--

ನೊಂದವರ/ಬೆಂದವರ ನೆರಳು

ಮಳೆನಿಂತರೂ ಮಳೆಯ ಹನಿ ಬಿಡದು ಎಂಬಂತೆ ಸ್ಟ್ಟಾನ್‌ಸ್ವಾಮಿಯ ಮರಣಾನಂತರವೂ ಅವರ ಪ್ರಕರಣದ ವಿಚಾರಣೆ ಬೇರೊಂದು ಮಗ್ಗುಲಲ್ಲಿ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ನಡೆದಿದೆ. ಅದು ಮಹತ್ವದ್ದಲ್ಲ. ಆದರೆ ವಿಚಾರಣೆಯ ಸಂದರ್ಭದಲ್ಲಿ ವಿಭಾಗೀಯ ಪೀಠದ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಿಂಧೆ ಮತ್ತು ಜಮಾದಾರ್ ಅವರು ಸ್ಟ್ಟಾನ್‌ಸ್ವಾಮಿಯ ಸಮಾಜಸೇವೆಯ ವ್ಯಕ್ತಿತ್ವವನ್ನು ಪ್ರಶಂಸಿಸಿದ್ದಾರೆ. ಕಾನೂನಿನಲ್ಲಿ ಪ್ರಕರಣದ ಸ್ಥಿತಿಗತಿ ಹೇಗಿದ್ದರೂ ಸ್ಟ್ಟಾನ್‌ಸ್ವಾಮಿಯವರ ಸಮಾಜಸೇವೆ ನ್ಯಾಯಾಲಯದ ಅನಧಿಕೃತ ದಾಖಲೆಗಳಲ್ಲಿ ಉಳಿಯುವಂತೆ ಮಾಡಿದ್ದಾರೆ. ಇದೇ ಪೀಠವು ಇನ್ನೊಬ್ಬ ಬಂಧಿತ ಕವಿ ವರವರರಾವ್ ಅವರಿಗೆ ಜಾಮೀನನ್ನು ನೀಡಿತ್ತು. ಸ್ಟ್ಟಾನ್‌ಸ್ವಾಮಿಗೆ ವೈದ್ಯಕೀಯ ಸೌಲಭ್ಯವನ್ನು ನೀಡಲು ಮತ್ತು ಅದಕ್ಕಾಗಿ ಅವರನ್ನು ಆಸ್ಪತ್ರೆಗೆ ವರ್ಗಾಯಿಸಲು ಆದೇಶಿಸಿತ್ತು. ಇದನ್ನು ನ್ಯಾಯಮೂರ್ತಿಗಳೇ ಸ್ಟ್ಟಾನ್‌ಸ್ವಾಮಿಯ ವಕೀಲರಿಗೆ ನೆನಪಿಸಿತ್ತು. ಇದು ಯಾಕೆ ಪ್ರಸ್ತುತವೆಂದರೆ, ಸ್ಟ್ಟಾನ್‌ಸ್ವಾಮಿಯವರ ಸಾವು ಮನುಷ್ಯತ್ವವಿರುವ ಎಲ್ಲರ ಎದೆಯನ್ನು ಕಲಕಿದ್ದು ಮಾತ್ರವಲ್ಲ ಅನೇಕರ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಆಕ್ರೋಶ ರಾಷ್ಟ್ರೀಯ ತನಿಖಾದಳದ ಪೊಲೀಸರ ವಿರುದ್ಧ ಮಾತ್ರವಲ್ಲ, ಅವರ ಮೇಲುಸ್ತುವಾರಿ ವಹಿಸಿದ ಕೇಂದ್ರ ಸರಕಾರದ ವಿರುದ್ಧವೂ, ಅಷ್ಟಕ್ಕೇ ನಿಲ್ಲದೆ ನ್ಯಾಯಾಲಯದ ಮತ್ತು ಒಟ್ಟರ್ಥದಲ್ಲಿ ನ್ಯಾಯಾಂಗದ ವಿರುದ್ಧವೂ ಸಹಜವಾಗಿಯೇ ವ್ಯಾಪಿಸಿತ್ತು. ನ್ಯಾಯಾಲಯಗಳಿಗೆ ಮತ್ತು ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳಿಗೆ ಸಂಕಟವಾಗುವಂತಹ ಮತ್ತು ಪಶ್ಚಾತ್ತಾಪಪಡುವ ವಾತಾವರಣವನ್ನು ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರಕಾರವು ಕೇಂದ್ರದ ಹೆಜ್ಜೆಯನ್ನೇ ತುಳಿದಿದೆಯೆಂಬುದನ್ನು ಗಮನಿಸಿದರೆ ಯೋಚಿಸಬಲ್ಲ ಯಾರನ್ನೂ ಯಾವ ಸರಕಾರವೂ ಸಹಿಸುವುದಿಲ್ಲವೆಂಬುದು ಮನದಟ್ಟಾಗುತ್ತದೆ. ಅಧಿಕಾರ ರಾಜಕೀಯದ ಮಂದಿಗೆ ಯೋಚಿಸಬಲ್ಲವರು, ತಪ್ಪನ್ನು ತೋರಿಸುವವರು ಬೇಡ; ಅವರಿಗೆ ಬೇಕಾಗಿರುವುದು ಕುರಿಮಂದೆ. ಕಣ್ಣುಕಾಣದ ಕುರಿಮಂದೆಯಾದರೆ ಇನ್ನೂ ಚಂದ.

ಹೌದು. ಒಂದು ದೃಷ್ಟಿಯಲ್ಲಿ ಅಕ್ರಮವೆಂದು ಕಾಣುವಂತಹ ಇಂತಹ ಅನೇಕ ಬಂಧನಗಳ ಮತ್ತು ಅದರ ಸಾವು-ನೋವಿಗೆ, ನ್ಯಾಯಾಲಯಗಳು ಕೈಗೊಳ್ಳುವ ನಿರ್ಣಯಗಳ ಹಿಂದಿನ ವಿಳಂಬವೂ ಕಾರಣವೇ. ಮಾಹಿತಿ ತಂತ್ರಜ್ಞಾನ ಕಾಯ್ದೆಯ 66-ಎ ಕಲಮನ್ನು ಸರ್ವೋಚ್ಚ ನ್ಯಾಯಾಲಯವು 2015ರಲ್ಲೇ ಅನೂರ್ಜಿತಗೊಳಿಸಿದರೂ ಸರಕಾರಗಳು ಅದೇ ಕಲಮಿನಡಿ ಸಾವಿರಾರು ಪ್ರಕರಣಗಳನ್ನು ದಾಖಲಿಸಿ ಜನರಿಗೆ ಹಿಂಸೆ ನೀಡಿದೆ. ವಿಶೇಷವೆಂದರೆ ಇಂತಹ ಉದ್ಧಟತನತೋರುವ ಪೊಲೀಸರು ತಮ್ಮ ಜೋಳವಾಳಿಗೆಗೆ ತಾವು ತೋರಿಸುವ ಕೃತಜ್ಞತೆಯೆಂದೇ ತಿಳಿಯುವುದು ಮತ್ತು ಅಧಿಕಾರದಲ್ಲಿರುವ ಎಲ್ಲ ಪಕ್ಷಗಳೂ ಇಂತಹ ಅನೂರ್ಜಿತ ಕಾಯ್ದೆಗಳನ್ನೇ ಬಳಸುವುದು. ಇದು ಎಲ್ಲ ಅಧಿಕಾರಸ್ಥರ ಕಾಯಿಲೆಯೆಂಬುದು ಇಂತಹ ಪ್ರಕರಣಗಳು ಯಾವ ರಾಜ್ಯಗಳಲ್ಲೆಲ್ಲ ದಾಖಲಾಗಿದೆಯೆಂಬ ಅಂಕಿ-ಅಂಶಗಳು ತೋರಿಸುತ್ತವೆ. ಇದರಲ್ಲಿ ಬಿಜೆಪಿ, ಕಾಂಗ್ರೆಸ್ ಅಥವಾ ಇತರ ಎಲ್ಲ ಪಕ್ಷಗಳ ನಡುವೆ ಪರಸ್ಪರ ಒಳಒಪ್ಪಂದವಿರುವಂತಿದೆ. ವಿಷಾದವೆಂದರೆ ಸ್ವಇಚ್ಛೆಯಿಂದ ಕಾರ್ಯೋನ್ಮುಖವಾಗುವ ವಿಶೇಷಾಧಿಕಾರ ಹೊಂದಿರುವ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳಿಗೆ ಈ ಭೀಕರ ತಪ್ಪು ಗೊತ್ತಾಗಬೇಕಾದರೆ 6 ವರ್ಷಗಳು ಬೇಕಾದವು! ಈಗ ಸರ್ವೋಚ್ಚ ನ್ಯಾಯಾಲಯವು ಇದನ್ನು ಕೈಗೆತ್ತಿಕೊಂಡ ತಕ್ಷಣ ಅಂತಹ ಪ್ರಕರಣಗಳನ್ನು ಹಿಂದೆಪಡೆಯುವುದಾಗಿ ಸರಕಾರ(ಗಳು) ಧಾರಾಳತನವನ್ನು ತೋರಿಸುತ್ತಿವೆ!

ಸರ್ವೋಚ್ಚ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ 124-ಎ ಕಲಮಿನ ಸಂವಿಧಾನಬದ್ಧತೆಯ ವಿವಾದವನ್ನು ಕೈಗೆತ್ತಿಕೊಂಡಿದೆ. ಈಗಾಗಲೇ ಅನೇಕ ಅಮಾಯಕರು ಈ ಕ್ರೂರ ಕಲಮಿನಡಿ ಸಿಲುಕಿದ್ದಾರೆ. ಗೃಹಮಂತ್ರಾಲಯದ ಅಂಕಿ-ಅಂಶಗಳ ಪ್ರಕಾರ 2014-19ರ ಅವಧಿಯಲ್ಲೇ 326 ಪ್ರಕರಣಗಳು ದಾಖಲಾಗಿವೆಯೆಂದು ವರದಿಯಾಗಿದೆ. ಬ್ರಿಟಿಷ್ ಕಾಲದ ಈ ಕಾನೂನು ಭಾರತೀಯ ದಂಡ ಸಂಹಿತೆಯು 1860ರಲ್ಲಿ ಜ್ಯಾರಿಗೆ ಬಂದಾಗ ಅದರಲ್ಲಿರಲಿಲ್ಲ. ಆನಂತರ ಅಂದರೆ 1870ರಲ್ಲಿ ಇದನ್ನು ಸೇರಿಸಲಾಯಿತು. ಪರಿಣಾಮವಾಗಿ ಮುಂದೆ ನೂರಾರು ರಾಜಕೀಯ ಹೋರಾಟಗಾರರನ್ನು ಇದರಡಿ ಶಿಕ್ಷಿಸಲಾಯಿತು. ತಿಲಕ್, ಗಾಂಧಿ ಮುಂತಾದ ಅನೇಕರು ಬಂಧನವನ್ನು ಅನುಭವಿಸಿದರು. ಬ್ರಿಟಿಷ್ ಸರಕಾರವು ಸ್ವಾತಂತ್ರ್ಯ ಹೋರಾಟದ ನಾಯಕರ ಸದ್ದಡಗಿಸುವುದಕ್ಕಾಗಿ ಮತ್ತು ಆ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಈ ಕಾಯ್ದೆಯನ್ನು ಯಥೇಚ್ಛವಾಗಿ ಬಳಸಿತು. ಸ್ವಾತಂತ್ರ್ಯ ಬಂದಾಗ ಬ್ರಿಟಿಷರಿಂದ ಈ ದೇಶದ ಜನರು ರಾಜಕೀಯವಾಗಿ ಬಿಡುಗಡೆಗೊಂಡೆವೆಂದು ಭ್ರಮಿಸಿದರು. ನಿಜಕ್ಕೂ ಸ್ವಾತಂತ್ರ್ಯವನ್ನನುಭವಿಸಿದವರು ಕೆಲವು ನಾಯಕರು ಮಾತ್ರ. ಉಳಿದವರಿಗೆ ಮತ್ತದೇ ನರಕ! ಈ ಬಾರಿ ಏಟು ತಿಂದದ್ದು ಫರಂಗಿಯವರಿಂದ ಅಲ್ಲ; ನಮ್ಮವರಿಂದಲೇ! ಸ್ವಾತಂತ್ರ್ಯ ಅಷ್ಟು ಬದಲಾವಣೆಯನ್ನು ತಂದಿತು!

ದೇಶದ್ರೋಹವು ಯಾವುದು ಮತ್ತು ಯಾವುದಲ್ಲ ಎಂಬುದು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಆದರೆ ಎಲ್ಲಿಯವರೆಗೆ ನ್ಯಾಯಾಲಯಗಳು ಇಂತಹ ವಿಷಯಗಳಲ್ಲಿ ಪ್ರವೇಶಿಸುವುದು ನಿಧಾನವಾಗುತ್ತದೆಯೋ ಅಲ್ಲಿಯ ವರೆಗೂ ಪೊಲೀಸರೂ, ಅಧಿಕಾರಸ್ಥರೂ ಈ ಕಾನೂನಿನ ಯಜಮಾನರಾಗಿರುತ್ತಾರೆ. ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ದೇಶ ಮಾತ್ರವಲ್ಲ, ಸರಕಾರ, ಅದನ್ನಾಳುವ ಪಕ್ಷ, ಆ ಪಕ್ಷದ ನಾಯಕರು ಮಾತ್ರವಲ್ಲ ಬೆಂಬಲಿಗರನ್ನು ಟೀಕಿಸಿದರೂ ಅದು ದೇಶದ್ರೋಹವಾಗುತ್ತದೆ. ಕಾನೂನಿನ ತಲೆಬುಡ ಗೊತ್ತಿಲ್ಲದ ಪೊಲೀಸರ ಕೈಯಲ್ಲಿ ಇಂತಹ ಕರಾಳ ಕಾನೂನು ತನ್ನ ಎಲ್ಲ ಬಿಗಿಯನ್ನು ಪ್ರದರ್ಶಿಸುತ್ತದೆ; ಗೊತ್ತಿದ್ದವರೂ ಈಗಾಗಲೇ ಸೂಚಿಸಿದಂತೆ ಅಮಾಯಕರ ಮೇಲೆ ಪಿಳ್ಳೆನೆವ ಸಿಕ್ಕಿದರೂ ಬೇಟೆನಾಯಿಗಳಂತೆ ಹರಿಬೀಳುತ್ತಾರೆ. ಏಕೆಂದರೆ ಅವರಿಗೆ ಪರಿಚಯವಿರುವುದು ಅಧಿಕಾರ ಮಾತ್ರ. ತೋಳ-ಕುರಿಮರಿ ಪ್ರಸಂಗದಲ್ಲಿ ಕುರಿಯ ಯಾವ ವಿವರಣೆಯೂ ತೋಳಕ್ಕೆ ಸ್ವೀಕಾರವಾಗದು.

ಮಣಿಪುರದ ಒಂದು ಪ್ರಸಂಗವು ದೇಶದ ಕೆಲವರನ್ನಾದರೂ ಬೆಚ್ಚಿಬೀಳಿಸಿತು. ಈ ವರ್ಷದ ಮೇ ತಿಂಗಳಲ್ಲಿ ಗೋಮೂತ್ರ ಮತ್ತು ಗೋಮಯದ ಮೂಲಕ ಕೊರೋನ ಚಿಕಿತ್ಸೆಯನ್ನು ಮಾಡಬಹುದೆಂದು ದಡ್ಡತನದ ಮಾತ್ರವಲ್ಲ, ಮೌಢ್ಯತನದ ಮಾತುಗಳನ್ನಾಡಿ ಜನರ ದಿಕುತಪ್ಪಿಸಲೆತ್ನಿಸಿದ ಬಿಜೆಪಿ ನಾಯಕರೊಬ್ಬರ ಹುಚ್ಚುನಡೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಕ್ಕಾಗಿ ಮಣಿಪುರದಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರ ವಿರುದ್ಧ ರಾಷ್ಟ್ರೀಯ ಭದ್ರತಾಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿತು. ಅವರಿಗೆ ಅಲ್ಲಿನ ನ್ಯಾಯಾಲಯವು ಜಾಮೀನು ನೀಡಲಿಲ್ಲ. ಸ್ವಲ್ಪವಿವೇಕೋದಯವಾಗಿದ್ದರೆ ಅಲ್ಲೇ ಮುಗಿಯಬಹುದಾಗಿದ್ದ ಪ್ರಸಂಗವು ಸರ್ವೋಚ್ಚ ನ್ಯಾಯಾಲಯದ ವರೆಗೂ ತಲುಪಿತು. ಈ ವಾರವಷ್ಟೇ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನನ್ನು ನೀಡಿತು. ವ್ಯಂಗ್ಯವೆಂದರೆ ಕಾನೂನು ಮತ್ತು ನ್ಯಾಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದ ಮತ್ತು ಸರಕಾರ ಮತ್ತದರ ಆಡಳಿತಯಂತ್ರಕ್ಕೆ ತುಕ್ಕುಹಿಡಿದಾಗ ಅದನ್ನು ತೊಳೆದು ತಿದ್ದಬೇಕಾದ ಸಾಲಿಸಿಟರ್‌ಜನರಲ್ ಬಾಡಿಗೆಹಂತಕರಂತೆ ಸರಕಾರದ ನಡೆಯನ್ನು ಬೆಂಬಲಿಸಿ ತೀರ್ಮಾನವನ್ನು ವಿಳಂಬಿಸುವಂತೆ ಸರ್ವಪ್ರಯತ್ನವನ್ನೂ ಮಾಡಿದರು. ಸರ್ವೋಚ್ಚ ನ್ಯಾಯಾಲಯವು ಒಪ್ಪಲಿಲ್ಲ. ಅಷ್ಟೇ ಅಲ್ಲ, ಅಂದೇ ಸಂಜೆ 5 ಗಂಟೆಯ ಒಳಗಾಗಿ ಬಂಧಿತನ ಬಿಡುಗಡೆಯನ್ನೂ ಆದೇಶಿಸಿತು. ಮಾತ್ರವಲ್ಲ ಅಂತಹ ಬಂಧನವು ಮೂಲಭೂತ ಹಕ್ಕು ಮತ್ತು ಕಾನೂನಿನ ಪ್ರಕ್ರಿಯೆಗಾದ ಅವಮಾನವೆಂದು ಬಣ್ಣಿಸಿತು. ಬಂಧಿತರ ಅದೃಷ್ಟ ಚೆನ್ನಾಗಿತ್ತು. ಆದರೆ ಎಷ್ಟು ಜನರಿಗೆ ಸರ್ವೋಚ್ಚ ನ್ಯಾಯಾಲಯದ ಕದತಟ್ಟುವ ಸಾಮರ್ಥ್ಯವಿದೆ? ಕಾಣುವ ಪ್ರಕರಣಗಳು ಇಷ್ಟಿದ್ದರೆ ಕಾಣದ ಕತ್ತಲು ಎಷ್ಟಿದೆಯೋ ಏನೋ? ನ್ಯಾಯಾಲಯಗಳು ಮನುಷ್ಯನ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಪೋಷಿಸುತ್ತವೆ ನಿಜ; ಆದರೆ ಇದಕ್ಕೊಂದು ಶಾಶ್ವತವಾದ ಪರಿಹಾರ ಸಾಧ್ಯವಿಲ್ಲವೇ? ಜನರು ಮತ್ತೆ ಮತ್ತೆ ಪೊಲೀಸರ, ಅಧಿಕಾರಿಗಳ, ರಾಜಕಾರಣಿಗಳ, ಸರಕಾರದ ದೌರ್ಜನ್ಯಗಳಿಗೆ ಬಲಿಯಾಗುತ್ತಲೇ ಇರಬೇಕೇ?

ಮಹಾಭಾರತದಲ್ಲಿ ಬರುವ ಬಕಾಸುರನ ಪ್ರಸಂಗವು ಸುಮಾರಾಗಿ ಇದೇ ಥರದ್ದು. ಪ್ರಜೆಗಳನ್ನು ಪಾಲಿಸಬೇಕಾದ ರಾಜನೇ ಈ ಬಕಾಸುರನ ಅಭೀಷ್ಟವನ್ನು ಪೂರೈಸಲು ಆಹಾರವನ್ನೂ ಎತ್ತುಗಳನ್ನೂ ಒಬ್ಬ ಮನುಷ್ಯನನ್ನೂ ದಿನನಿತ್ಯ ಒದಗಿಸುವ ನಿರ್ಣಯವನ್ನು ಮಾಡಿದ್ದಾನೆ. ಹಿಟ್ಲರನ ಯಹೂದಿಗಳ ಮಾರಣಹೋಮದ ಭಾರತೀಯ ಮುಖ ಇದು. ಈ ಹಿಂಸೆ ಕೊನೆಗೊಳ್ಳಬೇಕಾದರೆ ಪಾಂಡವರು ಬರಬೇಕಾಯಿತು. ಅಲ್ಲಿಯ ವರೆಗೆ ಬಲಿಯಾದ ಆತ್ಮಗಳ ಕಥೆಯನ್ನು ವ್ಯಾಸರಾಗಲಿ ಕುಮಾರವ್ಯಾಸನಾಗಲಿ ಬರೆಯಲೇ ಇಲ್ಲ. ಅಧಿಕಾರಕ್ಕೇರಿದರೆ ತಮಗೆ ಬೇಕಾದ್ದು ಮಾತ್ರ ಕಾಣುವ ಕನ್ನಡಕಗಳನ್ನು ಧರಿಸುವ ಸುಯೋಗವು ಲಭ್ಯವಾಗುತ್ತದೆಯೆಂದು ಕಾಣುತ್ತದೆ. ಪ್ರತಿಭಟನಾಕಾರರ, ಚಿಂತಕರ ಜೀವ-ಜೀವನವು ಸರಕಾರದ ಹೊಣೆಯಲ್ಲವೆಂಬುದನ್ನು ಸಿಎಎ, ಎನ್‌ಆರ್‌ಸಿ ಕುರಿತ ಹೋರಾಟಗಳ, ಕಳೆದ ಅನೇಕ ತಿಂಗಳುಗಳಿಂದ ನಡೆಯುವ ರೈತಚಳವಳಿಯ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಕೋವಿಡ್-19ರ ಸಾವುನೋವುಗಳ, ನಿರುದ್ಯೋಗ, ಬೆಲೆಯೇರಿಕೆಯೂ ಸೇರಿದಂತೆ ಆರ್ಥಿಕ ಸಮಸ್ಯೆಗಳ, ಕುರಿತು ಸರಕಾರದ ದಿವ್ಯ ನಿರ್ಲಕ್ಷ್ಯವೇ ತೋರಿಸುತ್ತದೆ.

135 ಕೋಟಿ ಜನರಲ್ಲಿ ಒಂದಷ್ಟು ಜನರು ಸತ್ತುಹೋದರೆ ಆಡಳಿತ ಯಂತ್ರಕ್ಕೇನೂ ತೊಂದರೆಯಿಲ್ಲ. ನಮ್ಮ ನಾಯಕರ ಮನುಷ್ಯತ್ವ ಅಥವಾ ಸರಿಯಾಗಿ ಹೇಳಬೇಕೆಂದರೆ ಅದರ ಅಭಾವದ ಕುರಿತು ಹೇಳದೆ ಇಂತಹ ಚಿಂತನೆಗಳು ಮುಗಿಯಲಾರವು. ನಮ್ಮ ಪ್ರಧಾನಿ ಪಿ.ವಿ.ಸಿಂಧು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ವಿಜೇತಳಾಗಿ ಮರಳಿದರೆ ಆಕೆಯೊಂದಿಗೆ ಐಸ್‌ಕ್ರೀಮ್ ತಿನ್ನುವ ಭರವಸೆಯನ್ನು ನಿಡುತ್ತಾರೆಯೇ ವಿನಾಃ ಬಡಬಗ್ಗರೊಂದಿಗೆ ಅವರ ಗುಡಿಸಲಿನ ಅನ್ನವನ್ನು ತಿನ್ನುವ ಬಗ್ಗೆ ಮಾತನ್ನಾಡುವುದಿಲ್ಲ. ಮನುಷ್ಯತ್ವವಿರುವುದು ದೇಶದ ಕೊಟ್ಟಕೊನೆಯ ಬಡವನ ಹಸಿವನ್ನು ಇಂಗಿಸಿದಾಗ; ಹಸಿವು ಅಂತಲ್ಲ ಎಲ್ಲ ದುಃಖಗಳ, ಸಂಕಟಗಳ ದುರ್ಗಮವಾದ ಕತ್ತಲಿನ ಗವಿಯಲ್ಲಿ ನಿರ್ಗತಿಕನ ಕೈಹಿಡಿದು ನಡೆಸಿದಾಗ; ಅದೂ ಅಲ್ಲದಿದ್ದರೆ ಯಾರೊಬ್ಬನ ಸಾವು-ನೋವಿನ ಆರ್ತತೆಯನ್ನು ಹಂಚಿಕೊಂಡಾಗ; ಅದರಲ್ಲಿ ತಾನೂ ಭಾಗಿಯಾದಾಗ. ಸತ್ತವರೊಡನೆ ಸೇಡಿಲ್ಲ. ಮಹಾಭಾರತವನ್ನು ಮತ್ತೆ ನೆನಪಿಸಿಕೊಂಡರೆ 18ನೇ ದಿನದ ಯುದ್ಧಾರಂಭದಲ್ಲಿ ತನ್ನ ಬದುಕಿನ ಕೊನೆಯ ಹಂತದಲ್ಲಿ ಯುದ್ಧಭೂಮಿಯಲ್ಲಿ ನಡೆಯುವ ದುರ್ಯೋಧನನು ಮರುಳುಗಳ ತೀವ್ರ ವ್ಯಂಗ್ಯಕ್ಕೆ ತುತ್ತಾಗಿಯೂ ನಡೆಯುತ್ತ ಬರುವಾಗ ಅಲ್ಲಿ ತನ್ನವರಿಂದಲೇ ಹತನಾದ ಅಭಿಮನ್ಯುವನ್ನು ಕಂಡು ‘ನರಸುತ ನಿನ್ನೊರೆಗೆ ದೊರೆಗೆ ಗಂಡರುಮೊಳರೇ’ (ಅರ್ಜುನನ ಮಗನೇ, ನಿನಗೆ ಸರಿಸಾಟಿಯಾದ ವೀರರುಂಟೇ?), ‘ನಿನ್ನಂ ಪೆತ್ತಳ್ ಮೊಲೆವೆತ್ತಳೆ ವೀರಜನನಿವೆರಂ ಪೆತ್ತಳ್’ (ನಿನ್ನನ್ನು ಹೆತ್ತವಳು ಬರೀ ಸ್ತ್ರೀಯಲ್ಲ, ವೀರಜನನಿ), ‘ಅಸಮಬಲ ಭವದ್ವಿಕ್ರಮಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾ ರ್ಥಿಸುವೆನಭಿಮನ್ಯು ನಿಜಸಾ ಹಸೈಕದೇಶಾನುಮರಣಮೆಮಗಕ್ಕೆ ಗಡಾ’ (ಅದ್ವಿತೀಯ ಅಭಿಮನ್ಯುವೇ, ನಿನ್ನ ಪರಾಕ್ರಮವು ಅಸದೃಶವಾದದ್ದು. ನಾನು ಬೇಡಿಕೊಳ್ಳುವುದು ಇಷ್ಟೇ: ನಿನ್ನ ಗುಣದಲ್ಲಿ ಒಂದಿಷ್ಟಾದರೂ ನನ್ನಲ್ಲಿದ್ದರೆ ನನಗೂ ಅದಕ್ಕನುಗುಣವಾದ ವೀರಮರಣವು ಬರಲಿ) ಮುಂತಾಗಿ ಹಲುಬುತ್ತಾನೆ.

ಮೊನ್ನೆ ಸ್ಟ್ಟಾನ್‌ಸ್ವಾಮಿ ಸತ್ತಾಗ ಮತ್ತು ಅದಕ್ಕಿಂತಲೂ ಈಚೆಗೆ ದಾನಿಶ್ ಸಿದ್ದೀಕಿಯೆಂಬ ಪ್ರತಿಭಾವಂತ ಛಾಯಾಗ್ರಹಕ-ಪತ್ರಕರ್ತ ದುರ್ಮರಣಕ್ಕೀಡಾದಾಗ ಒಂದು ವರ್ಗ, ಗುಂಪು ಇದನ್ನು ಸಂಭ್ರಮಿಸಿತು. ಸ್ಟ್ಟಾನ್‌ಸ್ವಾಮಿಗೆ ನಕ್ಸಲ್ ನಂಟು ಹಾಕಿ ಹಳಿಯಿತು. ದಾನಿಶ್ ಸಿದ್ದೀಕಿ ದಿಲ್ಲಿ ಗಲಭೆ ಅಂತಲ್ಲ ಎಲ್ಲ ಪ್ರತಿಭಟನೆಗಳಲ್ಲೂ ಮಾನವೀಯ ಸಂದೇಶಗಳನ್ನು ಮೊಳಗಿಸಬಲ್ಲ ವರದಿಯನ್ನೂ ಬಿತ್ತರಿಸಬಲ್ಲ ಭಾವಚಿತ್ರಗಳನ್ನೂ ಬೆಳಗಿಸಿದವನು. ಪುಲಿಟ್ಝರ್ ಪ್ರಶಸ್ತಿ ವಿಜೇತ. ಅಪೂರ್ವ ಕಲಾವಿದ. ಈತ ಅಫ್ಘಾನಿಸ್ತಾನದಲ್ಲಿ ಹಂತಕರ ಗುಂಡೇಟಿಗೆ ಬಲಿಯಾದ. ಇದನ್ನು ಮರುಗುವುದು ಮಾನವೀಯತೆ. ಆತ ಓದಿದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲೇ ಆತನನ್ನು ಸಮಾಧಿಮಾಡಿ ಆತನನ್ನು ಗೌರವಿಸಲಾಯಿತು. (ವಿಶೇಷವೆಂದರೆ ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಇಂತಹ ಹತ್ಯೆಯ ಮಾಲಕತ್ವವನ್ನು ಸಾರುವ ತಾಲಿಬಾನ್ ಕೂಡಾ ತಾನು ಇದಕ್ಕೆ ಹೊಣೆಯಲ್ಲವೆಂದು ಸ್ಪಷ್ಟಪಡಿಸಿತು.

ಹಾಗಾದರೆ ಇದಕ್ಕೆ ಕಾರಣವೇನು? ಮತ್ತು ಯಾರು? ವಿದೇಶದಲ್ಲಿ ಸಾಯುವುದು ಒಂದು ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿದ್ದು ಇದೇ ಮೊದಲಲ್ಲ. ನೇತಾಜಿ ಜಪಾನ್ ಹಾರಾಟದಲ್ಲಿ, ಲಾಲ್‌ಬಹದೂರ್ ಶಾಸ್ತ್ರಿಯವರು ತಾಷ್ಕೆಂಟಿನಲ್ಲಿ ಸತ್ತಾಗಲೂ ಇಂತಹ ಪ್ರಶ್ನೆಗಳು ಎದ್ದಿವೆ!) ಈ ಬಗ್ಗೆ ಭಾರತ ಸರಕಾರ ತನಿಖೆಗಿಳಿಯದಿರುವುದು ಮಾತ್ರವಲ್ಲ ಒಂದು ಮಾತನ್ನೂ ಆಡದಿರುವುದು ಕೂಡಾ ಒಂದು ನಿಗೂಢ ರಹಸ್ಯವೇ ಇರಬಹುದೇನೋ? ಸತ್ತವರ ಒಲವುನಿಲುವುಗಳನ್ನು ಒಪ್ಪುವುದೂ ಒಪ್ಪದಿರುವುದೂ ಅವರವರ ಇಷ್ಟಕ್ಕೆ, ಇಚ್ಛೆಗೆ ಬಿಟ್ಟದ್ದು. ಆದರೆ ನಮ್ಮ ದೇಶದ ನಾಯಕರೆನಿಸಿಕೊಂಡವರು ಈ ಸಾವು ನ್ಯಾಯವೇ ಎಂದು ಪ್ರಶ್ನಿಸಲಿಲ್ಲ. ಒಳ್ಳೆಯದನ್ನು, ಸಂತೋಷವನ್ನು ಆಚರಿಸೋಣ. ಆದರೆ ಮನೆಯೊಳಗೇ ಶವವನ್ನಿಟ್ಟುಕೊಂಡು ಸಂಭ್ರಮಿಸುವುದು ಅಮಾನುಷ. ಬಾಂಬೆ ಉಚ್ಚ ನ್ಯಾಯಾಲಯವು ಸ್ಟ್ಟಾನ್‌ಸ್ವಾಮಿಯ ಸಾವಿನ ಸೂತಕವನ್ನು ಮಾನವೀಯವಾಗಿ ಅಭಿವ್ಯಕ್ತಿಸಿತು. ಒಲಿಂಪಿಕ್ಸ್ ವಿಜೇತರೊಂದಿಗೆ ಕುಳಿತು ತಿನ್ನಬಲ್ಲ ಐಸ್‌ಕ್ರೀಮ್‌ಖಂಡಿತವಾಗಿಯೂ ಸ್ಟ್ಟಾನ್‌ಸ್ವಾಮಿಯ ಸಾವಿಗಿಂತ, ದಾನಿಶ್ ಸಿದ್ದೀಕಿಯ ಸಾವಿಗಿಂತ ಅನೇಕ ಅಮಾಯಕರ ಬಂಧನಕ್ಕಿಂತ ಹೆಚ್ಚು ರುಚಿಕರವಾಗಿರುವಾಗ ಮನುಷ್ಯತ್ವವನ್ನು ಅಧಿಕಾರಕ್ಕೆ ಒತ್ತೆಯಿಟ್ಟವರಿಗೆ ಸಾವು ಒಂದು ಮಾಹಿತಿ ಮಾತ್ರ. ಅದನ್ನವರು ಪ್ರಶ್ನಿಸುತ್ತಾರೆಂದು ನಿರೀಕ್ಷಿಸುವುದೂ ಪ್ರಜಾಘನತೆಗೆ ತಕ್ಕುದಲ್ಲವೇನೋ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top