ಗಾಂಧಿ ಸಾಯುವುದಿಲ್ಲ
-

ಕಳೆದ ಏಳು ದಶಕಗಳಲ್ಲಿ ಸಾಕಷ್ಟು ವ್ಯತ್ಯಯವಾಗಿವೆ. ಗಾಂಧಿಯನ್ನು ಸ್ವಾತಂತ್ರ್ಯ ಸಿಕ್ಕಿ ಅರ್ಧವರ್ಷ ಪೂರ್ತಿಯಾಗುವ ಮೊದಲೇ ಕೊಂದದ್ದು ಸಾಂಕೇತಿಕ. ನಮಗೆ ಸ್ವಾತಂತ್ರ್ಯ ಯಾಕೆ ಬೇಕಿತ್ತು ಎಂಬುದು ಗಾಂಧಿ ಹತ್ಯೆಯಲ್ಲಿ ಗೊತ್ತಾಗುತ್ತದೆ. ಉದ್ದೇಶವು ಸ್ಪಷ್ಟ: ಗಾಂಧಿಯಂತಹ ಮಹಾತ್ಮನನ್ನು ಮರೆಸಬೇಕಿತ್ತು. ಆತನಿದ್ದ ಜಾಗದಲ್ಲಿ ದೆವ್ವವನ್ನು ಮೆರೆಸಬೇಕಿತ್ತು. ಗೋಡ್ಸೆ ನಿಮಿತ್ತ ಮಾತ್ರ ಗೋಡ್ಸೆಯ ಮನಸ್ಥಿತಿ ಒಂದು ಸಮೂಹದ, ಒಂದು ತಲೆಮಾರಿನ (ಅ)ಸಂಸ್ಕೃತಿಯ, ದೌರ್ಬಲ್ಯದ ಲಕ್ಷಣವಾಗಿತ್ತು. ಇದು ಸುಪ್ತವಾಗಿತ್ತು. ಆನಂತರದ ದಿನಗಳಲ್ಲಿ ಈ ಮನಸ್ಸು ಬಾಟಲಿಯಲ್ಲಿ ಅದುಮಿಟ್ಟ ಭೂತವನ್ನು ಬಿಡುಗಡೆ ಮಾಡಿದಂತೆ ಹೊರಬಂದಿದೆ. ಆದರೆ ಇದು ವಿನಾಶಕಾರಿಯಾದರೆ ಅಭಯವೆಲ್ಲಿ?
ಮೊನ್ನೆ ಮೊನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ರೈತರ ಹತ್ಯೆ ಮನಸ್ಸನ್ನು ತಳಮಳಗೊಳಿಸಬೇಕಾದ್ದು, ಕಲಕಿಸಬೇಕಾದ್ದು ಮಾತ್ರವಲ್ಲ, ಈ ದೇಶ ಯಾವ ದಿಕ್ಕಿನಲ್ಲಿ ನಡೆಯುತ್ತಿದೆಯೆಂಬುದನ್ನು ತೋರಿಸಿತು. ಹಿಂದೆ ಮುಂಬೈಯಲ್ಲಿ ಸಲ್ಮಾನ್‌ಖಾನ್ ಪ್ರಕರಣಕ್ಕೆ ಅದ್ದೂರಿಯ ಪ್ರಚಾರ ನೀಡಿದ ನಮ್ಮ ಮಾಧ್ಯಮಗಳು (ಎಲ್ಲರೂ ಅಲ್ಲ, ಬಹುಪಾಲು!) ಈ ಕುರಿತು ಘೋರಮೌನ ತಳೆದಿವೆ. ಕೇಂದ್ರ ಸಚಿವರೊಬ್ಬರ (ಅವರ ಹೆಸರಿನ ಅಗತ್ಯವಿಲ್ಲ; ಏಕೆಂದರೆ ಪ್ರಧಾನಿಯ ಹೊರತಾಗಿ ಇನ್ನೆಲ್ಲರೂ ಅನಾಮಧೇಯರೇ, ಅನಾಮಿಕರೇ- ಅಥವಾ ಕಟುವಾಗಿ ಹೇಳುವುದಾದರೆ ಮುಖವಿಲ್ಲದವರು ಮತ್ತು ಹೆಸರಿಲ್ಲದವರು!) ವಾಹನ ಮತ್ತು ಅವರ ಮಗನನ್ನೊಳಗೊಂಡ ಈ ಪ್ರಕರಣ ಎದೆ ಝಲ್ಲೆನಿಸುವಂತಿದೆ. ಪಿ.ವಿ. ಸಿಂಧುವಿನೊಂದಿಗೆ ಐಸ್‌ಕ್ರೀಮ್ ಸೇವಿಸಬಲ್ಲವರು, ಪತ್ರಿಕಾ ಗೋಷ್ಠಿಗೆ ಸಮಯವಿಲ್ಲದಿದ್ದರೂ ತಿಂಗಳಿಗೊಂದು ಬಾರಿ ‘ಮನ್‌ಕೀಬಾತ್’ಗಾಗಿ ಸಮಯವನ್ನು ಮುಡಿಪಾಗಿಡುವವರು, ಈ ಪ್ರಕರಣದ ಆನಂತರ ಉತ್ತರಪ್ರದೇಶಕ್ಕೆ ಭೇಟಿ ನೀಡಿದರೂ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಲೂ ಬಯಸಲಿಲ್ಲ. ಇದು ಸಂಸ್ಕೃತಿಯ ದೋಷವಲ್ಲ, ನಿಸ್ಸಂದೇಹವಾಗಿ ಸಂಸ್ಕೃತಿಹೀನತೆ; ಅನಾಗರಿಕತೆ. ಸತ್ತವರದೇ ತಪ್ಪು ಎಂಬಂತೆ ಸರಕಾರ ಮತ್ತದರ ಅಧಿಕಾರಿಗಳು ಮಾತನಾಡುತ್ತಿ ದ್ದಾರೆ. ಕೊಲೆ ಪ್ರಕರಣ ದಾಖಲಾದರೂ ಇನ್ನೂ ಮುಖ್ಯ ಆರೋಪಿಯ ಬಂಧನವಾಗಿಲ್ಲ. ಇದಕ್ಕೆ ಒಬ್ಬ ಹಿರಿಯ ಅಧಿಕಾರಿ ನೀಡಿದ ಸಬೂಬು ಅಧಿಕಾರಸ್ಥರ ಕ್ರೂರ ನಟನಾ ಚಾತುರ್ಯವನ್ನು ಎತ್ತಿಹಿಡಿದಿದೆ. ಸತ್ತವರ ಅಂತ್ಯಸಂಸ್ಕಾರ, ಉತ್ತರಕ್ರಿಯೆಗಳಿಗೆ ಮತ್ತು ಸಂತ್ರಸ್ತರ ಹಿತವನ್ನು ಆದ್ಯತೆಯಿಂದ ನೋಡಬೇಕಾ ದ್ದರಿಂದ ಈ ಬಂಧನವಾಗಿಲ್ಲವೆಂದು ಅವರು ಹೇಳಿದ್ದು ನಮ್ಮ ಸನಾತನ ಮೋಸವನ್ನು ಇನ್ನಿಲ್ಲದಂತೆ ಸಾರಿ ಹೇಳಿದೆ. ಇಂತಹ ಶುನಕಗಳನ್ನು ನೋಡಿ ಈಗೀಗ ಯೋಚಿಸಬಲ್ಲವರೂ ಸಿನಿಕರಾಗುತ್ತಿದ್ದಾರೇನೋ ಅನ್ನಿಸುತ್ತಿದೆ. ದಿನಾ ಸಾಯುವವರಿಗೆ ಅಳುವವರ್ಯಾರು?
ಕೋವಿಡ್ ಅಂತಲ್ಲ, ಯಾವ ಮಹಾಮಾರಿಯೂ, ಮಹಾಯುದ್ಧವೂ ಈ ದೇಶದ ಮಾತ್ರವಲ್ಲ, ಈ ಜಗತ್ತಿನ ದುಷ್ಟ-ಭ್ರಷ್ಟ ಮನಸ್ಥಿತಿಯನ್ನು ಬದಲಾಯಿಸುವುದು ಕಷ್ಟವಿದೆ. ಒಳಗಿರುವ ಸೈತಾನನನ್ನು ಅಡಗಿಸಿಕೊಂಡು ಉದುರಿಸುವ ಮುತ್ತಿನ ಮಾತುಗಳು ಎಲ್ಲರಿಗೂ ಮತ್ತು ಮುಖ್ಯವಾಗಿ ಬರಲಿರುವ ತಲೆಮಾರುಗಳಿಗೆ ಮುಳುವಾಗಲಿದೆಯೆಂಬುದನ್ನು ಜನಮಾನಸ ಮರೆತಿದೆ. ಕಿಂದರಿಜೋಗಿಯ ಇಂದ್ರಜಾಲಗಳಿಗೆ, ಸಮ್ಮೋಹಗಳಿಗೆ ಮನಸೋತು ಹಿಂಬಾಲಿಸುವ ಕುರಿಮಂದೆಯಲ್ಲಿ ಹಿಂದೆ ಉಳಿದವರು ಅದೃಷ್ಟವಂತರು. ಅವರ ಯೋಚನಾ ಸ್ವಾತಂತ್ರ್ಯಕ್ಕಾಗಿ ಮತ್ತು ಅವರು ಬಿಟ್ಟುಹೋಗಬಹುದಾದ ಮೌಲ್ಯಗಳಿಗಾಗಿ ಅವರನ್ನು ಅಭಿನಂದಿಸಬೇಕು.
ಸತ್ತವರ ವಿರುದ್ಧ ವೈರ ತಾಳಬಾರದು; ಸೇಡಂತೂ ಇರಲೇ ಬಾರದು. ಬದುಕಿರುವವರ ವಿರುದ್ಧ ಇಂತಹ ನಿಲುವನ್ನು ತಾಳಬೇಕಾದರೆ ಮಹಾನ್ ವ್ಯಕ್ತಿತ್ವ ಬೇಕು. ಅರಮನೆಯ ವಾಸವನೂ,್ನ ವನವಾಸವನ್ನೂ ರಾಮ ಸಮಾನವಾಗಿ ಕಂಡವನು. ಹಾಗೆಯೇ ತನ್ನ ಹೆತ್ತವ್ವೆ ಕೌಸಲ್ಯೆಯನ್ನೂ ತನ್ನನ್ನು ಕಾಡಿಗೆ ಕಳುಹಿಸಲು ನಿಮಿತ್ತವಾದ ಕೈಕೆಯನ್ನೂ ಒಂದೇ ರೀತಿಯಲ್ಲಿ ಪ್ರೀತಿಸಿದವನು ರಾಮ. ವಾಲ್ಮೀಕಿ ರಾಮಾಯಣದ ಯುದ್ಧಕಾಂಡದ 110ನೇ ಸರ್ಗದಲ್ಲಿ ರಾವಣನ ಮರಣಾನಂತರ ರಾಮನು ವಿಭೀಷಣನಿಗೆ ‘‘ಮರಣಾನ್ತಾನಿ ವೈರಾಣಿ ನಿರ್ವೃತ್ತಂ ನಃ ಪ್ರಯೋಜನಮ್ ಕ್ರಿಯತಾಮಸ್ಯ ಸಂಸ್ಕಾರೋ ಮಮಾಪ್ಯೇಷ ಯಥಾ ತವ’’ (ಸಾಯುವವರೆಗೂ ವೈರವೆಂಬುದಿರುತ್ತದೆ. ಸತ್ತ ನಂತರ ಆ ವೈರದ ಅಂತ್ಯವೂ ಆಗಿಬಿಡುತ್ತದೆ. ನಮ್ಮ ಕಾರ್ಯವೀಗ ನೆರವೇರಿದೆ. ಆದುದರಿಂದ ನೀನೀಗ ಇವನ ಅಂತ್ಯಸಂಸ್ಕಾರವನ್ನು ಯಥಾವಿಧಿಯಾಗಿ ಮಾಡು. ರಾವಣನು ನಿನಗೆ ಹೇಗೆ ಸ್ನೇಹಪಾತ್ರನೋ ಹಾಗೆಯೆ ನನಗೂ ಸ್ನೇಹಪಾತ್ರನಾಗಿದ್ದಾನೆ) ಎನ್ನುತ್ತಾನೆ. ರಾಮನು ಶ್ರೇಷ್ಠನೇ ಆಗಿದ್ದರೆ ಇಂತಹ ನಡೆನುಡಿಗಳಿಂದಾಗಿಯೇ ಹೊರತು ದೇವರ ಅವತಾರವೆಂದಲ್ಲ. ನಾವು ಗುಡಿಕಟ್ಟಬೇಕಾದ್ದು ಇಂತಹ ಆದರ್ಶಗಳಿಗೇ ಹೊರತು ಆತನ ಸ್ವರೂಪ, ಆಕಾರ, ಆಕೃತಿಗಲ್ಲ. ಯಾರ ಬಗ್ಗೆ ಯೋಚಿಸಬೇಕಾದರೂ ಆತನ ಹೇಳಿಕೆ, ಬರಹಗಳ ಬದಲು ಆತನ ನಡವಳಿಕೆ, ಬದುಕು ಹೇಗಿದೆಯೆಂಬುದೇ ಪ್ರಧಾನವಾಗಬೇಕು.
ಅದಕ್ಕನುಗುಣವಾಗಿ ಆತ ಹೇಳಿದ ಮಾತುಗಳು, ಆತನ ಬರಹಗಳು ಪ್ರಸ್ತುತವಾಗಬೇಕು. ಆದರೆ ನಾವು ‘ಭಾರತೀಯ’ವೆಂಬ ಹೆಸರಿನಲ್ಲಿ ಆರಾಧಿಸುವ ಮನೋಧರ್ಮ, ಮನಸ್ಥಿತಿಗಳನ್ನು ಅವಲೋಕಿಸಿದರೆ ಈ ಸಂಸ್ಕೃತಿಪಂಡಿತರ ಆಷಾಢಭೂತಿತನ ಸ್ಪಷ್ಟವಾಗುತ್ತದೆ. ಅವೆಲ್ಲ ಒಂದು ದುಷ್ಟ ಕುಲುಮೆಯಲ್ಲಿ ತಯಾರಾಗಿ ಅಜ್ಞರಿಗೆ ಬಡಿಸಲು ಸಿದ್ಧವಾಗಿ ಬರುತ್ತಿವೆ. ಎಲ್ಲವೂ ಹೇಳುವುದಕ್ಕೇ ಹೊರತು ಆಚರಣೆಗಲ್ಲ ಎಂಬುದು ಈ ‘ಹೇಳುವ’ ಮಂದಿಗೆ ಗೊತ್ತಿದೆ. ಇದರಿಂದಾಗಿ ದೇಶವೆಂದರೆ, ಜಗತ್ತೆಂದರೆ ತಾನು ಅಥವಾ ತಾವು ಎಂಬ ಮನೋಭಾವ ಸೃಷ್ಟಿಯಾಗಿ ಅದಕ್ಕೆ ತಕ್ಕುದಾಗಿ ಅಧಿಕಾರ, ರಾಜಕಾರಣ, ಸಮಾಜ, ಕೊನೆಗೆ ಸಂಸಾರವೂ ವ್ಯಕ್ತಿತ್ವವೂ ಸಿದ್ಧವಾಗುತ್ತದೆ. ಹೀಗಾಗಿ ಇಂದಿನ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಹೇಗೆ ಬದುಕುತ್ತಿದ್ದಾನೆ ಅಥವಾ ಬದುಕಿದ್ದಾನೆ ಎಂಬುದನ್ನು ನಗಣ್ಯಗೊಳಿಸಿ ಆತ ಏನು ಹೇಳುತ್ತಾನೆ ಅಥವಾ ಹೇಳಿದ್ದಾನೆ ಅಥವಾ ಏನು ಬರೆಯುತ್ತಾನೆ/ಬರೆದಿದ್ದಾನೆ ಎಂಬಲ್ಲಿಗೆ ಪರಿಸಮಾಪ್ತಿಯಾಗುತ್ತದೆ. ಇದು ‘ಹೇಳುವವರಿಗೆ’ ‘ಬರೆಯುವವರಿಗೆ’ ಅನುಕೂಲವಾಗಿದೆ. ಕುಡುಕನೂ ರಾಮನ ಬಗ್ಗೆ, ಬುದ್ಧ-ಯೇಸು-ಪೈಗಂಬರ್-ಬಸವ-ಗಾಂಧಿ ಬಗ್ಗೆ, ಸತ್ಯ-ಧರ್ಮ-ಸಹನೆಯ ಬಗ್ಗೆ ಮಾತನಾಡುವಂತಾಗಿದೆ. ನಮ್ಮ ಸಮಸ್ಯೆಯೆಂದರೆ ಆರಾಧನಾಭಾವ. ಯಾವನೇ ಮನುಷ್ಯನನ್ನು ಆತನ ನಡೆ, ನುಡಿ ಮತ್ತು ಆತ ಬಿಟ್ಟುಹೋದ ಆದರ್ಶ, ಛಾಪುಗಳಿಗಾಗಿ ನೆನಪಿಸಬೇಕು.
ಶ್ರೇಷ್ಠ ವ್ಯಕ್ತಿ ತನ್ನ ಬಗ್ಗೆ, ತನ್ನ ಭವಿಷ್ಯದ ಬಗ್ಗೆ, ಇತರರು ತನ್ನ ಕುರಿತು ಏನು ಹೇಳುತ್ತಾರೆಂಬ ಬಗ್ಗೆ ಯೋಚಿಸುತ್ತಾನೆಯೇ ಹೊರತು ಅದರಲ್ಲಿ ಸ್ವಾರ್ಥವಿರುವುದಿಲ್ಲ. ಆತನಿಗೆ ಬದುಕು ಸಾರ್ವಕಾಲಿಕ, ಸಾರ್ವತ್ರಿಕ. ಆತನ ಪ್ರತಿಮೆ ಸ್ಥಾಪಿಸಬೇಕೆಂದಾಗಲಿ, ರಸ್ತೆಗೆ ಆತನ ಹೆಸರಿಸಬೇಕೆಂದಾಗಲಿ ಆತನ ಹೆಸರಿನಲ್ಲಿ ನಿಗಮಗಳನ್ನೋ, ಪ್ರಶಸ್ತಿ-ಪುರಸ್ಕಾರಗಳನ್ನೋ ಘೋಷಿಸಬೇಕೆಂದಾಗಲೀ ಆತ ಎಂದೂ ಬಯಸಿರುವುದಿಲ್ಲ. ಆದರೂ ನಮ್ಮ ಜನರು, ರಾಜಕಾರಣ, ಮತ್ತು ಆಳುವವರು ವ್ಯಕ್ತಿಗಳನ್ನು ಮತ್ತು ಅವರಿಲ್ಲದಿದ್ದರೆ ಅವರ ಹೆಸರುಗಳನ್ನು ದುರುಪಯೋಗಪಡಿಸುವುದರಲ್ಲಿ ಸಿದ್ಧಹಸ್ತರು. ಸಾಮಾನ್ಯರು ಹೀಗೆ ಹೇಳಿದರೆ ಮೂರ್ಖತನವೆಂದು ತಳ್ಳಿಹಾಕಬಹುದು. ಆದರೆ ವಿದ್ಯಾವಂತರು, ಸಾಮಾಜಿಕವಾಗಿ ಪ್ರತಿಷ್ಠಿತರು, ಬುದ್ಧಿಜೀವಿಗಳು ಕೂಡಾ ಅವರ-ಇವರ ಪ್ರತಿಮೆಗಳ ನಿರ್ಮಾಣಕ್ಕೆ ಕರೆಕೊಡುವುದನ್ನು ಗಮನಿಸಿದಾಗ ಮುಂದೊಂದು ದಿನ ಈ ದೇಶದಲ್ಲಿ ಪ್ರತಿಮೆಗಳೇ ತುಂಬಿ ಜೀವಿಸಲು ಜಾಗವಿಲ್ಲದಾದೀತು. ಇಂತಹ ಸಂದರ್ಭದಲ್ಲಿ ಗಾಂಧಿ ನಮ್ಮೆಳಗಿಳಿಯಬೇಕು; ನಮ್ಮೆಳಗುಳಿಯಬೇಕು. ಅದು ಆತ್ಮಸಾಕ್ಷಿಯ ನೆಲೆ. ಮನಸ್ಸಿನ ದ್ವಂದ್ವ್ವಗಳಲ್ಲಿ ನಡೆಯುವ ಯುದ್ಧವೆಂದು ಮಹಾಭಾರತದ ಕುರುಕ್ಷೇತ್ರವನ್ನು ಕಂಡ ಗಾಂಧಿ ನಮ್ಮ ಉನ್ನತ ಮಟ್ಟದ ಚಿಂತನಾಶೈಲಿಯ ಮಾದರಿ. ಅಕ್ಟೋಬರ್ 2 ಮತ್ತು ಜನವರಿ 30 ಇವು ಸಾಮಾನ್ಯವಾಗಿ ಗಾಂಧಿಯನ್ನು ನೆನಪಿಸಲು ಸಂದರ್ಭಗಳು. ಆದರೆ ಗಾಂಧಿ ವರ್ಷವಿಡೀ ನೆನಪಿಸುವ ಒಬ್ಬ ವ್ಯಕ್ತಿ. ಇದನ್ನು ಇತರ ನಾಯಕರನ್ನಾಗಲಿ ಯುಗಪುರುಷರನ್ನಾಗಲಿ ಹೋಲಿಸಿ ಹೇಳುತ್ತಿಲ್ಲ. ಗಾಂಧಿಗಂತೂ ತನ್ನ ಬದುಕೇ ತನ್ನ ಸಂದೇಶ ಎಂದು ಅನ್ನಿಸಿತ್ತು. ಕ್ಲೀಷೆಯಾದರೂ ಕೊಡಬಹುದಾದ ಉದಾಹರಣೆಯೆಂದರೆ ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಗಾಂಧಿ ನೌಕಾಲಿಯಲ್ಲಿ ತಮ್ಮ ಪಾಡಿಗೆ ತನ್ನ ಜೀವನ ಸಂದೇಶವನ್ನು ಅಕ್ಷರಶಃ ಕಾರ್ಯಗತಗೊಳಿಸುತ್ತಿದ್ದರು.
ಅದೇ ಅವರ ಪಾಲಿಗೆ ಸ್ವಾತಂತ್ರ್ಯೋತ್ಸವವಾಗಿತ್ತು. ಅವರವರ ಭಾವ-ಭಕುತಿಗೆ ಅವರವರ ದೈವವಿದ್ದೇ ಇದೆ. ಆದರೂ ಗಾಂಧಿಗೆ ಆಪ್ತರಾದ ಅನೇಕ ನಾಯಕರು ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಗಾಂಧಿಯ ಹಿರಿತನವನ್ನು ಮಾತ್ರವಲ್ಲ, ಗಾಂಧೀತನದ ಅನಿವಾರ್ಯತೆಯನ್ನು, ಮನಗಂಡಿದ್ದರು. ಕಾಲಕಾಲಕ್ಕೆ ಅಗತ್ಯವಾಗುವ ಬದಲಾವಣೆಯ ಹೊರತಾಗಿಯೂ ಈ ದೇಶಕ್ಕೆ ಗಾಂಧಿ ಹೇಳಿದ ಅನೇಕ ತತ್ವಗಳೇ ಊರುಗೋಲೆಂದು ನಂಬಿದ್ದರು. ಗಾಂಧಿಗಿಂತಲೂ ಹಿರಿಯರಾದ ಗೋಖಲೆ, ತಿಲಕರಲ್ಲದೆ, ಸ್ವಾತಂತ್ರ್ಯಪೂರ್ವದಲ್ಲೇ ಬಂದುಹೋದ ನೇತಾಜಿ, ಭಗತ್ ಸಿಂಗ್ ಮಾದರಿಯ ಉಗ್ರ ಹೋರಾಟಗಾರರಲ್ಲದೆ, ಗಾಂಧಿಯನ್ನು ಅನುಸರಿಸಿದ ನೆಹರೂ, ಪಟೇಲ್, ಅಂಬೇಡ್ಕರ್ ಮುಂತಾದವರು ಈ ದೇಶಕ್ಕೆ ಏನು ಬೇಕಾಗಿದೆಯೆಂಬುದನ್ನು ಮತ್ತು ಯಾವ ಅನಿಷ್ಟಗಳನ್ನು ಹೊರಹಾಕಬೇಕೆಂಬುದನ್ನು ಅರಿತಿದ್ದರು. ನಮ್ಮ ಸಂವಿಧಾನವು ಈ ನಿಟ್ಟಿನಲ್ಲಿ ಸಾಕಷ್ಟು ಮುನ್ನೆಚ್ಚರಿಕೆಯನ್ನು ಕೈಗೊಂಡಿತ್ತು. ಈಚೆಗೆ ಸರ್ವೋಚ್ಚ ನ್ಯಾಯಾಲಯವು ಉಚ್ಚರಿಸಿದಂತೆ ಜಾತ್ಯತೀತತೆಯು ಈ ದೇಶದ ಜೀವನ ಪದ್ಧತಿಯಾಗಿದೆ. ಆದ್ದರಿಂದಲೇ ಅಂತಹ ಒಂದು ಪದವನ್ನು ಸೇರಿಸುವ ಮುನ್ನವೇ ಅದು ಸಂವಿಧಾನದಲ್ಲಿ ಅಡಕವಾಗಿತ್ತು. ಕಳೆದ ಏಳು ದಶಕಗಳಲ್ಲಿ ಸಾಕಷ್ಟು ವ್ಯತ್ಯಯವಾಗಿವೆ. ಗಾಂಧಿಯನ್ನು ಸ್ವಾತಂತ್ರ್ಯ ಸಿಕ್ಕಿ ಅರ್ಧವರ್ಷ ಪೂರ್ತಿಯಾಗುವ ಮೊದಲೇ ಕೊಂದದ್ದು ಸಾಂಕೇತಿಕ. ನಮಗೆ ಸ್ವಾತಂತ್ರ್ಯ ಯಾಕೆ ಬೇಕಿತ್ತು ಎಂಬುದು ಗಾಂಧಿ ಹತ್ಯೆಯಲ್ಲಿ ಗೊತ್ತಾಗುತ್ತದೆ. ಉದ್ದೇಶವು ಸ್ಪಷ್ಟ: ಗಾಂಧಿಯಂತಹ ಮಹಾತ್ಮನನ್ನು ಮರೆಸಬೇಕಿತ್ತು. ಆತನಿದ್ದ ಜಾಗದಲ್ಲಿ ದೆವ್ವವನ್ನು ಮೆರೆಸಬೇಕಿತ್ತು. ಗೋಡ್ಸೆ ನಿಮಿತ್ತ ಮಾತ್ರ ಗೋಡ್ಸೆಯ ಮನಸ್ಥಿತಿ ಒಂದು ಸಮೂಹದ, ಒಂದು ತಲೆಮಾರಿನ (ಅ)ಸಂಸ್ಕೃತಿಯ, ದೌರ್ಬಲ್ಯದ ಲಕ್ಷಣವಾಗಿತ್ತು. ಇದು ಸುಪ್ತವಾಗಿತ್ತು. ಆನಂತರದ ದಿನಗಳಲ್ಲಿ ಈ ಮನಸ್ಸು ಬಾಟಲಿಯಲ್ಲಿ ಅದುಮಿಟ್ಟ ಭೂತವನ್ನು ಬಿಡುಗಡೆ ಮಾಡಿದಂತೆ ಹೊರಬಂದಿದೆ. ಆದರೆ ಇದು ವಿನಾಶಕಾರಿಯಾದರೆ ಅಭಯವೆಲ್ಲಿ?
ಭಾರತೀಯತೆಯ ಹೆಸರಿನಲ್ಲಿ ದೇಶ ಕಟ್ಟುವವರು ಗಾಂಧಿಯನ್ನು ಮಾತ್ರವಲ್ಲ, ರಾಮನನ್ನೂ ಮರೆತಿದ್ದಾರೆ ಇಲ್ಲವೇ ಪ್ರಜ್ಞಾಪೂರ್ವಕವಾಗಿ, ಉದ್ದೇಶಪೂರ್ವಕವಾಗಿ ಅಲಕ್ಷಿಸುತ್ತಿದ್ದಾರೆ. ಕುಟ್ಟಿ ಮುರಿಯುವ ಮೂಲಕ, ಕೊಲ್ಲುವ ಮೂಲಕ ಯಾವ ಭದ್ರ ಬುನಾದಿಯನ್ನೂ ಅಲುಗಾಡಿಸಲಾಗದು. ದೇವಸ್ಥಾನಗಳನ್ನು ಕಟ್ಟುವ, ಕಟ್ಟಿಸುವ ಮೂಲಕ ದೇವರನ್ನು ಸೃಷ್ಟಿಸಲಾಗದು; ಸ್ಥಾಪಿಸಲಾಗದು. ಈಚೆಗೆ ಪ್ರಧಾನಿಯವರು ತನ್ನನ್ನು ಟೀಕಿಸುವುದನ್ನು ಸ್ವಾಗತಿಸುತ್ತೇನೆ; ಆದರೆ ಹಾಗೆ ಟೀಕಿಸುವವರು ಕೆಲವೇ ಮಂದಿ ಎಂದು ನಗೆಯಾಡಿದ್ದಾರೆ. ಅಯೋಧ್ಯಾ ರಾಮ ಒಬ್ಬ ಅಗಸನ ಮಾತಿಗೆ ಬೆಲೆಕೊಟ್ಟು ಸೀತೆಯನ್ನು ಕಾಡಿಗೆ ಕಳುಹಿಸಿದ (ಕಳುಹಿಸಿದ್ದು ಸರಿಯೋ ತಪ್ಪೋ ಎಂಬುದು ಇಲ್ಲಿ ಅಪ್ರಸ್ತುತ) ಎಂಬ ಪ್ರಜಾಪ್ರಭುತ್ವವನ್ನು ಮತ್ತು ಹೊಗಳುಭಟರ ಮಾತಿಗೆ ಬೆಲೆಕೊಡಬಾರದು ಎಂಬುದನ್ನು ಸರ್ವಾಧಿಕಾರ ಮರೆಯುತ್ತದೆ. ಅವರಿಗೆ ಪ್ರಜಾಪ್ರಭುತ್ವವು ಈ ನಗ್ನತೆಯನ್ನು ಮುಚ್ಚಲು ಯತ್ನಿಸುವ ಪಾರದರ್ಶಕ ಪರದೆಯಾಗುತ್ತದೆ. ಪ್ರಾಯಃ ಇದೇ ಕಾರಣಕ್ಕೋ ಏನೋ ಈಚೆಗೆ ಪ್ರಧಾನಿ ಅಮೆರಿಕಕ್ಕೆ ಹೋದಾಗ ಅಲ್ಲಿನ ಅಧ್ಯಕ್ಷರು (ಅವರೂ ರಾಜಕಾರಣಿ!) ಗಾಂಧಿಯನ್ನು ಮತ್ತು ಗಾಂಧೀಪ್ರಣೀತ ಅಹಿಂಸೆ, ಸಹನೆ, ಧರ್ಮದರ್ಶಿತ್ವ, ಪರಸ್ಪರ ಗೌರವದ ಭಾವನೆ ಮುಂತಾದ ಉದಾತ್ತ ತತ್ವಗಳನ್ನು ನಮ್ಮ ಪ್ರಧಾನಿಯವರಿಗೆ ನೆನಪಿಸಬೇಕಾಯಿತು. ಅಲ್ಲಿನ ಉಪಾಧ್ಯಕ್ಷರು (ಆಕೆಯೂ ಭಾರತ ಸಂಜಾತೆ!) ನಮ್ಮ ಪ್ರಧಾನಿಗೆ ಪ್ರಜಾಪ್ರಭುತ್ವದ ಪಾಠ ಹೇಳಬೇಕಾಯಿತು!
ನಾವು ಏನು ಹೇಳುತ್ತೇವೆ ಎನ್ನುವುದು ಮುಖ್ಯವಲ್ಲ, ನಾವು ಹೇಗಿದ್ದೇವೆ ಎನ್ನುವುದು ಮುಖ್ಯ. ಭವಿಷ್ಯ ಮಾತ್ರವಲ್ಲ, ವರ್ತಮಾನದ ನೆರೆಹೊರೆಯೂ ನಮ್ಮ ಯೋಗ್ಯತೆಯನ್ನು ನಿರ್ಧರಿಸುತ್ತದೆ. ವಿದ್ಯೆಯಾಗಲಿ, ಪದವಿಯಾಗಲಿ, ಅಧಿಕಾರವಾಗಲಿ, ಯೋಗ್ಯತೆಯನ್ನು ನೀಡುವುದಿಲ್ಲ; ಗೌರವವನ್ನು ಅಧಿಕಾರದ ಮೂಲಕ ಪಡೆಯಲು ಸಾಧ್ಯವಿಲ್ಲ. ಹಿಟ್ಲರ್ ಒಬ್ಬ ಕಲಾವಿದ. ಆತನೂ ಕೆಲವು ಸಂದರ್ಭಗಳಲ್ಲಿ ಕರುಣಾಮಯಿಯಾಗಿ ತನಗೆ ಬಾಲ್ಯದಲ್ಲಿ ಚಿಕಿತ್ಸೆ ನೀಡಿದ ಯಹೂದಿ ವೈದ್ಯರೊಬ್ಬರನ್ನು ಮತ್ತು ತಾನು ಸಲಹಿದ ಒಬ್ಬ ಯಹೂದಿ ಮಗುವನ್ನು ರಕ್ಷಿಸಿದ ಪ್ರಸಂಗಗಳು ದಾಖಲಾಗಿವೆ. ಆದರೆ ಇತಿಹಾಸ ಆತನ ಮುಖ್ಯ ಹಾಗೂ ಹೆಚ್ಚು ಪ್ರಖರವಾಗಿ ಕಾಣುವ ಖಳನಾಯಕತ್ವವನ್ನೇ ದಾಖಲಿಸಿದೆಯಲ್ಲವೇ? ಹಿಟ್ಲರನ ಕುರಿತ (ಸವೆದ) ಟೀಕೆಯೊಂದರಲ್ಲಿ ಆತನ ಹೆಸರಿನಲ್ಲಿ ತಂದ ಅಂಚೆಚೀಟಿಗಳು ಲಕೋಟೆಗೆ ಅಂಟುತ್ತಿರಲಿಲ್ಲವೆಂಬ ದೂರನ್ನು ವಿಚಾರಿಸಿದಾಗ ಗೊತ್ತಾದದ್ದು ಜನರು ಅಂಚೆಚೀಟಿಯಲ್ಲಿ ಕಾಣುವ ಹಿಟ್ಲರನ ಮುಖಕ್ಕೇ ಉಗುಳುತ್ತಿದ್ದರೆಂಬ ಕಾರಣ!
ಹೀಗೆಯೇ ತನ್ನ ಆತ್ಮಕಾಮದಲ್ಲಿ ಮುಳುಗಿದ ಮನುಷ್ಯರಿಗೆ ಗಾಂಧಿಯಾಗಲಿ ರಾಮನಾಗಲಿ ಮುಖ್ಯವೆಂದು ಅನ್ನಿಸಲಿಕ್ಕಿಲ್ಲ. ರಾಮ ಸರಯೂವಿನಲ್ಲಿ ಮುಳುಗಿ ಮಾಯವಾಗಿದ್ದಾನೆ. ಈಗಿರುವುದು ಆತನ ಕುರಿತು ನ್ಯಾಯಾಲಯದಲ್ಲಿರುವ ದಾಖಲೆ ಮಾತ್ರ. ರಾಮ ಬೇಕಾಗುವುದು, ಬಳಕೆಯಾದದ್ದು ರಾಜಕಾರಣಕ್ಕೆ, ಅಧಿಕಾರ ರಾಜಕೀಯಕ್ಕೆ. ಅದಕ್ಕೇ ರಾಮ ಅಯೋಧ್ಯೆಯಲ್ಲಿ ಕಷ್ಟಕ್ಕೀಡಾಗಿದ್ದಾನೆ. ಅಧಿಕಾರ ರಾಜಕೀಯಕ್ಕೆ ಅಯೊಧ್ಯೆಯ ಮಂದಿರವೂ ಸೆಂಟ್ರಲ್ ವಿಸ್ತಾ ಯೋಜನೆಯೂ ಒಂದೇ!
ಗಾಂಧಿ ಹಂತಕನ ಗುಂಡಿಗೆ ಬಲಿಯಾಗಿದ್ದಾರೆ. ಆದರೆ ಈ ಅರ್ಥದಲ್ಲಿ ಗಾಂಧಿ ರಾಮನಿಗಿಂತ ಅದೃಷ್ಟವಂತರು. ಅವರಿನ್ನೂ ರಾಜಕಾರಣಕ್ಕೆ ಬಳಕೆಯಾಗಿಲ್ಲ. ಅವರನ್ನು ಮರೆಸಲು ಎಷ್ಟೇ ಯತ್ನಿಸಿದರೂ ಅವರು ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮತ್ತೆ ಹುಟ್ಟುತ್ತಾರೆ. ನಮ್ಮ ದೇಶದಲ್ಲಿ ಮತ್ತು ಬೇರೆಡೆಯಲ್ಲೂ! ಆದ್ದರಿಂದ ಗಾಂಧಿ ಸಾಯುವುದಿಲ್ಲ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.