ಓದಲೇಬೇಕಾದ ಪುಸ್ತಕಗಳು | Vartha Bharati- ವಾರ್ತಾ ಭಾರತಿ

--

ಓದಲೇಬೇಕಾದ ಪುಸ್ತಕಗಳು

ಈಚೆಗಂತೂ ಪುಸ್ತಕಗಳ ಕುರಿತು ಮಾಹಿತಿಗಿಂತ ಜಾಹೀರಾತೇ ಹೆಚ್ಚಾಗಿದೆ. ‘ಓದಲೇಬೇಕಾದ’ ಪುಸ್ತಕಗಳೇ ಪ್ರಕಟವಾಗುತ್ತಿವೆ. ಬದುಕನ್ನೇ ಬದಲಾಯಿಸಬಲ್ಲ, ನಿಮ್ಮ ಚಿಂತನೆಗೆ ಸವಾಲಾಗಬಲ್ಲ, ಎಂದೂ ಮರೆಯದ, ಸಾಹಿತ್ಯದಲ್ಲಿ ಮೈಲಿಗಲ್ಲಾಗಬಲ್ಲ, ರೋಚಕ, ರೋಮಾಂಚನ ಕೃತಿಗಳೆಂಬ ಶಿರೋನಾಮೆ ಪುಸ್ತಕದ ಹೊರಕವಚದಲ್ಲಿ ಅಲ್ಲದಿದ್ದರೂ ಅವುಗಳ ಪರಿಚಯದಲ್ಲಿರುತ್ತವೆ. ಪರಸ್ಪರ ಸಹಾಯ, ಸಹಾನುಭೂತಿಯ ಪುಸ್ತಕ ಪರಿಚಯ, ವಿಮರ್ಶೆಗಳೂ ಸಾಮಾನ್ಯವೆನಿಸಿವೆ. ರಾಜಕೀಯದಂತೆ ಇಲ್ಲೂ ಮಾರ್ಗದರ್ಶಕ ಮಂಡಳಿಗಳು ಸ್ಥಾಪಿತ ಹಿತಾಸಕ್ತಿಯನ್ನು ಹೆಚ್ಚಿಸುತ್ತಿವೆ.


ಇದನ್ನು ಜಿಜ್ಞಾಸೆ ಅನ್ನಿ; ಹರಟೆ ಎಂದು ಬೇಕಾದರೂ ಅನ್ನಿ. ಆದರೆ ನನಗೆದುರಾದ ಸಮಸ್ಯೆ ಎಂದರೆ ‘ಓದಲೇಬೇಕಾದ ಪುಸ್ತಕವೆಂಬುದಿದೆಯೇ?’ ಎಂಬುದು. ಇದಕ್ಕೆ ಕಾರಣವೆಂದರೆ ಇಂದು ಮಾಧ್ಯಮಗಳಲ್ಲಿ ಬರುವ ಪುಸ್ತಕ ಪರಿಚಯ, ವಿಮರ್ಶೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಕಾಶಕರು ಪುಸ್ತಕಗಳ ಕುರಿತು ಪ್ರಕಟಿಸುವ ಜಾಹೀರಾತುಗಳಲ್ಲಿ ಮತ್ತು ಪುಸ್ತಕಗಳ ಹಿನ್ನುಡಿ, ಮುನ್ನುಡಿ, ಬೆನ್ನುಡಿಗಳಲ್ಲಿ ಬರುವ ‘ಇದು ನೀವು ಅಗತ್ಯ ಓದಲೇಬೇಕಾದ ಪುಸ್ತಕ’ ಎಂಬ ವಾಕ್ಯ.

 ಇಂತಹ ಪರಿಸ್ಥಿತಿ ಹಿಂದೆ ಇತ್ತೆಂದು ಅನ್ನಿಸುವುದಿಲ್ಲ. ಪುಸ್ತಕಗಳು ಮುದ್ರಣವಾಗಲು ಆರಂಭವಾದಂದಿನಿಂದ ಇತ್ತೀಚಿನವರೆಗೂ ಪುಸ್ತಕಗಳನ್ನು ಕೊಂಡು ಓದುತ್ತಿದ್ದೆವು; ಕೆಲವನ್ನು ಗೆಳೆಯರೋ ಹಿತೈಷಿಗಳೋ ಮುಫತ್ತಾಗಿ ನೀಡುತ್ತಿದ್ದರು; ಇನ್ನು ಕೆಲವು ಬಾರಿ ಪುಸ್ತಕ ಸಂಸ್ಕೃತಿಯ ಒತ್ತಾಸೆಯಿಂದ ಕೆಲವರು ಪುಸ್ತಕಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಉಡುಗೊರೆಯಾಗಿ ನೀಡುತ್ತಿದ್ದರು. ಒಟ್ಟಿನಲ್ಲಿ ಪುಸ್ತಕವು ಹಣದಂತಲ್ಲದಿದ್ದರೂ ಒಬ್ಬರಿಂದ ಇನ್ನೊಬ್ಬರಿಗೆ ಚಲಾವಣೆಯಾಗುತ್ತಿತ್ತು. ಸರಕಾರ ಮತ್ತು ಸಾರ್ವಜನಿಕ ಸಂಸ್ಥೆಗಳ ಗ್ರಂಥಾಲಯಗಳಲ್ಲಿ ತುಂಬಿಕೊಂಡ ಪುಸ್ತಕಗಳು ಅನೇಕರ ಬೌದ್ಧಿಕ, ಭಾವನಾತ್ಮಕ, ವೈಚಾರಿಕ ಹಸಿವನ್ನು ನೀಗುತ್ತಿದ್ದವು. ಇವುಗಳಲ್ಲಿ ಯಾವುದು ಅಗತ್ಯ, ಯಾವುದು ಐಚ್ಛಿಕ ಮತ್ತು ಯಾವುದು ಓದಬಾರದ್ದು ಅಥವಾ ಓದಲಾಗದ್ದು ಎಂಬುದನ್ನು ಓದುಗರು ಅಥವಾ ಅವರಿಗೆ ಮಾರ್ಗದರ್ಶನ ಮಾಡುವವರು ಹೇಳಬಹುದಿತ್ತು. ಅನೇಕ ಬಾರಿ ಅವು ಸಂತೆಯ ಹೊತ್ತಿಗೆ ಮೂರುಮೊಳ ನೇಯುವುದಕ್ಕೆ, ಯುದ್ಧಕಾಲದ ಶಸ್ತ್ರಾಭ್ಯಾಸಕ್ಕೆ, ನೆರವು ನೀಡುತ್ತಿದ್ದವು. ಇವನ್ನು ಓದಲೇ ಬೇಕಾದ ಸಂದರ್ಭವನ್ನು ಅವರವರು ಸೃಷ್ಟಿಸಿಕೊಂಡಂತಿತ್ತು. ಯಾರಾದರೂ ಈವರೆಗೆ ಸೃಷ್ಟಿಯಲ್ಲಿರುವ ಪುಸ್ತಕಗಳಲ್ಲಿ ತಾನು ಓದಿದ ಪುಸ್ತಕಗಳೂ ಹೆಚ್ಚು, ಓದದವು ಕಡಿಮೆ ಎಂದು ಹೇಳಿದರೆ ಆತ/ಆಕೆ ಸುಳ್ಳು ಹೇಳುತ್ತಾರೆಂಬುದು ಸ್ಪಷ್ಟ. ನಾವು ಓದಿರುವುದು ಸಮುದ್ರದ ನೀರನ್ನು ಬೊಗಸೆಯಲ್ಲಿ ಎತ್ತಿಕೊಂಡಷ್ಟು ಅಥವಾ ಸಮುದ್ರ ತೀರದ ವಿಶಾಲ ಮರಳಿನ ರಾಶಿಯಲ್ಲಿ ಒಂದು ಕಣದಷ್ಟೂ ಇಲ್ಲ. ವಿಶ್ವದ ನೂರಾರು ಭಾಷೆಗಳಲ್ಲಿ ದಿನನಿತ್ಯ ಪ್ರಕಟವಾಗುವ ಪುಸ್ತಕಗಳನ್ನು ಓದುವುದಿರಲಿ, ಅವುಗಳ ಕುರಿತ ಪರಿಚಯವನ್ನು ಓದುವುದಕ್ಕೂ ನಮ್ಮ ಸಮಯ ಸಾಲದು. ಒಮ್ಮೆ ಕಣ್ಣು ಹಾಯಿಸಿ ಮುಂದೆ ಹೋಗುತ್ತೇವೆ; ಇಲ್ಲವೇ ಯಾವುದಾದರೂ ಕಾರಣಕ್ಕೆ ಇಲ್ಲವೇ ವಿನಾಕಾರಣಕ್ಕೆ ನಮಗೆ ಆಕರ್ಷಕವೆನಿಸಿದ ಹೊದಿಕೆಯ ಪುಸ್ತಕದ ಮೇಲೆ ಕಣ್ಣು ಬಿದ್ದು ಅದರ ಕುರಿತು ಏನು ಬರೆದಿದ್ದಾರೆಂಬುದನ್ನು ನೋಡಬೇಕೆನಿಸುತ್ತದೆ. (ಓದಬೇಕೆಂದಲ್ಲ!) ಹಾಗೆ ನೋಡಿದರೆ ವೃತ್ತಪತ್ರಿಕೆಯನ್ನು ಓದುವಷ್ಟೂ ನಾವು ಪುಸ್ತಕಗಳನ್ನು ಓದುವುದಿಲ್ಲ.

ಪರಂಪರೆಯ ಧರ್ಮಗ್ರಂಥಗಳನ್ನು ಸಾಮಾನ್ಯವಾಗಿ ಆಸ್ತಿಕರೆಲ್ಲ ಇಟ್ಟುಕೊಳ್ಳುತ್ತಾರೆ. ಅವನ್ನು ಅಷ್ಟೋ ಇಷ್ಟೋ ಓದುತ್ತಾರೆ. ಕೆಲವರು ಅವನ್ನು ಶಾಸ್ತ್ರೋಕ್ತವಾಗಿ ಪೂರ್ತಿಮಾಡುತ್ತಾರೆ. ಅದನ್ನು ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳುವವರು ಕಡಿಮೆಯೇ. ಪುಟ್ಟ ಶ್ಲೋಕಗಳು, ಸುಭಾಷಿತಗಳು ಉಲ್ಲೇಖಕ್ಕೆ ಅನುಕೂಲವಾಗುವುದರಿಂದ ಅವನ್ನು ಪಾರಾಯಣದ ಮೂಲಕ ಪ್ರಶ್ನಾತೀತಗೊಳಿಸಿದ್ದೇವೆ. ಹೀಗಾಗಿ ‘.... ಎಂಬಂತೆ’ ಎಂದು ಮಾತನಾಡುವವರ ಸಂಖ್ಯೆ ಹೇರಳವಾಗಿರುವುದನ್ನು ಕಾಣಬಹುದು. ಸೂಕ್ಷ್ಮವಾಗಿ ಗಮನಿಸಿದರೆ ಆಯಾಯ ದೇವರುಗಳ ಮತ್ತು ಧಾರ್ಮಿಕ/ಮತೀಯ ಮುಖಂಡರು ರಚಿಸಿದ ಪ್ರಾರ್ಥನೆಗಳು, ಸ್ತೋತ್ರಗಳು ಮುಂತಾದ ರಚನೆಗಳನ್ನು ಹಬ್ಬ ಹರಿದಿನಗಳಲ್ಲಿ ಒಟ್ಟಾಗಿ ಅಥವಾ/ಮತ್ತು ಪ್ರತ್ಯೇಕವಾಗಿ ಓದುವವರು, ಹಾಡುವವರು, ಹೇಳುವವರು ಬಹಳಷ್ಟು ಮಂದಿಯಿದ್ದಾರೆ. ಇದನ್ನು ಬೌದ್ಧಿಕ ವ್ಯಾಯಾಮವೆಂದು ತಿಳಿಯುವವರೂ ಹಾಗೆಯೇ ಪುಣ್ಯದ ಕಾಯಕವೆಂದು ತಿಳಿಯುವವರೂ ಇದ್ದಾರೆ. ಇದೇ ತನ್ನ ಬದುಕಿನ ಪರಮ ಪವಿತ್ರ ಕಾರ್ಯವೆಂದು ನಂಬುವವರೂ ಇದ್ದಾರೆ. ಪೂರ್ಣಾವಧಿ ಇಂತಹ ಕೆಲಸಕಾರ್ಯಗಳಿಗೆ (ಇಂತಹ ನುಡಿಗಟ್ಟುಗಳಲ್ಲಿ ಕೆಲಸ ಮತ್ತು ಕಾರ್ಯಕ್ಕೆ ವ್ಯತ್ಯಾಸವೇನೆಂದು ನನಗಿನ್ನೂ ಜಿಜ್ಞಾಸೆಯಿದೆ!) ತಮ್ಮನ್ನು (ತಾವು!) ಮುಡಿಪಾಗಿಟ್ಟುಕೊಂಡವರೂ ಇದ್ದಾರೆ. ನಾನು ಓದುತ್ತಿದ್ದ ಒಂದು ಕ್ರೈಸ್ತ ಆಡಳಿತದ ಕಾಲೇಜಿನಲ್ಲಿ ಕೆಲವು ಧರ್ಮಗುರುಗಳು ಪ್ರಾಧ್ಯಾಪಕರಾಗಿದ್ದರು. ಅವರು ಉತ್ತಮ ಉಪನ್ಯಾಸಕರೇ. ಪಾಠ ಚೆನ್ನಾಗಿ ಮಾಡುತ್ತಿದ್ದರು. ಅವರು ಉಳಿದ ಸಮಯದಲ್ಲಿ ಸದಾ ಬೈಬಲ್ಲನ್ನೇ ಓದುತ್ತಿದ್ದುದನ್ನು ಕಂಡಿದ್ದೇನೆ. ಅವರು ಬೈಬಲ್ಲನ್ನು ಆಗಲೇ ಬಾಯಿಪಾಠ ಮಾಡಿರಬಹುದೆಂದುಕೊಂಡಿದ್ದೇನೆ. ಹೀಗೆ ಕಂಠಸ್ಥವಾದದ್ದನ್ನು ಮತ್ತೆಮತ್ತೆ ಓದುತ್ತಾರೇಕೆ ಎಂಬ ಸಂಶಯಕ್ಕೆ ನನಗೆ ಆಗ ಉತ್ತರ ಸಿಕ್ಕಿರಲಿಲ್ಲ; ಈಗಲೂ. ನಾನೂ ಕುತೂಹಲದಿಂದ ಒಮ್ಮೆಯಾದರೂ ಕೆಲವು ಭಾಗಗಳನ್ನು ಓದಿದ್ದೇನೆ. ಆ ಮೇಲೆ ಅದನ್ನು ಪದೇಪದೇ ಓದಲು ನನಗ್ಯಾಕೋ ಮನಸ್ಸಾಗಲಿಲ್ಲ.

ಇಸ್ಲಾಮಿನ ಪವಿತ್ರ ಗ್ರಂಥವಾದ ಕುರ್‌ಆನ್‌ನ ಕೆಲವು ಭಾಗಗಳನ್ನು ಅರಿವಿನ ಅಂಕಿ-ಅಂಶಗಳ ಸಲುವಾಗಿಯಾದರೂ ಒಮ್ಮೆ ಓದಿದ್ದೇನೆ. ನನ್ನದೇ ಎಂದು ಆರೋಪಿಸಲಾದ ಮತಧರ್ಮದ ಪುಸ್ತಕಗಳು ಇವಕ್ಕಿಂತ ಹೆಚ್ಚಿವೆ. ನೂರಾರು ದೇವರುಗಳು, ನೂರಾರು ಸ್ತೋತ್ರಗಳು, ವೇದೋಪನಿಷತ್ತು, ದ್ವೈತಾದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳು, ನೂರಾರು ಪುರಾಣಗಳು ಮುಂತಾದವುಗಳನ್ನು ಪೂರ್ಣವಾಗಿ ಓದಲಾಗಲಿಲ್ಲ. ಅಲ್ಲಿ ಇಲ್ಲಿ ಅಗತ್ಯವೆಂದು ಅನ್ನಿಸಿದಾಗ ಕೆಲವು ಅಂಶಗಳನ್ನು ಅದರಲ್ಲೂ ಕಥಾಭಾಗಗಳಿರುವ ವಸ್ತುವನ್ನು ಓದಿದ್ದೇನೆ. ಅವು ನಿದರ್ಶನ, ಉದಾಹರಣೆ, ಅನ್ವಯ ಇಲ್ಲವೇ ಉಲ್ಲೇಖಕ್ಕೆ ಬೇಕಾದಾಗ ಅವುಗಳ ಮೊರೆಹೋಗುತ್ತೇನೆ. ಹಾಗೆಂದು ಈ ನೆಲದ ಪುರಾಣ ಪುಸ್ತಕಗಳಾದ ರಾಮಾಯಣ, ಮಹಾಭಾರತ, ಭಾಗವತ ಇತ್ಯಾದಿ ಗ್ರಂಥಗಳ ಸಂಸ್ಕೃತ ಅವತರಣಿಕೆಯು ಅರ್ಥವಾಗದಿರುವುದರಿಂದ ಅವುಗಳನ್ನು ಕನ್ನಡ ಪ್ರತಿಪದಾರ್ಥ ಮತ್ತು ಅನುವಾದಗಳನ್ನೊಳಗೊಂಡ ಪ್ರತಿಗಳನ್ನು ಕೊಂಡು ಸ್ವಲ್ಪಕಷ್ಟಪಟ್ಟು ಓದಿದೆ. ಕನ್ನಡದ ಹಳೆಯ ಸಾಹಿತ್ಯವನ್ನೂ ನಾವು ಹೀಗೇ ಹೊಸಗನ್ನಡ ಅನುವಾದಗಳನ್ನಿಟ್ಟುಕೊಂಡು ಓದುತ್ತೇವಲ್ಲವೇ? ಈ ಎಲ್ಲ ಸಾಹಿತ್ಯ/ಧರ್ಮಗ್ರಂಥಗಳನ್ನು ಮನನಮಾಡಿಕೊಂಡಿದ್ದೇನೆಂದು ಹೇಳುವ ಉಡಾಫೆತನ ನನಗಿಲ್ಲ. ಓದಿದ್ದೆಲ್ಲವೂ ನೆನಪಿದೆಯೆಂದೂ ಹೇಳುತ್ತಿಲ್ಲ. ಮತ್ತೆ ಓದಬೇಕೆಂದೆನಿಸದಿದ್ದರೆ ಅದು ಅದರ ಕರ್ತೃಗಳ ತಪ್ಪೂಅಲ್ಲ; ನನ್ನ ತಪ್ಪೂ ಅಲ್ಲ. ಓದಿಸಿಕೊಂಡು ಹೋಗುವಷ್ಟು ಅವು ನನ್ನದಾಗಲಿಲ್ಲ. ನಮ್ಮ ದೇಶದ ಇತರ ಭಾಷೆಗಳ ಕೆಲವಾರು ಕೃತಿಗಳನ್ನು ಕನಿಷ್ಠ ಕನ್ನಡಾನುವಾದದಲ್ಲಾದರೂ ಓದಿದವರು ಬೇಕಷ್ಟು ಜನರಿದ್ದಾರೆ.

ಆಯಾಯ ಭಾಷೆಗಳಲ್ಲಿ ಓದಿದವರು ವಿರಳವೇ. ಕನ್ನಡದ ಮಂಜೇಶ್ವರ ಗೋವಿಂದ ಪೈ, ಜಿ.ಪಿ. ರಾಜರತ್ನಂ ಮುಂತಾದವರು ಅನೇಕ ಭಾಷೆಗಳನ್ನು ಬಲ್ಲವರಾಗಿದ್ದರಂತೆ. ಭಾರತೀಯವಲ್ಲದ ಇಂಗ್ಲಿಷ್ ಮುಂತಾದ ಭಾಷೆಗಳ ಕೃತಿಗಳ ಪೈಕಿ ಇಂಗ್ಲಿಷ್ ಕೃತಿಗಳನ್ನು ಮೂಲದಲ್ಲಿ ಓದಿದವರ ಸಂಖ್ಯೆ ಸಾಕಷ್ಟಿದ್ದರೂ ಇತರ ಐರೋಪ್ಯ ಮತ್ತು ಇತರ ಭಾಷೆಗಳ ಕೃತಿಗಳನ್ನು ಮೂಲದಲ್ಲಿ ಓದಿದವರ ಸಂಖ್ಯೆ ಕಡಿಮೆಯೇ. (ಇದನ್ನು ಒಪ್ಪಿಕೊಳ್ಳುವವರ ಸಂಖ್ಯೆಯೂ ಕಡಿಮೆಯೇ!) ನಮ್ಮಲ್ಲಿ ಪ್ರಕಟವಾಗುವ ಅನೇಕ ವಿಮರ್ಶಾ ಪುಸ್ತಕಗಳನ್ನು ಗಮನಿಸಿದರೆ ಅವುಗಳ ಮೂಲಗಳನ್ನು ಶೋಧಿಸಿ ಓದಿದವರು ವಿರಳವೆನ್ನಿಸುತ್ತದೆ. ಹೀಗಾಗಿ ಅನುವಾದಗಳ ಪ್ರಾಮಾಣಿಕತೆ, ಮೂಲನಿಷ್ಠೆಗಳನ್ನು ಬಲ್ಲವರೂ ವಿರಳ. ಸಾಕಷ್ಟು ಹಿರಿಯರು/ಕಿರಿಯರು ಇತರ ಭಾಷೆಗಳ ಕಾವ್ಯವನ್ನು ಉತ್ತಮವಾಗಿಯೇ ಅನುವಾದ ಮಾಡಿದ್ದಾರೆ ಅನ್ನಿಸುತ್ತದೆ. ಅವನ್ನು ದಾಟಿ ಅಂದರೆ ಅತಿಕ್ರಮಿಸಿ ಮೂಲವನ್ನು ಓದುವ ಶಕ್ಯತೆ ಓದುಗನಿಗಿರುವುದಿಲ್ಲವಾದ್ದರಿಂದ ಕಾವ್ಯಾನುವಾದವಂತೂ ನಮಗೆ ನೀಡುವ ಸಂತೋಷವು ನಮ್ಮ ಭಾಷೆಯ ಅನುಕೂಲವಾಗಿರುತ್ತದೆಯೇ ಹೊರತು ಅನೇಕ ಬಾರಿ ಮೂಲಕ್ಕೆ ಎಷ್ಟು ನ್ಯಾಯವನ್ನೊದಗಿಸಿದೆಯೋ ತಿಳಿಯುವುದಿಲ್ಲ. ಆದರೂ ನಾವು ಗತ್ಯಂತರವಿಲ್ಲದೆ ಬಹುಪಾಲು ಅನುವಾದಗಳು ನಮಗೆ ನೀಡಿದ ಸಂತೋಷ ಮತ್ತು ಅರಿವನ್ನು ಆಧರಿಸಿ ಅನುವಾದವನ್ನೂ ಮೂಲವನ್ನೂ ಕೊಂಡಾಡುತ್ತೇವೆ. ಓದುಗನ ಮಿತಿಯಲ್ಲಿ ಪುಸ್ತಕಗಳು ನೀಡುವ ಮುದವೆಂದರೆ ಇದೇ.

ಹಿಂದೆ ಮನೆಯ ಯಾವುದಾದರೊಂದು ಕೋಣೆಯ ಬೀರುವಿನಲ್ಲಿ ಕಾಣುವಂತೆ (ಪ್ರದರ್ಶನರತಿಯೇ ಕಾರಣವಲ್ಲ, ಅನುಕೂಲಕಾರಣವೂ) ಅಥವಾ ಕಾಣದಂತೆ (ಭದ್ರತೆಯ ದೃಷ್ಟಿಯಿಂದ ಅಥವಾ ಯಾರಾದರೂ ಒಯ್ದರೆ ಮರಳಿಸಲಾರರೆಂಬ ಭೀತಿಯಿಂದ) ಪುಸ್ತಕಗಳನ್ನು ಪೇರಿಸಿಡಲಾಗುತ್ತಿತ್ತು. ಪುಸ್ತಕಗಳು ಓದುವುದಕ್ಕೆ ಸೀಮಿತವಾಗಿಲ್ಲ. ಅವನ್ನು ಕೇಳಬಹುದು. ಶೂನ್ಯದಿಂದ ಸೃಷ್ಟಿಸಿದಂತೆ ಅಂತರ್ಜಾಲದ ಮೂಲಕ ಬೇಕಾದಾಗ ಓದಿಕೊಳ್ಳಬಹುದು. ಇದರಿಂದಾಗಿ ಮನೆಯಲ್ಲಿ ಪುಸ್ತಕಗಳ ರಾಶಿ ಕಾಣದಾಗುತ್ತಿದೆ. (ಗಿರೀಶ್ ಕಾರ್ನಾಡರ ಮನೆಯಲ್ಲಿ ಪುಸ್ತಕಗಳನ್ನು ಇಡಲು ಜಾಗವಿಲ್ಲದೆ ಮಾಳಿಗೆಯ ಮೆಟ್ಟಲಿನಲ್ಲೂ ಅವನ್ನಿಡಲಾಗಿತ್ತಂತೆ. ಇನ್ನೂ ಅನೇಕ ಉದಾಹರಣೆಗಳಿರಬಹುದು!) ಆಧುನಿಕ ವೈಜ್ಞಾನಿಕ ಸಂಶೋಧನೆಯ ಪರಿಣಾಮವಾಗಿ ವೇಗವಾಗಿ ಮರೆಯಾಗುತ್ತಿರುವ ಅನೇಕ ಸಂಗತಿಗಳಲ್ಲಿ ಪುಸ್ತಕವೂ ಒಂದು. ಅಂಚೆ ಪೆಟ್ಟಿಗೆ, ಕ್ಯಾಸೆಟ್‌ಗಳು, ಶಾಯಿಪೆನ್ನುಗಳು ಮತ್ತು ಒಟ್ಟಾರೆ ಪೆನ್ನುಗಳು, ಇನ್ನಿತರ ಉದಾಹರಣೆಗಳು. ಆದರೆ ಇಂದು ಆಧುನಿಕ ತಂತ್ರಜ್ಞಾನದ ಸಹಕಾರದಿಂದ ಪ್ರಕಟನೆಯ ಸಂಖ್ಯೆ ಹೆಚ್ಚಿದೆ. ಪ್ರತಿದಿನವೆಂಬಂತೆ ಪುಸ್ತಕಗಳು ಪ್ರಕಟವಾಗುತ್ತಿವೆ. ಅಡ್ಡಿಯಿಲ್ಲ. ಪ್ರಕಟವಾಗಬೇಕು. ಆಸಕ್ತರು ಓದಬೇಕು. ಸಾಧ್ಯವಾದರೆ ಕೊಂಡುಕೊಳ್ಳಬೇಕು. ಪುಸ್ತಕ ಸಂಸ್ಕೃತಿ ಬೆಳೆಯಬೇಕು. ಆದರೆ ಪುಸ್ತಕವೆಂಬುದು ಒಂದು ಉಪಭೋಗದ ವಸ್ತುವಲ್ಲವೆಂಬುದನ್ನು ಸಮಾಜ ಮರೆಯುತ್ತಿದೆ.

ನಮ್ಮ ಮನೆಸಾಮಗ್ರಿಗಳು ಹಿಂದೆಲ್ಲ ನಾವು ಚೀಲದಲ್ಲೋ ಕಾಗದದಲ್ಲೋ ಕಟ್ಟಿಕೊಂಡು ಬರುವಂತಿದ್ದವು. ಈಗ ಅವನ್ನು ಅತ್ಯಾಕರ್ಷಕ ಪ್ಯಾಕುಗಳಲ್ಲಿ ನೀಡುತ್ತಾರೆ. ಇದೇ ಸಮೀಕರಣವನ್ನು ಪುಸ್ತಕಗಳಿಗೆ ಅನ್ವಯಿಸಬಹುದು. ಹಿಂದೆಲ್ಲ ಸಾಹಿತ್ಯವೆಂಬ ಹಣೆಪಟ್ಟಿಯ ಪುಸ್ತಕಗಳ ವಿನ್ಯಾಸ ಸರಳವಾಗಿತ್ತು. ಮುಖಪುಟದಲ್ಲಿ ಕೃತಿ, ಕರ್ತೃ ಮತ್ತು ಪ್ರಕಾಶಕರ ಹೆಸರು, ಬೆಲೆ, ಕೆಲವೊಮ್ಮೆ ಪುಟಗಳು, ಪ್ರಕಟನೆಯ ವರ್ಷ ಇವನ್ನು ಮತ್ತು ಕೆಲವೊಮ್ಮೆ ಒಂದು ಚೌಕಟ್ಟನ್ನು ಮುದ್ರಿಸಲಾಗುತ್ತಿತ್ತು. ಹೆಚ್ಚೆಂದರೆ ದೇವರುಗಳ ಫೋಟೊ ಇರುತ್ತಿತ್ತು. ತ್ರಿವೇಣಿಯವರ ಕೃತಿಗಳು ಒಂದೇ ಪ್ರಕಾಶನದಲ್ಲಿ ಒಂದೇ ವಿನ್ಯಾಸದಲ್ಲಿ ಪ್ರಕಟವಾಗುತ್ತಿದ್ದುದನ್ನು ಗಮನಿಸಬಹುದು. ಓದುವ ಮಂದಿ ಮುಖಪುಟದ ಕುರಿತು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮಕ್ಕಳ ಇಲ್ಲವೇ ಇತರ ಆಕರ್ಷಕ ಅಗತ್ಯಗಳ ಪುಸ್ತಕಗಳಿಗೆ ಮಾತ್ರ ವರ್ಣರಂಜಿತ ಮುಖಪುಟವಿರುತ್ತಿತ್ತು. ಸಾಂಸಾರಿಕ ಕಥೆ-ಕಾದಂಬರಿಗಳಿಗೆ ಮನೋರಂಜಕ ಮತ್ತು ಕೆಲವೊಮ್ಮೆ ಸಿನೆಮಾ ಪೋಸ್ಟರನ್ನೂ ನಾಚಿಸುವಷ್ಟು ಅಂದ-ಚಂದದ ಮುಖಪುಟಗಳು ಸಿಕ್ಕವು. ಆನಂತರ ನವ್ಯದ ಕಾಲದಲ್ಲಿ ಮುಖಪುಟಕ್ಕೆ ಹೆಚ್ಚು ಪ್ರಾಧಾನ್ಯ ಸಿಕ್ಕಿತು. ಕಲಾವಿದರು ನೂತನ, ವಿನೂತನ ಮುಖಪುಟಗಳನ್ನು ರಚಿಸತೊಡಗಿದರು. ಈಚೆಗೆ ಒಂದೆರಡು ದಶಕಗಳಲ್ಲಂತೂ ಮುಖಪುಟವೇ ಪ್ರಧಾನವೆಂಬಷ್ಟು ಈ ವಿನ್ಯಾಸ ಬೆಳೆದಿದೆ. ಜೊತೆಗೆ ಕೆಲವೇ ಪುಟಗಳ ಕೃತಿಗೂ ಭಾರೀ ಭಾರವಾಗುವಷ್ಟು ದೊಡ್ಡ ಮುನ್ನುಡಿ, ಪ್ರಸ್ತಾವನೆ, ಪೀಠಿಕೆ ಮುಂತಾದವು ಲಭ್ಯವಾದವು.

ಈಚೆಗಂತೂ ಪುಸ್ತಕಗಳ ಕುರಿತು ಮಾಹಿತಿಗಿಂತ ಜಾಹೀರಾತೇ ಹೆಚ್ಚಾಗಿದೆ. ‘ಓದಲೇಬೇಕಾದ’ ಪುಸ್ತಕಗಳೇ ಪ್ರಕಟವಾಗುತ್ತಿವೆ. ಬದುಕನ್ನೇ ಬದಲಾಯಿಸಬಲ್ಲ, ನಿಮ್ಮ ಚಿಂತನೆಗೆ ಸವಾಲಾಗಬಲ್ಲ, ಎಂದೂ ಮರೆಯದ, ಸಾಹಿತ್ಯದಲ್ಲಿ ಮೈಲಿಗಲ್ಲಾಗಬಲ್ಲ, ರೋಚಕ, ರೋಮಾಂಚನ ಕೃತಿಗಳೆಂಬ ಶಿರೋನಾಮೆ ಪುಸ್ತಕದ ಹೊರಕವಚದಲ್ಲಿ ಅಲ್ಲದಿದ್ದರೂ ಅವುಗಳ ಪರಿಚಯದಲ್ಲಿರುತ್ತವೆ. ಪರಸ್ಪರ ಸಹಾಯ, ಸಹಾನುಭೂತಿಯ ಪುಸ್ತಕ ಪರಿಚಯ, ವಿಮರ್ಶೆಗಳೂ ಸಾಮಾನ್ಯವೆನಿಸಿವೆ. ರಾಜಕೀಯದಂತೆ ಇಲ್ಲೂ ಮಾರ್ಗದರ್ಶಕ ಮಂಡಳಿಗಳು ಸ್ಥಾಪಿತ ಹಿತಾಸಕ್ತಿಯನ್ನು ಹೆಚ್ಚಿಸುತ್ತಿವೆ. ಎಲ್ಲೇ, ಯಾವುದೇ ಮೂಲೆಯಲ್ಲಿ ಯಾರೊಬ್ಬರು ಯಾವುದೋ ವ್ಯಕ್ತಿಗತ ಕಾರಣಕ್ಕೆ ಬರೆದದ್ದು ಹೊಗಳಿಕೆಯಾದರೆ ಅದನ್ನು ಸ್ವತಃ ಆ ಕೃತಿಯ ಲೇಖಕರೇ ಹಂಚತೊಡಗುತ್ತಾರೆ. ಇರಲಿ, ಸ್ವಲ್ಪಮಟ್ಟಿನ ಪ್ರಸಾರ, ಪ್ರಚಾರವಿಲ್ಲದಿದ್ದರೆ ಇಂದು ಒಳ್ಳೆಯ ಪುಸ್ತಕಗಳು ಕಣ್ಣಿಗೆ ಬೀಳದೆ ಹೋಗಬಹುದು. ಕತ್ತಲಲ್ಲಿ ಕಣ್ಣು ಹೊಡೆದರೆ ಯಾರಿಗೂ ಕೊನೆಗೆ ಸಂಬಂಧಿಸಿದವರಿಗೂ ಗೊತ್ತಾಗದಲ್ಲ! ಭವಭೂತಿಯ ಹಾಗೆ ಎಂದೋ ಯಾರೋ ಎಲ್ಲೋ ಮೆಚ್ಚಿದರೆ ಸಾಕೆಂಬ ದಾರ್ಶನಿಕರು ಇಂದಿಲ್ಲ.

ಎಲ್ಲವೂ ತಮ್ಮ ಕಾಲದಲ್ಲೇ ಮುಗಿದುಹೋಗಬೇಕು ಹಾಗೂ ತಮ್ಮ ಬಗ್ಗೆ ಹಿತವಾದದ್ದನ್ನು ಬರೆಯದವರು ತಮ್ಮ ಶತ್ರುಗಳೆಂಬ ಭಾವನೆಯೂ ಪ್ರವೃತ್ತಿಯೂ ಬೆಳೆಯುತ್ತಿದೆ. ಪುಸ್ತಕಗಳ ಮರುಮುದ್ರಣಗಳ ಆಧಾರದಲ್ಲಿ ಒಬ್ಬ ಸಾಹಿತಿಯ, ಬರಹಗಾರನ ಶ್ರೇಷ್ಠತೆಯನ್ನು ಅಳೆಯಲಾಗುತ್ತಿದೆ. ಪ್ರಮುಖರಿಂದ ಮೆಚ್ಚುಗೆಯನ್ನು ಬರೆಸುವ ಕೆಟ್ಟ ಹವ್ಯಾಸವೂ ಹಬ್ಬುತ್ತಿದೆ. ಸಂಖ್ಯಾಬಲವೇ ಸಾಹಿತ್ಯದ ರಾಜಮಾರ್ಗವಾದರೆ ಮೌಲ್ಯಕ್ಕೆ ಸಾವು ಬರುತ್ತದೆಯೇನೋ ಎಂಬ ಆತಂಕದ ನಡುವೆಯೂ ಮೌಲ್ಯಯುತ ಕೃತಿಗಳು ನಿಧಾನಕ್ಕಾದರೂ ಈ ನೆರಳಿನಿಂದ ಮೇಲೆದ್ದು ಬೆಳಕು ಕಾಣುತ್ತವೆ. ಅದೇ ಪುಸ್ತಕಗಳ ಅಳಿವು-ಉಳಿವಿನ ಮಾನಸೂಚಿ ಕೂಡಾ. ಇಷ್ಟಾದರೂ ಇವೆಲ್ಲವನ್ನೂ ಓದಲೇಬೇಕೆಂಬ ಹಠ ನನಗಂತೂ ಇಲ್ಲ. ಅದು ಸಾಧ್ಯವೂ ಆಗದು; ಸಾಧುವೂ ಆಗದು. ಯಾರೇ ಕೂಗಾಡಲಿ, ಯಾರೇ ಹೋರಾಡಲಿ, ಓದುಗನ ನೆಮ್ಮದಿಗಂತೂ ಭಂಗ ಬಾರದು. ನಮ್ಮ ಬೌದ್ಧಿಕ ಜರಡಿಯ ಕಣ್ಣುಗಳ ಗಾತ್ರದ ಆಧಾರದಲ್ಲಿ ಇಂತಹ ಪುಸ್ತಕಗಳನ್ನು ಓದುತ್ತೇವೇನೋ? ಓದಲೇಬೇಕಾದ್ದು ಅಲ್ಲದಿದ್ದರೂ ಓದಬಹುದಾದದ್ದು ಇದ್ದರೆ ಸಾಕು. ಓದುವಿಕೆ ಉಳಿದೀತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top