-

ಕಾರ್ಪೊರೇಟ್ ಮೊಸರೂಟದಲ್ಲಿ ವೈದ್ಯವೃತ್ತಿಗೆ ಬರೇ ಏಟು

-


ವೈದ್ಯರಿಗೂ, ಇತರ ಸಿಬ್ಬಂದಿಗೂ ಆಕರ್ಷಕ ಸಂಬಳ- ಸವಲತ್ತುಗಳನ್ನು ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವಂತೆ ಉತ್ತೇಜಿಸುವ ಬದಲು ವೈದ್ಯರನ್ನೇ ಹಳಿದು, ಶಿಕ್ಷಿಸುವುದು ಸರಕಾರಗಳಿಗೆ ಹವ್ಯಾಸವಾಗುತ್ತಿದೆ. ಸರಕಾರಿ ಆರೋಗ್ಯ ಸೇವೆಗಳು ಸೊರಗುವುದಕ್ಕೆ ವೈದ್ಯರಿಗೆ ಮನುಷ್ಯತ್ವವಿಲ್ಲದಿರುವುದೇ ಮುಖ್ಯ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಆರೋಗ್ಯ ಸೇವೆಗಳಿಗೆ ದುಡ್ಡು ಬಿಚ್ಚದ ಸರಕಾರಗಳು ಮೊಸರು ತಿಂದು, ಕೈಯನ್ನು ವೈದ್ಯರ ಮೂತಿಗೆ ಒರಸಿ ಏಟು ತಿನ್ನಿಸುತ್ತಿವೆ.
 

ಮಂಗವೊಂದು ಮೊಸರು ತಿಂದು ಕೈಯನ್ನು ಮೇಕೆಯ ಮೂತಿಗೆ ಒರಸಿ ಮೊಸರಿನ ಧಣಿಯ ಏಟನ್ನು ಮೇಕೆಗೆ ದಾಟಿಸಿ ತಾನು ತಪ್ಪಿಸಿಕೊಂಡದ್ದು ಎಲ್ಲರಿಗೆ ಗೊತ್ತಿದ್ದದ್ದೇ. ಮೊಸರು ತಿನ್ನುವ ಮಹಾ ಆಸ್ಪತ್ರೆಗಳ ದೆಸೆಯಿಂದ ಮೊಸರಿನ ಧಣಿಗಳಾದ ಜನರಿಂದ ಏಟು ತಿನ್ನುವ ಮೇಕೆ ಪಾಡು ಸಾಮಾನ್ಯ ವೈದ್ಯರಿಗೊದಗಿದೆ. ಮೊಸರು ತಿಂದು ತಿಂದು ಮಂಗಗಳು ಕೊಬ್ಬುತ್ತಿವೆ, ಆಳುವವರನ್ನೂ ಮಂಗ ಮಾಡುತ್ತಿವೆ; ಏಟು ತಿನ್ನುತ್ತಿರುವ ಮೇಕೆಗಳು ಏನಾಗುತ್ತಿದೆ ಎಂದರಿಯದೆ ಮೇ ಮೇ ಎಂದು ಚೀರಾಡುತ್ತಾ ಮಂಗಗಳ ಹಿಂದೆ-ಮುಂದೆಯೇ ಗಿರಕಿ ಹೊಡೆಯುತ್ತಿವೆ, ಅವುಗಳಿಗೇ ಸಲಾಮು ಹಾಕುತ್ತಿವೆ. ತೊಂಬತ್ತರ ದಶಕದ ಆರಂಭದಲ್ಲಿ ನಮ್ಮ ದೇಶದಲ್ಲಿ ಆರ್ಥಿಕ ಉದಾರೀಕರಣ (ಹಣವಿದ್ದವರ ಪಾಲಿಗೆ ಉದಾರತೆ) ಆರಂಭಗೊಳ್ಳುವವರೆಗೆ ಆರೋಗ್ಯ ರಕ್ಷಣೆಯು ಸೇವೆಯಾಗಿಯೇ ಇತ್ತು. ಹೊಸ ಆರ್ಥಿಕ ನೀತಿಗಳು ಆನಾವರಣಗೊಳ್ಳುವುದರೊಂದಿಗೆ ಆ ನಂತರದ ವರ್ಷಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳು ಸರಕಾರಗಳಿಗೆ ಬೇಡವಾದವು; ಮೊದಮೊದಲು ವೈದ್ಯಕೀಯ ಶಿಕ್ಷಣವೂ ಸೇರಿದಂತೆ ಉನ್ನತ ಶಿಕ್ಷಣ ಹಾಗೂ ಅತ್ಯುನ್ನತ ಮಟ್ಟದ ಆರೋಗ್ಯ ಸೇವೆಗಳಿಂದ (ಅತಿ ವಿಶೇಷ ಸೌಲಭ್ಯಗಳುಳ್ಳ ಆಸ್ಪತ್ರೆಗಳಿಂದ) ಸರಕಾರಗಳು ವಿಮುಖವಾದವು. ಈಗೀಗ ಪ್ರಾಥ ಮಿಕ ಶಿಕ್ಷಣವೂ, ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸರಕಾರಗಳಿಗೆ ಬೇಡವಾಗಿವೆ; ಅವನ್ನೆಲ್ಲ ಒಂದೊಂದಾಗಿ ಮುಚ್ಚಲಾಗುತ್ತಿದೆ ಅಥವಾ ಖಾಸಗಿಯವರಿಗೆ ವಹಿಸಿಕೊಟ್ಟು ಕೈತೊಳೆದುಕೊಳ್ಳಲಾಗುತ್ತಿದೆ.

ಖಾಸಗಿಯವರ ಪಾಲಿಗೆ ಇವೆರಡೂ ಹಬ್ಬದೂಟಗಳೇ. ಶಾಲೆಗಳಂತೂ ಬೇಕೇ ಬೇಕು, ಆಸ್ಪತ್ರೆ-ವೈದ್ಯರುಗಳೂ ಬೇಕು. ಇವೆರಡೂ ಅಗತ್ಯವಿಲ್ಲ ಎನ್ನುವ ಸ್ಥಿತಿ ಎಂದಿಗೂ ಬಾರದು, ಹಾಕಿದ ಹಣಕ್ಕೆ ನಷ್ಟವೇ ಆಗದು. ಅದಕ್ಕೇ ಅತಿ ದೊಡ್ಡ ಬಂಡವಾಳಗಾರರಿಂದ ಹಿಡಿದು ನಮ್ಮೂರು ಕೇರಿಗಳ ಸಣ್ಣ ಶ್ರೀಮಂತರೂ ಈಗೀಗ ಶಾಲೆಗಳನ್ನೂ, ಆಸ್ಪತ್ರೆಗಳನ್ನೂ ತೆರೆಯತೊಡಗಿದ್ದಾರೆ; ಹಿಂದೊಮ್ಮೆ ಮರ, ಕಬ್ಬಿಣ, ಶರಾಬು, ಜೀನಸು, ತಿನಿಸು ಇತ್ಯಾದಿ ಮಾರುತ್ತಿದ್ದವರೀಗ ವಿದ್ಯಾದಾನಿ, ಆರೋಗ್ಯದಾನಿ ಗಳಾಗತೊಡಗಿದ್ದಾರೆ.

 ತೊಂಬತ್ತರ ದಶಕದಿಂದೀಚೆಗೆ ಆರಂಭ ಗೊಂಡಿರುವ ಶಾಲೆ-ಕಾಲೇಜುಗಳಲ್ಲಿ, ವೈದ್ಯಕೀಯ, ತಂತ್ರಜ್ಞಾನ, ಆಡಳಿತ ಇತ್ಯಾದಿಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 60-70ರಷ್ಟು ಖಾಸಗಿ ರಂಗದಲ್ಲೇ ಆರಂಭಗೊಂಡಿವೆ. ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಎಂಥದ್ದೇ ಆದರೂ ವಿದ್ಯಾಸಂಸ್ಥೆಗಳನ್ನು ಆರಂಭಿಸುವುದಕ್ಕೆ ಅನುಕೂಲ ಮಾಡಿಕೊಡುವ ಎಲ್ಲಾ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಒಂದು ಶಾಲೆಯನ್ನು ತೆರೆಯಬೇಕಾದರೆ ಅದಕ್ಕೆ ಸೂಕ್ತ ಕಟ್ಟಡವಿರಬೇಕು, ಮಕ್ಕಳ ಆಟೋಟಗಳಿಗಾಗಿ ಸಾಕಷ್ಟು ದೊಡ್ಡ ಬಯಲಿರಬೇಕು, ಸೂಕ್ತ ತರಬೇತಾದ ಶಿಕ್ಷಕರಿ ರಬೇಕು ಎಂಬ ನಿಯಮಗಳಿಗೆಲ್ಲ ತೂರು ದಾರಿಗಳನ್ನು ಕಲ್ಪಿಸಲಾಗಿದೆ. ಆಟದ ಬಯಲಿಗೆ ಜಾಗ ಹೊಂದಿಸಲು ಸಾಕಷ್ಟು ವೆಚ್ಚವಾಗುವುದರಿಂದ, ಆಟಕ್ಕೆ ಅವಕಾಶವಿಲ್ಲದಿರುವ ಶಾಲೆಗಳಲ್ಲಿ ಅದಕ್ಕೆ ಪರ್ಯಾಯವಾಗಿ ಯೋಗವನ್ನು ಕಲಿಸಬಹುದು ಎಂಬ ಮಂತ್ರವನ್ನು ಸೇರಿಸಿ, ನಗರದ ನಡು ಮಧ್ಯೆ ಬಹುಮಹಡಿಯ ವಾಣಿಜ್ಯ ಕಟ್ಟಡದಲ್ಲಿ ಶಾಲೆ-ಕಾಲೇಜುಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಒಂದಷ್ಟು ಹೊತ್ತು ಉಸಿರಾಡಿದರೆ ಎಲ್ಲವೂ ಸರಿ ಹೋಗುತ್ತದೆಂದ ಮೇಲೆ ಒಲಿಂಪಿಕ್ ಪದಕ ಸಿಕ್ಕರೆಷ್ಟು ಬಿದ್ದರೆಷ್ಟು? ಈ ಖಾಸಗಿ ಶಾಲೆಗಳಲ್ಲಿ ಸೂಟು ಬೂಟು ಹಾಕಿ, ಕುತ್ತಿಗೆಗೆ ಪಟ್ಟಿ ಬಿಗಿದು, ಶಾಲೆಯಲ್ಲೇ ಮಾರಿದ ಸಮವಸ ತೊಟ್ಟು, ಮಣ ಬಾರದ ಪುಸ್ತಕ ಹೊತ್ತು ಒಂದೆರಡು ಸಾಲು ಇಂಗ್ಲಿಷ್ ಒದರಿದರೆ ಕಲಿಯಬೇಕೇಕೆ, ಅರಿಯಬೇಕೇಕೆ? ಸರಕಾರಿ ಶಾಲೆಗಳೆಲ್ಲ ಕೆಟ್ಟವು, ಅಲ್ಲಿ ಕಲಿತರೆ ಉಪಯೋಗವಿಲ್ಲ ಎಂದೆಲ್ಲ ಹೀಯಾಳಿಸಿ ಮಕ್ಕಳನ್ನು ಈ ಹೊಸದಾದ, ಖಾಸಗಿ ಶಾಲೆಗಳತ್ತ ದೂಡುವ ಕೆಲಸ ಬಲಗೊಳ್ಳುತ್ತಿರುವಂತೆ ಅತ್ತ ಸರಕಾರವೂ ತನ್ನ ಶಾಲೆಗಳನ್ನು ಒಂದೊಂದಾಗಿ ಮುಚ್ಚುತ್ತಾ ಬರುತ್ತಿರುವುದು ಹೊಸ ಆರ್ಥಿಕ ನೀತಿಯ ಮಹಾ ಯೋಜನೆಯ ಭಾಗವೇ ಆಗಿದೆ.

ಹಿಂದೆ ಸರಕಾರಿ ಶಾಲೆಗಳಲ್ಲೇ ಕಲಿತು ಇಂದು ದೇಶ-ವಿದೇಶಗಳಲ್ಲಿ ಹೆಸರು-ಹಣ ಗಳಿಸಿದವರೂ ಈ ಕುತಂತ್ರಕ್ಕೆ ತಾಳ ಹಾಕುತ್ತಿರುವುದು ವಿಚಿತ್ರವಾದರೂ ಸತ್ಯವೇ ಆಗಿದೆ. ದೇಶವಾಸಿಗಳಿಗೆ ಶಿಕ್ಷಣವೊದಗಿಸುವಲ್ಲಿ ಐವತ್ತು ವರ್ಷಗಳಷ್ಟು ಹಿಂದೆ ಬಿದ್ದಿದ್ದೇವೆನ್ನುವುದು ಅಭಿವೃದ್ಧಿಯಲ್ಲಿ ಅಮಲಾಗಿರುವ ಸ್ವಘೋಷಿತ ದೇಶಭಕ್ತರಿಗೆ ಒಂದು ಸಮಸ್ಯೆಯೆಂದೇ ಅನಿಸುವುದಿಲ್ಲ.
 
ಆರೋಗ್ಯ ಸೇವೆಗಳ ಗತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ವಿಪರೀತವಾಗಿ ಅಭಿವೃದ್ಧಿಯಾಗುತ್ತಿದೆ ಎನ್ನಲಾಗುವ ಭಾರತದಲ್ಲಿ ಗರ್ಭಿಣಿಯರು ಹೆರುವುದಕ್ಕೆ ಆಸ್ಪತ್ರೆಯಿಂದ ಆಸ್ಪತ್ರೆಗೆ ನಡುರಾತ್ರಿಯಿಡೀ ಅಲೆಯುವಂತಾಗಿದೆ, ಮಲೇರಿಯಾ, ಕ್ಷಯ, ಡೆಂಗ್ ಇತ್ಯಾದಿ ಸೋಂಕುಗಳು ನಿಯಂತ್ರಿಸಲಾಗದೆ ಹಬ್ಬುತ್ತಿವೆ, ಮೃತರನ್ನು ಒಯ್ಯುವುದಕ್ಕೆ ವಾಹನಗಳು ದೊರೆಯದೆ ಹೆಗಲ ಮೇಲೆ ಹೊತ್ತು ಮೈಲುಗಟ್ಟಲೆ ಸಾಗುವಂತಾಗಿದೆ. ಇದನ್ನು ಇನ್ನಷ್ಟು ಹದಗೆಡಿಸಿ, ಜನಸಾಮಾನ್ಯರಿಗೆ ಚಿಕಿತ್ಸೆಯೇ ದೊರೆಯಂತಾಗಿ, ಬೀದಿ ಬದಿ ನರಳಿ ಸಾಯಬೇಕಾದ ದುಸ್ಥಿತಿಗೆ ತಳ್ಳಲು ಎಲ್ಲ ಯೋಜನೆಗಳೂ ಸಿದ್ಧವಾಗುತ್ತಿವೆ. ದೇಶದ ಆರೋಗ್ಯ ಸೇವೆಗಳ ವಹಿವಾಟು ಈಗ ವರ್ಷಕ್ಕೆ ಏಳು ಲಕ್ಷ ಕೋಟಿ ರೂಪಾಯಿ ಗಳಷ್ಟಿದ್ದು, ವಾರ್ಷಿಕ ಶೇ.17ರಷ್ಟು ವೃದ್ಧಿಯಾಗಿ, 2020ರ ವೇಳೆಗೆ 20 ಲಕ್ಷ ಕೋಟಿ ಯಷ್ಟಾಗಬಹುದೆಂದು ಲೆಕ್ಕಾಚಾರವಾಗುತ್ತಿದೆ. ಮುಂದಿನ ಆರೇಳು ವರ್ಷಗಳಲ್ಲಿ ಆರೇಳು ಲಕ್ಷ ಹೆಚ್ಚುವರಿ ರೋಗಿಗಳಿಗಾಗಿ ಆಸ್ಪತ್ರೆ ಸೌಲಭ್ಯಗಳ ಅಗತ್ಯವಿದೆಯೆಂದೂ, ಅದಕ್ಕಾಗಿ ಎರಡು ಲಕ್ಷ ಕೋಟಿ ರೂಪಾಯಿ ಹೂಡುವುದಕ್ಕೆ ಅವಕಾಶಗಳಿವೆಯೆಂದೂ ಅಂದಾಜಿಸಲಾಗುತ್ತಿದೆ.

ಈಗ ವರ್ಷಕ್ಕೆ ಸುಮಾರು ಎರಡೂವರೆ ಲಕ್ಷ ವಿದೇಶೀ ಯರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಿದ್ದಾರೆ, ಸುಮಾರು 20 ಸಾವಿರ ಕೋಟಿ ರೂಪಾಯಿಗಳ ವ್ಯವಹಾರಕ್ಕೆ ಕಾರಣರಾಗುತ್ತಿದ್ದಾರೆ, ಇನ್ನೆರಡು ವರ್ಷಗಳಲ್ಲಿ ಇದು ದುಪ್ಪಟ್ಟಾಗಲಿದೆ ಎಂದು ಜೊಲ್ಲು ಸುರಿಸಲಾಗುತ್ತಿದೆ. ಇವನ್ನೆಲ್ಲ ಪರಿಗಣಿಸಿ ಈ ಮೊದಲು ಆರೋಗ್ಯ ಕ್ಷೇತ್ರದಲ್ಲಿ ಸರಾಸರಿ 34-100 ಕೋಟಿ ರೂ. ಹೂಡುತ್ತಿದ್ದ ಖಾಸಗಿ ಹೂಡಿಕೆದಾರರು ಈಗ 135-200 ಕೋಟಿ ಹೂಡತೊಡಗಿದ್ದಾರಂತೆ.
ಖಾಸಗಿ ಹೂಡಿಕೆಯ ಲೆಕ್ಕಾಚಾರ ಹೀಗೆ ಬೆಳೆಯುತ್ತಿರುವಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗಳಿಗೆ ಸರಕಾರಿ ವೆಚ್ಚವು ಇಳಿಯುತ್ತಲೇ ಸಾಗಿದೆ, ಹಣದುಬ್ಬರವನ್ನು ಸರಿದೂಗಿಸದೆ ವರ್ಷದಿಂದ ವರ್ಷಕ್ಕೆ ಆರೋಗ್ಯ ಇಲಾಖೆಯ ಅನುದಾನವು ಕಡಿಮೆಯಾಗುತ್ತಲೇ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ದಾದಿಯರು, ಪ್ರಯೋಗಾಲಯಗಳ ಸಿಬಂದಿ ಹಾಗೂ ಅರೆವೈದ್ಯಕೀಯ ಸಿಬ್ಬಂದಿಯ ಹುದ್ದೆಗಳಲ್ಲಿ ಶೇ. 20-80ರಷ್ಟು ಭರ್ತಿಯಾಗದೇ ಉಳಿದಿವೆ, ಅಗತ್ಯ ಉಪಕರಣಗಳೂ ಲಭ್ಯವಿಲ್ಲ.

ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು, ಜಿಲ್ಲಾಸ್ಪತ್ರೆಗಳು ಕೂಡ ತಜ್ಞ ವೈದ್ಯರು ಹಾಗೂ ಇತರ ಉನ್ನತ ಸೌಲಭ್ಯಗಳ ಕೊರತೆಯಿಂದ ಸೊರಗುತ್ತಿವೆ. ರುಗ್ಣವಾಹಕಗಳಿದ್ದರೆ ಇಂಧನವಿಲ್ಲ, ಎರಡೂ ಇದ್ದರೆ ಚಾಲಕರಿಲ್ಲ ಎಂಬಂತಹ ದುಸ್ಥಿತಿ ಹಲವೆಡೆಗಳಲ್ಲಿದೆ.

ವೈದ್ಯರಿಗೂ, ಇತರ ಸಿಬ್ಬಂದಿಗೂ ಆಕರ್ಷಕ ಸಂಬಳ- ಸವಲತ್ತುಗಳನ್ನು ನೀಡಿ ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವಂತೆ ಉತ್ತೇಜಿಸುವ ಬದಲು ವೈದ್ಯರನ್ನೇ ಹಳಿದು, ಶಿಕ್ಷಿಸುವುದು ಸರಕಾರಗಳಿಗೆ ಹವ್ಯಾಸವಾಗುತ್ತಿದೆ, ಸರಕಾರಿ ಆರೋಗ್ಯ ಸೇವೆಗಳು ಸೊರಗುವುದಕ್ಕೆ ವೈದ್ಯರಿಗೆ ಮನುಷ್ಯತ್ವವಿಲ್ಲದಿರುವುದೇ ಮುಖ್ಯ ಕಾರಣ ಎಂಬಂತೆ ಬಿಂಬಿಸಲಾಗುತ್ತಿದೆ. ಆರೋಗ್ಯ ಸೇವೆಗಳಿಗೆ ದುಡ್ಡು ಬಿಚ್ಚದ ಸರಕಾರಗಳು ಮೊಸರು ತಿಂದು, ಕೈಯನ್ನು ವೈದ್ಯರ ಮೂತಿಗೆ ಒರಸಿ ಏಟು ತಿನ್ನಿಸುತ್ತಿವೆ.

ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ಅನುದಾನವನ್ನು ನೀಡದೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆ ಗಳವರೆಗೆ ಎಲ್ಲವನ್ನೂ ಖಾಸಗಿಯವರಿಗೆ ವಹಿಸಿಕೊಡುವುದು, ದೊಡ್ಡ ಆಸ್ಪತ್ರೆಗಳಲ್ಲಿ ಪ್ರಯೋಗಾಲಯ ಗಳಂತಹಾ ಸೌಲಭ್ಯಗಳನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ತಮ್ಮ ಆಸ್ಪತ್ರೆಗಳಿಗೆ ನೀಡಲು ಹಣವಿಲ್ಲ ಎಂದು ಗೋಗರೆಯುವ ಇವೇ ಸರಕಾರಗಳು, ಆರೋಗ್ಯ ವಿಮೆಯ ಹೆಸರಿನಲ್ಲಿ ಪ್ರತೀ ವರ್ಷ ನೂರಾರು ಕೋಟಿ ರೂಪಾಯಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸುರಿಯುವುದಕ್ಕೆ ಅಳುಕುವುದೇ ಇಲ್ಲ. ಆ ಮೂಲಕ ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳತ್ತ ತಳ್ಳುವುದಕ್ಕೂ ಹೇಸುವುದಿಲ್ಲ. ಖರ್ಚು-ವೆಚ್ಚಗಳಿರುವ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ಲಸಿಕೆ ಮತ್ತಿತರ ರೋಗ ನಿಯಂತ್ರಣ ಕಾರ್ಯಕ್ರಮಗಳು ಸರಕಾರಿ ವ್ಯವಸ್ಥೆಯ ಜವಾಬ್ದಾರಿಯಾದರೆ, ಲಾಭ ತರಬಲ್ಲ ಪರೀಕ್ಷೆ-ಚಿಕಿತ್ಸೆಗಳೆಲ್ಲ ಖಾಸಗಿ ಆಸ್ಪತ್ರೆಗಳ ಸುಪರ್ದಿಗೆ! ಮೊಸರು ಅತ್ತ, ಏಟೆಲ್ಲವೂ ಇತ್ತ.

ತೊಂಬತ್ತರಲ್ಲಿ ಶುರುವಾದ ಆರ್ಥಿಕ ನೀತಿಯ ಬಳಿಕ ಖಾಸಗಿ ವೈದ್ಯಕೀಯ ಕ್ಷೇತ್ರದಲ್ಲೂ ಭಾರೀ ಬದಲಾವಣೆಗಳಾಗಿವೆ. ಆರೋಗ್ಯ ವಿಮೆಯ ಆಗಮನದೊಂದಿಗೆ ಪರೀಕ್ಷೆ-ಚಿಕಿತ್ಸೆಗಳ ವೆಚ್ಚವು ಬಹು ಪಾಲು ಏರಿಕೆಯಾಗಿದೆ. ಮಾತ್ರವಲ್ಲ, ಅಗತ್ಯವಿಲ್ಲದ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಮಾಡಿಸುವುದು, ಪಾವತಿ ಮೊತ್ತವನ್ನು ವಿಮೆಯ ಮೊತ್ತಕ್ಕೆ ಸರಿದೂಗಿಸುವುದು ಸಾಮಾನ್ಯವಾಗಿಬಿಟ್ಟಿದೆ. ಇದೇ ಚಾಳಿ ಹಬ್ಬಿ, ಆರೋಗ್ಯ ಸೇವೆಗಳ ಒಟ್ಟಾರೆ ವೆಚ್ಚವೇ ಹೆಚ್ಚಿದೆ, ವಿಮೆಯಿಲ್ಲದವರನ್ನೂ ಕಾಡುತ್ತಿದೆ. ಈ ಪಾವತಿಗಳಲ್ಲಿ ಆಸ್ಪತ್ರೆಗಳಿಗೆ ಸಲ್ಲುವ ಪಾಲೇ ಹೆಚ್ಚಿನದಾಗಿರುವುದರಿಂದ ಮೊಸರು ಅವರಿಗೆ, ಏಟು ವೈದ್ಯರಿಗೆ ಎಂಬಂತಾಗಿದೆ.

ಇನ್ನು ದೊಡ್ಡ ದುಡ್ಡಿನ ಕಾರ್ಪೊರೇಟ್ ಆಸ್ಪತ್ರೆಗಳ ಮೊಸರೂಟವೂ ದೊಡ್ಡದಿದೆ, ಅವರಾಟದಲ್ಲಿ ಮೊಸರು ಮೆತ್ತಿಸಿಕೊಂಡ ಸಣ್ಣ ಆಸ್ಪತ್ರೆಗಳ ಬವಣೆಗಳೂ ಹೆಚ್ಚುತ್ತಿವೆ. ನಮ್ಮ ದೇಶದಲ್ಲಿ ಶೇ.70ಕ್ಕೂ ಹೆಚ್ಚು ಆರೋಗ್ಯ ಸೇವೆಗಳು ಖಾಸಗಿ ರಂಗದಲ್ಲೇ ಇವೆ. ಜನಸಾಮಾನ್ಯರು ಆರೋಗ್ಯ ರಕ್ಷಣೆಯ ವೆಚ್ಚದಲ್ಲಿ ಶೇ.70ರಷ್ಟನ್ನು ತಮ್ಮ ಕಿಸೆಯಿಂದಲೇ ಭರಿಸುತ್ತಾರೆ. ಈ ಖಾಸಗಿ ಆರೋಗ್ಯ ಸೇವೆಗಳಲ್ಲಿ ಶೇ.70ರಷ್ಟನ್ನು 10-30 ಹಾಸಿಗೆಗಳಿರುವ ಸಣ್ಣ ಆಸ್ಪತ್ರೆಗಳೇ ನಿಭಾಯಿಸುತ್ತವೆ, ಇವುಗಳಲ್ಲಿ ಶೇ. 75ರಷ್ಟು ಏಕಾಂಗಿ ವೈದ್ಯರೇ ನಡೆಸುವ ಆಸ್ಪತ್ರೆಗಳಾಗಿವೆ; ಈ ವೈದ್ಯರು ಆಸ್ಪತ್ರೆಯ ಬಳಿಯೇ ವಾಸ್ತವ್ಯ ಹೂಡಿ, ಹಗಲಿರುಳು ನಿಷ್ಠೆಯಿಂದ ತಮ್ಮ ಕಾಯಕದಲ್ಲಿ ಮುಳುಗಿರುತ್ತಾರೆ. ಹೀಗೆ ದೇಶವಾಸಿಗಳ ಆರೋಗ್ಯ ರಕ್ಷಣೆಗೆ ಮಹತ್ತರ ಕಾಣಿಕೆ ನೀಡುತ್ತಿರುವ ಈ ಸಣ್ಣ ಆಸ್ಪತ್ರೆಗಳಿಗೆ ಸರಕಾರದ ಬೆಂಬಲವೇನಿಲ್ಲ, ಬದಲಿಗೆ ಇತ್ತೀಚಿನ ವರ್ಷಗಳಲ್ಲಿ ಬಗೆಬಗೆಯ ತೊಂದರೆಗಳೇ ಆಗುತ್ತಿವೆ.

ದೇಶದಲ್ಲಿಂದು ಸುಮಾರು 150-200 ರಷ್ಟು ಖಾಸಗಿ ಮಹಾ ಆಸ್ಪತ್ರೆಗಳಿರಬಹುದು. ಇಂತಹ ಸುಮಾರು 110 ಆಸ್ಪತ್ರೆಗಳ ಸಮೂಹವನ್ನೇ ನಡೆಸುತ್ತಿರುವ ಎರಡು ಸಂಸ್ಥೆಗಳು ವರ್ಷಕ್ಕೆ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿವೆ. ಇಂತಹ ಹಲವು ಆಸ್ಪತ್ರೆಗಳಿಗೆ ಸರಕಾರಗಳಿಂದ ಭೂಮಿ ಭಾಗ್ಯವೂ, ತೆರಿಗೆ ವಿನಾಯಿತಿ ಭಾಗ್ಯಗಳೂ ದೊರೆತಿವೆ. ಅವಕ್ಕೆ ಪ್ರತಿಯಾಗಿ ದೇಶದ ಬಡಜನರಿಗೆ ಉಚಿತ ಚಿಕಿತ್ಸೆ ನೀಡಬೇಕೆಂಬ ಶರತ್ತುಗಳನ್ನು ಇವು ಮರೆತಿದ್ದರೂ ತೊಂದರೆಯಿಲ್ಲ, ಒಂದಷ್ಟು ವಿದೇಶೀಯರಿಗೆ ಚಿಕಿತ್ಸೆ ನೀಡಿ ವಿದೇಶಿ ಹಣವನ್ನು ತರಿಸಿ ದೇಶಕ್ಕೆ ಮಹತ್ತರ ಕೊಡುಗೆ ನೀಡುತ್ತಿವೆಯೆನ್ನುವುದು ಅತ್ಯಂತ ಪ್ರಶಂಸಾರ್ಹ ಎಂದು ಕೇಂದ್ರ ಸರಕಾರವು 2014 ರ ಕೊನೇ ದಿನ ಹೊರಡಿಸಿ ಮರೆತು ಬಿಟ್ಟಿರುವ ಆರೋಗ್ಯ ನೀತಿಯ ಕರಡಿನಲ್ಲೇ ಹೇಳಲಾಗಿದೆ.

ಈ ಆಸ್ಪತ್ರೆಗಳಲ್ಲಿ ಕೆಲವೇ ಕಾಯಿಲೆಗಳಿಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಿದೆ; ದೇಶವಾಸಿಗಳನ್ನು ಅತಿ ಹೆಚ್ಚು ಕಾಡುವ ಆರೋಗ್ಯ ಸಮಸ್ಯೆಗಳಿಗಾಗಲೀ, ಹೆರಿಗೆ, ಶಿಶು ಆರೈಕೆ ಇತ್ಯಾದಿಗಳಿಗಾಗಲೀ ಜನಸಾಮಾನ್ಯರು ಈ ಆಸ್ಪತ್ರೆಗಳತ್ತ ಸುಳಿಯುವಂತಿಲ್ಲ. ಆದರೆ ಈ ಮಹಾ ಆಸ್ಪತ್ರೆಗಳು ವಿಸುತ್ತಿರುವ ವಿಪರೀತ ಬೆಲೆ ಹಾಗೂ ಆಡಂಬರಗಳ ಗಾಳಿಯು ಒಟ್ಟಾರೆ ಆರೋಗ್ಯ ಸೇವೆಗಳ ಮೇಲೆ ಧೂಳೆಬ್ಬಿಸಿ, ಇತರ ಆಸ್ಪತ್ರೆಗಳ ಮೇಲೂ ಪರಿಣಾಮ ಬೀರುತ್ತಿದೆ. ದೇಶದ ಆಸ್ಪತ್ರೆಗಳು ಹೇಗಿರಬೇಕೆಂದು ಈ ಮಹಾ ಆಸ್ಪತ್ರೆಗಳು ಮಾನದಂಡಗಳನ್ನು ಸಿದ್ಧಪಡಿಸಿ, ಪ್ರಚಾರ ಮಾಡುತ್ತಿದ್ದು, ಅಂತಹ ಪ್ರಮಾಣ ಪತ್ರವನ್ನು ಪಡೆಯುವ ಪ್ರಲೋಭನೆಗೆ ಕೆಲವು ಸಣ್ಣ ಆಸ್ಪತ್ರೆಗಳು ಬಲಿಯಾಗುತ್ತಿವೆ; ತಾವೂ ಮಹಾ ಆಸ್ಪತ್ರೆಗಳಂತೆ ಸಿಂಗರಿಸಿಕೊಳ್ಳಲು 20-30 ಲಕ್ಷ ಖರ್ಚು ಮಾಡಿ, ಅದನ್ನು ಮರಳಿ ಪಡೆಯಲು ತಮ್ಮಲ್ಲಿನ ಚಿಕಿತ್ಸೆಯ ವೆಚ್ಚವನ್ನು ಐದಾರು ಪಾಲು ಹೆಚ್ಚಿಸಿ ತಮ್ಮಲ್ಲಿಗೆ ಬರುತ್ತಿದ್ದ ರೋಗಿಗಳ ವಿಶ್ವಾಸವನ್ನೇ ಕಳೆದುಕೊಳ್ಳುವಂತಹ ದುಸ್ಥಿತಿಗೆ ಇವು ತಲುಪುತ್ತಿವೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡ ಕೆಲವು ಮಾನದಂಡಗಳನ್ನು ಗೊತ್ತುಪಡಿಸಿ, ಅದರಂತೆ ವೈದ್ಯಕೀಯ ಸಂಸ್ಥೆಗಳನ್ನು ನೋಂದಾಯಿಸಬೇಕೆನ್ನುವ ಕಾನೂನುಗಳನ್ನು ಜಾರಿಗೊಳಿಸಿವೆ; ಈ ಕಾನೂನುಗಳಿಂದಲೂ ಮಹಾ ಆಸ್ಪತ್ರೆಗಳಿಗೆ ಯಾವುದೇ ತೊಂದರೆಯಾಗದೆ, ಸಣ್ಣ ಆಸ್ಪತ್ರೆಗಳ ಪಾಲಿಗೆ ಅಕಾರಿಗಳ ಕಿರುಕುಳಗಳೂ ಸೇರಿದಂತೆ ಹಲವು ಬಗೆಯ ಕಂಟಕಗಳಿಗೆ ಕಾರಣವಾಗುತ್ತಿವೆ. ಹೀಗೆ, ದೇಶದ ಶೇ. 70ರಷ್ಟು ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಸಣ್ಣ ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿಕೊಳ್ಳಬೇಕಾದ ಸ್ಥಿತಿಯನ್ನು ನಿರ್ಮಿಸಿ, ಆ ಮೂಲಕ ಜನರೆಲ್ಲರೂ ಅತಿ ದುಬಾರಿಯಾದ ಮಹಾ ಆಸ್ಪತ್ರೆಗಳನ್ನೇ ನೆಚ್ಚಿಕೊಳ್ಳಬೇಕಾದಂತಹ ಸನ್ನಿವೇಶವನ್ನು ಸೃಷ್ಟಿಸಲಾಗುತ್ತಿದೆ. ಅದಕ್ಕಾಗಿ ಖಾಸಗಿ ಆರೋಗ್ಯ ವಿಮೆಗಳನ್ನೂ ಬೆಳೆಸಲಾಗುತ್ತಿದೆ, ಸರಕಾರವೂ ಅದರಲ್ಲಿ ಕೈಜೋಡಿಸುತ್ತಿದೆ.

ಒಟ್ಟಿನಲ್ಲಿ ಮಹಾ ಆಸ್ಪತ್ರೆಗಳನ್ನು ಸ್ಥಾಪಿಸುತ್ತಿರುವ ದೊಡ್ಡ ಬಂಡವಾಳಗಾರರೂ, ಜೊತೆಗಿರುವ ರಾಜಕಾರಣಿಗಳೂ, ಅವರು ನಡೆಸುತ್ತಿರುವ ಸರಕಾರಗಳೂ ಮೊಸರೂಟವನ್ನು ಹಂಚಿ ಉಣ್ಣುತ್ತಿವೆ, ವೈದ್ಯಕೀಯ ಶಿಕ್ಷಣವನ್ನು ಕಳಪೆಗೊಳಿಸಿ, ಆರೋಗ್ಯ ಸೇವೆಗಳನ್ನು ದುಬಾರಿಯಾಗಿಸುತ್ತಿವೆ. ಆರೋಗ್ಯ ಸೇವೆಗಳ ನಿಜವಾದ ಬೆನ್ನೆಲುಬಾಗಿರುವ ಸಣ್ಣ ಆಸ್ಪತ್ರೆಗಳು ಮತ್ತು ಪ್ರಾಮಾಣಿಕವಾಗಿ ದುಡಿಯುತ್ತಿರುವ ವೈದ್ಯರು ಮೊಸರೊರಸಿಕೊಂಡ ಮೇಕೆಗಳಂತೆ ವಿನಾ ಕಾರಣ ದೂಷಣೆಗೆ ಒಳಗಾಗುತ್ತಿದ್ದಾರೆ.

 ಕೇಂದ್ರ ಸರಕಾರವು ಇದೀಗ ತರಲುದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾನೂನು ಜಾರಿಗೆ ಬಂದದ್ದೇ ಆದರೆ ದೊಡ್ಡ ಬಂಡವಾಳಗಾರರು, ರಾಜಕಾರಣಿಗಳು ಹಾಗೂ ಇನ್ನಿತರ ಪಟ್ಟಭದ್ರ ಹಿತಾಸಕ್ತಿಗಳಿಗೆ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಪ್ರತಿಯೋರ್ವ ವೈದ್ಯರ ಮೇಲೆ ತಮ್ಮ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಲು ಅತಿ ಸುಲಭವಾಗಲಿದೆ, ದೇಶದ ಆರೋಗ್ಯ ಸೇವೆಗಳು ಇನ್ನಷ್ಟು ಅಥಪತನವಾಗಲಿವೆ. ಇದನ್ನು ತಡೆಯಬೇಕಾದರೆ ವೈದ್ಯರು ಪ್ರಜ್ಞಾವಂತರಾಗಿ ಈ ಹುನ್ನಾರಗಳನ್ನು ತಡೆಯಲು ಒಗ್ಗೂಡಬೇಕಾಗಿದೆ, ಮೊಸರೊರಸಿ ತಪ್ಪಿಸಿಕೊಳ್ಳುತ್ತಿರುವ ಶಕ್ತಿಗಳನ್ನು ಗುರುತಿಸಿ ದೂರವಿಡಬೇಕಾಗಿದೆ. ಜನಸಾಮಾನ್ಯರೂ, ಮಾಧ್ಯಮಗಳೂ ಸತ್ಯವೇನಂದರಿತು ಪ್ರಾಮಾಣಿಕ ವೈದ್ಯರ ಬೆಂಬಲಕ್ಕೆ ನಿಲ್ಲಬೇಕಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top