ಅಳುವುದೋ..ನಗುವುದೋ..ನೀವೇ ಹೇಳಿ! | Vartha Bharati- ವಾರ್ತಾ ಭಾರತಿ

--

ಅಳುವುದೋ..ನಗುವುದೋ..ನೀವೇ ಹೇಳಿ!

ಯಡಿಯೂರಪ್ಪನವರ ಪದಚ್ಯುತಿಯ ಬಗ್ಗೆ ಕಣ್ಣೀರಿಡುವುದನ್ನು ನಿಲ್ಲಿಸೋಣ. ಲಿಂಗಾಯತ ಮಠಗಳಲ್ಲಿ ಇಲ್ಲದ ಬಸವನನ್ನು ಹುಡುಕುವುದನ್ನು, ಶೂದ್ರ ನಾಯಕರುಗಳಿಗೆ ಇಲ್ಲದ ಶೂದ್ರ ಪ್ರಜ್ಞೆಯನ್ನು ಆರೋಪಿಸುವುದನ್ನು ನಿಲ್ಲಿಸಿ, ಈ ಕಾರ್ಪೊರೇಟ್-ಬ್ರಾಹ್ಮಣ್ಯ ವ್ಯವಸ್ಥೆಯಿಂದ ವರ್ತಮಾನದಲ್ಲಿ ಶೋಷಿತರಾಗುತ್ತಿರುವ ಎಲ್ಲಾ ದಲಿತ ದಮನಿತ ಸಮುದಾಯವನ್ನು ವರ್ತಮಾನದ ವಿಮೋಚನಾ ತಾತ್ವಿಕತೆಯಲ್ಲಿ ಬೆಸೆಯಲು ಮುಂದಾಗಬೇಕಿದೆ.


ಇದು ಯಡಿಯೂರಪ್ಪನವರ ಕಣ್ಣೀರಿನ ಬಗೆಗಿನ ವ್ಯಥೆಯಲ್ಲ. ಅದರ ಬಗ್ಗೆ ವ್ಯಥೆ ಪಡುವ ಅಗತ್ಯವಿಲ್ಲ. ಆ ಕಣ್ಣೀರಿನಲ್ಲಿ ಜನರ ಋಣದ ಉಪ್ಪಿಲ್ಲ. ಬದಲಿಗೆ ಅಧಿಕಾರದ ಕಹಿ ಇದೆ. ಅವರೇ ಹೇಳಿದಂತೆ ಅವರು ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಬಿಜೆಪಿ ಪಕ್ಷವೂ ಅವರಿಗೆ ಕೊಡಬೇಕಾದದ್ದನ್ನೆಲ್ಲಾ ಕೊಟ್ಟಿದೆ. ಕೊಡುತ್ತಿದೆ. ಮುಂದೆಯೂ ಕೊಡಬಹುದು. ಉಳಿದಂತೆ ಅಧಿಕಾರ ರಾಜಕಾರಣದಲ್ಲಿ ದ್ರೋಹ, ಬೆನ್ನಿಗೆ ಚೂರಿ ಇರಿಯುವುದು ಕಾಲಾನುಕಾಲದಿಂದ ನಡೆದುಕೊಂಡು ಬಂದಿದೆ. ಅದೇ ಈಗಲೂ ನಡೆಯುತ್ತಿದೆ. ಮುಂದೆಯೂ ನಡೆಯುತ್ತದೆ. ಆದರೆ, ಆಳುವ ವರ್ಗಗಳ ಯಾದವೀ ಕಲಹಗಳು ಅಥವಾ ಫ್ಯಾಕ್ಷನ್ ೈಟುಗಳು ಜನರಿಗೆ, ಪ್ರಜಾತಂತ್ರಕ್ಕೆ ಬಗೆಯುವ ವಂಚನೆಗಳನ್ನು ಹಿನ್ನೆಲೆಗೆ ಸರಿಸಿಬಿಡುತ್ತವೆ. ಪಾಂಡವ-ಕೌರವರ ಕಲಹದಲ್ಲಿ ಹದಿನೆಂಟು ಅಕ್ಷೋಹಿಣಿ ಸೈನಿಕರು ಏಕೆ ಪ್ರಾಣ ಕೊಡಬೇಕಾಯಿತು? ಬದಲಿಗೆ ಅವರಿಗೇನು ದಕ್ಕಿತು? ಎಂಬ ಪ್ರಶ್ನೆ ಧರ್ಮದ್ರೋಹವಾಗಿ ಬಿಡುತ್ತದೆ. ಯಡಿಯೂರಪ್ಪನವರ ಪದತ್ಯಾಗವೋ..ಪದಚ್ಯುತಿಯೋ ಈಗಲ್ಲದಿದ್ದರೂ ಇನ್ನೆರಡು ವರ್ಷಗಳ ನಂತರ ಆಗುತ್ತಿತ್ತು ಅಥವಾ ಮುಂದಿನ ಎರಡು ವರ್ಷಗಳು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರೂ ಸರಕಾರವೇನೂ ಡಬಲ್ ಇಂಜಿನ್ ಆಗುತ್ತಿರಲಿಲ್ಲ. ನೆರೆ ಪರಿಹಾರದಲ್ಲಿ ರಾಜ್ಯದ ಪಾಲು, ಜಿಎಸ್‌ಟಿ ಬಾಕಿ ಸಿಗುತ್ತಿರಲಿಲ್ಲ, ಪೆಟ್ರೋಲ್ ಬೆಲೆ ಕಡಿಮೆಯಾಗುತ್ತಿರಲಿಲ್ಲ, ಕೃಷಿ ಭೂಮಿ ಪರಭಾರೆಯಾಗುವುದು ನಿಲ್ಲುತ್ತಿರಲಿಲ್ಲ, ದಲಿತ-ಶೂದ್ರ ಮಕ್ಕಳಿಂದ ಅಕ್ಷರವನ್ನು ಕಸಿಯುವ ನವಶಿಕ್ಷಣ ನೀತಿಯು ದೇಶದಲ್ಲೇ ಮೊದಲಾಗಿ ಕರ್ನಾಟಕದಲ್ಲಿ ಜಾರಿಯಾಗುವುದು ನಿಲ್ಲುತ್ತಿರಲಿಲ್ಲ, ಗೋಹತ್ಯೆ ಅಥವಾ ಇನ್ನಿತರ ಹೆಸರಲ್ಲಿ ಅಮಾಯಕ ಮುಸ್ಲಿಮರ ಬಂಧನಗಳು, ಪ್ರೀತಿ ಮಾಡಿದ ತಪ್ಪಿಗೆ ದಲಿತ ಯುವಕ-ಯುವತಿಯರ ಹತ್ಯೆಗಳು ನಿಲ್ಲುತ್ತಿರಲಿಲ್ಲ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಚಾಚೂ ತಪ್ಪದೆ ಜಾರಿಯಾಗುತ್ತಿದ್ದ ಹಿಂದುತ್ವದ-ಕಾರ್ಪೊರೇಟ್ ಪರವಾದ ಯಾವುದೇ ನೀತಿಗಳು ನಿಲ್ಲುತ್ತಿರಲಿಲ್ಲ. ಏಕೆಂದರೆ ಅವನ್ನೆಲ್ಲಾ ಕಟಿಬಗ್ಗಿಸಿ, ಸಮ್ಮತಿಪೂರ್ವಕವಾಗಿ ಯಡಿಯೂರಪ್ಪನವರ ಸರಕಾರವೇ ಕಳೆದ ಎರಡು ವರ್ಷಗಳಿಂದ ಜಾರಿ ಮಾಡುತ್ತಲೇ ಬಂದಿತ್ತು..

ಆಪರೇಷನ್ ಕಮಲ- ಪೇಶೆಂಟ್? 

ಯಡಿಯೂರಪ್ಪನವರ ಪದಚ್ಯುತಿಯಾದ ರೀತಿ ಪ್ರಜಾತಾಂತ್ರಿಕ ವ್ಯವಸ್ಥೆಗೆ ಅವಮಾನವಾದ್ದರಿಂದ ಆ ಪ್ರಕ್ರಿಯೆಯ ಬಗ್ಗೆ ನಾವು ಧ್ವನಿ ಎತ್ತಬೇಕೆಂಬುದು ಮತ್ತೊಂದು ವಾದ. ಹಾಗೆ ನೋಡಿದರೆ ಇಡೀ ದೇಶಕ್ಕೆ ಆಪರೇಷನ್ ಕಮಲವೆಂಬ ಪ್ರಜಾತಂತ್ರದ್ರೋಹಿ ಕಳ್ಳದಾರಿಯನ್ನು ಪರಿಚಯಿಸಿದ್ದೇ ಬಿಜೆಪಿ. ಅದರ ಪ್ರಧಾನ ಫಲಾನುಭವಿ ಯಡಿಯೂರಪ್ಪನವರೇ. ಈ ಬಾರಿ ಅಧಿಕಾರ ಹಿಡಿದದ್ದು ಅದೇ ಮಾರ್ಗದಲ್ಲಲ್ಲವೇ? ತಳಮಟ್ಟದಿಂದ ಪ್ರಾದೇಶಿಕ ಜನಪರ ರಾಜಕಾರಣವಿಲ್ಲದೆ ಇದ್ದಕ್ಕಿದ್ದ ಹಾಗೆ ಈಗ ಕರ್ನಾಟಕದ ಅಧಿಕಾರ ಕರ್ನಾಟಕದಿಂದಲೇ ಎಂಬ ಆಗ್ರಹವನ್ನು ಮಾಡಬೇಕು ಎಂಬುದು ಹೆಚ್ಚೆಂದರೆ ರೋಮ್ಯಾಂಟಿಕ್, ಇಲ್ಲವೆಂದರೆ ಅವಾಸ್ತವಿಕ ಗ್ರಹಿಕೆಯಿಂದ ಕೂಡಿದೆ. ಈ ಹಿಂದೆ ಆ ಘೋಷಣೆಯ ಪ್ರಧಾನ ಫಲಾನುಭವಿಯಾಗಿದ್ದ ರಾಮಕೃಷ್ಣ ಹೆಗಡೆಯವರೇ ಆಮದಾದದ್ದು ದಿಲ್ಲಿಯಿಂದ. ಆಯ್ಕೆಯಾದ ಶಾಸಕರು ತಮ್ಮ ಪ್ರಾದೇಶಿಕತೆಯನ್ನು ತೋರಬೇಕೆಂದರೆ ಅಥವಾ ತಮ್ಮ ಸ್ವತಂತ್ರ ಆಯ್ಕೆಯನ್ನು ವ್ಯಕ್ತಪಡಿಸಬೇಕೆಂದರೆ ಅವರು ತಮ್ಮ ಸ್ವಶಕ್ತಿಯಿಂದ ಗೆದ್ದಿರಬೇಕಾಗುತ್ತದೆ. ತಮ್ಮನ್ನು ಗೆಲ್ಲಿಸಿದ ಪಕ್ಷದ ಹಲವಾರು ಋಣಗಳಿಗಿಂತ ಜನರ ಋಣ ದೊಡ್ದದೆಂದು ಭಾವಿಸುವ ಎದೆಗಾರಿಕೆ ತೋರಬೇಕಾಗುತ್ತದೆ. ಅದು ಕಾಂಗ್ರೆಸ್, ಬಿಜೆಪಿಯಲ್ಲಿ ಬಿಡಿ ಟಿಎಂಸಿ, ಜನತಾದಳ ಅಥವಾ ಇನ್ಯಾವುದೇ ರಾಜಕೀಯ ಪಕ್ಷಗಳಲ್ಲೂ ಇಲ್ಲ. ಹಾಗಿಲ್ಲದಿರುವುದು ಅಸಾಂವಿಧಾನಿಕವೆಂದು ನಮ್ಮ ಸಂವಿಧಾನದಲ್ಲೂ ಬರೆದಿಲ್ಲ. ಹೀಗಾಗಿ ನಮ್ಮ ಪ್ರಜಾತಾಂತ್ರಿಕತೆಯ ತಳಕ್ಕೆ ಗೆದ್ದಲು ಹಿಡಿದಿರುವಾಗ ಹಾಲಿ ವಿಷಯದಲ್ಲಿ ಮಾತ್ರ ದೊಡ್ಡ ಅನಾಹುತವಾಗಿದೆ ಎಂದು ಬಿಂಬಿಸುವುದರಲ್ಲಿ ಹೆಚ್ಚಿನ ಲಾಭವಿಲ್ಲ. ಆದ್ದರಿಂದಲೇ ಎಲ್ಲಾ ಪಕ್ಷಗಳು ಹೈಕಮಾಂಡಿನ ಆಯ್ಕೆಯನ್ನು ಸ್ಥಳೀಯ ಶಾಸಕಾಂಗ ಪಕ್ಷದ ಆಯ್ಕೆಯೆಂದು ಬಿಂಬಿಸುವ ಶಾಸ್ತ್ರಗಳನ್ನು ಮಾಡುತ್ತವೆ. ಹಾಗಿದ್ದಲ್ಲಿ ಯಡಿಯೂರಪ್ಪನವರ ಪದಚ್ಯುತಿ ಯಾವ ಕಾರಣಕ್ಕಾಗಿ ಪ್ರಗತಿಪರ ವಲಯದಲ್ಲಿ ಕಣ್ಣೀರು ತರಿಸುತ್ತಿದೆ? ಅದಕ್ಕೆ ಎರಡು ಕಾರಣಗಳಿವೆ.

ಬಂಡಾಯವೋ? ನಿಷ್ಠ ಅನುಸರಣೆಯೋ?

ಮೊದಲನೆಯದು: ಇಡೀ ವಿದ್ಯಮಾನವನ್ನು ನಾಗಪುರದ ಆರೆಸ್ಸೆಸ್‌ನ ವಿರುದ್ಧ ಯಡಿಯೂರಪ್ಪನವರ ಮತ್ತು ಅವರು ಪ್ರತಿನಿಧಿಸುವ ಸಮುದಾಯದ, ಮಠಗಳ ಬಂಡಾಯವೆಂದು ಭಾವಿಸುತ್ತಿರುವುದು. ಆರೆಸ್ಸೆಸ್‌ನ ವಿರುದ್ಧ ಯಾವುದೇ ಬಗೆಯ ಹಾಗೂ ಎಷ್ಟೇ ಕ್ಷಣಿಕವಾದ ಬಂಡಾಯವೂ ಇಂದಿನ ದಿನಗಳಲ್ಲಿ ಮಹತ್ವವಾದದ್ದೇ ಎಂದು ಅರ್ಥಮಾಡಿಕೊಳ್ಳುತ್ತಿರುವುದು. ಈ ನೆಲೆಯಲ್ಲಿ ಆಲೋಚಿಸುತ್ತಿರುವವರು ಯಡಿಯೂರಪ್ಪನವರ ಬಾರಾ ಖೂನ್ ಮಾಫಿ ಮಾಡಿ ಅವರ ಎಲ್ಲಾ ಹಿಂದುತ್ವ ಪರವಾದ ನೀತಿಗಳನ್ನು ಹಾಗೂ ಅಖಂಡ ಭ್ರಷ್ಟಾಚಾರಗಳನ್ನೂ ಹಿಂದುತ್ವ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಅಸಹಾಯಕರಾಗಿ ಮಾಡಿಕೊಳ್ಳಲೇಬೇಕಾಗಿದ್ದ ಹೊಂದಾಣಿಕೆ ಎಂದು ಮರುಚಿತ್ರಿಸಿ ಅವರಿಗೆ ಹುತಾತ್ಮ ಪಟ್ಟ ಕೊಡುತ್ತಿದ್ದಾರೆ. ಅದೇ ಸಮಯದಲ್ಲಿ ಯಡಿಯೂರಪ್ಪನವರನ್ನು ಪದಚ್ಯುತಿಗೊಳಿಸುವ ಮೂಲಕ ಉತ್ತರ ಭಾರತೀಯ ಬ್ರಾಹ್ಮಣೀಯ ಶಕ್ತಿಗಳು ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ಪ್ರಾದೇಶಿಕ ಹಾಗೂ ಜನಪರ ಲಿಂಗಾಯತ ಧರ್ಮ ಹಾಗೂ ಮಠಗಳ ಬ್ರಾಹ್ಮಣ್ಯ ವಿರೋಧಗಳನ್ನೂ ಮಟ್ಟ ಹಾಕಿದಂತಾಗಿದೆ ಎಂದು ವಿವರಿಸಲಾಗುತ್ತಿದೆ ಹಾಗೂ ಯಡಿಯೂರಪ್ಪನವರ ಕಣ್ಣೀರಿಗೆ ಹಲವು ಜನಪರ ಸೈದ್ಧಾಂತಿಕ ಆಯಾಮಗಳನ್ನೂ ಕೊಡಲಾಗುತ್ತಿದೆ. ಇದರ ತಾತ್ಪರ್ಯ ಯಡಿಯೂರಪ್ಪನವರು ರಾಜಕಾರಣಕ್ಕೆ ಬಂದಿದ್ದೇ ಹಿಂದುತ್ವ ರಾಜಕಾರಣವನ್ನು ವಿರೋಧಿಸಲು ಎಂದಾಗಿಬಿಡುತ್ತದೆ. ಅದರಿಂದ ಅವರೇ ದಿಗಿಲುಬೀಳಬಹುದು!.

ಮೇಲಾಗಿ ಪ್ರಧಾನಿ ಮೋದಿಯಿಂದ ಹಿಡಿದು ತಳಹಂತದ ಕಾರ್ಪೊರೇಟರುಗಳ ತನಕ ಬಿಜೆಪಿ ಮಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಗಳು ಕಾಂಗ್ರೆಸಿಗರನ್ನು ನಾಚಿಸುವಂತಿದೆ. ಹೀಗಾಗಿ ಇಂತಹ ವಾದಗಳು ಆರೆಸ್ಸೆಸ್-ಬಿಜೆಪಿಗಳು ಭ್ರಷ್ಟಾಚಾರ ವಿರೋಧಿಗಳೆಂಬ ಅಪಪ್ರಚಾರವನ್ನು ಗಟ್ಟಿಗೊಳಿಸಿಬಿಡುತ್ತವೆ. ಅದು ನಿಜವೂ ಅಲ್ಲ. ಯಡಿಯೂರಪ್ಪನವರ ಭ್ರಷ್ಟಾಚಾರಗಳು ಹಿಂದುತ್ವ ವಿರೋಧಿ ಹೋರಾಟಕ್ಕೆ ಮಾಡಿಕೊಂಡ ಹೊಂದಾಣಿಕೆಗಳೂ ಅಲ್ಲ. ಅದೇ ರೀತಿ ಇಡೀ ಅಧಿಕಾರಾವಧಿಯಲ್ಲಿ ಅವರು ಜಾರಿಗೆ ತಂದ ಹಿಂದುತ್ವ ಹಾಗೂ ಕಾರ್ಪೊರೇಟ್ ಪರ ನೀತಿಗಳು ಅವರ ಪ್ರಜ್ಞಾಪೂರ್ವಕ ಆಯ್ಕೆಗಳೇ ವಿನಾ ಹೊಂದಾಣಿಕೆಗಳಲ್ಲ. 2008ರಲ್ಲಿ ಚರ್ಚ್ ದಾಳಿಗಳು, 2020ರಲ್ಲಿ ಬೆಂಗಳೂರಿನ ಡಿಜೆ ಹಳ್ಳಿ ಹಿಂಸಾಚಾರದಲ್ಲಿ ಅಸಲಿ ಆರೋಪಿಗಳನ್ನು ಬಂಧಿಸದೆ ಅಮಾಯಕ ಮುಸ್ಲಿಮರನ್ನು ಬಂಧಿಸಿ ಅವರ ಮೇಲೆ ಭಯೋತ್ಪಾದಕ ಕಾಯ್ದೆಗಳನ್ನು ಜಡಿದದ್ದು, ಗೋಹತ್ಯಾ ನಿಷೇಧ ಕಾಯ್ದೆಯನ್ನು ಶತಾಯ ಗತಾಯ ಜಾರಿಗೆ ತಂದದ್ದು, ಟಿಪ್ಪುಜಯಂತಿಯನ್ನು ರದ್ದುಗೊಳಿಸಿದ್ದು, ಇಡೀ ದೇಶದಲ್ಲೇ ಮೊದಲಿಗರಾಗಿ ದಲಿತ ವಿರೋಧಿ ನವ ಶಿಕ್ಷಣ ನೀತಿ ಜಾರಿ ಮಾಡುತ್ತಿರುವುದು, ಕಾರ್ಪೊರೇಟ್ ಪರ ಕೃಷಿ ಹಾಗೂ ಕೈಗಾರಿಕಾ ನೀತಿಗಳನ್ನು ಜಾರಿಗೊಳಿಸುತ್ತಿರುವುದೆಲ್ಲದರ ಹಿಂದೆ ಆರೆಸ್ಸೆಸ್‌ನ ಒತ್ತಡವಿತ್ತೆಂದು ಭಾವಿಸಿದರೆ ಮೋದಿ ಆಡಳಿತದ ಕಾಲದ ಗುಜರಾತ್ ನರಮೇಧದ ಹಿಂದೆಯೂ, ಯೋಗಿ ಉತ್ತರ ಪ್ರದೇಶದಲ್ಲಿ ನಡೆಸುತ್ತಿರುವ ಹತ್ಯಾಕಾಂಡದ ಹಿಂದೆಯೂ ಒತ್ತಡವಿತ್ತೆಂದು ಭಾವಿಸಬೇಕಾಗುತ್ತದೆ.

ಶೂದ್ರತ್ವದಿಂದ ಹಿಂದುತ್ವದೆಡೆಗೆ..

ಹಾಗೆಯೇ ಐತಿಹಾಸಿಕವಾಗಿ ಬಸವ ಧರ್ಮದ ಹುಟ್ಟು ಮತ್ತು ಹೋರಾಟಗಳು ಐತಿಹಾಸಿಕವಾಗಿ ಬ್ರಾಹ್ಮಣ್ಯದ ವಿರುದ್ಧ ಇದ್ದರೂ ಇಂದು ಅವುಗಳು ಅದೇ ರೀತಿ ಇವೆಯೇ? ವೈದಿಕ ಧರ್ಮಕ್ಕೆ ಬಂಡಾಯವಾಗಿ ಹುಟ್ಟಿಕೊಂಡ ಬಸವ-ಲಿಂಗಾಯತ ತಾತ್ವಿಕತೆ ಕ್ರಾಂತಿಕಾರಿಯಾಗಲು ಸಾಧ್ಯವಾದದ್ದು ಸಮಾನತೆಯ ನೆಲೆಯಲ್ಲಿ ಅತ್ಯಂತ ಶೋಷಿತರನ್ನೂ ಒಳಗೊಂಡಿದ್ದಕ್ಕೆ ಹಾಗೂ ಆ ತತ್ವಕ್ಕೆ ಅಡ್ಡಿಯಾದಾಗ ಪ್ರಭುತ್ವದ ವಿರುದ್ಧ ಬಂಡಾಯವೆದ್ದಿದ್ದಕ್ಕೆ. ಆನಂತರ ಲಿಂಗಾಯತದ ಒಂದು ‘ಬಳಿ’ ಸ್ಥಾವರಗೊಂಡರೂ ಬಸವ ಧರ್ಮ ಜಂಗಮದಲ್ಲಿ ಉಳಿದುಕೊಂಡಿದ್ದು ಮಂಟೇಸ್ವಾಮಿ, ತಿಪ್ಪೇಸ್ವಾಮಿಯಂತಹ ಅತ್ಯಂತ ಶೋಷಿತ-ದಮನಿತ ಸಮುದಾಯಗಳಲ್ಲಿ. ಕಳೆದುಕೊಳ್ಳಲು ಏನೂ ಇಲ್ಲದ ಜಂಗಮತ್ವದಿಂದ ಕೆಂಡದಂಥ ಸತ್ಯಗಳನ್ನು ಹೇಳಲು-ಬದುಕಲು ಸಾಧ್ಯವಾಗುತ್ತದೆ. ಆದರೆ ಕಾಲಕ್ರಮೇಣ ಲಿಂಗಾಯತದ ಗ್ರಾಮೀಣ ಊಳಿಗಮಾನ್ಯ-ಪಾಳೇಗಾರಿ ಶಕ್ತಿಗಳ ಮತಾಚಾರವಾಗಿ ಸ್ಥಾವರವಾಯಿತು.

ಕರ್ನಾಟಕದ ಗ್ರಾಮೀಣದಲ್ಲಿ ಜಾತಿ ಶ್ರೇಣೀಕರಣಗಳು ಗಟ್ಟಿಯಾಗಿಸುವುದರಲ್ಲಿ, ಅಸ್ಪೃಶ್ಯ ದಲಿತರು ಜಾತಿ ಸಂಹಿತೆಯನ್ನು ಉಲ್ಲಂಘಿಸದಂತೆ ಕಾವಲು ಕಾದು ವೈದಿಕ ವರ್ಣಾಶ್ರಮವನ್ನು ಉಳಿಸಿಕೊಳ್ಳುವಲ್ಲಿ ಪ್ರತಿಷ್ಠಿತ ವೀರಶೈವ-ಲಿಂಗಾಯತ ಮಠಗಳ ಕೊಡುಗೆಗಳು ಕಡಿಮೆ ಏನಲ್ಲ. ವಾಸ್ತವದಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷದ ಹುಟ್ಟಿನಲ್ಲಿ ಉತ್ತರ ಕರ್ನಾಟಕದ ಲಿಂಗಾಯತರ ಭೂಮಾಲಕ ವರ್ಗಗಳು ಆಸಕ್ತಿ ತೋರಲು ಕಾರಣ ಕಾಂಗ್ರೆಸ್‌ನ ದೇವರಾಜ ಅರಸು ಭೂ ಸುಧಾರಣೆ ಕಾಯ್ದೆಗಳನ್ನು ಜಾರಿ ಮಾಡಿದ್ದು ಹಾಗೂ ಆವರೆಗೆ ಮೇಲ್ಜಾತಿಗಳ ಮನೆಯಾಗಿದ್ದ ರಾಜಕೀಯ ವಠಾರದಲ್ಲಿ ಹಿಂದುಳಿದ ಹಾಗೂ ದಲಿತರು ಓಡಾಡುವಂತೆ ಆಗಿದ್ದು. ಲಿಂಗಾಯತ ಭೂಮಾಲಕ ಶಕ್ತಿಗಳ ಈ ವಿರೋಧವನ್ನು ಹರಳುಗಟ್ಟಿಸಿದ್ದು ಪ್ರತಿಷ್ಠಿತ ವಿರಕ್ತ ಮಠಗಳೇ. ಮುಂದೆ ಸೈದ್ಧಾಂತಿಕವಾಗಿ ಮೇಲ್ಜಾತಿ ಪಾರಮ್ಯವನ್ನು ಹಿಂದುತ್ವದ ಹೆಸರಲ್ಲಿ ರಕ್ಷಿಸುವ ಬಿಜೆಪಿಯಂತಹ ಪಕ್ಷವೇ ಎದುರಿಗೆ ಬಂದಾಗ ಲಿಂಗಾಯತ ಸಮುದಾಯದಲ್ಲಿದ್ದ ಊಳಿಗಮಾನ್ಯ ಶಕ್ತಿಗಳು ಸಹಜವಾಗಿ ಬಿಜೆಪಿಯನ್ನು ಸೇರಿಕೊಂಡವು. ಹೀಗಾಗಿ ವೀರಶೈವ-ಲಿಂಗಾಯತರಲ್ಲಿದ್ದ ಊಳಿಗಮಾನ್ಯ ಶಕ್ತಿಗಳಿಗೆ ಹಿಂದುತ್ವ ರಾಜಕಾರಣ ಸಹಜ ಹಾಗೂ ಸಾವಯವ ಆಯ್ಕೆಯೇ ಆಗಿತ್ತು ಮತ್ತು ಅದಕ್ಕೆ ಕಾರಣ ದಲಿತ ವಿರೋಧಿ ಮೇಲ್ಜಾತಿ ರಾಜಕಾರಣ ಎಂಬುದನ್ನು ಮರೆಯುವಂತಿಲ್ಲ. ಇದರ ನಡುವೆ ಲಕ್ಷಾಂತರ ಲಿಂಗಾಯತ ಬಡ ರೈತಾಪಿ ಸ್ವತಂತ್ರ ಆಯ್ಕೆ ಮಾಡುವ ಶಕ್ತಿ ಇಲ್ಲದ್ದರಿಂದ ತಮ್ಮವರನ್ನು ಅನುಸರಿಸಿದರು. ಈ ಎಲ್ಲದರ ನಡುವೆಯೂ, ಈ ಪ್ರಕ್ರಿಯೆಗಳಿಗೆ ಭಿನ್ನವಾದ ಕೆಲವು ಜನಪರವಾದ ವ್ಯಕ್ತಿಗತ ಮತ್ತು ಸಾಂಸ್ಥಿಕ ಪ್ರಯತ್ನಗಳಿದ್ದದ್ದೂ ಸತ್ಯವೇ. ಆದರೆ ಅವು ಪ್ರಧಾನ ಧಾರೆಯಾಗಿರಲಿಲ್ಲ. ಆಧುನಿಕ ಸಂದರ್ಭದಲ್ಲಿ ಶೈಕ್ಷಣಿಕ ಸಂಸ್ಥಾನಗಳನ್ನು ಕಟ್ಟಿಕೊಂಡು ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿರುವ ಪ್ರಮುಖ ಲಿಂಗಾಯತ ಮಠಗಳಂತೂ ಈಗ ಕಾರ್ಪೊರೇಟ್ ಉದ್ಯಮಿಗಳೇ ಆಗಿವೆ. ಹೀಗಾಗಿ ಅದರ ರಕ್ಷಣೆ ಮತ್ತು ವಿಸ್ತರಣೆಗೆ ಕಾರ್ಪೊರೇಟ್ ಆರ್ಥಿಕತೆಯ ಪರವಾಗಿರುವ ಸರಕಾರಗಳ ನೀತಿ ಮತ್ತು ಬೆಂಬಲಗಳ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಅವು ಒಟ್ಟಾಗಿ ಯಡಿಯೂರಪ್ಪನವರನ್ನು ಬೆಂಬಲಿಸಿದವು. ಈಗ ಅವಕ್ಕೆ ತಮ್ಮ ಕಾರ್ಪೊರೇಟ್ ಶೈಕ್ಷಣಿಕ ಸಾಮ್ರಾಜ್ಯದ ಆಸಕ್ತಿಯನ್ನು ಬಲಿಗೊಟ್ಟು ಯಡಿಯೂರಪ್ಪನವರ ಪರವಾಗಿ ನಿಲ್ಲುವುದಕ್ಕೆ ಕಾರಣವೂ ಇಲ್ಲ. ಉದ್ದೇಶವೂ ಇಲ್ಲ.

ಹಿಂದುತ್ವದ ಕಾಮನಬಿಲ್ಲು ಮತ್ತು ಶೂದ್ರ ರಾಜಕಾರಣ

ಹಾಗೆ ನೋಡಿದರೆ ಹಿಂದುತ್ವ ರಾಜಕಾರಣಕ್ಕೆ ಐತಿಹಾಸಿಕವಾಗಿ ಜೈನ, ಬುದ್ಧ, ಸಿಖ್ ಹಾಗೂ ಬಸವ ಧರ್ಮಗಳು ಹಾಗೂ ದಕ್ಷಿಣದಲ್ಲಿ ದ್ರಾವಿಡ ಅಸ್ಮಿತೆಗಳು, ನಾರಾಯಣಗುರು ಸಿದ್ಧಾಂತಗಳು ಸವಾಲನ್ನು ಹಾಕಿದ್ದವು. ಆದರೆ ಹಿಂದೂ ರಾಜಕಾರಣವು ಜೈನವನ್ನು ತುಂಬಾ ಹಿಂದೆಯೇ ವೈದಿಕೀಕರಿಸಿಬಿಟ್ಟವು. ಬುದ್ಧನನ್ನು ದೇಶ ಬಿಟ್ಟು ಓಡಿಸಿ ಶತಮಾನಗಳಾಯಿತು. ಆದರೆ 1990ರ ನಂತರದಲ್ಲಿ ರಾಮ ಜನ್ಮಭೂಮಿ ವಿಷಯವನ್ನು ಮುಂದಿಟ್ಟುಕೊಂಡು ಹಿಂದುತ್ವ ರಾಜಕಾರಣವು ದಲಿತ-ಶೂದ್ರರಲ್ಲಿ ತನ್ನ ಸಾಮಾಜಿಕ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಂತೆ ತನಗೆ ತಾತ್ವಿಕವಾಗಿ ಎದುರಾಳಿಯಾಗಿದ್ದ ದ್ರಾವಿಡ, ನಾರಾಯಣ ಗುರು, ಸಿಖ್ ಹಾಗೂ ಅಂಬೇಡ್ಕರ್ ತಾತ್ವಿಕತೆಗಳನ್ನು ಹಿಂದುತ್ವ ರಾಜಕಾರಣಕ್ಕೆ ಪೂರಕವಾಗಿ ಹೊಸೆದು ಮುಂದಿಡಬೇಕಾದ ಅಗತ್ಯ ಎದುರಾಯಿತು. ಈ ಸಮುದಾಯಗಳ ಪ್ರಬಲ ಹಾಗೂ ಪ್ರಭಾವಿ ವರ್ಗಗಳು ಬ್ರಾಹ್ಮಣೀಕರಣಗೊಂಡಿದ್ದು ಹಿಂದುತ್ವ ರಾಜಕಾರಣಕ್ಕೆ ಅವುಗಳಲ್ಲಿ ಒಂದು ಸಾಮಾಜಿಕ ನೆಲೆಯನ್ನು ಒದಗಿಸಿತು ಹಾಗೂ ಆ ಸಮುದಾಯಗಳ ಪ್ರತಿಷ್ಠಿತರು ಕೂಡಾ 70ರ ದಶಕದ ಕಾಂಗ್ರೆಸ್‌ನ ದಲಿತ ಪರ ಘೋಷಣೆಗಳು ಹಾಗೂ ಅರೆಬರೆ ಭೂ ಸುಧಾರಣೆಗಳಿಂದ ಖತಿ ಗೊಂಡಿದ್ದರು. ಸಿಖ್ ಧರ್ಮದ ವಿಷಯದಲ್ಲಂತೂ ನದಿ ನೀರು ಹಂಚಿಕೆ, ಬ್ಲೂ ಸ್ಟಾರ್ ಆಪರೇಷನ್ ಇತ್ಯಾದಿಗಳು ಸಹಜವಾದ ಕಾಂಗ್ರೆಸ್ ವಿರೋಧವನ್ನು ಹುಟ್ಟು ಹಾಕಿದವು.

ಈ ಕಾಂಗ್ರೆಸ್ ವಿರೋಧಿ ರಾಜಕೀಯವೂ ಬಿಜೆಪಿಯ ಹಿಂದುತ್ವ ರಾಜಕಾರಣದೊಡನೆ ಶಾಮೀಲಾಗಲು ಒಂದು ಸಮಾನ ಬಿಂದುವನ್ನು ನೀಡಿತು. ಜೊತೆಗೆ ಈ ಎಲ್ಲಾ ಎದುರಾಳಿ ಅಸ್ಮಿತೆಗಳ ನಾಯಕರನ್ನು ತನ್ನ ನಾಯಕ ಶ್ರೇಣಿಯಲ್ಲಿ ಒಳಗೊಳ್ಳುವ ಹೊಸ ಕುತಂತ್ರವನ್ನು ಎಗ್ಗುಸಿಗ್ಗಿಲ್ಲದೆ ಮಾಡಿದ ಹಿಂದುತ್ವ ರಾಜಾಕಾರಣ ತನ್ನ ಚಾಮರದ ಕೆಳಗೆ ಹಿಂದುತ್ವ ವಿರೋಧಿ ತಾತ್ವಿಕತೆಯನ್ನೂ ಯಶಸ್ವಿಯಾಗಿ ಒಳಗೊಂಡುಬಿಟ್ಟಿತು. ಹೀಗಾಗಿಯೇ ಬಿಜೆಪಿಯ ವಾಜಪೇಯಿ ನೇತೃತ್ವದ ಮೊದಲ ಎನ್‌ಡಿಎ ಸರಕಾರದಿಂದಲೂ ಬಿಜೆಪಿಯ ಜೊತೆಗೆ ಸಿಖ್ ಅಸ್ಮಿತೆಯ ಶಿರೊಮಣಿ ಅಕಾಲಿ ದಳ, ದ್ರಾವಿಡ ಅಸ್ಮಿತೆಯ ಡಿಎಂಕೆ, ಅಣ್ಣಾ ಡಿಎಂಕೆಗಳು ಹಾಗೂ ಬಿಎಸ್‌ಪಿ ಸಹ ಜೊತೆಗೂಡಿದ್ದವು ಎಂಬುದನ್ನು ಮರೆಯುವಂತಿಲ್ಲ. ಇದು ಕಾಕತಾಳೀಯವೂ ಅಲ್ಲ. ಇದು ಸಾಧ್ಯವಾದದ್ದು ಈ ಶೂದ್ರ ದ್ರಾವಿಡ ರಾಜಕಾರಣದಲ್ಲಿ, ಸಿಖ್ ಜಾಟ್ ರಾಜಕಾರಣದಲ್ಲಿ, ಲಿಂಗಾಯತ ಭೂ ಮಾಲಕ ರಾಜಕಾರಣದಲ್ಲಿ ಅಂತರ್ಗತವಾಗಿ ಇದ್ದ ಜಾತಿ ಮೇಲರಿಮೆ ಹಾಗೂ ದಲಿತ ವಿರೋಧಿ ಅಸ್ಮಿತೆಗಳೇ ಆಗಿವೆ. ಹೀಗಾಗಿ ಅವುಗಳು ಜಾತಿ ಮೇಲರಿಮೆಯನ್ನು ಕಾಪಿಡುವ ಹಾಗೂ ಅವುಗಳ ವರ್ತಮಾನದ ಕಾರ್ಪೊರೇಟ್ ಹಿತಾಸಕ್ತಿಗಳನ್ನು ರಕ್ಷಿಸುವ ಹಿಂದುತ್ವ ರಾಜಕಾರಣ ಜಾತಿ ಮೇಲರಿಮೆಯುಳ್ಳ ಶೂದ್ರ ರಾಜಕಾರಣಕ್ಕೆ ಎದುರಾಳಿಯಾಗಿ ಉಳಿದಿಲ್ಲ. ಇದು ವರ್ತಮಾನದ ಸತ್ಯಗಳು.

ಹೀಗಾಗಿ ಒಂದು ಪ್ರಬಲವಾದ ಹಾಗೂ ತಳಮಟ್ಟದ ದಮನಿತ ಜನರ ನೆಲೆಯಿಂದ ಪ್ರಾರಂಭಗೊಳ್ಳುವ ವಿಮೋಚನಾವಾದಿ ರಾಜಕಾರಣ ಮಾತ್ರ ಹಿಂದುತ್ವವನ್ನು ತಾತ್ವಿಕವಾಗಿ ಹಾಗೂ ರಾಜಕೀಯವಾಗಿ ಸೋಲಿಸಬಹುದು. ಒಂದು ಕಾಲದಲ್ಲಿ ಆ ಪಾತ್ರವನ್ನು ವಹಿಸಿ ಈಗ ತಾವೇ ಶೋಷಕರಾಗಿ ಬದಲಾಗಿರುವ ಹಳೆಯ ನೆರಳುಗಳಿಂದ ಅದನ್ನು ಅಪೇಕ್ಷಿಸುವುದು ಆತ್ಮಾಘಾತುಕ.

ಮಂದ ಹಿಂದುತ್ವದಿಂದ ಉಗ್ರ ಹಿಂದುತ್ವದೆಡೆಗೆ?
ಎರಡನೆಯದು: ಯಡಿಯೂರಪ್ಪನವರು ರೈತ ಚಳವಳಿಯ ಹಿನ್ನೆಲೆಯಿಂದ ಬಂದವರು ಹಾಗೂ ಹಿಂದುತ್ವವನ್ನು ವಿರೋಧಿಸುವ ಲಿಂಗಾಯತ ಹಿನ್ನೆಲೆಯಿಂದ ಬಂದವರು. ಹೀಗಾಗಿ ಆರೆಸ್ಸೆಸ್‌ನ ಅಜೆಂಡಾಗಳಿಗೆ ಸ್ವಲ್ಪವಾದರೂ ಬ್ರೇಕ್ ಹಾಕಿದ್ದರು. ಆದರೆ ಈಗ ಬರುವ ಹೊಸ ಮುಖ್ಯಮಂತ್ರಿ ಹಿಂದುತ್ವ ರಾಜಕಾರಣವನ್ನು ಇನ್ನಷ್ಟು ಉಗ್ರವಾಗಿ ಜಾರಿ ಮಾಡುತ್ತಾರೆ ಎಂಬ ಆತಂಕ.
ಮೊದಲನೆಯದಾಗಿ ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಆರೆಸ್ಸೆಸ್‌ನ ಯಾವುದೇ ಅಜೆಂಡಾಗಳನ್ನು ವಿರೋಧಿಸಿರಲಿಲ್ಲ ಮತ್ತು ಎಲ್ಲರಿಗಿಂತ ಉತ್ಸಾಹದಿಂದ ಜಾರಿಗೊಳಿಸಿದ್ದರು ಎಂಬುದಕ್ಕೆ ಹತ್ತಾರು ಉದಾಹರಣೆಗಳಿವೆ.

ಎರಡನೆಯದಾಗಿ ಬ್ರಾಹ್ಮಣ ಹಿನ್ನೆಲೆಯಿಲ್ಲದವರು ಆರೆಸ್ಸೆಸ್‌ನ ಅಜೆಂಡಾಗಳಿಗೆ ಅಷ್ಟು ಪೂರಕವಾಗಿರುವುದಿಲ್ಲ ಎಂಬ ಹುಂಬ ನಂಬಿಕೆ ಇದರ ಹಿಂದಿದೆ. ಆ ಲೆಕ್ಕದಲ್ಲಿ ನರೇಂದ್ರ ಮೋದಿ ಮತ್ತು ಆದಿತ್ಯನಾಥರೂ ಬ್ರಾಹ್ಮಣ್ಯದ ಅಮಾಯಕ ಗೇಟ್ ಕೀಪರುಗಳು ಎಂದಾಗಿಬಿಡುತ್ತದೆ. ಅದು ನಿಜವಲ್ಲ. ಈ ಸಮಾಜದ ಮೇಲ್ಚಲನೆ ಉಳ್ಳ ಎಲ್ಲಾ ಸಮುದಾಯಗಳ ಪ್ರಬಲ ವರ್ಗಗಳು ಈ ಕಾರ್ಪೊರೇಟ್- ಹಿಂದುತ್ವ ವ್ಯವಸ್ಥೆಯ ಪ್ರಜ್ಞಾಪೂರ್ವಕ ಸ್ಟೇಕ್ ಹೋಲ್ಡರ್ಸುಗಳೇ ಆಗಿದ್ದಾರೆ. ಫಲಾನುಭವಿಗಳೂ, ಚಾಲಕರೂ ಆಗಿದ್ದಾರೆ. ಅವರ ಹುಟ್ಟು ಮತ್ತು ಹಿನ್ನೆಲೆ ಏನೇ ಇದ್ದರೂ ಅವರ ವರ್ತಮಾನದ ಬದುಕು, ಆಶಯಗಳೆಲ್ಲವೂ ಹಿಂದುತ್ವ-ಕಾರ್ಪೊರೇಟ್ ವ್ಯವಸ್ಥೆಯೊಂದಿಗೆ ಬೆರೆತುಕೊಂಡಿದೆ. ಹೀಗಾಗಿ ಬಸವರಾಜ ಬೊಮ್ಮಾಯಿ, ಸಿ.ಟಿ. ರವಿ, ನಿರಾಣಿ, ಕಾರಜೋಳ ರವರೇ ಮುಖ್ಯಮಂತ್ರಿಗಳಾದರೂ ಅಥವಾ ಜೋಶಿ, ಸಂತೋಷ್‌ರೆೇ ಮುಖ್ಯಮಂತ್ರಿ ಗಳಾದರೂ ಬರಲಿರುವ ದಿನಗಳಲ್ಲಿ ಹಿಂದುತ್ವದ ಅಜೆಂಡಾಗಳನ್ನೂ ಮೋದಿ ಮತ್ತು ಆದಿತ್ಯನಾಥರಷ್ಟೇ ಬಿರುಸಾಗಿ ಮತ್ತು ಕ್ರೂರವಾಗಿ ಜಾರಿಗೆ ತರಲಿದ್ದಾರೆ. ಏಕೆಂದರೆ, 2019ರ ಚುನಾವಣೆಯಲ್ಲಿ ಮೊದಲಿಗಿಂತ ಅಧಿಕ ಜನಬೆಂಬಲವನ್ನು ಪಡೆದುಕೊಂಡ ನಂತರ ಆರೆಸ್ಸೆಸ್-ಬಿಜೆಪಿಯ ಸ್ಟ್ರಾಟೆಜಿಗಳು ಬದಲಾಗಿವೆ. ಉದಾಹರಣೆಗೆ ಕರ್ನಾಟಕದ ಲಿಂಗಾಯತ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದ ಪ್ರಬಲ ಸ್ತರಗಳು ನೇರವಾಗಿ ಮೋದಿತ್ವದ ಪ್ರಭಾವಕ್ಕೆ ಒಗ್ಗಿರುವುದು ಖಾತರಿಯಾಗಿದೆ. ಹೀಗಾಗಿ 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ ಅಲ್ಪಸ್ವಲ್ಪವೆಲ್ಫೇರಿಸಂ ಇರುವ ಉಗ್ರ ಕೋಮುವಾದಿ ರಾಜಕಾರಣಕ್ಕೆ ಭೂಮಿಕೆ ಸಿದ್ಧಗೊಳಿಸಿಕೊಳ್ಳುತ್ತಿವೆ. ಅದಕ್ಕೆ ಬೇಕಿರುವ ಮುಖಗಳನ್ನು ಮುಖವಾಡಗಳನ್ನು ರಾಜ್ಯಗಳಲ್ಲಿ ಸ್ಥಾಪಿಸುತ್ತಿವೆ. ಆ ಪಾತ್ರಗಳಿಗೆ ಅಷ್ಟು ಸೂಕ್ತರಲ್ಲದವರಿಗೆ ರಾಜ್ಯಪಾಲರಂಥ ಬೇರೆ ಪಾತ್ರಗಳನ್ನು ಕೊಡುತ್ತಿದ್ದಾರೆ. ಹಳೆಯ ಪಾತ್ರವೇ ಬೇಕು ಎಂದು ಹಠ ಹಿಡಿದವರನ್ನು ಸಾಮ, ದಂಡಗಳ ಮೂಲಕ ಇಳಿಸುತ್ತಿದ್ದಾರೆ.

ಹತಾತ್ಮರು ಹುತಾತ್ಮರಲ್ಲ-ಜನಸಮರವಿಲ್ಲದೆ ಹಿಂದುತ್ವ ಸೋಲುವುದಿಲ್ಲ 

ಹೀಗಾಗಿ ಯಡಿಯೂರಪ್ಪನವರ ಪದಚ್ಯುತಿಯ ಬಗ್ಗೆ ಕಣ್ಣೀರಿಡುವುದನ್ನು ನಿಲ್ಲಿಸೋಣ. ಲಿಂಗಾಯತ ಮಠಗಳಲ್ಲಿ ಇಲ್ಲದ ಬಸವನನ್ನು ಹುಡುಕುವುದನ್ನು, ಶೂದ್ರ ನಾಯಕರುಗಳಿಗೆ ಇಲ್ಲದ ಶೂದ್ರ ಪ್ರಜ್ಞೆಯನ್ನು ಆರೋಪಿಸುವುದನ್ನು ನಿಲ್ಲಿಸಿ, ಈ ಕಾರ್ಪೊರೇಟ್-ಬ್ರಾಹ್ಮಣ್ಯ ವ್ಯವಸ್ಥೆಯಿಂದ ವರ್ತಮಾನದಲ್ಲಿ ಶೋಷಿತರಾಗುತ್ತಿರುವ ಎಲ್ಲಾ ದಲಿತ ದಮನಿತ ಸಮುದಾಯವನ್ನು ವರ್ತಮಾನದ ವಿಮೋಚನಾ ತಾತ್ವಿಕತೆಯಲ್ಲಿ ಬೆಸೆಯಲು ಮುಂದಾಗಬೇಕಿದೆ. ಅಷ್ಟೇ ವಿಷಯ. ಬದಲಿರುವ ಕರಾಳ ದಿನಗಳನ್ನು ಜನರ ಬಲವಾದ ಶಕ್ತಿಯಿಂದ ಎದುರಿಸಲು ಸಿದ್ಧಾವಾಗಬೇಕೇ ವಿನಾ ಹತಾತ್ಮರನ್ನು ಹುತಾತ್ಮರಾಗಿಸುವುದರಿಂದಲ್ಲ ಅಲ್ಲವೇ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top