--

ಅಗತ್ಯವಿದೆ: ಕಾಲೋಚಿತ ಲೋಕನ್ಯಾಯ

ನಮ್ಮಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟವುಂಟುಮಾಡಿದರೆ ಹೇಗೆ ದಂಡವಿಧಿಸಲಾಗುವುದೋ ಅದೇ ರೀತಿ ಯಾರೊಬ್ಬನ ವೈಯಕ್ತಿಕ ಗೌರವವನ್ನು, ಸ್ವಾತಂತ್ರ್ಯವನ್ನು ಹತ್ತಿಕ್ಕಿದವರಿಗೆ ದಂಡವಿಧಿಸುವ ಮತ್ತು ಪರಿತಪ್ತರಿಗೆ ಪರಿಹಾರ ನೀಡುವ ಕಾನೂನಿಲ್ಲ. ಅವರವರೇ ನ್ಯಾಯಾಲಯದ ಬಾಗಿಲನ್ನು ತಟ್ಟಿ, ವರ್ಷಾನುಗಟ್ಟಲೆ ಅಲೆದು, ಸಾಕಷ್ಟು ಹಣ ಮತ್ತು ಸಮಯ, ಶಕ್ತಿಯನ್ನು ವ್ಯಯಿಸಿದ ಆನಂತರ ನ್ಯಾಯಾಲಯವು ಕೊಡುವ ಬಿಡಿಗಾಸು ಬೇಡವೆನಿಸುವ ವೈರಾಗ್ಯ ಹುಟ್ಟಿದರೆ ಅಚ್ಚರಿಯಿಲ್ಲ.


ಕೇಂದ್ರ ಸರಕಾರದ ಸಿಎಎ ಶಾಸನದ ವಿರುದ್ಧ ಹೋರಾಡುತ್ತಿದ್ದ ಮತ್ತು ಜನಾಭಿಪ್ರಾಯವನ್ನು ರೂಪಿಸುತ್ತಿದ್ದ ಅಖಿಲ್ ಗೊಗೊಯಿ ಎಂಬ ಅಸ್ಸಾಮಿನ ಜನಪ್ರಿಯ ಸಾಮಾಜಿಕ ಹೋರಾಟಗಾರನ ಮತ್ತು ಆತನ ಬೆಂಬಲಿಗರ ವಿರುದ್ಧ ರಾಷ್ಟ್ರೀಯ ತನಿಖಾ ದಳವು ಅಂದರೆ ಕೇಂದ್ರ ಸರಕಾರವು ಡಿಸೆಂಬರ್ 2019ರಲ್ಲಿ ತನ್ನ ರಾಮಬಾಣವಾದ ‘ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ’ಯಡಿ ಹಲವಾರು ಸುಳ್ಳು ಮೊಕದ್ದಮೆಗಳನ್ನು ಹೂಡಿತು. ಇವುಗಳಲ್ಲಿ ಭಯೋತ್ಪಾದನೆಯ ಆರೋಪವು ತೀರ ಗಂಭೀರವಾದದ್ದರಿಂದ ಗೊಗೊಯಿಗೆ ಜಾಮೀನು ಸಿಗಲಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಬಂಧನದಲ್ಲಿದ್ದು ಸಾಕಷ್ಟು ನೋವು ಮತ್ತು ಹಿಂಸೆಯನ್ನು ಅನುಭವಿಸಿದ್ದ ಇವರು ಗುವಾಹಟಿ ಕೇಂದ್ರ ಕಾರಾಗೃಹದಿಂದಲೇ ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿವಸಾಗರ್ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾದರು. ಇವರ ವಿರುದ್ಧವಿದ್ದ ಪ್ರಕರಣಗಳನ್ನು ವಿಚಾರಿಸುತ್ತಿದ್ದ ವಿಶೇಷ ನ್ಯಾಯಾಲಯವು ‘ಕೊನೆಗೂ’ ಕಳೆದ ವಾರ ಈ ಆರೋಪಗಳಲ್ಲಿ ಹುರುಳಿಲ್ಲವೆಂದು ತೀರ್ಪಿತ್ತು ಬಿಡುಗಡೆಗೆ ಆದೇಶವನ್ನು ನೀಡಿತು. ಈ ಆದೇಶದ ಹೊತ್ತಿನಲ್ಲಿ ಈತ ದೈಹಿಕವಾಗಿ ಮತ್ತು ಮಾನಸಿಕವಾಗಿ ರೋಗಗ್ರಸ್ತನಾಗಿ ಗುವಾಹಟಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಜಮ್ಮು ಮತ್ತು ಕಾಶ್ಮೀರದ ಭಾರತೀಯ ಪ್ರಜೆಯೊಬ್ಬ ಗುಜರಾತಿನಲ್ಲಿ ಇದೇ ಬಗೆಯ ಆಪಾದನೆಯಲ್ಲಿ ಕಳೆದ 11 ವರ್ಷಗಳಿಂದ ಬಂಧನದಲ್ಲಿದ್ದು ಕಳೆದ ವಾರ ತನ್ನ ಮೇಲಿನ ಆರೋಪಗಳು ನಿರಾಧಾರವೆಂಬ ನ್ಯಾಯಾಲಯದ ನಿರ್ಣಯದಿಂದಾಗಿ ‘ಕೊನೆಗೂ’ ಬಿಡುಗಡೆಹೊಂದಿ ಮರಳಿದ. ಈ ಇಬ್ಬರೂ ಮತ್ತು (ಇಂತಹ ಇತರ ಅನೇಕರು) ಬಿಡುಗಡೆಯಾದ ತಕ್ಷಣ ‘ಕೊನೆಗೂ ಸತ್ಯ ಗೆದ್ದಿದೆ’ ಎಂಬ ಅಥವಾ ಅಂತಹ ಅರ್ಥ ಬರುವ ಮಾತನಾಡಿದ್ದಾರೆ. ಇದು ಸಜ್ಜನಿಕೆಯ ಪ್ರತಿಕ್ರಿಯೆಯೋ ಅಥವಾ ಹತಾಶ ಮನಸ್ಥಿತಿಯ ಪ್ರತೀಕವೋ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು.

ನ್ಯಾಯಾಲಯಗಳು ನೀಡುವ ನ್ಯಾಯದಾನದ ವಿಳಂಬದ ಕುರಿತೂ ನಾವು ಮಾತನಾಡುತ್ತೇವೆ. ಆದರೆ ದೇಶ, ಸಮಾಜ, ವ್ಯವಸ್ಥೆ ಎಲ್ಲವೂ ವಿಳಂಬ ಗತಿಯಲ್ಲೇ ಮತ್ತು ರಾಜಕೀಯವಾಗಿಯೇ ಚಲಿಸುತ್ತಿರುವಾಗ, ನ್ಯಾಯಾಂಗವು ಹೇಗೆ ಬೇರೆಯಾಗಿರಲು ಸಾಧ್ಯ? ವಿಳಂಬವಾದರೂ ಬಿಡುಗಡೆಯಾದರಲ್ಲ ಎಂಬ ಸಂತೋಷವನ್ನು, ಸಮಾಧಾನವನ್ನು ವ್ಯಕ್ತಪಡಿಸುವುದು ಸಹಜವಾಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಸರಕಾರಿ ಅಭಿಯೋಜಕ ಸಂಸ್ಥೆಗಳು ರಾಜಕೀಯ ಸೇಡಿನ ಕ್ರಮವಾಗಿ ಸಾಮಾಜಿಕ, ರಾಜಕೀಯ, ಸಾರ್ವಜನಿಕ ಹೋರಾಟಗಾರರ ಮನೆಯ ಮತ್ತು ವ್ಯವಹಾರದ ಮೇಲೆ ದಾಳಿ ನಡೆಸುವುದು, ಆತನನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಬಂಧನದ ಭೀತಿಗೆ ಗುರಿಪಡಿಸುವುದು ಮುಂತಾದ ಕಾರ್ಯಗಳನ್ನು ನಡೆಸುತ್ತವೆ. ಇಂತಹ ಎಲ್ಲ ಪ್ರಸಂಗ, ಪ್ರಕರಣಗಳಲ್ಲಿ ಅಭಿಯೋಜನೆಯ ಸರಕಾರಿ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದ ವರೆಗೆ ಇದನ್ನು ಪ್ರಶ್ನಿಸುವುದನ್ನು ಕಾಣಬಹುದು.

ಯಾವುದೇ ನಿರ್ಣಯದ ವಿರುದ್ಧ, ಅದು ಮೇಲ್ಮನವಿಗೆ ಅರ್ಹವಾಗಿದ್ದಲ್ಲಿ ಅದನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದಲ್ಲಿ ಸಾಂವಿಧಾನಿಕ ಹಕ್ಕು. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಇದು ರಾಜಕೀಯವಾದಾಗ, ಅಂದರೆ ಅಧಿಕಾರದಲ್ಲಿರುವ ಪಕ್ಷದ ಸಿದ್ಧಾಂತರಹಿತ ಸೇಡಿನ ಮನೋಭಾವವಾದಾಗ ಅಂತಹ ಮೇಲ್ಮನವಿಗಳು ವಿಫಲವಾದರೆ ಮೇಲ್ಮನವಿಯ ನಿರ್ಧಾರವನ್ನು ಕೈಗೊಂಡ ಸಂಸ್ಥೆ ಇಲ್ಲವೇ ಪ್ರಾಧಿಕಾರ, ಅಧಿಕಾರಿ ಅದರ ಪರಿಣಾಮಗಳಿಗೆ ಅಂದರೆ ಅದರಿಂದ ಯಾರಿಗೇ ಆಗಲಿ ಸಂಭವಿಸಿದ ಕಷ್ಟನಷ್ಟಗಳಿಗೆ ಗುರಿಯಾಗಬೇಕು. ಏಕೆಂದರೆ ಈ ಸಂಸ್ಥೆ, ಪ್ರಾಧಿಕಾರ, ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಣಯಗಳ ವೆಚ್ಚವನ್ನು ಸರಕಾರದ ಬೊಕ್ಕಸ ಅಂದರೆ ಸಾರ್ವಜನಿಕರ ತೆರಿಗೆ ಹಣದಿಂದ ಮಾಡುತ್ತಾರಾದ್ದರಿಂದ ಅಂತಹ ನಿರ್ಣಯಗಳು ತಪ್ಪು ಅಥವಾ ದುರುದ್ದೇಶಪೂರಿತವಾದರೆ ಅದು ಅದರ ಗುರಿಯಾದ ವ್ಯಕ್ತಿಯನ್ನು ಹೊರತುಪಡಿಸಿಯೂ ಸಾರ್ವಜನಿಕ ಹಣದ ದುರುಪಯೋಗವಾಗುತ್ತದೆ. ನಮ್ಮಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟವುಂಟುಮಾಡಿದರೆ ಹೇಗೆ ದಂಡವಿಧಿಸಲಾಗುವುದೋ ಅದೇ ರೀತಿ ಯಾರೊಬ್ಬನ ವೈಯಕ್ತಿಕ ಗೌರವವನ್ನು, ಸ್ವಾತಂತ್ರ್ಯವನ್ನು ಹತ್ತಿಕ್ಕಿದವರಿಗೆ ದಂಡವಿಧಿಸುವ ಮತ್ತು ಪರಿತಪ್ತರಿಗೆ ಪರಿಹಾರ ನೀಡುವ ಕಾನೂನಿಲ್ಲ. ಅವರವರೇ ನ್ಯಾಯಾಲಯದ ಬಾಗಿಲನ್ನು ತಟ್ಟಿ, ವರ್ಷಾನುಗಟ್ಟಲೆ ಅಲೆದು, ಸಾಕಷ್ಟು ಹಣ ಮತ್ತು ಸಮಯ, ಶಕ್ತಿಯನ್ನು ವ್ಯಯಿಸಿದ ಆನಂತರ ನ್ಯಾಯಾಲಯವು ಕೊಡುವ ಬಿಡಿಗಾಸು ಬೇಡವೆನಿಸುವ ವೈರಾಗ್ಯ ಹುಟ್ಟಿದರೆ ಅಚ್ಚರಿಯಿಲ್ಲ. ಕೇರಳದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್‌ಗೆ ಆಗಿರುವ ಅನ್ಯಾಯಕ್ಕೆ ಅನೇಕ ವರ್ಷಗಳ ಆನಂತರ 50 ಲಕ್ಷ ರೂಪಾಯಿಗಳ ಪರಿಹಾರ ಸಿಕ್ಕಿತು. ಆದರೆ ಇವು ನೂರಕ್ಕೆ ಒಂದೂ ಇಲ್ಲದಷ್ಟು ಅಪರೂಪದ ಪ್ರಕರಣಗಳ ಇತಿಹಾಸ. ಇಂತಹ ಹಲವು ಪ್ರಕರಣಗಳಲ್ಲಿ ಆರೋಪಿತರು ಮತ್ತವರ ಕುಟುಂಬದವರು ಗೌರವ ಮಾತ್ರವಲ್ಲ, ಬದುಕಿನ ದಾರಿಯನ್ನೇ ಕಳೆದುಕೊಂಡಿರುತ್ತಾರೆ. ಕೆಲವರಿಗಾದರೂ ಬಿಡುಗಡೆಯ ಹೊತ್ತಿಗೆ ಸೆರೆಮನೆಯೇ ವಾಸಿಯೆಂದು ಅನ್ನಿಸುವ ಸಾಧ್ಯತೆಯೂ ಇದೆ!

 ಇದು ಈ ಸಮಸ್ಯೆಯ ಒಂದು ಮುಖವಾದರೆ ಇದರಿಂದ ಬಂಧಿತನ, ಆರೋಪಿಯ, ಬದುಕಿಗೆ ಬಳಿದ ಮಸಿಯನ್ನು ಅಳಿಸಿ ನಿರ್ಮಲವಾಗಿಸುವವರು ಯಾರು? ಮೇಲೆ ಹೇಳಿದ ಎರಡು ಪ್ರಸಂಗಗಳಲ್ಲಿ ಒಂದೂವರೆ ವರ್ಷ ಮತ್ತು 11 ವರ್ಷಗಳ ಬದುಕುಗಳ ನಷ್ಟವನ್ನು ತುಂಬಿಕೊಡುವವರು ಯಾರು? ಇವು ಮಾತ್ರವಲ್ಲ, ದಿಲ್ಲಿಯ ಪೊಲೀಸರು ಬೆಂಗಳೂರಿನ ವ್ಯಕ್ತಿಗೆ ಹಾಜರಾಗಬೇಕೆಂದು ನೋಟಿಸು ನೀಡಿದರೆ ಮತ್ತು ಆತ ಅಲ್ಲಿಗೆ ಹೋದ ಬಳಿಕ ಪ್ರಶ್ನಿಸಿ ಕಳಿಸಿದರೆ ಈ ಹೋಗಿ ಬಂದ ಪ್ರಯಾಣದ ಸಮಯ ಮತ್ತು ವೆಚ್ಚವನ್ನು ಪಾವತಿಸುವವರು ಯಾರು? ಸರಕಾರ ಮತ್ತಿತರ ಸಂಸ್ಥೆಗಳ ನೌಕರರಿಗೆ, ಪ್ರಯಾಣ ಭತ್ತೆ ಸಿಗಬಹುದು; ಅವರು ಪ್ರಯಾಣಿಸುವುದೂ ಉದ್ಯೋಗದ ವೇಳೆಯೇ ಆದ್ದರಿಂದ ಅವರಿಗೆ ನಷ್ಟವಿಲ್ಲವೆನ್ನಬಹುದು. ಇತರರಿಗೆ? ನಮ್ಮ ದೇಶದಲ್ಲಿ ಇದಕ್ಕೆ ಸೂಕ್ತ ಪರಿಹಾರವಿಲ್ಲ. ನಮ್ಮ ಬಹುತೇಕ ನ್ಯಾಯಾಲಯಗಳು (ಅಧೀನ ವ್ಯಾಪ್ತಿಯಿಂದ ಸರ್ವೋಚ್ಚ ನ್ಯಾಯಾಲಯದ ವರೆಗೆ) ವ್ಯಕ್ತಿಸ್ವಾತಂತ್ರ್ಯವು ಮನುಷ್ಯನ ಮೂಲಭೂತ ಮತ್ತು ಸಾಂವಿಧಾನಿಕ ಹಕ್ಕೆಂದು ಬುಡುಬುಡಿಕೆ ಹೇಳಿದರೂ ಇಂತಹ ಬಿಡುಗಡೆಯ ಸಂದರ್ಭದಲ್ಲಿ ಆರೋಪಿತ ಬಲಿಪಶುವಿನ ಕಣ್ಣೊರೆಸುವಷ್ಟೂ ಪರಿಹಾರವನ್ನು ನೀಡಿದ್ದು ಅಪರೂಪ. ವಾಹನ ಅಪಘಾತಗಳಿಗೆ ಪರಿಹಾರವಿದೆ. ಏಕೆಂದರೆ ವಿಮೆಯಿದೆ, ಆದರೆ ಸರಕಾರ ನಡೆಸುವ ಅಪಘಾತಗಳಿಗೆ ಪರಿಹಾರವಿಲ್ಲ.

ಏಕೆಂದರೆ ಸರಕಾರ ವಿಮಾ ಸಂಸ್ಥೆಯಲ್ಲ. ನೇರ ತೆರಿಗೆ ಪಾವತಿದಾರರೊಂದಿಗೆ ಬಡತನದ ರೇಖೆಗಿಂತ ಕೆಳಗಿರುವವನೂ ನೀಡುವ ಪರೋಕ್ಷ ತೆರಿಗೆ ಇರುವುದು ಸರಕಾರದ ಮತ್ತದರ ಅಧಿಕಾರಶಾಹಿ ಪಾಲುದಾರರ ಮೇಜವಾನಿಗೆಂಬಂತಿದೆ ವ್ಯವಸ್ಥೆ! ಇದು ಭಾರತದ ಪ್ರಶ್ನೆ ಮಾತ್ರವಲ್ಲ ಅಥವಾ ಇಂದಿನ ಪ್ರಶ್ನೆಯಲ್ಲ. ಮಾನವ ಕುಲದ ಪ್ರಶ್ನೆ. ಕಾಲದುದ್ದಕ್ಕೂ ಎದ್ದಿರುವ ಪ್ರಶ್ನೆ. ಒಂದು ನಿದರ್ಶನವನ್ನು ಹೇಳುವುದಾದರೆ- 1792ರ ಫ್ರೆಂಚ್ ಮಹಾಕ್ರಾಂತಿ ಮುಗಿದು ರಾಜಸತ್ತೆಯ ಕ್ರೌರ್ಯ ಅಂತ್ಯ ಕಂಡ ಬಳಿಕ ಕ್ರಾಂತಿಕಾರಿಗಳ ಸರಕಾರವೂ ಅಷ್ಟೇ ಕ್ರೂರವಾಗಿ ತನ್ನ ಪ್ರಜೆಗಳನ್ನು ನಡೆಸಿಕೊಂಡಿತು. ಕ್ರಾಂತಿಕಾರಿಗಳ ಸರಕಾರದ ಅಲ್ಪಕಾಲದ ಆಳ್ವಿಕೆಯಲ್ಲಿ ರಸಾಯನಶಾಸ್ತ್ರದ ಜನಕನೆಂದೇ ಪ್ರಸಿದ್ಧನಾದ ಫ್ರೆಂಚ್ ವಿಜ್ಞಾನಿ ಲವಾಶಿಯೆಯನ್ನು ತಂಬಾಕು ವ್ಯವಹಾರದಲ್ಲಿ ಹಣ ದುರುಪಯೋಗವೆಸಗಿದನೆಂಬ ಆಪಾದನೆಯಡಿ 1793ರ ಕೊನೆಯಲ್ಲಿ ದಸ್ತಗಿರಿಮಾಡಲಾಯಿತು. ಬಳಿಕ ಕ್ಷಿಪ್ರವೆನ್ನುವುದಕ್ಕಿಂತಲೂ ಅವಸರದ, ಪೂರ್ವನಿರ್ಣಯದ, ಪೂರ್ವಾಗ್ರಹದ, ಎಂದು ಹೇಳಬೇಕಾದ ರೀತಿಯ ವಿಚಾರಣೆ ನಡೆಸಿ ಲವಾಶಿಯೆಗೆ ಮರಣದಂಡನೆಯ ಶಿಕ್ಷೆಯನ್ನು ಘೋಷಿಸಿದಾಗ ಆತನಲ್ಲಿ ಪೂರ್ಣವಾಗದ ಸುಮಾರು 70 ಸಂಶೋಧನೆಗಳಿದ್ದವಂತೆ. ಇವನ್ನು ಪೂರ್ಣಗೊಳಿಸುವುದಕ್ಕಾಗಿ ಆತನ ಪತ್ನಿ ನ್ಯಾಯಾಲಯದಲ್ಲಿ ಆತನಿಗೆ ಜೀವಭಿಕ್ಷೆಯನ್ನು ಕೇಳಿದಳು. ಆಗ ನ್ಯಾಯಾಧೀಶನಾಗಿದ್ದ ಕಾಫಿನಾಲ್ ಎಂಬಾತ ‘‘ಗಣತಂತ್ರಕ್ಕೆ ಪರಿಣತರಾಗಲೀ ರಸಾಯನಶಾಸ್ತ್ರಜ್ಞರಾಗಲೀ ಬೇಕಿಲ್ಲ; ನ್ಯಾಯದ ಹಾದಿಯನ್ನು ವಿಳಂಬಿಸಲಾಗದು’’ ಎಂಬ ಕಾರಣ ನೀಡಿ ಆಕೆಯ ಮನವಿಯನ್ನು ತಿರಸ್ಕರಿಸಿ ಲವಾಶಿಯೆಯ ಮರಣವನ್ನು ಖಚಿತಪಡಿಸಿದನು. ಆತನನ್ನು ಮರಣದಂಡನೆಗೆ ಗುರಿಪಡಿಸಿ 08/05/1794ರಂದು ‘ಗಿಲೊಟಿನ್’ ಮೂಲಕ ಶಿರಚ್ಛೇದನಗೊಳಿಸಲಾಯಿತು. ಅದಾದ ಒಂದೂವರೆ ವರ್ಷಗಳಲ್ಲಿ ಆನಂತರದ ಚುನಾಯಿತ ಸರಕಾರವು ಲವಾಶಿಯೆಯ ಪ್ರಕರಣವನ್ನು ಮರುಪರಿಶೀಲಿಸಿ ಆತನನ್ನು ನಿರ್ದೋಷಿಯೆಂದು ಕಂಡುಹಿಡಿದು ಆತನ ಪತ್ನಿಗೆ ಒಂದು ಕ್ಷಮಾಯಾಚನೆಯ ಪತ್ರವನ್ನು ನೀಡಿತು. ಅದರಲ್ಲಿ ‘ತಪ್ಪಾಗಿ ಶಿಕ್ಷೆಗೊಳಗಾದ ಲವಾಶಿಯೆಯ ಪತ್ನಿಗೆ’ ಎಂದು ದಾಖಲಿಸಿತು.

ಲಾಗ್ರಂಗ್ ಎಂಬಾತ ‘‘ಆತನ (ಲವಾಶಿಯೆಯ) ಶಿರಚ್ಛೇದಿಸಲು ಅವರಿಗೆ ಒಂದು ಕ್ಷಣ ಸಾಕಾಯಿತು, ಆದರೆ ಅಂತಹ ತಲೆಯನ್ನು ಮರಳಿ ಪಡೆಯಲು ನೂರು ವರ್ಷಗಳೂ ಸಾಕಾಗವು’’ ಎಂದು ಬರೆದಿದ್ದಾನೆ. ಪ್ಯಾರಿಸಿನ ಐಫೆಲ್ ಟವರ್‌ನಲ್ಲಿ 72 ಮಂದಿ ಮಹಾನುಭಾವರ ಹೆಸರುಗಳನ್ನು ಕೆತ್ತಲಾಗಿದೆಯಂತೆ. ಅವುಗಳಲ್ಲೊಂದು ಲವಾಶಿಯೆಯದ್ದು. (ವಿಧಿಯ ವ್ಯಂಗ್ಯವೋ ಕಾಕತಾಳೀಯವೋ, ಲವಾಶಿಯೆಗೆ ಮರಣದಂಡನೆಯನ್ನು ನೀಡಿದ ನ್ಯಾಯಾಧೀಶ ಕಾಫಿನಾಲ್ ತಾನು ಮಾಡಿದ ಅಕ್ರಮಗಳಿಗಾಗಿ ವಿಚಾರಣೆಗೊಳಗಾದ. ಆತನ ತಪ್ಪುಸಾಬೀತಾಗಿ 06/08/1794ರಂದು ಅದೇ ಗಿಲೊಟಿನ್ ಮೂಲಕವೇ ಮರಣದಂಡನೆಗೆ ಗುರಿಯಾದ. ಆದರೆ ಲವಾಶಿಯೆಯ ಸಾವಿನಿಂದಾದ ನಷ್ಟವನ್ನು ಈತನ ಸಾವು ತುಂಬಿಕೊಡಲಿಲ್ಲ.) ಫ್ರಾನ್ಸ್ ಲವಾಶಿಯೆಯ ಸಾವಿನ ಕುರಿತು ಆತನ ಪತ್ನಿಯಲ್ಲಿ ಕ್ಷಮೆಕೇಳಿದರೂ ಆತನ ಜೀವ ಮರಳಿ ಬರಲಿಲ್ಲ. ಆತ ಬಾಕಿಯಿಟ್ಟಿದ್ದ ಪ್ರಯೋಗಗಳ ಫಲಿತಾಂಶ ಸೃಷ್ಟಿಯ ಇನ್ನೆಷ್ಟು ರಹಸ್ಯಗಳನ್ನು ಅನಾವರಣಗೊಳಿಸುತ್ತಿತ್ತೋ ಏನೋ?

ಸಮಾಜ ಹೀಗೆ ಹೇಳುತ್ತ ಬಂದರೂ ಇಂತಹ ಘಟನೆಗಳು ಚರಿತ್ರೆಯಲ್ಲಿ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿವೆ. ಈ ರೀತಿ ಬಲಿಯಾದ ಮನುಷ್ಯರ ಬಂಧು-ಬಳಗ ಮತ್ತು ಸಂತತಿ ಪಟ್ಟ, ಪಡುವ, ಆಘಾತ, ವ್ಯಾಕುಲತೆ, ನೋವು, ನಷ್ಟವನ್ನು ಭರ್ತಿಮಾಡಲು, ಇವರ ಭವಿಷ್ಯದ ಕುರಿತು, ಸಮಾಜವು ಎಂದೂ ಗಂಭೀರವಾಗಿ ಚಿಂತಿಸಿದಂತೆ ಕಾಣುವುದಿಲ್ಲ. ಚರಿತ್ರೆಯನ್ನು ಗಮನಿಸಿ ಸಂಕಟಪಡುವ ಸಂವೇದನಾಶೀಲರು ನಮ್ಮ ಕಣ್ಣೆದುರಿಗೇ ಇಂತಹ ನಷ್ಟಗಳು ಸಂಭವಿಸಿದಾಗ ಪ್ರತಿಭಟಿಸುವುದು ಕಡಿಮೆ. ಇಂತಹ ಸಂದರ್ಭಗಳನ್ನು ಎದುರಿಸುವವರಲ್ಲೂ ವಿದ್ಯಾವಂತರು, ಸಂವೇದನಾಶೀಲರು ಎಂದು ಖ್ಯಾತರಾದವರು ಕಡಿಮೆ. ನಮ್ಮ ನಡುವಣ ಬಹುತೇಕ ಮೇಧಾವಿಗಳು ಹಸಿರುಹುಲ್ಲು ಎಲ್ಲಿದೆಯೆಂದು ಹುಡುಕುತ್ತ ಹೋಗುವವರೇ ವಿನಾ ಪ್ರತಿಭಟಿಸಿ ತಮಗೆ ಸಿಗಬಹುದಾದ ಅನುಕೂಲಗಳನ್ನು, ಐಹಿಕ ಸುಖಭೋಗಗಳನ್ನು ಬಿಡುವವರಲ್ಲ. ಆದ್ದರಿಂದಲೇ ಇಂದು ಸಾಕಷ್ಟು ಮಂದಿ ತಾವು ಮಾಡದ ತಪ್ಪಿಗಾಗಿ, ಅಥವಾ ಅವರಿಗೆ ಪ್ರತ್ಯಕ್ಷವೋ ಪರೋಕ್ಷವೋ ಸಂಬಂಧವಿದೆಯೆಂಬ ಆಪಾದನೆಗಳು ವಿಚಾರಣೆಯ ಹಂತದಲ್ಲಿದ್ದುದಕ್ಕಾಗಿ ಬಂಧನದಲ್ಲಿದ್ದರೂ ಅವರ ಬಿಡುಗಡೆಗೆ, ಸ್ವಾತಂತ್ರ್ಯಕ್ಕೆ ಇತರ ಮೇಧಾವಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಇವು ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದರಿಂದ ವಿವರಣೆಯ ಅಗತ್ಯವಿಲ್ಲ. ಅಧಿಕಾರದಲ್ಲಿರುವವರು ತಮ್ಮನ್ನು ವಿರೋಧಿಸುತ್ತಿರುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ಸೃಷ್ಟಿಸಿದರೆ ಅದರ ಶಕ್ತಿಯನ್ನು ಅವರು ಪಡೆಯುವುದು ಹೀಗೆ ಸುಮ್ಮನಿರುವವರಿಂದ. ಬಹುತೇಕ ಮಂದಿ ಅಧಿಕಾರಸ್ಥರಿಗೆ ಸಮೀಪವಾಗುವುದಕ್ಕೆ ತುಡಿಯುತ್ತಾರೆ; ದುಡಿಯುತ್ತಾರೆ. ಇದರಿಂದಾಗಿ ಹೆಸರು ಭವಿಷ್ಯದಲ್ಲಿ ಹಾಳಾಗುತ್ತದೆಂಬ ಭಯವು ಅವರನ್ನು ಕಾಡುವುದಿಲ್ಲ. ಅದರಲ್ಲೂ ಸೂಕ್ಷ್ಮ ಮತ್ತು ಆಯಕಟ್ಟಿನ ಸ್ಥಾನದಲ್ಲಿದ್ದವರು ಅದನ್ನು ಗಟ್ಟಿಗೊಳಿಸುವುದಕ್ಕೆ ಯತ್ನಿಸುತ್ತಾರೆಯೇ ವಿನಾ ತಮ್ಮ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದು ಅಪರೂಪ. ಹಾಗಲ್ಲದಿದ್ದಾಗಲೂ ಜನರ ಸಹನೆಯೇ ಸರ್ವಾಧಿಕಾರಕ್ಕೆ ಶೋಷಿಸುವ ಶಕ್ತಿಯಾಗುತ್ತದೆ.

ಈ ಪ್ರಯತ್ನಗಳಿಲ್ಲದಿದ್ದಾಗ, ಹೋರಾಡುವವರಿಲ್ಲದಿದ್ದಾಗ, ಅಪರಿಹಾರ್ಯಕ್ಕೆ ಪರಿಹಾರವಿಲ್ಲವೆಂಬುದೇ ಸಂಗತ. ಇದನ್ನು ಹೋಗಲಾಡಿಸಬೇಕಾದರೆ ಕೆಲವೊಂದು ಕ್ರಮಗಳ ಅಗತ್ಯವಿದೆ. ಪೊಲೀಸರಾಗಲೀ, ಇತರ ತನಿಖಾದಳಗಳಾಗಲೀ ಮೇಲ್ನೋಟದ ಸಾಕ್ಷಗಳಿಲ್ಲದಿದ್ದರೆ ಮತ್ತು ಇದ್ದರೂ ಆತನ ಬಂಧನ ಅನಿವಾರ್ಯವಲ್ಲದಿದ್ದರೆ ಯಾವನೇ ವ್ಯಕ್ತಿಯನ್ನು ಬಂಧಿಸದಂತೆ ಕಾನೂನು ತಿದ್ದುಪಡಿಯಾಗಬೇಕು. ನ್ಯಾಯಾಲಯಗಳು ಜಾಮೀನನ್ನು ನಿಯಮವಾಗಿಸಿ ಬಂಧನವನ್ನು ಅಪವಾದವಾಗಿಸಬೇಕು. ಹುರುಳಿಲ್ಲದ ಆಪಾದನೆಗಳನ್ನು ತಿರಸ್ಕರಿಸಿ ಜಾಮೀನು ನೀಡುವಾಗ, ಆರೋಪಪಟ್ಟಿಯನ್ನು ತಿರಸ್ಕರಿಸಿ ಆರೋಪಮುಕ್ತಿಗೊಳಿಸುವಾಗ, ವಿಚಾರಣೆಯ ನಂತರವೂ ಸಾಕ್ಷ್ಯಾಧಾರವಿಲ್ಲವೆಂಬ ಕಾರಣಕ್ಕೆ ಬಿಡುಗಡೆ ಮಾಡುವಾಗ, ಆರೋಪಿಗೆ ಸರಕಾರದಿಂದ ಆತನ ಆರ್ಥಿಕ ನಷ್ಟ ಮತ್ತು ಅಗತ್ಯಗಳನ್ನಾಧರಿಸಿ ನಿಗದಿತ ಪರಿಹಾರವನ್ನು ನೀಡಲು ಕಾನೂನಿನಲ್ಲಿ ಅವಕಾಶವಿರಬೇಕು ಮತ್ತು ಇಂತಹ ಎಲ್ಲ ಸಂದರ್ಭಗಳಲ್ಲಿ ಸರಕಾರ ಮತ್ತದರ ಸಂಬಂಧಿತ ಅಧಿಕಾರಿಗಳಿಗೆ ಉತ್ತರದಾಯಿತ್ವದ ಪರಿಣಾಮವನ್ನು ಹೊರಿಸಬೇಕು. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಜನಮಾನಸವನ್ನು ಜಾಗೃತಿಗೊಳಿಸುವವರು ಯಾರು?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top