ಹೃದಯ ಸೋಲಲು ಕಾರಣವೇನು? | Vartha Bharati- ವಾರ್ತಾ ಭಾರತಿ

--

ಹೃದಯ ಸೋಲಲು ಕಾರಣವೇನು?

ಮಡಿದ ಪ್ರತಿ ಮನುಷ್ಯನ ಕುರಿತಂತೆ ವಿಸ್ತೃತ ಅಧ್ಯಯನ ನಡೆಯದೇ ಹೋದರೆ ಬಹುಪಾಲು ಸತ್ಯಗಳು ಹೊರಬರುವುದೇ ಇಲ್ಲ. ಪ್ರದೇಶ, ಆಹಾರ ಕ್ರಮ, ಜೀವನ ಕ್ರಮ, ವಯಸ್ಸು, ಕುಟುಂಬದ ಇತಿಹಾಸ, ವಲಸೆ ಮುಂತಾದವುಗಳ ಕುರಿತು ವ್ಯಾಪಕ ಅಧ್ಯಯನಗಳು ನಡೆಯಬೇಕು. ವಿಜ್ಞಾನ ಬೆಳೆಯುವುದೆಂದರೆ ಹೀಗೆಯೇ. ಜಗತ್ತಿನ ಆರೋಗ್ಯ ಕ್ಷೇತ್ರಕ್ಕೆ ಜೆನೆಟಿಕ್ಸ್‌ನಂತಹ ನೂತನ ಅಧ್ಯಯನ ಶಿಸ್ತುಗಳು ಮತ್ತು ಚಿಕಿತ್ಸಾ ವಿಧಾನಗಳು ಪ್ರವೇಶ ಪಡೆದು ವರ್ಷಗಳೇ ಆಗಿ ಹೋದವು. ಇದೆಲ್ಲದರ ಸದುಪಯೋಗವನ್ನು, ತಿಳುವಳಿಕೆಯನ್ನು ಬಳಸಿ ನಮ್ಮ ವೈದ್ಯಕೀಯ ವಿಜ್ಞಾನಿಗಳು ಕೆಲಸ ಮಾಡಿದರೆ ಎಳೆಯ ವಯಸ್ಸಿನ ಅನೇಕರನ್ನು ಉಳಿಸಬಹುದಾಗಿದೆ.


ಕಳೆದ ವರ್ಷ ನಾಡಿನಲ್ಲಿ ಕೊರೋನ ಸಂಕಷ್ಟದಿಂದ ಮಡಿದವರಿಗಿಂತ ಹೃದಯಾಘಾತದಿಂದ ಮಡಿದವರ ಸಂಖ್ಯೆ ಗಾಬರಿ ಹುಟ್ಟಿಸುವಂತಿದೆ. ನೋಡು ನೋಡುತ್ತಿದ್ದಂತೆಯೇ ಗೊತ್ತಿರುವ ಅನೇಕರ ಹೃದಯ ನಿಂತು ನೆನಪಾಗಿ ಹೋದರು. ಅನೇಕ ತಜ್ಞರ ಪ್ರಕಾರ ಯಾವುದೇ ವೈರಸ್‌ನ ದಾಳಿಯ ಸಂದರ್ಭದಲ್ಲಿ ದೇಹದೊಳಗಿನ ಪ್ರತಿರೋಧ ವ್ಯವಸ್ಥೆಯು ಶತ್ರುವಿನ ಕುರಿತು ಅತಿ ಅಂದಾಜು ಮಾಡಿ ಹೋರಾಡಿ ಸಾಯುವುದನ್ನು ಸೈಟೋಕೈನ್ ಪ್ರವಾಹ ಎನ್ನುತ್ತಾರೆ. ಸತ್ತ ವೈರಸ್‌ಗಳು ರಕ್ತನಾಳಗಳಲ್ಲಿ ಮಾಸ್ ವೃದ್ಧಿಯಾಗಲು ಕಾರಣವಾಗಿ, ರಕ್ತ ಚಲನೆಗೆ ತೊಂದರೆಯಾಗಿ ಹೃದಯಾಘಾತಗಳಾಗುವುದನ್ನು ಕೇಳಿದ್ದೇವೆ. ಕೊರೋನ ವಿಚಾರದಲ್ಲೂ ಇದಾಯಿತೇ ಎಂದು ತಜ್ಞರೇ ಹೇಳಬೇಕು.ರಾಜ್ಯದಲ್ಲಿ ಹೃದಯಾಘಾತದಿಂದ ಮಡಿದ ಪ್ರಕರಣಗಳು 2019ಕ್ಕೆ ಹೋಲಿಸಿದರೆ 2020ರಲ್ಲಿ 38,583ರಷ್ಟು ಹೆಚ್ಚಿಗೆ ದಾಖಲಾಗಿವೆ. ಈ ಅಂಕಿ ಅಂಶಗಳನ್ನು ನೋಡಿದ ಮೇಲೆ ಯಾಕೆ ಹೀಗಾಗಿದೆ ಎಂಬ ಪ್ರಶ್ನೆ ಕಾಡತೊಡಗಿದೆ.

2019ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 70,227 ಜನರು ಹೃದಯಾಘಾತದಿಂದ ಮಡಿದರೆ, 2020ರಲ್ಲಿ 1,08,810 ಜನರು ಮಡಿದಿದ್ದಾರೆ. ಮರಣ ಹೊಂದಿದವರಲ್ಲಿ ಶೇ 62.5ರಷ್ಟು ಗಂಡಸರಿದ್ದರೆ ಶೇ. 37.5ರಷ್ಟು ಮಹಿಳೆಯರಿದ್ದಾರೆ. ಕೊರೋನ ಸಮಸ್ಯೆ ಇತ್ತು. ಜನ ಮನೆಯಲ್ಲಿದ್ದರು. ಆದರೂ ಸಾವುಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣಗಳೇನು? ಬಹುಶಃ ಸಮಸ್ಯೆಯ ಮೂಲವೂ ಇದೇ ಇರಬಹುದು ಅನಿಸುತ್ತದೆ. ದುಡಿಮೆ ಇಲ್ಲದ ಒತ್ತಡ ಒಂದು ಕಡೆಯಾದರೆ ಮತ್ತೊಂದು ಕಡೆ ಬಿಸಿಲಿಗೂ ಹೋಗದೆ, ದೇಹಕ್ಕೆ ಶ್ರಮವೂ ಇಲ್ಲದ್ದರಿಂದ ಹೀಗಾಯಿತೇ? ಅಥವಾ ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಲು ಹೆದರಿ ರೋಗಲಕ್ಷಣಗಳನ್ನು ನಿರ್ಲಕ್ಷ ಮಾಡಿ ಸುಖಾ ಸುಮ್ಮನೆ ಬಲಿಯಾಗಿ ಬಿಟ್ಟರೇ? ಇವೆಲ್ಲ ಅಂಶಗಳನ್ನೂ ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಮಡಿದ ಪ್ರತಿ ಮನುಷ್ಯನ ಕುರಿತಂತೆ ವಿಸ್ತೃತ ಅಧ್ಯಯನ ನಡೆಯದೇ ಹೋದರೆ ಬಹುಪಾಲು ಸತ್ಯಗಳು ಹೊರಬರುವುದೇ ಇಲ್ಲ. ಪ್ರದೇಶ, ಆಹಾರ ಕ್ರಮ, ಜೀವನ ಕ್ರಮ, ವಯಸ್ಸು, ಕುಟುಂಬದ ಇತಿಹಾಸ, ವಲಸೆ ಮುಂತಾದವುಗಳ ಕುರಿತು ವ್ಯಾಪಕ ಅಧ್ಯಯನಗಳು ನಡೆಯಬೇಕು. ವಿಜ್ಞಾನ ಬೆಳೆಯುವುದೆಂದರೆ ಹೀಗೆಯೇ. ಜಗತ್ತಿನ ಆರೋಗ್ಯ ಕ್ಷೇತ್ರಕ್ಕೆ ಜೆನೆಟಿಕ್ಸ್‌ನಂತಹ ನೂತನ ಅಧ್ಯಯನ ಶಿಸ್ತುಗಳು ಮತ್ತು ಚಿಕಿತ್ಸಾ ವಿಧಾನಗಳು ಪ್ರವೇಶ ಪಡೆದು ವರ್ಷಗಳೇ ಆಗಿ ಹೋದವು. ಇದೆಲ್ಲದರ ಸದುಪಯೋಗವನ್ನು, ತಿಳುವಳಿಕೆಯನ್ನು ಬಳಸಿ ನಮ್ಮ ವೈದ್ಯಕೀಯ ವಿಜ್ಞಾನಿಗಳು ಕೆಲಸ ಮಾಡಿದರೆ ಎಳೆಯ ವಯಸ್ಸಿನ ಅನೇಕರನ್ನು ಉಳಿಸಬಹುದಾಗಿದೆ.

ಹೃದಯಾಘಾತದಂತೆಯೇ ವಯಸ್ಸಿನ ಕಾರಣಕ್ಕಾಗಿ ಮರಣ ಹೊಂದಿದವರ ಪ್ರಮಾಣವೂ ಸಹ ಕಳೆದ ವರ್ಷಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಜಾಸ್ತಿಯಾಗಿದೆ. 2019ರಲ್ಲಿ 9,617 ಜನ ವಯಸ್ಸಿನ ಸಮಸ್ಯೆಗಳಿಂದ ಮರಣ ಹೊಂದಿದ್ದರೆ 2020ರಲ್ಲಿ 38,264 ಜನ ಮರಣ ಹೊಂದಿದ್ದಾರೆ. ಇಷ್ಟಾದರೂ ನಮ್ಮ ದೇಶದಲ್ಲಿ ಮರಣದ ಕಾರಣ ನಿಖರವಾಗಿ ತಿಳಿಯುವುದು ಕೇವಲ ಶೇ. 25ರಿಂದ 30ರಷ್ಟು ಮಾತ್ರ ಎಂದು ತಜ್ಞರು ಹೇಳುತ್ತಾರೆ. ಶೇ. 28- 30ರಷ್ಟು ಜನ ಆಸ್ಪತ್ರೆಗಳಲ್ಲಿ ಮರಣ ಹೊಂದುತ್ತಿದ್ದಾರೆ. 2019ರಲ್ಲಿ 2,63,630 ಜನ ಯಾವ ಕಾರಣದಿಂದ ಮರಣ ಹೊಂದಿದರು ಎಂದು ತಿಳಿಯಲಾಗಿಲ್ಲ. ಮರಣ ಹೊಂದುವವರಲ್ಲಿ ಶೇ. 19.71ರಷ್ಟು ಜನ ಹೃದಯ ಸಂಬಂಧಿ ಸಮಸ್ಯೆಗಳಿಂದಲೇ ಮರಣ ಹೊಂದುತ್ತಿದ್ದಾರೆ ಎಂಬುದು ಅತ್ಯಂತ ಗಾಬರಿ ಹುಟ್ಟಿಸುವ ಸಂಗತಿ.

ಹೃದಯ ಸಂಬಂಧಿ ಸಾವುಗಳಿಗೆ ಸಾಮಾನ್ಯವಾಗಿ ಮಾಂಸಾಹಾರ ಕಾರಣ ಎನ್ನಲಾಗುತ್ತಿದೆ ಇದು ನಿಜವೇ? ಈ ಕುರಿತು ಜಿಲ್ಲಾವಾರು ಮಾಹಿತಿ ನೋಡಿದರೆ ಪರಿಸ್ಥಿತಿ ಬೇರೆ ಇರುವಂತೆ ಕಾಣುತ್ತಿದೆ. ನನ್ನ ಬಳಿ ಎಪ್ರಿಲ್‌ನಿಂದ ಸೆಪ್ಟ್ಟಂಬರ್‌ವರೆಗೆ ಮೃತಪಟ್ಟವರ ಜಿಲ್ಲಾವಾರು ಮಾಹಿತಿ ಇದೆ. ಅದರಂತೆ 2019ರಲ್ಲಿ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ 0.05ರಷ್ಟು ಜನ ಮೃತಪಟ್ಟಿದ್ದರೆ 2020ರಲ್ಲಿ 0.08ರಷ್ಟು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಸಂಭವಿಸುವ ಸಾವುಗಳನ್ನು ರಾಜ್ಯದ ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಈ ಪ್ರಮಾಣ ಲಭಿಸುತ್ತದೆ. ಉದಾಹರಣೆಗೆ ಈ ವರ್ಷದ ಮಾಹಿತಿಯನ್ನು ವಿಶ್ಲೇಷಿಸಿದರೆ; ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾವಿನ ಪ್ರಮಾಣ 0.15ರಷ್ಟಿದೆ. ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಉಡುಪಿ ಜಿಲ್ಲೆಗಳಲ್ಲಿ 0.10ರಿಂದ 0.11 ಇದೆ. ವಿಜಯಪುರ, ದಕ್ಷಿಣ ಕನ್ನಡ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಕೊಡಗು ಮತ್ತು ತುಮಕೂರು ಜಿಲ್ಲೆಗಳಲ್ಲಿ 0.08 ಮತ್ತು 0.09ರಷ್ಟು ಇದೆ. ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 0.05 ಮತ್ತು 0.06ರಷ್ಟಿದೆ.

ಕೊಪ್ಪಳ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೇ. 0.04ರಷ್ಟಿದೆ. ಚಿತ್ರದುರ್ಗ, ಬಳ್ಳಾರಿ, ಬೀದರ್, ರಾಮನಗರ, ಕೋಲಾರ, ಕಲಬುರಗಿ ಜಿಲ್ಲೆಗಳಲ್ಲಿ 0.03ರಷ್ಟಿದೆ. ಮಂಡ್ಯದಲ್ಲಿ 0.02 ಇದ್ದರೆ, ಯಾದಗಿರಿಯಲ್ಲಿ 0.01 ಮಾತ್ರ ಇದೆ. ಈ ಅಂಕಿ ಅಂಶಗಳು ಏನನ್ನು ಸೂಚಿಸುತ್ತಿವೆ? ತಲಾದಾಯ ಕಡಿಮೆ ಇರುವ ಜಿಲ್ಲೆಗಳಲ್ಲಿ ಹೃದಯದ ಸಮಸ್ಯೆಗಳು ಕಡಿಮೆ ಅಂತಲೇ? ಹಾಗಿದ್ದರೆ ಹಾಸನ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಬೆಂಗಳೂರು ಗಾಮಾಂತರ ಜಿಲ್ಲೆಗಳಲ್ಲಿ ಯಾಕೆ ಕಡಿಮೆ ಇದೆ?

ಮಾಂಸಾಹಾರ ಹೆಚ್ಚಿರುವ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಇರುವಂತೆ ಕಾಣುತ್ತಿದೆ. ಹಾಗಿದ್ದರೆ ಮಾಂಸಾಹಾರಿಗಳಲ್ಲಿ ಹೃದಯಾಘಾತಗಳ ಸಂಖ್ಯೆ ಕಡಿಮೆಯೇ? ಈ ಕುರಿತಂತೆ ವ್ಯಾಪಕವಾದ ವ್ಯಕ್ತಿಗತ ಅಧ್ಯಯನ ನಡೆದಾಗ ಮಾತ್ರ ಸತ್ಯ ಹೊರ ಬರಲು ಸಾಧ್ಯ. ಆದರೆ ಸ್ಥೂಲವಾಗಿ ಪ್ರದೇಶವಾರು, ಜಿಲ್ಲಾವಾರು ನೋಡಿದರೆ ಈ ಪ್ರಮೇಯವನ್ನು ನಿರಾಕರಿಸಲಾಗದು. ಬಿ12 ವಿಟಮಿನ್ ಕೊರತೆಯು ಸಹ ಹೃದಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದೆಂದು ಅನೇಕ ತಜ್ಞರು ಹೇಳುತ್ತಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆಯಲ್ಲ ಏಕೆ? ದುಡಿಮೆ, ಸಾಂಪ್ರಾದಾಯಿಕ ಆಹಾರ, ಬಿಸಿಲು, ಕಾಳು, ಪಲ್ಯಗಳು ಹೆಚ್ಚು ತಿನ್ನುತ್ತಿರುವುದು ಕಾರಣವಿರಬಹುದೇ? ಅದೂ ನಿಜ ಇರಬಹುದು.

ಸಸ್ಯ ಜನ್ಯವಾದ ಪ್ರೊಟೀನುಗಳು ದೇಹಕ್ಕೆ ಅಗತ್ಯವಾದ ಬಹುಪಾಲನ್ನು ನೀಡುತ್ತಿರಬಹುದು. ಅನೇಕ ವೈದ್ಯರ ಪ್ರಕಾರ ಹೃದಯಾಘಾತ ಹೆಚ್ಚಳವಾಗುತ್ತಿರುವುದರ ಹಿಂದೆ ಅಡುಗೆ ಎಣ್ಣೆಯ ಪಾತ್ರ ಬಹಳ ದೊಡ್ಡದಿದೆ ಎನ್ನುತ್ತಾರೆ. ಅವರ ಪ್ರಕಾರ ನಾವು ಬಳಸುತ್ತಿರುವ ಎಣ್ಣೆ ಎಣ್ಣೆಯೇ ಅಲ್ಲ. ಶುದ್ಧವಾದ ಕಡಲೇ ಕಾಯಿ ಎಣ್ಣೆಯನ್ನು ತಯಾರಿಸಲು ಕನಿಷ್ಠ 300 ರೂ. ಖರ್ಚಾಗುತ್ತದೆ. 2.5 ಕೆ.ಜಿ. ಕಡಲೇ ಬೀಜದಿಂದ ಒಂದು ಕೆ.ಜಿ. ಎಣ್ಣೆ ಸಿಗುತ್ತದೆ. ಸೂರ್ಯ ಕಾಂತಿ ಎಣ್ಣೆಯಾದರೆ ಇದಕ್ಕಿಂತ ಹೆಚ್ಚಿನ ದರ ಇರುತ್ತದೆ. ಹಾಗಿದ್ದರೆ ಮಾರುಕಟ್ಟೆಯಲ್ಲಿ ಕೇವಲ ನೂರು ರೂಪಾಯಿಗೆ ಕೆ.ಜಿ. ಎಣ್ಣೆ ಸಿಗುತ್ತದಲ್ಲ ಹೇಗೆ? ದೊಡ್ಡ ದೊಡ್ಡ ಕಂಪೆನಿಗಳಿಗೆ ತಯಾರಿಕಾ ವೆಚ್ಚ ಕೇವಲ 50ರಿಂದ 60 ರೂ. ಮಾತ್ರ ತಗಲುತ್ತಿರಬಹುದೇ? ಉತ್ಪಾದನೆ, ಸಂಗ್ರಹ, ಪ್ಯಾಕೆಟ್ ಮಾಡುವುದು, ಸಾಗಣೆ, ಸರಬರಾಜುದಾರರಿಗೆ, ಮಾರಾಟಗಾರರಿಗೆ ಕಮಿಷನ್, ಜಾಹೀರಾತು ಮತ್ತು ಲಾಭ ಎಲ್ಲವನ್ನೂ ಕಳೆದರೆ ನಿಜವಾದ ಉತ್ಪಾದನಾ ವೆಚ್ಚ ಇಷ್ಟೇ ಇರಬಹುದು. ಹಾಗಿದ್ದರೆ ಇದು ಎಣ್ಣೆಯೋ ಇಲ್ಲ ಯಾವುದಾದರೂ ರಾಸಾಯನಿಕವೋ ಬಲ್ಲವರೇ ಹೇಳಬೇಕು. ಅಲ್ಲದೆ ಎಣ್ಣೆಯನ್ನು ಸಂಸ್ಕರಿಸಲು ಮಾಡುವ ಬಿಸಿಯಿಂದಾಗಿಯೇ ಅದರಲ್ಲಿ ಕೊಲೆಸ್ಟರಾಲ್ ಅಂಶಗಳು ಬಿಡುಗಡೆಯಾಗುತ್ತವೆ ಎನ್ನಲಾಗುತ್ತದೆ. ಈ ಕುರಿತಂತೆ ಡಾ. ಕಕ್ಕಿಲ್ಲಾಯ ಮುಂತಾದ ವೈದ್ಯರು ಸಾಂಪ್ರಾದಾಯಿಕ ಗಾಣದ ಎಣ್ಣೆ ಬಳಸಲು ಹೇಳುತ್ತಿದ್ದಾರೆ.

2

ತಳಿವಿಜ್ಞಾನಿಗಳು ಹೃದಯಾಘಾತದ ಕುರಿತು ತುಸು ಬೇರೆಯದೇ ಆದ ಪ್ರಮೇಯಗಳನ್ನು ಮುಂದಿಡುತ್ತಿದ್ದಾರೆ. ಅವರ ಪ್ರಕಾರ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಂತೆ ಹೃದಯಾಘಾತ ಕೂಡ ಆನುವಂಶೀಯವಾದುದು. ಲಕ್ಷಾಂತರ ವರ್ಷಗಳ ಮಾನವನ ಇತಿಹಾಸದಲ್ಲಿ ನಿರಂತರ ವಲಸೆ, ಬದಲಾಗುವ ಆಹಾರ ಪದ್ಧತಿ, ಬದಲಾಗುವ ವಾತಾವರಣ ಮುಂತಾದವುಗಳಿಂದ ಬಂದ ಅನೇಕ ಸಮಸ್ಯೆಗಳನ್ನು ನಮ್ಮ ಪೂರ್ವಜರು ಅನುಭವಿಸಿದ್ದಾರೆ. ಅದರಲ್ಲೂ ಕಳೆದ ಹದಿನೈದು ಸಾವಿರ ವರ್ಷಗಳಿಂದೀಚೆಗೆ ಕೃಷಿ ಪದ್ಧತಿಯನ್ನು (ಹೋಮೋ ಸೇಪಿಯನ್ನರು) ಕಂಡುಕೊಂಡ ನಂತರ ಮನುಷ್ಯರ ದೇಹ ರಚನೆಯೇ ಬದಲಾಗಿ ಹೋಯಿತು. ಬೇಟೆಯಾಡಲು, ಹಸು, ಎಮ್ಮೆ, ಕುದುರೆಗಳು ಮತ್ತು ಕುರಿ, ಮೇಕೆಗಳ ಹಿಂದೆ ಓಡಾಡಲು, ಮರ ಹತ್ತಿ ಜೇನು ಸಂಗ್ರಹಿಸಲು ರೂಪುಗೊಂಡಿದ್ದ ದೇಹ ಇದ್ದಕ್ಕಿದ್ದಂತೆ ಒಂದೇ ಕಡೆ ನಿಂತು ಅಗೆಯುವುದು, ತೋಡುವುದು, ಉಳುವುದು, ಕೆತ್ತುವುದು, ಕೊಯ್ಯುವುದು, ಕತ್ತರಿಸುವುದು ಮುಂತಾದ ಕೆಲಸಗಳಿಂದಾಗಿ ಮೂಳೆಗಳ, ದೇಹದ ರಚನೆ ಸಂಪೂರ್ಣ ಬದಲಾಗಿ ಹೋಯಿತು.

 ಕೃಷಿಯಿಂದಾಗಿ ಮುಖ್ಯವಾಗಿ ಗೋಧಿ, ಭತ್ತ, ಆಲೂಗಡ್ಡೆಗಳನ್ನು ಬೆಳೆಯಲು ಪ್ರಾರಂಭಿಸಲಾಯಿತು. ಜಗತ್ತಿನ ಆಹಾರದ ಮುಕ್ಕಾಲು ಪಾಲನ್ನು ಈ ಮೂರೇ ಬೆಳೆಗಳು ಆಕ್ರಮಿಸಿಕೊಂಡಿವೆ. ಅದುವರೆಗಿನ ಆಹಾರದಲ್ಲಿ ಮಾಂಸಕ್ಕೆ, ಹಾಲು ಮುಂತಾದ ಪದಾರ್ಥಗಳಿಗೆ ಪ್ರಾಮುಖ್ಯತೆ ಇತ್ತು. ಇದರಲ್ಲಿ ಪ್ರೊಟೀನು ಮತ್ತು ವಿಟಮಿನ್‌ಗಳಿಗೆ ಹೆಚ್ಚು ಪ್ರಾಧಾನ್ಯತೆ ಇತ್ತು. ಕೃಷಿಯ ಅನ್ವೇಷಣೆಯಿಂದಾಗಿ ಇದ್ದಕ್ಕಿದ್ದ ಹಾಗೆ ಕಾರ್ಬೊಹೈಡ್ರೇಟುಗಳಿಗೆ ಪ್ರಾಮುಖ್ಯತೆ ಬರಲಾರಂಭಿಸಿತು. ನಮ್ಮ ಆಹಾರದ ತಟ್ಟೆಯಲ್ಲಿ ಶೇ. 75ರಷ್ಟು ವಿಟಮಿನ್ ಮತ್ತು ಪ್ರೊಟೀನುಗಳಿರಬೇಕು. ಶೇ. 25ರಷ್ಟು ಕಾರ್ಬೊಹೈಡ್ರೇಟುಗಳಿರಬೇಕು. ಇದು ಸಂಪೂರ್ಣ ಉಲ್ಟಾ ಆಗಿದೆ. ಅದರಿಂದಾಗಿ ತಳಿ ವಿಜ್ಞಾನದ ಪ್ರಕಾರ ನಮಗೆ ಬರಬಾರದ ಸಕ್ಕರೆ ಕಾಯಿಲೆ ಇಂದು ನಮ್ಮನ್ನು ಹೆಚ್ಚು ಬಾಧಿಸುತ್ತಿದೆ. ಅದರಿಂದ ಇತರ ಅನೇಕ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಈ ಮೂರೂ ಬೆಳೆಗಳ ಅನ್ವೇಷಣೆಯ ನಂತರ ಜನಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ನಿಧಾನಕ್ಕೆ ಮನುಷ್ಯನ ದೇಹದಲ್ಲಿ ಹಲವು ರೂಪಾಂತರಗಳು ನಡೆದವು. ಜಗತ್ತಿನ ಮೂಲೆ ಮೂಲೆಗಳಿಗೆ ಮನುಷ್ಯರು ವಲಸೆ ಹೋಗತೊಡಗಿದರು.

ಭಿನ್ನ ಭಿನ್ನವಾದ ವಾತಾವರಣಗಳಿಗೆ ಅನುಗುಣವಾಗಿ ರೂಪಾಂತರಗೊಳ್ಳಲು ದೇಹ ಸಂಘರ್ಷ ಮಾಡತೊಡಗಿತು. ಮೂಲ ಆಫ್ರಿಕನ್ನರಿಗೆ ಗುಂಗುರಾದ ಕಡಿಮೆ ಕೂದಲು, ಕಪ್ಪುಬಣ್ಣ ಇವೆಲ್ಲವೂ ಬಿಸಿಲಿನಿಂದ ಸಂರಕ್ಷಿಸಿಕೊಳ್ಳಲು ನಿಸರ್ಗವೇ ರೂಪಿಸಿದ ಅನಿವಾರ್ಯ ತಂತ್ರವಾಗಿತ್ತು. ದೇಹದಲ್ಲಿನ ಕಬ್ಬಿಣದ ಅಂಶ ಲುಕ್ಸಾನಾಗದೆ ಉಳಿಸಿಕೊಳ್ಳುವ ತಂತ್ರ ಅದು. ಚಳಿ ಹೆಚ್ಚಿದ್ದ ಪ್ರದೇಶಗಳ ಕೂದಲ ಸಂರಚನೆಯೇ ಬೇರೆ ರೀತಿಯದು. ಇದೇ ಕಪ್ಪುಜನ ಅಮೆರಿಕಕ್ಕೆ ಹೋದ ನಂತರ ಹೃದಯ, ಕ್ಯಾನ್ಸರ್, ಕಿಡ್ನಿ ಮುಂತಾದ ಕಾಯಿಲೆಗಳು ವಿಪರೀತವಾದವೆಂದು ಹೇಳುತ್ತಾರೆ. ಈ ವಿಚಾರದಲ್ಲಿ ಯುರೋ-ಅಮೆರಿಕನ್ನರಿಗಿಂತ ಆಫ್ರೊ ಅಮೆರಿಕನ್ನರಲ್ಲಿ ಈ ಸಮಸ್ಯೆ ಜಾಸ್ತಿಯಾಗಿದೆಯೆಂದು ಶರೋನ್ ಮೋಲೆಮ್ ರೀತಿಯ ಎಪಿ ಜೆನೆಟಿಸಿಸ್ಟ್‌ಗಳು ಬರೆಯುತ್ತಾರೆ. ದಕ್ಷಿಣ ಭೂಗೋಳದ ಜನರು ಕಬ್ಬಿಣ, ಸತು ಮುಂತಾದವುಗಳ ಕೊರತೆಯಿಂದ ಅನಿಮಿಯಾ ಬಂದು ಸಂಕಷ್ಟ ಅನುಭವಿಸುತ್ತಿದ್ದರೆ, ಪಶ್ಚಿಮ ಯುರೋಪಿನ ದೇಶಗಳ ಜನರ ದೇಹದಲ್ಲಿ ಹೆಚ್ಚಾಗುವ ಕಬ್ಬಿಣದ ಅಂಶವನ್ನು ನಿರ್ವಹಿಸುವುದೇ ದೊಡ್ಡ ಸಮಸ್ಯೆ ಎಂದು ಡಾ. ಶರೋನ್ ಹೇಳುತ್ತಾನೆ.

ಡಾ. ಶರೋನ್ ಮೋಲೆಮ್ ಮತ್ತು ಜೊನಾಥನ್ ಪ್ರಿನ್ಸ್ ಸೇರಿ ಬರೆದಿರುವ ‘ಸರ್ವೈವಲ್ ಆಫ್ ದ ಸಿಕ್ಕೆಸ್ಟ್’ ಕೃತಿಯು ಜಗತ್ತಿನ ಪ್ರಖ್ಯಾತ ಪುಸ್ತಕಗಳಲ್ಲೊಂದು. ವೈದ್ಯಕೀಯಶಾಸ್ತ್ರದ ಹಿನ್ನೆಲೆ ಇಲ್ಲದವರನ್ನೂ ಸೆಳೆದು ಯೋಚನೆಗೆ ಹಚ್ಚುವ ಕೃತಿ ಇದು. ಮನುಷ್ಯರನ್ನು ನಿಸರ್ಗದ ಸಾಂಗತ್ಯದ ಜೊತೆ ಸೇರಿಸಲು ಪ್ರಯತ್ನಿಸುವ ಅದರ ಸರಳ ಪ್ರಮೇಯಗಳಿಂದಾಗಿ ಮತ್ತು ಬಹುಶಿಸ್ತುಗಳನ್ನು ಒಳಗೊಂಡ ಕಾರಣದಿಂದಾಗಿ ಈ ಪುಸ್ತಕ ಇಷ್ಟವಾಗುತ್ತದೆ. ಮನುಷ್ಯ ತನ್ನ ಹಿರಿಯರು ಬಾಳಿ ಬದುಕಿದ ನೆಲದಿಂದ ಮತ್ತು ಬದುಕಿನ ರಿದಮ್ಮಿನಿಂದ ದೂರವಾಗದೆ ಬದುಕುವುದೇ ಆರೋಗ್ಯದ ಮೊದಲ ಗುಟ್ಟು ಎನ್ನುತ್ತದೆ ಈ ಪುಸ್ತಕ. ಈ ಪ್ರಮೇಯವು ಬುದ್ಧ, ಗಾಂಧಿಯರ ದರ್ಶನವನ್ನು ಮುಟ್ಟಿ ಮಾತನಾಡಿಸಿದಂತೆ ಆಪ್ತವಾಗುತ್ತದೆ.

ಅಮೆರಿಕದಲ್ಲಿ ನ್ಯೂರೋ ಜೆನೆಟಿಸಿಸ್ಟ್ ಆದ ಡಾ. ಶರೋನ್ ವಿಕಾಸವಾದಿ ವೈದ್ಯಕೀಯದಲ್ಲಿ ಪರಿಣತ ವ್ಯಕ್ತಿ. ಮನುಷ್ಯರ ಕಾಯಿಲೆಗಳನ್ನು ನಿಸರ್ಗವೇ ನಿಯಂತ್ರಿಸುತ್ತದೆ ಎಂಬ ಸತ್ಯವನ್ನು ಈತ ಪದೇ ಪದೇ ಪ್ರಸ್ತಾಪಿಸುತ್ತಾನೆ. ಈತ ತನ್ನ ಸಂಶೋಧನಾ ಕೃತಿಯಲ್ಲಿ ಹಲವು ಮುಖ್ಯ ಸಂಗತಿಗಳನ್ನು ವಿವರಿಸಿದ್ದಾನೆೆ. ಬದಲಾದ ಕಾಲಘಟ್ಟದಲ್ಲಿ, ಜೀವನಶೈಲಿಯಿಂದಾಗಿ ಮನುಷ್ಯರು ಬಿಸಿಲಿಗೆ ಹೋಗದಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವುದನ್ನು ಈತ ಪದೇ ಪದೇ ಪ್ರಸ್ತಾಪಿಸುತ್ತಾನೆ. ಬಿಸಿಲು ಮನುಷ್ಯನ ದೇಹದಲ್ಲಿನ ಕೊಲೆಸ್ಟರಾಲ್ ಅನ್ನು ಡಿ. ವಿಟಮಿನ್ ಆಗಿ ಪರಿವರ್ತಿಸುತ್ತದೆ. ಇದಿಷ್ಟರಿಂದಲೇ ಹೃದಯದ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ದೇಹದಲ್ಲಿನ ಮೆಲನಿನ್‌ನ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಬಿಸಿಲಿನಲ್ಲಿನ ಕೆಲವು ಕಿರಣಗಳು ನಮ್ಮ ಕಣ್ಣಿನ ಒಳಭಾಗದಲ್ಲಿರುವ ಆಪ್ಟಿಕ್ ನರವನ್ನು ಮುಟ್ಟಿದ ನಂತರ ಮೆಲನಿನ್ ತಾನಿರಬೇಕಾದ ಸಮಸ್ಥಿಯಲ್ಲಿರುವಂತೆ ಉದ್ಧೀಪಿಸುತ್ತದೆ. ಆದರೆ ತಂಪು ಕನ್ನಡಕಗಳ ಉದ್ದಿಮೆ ಇದಕ್ಕೆ ವಿರುದ್ಧವಾಗಿ ಜಾಹೀರಾತು ನೀಡುತ್ತದೆ. ಇದರ ಜೊತೆಗೆ ಚರ್ಮರೋಗ ತಜ್ಞರು ಬಿತ್ತಿದ ಹಲವು ಭೀತಿಗಳಿಂದಾಗಿ ಮನುಷ್ಯರ ಹೃದಯ ಸಮಸ್ಯೆಯನ್ನು ಅನುಭವಿಸುತ್ತಿದೆ. ವಿಪರೀತವಾದ ಸ್ಪೆಷಲೈಸೆಷನ್ನಿನ ಸಮಸ್ಯೆ ಇದು ಎಂಬುದು ಈತನ ನಿಲುವು.

ದಕ್ಷಿಣ ಭೂಗೋಳದ ಅಥವಾ ಅದರ ಸಮೀಪದ ನೆಲಗಳಿಂದ ಉತ್ತರದ ಶೀತ ವಲಯಗಳಿಗೆ ವಲಸೆ ಹೋದ ಜನರ ದೇಹ ವಿಪರೀತ ಒತ್ತಡ ಅನುಭವಿಸುತ್ತಿರುವುದರ ಹಿಂದೆ ನಿಸರ್ಗದ ವೈವಿಧ್ಯತೆ ಮತ್ತು ವಿಕಾಸವನ್ನು ಅರ್ಥ ಮಾಡಿಕೊಳ್ಳದ ಅಜ್ಞಾನವಿದೆ. ಜೊತೆಗೆ ಬಿಳಿ ಬಣ್ಣದ ಕುರಿತಂತೆ ಮನುಷ್ಯರಿಗಿರುವ ವಿಪರೀತ ಭ್ರಮೆಗಳೂ ಸಹ ಅಕಾಲಿಕ ಸಾವುಗಳಿಗೆ ಕಾರಣವಾಗಿವೆ ಎನ್ನುತ್ತಾನೆ. ಡಾ. ಶರೋನ್ ಪ್ರಕಾರ ಮಿಲ್ಕಿ ವೈಟ್ ಎಂದರೆ ಅದು ರೋಗದ ಭೀಕರ ಲಕ್ಷಣ ಎನ್ನುತ್ತಾನೆ. ಆದರೆ ಮಾಧ್ಯಮಗಳು ಚರ್ಮ ಹಾಲಿನಂತೆ ಬೆಳ್ಳಗಿರಬೇಕು ಎಂಬ ಭ್ರಮೆಯನ್ನು ಬಿತ್ತುತ್ತಿವೆ. ಚರ್ಮ ಅತಿ ಹೆಚ್ಚು ಬೆಳ್ಳಗಿರುವ ಪಶ್ಚಿಮ ಯುರೋಪಿನ ದೇಶಗಳ ಜನರಲ್ಲಿ ಮೂಳೆ ಸವೆತದಿಂದ ಹಿಡಿದು, ರಕ್ತದೊತ್ತಡ, ವಿಭಿನ್ನ ಅಲರ್ಜಿಗಳು ಮುಂತಾದ ಅನೇಕ ವಿಶಿಷ್ಟ ಸಮಸ್ಯೆಗಳಿರುವುದನ್ನು ಈತ ವಿವರಿಸುತ್ತಾನೆ. ಆ್ಯರನ್ ಗೋರ್ಡನ್ ಎಂಬ ಈಜುಗಾರ ಮತ್ತು ದೂರದ ಅಂತರದ ಓಟಗಾರ ಸಹರಾ ಮರುಭೂಮಿಯಲ್ಲಿ 150 ಕಿ.ಮೀ ಓಡಿದಾತ. ಮೌಂಟ್ ಎವರೆಸ್ಟ್ ಹತ್ತಲು ತಯಾರಿ ನಡೆಸಿದ್ದಾತ. ಆದರೆ ಕೀಲುಗಳ ಭೀಕರ ನೋವಿನಿಂದ ಕುಸಿದು ಹೋಗಿದ್ದ. 1984ರಲ್ಲಿ ವೈದ್ಯರ ಬಳಿಗೆ ಹೋದರೆ ನೀನು ಹೆಚ್ಚೆಂದರೆ 5 ವರ್ಷ ಮಾತ್ರ ಬದುಕಬಹುದು ಎನ್ನುತ್ತಾರೆ.

ಆತನ ದೇಹದಲ್ಲಿ ಕಬ್ಬಿಣ ಜಾಸ್ತಿಯಾಗಿ ಹೆಮೊಕ್ರೊಮಾಟೊಸಿಸ್ ಎಂಬ ಅನುವಂಶಿಕ ಕಾಯಿಲೆ ಆತನನ್ನು ಬಾಧಿಸತೊಡಗಿರುತ್ತದೆ. ಇದು ಪಶ್ಚಿಮ ಯುರೋಪಿಯನ್ನರನ್ನು ಬಾಧಿಸುತ್ತಿರುವ ಭೀಕರ ಕಾಯಿಲೆ. ನಿಯಮಿತವಾಗಿ ಮುಟ್ಟಾಗುವ ಹೆಂಗಸರಲ್ಲಿ ಈ ಸಮಸ್ಯೆ ಇರುವುದಿಲ್ಲ. ರಕ್ತ ದೇಹದಿಂದ ಹೊರ ಹೋಗಲು ಬಿಡುವುದೊಂದೇ ಇದಕ್ಕೆ ಪರಿಹಾರ. ನಮ್ಮಂಥ ದೇಶಗಳಲ್ಲಿ ಅನಿಮಿಯಾವೇ ಪ್ರಧಾನ ಪಾತ್ರ ವಹಿಸುತ್ತಿರುವುದರಿಂದ ಈ ಸಮಸ್ಯೆ ಕಡಿಮೆ. ಆದರೆ ಜಾಗತೀಕರಣದಿಂದಾಗಿ ಆಹಾರ, ಬಟ್ಟೆ, ಬಿಸಿಲನ್ನು ನಿರಾಕರಿಸುವ ಜೀವನಶೈಲಿ ಮುಂತಾದವು ರೋಗಗಳನ್ನೂ ಜಾಗತಿಕಗೊಳಿಸುತ್ತಿವೆ. ವೈದ್ಯರ ಮಾತು ಕೇಳಿ ಕುಸಿದು ಹೋದ ಗೋರ್ಡನ್ ತನ್ನ ಜೀವ ಉಳಿಸಿ ಕೊಳ್ಳಲು ಇರುವ ದಾರಿಗಳನ್ನು ಹುಡುಕಾಡತೊಡಗುತ್ತಾನೆ. ಆಗ ಆತನ ನೆರವಿಗೆ ಬರುವುದು ಎಪಿಜೆನೆಟಿಕ್ಸ್. ತಳಿಶಾಸ್ತ್ರವು ಮನುಷ್ಯರ ರೋಗ, ಸಾವುಗಳು ವಿಧಿವಾದದಷ್ಟೆ ನಿಖರ ಮತ್ತು ಖಚಿತ ಎನ್ನುತ್ತದೆ. ಆದರೆ ಎಪಿಜೆನೆಟಿಕ್ಸ್ ಮನುಷ್ಯರ ದೈಹಿಕ, ಮಾನಸಿಕ ಸಮಸ್ಯೆಗಳ ಹಿಂದೆ ಪರಿಸರದ ಪ್ರಭಾವ ಮುಖ್ಯವಾಗಿರುತ್ತದೆ ಎನ್ನುತ್ತದೆ. ಜೆನೆಟಿಕ್ಸು ನೀನು ನಾಳೆ ಸತ್ತು ಹೋಗುವೆ ಎಂದು ಮುಹೂರ್ತ ನಿಗದಿ ಮಾಡಿದರೆ ಎಪಿಜೆನೆಟಿಕ್ಸು ಬದುಕುವ ಕಿರುಹಾದಿಗಳನ್ನು ತೋರುತ್ತದೆ. ಗೋರ್ಡನ್‌ಗೆ ತಾನು ಬದುಕಲು ನಿಯಮಿತವಾಗಿ ರಕ್ತ ಕೊಡುವುದು ಒಂದೇ ದಾರಿ ಎಂದು ತಿಳಿಯುತ್ತದೆ. ಇದು ಸಾಂಪ್ರದಾಯಿಕವಾಗಿ ಆಚರಣೆಯಲ್ಲಿದ್ದ ಕಾಮನ್ ಸೆನ್ಸ್ ಪದ್ಧತಿ. ಆಂಧ್ರದ ವೈಶ್ಯರು ಸುಮಾರು ಎರಡು ಸಾವಿರ ವರ್ಷಗಳಿಂದ ವಿವಿಧ ಜನ ಸಮುದಾಯಗಳ ಜೊತೆ ಮಿಶ್ರಣವಾಗದೆ ಪ್ರತ್ಯೇಕತೆ ಉಳಿಸಿಕೊಂಡ ಕಾರಣದಿಂದ ಪಾರ್ಶ್ವವಾಯುವಿನಂತಹ ವಿಶಿಷ್ಟ ಕಾಯಿಲೆ ಬಾಧಿಸುತ್ತಿದೆಯೆಂದು ಡೇವಿಡ್ ರೈಖ್ ಎಂಬ ತಳಿವಿಜ್ಞಾನಿ ಬರೆಯುತ್ತಾನೆ.

 ಎಪಿಜೆನೆಟಿಸಿಸ್ಟರ ಸಲಹೆಯಂತೆ ಗೋರ್ಡನ್ ರಕ್ತ ನೀಡತೊಡಗುತ್ತಾನೆ. ಐದು ವರ್ಷಗಳಲ್ಲಿ ನೀನು ಸತ್ತು ಹೋಗುವೆ ಎಂದ ವೈದ್ಯರ ಮಾತನ್ನು ಸವಾಲಾಗಿ ಸ್ವೀಕರಿಸಿದ ಗೋರ್ಡನ್ 2006ರಲ್ಲೂ ಆರೋಗ್ಯವಾಗಿದ್ದ ಎಂದು ಶರೋನ್ ಬರೆಯುತ್ತಾನೆ. ಆರೋಗ್ಯವಂತ ಮನುಷ್ಯರ ದೇಹದಲ್ಲಿ 3ರಿಂದ 4 ಗ್ರಾಮ್ ಕಬ್ಬಿಣ ಇರಬೇಕು. ಇದರಲ್ಲಿ ವ್ಯತ್ಯಾಸವಾದರೆ ಆರೋಗ್ಯದ ರಿದಮ್ಮು ತಾರಾ ಮಾರಾ ತಿರುಗತೊಡಗುತ್ತದೆ. ನಮ್ಮನ್ನು ಪೊರೆಯಲು ಬಿಸಿಲಿಗೆ ಮತ್ತು ಆಹಾರದಲ್ಲಿ ಕಾರ್ಬೊಹೈಡ್ರೇಟುಗಳನ್ನು ಕಡಿಮೆಗೊಳಿಸುವುದರಿಂದ ಮಾತ್ರ ಸಾಧ್ಯ. ಸೊಪ್ಪು, ಕಾಳು, ತರಕಾರಿ, ಮೊಟ್ಟೆ, ಮಾಂಸ, ಮೀನು, ಹಣ್ಣುಗಳು ಮುಂತಾದವನ್ನು ಹೆಚ್ಚು ಮಾಡಿ ಅಕ್ಕಿ, ರಾಗಿ, ಗೋಧಿ, ಆಲೂಗಡ್ಡೆ ಮುಂತಾದವನ್ನು ಕಡಿಮೆ ಮಾಡುವುದೊಂದೇ ಪರಿಹಾರ. ‘‘ಆಲೂಗಡ್ಡೆ ಎಂಬುದು ತರಕಾರಿಯೇ ಅಲ್ಲ. ಅದು ಕಾರ್ಬೊಹೈಡ್ರೇಟುಗಳ ಖಜಾನೆ. ಆಹಾರಗಳಲ್ಲಿ ಬಾಂಬಿನ ಥರ’’ ಎಂದು ಕೆ.ಸಿ ರಘು ಹೇಳುತ್ತಿರುತ್ತಾರೆ. ಕಬ್ಬಿಣದ ಅಂಶ ಹೆಚ್ಚಾಗುವುದಕ್ಕೂ ಆರೋಗ್ಯವಂತರು ಸಾಂಕ್ರಾಮಿಕ ಕಾಯಿಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಯುವುದಕ್ಕೂ ಸಂಬಂಧವಿದೆಯೆಂದು ಡಾ.ಶರೋನ್ ಹೇಳುತ್ತಾರೆ. ಜಗತ್ತನ್ನು ತಲ್ಲಣಗೊಳಿಸಿದ 1347ರ ಪ್ಲೇಗಿನಿಂದ ಸತ್ತವರಲ್ಲಿ ಬಹುಪಾಲು ಜನರು ಆರೋಗ್ಯವಂತ ಯುವಜನರೇ ಆಗಿದ್ದರು. ಇವರಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದು ಕಾರಣವಾಗಿತ್ತು. ಇದು ಮ್ಯುಟೇಶನ್ ಹೊಂದಿ ಇಂದಿನ ತಲೆಮಾರುಗಳನ್ನೂ ಬಾಧಿಸುತ್ತಿದೆ. ಕಳೆದ ಶತಮಾನವನ್ನು ಬಾಧಿಸಿದ ಭೀಕರ ಪ್ಲೇಗಿನಲ್ಲಿ ಮಡಿದವರಲ್ಲಿ ಆರೋಗ್ಯವಂತರೇ ಹೆಚ್ಚಿದ್ದರು ಎಂಬುದು ಡಾ. ಶರೋನ್ ಪ್ರಮೇಯ.

3

ಈ ಎಲ್ಲ ಪ್ರಮೇಯಗಳ ಬೆಳಕಿನಲ್ಲಿ ನಮ್ಮ ರಾಜ್ಯದ ಹೃದಯಾಘಾತದ ಅಂಕಿ ಅಂಶಗಳನ್ನು ಪರಿಶೀಲಿಸಬಹುದೆನ್ನಿಸುತ್ತದೆ. ಹೃದಯಾಘಾತದಿಂದ ಮಡಿದರು ಎಂದು ದಾಖಲಾಗುವುದಕ್ಕಿಂತ ದಾಖಲಾಗದೆ ಹೋಗಿರುವ ಸಾಧ್ಯತೆಗಳು ಹೆಚ್ಚಿವೆ. ಅವುಗಳನ್ನೆಲ್ಲ ಪತ್ತೆ ಹಚ್ಚಿ ನಿಖರ ವೈಜ್ಞಾನಿಕ ಕಾರಣಗಳನ್ನು ತಿಳಿಯದೇ ಹೋದರೆ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಇದಕ್ಕಾಗಿ ವೈದ್ಯಕೀಯಶಾಸ್ತ್ರವು ತಳಿವಿಜ್ಞಾನದ ಪ್ರಮೇಯಗಳನ್ನು ಬಳಸಿ ಪರಿಹಾರಗಳನ್ನು ಕಂಡುಕೊಳ್ಳಬೇಕಿರುವುದು ಈ ಕಾಲದ ತುರ್ತು. ಇಲ್ಲದಿದ್ದರೆ, ಕ್ರಿಕೆಟ್ ಆಡುತ್ತಿದ್ದ, ಆರೋಗ್ಯವಾಗಿದ್ದ, ಜಿಮ್ಮಿನಲ್ಲಿ ಹುರಿಗೊಳಿಸಿದ್ದ ದೇಹ ಹೊಂದಿದ್ದ ಮನೆ ಮುಂದಿನ ಬೀದಿಯ ಮೂವತ್ತರ ಹುಡುಗ ಮೊನ್ನೆ ಕುಸಿದು ಬಿದ್ದು ಮರಣ ಹೊಂದಿದ. ಆರೋಗ್ಯವಾಗಿಯೇ ಇದ್ದ ಗೆಳೆಯ ಪ್ರಕಾಶ್ ಬಡುವನಹಳ್ಳಿಯ ಹೃದಯ ನಿಂತೇ ಹೋಯಿತಲ್ಲ. ಏಳು ಮುದ್ದೆ ಉಂಡು ಕಡೆಗೊಂದು ಹಲಸಿನ ಹಣ್ಣನ್ನು ತಿಂದು ಐದಾರು ಜನ ಮಾಡುತ್ತಿದ್ದ ಕೆಲಸವನ್ನು ಒಬ್ಬನೇ ಮಾಡುತ್ತಿದ್ದ ತಾತ ಹುಲ್ಲಿನ ಹೊರೆ ಹೊತ್ತಿದ್ದವನು ಕುಸಿದು ಬಿದ್ದು ಹೋಗಿಯೇ ಬಿಟ್ಟರಲ್ಲ? ಜ್ವರ ಬಂದು ಬಿಟ್ಟಿದ್ದ ಮಾವ ಕೂತವರು ಏಳಲಾಗದೆ ಮಲಗಿಬಿಟ್ಟರಲ್ಲ ಯಾಕೆ? ಎಂದು ಅನೇಕ ವರ್ಷದಿಂದ ಕೇಳುತ್ತಲೇ ಇದ್ದೇವೆ. ಉತ್ತರ ಮಾತ್ರ ಇಲ್ಲ. ಉತ್ತರ ಕಂಡುಕೊಂಡರೆ ಮಾತ್ರ ಮನುಷ್ಯ ಜನಾಂಗ ಉಳಿಯುತ್ತದೆ. ಕಡೆಯದಲ್ಲದ ಮುಖ್ಯ ಮಾತು; ಸಕ್ಕರೆಯನ್ನು ಹರಾರಿ ಗನ್‌ಪೌಡರ್‌ಗಿಂತ ಭೀಕರ ಅನಾಹುತಕಾರಿ ಪದಾರ್ಥ ಎನ್ನುತ್ತಾನೆ. ಸಿದ್ಧ ಪಾನೀಯಗಳು, ಸಕ್ಕರೆಯನ್ನು ಬಿಡದಿದ್ದರೂ ಸಹ ಮನುಷ್ಯ ಅಪಾಯವನ್ನು ಎದುರಿಸಲೇಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top