ಮೂಲಭೂತವಾದಿ ಫ್ಯಾಂಟಸಿಗಳು ಮತ್ತು ಆಧುನಿಕ ವಿಜ್ಞಾನ | Vartha Bharati- ವಾರ್ತಾ ಭಾರತಿ

--

ಮೂಲಭೂತವಾದಿ ಫ್ಯಾಂಟಸಿಗಳು ಮತ್ತು ಆಧುನಿಕ ವಿಜ್ಞಾನ

ಕೋವಿಡ್-19 ವಿರುದ್ಧ ಹೋರಾಟದಲ್ಲಿ ಆಡಳಿತಾರೂಢ ಪಕ್ಷದ ರಾಜಕಾರಣಿಗಳು ಉತ್ತೇಜಿಸುತ್ತಿರುವ ಇಂತಹ ನಕಲಿ, ಠಕ್ಕುತನ, ಮೂಢನಂಬಿಕೆ ಮತ್ತು ಕಂದಾಚಾರಗಳ ಬಗ್ಗೆ ನನಗೆ ತಿಳಿದಿರುವಂತಹ ಭಾರತದ ಹೆಸರಾಂತ ವಿಜ್ಞಾನಿಗಳು ಏನೆಂದು ಯೋಚಿಸುತ್ತಿರಬಹುದೆಂದು ನಾನು ಅಚ್ಚರಿಪಡುತ್ತಿದ್ದೇನೆ. ಇಂತಹ ಮೂಢನಂಬಿಕೆ ಹಾಗೂ ಕಂದಾಚಾರಗಳ ಪ್ರತಿಪಾದನೆಗಳು ಕೇಂದ್ರದ ಓರ್ವ ಸಚಿವ ಅಥವಾ ರಾಜ್ಯ ಮಟ್ಟದ ರಾಜಕಾರಣಿಗಷ್ಟೇ ಸೀಮಿತವಾಗಿಲ್ಲ. ಸಂಘಪರಿವಾರದ ಸದಸ್ಯರು ಅವುಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಸಂಘದ ಪರಮೋನ್ನತ ನಾಯಕ, ಸ್ವತಃ ಪ್ರಧಾನಿ ಕೂಡಾ ಅವರ ಸಾಲಲ್ಲಿ ಸೇರಿದ್ದಾರೆ.


‘ಕೋವಿಡ್-19 ಬಿಕ್ಕಟ್ಟಿನ’ ಸಮಯದಲ್ಲಿ ಓರ್ವ ವ್ಯಕ್ತಿಯು ತನ್ನ ದೇಹದ ರೋಗನಿರೋಧಕ ಶಕ್ತಿಯನ್ನು ಹೇಗೆ ಬೆಳೆಸಿಕೊಳ್ಳಬೇಕೆಂಬ ಬಗ್ಗೆ ಇತ್ತೀಚೆಗೆ ಆಯುಷ್ ಸಚಿವಾಲಯವು ವಿಸ್ತೃತವಾದ ಸಲಹೆಯನ್ನು ನೀಡಿತ್ತು. ಈ ಭಯಾನಕ ರೋಗವನ್ನು ದೂರವಿಡಲು ಸಚಿವಾಲಯವು ‘ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಮೂಗಿನ ಎರಡು ಹೊಳ್ಳೆಗಳಿಗೆ ಸವರುವುದು’ ಸೇರಿದಂತೆ ನಿರ್ದಿಷ್ಟ ಶಿಫಾರಸುಗಳ ಸರಣಿಯನ್ನೇ ಪಟ್ಟಿ ಮಾಡಿತ್ತು. ಆದಾಗ್ಯೂ, ಯಾರಾದರೂ ಓರ್ವ ತನ್ನ ಮೂಗಿಗೆ ಇಂತಹ ವಸ್ತುಗಳನ್ನು ಲೇಪಿಸಿಕೊಳ್ಳಲು ಇಷ್ಟಪಡದೆ ಇದ್ದಲ್ಲಿ ಅಂತಹವರಿಗೆ ಸಚಿವಾಲಯವು ಇನ್ನೊಂದು ಪರ್ಯಾಯ ಸಲಹೆಯನ್ನು ನೀಡಿದೆ. 1 ಚಮಚ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಬಾಯಲ್ಲಿಡಿ. ಆದರೆ ಅದನ್ನು ಕುಡಿಯಬಾರದು, 2-3 ನಿಮಿಷಗಳ ಬಳಿಕ ಅದನ್ನು ಹೊರಗೆ ಉಗುಳಬೇಕು. ಬಳಿಕ ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸಬೇಕು. ಕೋವಿಡ್- 19 ಬಾರದಂತೆ ತಡೆಯಲು ಚ್ಯವನಪ್ರಾಶ ಸೇವನೆ, ಹರ್ಬಲ್ ಟೀ ಪಾನ, ಬಿಸಿಹಬೆ ಉಸಿರೆಳೆತ ಇತ್ಯಾದಿ ಶುಶ್ರೂಷೆಗಳನ್ನು ಕೈಗೊಳ್ಳುವಂತೆ ಸಚಿವಾಲಯವು ಶಿಫಾರಸು ಮಾಡಿದೆ.

ತಾವು ಶಿಫಾರಸು ಮಾಡಿದ ವಿಧಿವಿಧಾನಗಳನ್ನು ಆತ ಅಥವಾ ಆಕೆ ಅನುಸರಿಸಿದಲ್ಲಿ ಅಂತಹ ದೇಶಭಕ್ತ ಕೋವಿಡ್-19ರಿಂದ ಬಾಧಿತನಾಗಲಾರನು(ಳು) ಎಂದು ಆಯುಷ್ ಸಚಿವಾಲಯವು ಪ್ರಕಟಿಸಿದ ಪ್ರಚಾರಸಾಮಗ್ರಿಗಳು ಹೇಳುತ್ತವೆ. ನೀವು ಪಾರಂಪರಿಕ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದಲ್ಲಿ ನಿಮಗೆ ಕೊರೋನ ವೈರಸ್ ಸೋಂಕು ತಗಲುವ ಸಾಧ್ಯತೆ ತುಂಬಾ ಕಡಿಮೆ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗುತ್ತಿದೆ. ಆಡಳಿತಾರೂಢ ಪಕ್ಷದ ನಾಯಕರು ಹಾಗೂ ಪ್ರಚಾರಕರು ಜೊತೆಯಾಗಿ 21ನೇ ಶತಮಾನದ ಅತ್ಯಂತ ಮಾರಣಾಂತಿಕ ರೋಗಗಳಿಗೆ ಆಧಾರರಹಿತವಾದ ಚಿಕಿತ್ಸಾಕ್ರಮಗಳನ್ನು ನಿಸ್ಸಂಕೋಚವಾಗಿ ಶಿಫಾರಸು ಮಾಡುತ್ತಿದ್ದಾರೆ. ನನ್ನದೇ ರಾಜ್ಯದಲ್ಲಿ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಸಂಸದ ವಿಜಯ ಸಂಕೇಶ್ವರ ಅವರು ಕೊರೋನ ಸೋಂಕಿತರಲ್ಲಿ ಆಕ್ಸಿಜನ್ ಕೊರತೆೆಯನ್ನು ನಿವಾರಿಸಲು ನಿಂಬೆರಸವನ್ನು ಮೂಗಿಗೆ ಹಾಕುವಂತೆ ಶಿಫಾರಸು ಮಾಡಿದ್ದರು. ಈ ಬಗ್ಗೆ ‘ದಿ ಹಿಂದೂ’ ಹೀಗೆ ವರದಿ ಮಾಡಿತ್ತು. ‘‘ಶ್ರೀಯುತ ಸಂಕೇಶ್ವರ ಅವರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ, ಮೂಗಿನ ಹೊಳ್ಳೆಗಳ ಮೂಲಕ ಲಿಂಬೆರಸದ ಹನಿಗಳನ್ನು ಹಾಕುವುದರಿಂದ ಆಮ್ಲಜನಕದ ಮಟ್ಟದಲ್ಲಿ ಶೇ.80ರಷ್ಟು ಹೆಚ್ಚಳವಾಗುತ್ತದೆ. ತನ್ನ ಬಂಧುಗಳು ಹಾಗೂ ಸಹವರ್ತಿಗಳು ಸೇರಿದಂತೆ ಈ ಮನೆಮದ್ದು 200 ಮಂದಿಯಲ್ಲಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಆದರೆ ತಮ್ಮ ನಾಯಕನ ಸಲಹೆಯನ್ನು ಅನುಸರಿಸಿದ ಪರಿಣಾಮವಾಗಿ ಈ ರಾಜಕಾರಣಿಯ ಹಲವಾರು ಅನುಯಾಯಿಗಳು ಸಾವನ್ನಪ್ಪಿದ್ದಾರೆ’’ (https://www.thehindu.com/newsnational/karnataka/complaint-sent-to-chief secretary-against-vijay-sankeshwar-in-home-remedy-issue/article34451392.ece).

ಕರ್ನಾಟಕದ ಇನ್ನೂ ಹೆಚ್ಚಿನ ಪ್ರಭಾವಿ ಬಿಜೆಪಿ ನಾಯಕ, ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಕೊರೋನ ವಿರುದ್ಧ ಹೋರಾಡಲು ಹಬೆಯಿಂದ ಉಸಿರೆಳೆದುಕೊಳ್ಳುವಂತೆ ಉತ್ಸಾಹದಿಂದಲೇ ಶಿಫಾರಸು ಮಾಡಿದ್ದರು. ಮಾತ್ರವಲ್ಲದೆ ಮಾಸ್ಕ್ ಧರಿಸದೆ ಪರಸ್ಪರ ಸನಿಹದಲ್ಲಿ ನಿಂತುಕೊಂಡು ತಮ್ಮ ರಾಜಕೀಯ ಧಣಿಗಳು ಸಲಹೆ ಮಾಡಿದ ಈ ವಿಧಾನವನ್ನು ಅನುಸರಿಸುತ್ತಿರುವ ಪೊಲೀಸರ ಚಿತ್ರಗಳನ್ನು ಅವರು ಪೋಸ್ಟ್ ಮಾಡಿದ್ದರು. (https://twitter.com/blsanthosh/status/1388391388702642177?s-=11). ಈ ಮಧ್ಯೆ, ಬಿಜೆಪಿ ಆಳ್ವಿಕೆಯ ಇನ್ನೊಂದು ರಾಜ್ಯವಾದ ಮಧ್ಯಪ್ರದೇಶದಲ್ಲಿ ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಅವರು ಕೊರೋನ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಹವನವು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಹೇಳಿದ್ದರು. ಸಚಿವೆ ಹೇಳಿದ್ದನ್ನು ‘ದಿ ಟೆಲಿಗ್ರಾಫ್’ ಹೀಗೆ ವರದಿ ಮಾಡಿತ್ತು. ‘‘ಯಜ್ಞ ಮಾಡುವಂತೆ ಹಾಗೂ ಆಹುತಿ (ಸಮರ್ಪಣೆ) ಸಲ್ಲಿಸುವಂತೆ ಮತ್ತು ಪರಿಸರವನ್ನು ಶುದ್ಧಗೊಳ್ಳುವಂತೆ ನಾವು ಮನವಿ ಮಾಡುತ್ತೇವೆ. ಯಾಕೆಂದರೆ ಸಾಂಕ್ರಾಮಿಕ ರೋಗಗಳನ್ನು ತೊಲಗಿಸಲು ಈ ಪವಿತ್ರ ವಿಧಿಯನ್ನು ನಡೆಸುವುದು ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.’’ ( https://www.telegraphinida.com/india/mp-minister-endorses-yagna-claims-i... -been-used-since-ages-to-battle-pandemics/cid/1815355).

ಸಚಿವೆಯ ಸಲಹೆಯನ್ನು ಆಕೆಯ ‘ಪರಿವಾರ’ದ ಸದಸ್ಯರು ಗಂಭೀರವಾಗಿ ತೆಗೆದುಕೊಂಡಿರುವ ಹಾಗೆ ಕಾಣುತ್ತದೆ. ಪ್ರತಿಯೊಂದು ಮನೆಯಲ್ಲಿ ಕಹಿಬೇವಿನ ಎಲೆಗಳನ್ನು ಹಾಗೂ ಕಟ್ಟಿಗೆಯನ್ನು ಬಳಸಿಕೊಂಡು ಹವನಗಳನ್ನು ಹೇಗೆ ನಡೆಸಬೇಕೆಂಬ ಬಗ್ಗೆ ಕಪ್ಪುಟೋಪಿಗಳನ್ನು ಹಾಗೂ ಖಾಕಿ ಚಡ್ಡಿಗಳನ್ನು ಧರಿಸಿದ ಸ್ವಯಂಸೇವಕರು ವಿವರಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದು ವ್ಯಾಪಕವಾಗಿ ಪ್ರಸಾರವಾಗುತ್ತಿದೆ.( https://www.twitter.com/free thinker/status/1393931281591726081?s=11). ಮಹಾತ್ಮಾ ಗಾಂಧೀಜಿಯವರ ಹಂತಕನು ನಿಜವಾದ ದೇಶಭಕ್ತನೆಂದು ಭಾವಿಸುವ ಭೋಪಾಲದ ವಿವಾದಿತ ಸಂಸದೆಯು ಮಾಡಿರುವಂತಹ ಇನ್ನೊಂದು ಧರ್ಮಾಂಧತೆಯ ಪ್ರತಿಪಾದನೆಯಲ್ಲಿ, ತಾನು ಪ್ರತಿದಿನವೂ ಗೋಮೂತ್ರವನ್ನು ಸೇವಿಸುತ್ತಿರುವುದರಿಂದ ತನಗೆ ಕೋವಿಡ್ ಸೋಂಕು ತಗಲಿಲ್ಲವೆಂದು ಹೇಳಿದ್ದರು.(https://scroll.in/video/995083/i-drink-cow-urine-every-day-that-is-why-i...). ಬಿಜೆಪಿ ದೀರ್ಘ ಸಮಯದಿಂದ ಆಡಳಿತ ನಡೆಸುತ್ತಿರುವ ಇನ್ನೊಂದು ರಾಜ್ಯವಾದ ಗುಜರಾತ್‌ನಲ್ಲಿ ಸಾಧುಗಳ ಗುಂಪೊಂದು ನಿಯಮಿತವಾಗಿ ತಮ್ಮ ದೇಹದ ಮೇಲೆ ದನದ ಸೆಗಣಿಯನ್ನು ಮೆತ್ತಿಕೊಳ್ಳುತ್ತಿದ್ದಾರೆ. ಕೊರೋನ ವೈರಸ್ ಸೋಂಕು ತಗಲುವುದನ್ನು ಇದು ತಡೆಯುತ್ತದೆ ಎಂದು ಅವರು ಭಾವಿಸಿದ್ದಾರೆ. (https://www.abc.net.au/news/2021-05-16/india-covid-19-cow-dung-fake-reme...).

‘ಸರಕಾರಿ ಸಂತ’ ಬಾಬಾ ರಾಮ್‌ದೇವ್ ಕಳೆದ ವರ್ಷ ಕೇಂದ್ರದ ಇಬ್ಬರು ಹಿರಿಯ ಸಚಿವರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಿದ ಕೊರೋನಿಲ್ ಔಷಧಿಯನ್ನು ಆಡಳಿತಾರೂಢ ಪಕ್ಷದ ನಾಯಕರು ಶಿಫಾರಸು ಮಾಡಿದ್ದರು. ಅವರಲ್ಲೊಬ್ಬರು ಪ್ರಸಕ್ತ ಆರೋಗ್ಯ ಸಚಿವರಾಗಿ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಮ್‌ದೇವ್ ಅವರು ಕೊರೋನಿಲ್ ಔಷಧಿಯ ಪ್ರಚಾರವನ್ನು ಮೊದಲ ಬಾರಿ ಕೈಗೊಂಡಾಗ, ಇದು ಕೊರೋನವನ್ನು 7 ದಿನಗಳೊಳಗೆ ಗುಣಪಡಿಸುವ ಔಷಧಿಯಾಗಿದ್ದು, ಶೇ.100ರಷ್ಟು ಖಾತರಿಯುಳ್ಳದ್ದಾಗಿದೆ ಎಂದು ಸುಳ್ಳು ಪ್ರತಿಪಾದನೆ ಮಾಡಿದ್ದರು. ಈ ಪವಾಡಕರ ಔಷಧಿಗೆ ಅದಕ್ಕೆ ಅಗತ್ಯವಿರುವ ವೈಜ್ಞಾನಿಕ ಅಂಗೀಕಾರವೂ ದೊರೆತಿದೆ ಎಂದು ಪತಂಜಲಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಅನುರಾಗ್ ವಾರ್ಶ್ನೆ ತಿಳಿಸಿದ್ದಾರೆ. ‘‘ಔಷಧಿಯನ್ನು ಸೇವಿಸಿದವರಿಗೆ ಕೋವಿಡ್ ಪಾಸಿಟಿವ್ ಇದ್ದುದು ಏಳು ದಿನಗಳೊಳಗೆ ನೆಗೆಟಿವ್ ಆಗಿ ಬದಲಾಗುತ್ತದೆ. ಹೀಗೆ ಅದು ಅತ್ಯುತ್ತಮ ಪರಿಣಾಮಕಾರಿತ್ವವನ್ನು ಹೊಂದಿದೆ (https://www.ndtv.com/india.news/ramdev-claims-patnjalis-coronil-for-covi...).

ಈ ವಿಷಯವಾಗಿ ಇನ್ನಷ್ಟು ಮುಂದುವರಿಯುವ ಮುನ್ನ, ನಾನು ಖುದ್ದಾಗಿ ವೈದ್ಯಕೀಯ ಬಹುತ್ವವಾದದಲ್ಲಿ ನಂಬಿಕೆಯಿರಿಸಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಬಯಸುತ್ತೇನೆ. ಆಧುನಿಕ ಪಾಶ್ಚಾತ್ಯ ಔಷಧಿಯ ಪದ್ಧತಿಯಲ್ಲಿ ಮನುಕುಲಕ್ಕೆ ತಿಳಿದಿರುವ ಎಲ್ಲಾ ಆರೋಗ್ಯ ಸಮಸ್ಯೆ ಹಾಗೂ ಖಾಯಿಲೆಗಳಿಗೆ ಔಷಧಿಯಿದೆ. ಆಯುರ್ವೇದ, ಯೋಗ ಮತ್ತು ಹೋಮಿಯೋಪತಿಯಂತಹ ಅಧುನಿಕವಲ್ಲದ ಪದ್ಧತಿಗಳು, ದೀರ್ಘಕಾಲದ ಅಸ್ತಮಾ, ಬೆನ್ನುನೋವು ಹಾಗೂ ಕಾಲಕಾಲಕ್ಕೆ ಉಂಟಾಗುವ ಅಲರ್ಜಿಯಂತಹ ಸಮಸ್ಯೆಗಳಿಗೆ ಉಪಶಮನ ನೀಡುವ ಪಾತ್ರವನ್ನು ವಹಿಸಬಹುದೆಂಬುದನ್ನು ನಾನು ವೈಯಕ್ತಿಕ ಅನುಭವದಿಂದ ಅರಿತುಕೊಂಡಿದ್ದೇನೆ.

ಆದಾಗ್ಯೂ ಕೋವಿಡ್-19 ನಿರ್ದಿಷ್ಟವಾಗಿ 21ನೇ ಶತಮಾನದ ವೈರಸ್ ಆಗಿದ್ದು, ಆಯುರ್ವೇದ, ಯೋಗ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ಔಷಧಿಗಳನ್ನು ಸಂಶೋಧಿಸಿದ ಹಾಗೂ ಅಭಿವೃದ್ಧಿಪಡಿಸಿದವರಿಗೆ ಅದರ ಬಗ್ಗೆ ತಿಳಿದಿರಲಿಲ್ಲ. ಇದರ ಜೊತೆಗೆ ಕೊರೋನ ವೈರಸ್ ಕೇವಲ ಒಂದು ವರ್ಷಕ್ಕಿಂತ ಸ್ವಲ್ಪ ಅಧಿಕ ಸಮಯದಷ್ಟು ಹಳೆಯದು. ಬೇವಿನ ಎಲೆಗಳನ್ನು ಸುಡುವುದರಿಂದ ಅಥವಾ ಗೋಮೂತ್ರವನ್ನು ಕುಡಿಯುವುದರಿಂದ ಅಥವಾ ಗಿಡಮೂಲಿಕೆಗಳಿಂದ ತಯಾರಿಸಲಾದ ಮಾತ್ರೆಗಳನ್ನು ನುಂಗುವುದರಿಂದ ಅಥವಾ ದನದ ಸೆಗಣಿಯನ್ನು ದೇಹದ ಮೇಲೆ ಸವರುವುದರಿಂದ ಅಥವಾ ಮೂಗಿನ ಹೊಳ್ಳೆಯೊಳಗೆ ತೆಂಗಿನೆಣ್ಣೆ ಅಥವಾ ತುಪ್ಪವನ್ನು ಸುರಿಯುವುದರಿಂದ, ರೋಗವನ್ನು ದೂರವಿಡಲು ಅಥವಾ ಕೋವಿಡ್-19 ಸೋಂಕಿತ ತ್ವರಿತವಾಗಿ ಚೇತರಿಸಿಕೊಳ್ಳುವಂತೆ ಮಾಡಲು ಯಾವುದೇ ರೀತಿಯಿಂದಲೂ ಪರಿಣಾಮಕಾರಿಯಾಗಲಾರದು.

ಇನ್ನೊಂದೆಡೆ, ಕೋವಿಡ್-19 ಸೋಂಕನ್ನು ದೂರವಿಡಲು ನೆರವಾಗಲು ಎರಡು ಪ್ರತಿಬಂಧಾತ್ಮಕ ಕ್ರಮಗಳು ನೆರವಾಗಬಲ್ಲವು ಎಂಬುದನ್ನು ತೋರಿಸುವಂತಹ ಸಾಕಷ್ಟು ಪುರಾವೆಗಳು ನಮ್ಮ ಬಳಿ ಇವೆ. ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದು ಹಾಗೂ ಲಸಿಕೆಯನ್ನು ಹಾಕಿಕೊಳ್ಳುವುದು ಆ ಎರಡು ಕ್ರಮಗಳಾಗಿವೆ. ನಮ್ಮ ಹಿಂದೂ ಸರಕಾರವು ಬೃಹತ್ ರಾಜಕೀಯ ಹಾಗೂ ಧಾರ್ಮಿಕ ಸಮಾವೇಶಗಳಿಗೆ ಅವಕಾಶ ಹಾಗೂ ಉತ್ತೇಜನ ನೀಡುವ ಮೂಲಕ ನಿಜಕ್ಕೂ ಈ ಎರಡೂ ಅಂಶಗಳಲ್ಲಿ ನಾವು ವಿಫಲರಾಗುವಂತೆ ಮಾಡಿದೆ. ಸ್ವದೇಶೀಯವಾಗಿ ಲಸಿಕೆ ಉತ್ಪಾದನೆಗೆ ಉತ್ತೇಜನ ಹೆಚ್ಚಿಸುವುದು ಅಥವಾ ಭಾರತದಲ್ಲಿ ಲಸಿಕೆಗಳ ಬಳಕೆಗಾಗಿ ನೂತನ ಲಸಿಕೆಗಳಿಗೆ ಪರವಾನಿಗೆ ನೀಡುವಲ್ಲಿಯೂ ಸರಕಾರ ಕ್ರಿಯಾತ್ಮಕವಾಗಿ ವರ್ತಿಸುತ್ತಿಲ್ಲ.

ನಾನು ವಿಜ್ಞಾನಿಗಳ ಕುಟುಂಬದಿಂದ ಬಂದವನಾಗಿದ್ದೇನೆ. ವಿಜ್ಞಾನಿಗಳಾದ ನನ್ನ ತಂದೆ ಹಾಗೂ ತಾತನವರು ಕಂದಾಚಾರ ಹಾಗೂ ಮೂಢನಂಬಿಕೆ ಎಂಬ ಎರಡು ಪದಗಳನ್ನು ಮಾತ್ರ ನಿಂದನೆಗೆ ಬಳಸುತ್ತಿದ್ದುದನ್ನು ನಾನು ಕೇಳಿದ್ದೆ. ನನ್ನ ತಂದೆ ಹಾಗೂ ತಾತ ಈಗ ಮೃತಪಟ್ಟಿದ್ದಾರೆ. ಆದರೆ ಕೋವಿಡ್-19 ವಿರುದ್ಧ ಹೋರಾಟದಲ್ಲಿ ಆಡಳಿತಾರೂಢ ಪಕ್ಷದ ರಾಜಕಾರಣಿಗಳು ಉತ್ತೇಜಿಸುತ್ತಿರುವ ಇಂತಹ ನಕಲಿ, ಠಕ್ಕುತನ, ಮೂಢನಂಬಿಕೆ ಮತ್ತು ಕಂದಾಚಾರಗಳ ಬಗ್ಗೆ ನನಗೆ ತಿಳಿದಿರುವಂತಹ ಭಾರತದ ಹೆಸರಾಂತ ವಿಜ್ಞಾನಿಗಳು ಏನೆಂದು ಯೋಚಿಸುತ್ತಿರಬಹುದೆಂದು ನಾನು ಅಚ್ಚರಿಪಡುತ್ತಿದ್ದೇನೆ. ಇಂತಹ ಮೂಢನಂಬಿಕೆ ಹಾಗೂ ಕಂದಾಚಾರಗಳ ಪ್ರತಿಪಾದನೆಗಳು ಕೇಂದ್ರದ ಓರ್ವ ಸಚಿವ ಅಥವಾ ರಾಜ್ಯ ಮಟ್ಟದ ರಾಜಕಾರಣಿಗಷ್ಟೇ ಸೀಮಿತವಾಗಿಲ್ಲ. ಸಂಘಪರಿವಾರದ ಸದಸ್ಯರು ಅದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಸಂಘದ ಪರಮೋನ್ನತ ನಾಯಕ, ಸ್ವತಃ ಪ್ರಧಾನಿ ಕೂಡಾ ಅವರ ಸಾಲಲ್ಲಿ ಸೇರಿದ್ದಾರೆ. ಕಳೆದ ಮಾರ್ಚ್ ನಲ್ಲಿ ಪ್ರಧಾನಿಯವರು ಏನು ಮಾಡಿದ್ದರು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಿ. ಕೊರೋನ ಸೋಂಕು ಮೊದಲ ಬಾರಿಗೆ ಕಾಣಿಸಿಕೊಂಡಾಗ ಪ್ರಧಾನಿ ಅವರು ನಿಖರವಾಗಿ ಸಂಜೆ ಐದುಗಂಟೆಯ ವೇಳೆಗೆ ಐದು ನಿಮಿಷಗಳ ಕಾಲ ಪಾತ್ರೆ, ತಟ್ಟೆಗಳನ್ನು ಬಡಿದು ಸದ್ದು ಮೊಳಗಿಸುವಂತೆ ನಮ್ಮನ್ನು ಕೇಳಿಕೊಂಡಿದ್ದರು. ಮಾರನೇ ತಿಂಗಳು ಪರಿಸ್ಥಿತಿ ಗಂಭೀರವಾಗಿರುವುದು ಇನ್ನಷ್ಟು ಸ್ಪಷ್ಟವಾದಾಗ ಅವರು ಮೊಂಬತ್ತಿಗಳನ್ನು ಹಾಗೂ ದೀಪಗಳನ್ನು ನಿಖರವಾಗಿ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಹೊತ್ತಿಸುವಂತೆ ಮನವಿ ಮಾಡಿದ್ದರು. ಆಗತಾನೇ ಉತ್ತರ ಅಮೆರಿಕ ಹಾಗೂ ಯುರೋಪ್‌ನಲ್ಲಿ ಹರಡುತ್ತಿದ್ದ ವೈರಸ್ ಅನ್ನು ತಡೆಯಲು ಇದು ಹೇಗೆ ನೆರವಾಗಬಹುದಿತ್ತು ಎಂಬುದನ್ನು ಬಹುಶಃ ಪ್ರಧಾನಿಯವರ ಜ್ಯೋತಿಷಿ ಹಾಗೂ ಸಂಖ್ಯಾಶಾಸ್ತ್ರತಜ್ಞರಿಗೆ ಮಾತ್ರವೇ ತಿಳಿದಿರಬಹುದು.

ಸಂಘಪರಿವಾರಕ್ಕೆ ನಂಬಿಕೆ ಹಾಗೂ ಧರ್ಮಾಂಧತೆಯು ತರ್ಕ ಹಾಗೂ ವಿಜ್ಞಾನಕ್ಕಿಂತಲೂ ಹೆಚ್ಚಿನದಾಗಿದೆ. ನಡವಳಿಕೆಯಲ್ಲಿ ಪ್ರದರ್ಶಿಸುವಂತೆ ನರೇಂದ್ರ ಮೋದಿಯವರು ಕೇವಲ ತಾನು ಬೆಳೆಸಲ್ಪಟ್ಟ ಸೈದ್ಧಾಂತಿಕತೆಯ ಸಂಕುಚಿತ ಮನೋಭಾವವನ್ನು ಪ್ರತಿಬಿಂಬಿಸುತ್ತಾರಷ್ಟೇ. ಪ್ರಧಾನಿ ಅಭ್ಯರ್ಥಿಯಾಗಿ ತನ್ನ ಚೊಚ್ಚಲಪ್ರಚಾರದಲ್ಲಿ ಮೋದಿಯವರು, ಯೋಗಗುರು ರಾಮ್‌ದೇವ್ ಅವರಲ್ಲಿ ‘ಬೆಂಕಿ’ ಹುದುಗಿದೆ ಹಾಗೂ ದೃಢಸಂಕಲ್ಪವಿದೆಯೆಂದು ಸಿಕ್ಕಾಬಟ್ಟೆ ಹೊಗಳಿದ್ದರು. ರಾಮ್‌ದೇವ್ ಅವರ ಕಾರ್ಯಸೂಚಿಗೆ ತಾನು ಹತ್ತಿರವಾಗಿರುವಂತಹ ಭಾವನೆ ನನಗೆ ಉಂಟಾಗುತ್ತಿದೆ ಎಂದಿದ್ದರು. (https://indianexpress.com/article/india/politics/saffron-in-the-atmosphe...).  ಹೀಗೆ ರಾಮ್‌ದೇವ್ ಅವರು ಸರಕಾರದ ಪರಮಾಪ್ತ ಸಂತನಾಗಿ ಮೂಡಿಬಂದಿರುವುದು ಆಕಸ್ಮಿಕವೇನೂ ಅಲ್ಲ. ಶಿಕ್ಷಣ, ಆರೋಗ್ಯ, ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಂತಹ ಪ್ರಮುಖ ಸಚಿವ ಸ್ಥಾನಗಳಿಗೆ ಆರೆಸ್ಸೆಸ್ ತನ್ನ ಕಟ್ಟಾಳುಗಳನ್ನು ನೇಮಿಸುತ್ತಿದೆ.

 ಹಿಂದುತ್ವದ ಅತಾರ್ಕಿಕವಾದ ವೈಭಯುತ ಪ್ರದರ್ಶನಕ್ಕೆ ಈ ಸಲದ ಕುಂಭಮೇಳ ಒಂದು ಉದಾಹರಣೆಯಾಗಿದೆ. ಮುಂದಿನ ವರ್ಷ ನಡೆಯಬೇಕಿದ್ದ ಕುಂಭಮೇಳವನ್ನು ಜ್ಯೋತಿಷಿಗಳ ಆಗ್ರಹದ ಮೇರೆಗೆ ಈ ವರ್ಷ ನಡೆಸಲಾಯಿತು. ಕೊರೋನ ಸಾಂಕ್ರಾಮಿಕದ ಆರ್ಭಟದ ನಡುವೆಯೇ ಕುಂಭಮೇಳವನ್ನು ಭರ್ಜರಿಯಾಗಿ ಆಚರಿಸಲಾಯಿತು. ಯಾಕೆಂದರೆ ಈ ಉತ್ಸವದ ಮೂಲಕ ಆರೆಸ್ಸೆಸ್ ಹಾಗೂ ಬಿಜೆಪಿ ರಾಜಕೀಯ ಬಂಡವಾಳ ಪಡೆಯಲು ಬಯಸಿದ್ದವು. ಉತ್ತರಭಾರತದ ಗ್ರಾಮಾಂತರ ಪ್ರದೇಶಗಳಿಗೆ ವೈರಸ್ ಹರಡುವುದನ್ನು ಅರಿತರೆ, ಕೇಂದ್ರ ಸರಕಾರ ಹಾಗೂ ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ಕುಂಭಮೇಳಕ್ಕೆ ನೀಡಿರುವ ಅಗಾಧ ಬೆಂಬಲಕ್ಕೂ, ಇನ್ನೊಂದೆಡೆ ಗಂಗಾನದಿಯ ದಡದಲ್ಲಿ ಲೆಕ್ಕವಿಲ್ಲದಷ್ಟು ಮೃತದೇಹಗಳು ಹೊತ್ತಿ ಉರಿಯುತ್ತಿರುವುದಕ್ಕೂ, ಇಲ್ಲವೇ ನದಿನೀರಿನಲ್ಲಿ ತೇಲುತ್ತಿರುವುದಕ್ಕೂ ಅಥವಾ ಮರಳಿನಲ್ಲಿ ಹೂತುಹಾಕಿರುವುದಕ್ಕೂ ನಂಟಿರುವುದನ್ನು ಪತ್ತೆಹಚ್ಚಬಹುದಾಗಿದೆ. ಪ್ರಧಾನಿಯವರಿಂದ ಹಿಡಿದು (ಆರೆಸ್ಸೆಸ್‌ನ ಸರಸಂಘಚಾಲಕರು ಸೇರಿದಂತೆ) ಹಲವಾರು ಪ್ರಭಾವಿ ಹಾಗೂ ಬಲಾಢ್ಯರಿಗೆ ಈ ದುರಂತವನ್ನು ತಪ್ಪಿಸಲು ಸಾಧ್ಯವಿತ್ತು. ಆದರೆ ಹಾಗೆ ಮಾಡಲಿಲ್ಲ. ಯಾಕೆಂದರೆ ಅವರಿಗೆ ನಂಬಿಕೆ ಹಾಗೂ ಧರ್ಮಾಂಧತೆಯು, ತಾರ್ಕಿಕತೆ ಹಾಗೂ ವಿಜ್ಞಾನಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದುದಾಗಿದೆ.

2019ರ ಎಪ್ರಿಲ್‌ನಲ್ಲಿ, ನಾನು ವಿಜ್ಞಾನದ ಬಗ್ಗೆ ಮೋದಿ ಸರಕಾರಕ್ಕಿರುವ ಅಸಡ್ಡೆ ಮತ್ತು ದೇಶದ ಅತ್ಯುತ್ತಮ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳನ್ನು ರಾಜಕೀಯಗೊಳಿಸಲು ಅದು ಹೇಗೆ ಬಯಸುತ್ತಿದೆಯೆಂಬುದಾಗಿ ಲೇಖನವೊಂದನ್ನು ಬರೆದಿದ್ದೆ. ‘‘ಮೋದಿ ಸರಕಾರವು ದೇಶದ ಸಾಮಾಜಿಕ ಹಾಗೂ ಆರ್ಥಿಕ ಭವಿಷ್ಯವನ್ನು ತೀವ್ರವಾಗಿ ಕಡೆಗಣಿಸಿದೆ. ಬೌದ್ಧಿಕತೆಯ ಮೇಲಿನ ಈ ಘೋರ, ನಿರಂತರ ಸಮರದ ಬೆಲೆಯನ್ನು ಈಗ ಬದುಕಿರುವ ಹಾಗೂ ಇನ್ನೂ ಜನಿಸದೆ ಇರುವ ಭಾರತೀಯರು ತೆರಬೇಕಾಗಿ ಬರಲಿದೆ.’’
(https://www.telegraphindia.com/opinion/surgical-strike-against science-and-scholarship/cid/1689471).

ಆ ಸಮಯದಲ್ಲಿ, ಕೋವಿಡ್-19 ಜಗತ್ತಿನಲ್ಲಿ ತಲೆಯೆತ್ತಲು ಇನ್ನೂ ಹಲವಾರು ತಿಂಗಳುಗಳು ಉಳಿದಿದ್ದವು. ಆದರೆ ಈಗ ಅದು ಇಲ್ಲಿದೆ ಮತ್ತು ಮೋದಿ ಸರಕಾರವು ಬೌದ್ಧಿಕತೆಯ ವಿರುದ್ಧ ತನ್ನ ಘೋರ, ನಿರಂತರ ಸಮರವನ್ನು ಮುಂದುವರಿಸಿದೆ. ನಾನು ಚಿತ್ರಿಸಿದ ವಿಷಾದಭರಿತ ಭವಿಷ್ಯವು ಇನ್ನಷ್ಟು ವಿಷಾದಕರವಾಗಿದೆ. ಈ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಭಾರತ ಹಾಗೂ ಭಾರತೀಯರು ಸಂಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರಕಾರ ಹಾಗೂ ಆಡಳಿತರೂಢ ಪಕ್ಷವು ತಾರ್ಕಿಕತೆ ಹಾಗೂ ವಿಜ್ಞಾನದ ಬಗ್ಗೆ ಪ್ರದರ್ಶಿಸುತ್ತಿರುವ ಅನಾದರದಿಂದಾಗಿ ಪರಿಸ್ಥಿತಿಯು ಇನ್ನೂ ಹೆಚ್ಚು ಕಠಿಣ ಹಾಗೂ ಮಾರಣಾಂತಿಕವಾಗಿ ಬಿಟ್ಟಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top