ದೇವರ ಪ್ರೀತಿಯೇ ಜ್ಞಾನದ ಆರಂಭ | Vartha Bharati- ವಾರ್ತಾ ಭಾರತಿ

--

ದೇವರ ಪ್ರೀತಿಯೇ ಜ್ಞಾನದ ಆರಂಭ

ದೇರೆಬೈಲಿನಲ್ಲಿ ನಾನಿದ್ದ ಪರಿಸರದಲ್ಲಿ ಇದ್ದ ಜನರು ಬಿಜೈಯ ಜನರಂತೆ ಮಧ್ಯಮವರ್ಗದವರು ಮತ್ತು ಶ್ರೀಮಂತರಲ್ಲ. ಇದ್ದ ಐದಾರು ಮನೆಗಳು ಶ್ರೀಮಂತರು ಕ್ರಿಶ್ಚಿಯನ್ನರದ್ದು. ಇವರು ಶ್ರೀಮಂತರಾದರೂ ಶ್ರೀಮಂತಿಕೆಯ ಬಿಗುಮಾನ ಇವರಲ್ಲಿ ಇರಲಿಲ್ಲ. ಉಳಿದಂತೆ ಹಿಂದೂ ಧರ್ಮದವರೆಲ್ಲ ಕೆಳ ಮಧ್ಯಮ ವರ್ಗದವರು ಹಾಗೂ ಕಾರ್ಮಿಕರು, ಬೆರಳೆಣಿಕೆಯ ಮಂದಿ ವಿದ್ಯಾವಂತರಾಗಿದ್ದು ಅವರು ಶಾಲಾ ಶಿಕ್ಷಕರಾಗಿದ್ದುದು ವಿಶೇಷವೇ ಆಗಿದ್ದರೂ ಅವರು ಊರಿನ ಜನರನ್ನು ಪ್ರಭಾವಿತರನ್ನಾಗಿಸುವ ವ್ಯಕ್ತಿತ್ವವಿರಲಿಲ್ಲ ಎಂದರೂ ಸರಿಯೆ. ರಸ್ತೆಯಿಂದ ಒಳಗೆ ಇರುವ ಓಣಿಯಲ್ಲಿ ಸ್ವಂತ ಮನೆಗಳಿದ್ದು ತಮ್ಮ ಪಾಲಿಗೆ ತಾವು ಇರುವ ಕ್ರಿಶ್ಚಿಯನ್ ಮನೆಗಳಿದ್ದರೆ ಓಣಿಯ ತಿರುವಿನಲ್ಲಿ ನಾವಿದ್ದ ಮನೆ ಹಿತ್ತಲು ಎತ್ತರದಲ್ಲಿದ್ದರೆ ಅದರ ಎದುರಿಗೆ ತಗ್ಗಿನಲ್ಲಿ ನೇಕಾರರ ಮನೆಗಳು ಇದ್ದವು. ಇವರು ಪದ್ಮಶಾಲಿಗಳು ಎಂದು ಗುರುತಿಸಿಕೊಂಡವರು ಮತ್ತು ಇವರು ತುಳು ಭಾಷೆ ಮಾತನಾಡುತ್ತಿದ್ದರು. ಈ ಮನೆಗಳೆಲ್ಲವೂ ಗಂಗಯ್ಯ ಶೆಟ್ಟಿಗಾರರೆಂಬವರಿಗೆ ಸೇರಿದ್ದಾಗಿತ್ತು. ಗಂಗಯ್ಯ ಶೆಟ್ಟಿಗಾರರ ಮನೆ ಈ ತಿರುವಿನಿಂದ ಮುಂದೆ ಸಾಗಿದರೆ ಆ ಓಣಿಯ ಕೊನೆಯಲ್ಲಿದ್ದ ಕೆಲವು ದೊಡ್ಡ ಮನೆಗಳಲ್ಲಿ ಒಂದು. ಅಲ್ಲಿಯೂ ಮಗ್ಗಗಳಿದ್ದು ಸ್ವತ: ಅವರು ಮನೆಮಂದಿ ಕೈ ಮಗ್ಗದಲ್ಲಿ ದುಡಿಯುತ್ತಿದ್ದರು.

ಈ ದಾರಿಯಲ್ಲೇ ಇದ್ದ ಮನೆಗಳಲ್ಲಿ ಒಂದು ಹೊಟೇಲು ಮಾಲಕರದ್ದು. ಆದರೂ ಶ್ರೀಮಂತರೆಂದು ಕರೆಯುವುದು ಸಾಧ್ಯವಿರಲಿಲ್ಲ. ನಾವಿದ್ದ ಮಾಸ್ತರರ ಮನೆಯನ್ನು ಬಿಟ್ಟರೆ ಮೂರು ಮನೆಗಳ ಮನೆಯೊಡತಿಯರು ದೇರೆಬೈಲ್ ಚರ್ಚ್‌ಶಾಲೆಯಲ್ಲಿ ಅಧ್ಯಾಪಿಕೆಯರಾಗಿದ್ದರು. ಇವರ ಪತಿಯಂದಿರೂ ಕೂಡ ಬೇರೆ ಬೇರೆ ಕಚೇರಿ ಗಳಲ್ಲಿ ಸರಕಾರಿ ನೌಕರರಾಗಿದ್ದರು. ಇವರ ಮಕ್ಕಳೆಲ್ಲ ಪ್ರಾಥಮಿಕ ಶಾಲೆಗೆ ದೇರೆಬೈಲ್ ಚರ್ಚ್‌ಶಾಲೆಗೆ ಹೋಗುತ್ತಿದ್ದರು. ಕಾರ್ಮಿಕ ವರ್ಗದ ನೇಕಾರರ ಮನೆಯ ಮಕ್ಕಳೂ ಕೂಡ ಶಾಲೆಗೆ ಹೋಗುತ್ತಿದ್ದವರಿಗಿಂತ ಪ್ರಾಥಮಿಕ ಶಾಲೆ ಕಲಿತು ಮುಗಿಸಿ ಮನೆಯಲ್ಲಿದ್ದವರ ಸಂಖ್ಯೆಯೇ ಜಾಸ್ತಿ ಇತ್ತು. ಕೃಷಿ ಎನ್ನುವುದು ಓಣಿಯ ತುತ್ತತುದಿಯ ಮನೆಗಳಲ್ಲಿ ಮುಖ್ಯವಾದ ವೃತ್ತಿಯಾಗಿರದೆ ಹಿಂದೆ ಇದ್ದುದನ್ನು ಉಳಿಸಿಕೊಳ್ಳುವ ಹಂತದಲ್ಲಿತ್ತು. ಭತ್ತದೊಂದಿಗೆ ವೀಳ್ಯದೆಲೆ ಹಾಗೂ ಅಡಿಕೆ ಇಲ್ಲಿ ಪ್ರವೇಶಿಸಿತ್ತು. ಜೊತೆೆಗೆ ಹೈನುಗಾರಿಕೆ ಇದ್ದು ಹೊಟೇಲುಗಳಿಗೆ ಮತ್ತು ಮನೆ ಮನೆಗೆ ಹಾಲು ಕೊಡುತ್ತಿದ್ದ ಎರಡು ಮೂರು ಮನೆಗಳಷ್ಟೇ ಇತ್ತು. ಇಲ್ಲಿಂದ ಸಾಂದರ್ಭಿಕವಾಗಿ ಹಾಲು, ತೆಂಗಿನ ಕಾಯಿಗಳನ್ನು ಪಡೆಯುತ್ತಿದ್ದ ಮನೆಗಳಲ್ಲಿ ಒಂದು ಪಿಂಟೋರವರ ಮನೆ. ಇನ್ನೊಂದು ಚಂದ್ರಯ್ಯ ಭಟ್ಟರ ಮನೆ. ಚಂದ್ರಯ್ಯ ಭಟ್ಟರು ಪುರೋಹಿತರಾಗಿ ಪ್ರಸಿದ್ಧರಾಗಿದ್ದರು. ಇವರು ಅಪ್ಪನಿಗೆ ಮೊದಲೇ ಪರಿಚಿತರಾಗಿದ್ದುದರಿಂದ ಅವರ ಮನೆ ಮಂದಿಯ ಸ್ನೇಹ ಬೇಗ ಆಯಿತು.

ತುಂಬು ಸಂಸಾರದ ಅವರ ಮನೆಯ ಮಕ್ಕಳಲ್ಲಿ ಹಿರಿಯವಳು ಲೇಡಿಹಿಲ್ ಹೈಸ್ಕೂಲಿಗೆ ಹೋಗುತ್ತಿದ್ದಳು, ಉಳಿದ ತಮ್ಮಂದಿರು ಚರ್ಚ್ ಶಾಲೆಗೆ ಹೋಗುತ್ತಿದ್ದರು. ಚಂದ್ರಯ್ಯ ಭಟ್ಟರ ತಮ್ಮ ರಾಘವೇಂದ್ರರು ದೇರೆಬೈಲ್ ಚರ್ಚ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು. ಇವರು ಮಿತಭಾಷಿ, ಚಂದ್ರಯ್ಯ ಭಟ್ಟರ ಮಡದಿ ಮನೆಗೆ ಬಂದು ಅಮ್ಮನನ್ನು ಮಾತನಾಡುವ ಸಂದರ್ಭಗಳೂ ಇತ್ತು. ನಾನು ಬಿಜೈಯಲ್ಲಿ ನೋಡಿದ ಬ್ರಾಹ್ಮಣರ ಮನೆಗೂ ಇವರ ಮನೆಗೂ ಇದ್ದ ವ್ಯತ್ಯಾಸ ಎಂದರೆ ಇವರ ಮನೆ ಮಂದಿ ಜನರ ಜೊತೆ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದುದು. ನನ್ನ ಅಮ್ಮನಿಗೆ ಬಿಜೈಯಲ್ಲಿ ಸ್ನೇಹಿತೆಯರಿದ್ದ ಹಾಗೆ ಇಲ್ಲಿ ಸ್ನೇಹಿತೆಯರು ಇರಲಿಲ್ಲ. ಹಾಗೆ ನನಗೂ ಯಾರೂ ಸ್ನೇಹಿತೆಯರು ಸಿಗುವುದಕ್ಕೇ ಅವಕಾಶಗಳಿರಲಿಲ್ಲ. ನಮ್ಮ ಮನೆ ಮಂದಿಯ ಸ್ನೇಹ ಮನೆಯ ಮಾಲಕರಾದ ಗುರುವಪ್ಪ ಮಾಸ್ತರರ ಮನೆ ಮಂದಿಯೊಂದಿಗೆ ಸೀಮಿತವಾಗಿತ್ತು. ನನ್ನ ಕಾಪಿಕಾಡು ಶಾಲೆಯ ಸಹಪಾಠಿಗಳು, ಹಿರಿಯ ವಿದ್ಯಾರ್ಥಿಗಳು ಹುಡುಗರು ಕೆಲವರು ಈ ಪರಿಸರದಲ್ಲಿ, ಬಸ್‌ನಲ್ಲಿ ಕಾಣಸಿಕ್ಕಿದರೂ ಮಾತನಾಡುವ ರೂಢಿ ಅಂದು ಇರಲಿಲ್ಲ. ದಡ್ಡಲಕಾಡಿನ ಟೈಲರಿಂಗ್ ತರಗತಿಯಲ್ಲಿಯೂ ಸಿಕ್ಕಿದ ಸಹಪಾಠಿಗಳು ಪರಿಚಿತರಾದರೂ ಸ್ನೇಹಿತೆಯರಾಗುವ ಅವಕಾಶ ದೊರೆಯಲಿಲ್ಲ.

ಈ ಟೈಲರಿಂಗ್ ಶಾಲೆ ದಡ್ಡಲಕಾಡಿನ ದಲಿತ ಹೆಣ್ಣು ಮಕ್ಕಳ ಕಲಿಕೆಗಾಗಿ ಇದ್ದ ಉಚಿತ ಶಾಲೆ. ಇತರ ಹೆಣ್ಣುಮಕ್ಕಳಿಗೂ ಅವಕಾಶವಿದ್ದುದರಿಂದ ನಾನೂ ಸೇರಿಕೊಂಡಿದ್ದೆ. ಇಲ್ಲಿ ದಲಿತ ಹೆಣ್ಣು ಮಕ್ಕಳೊಂದಿಗೆ ಸಮ ಸಮ ಸಂಖ್ಯೆಯಲ್ಲಿ ಇತರ ಮಕ್ಕಳು ನಾವಿದ್ದರೂ ಬ್ರಾಹ್ಮಣ ಮಕ್ಕಳು, ಕ್ರಿಶ್ಚಿಯನ್ ಹೆಣ್ಣು ಮಕ್ಕಳು ಯಾರೂ ಇರಲಿಲ್ಲ ಎನ್ನುವುದು ಕೂಡ ಗಮನಾರ್ಹ. ಈ ಶಾಲೆಗೆ ಬಿಜೈ ಕಾಪಿಕಾಡು ಶಾಲೆಯ ಹಿರಿಯ ವಿದ್ಯಾರ್ಥಿಗಳು ಬರುತ್ತಿದ್ದರು. ದಡ್ಡಲ್ ಕಾಡಿನಿಂದಲೇ ಬರುತ್ತಿದ್ದ ಹೆಣ್ಣುಮಕ್ಕಳು ದೇರೆಬೈಲ್ ಮತ್ತು ಕೊಟ್ಟಾರ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿಕೊಂಡವರು. ದಡ್ಡಲ್‌ಕಾಡಿನ ಕಾಲನಿಯ ನಿವಾಸಿಗಳು ಕಾಪಿಕಾಡ್ ಕಾಲನಿಯ ಸಂಬಂಧಿಗಳೇ ಆಗಿದ್ದರೂ ಇಲ್ಲಿ ಕಾಪಿಕಾಡಿನ ನಿವಾಸಿಗಳಿಗಿಂತ ಹೆಚ್ಚಿನ ಸ್ವಯಂಶಿಸ್ತು ಮತ್ತು ಘನತೆ ಇತ್ತು ಆ ದಿನಗಳಲ್ಲಿ ಎಂದರೆ ತಪ್ಪಲ್ಲ. ಇಲ್ಲಿನ ನನ್ನ ಸಹಪಾಠಿಗಳಾಗಿದ್ದವರಲ್ಲಿ ಕೆಲವರು ಕಾಲೇಜಿಗೆ ಹೋಗುತ್ತಿದ್ದರು. ಉಳಿದವರು ಎಸೆಸೆಲ್ಸಿ ಮುಗಿಸಿಕೊಂಡಿದ್ದರು. ಇಲ್ಲಿಯ ಮನೆಗಳ ಮಹಿಳೆಯರು ಅಧ್ಯಾಪಿಕೆಯರಾಗಿಯೂ ಇದ್ದರು. ಟೈಲರಿಂಗ್ ಶಾಲೆಯ ವಾರ್ಷಿಕೋತ್ಸವವನ್ನು ಆಚರಿಸುತಿದ್ದೆವು. ಆಗೆಲ್ಲ ನಮಗೆ ತಿಳಿದಿದ್ದ ಹಾಡು, ನೃತ್ಯಗಳನ್ನು ಮಾಡುವ ಮೂಲಕ ಶಾಲೆ ಬಿಟ್ಟ ಮಕ್ಕಳು ಎಂಬ ಅಂಜಿಕೆಯಿಲ್ಲದೆ, ಹೆಣ್ಣು ಮಕ್ಕಳೆಂಬ ಕೀಳರಿಮೆ ಇಲ್ಲದೆ ಮತ್ತೆ ಎಲ್ಲರೂ ವೇದಿಕೆಯೇರಿದ್ದು ಸಾಮಾನ್ಯ ವಿಷಯವಾಗಿರಲಿಲ್ಲ. ಯಾಕೆಂದರೆ ಒಮ್ಮೆ ಶಾಲೆ ಬಿಟ್ಟರೆ ಮತ್ತೆ ಶಾಲಾ ಜೀವನದ ಉತ್ಸಾಹಕ್ಕೆ ವಿರಾಮ ನೀಡಿದಂತೆಯೇ.

ದೇರೆಬೈಲ್‌ನಲ್ಲಿ ಒಂದು ಮದ್ಯಪಾನದ ಗಡಂಗ್ ಇತ್ತೆಂದು ಹೇಳಿದೆನಲ್ಲಾ ಅದನ್ನು ಒಬ್ಬ ಮಹಿಳೆ ನಡೆಸುತ್ತಿದ್ದರು. ಜನರು ಅವರ ಬಗ್ಗೆ ಆಡಿಕೊಳ್ಳುತ್ತಿದ್ದ ಮಾತುಗಳು ನನ್ನಲ್ಲಿ ಹೆದರಿಕೆಯನ್ನುಂಟು ಮಾಡಿತ್ತು. ಎಲ್ಲರನ್ನೂ ಮಾತನಾಡಿಸುವ ಅಭ್ಯಾಸವುಳ್ಳ ನಾನು ಅವರಲ್ಲಿ ಎಂದೂ ಮಾತನಾಡುವ ಸಾಹಸ ಮಾಡಲಿಲ್ಲ. ಆಕೆಯ ಹೆಸರು ಇಂದು ನೆನಪಿಲ್ಲವಾದರೂ ಆಕೆಯ ವ್ಯಕ್ತಿತ್ವ ಕಣ್ಣೆದುರಲ್ಲಿ ನೆನಪಾಗುತ್ತಿದೆ. ಆಕೆಯ ಬದುಕಿನ ಹಿನ್ನ್ನೆಲೆಯೇನಿತ್ತೋ ಆಕೆ ಯಾಕೆ ತನ್ನ ತವರನ್ನು ತೊರೆದು ಬಂದಳೋ? ಆಗ ನನಗೆ ಅವುಗಳಲ್ಲಿ ಕುತೂಹಲವಿರಲಿಲ್ಲ. ಆದರೆ ಆಕೆಯ ಧೈರ್ಯವನ್ನು ಇಂದಿಗೂ ಮೆಚ್ಚುತ್ತೇನೆ. ಹಲವಾರು ಗಂಡಸರನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದ ಆಕೆ ಸಾಮಾನ್ಯಳಾಗಿರುವುದು ಸಾಧ್ಯವೇ? ಗಡಂಗ್‌ನ ಪೇಯದೊಂದಿಗೆ ಕರಿದ ಮೀನಿಗಾಗಿ ಬುಟ್ಟಿ ಬುಟ್ಟಿ ಮೀನುಕೊಳ್ಳುವ ರೀತಿ, ಗಡಂಗ್‌ನಲ್ಲಿ ಹದ್ದುಮೀರಿ ಕುಡಿದ ಕುಡುಕರು ಜಗಳವಾಡಿದರೆ ಅವರನ್ನು ನಿಭಾಯಿಸುವ ವೈಖರಿ ಹೆಣ್ಣೆಂಬ ಕಾರಣಕ್ಕೆ ಆಕೆಯನ್ನು ಮೆಚ್ಚುವಂತೆ ಮಾಡಿದರೂ ಸಾಮಾಜಿಕವಾಗಿ ಋಣಾತ್ಮಕ ಬದುಕಿನ ಶೈಲಿ ನನಗೆ ಮೆಚ್ಚುಗೆಯಂತೂ ಆಗಲೂ ಇಲ್ಲ. ಈಗಲೂ ಅಲ್ಲ. ಆಕೆಗೆ ಪ್ರಯಾಣಕ್ಕೆ ಒಂದು ಆಟೊ ರಿಕ್ಷಾ ಇದ್ದುದು ಆ ಕಾಲಕ್ಕೆ ದೊಡ್ಡ ವಿಚಾರ.

ಕುಂಟಿಕಾನದಲ್ಲಿ ಬಸ್ ನಿಲ್ದಾಣ ಎಂದರೆ ದೊಡ್ಡದಾದ ಆಲದ ಮರದ ಬುಡ. ಆ ಆಲದ ಮರ ರಾತ್ರಿಯ ವೇಳೆ ದೈತ್ಯಾಕಾರದ ರಾಕ್ಷಸನಂತೆ ಕಾಣುತ್ತಿತ್ತು. ಮಳೆಗಾಲದ ದಿನಗಳಲ್ಲಿ ಅದರಲ್ಲಿದ್ದ ಮಿಣುಕು ಹುಳಗಳು ದೇವತೆಗಳಂತೆ ಭಾಸವಾಗುತ್ತಿತ್ತು. ಬಿಜೈ ಎಂಬ ಊರಲ್ಲಿ ಭಯ ಪಡುವುದಕ್ಕೆ ಅವಕಾಶಗಳು ಇದ್ದರೂ ಜನರು ತಮ್ಮ ನಡವಳಿಕೆಯಿಂದ ಅದನ್ನು ಕೊಡವಿ ಹಾಕುತ್ತಿದ್ದರೆ ದೇರೆಬೈಲ್‌ನಲ್ಲಿದ್ದ ಜನರ ನಂಬಿಕೆಗಳು ಜನರಲ್ಲಿ ಭಯವನ್ನು ಸೃಷ್ಟಿಸುತ್ತಿತ್ತು. ಇಲ್ಲಿ ಹಗಲಲ್ಲಿ ಮನುಷ್ಯರ ಭಯವಾದರೆ ರಾತ್ರಿ ಭೂತ ದೆವ್ವಗಳ ಭಯ ತುಂಬಿತ್ತು. ಆದರೆ ಸಾಹಿತ್ಯದ ಪಾಠ ಕೇಳಿ ಹಿಂದಿರುಗುತ್ತಿದ್ದ ನನಗೆ ಇಂತಹ ಭಯದ ಕಲ್ಪನೆಯೇ ಇರಲಿಲ್ಲ. ಜೊತೆಗೆ ಭೂತ ಪ್ರೇತಗಳ ಬಗ್ಗೆ ನಮ್ಮ ಮನೆಯಲ್ಲಿ ಮಾತುಗಳೇ ಇಲ್ಲವಾದ್ದರಿಂದ ಅದರ ಬಗ್ಗೆ ನಾನು ಅಜ್ಞಾನಿಯೇ. ಯಾವುದೇ ವಿಷಯದ ಬಗ್ಗೆ ಏನೂ ತಿಳಿಯದೆ ಇದ್ದಾಗ ಭಯವಿರಲು ಸಾಧ್ಯವಿಲ್ಲ. ಹಾಗೆಯೇ ಒಂದು ವಿಷಯದ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಾಗಲೂ ಭಯವಿರಲು ಸಾಧ್ಯವಿಲ್ಲ. ನಡುವೆ ಅರಬರೆ ತಿಳುವಳಿಕೆಯ ಮಂದಿ ತಾವು ಧೈರ್ಯಗೆಡುವುದಲ್ಲದೆ ಇತರರನ್ನೂ ಧೈರ್ಯಗೆಡಿಸುತ್ತಾರೆ ಎನ್ನುವುದು ನಿಜವಾದುದು. ರಾತ್ತಿ ಒಂಬತ್ತರ ವೇಳೆಗೆ ದೇರೆಬೈಲ್ ಎನ್ನುವ ಊರು ನಿದ್ದೆಗೆ ಜಾರುತ್ತಿತ್ತು. ಯಾಕೆಂದರೆ ಬೆಳಗ್ಗೆ ಬೇಗ ಎದ್ದು ಕಾರ್ಖಾನೆಗಳಿಗೆ ಹೋಗಬೇಕಾದ ಮಂದಿ. ಜೊತೆಗೆ ಹೆಚ್ಚಿನ ಮನೆಗಳಲ್ಲಿ ಇನ್ನೂ ವಿದ್ಯುದ್ದೀಪ ಬಂದಿರಲಿಲ್ಲ. ಕುಂಟಿಕಾನದಿಂದ ಮುಂದೆ ದೇರೆಬೈಲ್‌ಗೆ ಹೋಗುವ ದಾರಿಯಲ್ಲಿ ಬೀದಿ ದೀಪಗಳೂ ಇರಲಿಲ್ಲ. ರಸ್ತೆಯ ಅಕ್ಕ ಪಕ್ಕದಲ್ಲಿ ದೊಡ್ಡ ದೊಡ್ಡ ಮಾವಿನ ಮರಗಳು. ಈಗ ರಸ್ತೆಯ ಅಗಲೀಕರಣದಲ್ಲಿ, ಪ್ಲಾಟುಗಳ ನಿರ್ಮಾಣದಲ್ಲಿ ಎಲ್ಲಾ ಮರಗಳನ್ನು ಕಡಿದು ನಾಶಮಾಡಿದ್ದರೂ ಒಂದು ಮರವಿತ್ತು. ಅದನ್ನು ಕಳೆದ ವಾರ ಕಡಿದು ಹಾಕಲಾಗಿದೆ. ಆ ಮರಕ್ಕೆ ಸುಮಾರು ನೂರರ ಮೇಲಿನ ಆಯಸ್ಸು ಇದ್ದಿರಬಹುದು. ದೇರೆಬೈಲಿನ ಇತಿಹಾಸ ಅದಕ್ಕೆ ಚೆನ್ನಾಗಿ ತಿಳಿದಿರಬಹುದು. ಆದರೆ ಮರಕ್ಕೆ ಮಾತೇ ಇಲ್ಲವಲ್ಲ್ಲ? ಮಾತು ಇಲ್ಲ ಎನ್ನುವ ಕಾರಣಕ್ಕೆ ಇತಿಹಾಸ ಇಲ್ಲವೆಂದಲ್ಲ; ಇರಲಿ, ಆ ಮಾವಿನ ಮರಗಳಲ್ಲಿ ರಾತ್ರಿ ಕೂಗುವ ‘ನತ್ತಿಂಗ’ಗಳ ಕೂಗು ಸಾಕು. ಯಾರೂ ಹೆದರಿಕೊಳ್ಳಬಹುದು. ಇಂತಹ ದಾರಿಯಲ್ಲಿ ರಾತ್ರಿ ನಡೆದು ಹೋಗಬೇಕಾದ ನನಗೆ ಜೊತೆಗೆ ಇದ್ದವರೇ ರಕ್ಷಕರು ಎಂಬ ಭಾವನೆ. ಅವರ ಮೇಲೆ ವಿಶ್ವಾಸ; ಅಂದಿನ ಜನ ಆ ವಿಶ್ವಾಸಕ್ಕೆ ದ್ರೋಹ ಬಗೆಯಲಿಲ್ಲ ಎನ್ನುವುದು ಮನುಷ್ಯತ್ವದ ನಡವಳಿಕೆ. ಆದರೂ ಮನಸ್ಸಿನೊಳಗೆ ಅಳುಕು, ಆತಂಕಗಳು ಖಂಡಿತ ಇದ್ದುವು. ಶೇಂದಿ ಅಂಗಡಿಯೂ ಈ ರಾತ್ರಿ ವೇಳೆಗೆ ಮುಚ್ಚಿಕೊಳ್ಳುತ್ತಿತ್ತು. ಶೇಂದಿ ಅಂಗಡಿ ದಾಟಿ ನನ್ನ ಮನೆಯ ಓಣಿಗೆ ತಿರುಗಿದರೆ ನನ್ನ ಮನೆಯ ಕಿಟಕಿಯಿಂದ ಬೆಳಕು ಕಾಣುತ್ತಿತ್ತು. ಅದು ನನ್ನ ಪಾಲಿನ ಬೆಳಕು. ಬೀದಿಯಲ್ಲಿ ದೀಪಗಳು ಇಲ್ಲದಿದ್ದರೂ ಓಣಿಯೊಳಗೆ ಬೀದಿ ದೀಪದ ವ್ಯವಸ್ಥೆ ಇತ್ತು. ಆದರೆ ದೀಪವಿರುತ್ತಿರಲಿಲ್ಲ. ಬಲ್ಬನ್ನೇ ಕದ್ದು ಒಯ್ಯುವ ಮಂದಿ ಈ ಊರಲ್ಲಿ ಇದ್ದರು. ನಾನು ನಡೆಯುತ್ತಿರುವುದು ಶುಕ್ರವಾರವೆಂದಾದರೆ ಆಗ ಹೊಸ ಅಳುಕು. ಓಣಿಯಲ್ಲಿ ನನ್ನ ಹಿಂದೆ ಗೆಜ್ಜೆಯ ಸದ್ದು ಕೇಳಿಸುತ್ತದೆಯೇ ಎಂಬ ಬಗ್ಗೆ. ಈ ಅಳುಕಿಗೆ ನನ್ನ ಮನೆಯ ಸುತ್ತಮುತ್ತನ ಮಂದಿ ಆಡಿಕೊಳ್ಳುತ್ತಿದ್ದ ಮಾತುಗಳೇ ಕಾರಣ. ದೇರೆಬೈಲಿನಿಂದ ಮುಂದೆ ಕೆಳಗಿನ ಕೊಂಚಾಡಿಯಲ್ಲಿ ಮಹಾಕಾಳಿ ದೈವಸ್ಥಾನವಿದೆ. ಆ ದೈವಸ್ಥಾನದಿಂದ ಶುಕ್ರವಾರ ದೇವಿ ಈ ದಾರಿಯಾಗಿ ಸಂಚಾರ ಹೊರಡುತ್ತಾಳಂತೆ!. ನಾನೂ ಸೇರಿದಂತೆ ನನ್ನ ಮನೆ ಮಂದಿಗೆ ಈ ಸದ್ದು ಯಾವತ್ತೂ ಕೇಳಲಿಲ್ಲ.

ಕೇಳಿದ್ದೇವೆ ಎಂದೇ ನಂಬಿ ಹೆದರುವವರನ್ನು, ಅದರಲ್ಲೇ ಭಯದಲ್ಲೂ ಸುಖಪಡುವವರನ್ನು ‘‘ಇಲ್ಲ. ಇದು ಸುಳ್ಳು, ಇದು ಕಳ್ಳಕಾಕರು ಸೃಷ್ಟಿಸಿರುವುದು’’ ಎಂದು ನಾವು ವೈಚಾರಿಕವಾಗಿ ಪ್ರತಿಪಾದಿಸಲು ಹೋದರೆ ಏನೂ ಪ್ರಯೋಜನವಿಲ್ಲ ಎಂಬ ತಿಳುವಳಿಕೆ ಇದ್ದುದರಿಂದ ನಾವ್ಯಾರೂ ಆ ತಂಟೆಗೆ ಹೋಗಲಿಲ್ಲ. ಆ ಮಹಾಕಾಳಿಯೂ ನಮ್ಮ ಬಳಿಗೆ ಸುಳಿಯಲಿಲ್ಲ. ನಮಗೆ ಉಪದ್ರವವನ್ನೂ ಕೊಟ್ಟಿಲ್ಲ.

ಆದರೆ ನಮ್ಮೆಲ್ಲರಿಗೂ ಇದ್ದ ಆತಂಕ ಒಂದಿತ್ತು. ದೇರೆಬೈಲಿನ ಪೂರ್ವಕ್ಕೆ ಎತ್ತರದ ಗುಡ್ಡೆ ಹರಿಪದವು. ಈಗ ಅದು ಆಧುನಿಕತೆಯ ಸ್ಪರ್ಶದಿಂದ ಮೊದಲು ಹಾಗಿತ್ತು ಎಂದು ಹೇಳಿದರೂ ನಂಬುವುದಕ್ಕೆ ಸಾಧ್ಯವಿಲ್ಲದ ಪ್ರದೇಶವಾಗಿದೆ. ಒಂದರ್ಥದಲ್ಲಿ ಆಧುನಿಕತೆ ನಮ್ಮ ಕೆಲವೊಂದು ಮೂಢನಂಬಿಕೆಗಳಿಗೆ ಕಡಿವಾಣ ಹಾಕಿದ್ದರೂ ಹೊಸ ಮೂಢನಂಬಿಕೆಗಳನ್ನು ಸೃಷ್ಟಿಸಿವೆ ಎನ್ನುವುದು ಕೂಡ ಸತ್ಯವೇ. ಯಾಕೆಂದರೆ ನಂಬಿಕೆಗಳಿಲ್ಲದೆ ಮನುಷ್ಯ ಬದುಕಲಾರ. ಆದರೆ ಆ ನಂಬಿಕೆ ಮನುಷ್ಯರೊಳಗಿನ ಅಸಮಾನತೆಯನ್ನು, ಭೇದಗಳನ್ನು ತೊಡೆದು ಹಾಕುವಂತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಯೋಚಿಸುವಂತಾಗುತ್ತದೆ. ಈ ಹರಿಪದವು ಎನ್ನುವ ಪ್ರದೇಶ ಆಗ ಯಾರ ಸೊತ್ತು, ಯಾರ ಆಸ್ತಿ ಎಂದು ತಿಳಿಯದಿದ್ದರೂ ಗುಟ್ಟಾಗಿ ಪ್ರೀತಿಸುವ ಪ್ರಣಯಿಗಳಿಗೆ ಒಳ್ಳೆಯ ತಾಣವಾಗಿತ್ತು. ಗುಂಡು ಹಾಕಿಕೊಂಡು ಜೂಜಾಟವಾಡುವ ಪುಂಡರಿಗೆ ರಕ್ಷಣೆ ಒದಗಿಸುತ್ತಿತ್ತು ಎನ್ನುವುದು ನಮಗೆ ತಿಳಿಯುತ್ತಿದ್ದುದು ಅಲ್ಲಿ ಯಾರದೋ ಕೊಲೆಯಾಗಿ ಹೆಣ ಬಿದ್ದಿದೆ ಎಂದು ಸುದ್ದಿಯಾದಾಗ. ಜೊತೆಗೆ ಇಲ್ಲಿ ಹುಲಿ ಇದೆ, ಕತ್ತೆ ಕಿರುಬ ಇದೆ ಎಂಬ ಸುದ್ದಿಗಳೂ ಬಹಳವಾಗಿ ನಂಬುತ್ತಿದ್ದರು. ನಮ್ಮ ದನಿಗಳ ಮನೆಯ ಆಡಿನ ಮರಿ, ದನದಕರುಗಳು ಇಲ್ಲವಾದಾಗ ಅದನ್ನು ನಂಬಬೇಕಾಗುತ್ತಿತ್ತು. ಜತೆಗೆ ಆ ಹುಲಿ ಮಹಾಕಾಳಿಯ ವಾಹನ. ಅದರ ಮೇಲೆಯೇ ಆಕೆಯ ಸವಾರಿ ಎಂಬ ನಂಬಿಕೆಗಳೆಲ್ಲವೂ ದೇವರ ಬಗೆಗೆ ಭಕ್ತಿ ಹೆಚ್ಚು ಮಾಡುವ ವಿಷಯವಾಗಿರದೆ ದೇವರೆಂದರೆ ಭಯವುಂಟುಮಾಡುವ ಸ್ಥಿತಿ ನಿರ್ಮಾಣವಾಗುವುದರಿಂದಲೇ ‘‘ದೇವರ ಭಯವೇ ಜ್ಞಾನದ ಆರಂಭ’’ ಎಂಬ ಗಾದೆ ಹುಟ್ಟಿರಬೇಕು. ಆದರೆ ನನ್ನ ದೃಷ್ಟಿಯಲ್ಲಿ ಜ್ಞಾನ ದೊರೆಯ ಬೇಕಾದರೆ ಆ ವಿಷಯದಲ್ಲಿ ಪ್ರೀತಿ, ಆಸಕ್ತಿ ಹುಟ್ಟಬೇಕು ತಾನೆ? ಪ್ರೀತಿ ಇಲ್ಲದ ಮೇಲೆ ಜ್ಞಾನ ಹುಟ್ಟುವುದಾದರೂ ಹೇಗೆ? ಆದ್ದರಿಂದಲೇ ನಾನು ಆ ಗಾದೆಯನ್ನು ಬದಲಾಯಿಸಿ ‘ದೇವರ ಪ್ರೀತಿಯೇ ಜ್ಞಾನದ ಆರಂಭ’ ಎಂದೇ ನಂಬಿದ್ದೇನೆ. ಆದರೆ ನನ್ನ ದೇವರಿಗೆ ಯಾವ ಹರಕೆ ಹೇಳಬೇಕಾಗಿಲ್ಲ. ಯಾವ ಕಾಣಿಕೆ ನೀಡಬೇಕಾಗಿಯೂ ಇಲ್ಲ ಎನ್ನುವುದು ಕೂಡ ಸತ್ಯ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top