರಶಕ್ತಿಗಿಂತ ದೊಡ್ಡದು ಇನ್ನಾವುದೂ ಇಲ್ಲ.’’ ಎಂಬ ಮಾತುಗಳೇ ಇದಕ್ಕೆ ಸಮಾಧಾನ. ಮೌಢ್ಯಕ್ಕೆ ಬಲಿಯಾದ ಪ್ರಜಾಪ್ರಭುತ್ವದಲ್ಲಿ ಹತ್ತುತಲೆಯ ರಾವಣನೇ ಒಂದು ತಲೆಯ ರಾಮನಿಗಿಂತ ಹೆಚ್ಚು ಗೌರವಾನ್ವಿತ. ಸ್ಯಾಗ್ರೆಡೊ ಹೇಳುವಂತೆ ‘‘ಸತ್ಯ ಕಂಡವನನ್ನು ಅಧಿಕಾರದಲ್ಲಿರುವವರು ಸುಮ್ಮನೆ ಬಿಟ್ಟುಬಿಡುತ್ತಾರೆಯೇ?’’ ‘‘ಸತ್ಯ ನಮ್ಮನ್ನು ಎಲ್ಲಿಗೆ ಎಳಕೊಂಡು ಹೋಗುತ್ತೆ ಅನ್ನೊ ಪ್ರಶ್ನೇನ. ವಿಜ್ಞಾನಿಗಳಾಗಿರೋ ನಾವು ಕೇಳಬಾರದು.’’ ಎನ್ನುವ ಗೆಲಿಲಿಯೋ ವೈಜ್ಞಾನಿಕ ಸತ್ಯವನ್ನೇ ಪ್ರತಿಪಾದಿಸಿದ್ದಕ್ಕೆ ಶಿಕ್ಷೆ ಅನುಭವಿಸುತ್ತಾನೆ.

ನಮ್ಮ ಮೌಢ್ಯಯುಕ್ತ ಜನರು ಹೇಗಿದ್ದಾರೆ? ಕೃಷಿ, ಆರೋಗ್ಯ, ಶಿಕ್ಷಣ, ಆರ್ಥಿಕ ಹೀಗೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಸಂಕಟವನ್ನು ಅನುಭವಿಸುವವರೂ ರಾಜಕೀಯದ ಮಾತು ಬಂದಾಗ ಈ ಸಂಕಟಗಳನ್ನೆಲ್ಲ ಮರೆಯುತ್ತಾರೆ: ನಾಟಕದ ಒಂದೆಡೆ ಈ ಮಾತಿದೆೆ: ‘‘ಕಂಪಾನ್ಯಾದಲ್ಲಿ ಜಮೀನುದಾರರು ಬಡರೈತರನ್ನೆಲ್ಲಾ ಅರೆಬೆತ್ತಲೆ ನಿಲ್ಲಿಸಿ ಚಾವಟಿಯಿಂದ ಹೊಡೀತಾರಲ್ಲಾ, ಆ ರಾಕ್ಷಸತನ ಎಂಥದು ಅಂತ ಸ್ವಲ್ಪಯೋಚನೆ ಮಾಡಿ. ಅಷ್ಟಾದರೂ ಆ ಬಡಪಾಯಿಗಳು ಅವರ ಪಾದಗಳಿಗೆ ಮುತ್ತು ಇಡ್ತಾರಲ್ಲಾ ಅದಕ್ಕೇನು ಹೇಳಿತೀರಿ?’’ ಇದೇ ಸ್ಥಿತಿ ನಮ್ಮದು.

 ಸರ್ವಾಧಿಕಾರದ ಲಕ್ಷಣಗಳನ್ನು ಅಂದಿನ ಚರ್ಚಿನ ಮನಸ್ಥಿತಿಯಲ್ಲಿ ಮತ್ತು ಇಂದಿನ ಚುನಾಯಿತ ಸರ್ವಾಧಿಕಾರದಲ್ಲಿ ಕಾಣುತ್ತೇವೆ. ಗೆಲಿಲಿಯೊವಿನಂತೆ ದುರುಪಯೋಗ ಮಾಡೋದರಿಂದ ಅಧಿಕಾರ ದುರ್ಬಲವಾಗುತ್ತೆ! ಎಂದು ಅರ್ಥವಾಗುವವರು, ಅರ್ಥಮಾಡುವವರು ಯಾರಿದ್ದಾರೆ? ನಮ್ಮ ಬಹುತೇಕ ಚಿಂತಕರೂ, ಬರಹಗಾರರೂ ಅಂದೂ ಹೀಗೆಯೇ ಇದ್ದರು: ಬಾರ್ಬೆರಿನಿ ಗೆಲಿಲಿಯೊವಿಗೆ ಹೇಳುತ್ತಾನೆ: ‘‘ನೀನು ಕೂಡ ಸಂಪ್ರದಾಯಸ್ಥ ವಿದ್ವಾಂಸರ ಹಾಗೇನೆ ಮುಖವಾಡ ಹಾಕಿಕೊಂಡಿದ್ದರೆ ಚೆನ್ನಾಗಿರ್ತಾ ಇತ್ತು-ನನ್ನ ಮುಖವಾಡದಿಂದಲೇ ನನಗೆ ತಕ್ಕಮಟ್ಟಿನ ಸ್ವಾತಂತ್ರ್ಯ ಇರೋದು.’’ ‘‘ಪಾಪ! ಗೆಲಿಲಿಯೋಗೆ ಹಾಕಿಕೊಳ್ಳೋಕೆ ಮುಖವಾಡವೇ ಇಲ್ಲ.’’ ‘‘ಮಹಾಪುರುಷನಾದೋನಿಗೆ ಆ ಮಹತ್ತಿನ ಭಾರ ತಡೆದುಕೊಳ್ಳೋದು ಬಹಳ ಕಷ್ಟವಾಗುತ್ತೆ.’’ ನಮ್ಮಲ್ಲೂ ಹೀಗೆಯೇ ಮಹಾಪುರುಷರು ಅಂತಲ್ಲ, ಎಲ್ಲ ಪ್ರಾಮಾಣಿಕರೂ ಸಂಕಟಪಡುತ್ತಾರೆ; ಅವಕಾಶವಾದಿಗಳು ಸಂಭ್ರಮಿಸುತ್ತಾರೆ.

ಜನರ ಕಷ್ಟದ ಪರಿವೆಯಿಲ್ಲದ ಸರಕಾರಕ್ಕೆ ಅಧಿಕಾರ ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ದುರಂತಗಳೇ ಇಲ್ಲ. ಜನರ ‘‘ಕಷ್ಟಕಾರ್ಪಣ್ಯಗಳಿಗೆ ಏನೂ ಅರ್ಥವೇ ಇಲ್ಲವಲ್ಲ! ಹಸಿವು ಅಂದರೆ ಊಟ ಮಾಡದೆ ಇರೋದು ಅಷ್ಟೆ, ನಮ್ಮ ಸಹನೆಯ ಪರೀಕ್ಷೆ ಅಲ್ಲ; ಶ್ರಮ ಅಂದರೆ ಮೈ ಬಗ್ಗಿಸಿ ದುಡಿಯೋದು ಅಷ್ಟೆ, ಅದಕ್ಕೆ ಇನ್ನಾವ ಬೆಲೆಯೂ ಇಲ್ಲ’’ ಎಂಬ ಮಾತು ನಾಟಕದಲ್ಲಿದೆ. ಇಷ್ಟಾಗಿಯೂ ವಿಚಾರಕ್ರಾಂತಿಗೆ ಕರೆಕೊಡಬೇಕಾದದ್ದೇ ಈ ಕಾರಣಕ್ಕೆ. ‘‘ಯಾಕೆ ಅಂದರೆ, ನಾವು ಎಷ್ಟರ ಮಟ್ಟಿಗೆ ಗೆಲ್ಲುತೇವೋ ಸತ್ಯವೂ ಅಷ್ಟರ ಮಟ್ಟಿಗೆ ಗೆಲ್ಲುತ್ತೆ. ವೈಚಾರಿಕತೆ ಗೆದ್ದಿತು ಎಂದರೆ ಅರ್ಥವೇನು? ವಿಚಾರವಂತರು ಗೆದ್ದರು ಅಂತ! ಸಂದೇಹಪಡೋದರಲ್ಲೇ ಒಂದು ಆನಂದ ಕಾಣಿಸುತ್ತೆ ನನಗೆ.’’ ಎನ್ನುತ್ತಾನೆ ಒಬ್ಬ ಪಾದ್ರಿ.

ಅತೀವ ಧಾರ್ಮಿಕ ನಂಬಿಕೆ ಏನು ಮಾಡುತ್ತದೆಂಬುದನ್ನೂ ಬ್ರೆಕ್ಟ್ ಎಚ್ಚರಿಸುತ್ತಾನೆ: ‘‘ಜರ್ಮನೀಲಿ ಜನ ಬೈಬಲ್ ವಾಕ್ಯಗಳನ್ನೇ ಜಪಿಸ್ತಾ ಒಬ್ಬರನ್ನೊಬ್ಬರು ಪಶುಗಳನ್ನು ಕಡಿಯೋ ಹಾಗೆ ಕಡಿದು ಹಾಕ್ತಾ ಇದಾರೆ; ರಕ್ತದ ಕೋಡಿ ಹರೀತಾ ಇದೆ.’’ ಭಾರತದ ಮತೀಯ ಧ್ರುವೀಕರಣದಿಂದಾಗಿ ಈ ಅನಿವಾರ್ಯ ತಪ್ಪಿದ್ದಲ್ಲ. ಏಕೆಂದರೆ ‘‘ಸತ್ಯ ತಿಳಿಯದೆ ಇದ್ದೋನು ಮೂರ್ಖ. ಅದನ್ನ ತಿಳಿದಿದ್ದೂ ಅದನ್ನು ಅಸತ್ಯ ಅನ್ನೋವನು ನೀಚ.’’ ಮಹಾಭಾರತದ ಕೊನೆಯೂ ಹೀಗೆಯೇ ಯಾದವೀ ಕಲಹದಲ್ಲೇ. ‘‘ಅಧಿಕಾರದ ಬಲ ಎಲ್ಲ ಅವರ ಕಡೆಯೇ ಇದೆ.’’ ಎಂದಾಗ ‘‘ಅಧಿಕಾರದ ಬಲ ಇದ್ದ ಮಾತ್ರಕ್ಕೆ? ಅದರಿಂದಲೇ ಎಲ್ಲಾನೂ ಸಾಧಿಸೋಕೆ ಆಗುತ್ಯೆ? ಬರೀ ಬಲಪ್ರಯೋಗಮಾಡಿ, ಕಣ್ಣಿಂದ ಆಗಲೇ ಕಂಡಿರೋ ವಿಷಯಾನ ಕಾಣದೆ ಇರೋ ವಿಷಯ ಮಾಡೋಕೆ ಆಗತ್ಯೆ?’’ ಎಂಬ ಉತ್ತರವಿದೆ. ಗೆಲಿಲಿಯೋ ಕೊನೆಗೆ ಅನಿವಾರ್ಯವಾಗಿ ತನ್ನ ಸಿದ್ಧಾಂತಗಳನ್ನು ಹಿಂದೆಗೆದುಕೊಳ್ಳಬೇಕಾಗುತ್ತದೆ. ಗೃಹಬಂಧನದ ಶಿಕ್ಷೆಗೊಳಗಾಗುತ್ತಾನೆ. ಇಲ್ಲವಾದರೆ ಮರಣದಂಡನೆಯಾಗುತ್ತಿತ್ತು. ಗೆಲಿಲಿಯೋನ ಶಿಷ್ಯ ಆಂದ್ರಿಯಾ ಹೇಳುವಂತೆ ‘‘ಸಾವಿಗೆ ಅಂಜೋದು ಮನುಷ್ಯರಿಗೆ ಸಹಜ ಅಲ್ಲವೇ?’’ ಇಂದಿಗೂ ಸರಕಾರದ ಅಧಿಕಾರ ರಕ್ಷಣೆಗೆ ಬದ್ಧವಾದ ಅಪ್ರಾಮಾಣಿಕವಾದ ವಿದ್ಯಾವಂತ ತಂಡವೇ ಇದೆ. ವಿದ್ಯೆಯೇ ಎಲ್ಲವೂ ಅಲ್ಲ. ಇಂದಿನ ನಮ್ಮ ಸ್ಥಿತಿಯನ್ನು ಬ್ರೆಕ್ಟ್ ಗೆಲಿಲಿಯೋನ ಮೂಲಕ ಹೇಳಿಸುತ್ತಾನೆ: ‘‘ಇವತ್ತಿನ ಪರಿಸ್ಥಿತೀಲಿ ಏನಿದ್ದರು ಪುಡಿಕಾಸಿಗೆ ಬಾಯಿಬಿಡೋ ವೈಜ್ಞಾನಿಕ ಗುಲಾಮರ ಒಂದು ಪರಂಪರೆಯನ್ನು ನಾವು ನಿರೀಕ್ಷಿಸಬಹುದು.’’

ನಾಟಕವು ಸಂದೇಹದ ಮೂಲಕ ಜನರು ಎಚ್ಚರವಾಗಬಲ್ಲ ವೈಜ್ಞಾನಿಕ ದೃಷ್ಟಿಕೋನವನ್ನು ನೀಡುತ್ತದೆ. ಗೆಲಿಲಿಯೋಗೆ ಸೋಲಾಗುವುದಿಲ್ಲ. ಆತನ ಸಂಶೋಧನೆ ಗಡಿಭದ್ರತೆಯ ಕಣ್ಣು ತಪ್ಪಿಸಿ ವಿದೇಶಕ್ಕೆ ಹೋಗುತ್ತದೆ. ಆದರೆ ಮತೀಯ ಧರ್ಮಾಧಾರಿತ ಅಧಿಕಾರವು ನಿರ್ದಯವಾಗಿ ‘‘ಜನಸಮುದಾಯದ ಕಷ್ಟಕಾರ್ಪಣ್ಯಗಳು ಅನ್ನೋವು ಅನಾದಿಕಾಲದಿಂದ ಬಂದಂಥವು, ಅವು ಎಷ್ಟು ಪುರಾತನವೋ ಅಷ್ಟೇ ಶಾಶ್ವತವೂ ಆದಂಥವು.’’ ಎಂದೇ ನಂಬುತ್ತದೆ. ಇಡೀ ನಾಟಕವು ವಿಚಾರ/ವಿಜ್ಞಾನ ಮತ್ತು ಅಂಧಶ್ರದ್ಧೆಯ ಸರಕಾರ/ಸಮಾಜದ ನಡುವಣ ಸಂಘರ್ಷವನ್ನು ಎತ್ತಿಹೇಳಿದೆ. ಸಾಮಾನ್ಯತೆಯಿಂದ ಅಸಾಮಾನ್ಯತೆ ಹೊರಹೊಮ್ಮಬಲ್ಲುದು ಎಂಬ ಸಂದೇಶವೂ ಇದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top