ಕೋವಿಡ್ ಕುರಿತಾದ ಸಂಚು ಸಿದ್ಧಾಂತಗಳು | Vartha Bharati- ವಾರ್ತಾ ಭಾರತಿ

--

ಕೋವಿಡ್ ಕುರಿತಾದ ಸಂಚು ಸಿದ್ಧಾಂತಗಳು

ಎಲ್ಲಾ ಅಂತೆಕಂತೆಗಳ ಜೊತೆಗೆ ಈಗ ಕನ್ನಡ ಮಾಧ್ಯಮ ಲೋಕದಲ್ಲೂ ಚಾಲ್ತಿಯಲ್ಲಿರುವ ಬಿಜೆಪಿಯ ಮತ್ತೊಂದು ಮುಖ ಉಳಿಸಿಕೊಳ್ಳುವ ಕಥನವೆಂದರೆ ಕೋವಿಡ್ ಎಂಬ ಸಾಂಕ್ರಾಮಿಕ ಜಗತ್ತಿನ ಮೇಲೆ ದಾಳಿ ಮಾಡುವ ಸೂಚನೆ 2015ರಲ್ಲೇ ಪಾಶ್ಚಿಮಾತ್ಯ ದೇಶಗಳಿಗೆ ಗೊತ್ತಿತ್ತು. ಬಿಲ್‌ಗೇಟ್ಸ್‌ನಂತಹ ಕೆಲವು ಬಹುರಾಷ್ಟ್ರ್ಟ್ರೀಯ ಕಂಪೆನಿಗಳು ಅದರಿಂದ ಲಾಭ ಮಾಡಿಕೊಳ್ಳುವ ತಯಾರಿಯನ್ನು ಮಾಡಿಕೊಂಡಿದ್ದವು. ಹೀಗಾಗಿ ಭಾರತವೂ ಸಹ ಇಂತಹ ಬಹುರಾಷ್ಟ್ರೀಯ ಕಂಪೆನಿಗಳ ಷಡ್ಯಂತ್ರದ ಬಲಿಪಶುವೇ ಆಗಿದೆ. ಹೀಗಾಗಿ, ಪಾಪ, ಮೋದಿಯೇನು ಮಾಡಿಯಾರು ಎಂಬುದು ಈ ಹುಸಿ ಪ್ರಚಾರದ ಸಾರಾಂಶ.


ಕೋವಿಡ್ ನಿರ್ವಹಣೆಯಲ್ಲಿ ಕ್ರಿಮಿನಲ್ ಬೇಜವಾಬ್ದಾರಿ ತೋರಿದ ಮೋದಿ ಸರಕಾರ ಇಂದು ಭಾರತವನ್ನು ದೊಡ್ಡ ದುರಂತಕ್ಕೀಡು ಮಾಡಿದೆ. ಇದು ಜನರ ಅರಿವಿಗೂ ಬರತೊಡಗಿರುವುದು ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಗಳ ಫಲಿತಾಂಶಗಳಲ್ಲಿ ಹಾಗೂ ಉತ್ತರಪ್ರದೇಶದ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಸ್ಪಷ್ಟವಾಗಿ ಕಂಡಿದೆ. ಹೀಗಾಗಿ ಜನರ ದುರ್ಭರ ಪರಿಸ್ಥಿತಿಗಿಂತ ಮೋದಿ, ಮೋದಿ ಸರಕಾರ ಹಾಗೂ ಬಿಜೆಪಿ ಪಕ್ಷದ ಇಮೇಜಿನ ಬಗ್ಗೆ ಗಾಬರಿಗೊಂಡಿರುವ ಆರೆಸ್ಸೆಸ್-ಬಿಜೆಪಿ ಕೂಟ ಈ ಪರಿಸ್ಥಿತಿಯಿಂದ ಹೊರಬರಲು ಹಲವಾರು ತಂತ್ರಗಳನ್ನು ಹೆಣೆಯುತ್ತಿದೆ.

ಅದಕ್ಕಾಗಿ ಈಗಾಗಲೇ ಎರಡು ಮೂರು ಸುತ್ತು ಅಧಿಕಾರಿಗಳ ಸಭೆಯನ್ನು ನಡೆಸಿದೆ. ಆರೆಸ್ಸೆಸ್‌ನ ಅಂಗಸಂಸ್ಥೆಗಳು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮೋದಿ ಸರಕಾರವನ್ನು ದೂರುವ ನಕಾರಾತ್ಮಕ ಧೋರಣೆಯನ್ನು ಬೆಳೆಸಿಕೊಳ್ಳದೆ ಸಕಾರಾತ್ಮಕವಾಗಿ ಯೋಚಿಸಬೇಕೆಂದು 'Positivity Unlimited' (ಅಪರಿಮಿತ ಸಕಾರಾತ್ಮಕತೆ) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿವೆ. ಅದರ ಭಾಗವಾಗಿಯೇ ಮೊನ್ನೆ ಆರೆಸ್ಸೆಸ್‌ನ ಭಾಗವತರು ‘‘ಕೋವಿಡ್‌ನಿಂದ ಸತ್ತರೂ ಚಿಂತೆ ಮಾಡಬೇಡಿ, ಭಾರತೀಯರಿಗೆ ಪುನರ್ಜನ್ಮವಿದೆ’’ ಎಂದು ಪಾಸಿಟಿವ್ ಆಲೋಚನೆಗಳನ್ನು ಹಂಚಿದ್ದರು. ಇದರ ಜೊತೆಗೆ ಮೊನ್ನೆ ಆರೆಸ್ಸೆಸ್ ಹಾಗೂ ಬಿಜೆಪಿ ವರಿಷ್ಠರು ಸಭೆ ಸೇರಿ ಕೋವಿಡ್ ನಿರ್ವಹಣೆೆಯಲ್ಲಿ ಸರಕಾರದ ವೈಫಲ್ಯದಿಂದ ಬಿಜೆಪಿಯ ಭವಿಷ್ಯಕ್ಕೆ ಉಂಟಾಗಿರುವ ಧಕ್ಕೆಯನ್ನು ನಿವಾರಿಸಿಕೊಳ್ಳಲು ಹಲವಾರು ಆಕ್ರಮಣಕಾರಿ ಸಾಫ್ಟ್ ಹಾಗೂ ಹಾರ್ಡ್ ಯೋಜನೆಗಳನ್ನು ರೂಪಿಸಿದ್ದಾರೆ.

ಅದರ ಭಾಗವಾಗಿಯೇ- ಕೋವಿಡ್ ಸಾಂಕ್ರಾಮಿಕದ ಬಗ್ಗೆ ‘‘ಭಾರತದ ಮೇಲೆ ಪರದೇಶದ ಸಂಚು’’ ಎಂಬ ಕಥನವನ್ನು ಬಿತ್ತುವ ಹಾಗೂ ಮೋದಿ ಸರಕಾರವನ್ನು ಈ ವಿದೇಶಿ ಸಂಚಿನ ಬಲಿಪಶುವೆಂದು ಚಿತ್ರಿಸುತ್ತಾ ಕೋವಿಡ್ ವೈಫಲ್ಯಕ್ಕೆ ಮೋದಿ ಸರಕಾರವನ್ನು ಟೀಕಿಸುವವರನ್ನೆಲ್ಲಾ ಭಾರತದ ಮೇಲೆ ಕೋವಿಡ್ ದಾಳಿ ಮಾಡುತ್ತಿರುವ ವಿದೇಶಿ ಶಕ್ತಿಗಳ ಏಜೆಂಟರೆಂದು ಪಟ್ಟಕಟ್ಟುವ ವ್ಯವಸ್ಥಿತ ಯೋಜನೆಯೊಂದು ರೂಪುಗೊಂಡಿದೆ. ಕೋವಿಡ್ ಮೊದಲನೇ ಅಲೆಯ ಕಾಲದಲ್ಲಿ ‘‘ಮೋದಿ ನೇತೃತ್ವದಲ್ಲಿ ಭಾರತ ಯಶಸ್ವಿಯಾಗಿ ಕೋವಿಡನ್ನು ಗೆದ್ದು ಜಗತ್ತನ್ನೇ ಬಚಾವು ಮಾಡಿತು’’ ಎಂಬ ಕಥಾನಕ ಹರಿಬಿಟ್ಟಿದ್ದರಿಂದ ಆಗ ಸಂಚು ಸಿದ್ಧಾಂತಗಳು ಹೆಚ್ಚು ಬಳಕೆಯಾಗಲಿಲ್ಲ. ಆಗ ಕೋವಿಡ್ ಸಂದರ್ಭವನ್ನು ತಬ್ಲೀಗಿಗಳ ಮೇಲೆ ಹೊರಿಸಿ ಹಿಂದುತ್ವ ವೋಟ್ ಬ್ಯಾಂಕನ್ನು ಸದೃಢೀಕರಿಸಿಕೊಳ್ಳಲು ಮತ್ತು ಕೋವಿಡ್ ವಿರುದ್ಧ ಗಂಜಲ, ಸೆಗಣಿ, ಜಾಗಟೆ, ದೀಪದಂತಹ ಹಿಂದೂ ಜೀವನ ವಿಧಾನಗಳು ಹೇಗೆ ಪರಿಣಾಮಕಾರಿಯಾಗಿವೆ ಎಂದು ಪ್ರಚಾರ ಮಾಡಲು ಹೆಚ್ಚು ಬಳಸಿಕೊಂಡರು.

ಎರಡನೇ ಅಲೆ: ಬೆತ್ತಲಾದವರಿಗೆ ಸಂಚುಗಳ ಬಟ್ಟೆ ತೊಡಿಸುವ ಪ್ರಯತ್ನ
ಆದರೆ ಎರಡನೇ ಅಲೆಯಲ್ಲಿ ಮೋದಿ ಸರಕಾರದ ಕ್ರಿಮಿನಲ್ ಬೇಜವಾಬ್ದಾರಿಯ ಹಾಗೂ ಸರಕಾರಿ ಕೃಪಾಪೋಷಿತ ಮೌಢ್ಯದ ಪರಿಣಾಮಗಳು ಕಣ್ಣಿಗೆ ರಾಚುವಂತೆ ಗೋಚರವಾಗತೊಡಗಿತು. ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಹಾಗೂ ಸಾವುಗಳು ಹುಟ್ಟಿಸುತ್ತಿರುವ ಆಕ್ರೋಶವನ್ನು ಯಾವ ಬಗೆಯ ಮೊಸಳೆ ಕಣ್ಣೀರಿಂದಲೂ ಸಮಾಧಾನಿಸಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗತೊಡಗಿತು ಹಾಗೂ ಮೋದಿ ಸರಕಾರದ ಅರಿವುಗೇಡಿತನದಿಂದಾಗಿಯೇ ಸದ್ಯಕ್ಕೆ ಕೋವಿಡ್ ಅನ್ನು ನಿಯಂತ್ರಿಸಲು ಬೇಕಾದ ವ್ಯಾಕ್ಸಿನ್ ದೊರೆಯುವ ಯಾವ ಸಾಧ್ಯತೆಗಳೂ ಇಲ್ಲ. ಹೀಗಾಗಿ ಇನ್ನೂ ಸಾವು ಮತ್ತು ಸಂಕಷ್ಟಗಳು ಹೆಚ್ಚಾಗಲಿವೆ. ಮತ್ತದು ಮೋದಿ ಸರಕಾರದ ಮೇಲೆ ಹಾಗೂ ಆರೆಸ್ಸೆಸ್-ಬಿಜೆಪಿ ಕೂಟದ ಮೇಲೆ ಇನ್ನೂ ಕೆಟ್ಟ ಪರಿಣಾಮ ಬೀರುತ್ತದೆ. ಭವಿಷ್ಯ ಅರ್ಥವಾಗುತ್ತಿದ್ದಂತೆ ಆಳುವವರ ಫ್ಯಾಕ್ಟರಿಯಲ್ಲಿ ಹಲವು ಸುಳ್ಳುಗಳು ಉತ್ಪಾದನೆಯಾಗುತ್ತಿವೆ. ಅದರಲ್ಲಿ ಬಹುಮುಖ್ಯವಾದದ್ದು ಕೋವಿಡ್ ಎರಡನೇ ಅಲೆಯು ವಿದೇಶಿ ಶಕ್ತಿಗಳು ಭಾರತದ ಮೇಲೆ ನಡೆಸುತ್ತಿರುವ ಜೈವಿಕ ಯುದ್ಧದ ಭಾಗ ಎಂಬ ಸಂಚು ಸಿದ್ಧಾಂತ. ಇದನ್ನು ಪ್ರಧಾನಿ ಹಾಗೂ ಹಣಕಾಸು ಮಂತ್ರಿ ಇಬ್ಬರೂ ಫಾಲೋ ಮಾಡುವ ಅಭಿ ಅಠಾವಳೆ ಎಂಬವನ ಟ್ವೇಟ್‌ನಲ್ಲಿ ಮೊದಲು ಪ್ರಚಾರವಾಯಿತು. ನಂತರ ದೇಶಾದ್ಯಂತ ಅದನ್ನು ಎಲ್ಲಾ ಬಿಜೆಪಿಗಳು ವಿಸ್ತೃತ ಪ್ರಚಾರ ಮಾಡಿದರು.

ಆರೆಸ್ಸೆಸ್ ಪ್ರಾಯೋಜಿತ ಹಲವಾರು ಯೂಟ್ಯೂಬ್ ಚಾನೆಲ್‌ಗಳಲ್ಲಿ, ಜಿ.ಡಿ. ಭಕ್ಷಿಯಂತಹ ಹಾಲಿ ಆರೆಸ್ಸೆಸ್ಸಿಗ, ಮಾಜಿ ಸೇನಾಧಿಕಾರಿ ಮೋದಿಯನ್ನು ಕೆಳಗಿಳಿಸಲೆಂದೇ ಪಾಕಿಸ್ತಾನದಂತಹ ದೇಶಗಳು ಭಾರತದಲ್ಲಿ ಕೋವಿಡ್ ಎರಡನೇ ಅಲೆ ಹಬ್ಬಲು ಕಾರಣವಾಗಿವೆ ಎಂದು ‘ಅಧಿಕೃತ ಮಿಲಿಟರಿ’ ಧ್ವನಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ತಲೆತಿರುಕ ಪ್ರಚಾರಗಳು ಜನರ ಮುಂದೆ ತರ್ಕರಹಿತವಾಗಿ ಬೆತ್ತಲಾಗುತ್ತಿದ್ದಂತೆ ಮೊನ್ನೆ ಬಿಜೆಪಿಗರು ‘‘ಕಾಂಗ್ರೆಸ್‌ನವರು ಮೋದಿಯನ್ನು ಬದ್ ನಾಮ್ ಮಾಡಲೆಂದೇ ಒಂದು ‘ಟೂಲ್‌ಕಿಟ್’ ತಯಾರಿಸಿದ್ದಾರೆ’’ ಎಂಬ ಹುಯಿಲೆಬ್ಬಿಸಿದರು. ಆದರೆ ಅದು ಬಿಜೆಪಿಯ ಸುಳ್ಳು ಸೃಷ್ಟಿ ಎಂದು ಟ್ವಿಟರ್ ಸಂಸ್ಥೆ ಲೇಬಲ್ ಮಾಡುತ್ತಿದ್ದಂತೆ ಅವರ ಕಚೇರಿಯ ಮೇಲೆ ದಾಳಿ ನಡೆಸಿ ಹೆದರಿಸಲು ನೋಡಿದರು.

ಮೋದಿ ಸಂಚಿನಲ್ಲಿ ಕನ್ನಡ ‘ಮೋದ್ಯಮ’ಗಳು- ಹಳಸಲು ಸುಳ್ಳುಗಳ ಜೋಷ್‌ಗಳು
ಎಲ್ಲಾ ಅಂತೆಕಂತೆಗಳ ಜೊತೆಗೆ ಈಗ ಕನ್ನಡ ಮಾಧ್ಯಮ ಲೋಕದಲ್ಲೂ ಚಾಲ್ತಿಯಲ್ಲಿರುವ ಬಿಜೆಪಿಯ ಮತ್ತೊಂದು ಮುಖ ಉಳಿಸಿಕೊಳ್ಳುವ ಕಥನವೆಂದರೆ ಕೋವಿಡ್ ಎಂಬ ಸಾಂಕ್ರಾಮಿಕ ಜಗತ್ತಿನ ಮೇಲೆ ದಾಳಿ ಮಾಡುವ ಸೂಚನೆ 2015ರಲ್ಲೇ ಪಾಶ್ಚಿಮಾತ್ಯ ದೇಶಗಳಿಗೆ ಗೊತ್ತಿತ್ತು. ಬಿಲ್‌ಗೇಟ್ಸ್‌ನಂತಹ ಕೆಲವು ಬಹುರಾಷ್ಟ್ರೀಯ ಕಂಪೆನಿಗಳು ಅದರಿಂದ ಲಾಭ ಮಾಡಿಕೊಳ್ಳುವ ತಯಾರಿಯನ್ನು ಮಾಡಿಕೊಂಡಿದ್ದವು. ಹೀಗಾಗಿ ಭಾರತವೂ ಸಹ ಇಂತಹ ಬಹುರಾಷ್ಟ್ರೀಯ ಕಂಪೆನಿಗಳ ಷಡ್ಯಂತ್ರದ ಬಲಿಪಶುವೇ ಆಗಿದೆ. ಹೀಗಾಗಿ, ಪಾಪ, ಮೋದಿಯೇನು ಮಾಡಿಯಾರು ಎಂಬುದು ಈ ಹುಸಿ ಪ್ರಚಾರದ ಸಾರಾಂಶ.

ಹಾಲಿ ಮೋದ್ಯಮದ ಭಾಗವಾಗಿರುವ ಕನ್ನಡದ ಸ್ವಘೋಷಿತ ಪತ್ರಕರ್ತ ರೊಬ್ಬರ ಆ ವೀಡಿಯೊ ಮುಸ್ಲಿಮರನ್ನೋ, ಇಸ್ಲಾಂ ರಾಷ್ಟ್ರಗಳನ್ನೋ ಗುರಿಮಾಡಿ ಕೊಳ್ಳದೆ ಒಂದೆರಡು ಬಹುರಾಷ್ಟ್ರೀಯ ಕಂಪೆನಿಗಳನ್ನು ಸಂಚುಕರ್ತರೆಂದು ದೂರುವುದರಿಂದ ಹಾಗೂ ಅದಕ್ಕೆ ಪೂರಕವಾಗಿ ಅದು ಹಲವು ಆಯ್ದ ದಾಖಲೆಗಳನ್ನು ಆಯ್ದ ರೀತಿಯಲ್ಲಿ ಪ್ರದರ್ಶಿಸುವುದರಿಂದ ಹಲವು ಜನಸಾಮಾನ್ಯರು ಕೂಡ ಈ ವೀಡಿಯೊದ ವಿಷಯಗಳ ಬಗ್ಗೆ ಗೊಂದಲಕ್ಕೆ ಬಿದ್ದಂತಿದೆ. ಹೀಗಾಗಿ ಮೊದಲು ಆ ವೀಡಿಯೊದ ಸಾರಾಂಶವೇನೆಂದು ನೋಡೋಣ:

2015ರಲ್ಲೇ ಕೋವಿಡ್‌ಗೆ ಪೇಟೆಂಟ್ ಮಾಡಲಾಗಿತ್ತೇ?
ಆ ವೀಡಿಯೊ ವಾದದ ಪ್ರಕಾರ ರಿಚರ್ಡ್ ರೋತ್ ಶೀಲ್ಡ್ ಎಂಬ ವ್ಯಕ್ತಿ 2015ರಲ್ಲೇ ""SYSTEM AND METHOD FOR TESTING COVID-19'' (ಕೋವಿಡ್-19ರ ಪರೀಕ್ಷೆಯನ್ನು ಮಾಡುವ ವ್ಯವಸ್ಥೆ ಮತ್ತು ವಿಧಾನಗಳು)ಎಂಬ ಸಂಶೋಧನೆಗೆ ಪೇಟೆಂಟ್ ನೀಡಲು ಡಚ್ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಹಾಗಿದ್ದಲ್ಲಿ ಅವರಿಗೆ 2019ಕ್ಕೆ ಕೋವಿಡ್ ಜಗತ್ತಿನ ಮೇಲೆ ದಾಳಿ ಮಾಡುತ್ತದೆ ಎಂಬುದು 2015ರಲ್ಲೇ ಹೇಗೆ ಗೊತ್ತಾಗಿತ್ತು? ಆದ್ದರಿಂದ ಇದು ಪೂರ್ವನಿಯೋಜಿತ ಸಂಚೇ ಸರಿ.. ಎಂಬುದು ಆ ವೀಡಿಯೊ ಮಾಡುವ ಜೋಷಿನ ತೀರ್ಮಾನ...!

ಇದಕ್ಕೆ ಪುರಾವೆಯಾಗಿ ಆ ವೀಡಿಯೊದಲ್ಲಿ ರೋತ್ ಶೀಲ್ಡ್ ಅವರ ‘ಅರ್ಜಿ ಮೂಲ 2015’ ಎಂದು ನಮೂದಿಸಿರುವ ದಾಖಲೆಯನ್ನು ತೋರಿಸಲಾಗುತ್ತದೆ. ಅದರಲ್ಲಿ ಅರ್ಜಿಯ ಹಾಲಿ ದಿನಾಂಕ 2020 ಎಂದೇ ಇದ್ದರೂ ಅರ್ಜಿಯ ಮೂಲ ಹಾಗೂ ನಂತರದ ಸರಣಿ ದಿನಾಂಕಗಳಲ್ಲಿ 2015 ಮತ್ತು 2017ರ ಉಲ್ಲೇಖಗಳಿವೆ. ವಾಸ್ತವದಲ್ಲಿ ಈ ಗುಮಾನಿಗಳು ಹಾಗೂ ಸಂಚು ಸಿದ್ಧಾಂತವು 2020ರ ಪ್ರಾರಂಭದಲ್ಲೇ ಪಶ್ಚಿಮ ದೇಶಗಳಲ್ಲಿ ಹರಿದಾಡಿತ್ತು ಹಾಗೂ ಅದರ ಬಗ್ಗೆ ಸಾಕಷ್ಟು ತನಿಖೆ ಹಾಗೂ ಸಂಶೋಧನೆ ನಡೆದು ಈ ರೋತ್ ಶೀಲ್ಡ್ ಕಹಾನಿ ಸುಳ್ಳೆಂದು ರುಜುವಾತಾಗಿತ್ತು. ಮಾತ್ರವಲ್ಲ. ಹಿಂದಿಯಲ್ಲಿ ಯುಪಿಎಸ್‌ಸಿಯಲ್ಲಿ ಮುಸ್ಲಿಮರು ಹೆಚ್ಚು ಪಾಸಾಗುತ್ತಾ ಭಾರತದ ಮೇಲೆ ಯುಪಿಎಸ್‌ಸಿ ಜಿಹಾದ್ ನಡೆಸುತ್ತಿದ್ದಾರೆ ಎಂಬ ಕಾರ್ಯಕ್ರಮ ನಡೆಸಲು ಮುಂದಾಗಿದ್ದ ಹಿಂದುತ್ವ ಭಯೋತ್ಪಾದಕ ಸುರೇಶ್ ಚವಾಂಕೆಯ ಸುದರ್ಶನ್ ಚಾನೆಲ್ ಎಪ್ರಿಲ್‌ನಲ್ಲೇ ಈ ಕಥನವನ್ನು ಪ್ರಕಟಿಸಿ ಸುಳ್ಳೆಂದು ಸಾಬೀತಾದ ಮೇಲೆ ಸುಮ್ಮನಾಗಿತ್ತು. ವಾಸ್ತವದಲ್ಲಿ, ಇದರ ಬಗ್ಗೆ ಹತ್ತಾರು ಮಾಧ್ಯಮ ಸಂಸ್ಥೆಗಳು ದಾಖಲೆಗಳನ್ನೆಲ್ಲಾ ಜಾಲಾಡಿ ಫ್ಯಾಕ್ಟ್ ಚೆಕ್ ಮಾಡಿ ಈ ಸುದ್ದಿ ಅಪ್ಪಟ ಸುಳ್ಳೆಂದು ಸಾಬೀತು ಮಾಡಿವೆ. ಅದಾದ ಹಲವಾರು ತಿಂಗಳುಗಳ ನಂತರ ಈಗ ಹೊಸ ಸಂಶೋಧನೆ ಎಂಬಂತೆ ಕನ್ನಡದ ಈ ‘ಮೋದ್ಯಮ’ ಕನ್ನಡಿಗರಿಗೆ ಸುಳ್ಳನ್ನು ಮಾತ್ರವಲ್ಲ ಹಳಸನ್ನು ಉಣಬಡಿಸುತ್ತಿವೆ...!
ಅದರಲ್ಲಿ ಕೆಲವು ಪ್ರಮುಖ ತನಿಖಾ ವರದಿಗಳ ಲಿಂಕ್ ಕೆಳಗಿದೆ.:
https://www.reuters.com/article/uk-factcheck-coronavirus-patent-idUSKBN2...
https://www.reuters.com/article/factcheck-gates-list-idUSL1N2LO230
https://www.newtral.es/bulo-paises-bajos-patente-datos-covid-19/20201005/  
https://www.vishvasnews.com/english/viral/fact-check-post-claiming-covid...

ತನಿಖೆಗಳು ಬಯಲು ಮಾಡಿರುವ ವಾಸ್ತವ ಇದು:

2015ರಲ್ಲಿ ಪೇಟೆಂಟ್ ಕೇಳಿದ್ದು ಕೋವಿಡ್-19ರ ಬಗ್ಗೆ ಅಲ್ಲ 
2015ರಲ್ಲಿ ಈ ರೋತ್ ಶೀಲ್ಡ್ ಮಹಾಶಯ ಪೇಟೆಂಟ್ ಒಂದಕ್ಕೆ ಅರ್ಜಿ ಸಲ್ಲಿಸಿದ್ದು ನಿಜ. ಆದರೆ ಅದು "SYSTEM AND METHOD FOR TESTING COVID-19'' (ಕೋವಿಡ್-19ರ ಪರೀಕ್ಷೆಯನ್ನು ಮಾಡುವ ವ್ಯವಸ್ಥೆ ಮತ್ತು ವಿಧಾನಗಳು)ಗಾಗಿ ಅಲ್ಲ ...ಬದಲಿಗೆ Acquiring and Transmitting Biometric Data ಕುರಿತಾಗಿತ್ತು....(ಬಯೋಮೆಟ್ರಿಕ್ ದತ್ತಾಂಶಗಳನ್ನು ಸಂಗ್ರಹಿಸುವ ಹಾಗೂ ಸಾಗಿಸುವ ವಿಧಾನಗಳ ಬಗ್ಗೆ) ಹೀಗಾಗಿ ಪೇಟೆಂಟ್ ರಿಜಿಸ್ಟ್ರೇಷನ್ ವಿಧಾನದ ಪ್ರಕಾರ ಅದೇ ವ್ಯಕ್ತಿ ತನ್ನ ಹಳೆಯ ಪೇಟೆಂಟ್ ವಿಷಯವನ್ನೇ ಪ್ರತಿವರ್ಷವೂ ಸುಧಾರಣೆ ಮಾಡುತ್ತಾ
"acquiring and transmitting biometric data'' ವಿಷಯಕ್ಕೆ ಸಂಬಂಧಿಸಿದ ಮತ್ತು ಸುಧಾರಿಸಿದ -ಅಪಡೇಟೆಡ್ ಅರ್ಜಿಗಳನ್ನು 2016, 2017ರಲ್ಲೂ ಸಲ್ಲಿಸಿದ.
-ಆಗಲೂ ಅದಕ್ಕೂ ಕೋವಿಡ್-19ಕ್ಕೂ ಯಾವ ಸಂಬಂಧವೂ ಇರಲಿಲ್ಲ.
  -ಈ ಅರ್ಜಿ ಸರಣಿಯ ಮುಂದುವರಿದ ಭಾಗವಾಗಿ ಪ್ರಪ್ರಥಮ ಬಾರಿಗೆ, ಕೋವಿಡ್-19 ಜಗತ್ತಿನ ಮೇಲೆ ದಾಳಿ ನಡೆಸಿದ ತಿಂಗಳುಗಳ ನಂತರ, 2020ರಲ್ಲಿ ಆತ ತನ್ನ ಹಳೆಯ ವಿಷಯವನ್ನು ಬದಲಿಸಿ ""SYSTEM AND METHOD FOR TESTING COVID-19''ಗಾಗಿ ಪೇಟೆಂಟ್ ಅರ್ಜಿ ನವೀಕರಿಸಿದ.

-ಆದರೆ ವಿಷಯ ಹೊಸದಾಗಿದ್ದರೂ ಅರ್ಜಿಯ ಮೂಲ ಪ್ರಾರಂಭವಾಗಿದ್ದು ಮಾತ್ರ ""acquiring and transmitting biometric data''ಗಾಗಿ ಆತ 2015ರಂದು ಸಲ್ಲಿಸಿದ ಅರ್ಜಿಯಿಂದ. ಹೀಗಾಗಿ ಅರ್ಜಿಯ ಸರಣಿ ವಿವರಗಳನ್ನು ಗಮನಿಸದೆ ಕೇವಲ ಕೊನೆಯ ಕಾಲಂ ಅನ್ನು ಮಾತ್ರ ಪರಿಗಣಿಸಿದಾಗ, ಆತ ಕೋವಿಡ್-19ಕ್ಕೆ ಸಂಬಂಧಪಟ್ಟಂತೆ 2020ರಲ್ಲಿ ದಾಖಲಿಸಿದ ಪೇಟೆಂಟನ್ನೇ 2015ರಿಂದಲೂ ಕೇಳಿಕೊಂಡು ಬಂದಿದ್ದ ಎಂಬ ತಪ್ಪುಅಭಿಪ್ರಾಯ ಮೂಡಿಸುತ್ತದೆ. ಈಗಲೂ ಆತನಿಗೆ ಈ ಕೋವಿಡ್-19 ವಿಷಯಕ್ಕೂ ಪೇಟೆಂಟ್ ಸಿಕ್ಕಿಲ್ಲ. ಈಗಲೂ ಅದು PENDING ಎಂದು ವರ್ಗೀಕೃತವಾಗಿದೆ.

ಆದ್ದರಿಂದ 2015ರಲ್ಲೇ ಕೋವಿಡ್ 19 ಪರೀಕ್ಷೆಯ ವಿಧಾನದ ಬಗ್ಗೆ ಪೇಟೆಂಟ್ ದಾಖಲಾಗಿತ್ತು ಎಂಬುದು ಸುಳ್ಳು.

ಎಲ್ಲಾ ವೈರಸ್‌ಗಳ ಮೂಲ- ಬಂಡವಾಳಶಾಹಿ ಅಗ್ರಿಬಿಸಿನೆಸ್
ಆದರೆ ಈ ಸಂಚು-ಸುಳ್ಳಾಟಗಳು ಕೇವಲ ಮೋದಿಯ ವೈಫಲ್ಯಗಳನ್ನು ಮಾತ್ರವಲ್ಲದೆ ಇಂತಹ ಸಾಂಕ್ರಾಮಿಕಗಳಿಗೆ ಕಾರಣವಾಗುವ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ಸಾಂಸ್ಥಿಕ ಕ್ರೌರ್ಯವನ್ನೂ ಮುಚ್ಚಿಡುತ್ತವೆ. ಏಕೆಂದರೆ ಇಂತಹ ಸಾಂಕ್ರಾಮಿಕಗಳು ಹೊಸತೂ ಅಲ್ಲ. ಕೋವಿಡ್ ನಂತರ ಮುಗಿಯುವುದೂ ಇಲ್ಲ.
 
ಏಕೆಂದರೆ, ಈಬಗೆಯ ರೋಗ ಸೃಷ್ಟಿಸುವ ಹೊಸ pathogen (ರೋಗಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾ)ಗಳು ಹುಟ್ಟಿಕೊಳ್ಳಲು ಪ್ರಧಾನ ಕಾರಣವೇನೆಂದರೆ: -ಜಗತ್ತಿನಾದ್ಯಂತ ಸಹಸ್ರಮಾನಗಳಿಂದ ಚಾಲ್ತಿಯಲ್ಲಿದ್ದ ಸ್ಥಳೀಯ ವಾಯುಮಾನ ಹಾಗೂ ಪರಿಸರ ಆಧರಿಸಿದ ಕೃಷಿಯನ್ನು ಹಾಗೂ ಸ್ಥಳೀಯ ಪರಿಸರಜನ್ಯ ಕಾಡುಗಳನ್ನು ನಾಶಮಾಡಿರುವ ಬೃಹತ್ ಕೃಷಿ ಬಹುರಾಷ್ಟ್ರೀಯ ಕಂಪೆನಿಗಳು. ಈ ಬೃಹತ್ MNCಗಳು ಅಲ್ಲೆಲ್ಲ ದೊಡ್ಡಮಟ್ಟದಲ್ಲಿ ಏಕಸ್ವರೂಪಿ ಹಾಗೂ ತಳಿಸಂಸ್ಕರಿತ ಕಾರ್ಪೊರೇಟ್ (ಧಾನ್ಯ ಹಾಗೂ ಮಾಂಸ) ಕೃಷಿಯನ್ನು ವಿಸ್ತರಿಸುತ್ತಿವೆ. ಆ ಮೂಲಕ ಹೊಸ ವೈರಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಹುಟ್ಟಲು, ಉಳಿಯಲು ಮತ್ತು ವಿಪುಲವಾಗಿ ಬೆಳೆಯಲು ಬೇಕಾದ ಏಕರೂಪಿ ಆಶ್ರಯದಾಯಿ (host) ವಾತಾವರಣವನ್ನು ಈ ಹೊಸ Agribusiness ಒದಗಿಸಿಕೊಟ್ಟಿದೆ ಹಾಗೂ ಜಾಗತೀಕರಣದ ಸಂದರ್ಭದಲ್ಲಿ ಆಹಾರಾಭ್ಯಾಸಗಳು ಸಹ ಏಕರೂಪಿಯಾಗುತ್ತಾ ಇಂತಹ MNCಗಳ ಆಹಾರ ಸರಕುಗಳನ್ನೇ ಆಧರಿಸಿವೆ. ಹೀಗಾಗಿ ಎಲ್ಲೋ ಮೂಲೆಯಲ್ಲಿ ಹುಟ್ಟಿದ ವೈರಾಣುಗಳು ಬಹುಬೇಗನೆ ಜಗ್ಗತ್ತಿನಾದ್ಯಂತ ಹರಡುತ್ತಿವೆ. ಇಂದು ನಾವು ಎದುರಿಸುತ್ತಿರುವ ಚೀನಾ ಮೂಲದ ಕೋವಿಡ್-19 ಸೃಷ್ಟಿಸಿರುವ ಅವಘಡಗಳನ್ನೇ ಈ ಹಿಂದೆ ಇದೇ ಗುಂಪಿಗೆ ಸೇರಿದ ಸಾರ್ಸ್, H5N2, H5Nx, ಪಶ್ಚಿಮ ಆಫ್ರಿಕಾದ ಎಬೋಲಾ, ಬ್ರೆಝಿಲ್ ಮೂಲದ ಜೈಕಾ ಹಾಗೂ ಉತ್ತರ ಅಮೆರಿಕ ಮೂಲದ H1N1 ಮತ್ತು H5N2 ಎಂದು ಗುರುತಿಸಲಾದ ವೈರಸ್‌ಗಳೂ ಸಹ ಸೃಷ್ಟಿಸಿದ್ದವು. ಇಂದು ಕೋವಿಡ್-19 ಮೂರನೇ ಅಲೆ ಅಥವಾ ನಾಲ್ಕನೇ ಅಲೆಯೊಂದಿಗೆ ಇದು ಮುಗಿದರೂ ಇಂತಹ ಸಾಂಕ್ರಾಮಿಕಗಳಿಗೆ ಕಾರಣವಾಗಿರುವ ಕಾರ್ಪೊರೇಟ್ ಅಗ್ರಿಬಿಸಿನೆಸ್ ಮತ್ತು ಜಾಗತೀಕರಣ ಮುಂದುವರಿಯುವುದರಿಂದ ನಾಳೆ ಮತ್ತೊಂದು ಸಾಂಕ್ರಾಮಿಕಕ್ಕೆ ಮನುಕುಲ ತುತ್ತಾಗುತ್ತದೆ. ಇಂತಹ ಗಂಡಾಂತರಕ್ಕೆ ಕಾರಣವಾದ ಬಂಡವಾಳಶಾಹಿಗಳೇ, ಅದರ ನಿವಾರಣಾ ವ್ಯವಹಾರದಲ್ಲೂ ಲಾಭ ಮಾಡಿಕೊಳ್ಳುತ್ತಾ ಬಂದಿದ್ದಾರೆ....ಇದೇ ಬಿಲ್ ಗೇಟ್ಸ್, ಇದೇ ಫೈಝರ್, ಇದೇ ಜಾನ್ಸನ್ ಆ್ಯಂಡ್ ಜಾನ್ಸನ್ ಇತ್ಯಾದಿಗಳು ಮತ್ತು ಭಾರತದ ಅವರ ತದ್ರೂಪಿಗಳೂ ವ್ಯಾಕ್ಸಿನ್‌ಗಳನ್ನು ಪೂರೈಸುತ್ತಾ ಕೋಟಿಕೋಟಿ ಲಾಭ ಸೂರೆಗೈಯುತ್ತಾ ಬಂದಿವೆ...

ಇದು ನಡೆಯುತ್ತಿರುವುದು ಯಾರದೋ ಸಂಚಿನಿಂದಲ್ಲ...ಸುಲಿಗೆ ಹಾಗೂ ದುರಂತಗಳು ಪ್ರಜಾತಂತ್ರ-ಸರ್ವಾಧಿಕಾರಿ ಎಲ್ಲಾ ಬಗೆಯ ದೇಶಗಳಲ್ಲಿ ಅಧಿಕೃತವಾಗಿ ಜಾರಿಯಲ್ಲಿರುವ ಕಾರ್ಪೊರೇಟ್ ಜಾಗತೀಕರಣದ ಪರವಾದ ಶಾಸನ-ಕಾನೂನುಗಳ ಭಾಗವಾಗಿ...ಹಾಡ ಹಗಲಲ್ಲಿ.. ರಾಜಾರೋಷವಾಗಿ....ನಡೆಯುತ್ತಾ ಬರುತ್ತಿದೆ..ಯಾಕೆಂದರೆ, ಟ್ರಂಪ್, ಬೈಡನ್, ಪುಟಿನ್... ಭಾರತದ ಮೋದಿಯಾದಿಯಾಗಿ ಎಲ್ಲರೂ ಇದೇ ಬಂಡವಾಳಶಾಹಿ ವ್ಯವಸ್ಥೆಯ ಮೇನೇಜರುಗಳು.... ಎಲ್ಲಾ ರಾಜಕೀಯ ಪಕ್ಷಗಳು ಇದೇ ಸುಲಿಗೆಕೋರರಿಂದಲೇ ಫಂಡುಗಳನ್ನು, ಎಲೆಕ್ಟೋರಲ್ ಬಾಂಡುಗಳನ್ನು ಪಡೆದುಕೊಂಡು ಚುನಾವಣೆ ಗೆಲ್ಲುತ್ತವೆ. ಗೆದ್ದ ನಂತರ ಈ ಕಾರ್ಪೊರೇಟ್ ಲೂಟಿಯ ಪರವಾಗಿ ನೀತಿಗಳನ್ನು ಮಾಡಿ ಬಂಡವಾಳಶಾಹಿ ವ್ಯವಸ್ಥೆಯನ್ನು ರಕ್ಷಿಸುತ್ತವೆ. ಪೋಷಿಸುತ್ತವೆ.

ಮತ್ತೊಂದು ಕಡೆ ಪ್ರಕೃತಿಯನ್ನು ಮತ್ತು ಜನರನ್ನು ದುರಂತಕ್ಕೆ ದೂಡುತ್ತವೆ. ಆದರೆ ಪರಿಸ್ಥಿತಿ ಕೈಮೀರಿದಾಗ ಜಗತ್ತಿನಾದ್ಯಂತ ಆಯಾ ದೇಶಗಳ ಭಟ್ಟರು, ಜೋಷಿಗಳು... ಸಂಚು ಸಿದ್ಧಾಂತ ಹೊಸೆಯುತ್ತಾ ಆಳುವವರನ್ನು ರಕ್ಷಿಸುವ ತಂತ್ರದಲ್ಲಿ ತೊಡಗುತ್ತಾರೆ. ಆದರೆ ಇದು ಯಾರದೋ ಕೆಲವು ದುಷ್ಟರ ಸಂಚಲ್ಲ.ಬದಲಿಗೆ ದುಷ್ಟ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯ ಪರಿಣಾಮ. ಬಂಡವಾಳಶಾಹಿ ವ್ಯವಸ್ಥೆ ನಾಶವಾಗಿ ಸಮಾಜಮುಖಿ, ಪ್ರಕೃತಿ ಸ್ನೇಹಿ, ಪರಿಸರ- ಸಮಾಜವಾದಿ ವ್ಯವಸ್ಥೆ ರೂಪುಗೊಳ್ಳದಿದ್ದರೆ ಹೊಸ ಹೊಸ ಕೋವಿಡ್ ಗಳು ಮನುಕುಲದ ಮೇಲೆ ದಾಳಿ ನಡೆಸುತ್ತಲೇ ಇರುತ್ತವೆ. ಆದ್ದರಿಂದಲೇ ವಾಟ್ಸ್‌ಆ್ಯಪ್ ಯೂನಿವರ್ಸಿಟಿಯಿಂದ ಬರುವುದನ್ನೆಲ್ಲಾ ನಂಬಬಾರದು...ಅದರಲ್ಲೂ ರೋಚಕವಾದದ್ದನ್ನೆಲ್ಲಾ ಅನುಮಾನದಿಂದಲೇ ನೋಡಬೇಕು... ವಿಶೇಷವಾಗಿ ಆಳುವವರ್ಗದ ತುತ್ತೂರಿಗಳ ಬಿತ್ತರಗಳನ್ನು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top