ನಾರಿಮನ್ ಎಂಬ ನ್ಯಾಯವಂತ | Vartha Bharati- ವಾರ್ತಾ ಭಾರತಿ

--

ನಾರಿಮನ್ ಎಂಬ ನ್ಯಾಯವಂತ

ಹಿಂದೆಲ್ಲಾ ಯಾವುದೇ ಮಾತು ವೇದಿಕೆಯೇರುವ ಮುನ್ನ ಅದಕ್ಕೊಂದು ಸಾಮಾಜಿಕ ಮತ್ತು ಅಲಿಖಿತ ಸೆನ್ಸಾರ್ ಮಂಡಳಿಯಿತ್ತು. ಪತ್ರಿಕೆಗಳು ಜಾಗರೂಕತೆಯಿಂದ ತಮ್ಮ ಪುಟಗಳನ್ನು ಅಭಿಪ್ರಾಯಗಳ, ಟೀಕೆಗಳ, ಹಂಚಿಕೆಗಳಿಗೆ-ಪ್ರಸಾರಗಳಿಗೆ ಮೀಸಲಿಡುತ್ತಿದ್ದವು. ಜಾಹೀರಾತು ಕೂಡಾ ಈ ಲಿಟ್ಮಸ್ ಪರೀಕ್ಷೆಯನ್ನು ಪಾಸಾಗದ ಹೊರತು ಸಾರ್ವಜನಿಕವಾಗಲು ಸಾಧ್ಯವಿರಲಿಲ್ಲ. ಆದ್ದರಿಂದ ಯಾವುದೇ ಅಭಿವ್ಯಕ್ತಿಯು ಸೊಂಟದ ಕೆಳಗಿಳಿಯುತ್ತಿರಲಿಲ್ಲ.
ಆದರೆ ಈಗ ಹಾಗಿಲ್ಲ. ಯಾರನ್ನೇ ಮತ್ತು ಹೇಗೆ ಬೇಕಾದರೂ ಟೀಕಿಸ ಬಹುದು. ಇಲ್ಲಿ ಟೀಕಿಸುವ ಮತ್ತು ಟೀಕೆಗೊಳಪಡುವವರ ಯೋಗ್ಯತೆಯ ಪ್ರಶ್ನೆಯೇ ಇಲ್ಲ. ಇದು ಯಾವ ಹಂತಕ್ಕಿಳಿದಿದೆಯೆಂದರೆ ಟೀಕಿಸುವಾಗಲೂ ಬಹುವಚನ ಮತ್ತು ಸೌಜನ್ಯ ಇವು ಜೀವಾಳವಾಗಿರಬೇಕೆಂಬ ಕನಿಷ್ಠ ಅರ್ಹತೆಯೂ ಇಲ್ಲದೆ ಟೀಕೆಗಳು ಪುಂಖಾನುಪುಂಖವಾಗಿ ಬಿತ್ತರಗೊಳ್ಳುತ್ತವೆ. ಅವುಗಳಿಗೆ ಪರ-ವಿರೋಧ ಟೀಕೆಗಳು ಮತ್ತೆ ಅದೇ ಹಾದಿಯಲ್ಲಿ ಮತ್ತು ಬಹುತೇಕ ಅದೇ ಅಥವಾ ಅದಕ್ಕೂ ಕೀಳಾಗಿ ಸಾಗುತ್ತವೆ. ವಿಷಾದವೆಂದರೆ ಹೀಗೆ ಟೀಕಿಸುವವರಲ್ಲಿ ಹಳ್ಳಿ-ನಗರಗಳೆಂಬ, ಅವಿದ್ಯಾವಂತ-ವಿದ್ಯಾವಂತರೆಂಬ, ಹಿರಿ-ಕಿರಿಯೆಂಬ, ಭೇದವಿಲ್ಲ. ತಮ್ಮ ಕ್ಷೇತ್ರ, ಪರಿಣತಿಯ ವ್ಯಾಪ್ತಿಯನ್ನು ಮೀರಿ ಯಾರನ್ನು ಬೇಕಾದರೂ ಹಳಿಯುವುದಕ್ಕೆ ತುದಿಗಾಲಿನಲ್ಲಿ ನಿಂತವರು ಸಾಕಷ್ಟಿದ್ದಾರೆ. ಮತವೊಂದೇ ಸ್ವತಂತ್ರವೆಂದುಕೊಂಡರೆ ಈಗ ಅಭಿಮತ ಅದಕ್ಕಿಂತಲೂ ಸ್ವತಂತ್ರವಾಗಿದೆ! ಈ ದೇಶದ ಇನ್ನೊಂದು ದುರಂತವೆಂದರೆ ಜನಸಂಖ್ಯೆಯಲ್ಲಿ ವಿಶ್ವದ ಎರಡನೆ ಸ್ಥಾನದಲ್ಲಿರುವುದು; ಇನ್ನೊಂದಷ್ಟು ವರ್ಷಗಳಲ್ಲಿ ಮೊದಲನೆ ಸ್ಥಾನಕ್ಕೇರುವ ಯತ್ನದಲ್ಲಿರುವುದು. ಇದರಿಂದಾಗಿ ಇಲ್ಲಿ ಯಾವುದಕ್ಕೂ ಬೆಂಬಲಿಸುವ ಜನರ ಸಂಖ್ಯೆ ಸಾಕಷ್ಟಿದೆ. ರಾಮಾಯ ಸ್ವಸ್ತಿ! ರಾವಣಾಯ ಸ್ವಸ್ತಿ!
 ಒಳ್ಳೆಯದನ್ನು ಬೆಂಬಲಿಸುವವರು ಯಾವಾಗಲೂ ಅಲ್ಪಸಂಖ್ಯೆಯಲ್ಲಿರುವುದು ಸಾಮಾಜಿಕ ಕಾಲ ನಿಯಮ. ಯಾರಾದರೂ ಸ್ವಲ್ಪಗೌರವವಾಗಿ ಪ್ರತಿಕ್ರಿಯಿಸಿದರೆ ಅವರ ಮುಖ ಕೆಸರೆರಚಲ್ಪಟ್ಟು ಮ್ಲಾನವಾಗಬೇಕಾಗುತ್ತದೆ. ಆದ್ದರಿಂದ ಇನ್ನು ಕೆಲವು ಸಮಯದಲ್ಲಿ- ಅದು ದಿನಗಳೇ, ತಿಂಗಳುಗಳೇ ಅಥವಾ ವರ್ಷಗಳೇ ಇರಬಹುದು- ಮಾನವುಳ್ಳವರು ಗಾಂಧಿಯ ಮೂರು ಮಂಗಗಳು ಕೆಟ್ಟದ್ದನ್ನು ಕೇಳಬೇಡಿ, ನೋಡಬೇಡಿ, ಮಾತನಾಡಬೇಡಿ ಎಂಬ ತಮ್ಮ ಸಂಕೇತವನ್ನು ಮುಂದುವರಿಸಿ ಬಾಯಿ-ಕಣ್ಣು-ಕಿವಿ ಮುಚ್ಚಿಕೊಳ್ಳಬೇಕಾದೀತು. ಎಲ್ಲ ಥರದ ಮಾಧ್ಯಮಗಳು ಅದರಲ್ಲೂ ಟಿವಿಯ ಖಾಸಗಿ ಚಾನೆಲ್‌ಗಳು ಮತ್ತು ಫೇಸ್‌ಬುಕ್, ಟ್ವಿಟರ್, ವಾಟ್ಸ್‌ಆಪ್ ಮುಂತಾದ ಖಾಸಗಿ ಅಭಿವ್ಯಕ್ತಿ ಕಿಂಡಿಗಳು ಆಧುನಿಕ ಯುಗದ ಅದರಲ್ಲೂ 21ನೆ ಶತಮಾನದ ವರಗಳಾಗುವುದಕ್ಕೆ ಬದಲಾಗಿ ಈ ರೀತಿಯ ಅಭಿವ್ಯಕ್ತಿಯ ಶಾಪಗಳಾಗಿ ಪರಿಣಮಿಸಿವೆ. ಈ ಮಾಧ್ಯಮಗಳಲ್ಲಿ ಸಂಗ್ರಹ ಯೋಗ್ಯವಾದದ್ದು ಎಷ್ಟಿದೆಯೋ ಅದರ ಹತ್ತು ಪಟ್ಟು ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ತ್ಯಾಜ್ಯದ ಗಾತ್ರ ಎಷ್ಟು ಹೆಚ್ಚುತ್ತಿದೆಯೆಂದರೆ ಅದೇ ನಮ್ಮ ಸಮಾಜದ ಸಾಮಾನ್ಯ ಲಕ್ಷಣವೇನೊ ಎಂಬಂತಾಗಿ ಮೂಗು ಹಿಡಿದು ನಡೆಯಬೇಕಾಗಿದೆ.

ಇದನ್ನು ಯಾಕೆ ಆರಂಭದಲ್ಲೇ ಪ್ರಸ್ತಾವಿಸಲಾಗಿದೆಯೆಂದರೆ ಕಳೆದ ಕೆಲವು ದಿನಗಳಲ್ಲಿ, ವಾರಗಳಲ್ಲಿ ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್‌ರನ್ನು ಅನೇಕರು ಕುಚೋದ್ಯದಿಂದ ಅವಮಾನಿಸುತ್ತಿದ್ದಾರೆ. ಹೀಗೆ ಟೀಕಿಸುವವರು ಸಮಾಜದ ಮೂರನೆ ದರ್ಜೆ ನಾಗರಿಕರಾದರೆ ಪರವಾಗಿರಲಿಲ್ಲ; ಅಂಥವರಿಂದ ಒಳ್ಳೆಯ ಟೀಕೆಯನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಸಮಾಜದಲ್ಲಿ ಪ್ರಾಜ್ಞರೆನಿಸಿಕೊಂಡವರು, ಗಣ್ಯರೆನಿಸಿಕೊಂಡವರು, ಸುದ್ದಿಯಲ್ಲಿರುವವರು, ವೃತ್ತಿಪರರು, ಪತ್ರಕರ್ತರು, ಹೀಗೆ ಎಲ್ಲ ಬಗೆಯವರು ನಾರಿಮನ್ ಅವರ ಕುರಿತು ಏನೂ ತಿಳಿದುಕೊಳ್ಳದೆ ತಮ್ಮ ಬೇಕಾಬಿಟ್ಟಿ ವಾಗ್ಝರಿಯನ್ನು ಈ ಪೀಕದಾನಿಗಳಲ್ಲಿ ಉಗುಳಿಕೊಳ್ಳುತ್ತಿದ್ದಾರೆ. ಕಾವೇರಿ ನದಿ ನೀರಿನ ನ್ಯಾಯಾಧಿಕರಣದಲ್ಲಿ ನಾರಿಮನ್ ಅವರ ನೇತೃತ್ವದಲ್ಲಿ ಕರ್ನಾಟಕ ವಾದ ಮಂಡಿಸಿತು. ಅನಿಲ್ ದಿವಾನ್ ಎಂಬ ಇನ್ನೊಬ್ಬ ಹಿರಿಯ ನ್ಯಾಯವಾದಿಯೂ ಇದ್ದರು. ಅವರಲ್ಲದೆ ಹತ್ತಾರು ಇತರ ನ್ಯಾಯವಾದಿಗಳ ಮತ್ತು ಪರಿಣತರ ತಂಡವೇ ಇವರ ಬೆನ್ನಿಗಿತ್ತು. ಆದರೂ ನ್ಯಾಯಾಧಿಕರಣವು ತನ್ನ ತೀರ್ಪನ್ನು ನೀಡುವಾಗ ಕರ್ನಾಟಕಕ್ಕೆ ಅಲ್ಪ ಮಟ್ಟಿನ ಅನ್ಯಾಯವಾಗಿದೆಯೆಂಬಂತೆ ಭಾಸವಾಯಿತು. ಯಾವುದೇ ಪ್ರಕರಣವು ಅದರಷ್ಟಕ್ಕೇ ನ್ಯಾಯವಾದಿಯ ಯೋಗ್ಯತೆಯ ಅಳತೆಗೋಲಲ್ಲ. ಅದು ಆ ಪ್ರಕರಣದ ಯೋಗ್ಯತೆಯೇ ಹೊರತು ನ್ಯಾಯವಾದಿಯದ್ದಲ್ಲ. ಆ ಪ್ರಕರಣದ ತೀರ್ಪಿನ ಮೂಲಕ ಅವರ ಮಾನವನ್ನು ಅವರಷ್ಟು ಯೋಗ್ಯರಲ್ಲದ ನ್ಯಾಯಾಧೀಶರು, ನ್ಯಾಯಮೂತಿಗಳು ನಿರ್ಧರಿಸುತ್ತಾರೆಂದು ನಾವು ತಿಳಿದರೆ ತಪ್ಪು. ಆ ಪ್ರಕರಣದ ಇತಿಮಿತಿಗಳಲ್ಲಿ ಒಂದು ತೀರ್ಮಾನ ಹೊರಬರುತ್ತದೆ. (ಕೆಲವು ಬಾರಿ ಅನರ್ಹ ನ್ಯಾಯವಾದಿಗಳು ಪ್ರಕರಣದ ದುಷ್ಪರಿಣಾಮಕ್ಕೆ ಕಾರಣರಾಗುವುದು ಉಂಟು! ಆದರೆ ಇವು ಅಪವಾದಗಳೇ ಹೊರತು ನಿಯಮಗಳಲ್ಲ! ಯಾವ ನ್ಯಾಯವಾದಿಯೂ ಉದ್ದೇಶಪೂರ್ವಕವಾಗಿ ತನ್ನ ಕಕ್ಷಿದಾರರನ್ನು ಸೋಲಿಸುತ್ತಾನೆಂದು ನಂಬಬಾರದು.)

  ಆದರೆ ನಾರಿಮನ್ ಉದ್ದೇಶಪೂರ್ವಕವಾಗಿಯೇ ಕರ್ನಾಟಕಕ್ಕೆ ಅನ್ಯಾಯ ಮಾಡಿದರೆಂಬಂತೆ ಟೀಕೆಗಳು ತೀಟೆತೀರಿಸಿಕೊಳ್ಳುವ ನೆಪದಂತೆ ಪ್ರಕಟವಾಗುತ್ತಿವೆ. ಇವನ್ನು ಓದುವಾಗ ಬರೆದವರ (ಅ)ಯೋಗ್ಯತೆಯೇನೇ ಇರಲಿ, ಇಂಥವರ ನಾಲಗೆಗೆ, ಲೇಖನಿಗೆ ನಾರಿಮನ್ ತುತ್ತಾಗುತ್ತಿದ್ದಾರಲ್ಲ, ಈ ವಯಸ್ಸಿಗೆ ನಾರಿಮನ್ ಅವರಿಗೆ ಈ ವ್ಯವಹಾರದ ಅಗತ್ಯವಿತ್ತೇ, ಯಾರ ತಪ್ಪಿದು ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುತ್ತವೆ. ಇದರ ಅಂತರಾರ್ಥ ಅರಿಯಬೇಕಾದರೆ ನಾರಿಮನ್ ಎಂಬ ವ್ಯಕ್ತಿಯ ವ್ಯಕ್ತಿತ್ವ ಅರ್ಥವಾಗಬೇಕು. ಭಾರತದಲ್ಲಿ ಕಳೆದ ಒಂದೆರಡು ಶತಮಾನಗಳ ಇತಿಹಾಸವನ್ನು ಗಮನಿಸಿದರೆ ಮೊದಲಿನಿಂದಲೂ ಪಾರ್ಸಿಗಳ ಹಿರಿಮೆ ಗೊತ್ತಾಗುತ್ತದೆ. ಕೈಗಾರಿಕೋದ್ಯಮಿಗಳಾದ ದಾದಾಭಾಯಿ ನೌರೋಜಿ, ಜಮ್‌ಶೆಡ್‌ಜೀ ಟಾಟಾ, ಗೋಡ್ರೆಜ್, ವಾಡಿಯಾ ಮುಂತಾದವರು, ಭಾರತದ ಮಾಜಿ ಮುಖ್ಯ ನ್ಯಾಯಾಧೀಶರಾದ ಸಾಮ್ ಭರೂಚಾ, ಕಪಾಡಿಯಾ, ಕ್ರಿಕೆಟ್ ಪಟುಗಳಾದ ಫಾರೂಕ್ ಇಂಜಿನಿಯರ್, ಡಯಾನಾ ಎದುಲ್‌ಜೀ, ವಿಜ್ಞಾನಿ ಹೋಮಿ ಬಾಬಾ, ಖ್ಯಾತ ನ್ಯಾಯವಾದಿಗಳಾದ ಸೋಲಿ ಸೊರಾಬ್ಜಿ, ಪಾಲ್ಕಿವಾಲಾ, ಮುಂತಾದವರು ಪಾರ್ಸಿಗಳು. (ಈ ಪಟ್ಟಿ ಇನ್ನೂ ದೊಡ್ಡದಿದೆ!) ಕೆಲವೇ ಸಾವಿರ ಜನಸಂಖ್ಯೆಯ ಈ ಜನಾಂಗವು ಭಾರತಕ್ಕೆ ನೀಡಿದ ಕೊಡುಗೆ ಅವರಿಗಿಂತ ಹೆಚ್ಚು ಜನಸಂಖ್ಯೆಯಿರುವ ಇತರ ಅನೇಕ ಜನಾಂಗಗಳನ್ನು ಮೀರಿದ್ದು.

ಇಂತಹ ಪಾರ್ಸಿ ಜನಾಂಗಕ್ಕೆ ಸೇರಿದ ಫಾಲಿ ಎಸ್. ನಾರಿಮನ್ ಈಗ 87 ವರ್ಷಗಳ ತರುಣ (ಹುಟ್ಟು 10.01.1929). ಕಾನೂನು ಪದವಿ ಪಡೆದು 1950ರಲ್ಲಿ ಅವರ ರಂಗಪ್ರವೇಶ. 1971ರಲ್ಲಿ ಅವರು ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರಾಗಿ ನೇಮಕಗೊಂಡರು. 1972ರಲ್ಲಿ ಹೆಚ್ಚುವರಿ ಸೊಲಿಸಿಟರ್ ಜನರಲ್ ಆಗಿ ನೇಮಕಗೊಂಡರು. 1975ರಲ್ಲಿ ತುರ್ತುಸ್ಥಿತಿ ಘೋಷಣೆಯಾದಾಗ ಪ್ರತಿಭಟಿಸಿ ಈ ಹುದ್ದೆಗೆ ರಾಜೀನಾಮೆ ನೀಡಿದರು. ಗೋಲಕನಾಥ್ ಪ್ರಕರಣ, ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಯ ಪ್ರಕರಣ, ಹೀಗೆ ಅನೇಕ ಸಾಂವಿಧಾನಿಕ ಪ್ರಕರಣಗಳಲ್ಲಿ ಅವರದ್ದು ಚಿರಸ್ಥಾಯಿಯಾಗಬಲ್ಲ ಹೆಸರು. ಆನಂತರದ್ದು ಈಗ ಇತಿಹಾಸ. 1991ರಲ್ಲಿ ಪದ್ಮಭೂಷಣ ಗೌರವ. 1996ಲ್ಲಿ ರಾಜ್ಯಸಭಾ ಸದಸ್ಯತ್ವ. 2007ರಲ್ಲಿ ಪದ್ಮವಿಭೂಷಣ ಗೌರವ. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ, ಸಮಿತಿಗಳಲ್ಲಿ ಅವರ ಸ್ಥಾನ ಮಹತ್ವದ್ದು. ಅವರ ಮಗ ರೋಹಿಂಟನ್ ನಾರಿಮನ್ ಕೂಡಾ ಭಾರತದ ಸೊಲಿಸಿಟರ್ ಜನರಲ್ ಆಗಿದ್ದು ಈಗ ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ದುಡಿಯುತ್ತಿದ್ದಾರೆ. ಅವರಿಗೆ ಸಿಕ್ಕಿದ ಗೌರವ, ವೃತ್ತಿಯು ತಂದುಕೊಟ್ಟ ಘನತೆ ಇವುಗಳೊಂದಿಗೆ ಸಾಮಾನ್ಯವಾಗಿ ಯಾರೇ ಆಗಿದ್ದರೂ ವೃತ್ತಿಯನ್ನು ನಿಲ್ಲಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಆದರೆ ತಿಳಿದದ್ದನ್ನು ಕೊನೆಯ ಉಸಿರಿನ ವರೆಗೂ ಬಳಸುವ ಸಂಕಲ್ಪದ ನಾರಿಮನ್ ತನ್ನ ಯೋಗ್ಯತೆಗೆ ತಕ್ಕ ಪ್ರಕರಣಗಳನ್ನು ನಡೆಸಿದವರು. (ಇಂತಹ ಇನ್ನೊಬ್ಬ ಧೀಮಂತ ರಾಮ್ ಜೇಠ್ಮಲಾನಿ.) ಈಚೆಗೆ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಪರವಾಗಿ ವಾದ ಮಂಡಿಸಿ ಕೇಂದ್ರ ಸರಕಾರವು ತಂದ ಶಾಸನವನ್ನು ಅನೂರ್ಜಿತಗೊಳಿಸುವಲ್ಲಿ ಅವರ ಪಾತ್ರ ಹಿರಿದು. ಆದರೆ ಎಂದಿಗೂ ಅವರು ತನ್ನ ಅಥವಾ ನ್ಯಾಯಾಲಯದ ಘನತೆಗೆ ಕುಂದು ತಂದವರಲ್ಲ. ಕಾವೇರಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಕರ್ನಾಟಕ ಸರಕಾರವು ಶಾಸಕಾಂಗದಲ್ಲಿ ನಿರ್ಣಯವನ್ನು ಕೈಗೊಂಡು ನೀರು ಹರಿಸದಿರಲು ನಿರ್ಧರಿಸಿದಾಗ ನ್ಯಾಯಾಲಯದ ಒಬ್ಬ ಕಾನೂನುಪಾಲಕನಾಗಿ ಅದನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿ ಹೇಳಲು ಸಾಧ್ಯವಿಲ್ಲವೆಂಬುದಾಗಿ ತಿಳಿಸಿದವರು. ಆನಂತರ ನೀರು ಹರಿಸಿದ ನಂತರ ಅವರೇ ವಾದ ಮಾಡಿದ್ದು, ‘‘ದಿನಾ ಇಷ್ಟಿಷ್ಟು ನೀರು ಹರಿಸಿ ಎಂದರೆ ವಾದಿಸುವುದಾದರೂ ಹೇಗೆ’’ ಎಂದು ನ್ಯಾಯಾಲಯವನ್ನೇ ಪ್ರಶ್ನಿಸಿದರು. ಅವರು ಈ ರೀತಿ ನಡೆದುಕೊಂಡದ್ದು ಇದೇ ಮೊದಲಲ್ಲ. ಸರ್ವೋಚ್ಚ ನ್ಯಾಯಾಲಯವು ತಪ್ಪಿನಡೆದಾಗ ತಿದ್ದಿ ಹೇಳುವ ಯೋಗ್ಯತೆ, ಧೈರ್ಯವನ್ನು ಅನೇಕ ಬಾರಿ ತೋರಿದವರು. ನ್ಯಾಯಾಲಯಕ್ಕೆ ನಿರ್ಭಯವಾಗಿ ಘನತೆಯಿಂದ ಅವರು ನೀಡುವ ಸಲಹೆಯ ಮಾತುಗಳನ್ನು ನ್ಯಾಯಾಲಯಗಳು ಪ್ರಕರಣಗಳ ಮತ್ತು ನ್ಯಾಯಾಲಯಗಳ ಒಳಗೂ ಹೊರಗೂ ಗಂಭೀರವಾಗಿ ಗಮನಿಸುತ್ತವೆಯೆಂದರೆ ಅವರ ಹಿರಿಮೆ ಸ್ಪಷ್ಟವಾದೀತು. ನಾರಿಮನ್ ತಮ್ಮ ಆತ್ಮಚರಿತ್ರೆ ‘ಬಿಫೋರ್ ಮೆಮೊರಿ ಫೇಡ್ಸ್ (ನೆನಪು ಮಾಸುವ ಮುನ್ನ) ಕೃತಿ (ಪ್ರಕಟಣೆ: 2010)ಯಲ್ಲಿ ತಮ್ಮ ವೃತ್ತಿ ಜೀವನದ ಹಾದಿಯನ್ನು, ತಾನು ಕಂಡ ಜಗತ್ತನ್ನು, ದೇಶ ಎದುರಿಸುತ್ತಿರುವ ಆತಂಕಗಳನ್ನು ಚಿತ್ರಿಸಿದ್ದಾರೆ. ರಂಗೂನ್‌ನಲ್ಲಿ ಹುಟ್ಟಿ ಬಾಲ್ಯದಲ್ಲೇ ಭಾರತಕ್ಕೆ ಬಂದು ದಿಲ್ಲಿಯಲ್ಲಿ ಈಗ ಬದುಕುತ್ತಿರುವ ನಾರಿಮನ್ ಎಂದಿಗೂ ತನ್ನ ಸ್ವಾಭಿಮಾನವನ್ನು ಬಿಟ್ಟುಕೊಟ್ಟಿಲ್ಲವೆಂಬುದು ಅವರ ಆತ್ಮಚರಿತ್ರೆಯಿಂದ ಮಾತ್ರವಲ್ಲ, ಅವರ ಸಾರ್ವಜನಿಕ ವ್ಯವಹರಣೆಯಲ್ಲಿ, ಧೋರಣೆಯಲ್ಲಿ ಗೊತ್ತಾಗುತ್ತದೆ. ಸಂವಿಧಾನ ತಜ್ಞರಾದ ಅವರ ಒಂದು ಸಾಂದರ್ಭಿಕ ಮಾತುಗಳು ಹೀಗಿವೆ: ಒಂದು ದೇಶದ ಚರಿತ್ರೆಯ ನಿರಂತರ ಪಯಣದಲ್ಲಿ ಎರಡನೆ ಅವಕಾಶವೆಂಬುದಿಲ್ಲ. ಅಲ್ಲಿರುವುದು ಬೇರೆ ಕಡೆಯ ಪರಿಸ್ಥಿತಿಗೆ ಹೋಲಿಸಿ ಕಲಿಯಲಿರುವ ಪಾಠಗಳು ಮಾತ್ರ.

ಯಾವುದೇ ದೇಶದ ಪರಿಸ್ಥಿತಿಯು (ಸರಿದಾರಿಯಲ್ಲಿ ಯೋಚಿಸುವ ಜನರ ಮನಸ್ಸಿನಲ್ಲಿ) ಸಂಪೂರ್ಣ ಕೈಮೀರಿ ಹೋದಾಗ, ಕಾನೂನು ಮುರಿದು ಬಿದ್ದಾಗ, ರಾಜಕಾರಣಿಗಳು ಖರೀದಿಗೊಳಪಟ್ಟಾಗ -ಅವರು ಖರೀದಿಯಾದ ನಂತರ ಕನಿಷ್ಠ ಅಲ್ಲೇ ಉಳಿಯುವ ಲಜ್ಜೆಯೂ ಅವರಲ್ಲಿರುವುದಿಲ್ಲ!-ಮತ್ತು ಅಂತಹ ಸಂದರ್ಭದಲ್ಲಿ ಸರ್ವಾಧಿಕಾರಿಗಳು ದೇಶವನ್ನು ಕೈಗೆತ್ತಿಕೊಳ್ಳುತ್ತಾರೆ ಮತ್ತು ತಮ್ಮನ್ನು ಸ್ಥಾಪಿಸಿಕೊಳ್ಳುತ್ತಾರೆ. ಮರ್ಯಾದೆೆಯ ವರ್ತನೆಯ ಮಾನದಂಡಗಳು ಮತ್ತು ಸ್ಥಾಪಿತ ಸಿದ್ಧಾಂತಗಳು ಶೂನ್ಯವಾದಾಗ, ರೂಢಿಗತ ನಂಬಿಕೆಗಳು ಗಾಳಿಗೆಸೆ ಯಲ್ಪಟ್ಟಾಗ, ಯಾವ ಸಂವಿಧಾನವೂ, ಅದೆಷ್ಟೇ ಚೆನ್ನಾಗಿ ರಚಿಸಲ್ಪಟ್ಟಿರಲಿ, ಕಾರ್ಯವೆಸಗದು.
ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವವು ಆತ್ಮಹತ್ಯೆಗೆ ಉದ್ಯುಕ್ತವಾಗುತ್ತದೆ.
ನಾರಿಮನ್ ವ್ಯಕ್ತಿತ್ವದ ಪರಿಚಯವಾಗದವರಷ್ಟೇ ಅವರನ್ನು ಹಳಿದಾರು. ಅವರ ಯೋಗ್ಯತೆಯನ್ನು ಅಳೆಯಹೊರಡುವುದೆಂದರೆ ಅಂಗುಲ ಹುಳು ಕಾಡನ್ನು ಅಳೆಯಲು ಹೊರಟಂತೆ. ಕರ್ನಾಟಕದಿಂದ ಅವರಿಗೆ ಬೇಸರವಾದರೆ ಅದು ಕರ್ನಾಟಕಕ್ಕೆ ಕೆಟ್ಟ ಜಾಹೀರಾತೇ ವಿನಾ ಅವರಿಗಲ್ಲ.
ಆದ್ದರಿಂದ ನಾರಿಮನ್ ಅವರನ್ನು ಟೀಕಿಸುವ ಮಂದಿ ಮೊದಲು ಕನ್ನಡಿಯೆದುರು ಸ್ವಲ್ಪ ಹೊತ್ತು ನಿಂತು ತಮ್ಮ ಗಾತ್ರ-ತೂಕ ನೋಡಿಕೊಳ್ಳುವುದು ಒಳ್ಳೆಯದು. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top