-

ಮಲೇರಿಯಾ ಮುಕ್ತವಾಗುವ ಭಾರತದ ಕನಸು ನನಸಾದೀತೇ?

-

ಇತ್ತೀಚೆಗೆ ‘ವಿಶ್ವ ಮಲೇರಿಯಾ ದಿನ’ವನ್ನು ನಾಡಿನ ತುಂಬೆಲ್ಲಾ ಅದ್ದೂರಿಯಾಗಿ ಆಚರಿಸಿದ್ದೇವೆ. ಜನಜಾಗೃತಿ ಮೂಡಿಸಲು ಜಾಥಾಗಳನ್ನು ಮಾಡಿದ್ದೇವೆ. ಬೀದಿನಾಟಕ ಆಡಿಸಿದ್ದೇವೆ. ಜನಪದರ ಮೂಲಕ ಹಾಡು ಹಾಡಿಸಿದ್ದೇವೆ. ಮನುಷ್ಯ ಕುಲಕ್ಕೆ ಮಾರಕವಾಗಿರುವ ಮಲೇರಿಯಾ ವಿರುದ್ಧ ಸರಕಾರ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಿದೆ. ಕೇಂದ್ರ ಸರಕಾರ 2030ಕ್ಕೆ ಮಲೇರಿಯಾ ಮುಕ್ತ ಭಾರತಕ್ಕೆ ಶ್ರಮಿಸುತ್ತಿದೆ. ಅಲ್ಮಾಅಟಾ ಘೋಷಣೆಯ ಪ್ರಕಾರ 2000ಕ್ಕೆ ‘ಎಲ್ಲರಿಗೂ ಆರೋಗ್ಯ’ ಎಂದು ಒಕ್ಕೊರಲಿನಿಂದ ಜಗದ ದೇಶಗಳೆಲ್ಲ ಕೂಗಿದ್ದರೂ, ನಾವೆಷ್ಟು ಸಾಧಿಸಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಮಲೇರಿಯಾ ಇಂದು ನಿನ್ನೆಯದಲ್ಲ. ಎಂದೋ ಹುಟ್ಟಿ ಶತಶತಮಾನಗಳಿಂದಲೂ ಮನುಷ್ಯನನ್ನು ಕಾಡುತ್ತಲೇ ಬಂದಿರುವ ಮಲೇರಿಯಾ ಪ್ರತಿಯೊಂದು ದೇಶದಲ್ಲಿಯೂ ವಸಾಹತು ಸ್ಥಾಪಿಸಿದೆ. ಸದ್ಯ ಮಂಗಳಗ್ರಹದಲ್ಲಿ ಮನೆ ಕಟ್ಟುವ ಸನ್ನಾಹದಲ್ಲಿರುವ ಮನುಷ್ಯನಿಗೆ ಮಲೇರಿಯಾದಿಂದ ಬಿಡುಗಡೆಯಾಗುವ ಉಪಾಯ ಇದುವರೆಗೆ ಹೊಳೆದಿಲ್ಲ. ಅದರ ಕಣ್ಣುಮುಚ್ಚಾಲೆಯಾಟ ನಡೆದೇ ಇದೆ.

ಜಗತ್ತಿನ ಹಲವಾರು ಭಾಗಗಳಲ್ಲಿ ಮಲೇರಿಯಾ ನಡೆಸಿದ ದಾಂಧಲೆಗಳು ಯಾವುದೇ ಮಹಾಯುದ್ಧಗಳಿಗೆ ಕಡಿಮೆಯಲ್ಲ. ಆರೋಗ್ಯ ಮತ್ತು ವಿಜ್ಞಾನಿಗಳಿಗೆ ಸವಾಲೊಡ್ಡಿ ನಿಂತಿದ್ದ ಈ ಕಾಯಿಲೆ ಮಧ್ಯೆ ಒಂದೆರಡು ದಶಕಗಳಲ್ಲಿ ಸೋತು ಮೂಲೆ ಸೇರಿತ್ತು. ಆದರೆ ಈಗ ಕಬಂಧ ಬಾಹುಗಳನ್ನು ಚಾಚಿ ಸೆಡ್ಡು ಹೊಡೆದು ನಿಂತಿದೆ. ಮಲೇರಿಯಾ ಬಡತನದ ಜೊತೆಗೆ ಇರುವ ಕಾಯಿಲೆಯಷ್ಟೇ ಅಲ್ಲ, ಇದು ಬಡತನದ ಮೂಲವೂ ಹೌದು. ಮನುಕುಲದ ದೊಡ್ಡ ಶತ್ರುವೂ ಹೌದು.

ಮಲೇರಿಯಾ ಮರುಕಳಿಸುತ್ತಿರುವುದೇಕೆ?

*ನಿವಾರಣಾ ಚಟುವಟಿಕೆಗಳಿಗೆ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಬೆಂಬಲದ ಕೊರತೆ.

*ತರಬೇತಾದ ಮಾನವ ಶಕ್ತಿ ಮತ್ತು ನುರಿತ ಅಧಿಕಾರಿಗಳ ಅಲಭ್ಯತೆ.

*ಮಲೇರಿಯಾ ನಿವಾರಣೆ ಕಾರ್ಯಕ್ರಮದಲ್ಲಿ ಜನತೆಯ ನಿರಾಸಕ್ತಿ.

*ನೈರ್ಮಲ್ಯದ ಬಗ್ಗೆ ಇರುವ ಅನಾಸ್ಥೆ ಮತ್ತು ನಿವಾರಣೋಪಾಯಗಳ ಕುರಿತಾದ ತಿಳುವಳಿಕೆಯ ಕೊರತೆ.

*ಕೀಟನಾಶಕಗಳಿಗೆ ಸೊಳ್ಳೆಗಳು ಬೆಳೆಸಿಕೊಂಡಿರುವ, ಬೆಳೆಸಿಕೊಳ್ಳುತ್ತಿರುವ ಪ್ರತಿರೋಧಕ ಗುಣ.

*ನಿವಾರಣೋಪಾಯ ಪ್ರಕ್ರಿಯೆಯಲ್ಲಿ ಸಂಶೋಧನೆಗಳ ಫಲವನ್ನು ಬಳಸಿಕೊಳ್ಳಲಾಗದ ಅಸಹಾಯಕತೆ.

*ಸ್ವಾಸ್ಥ್ಯ ಸಂರಕ್ಷಣಾ ಯೋಜನೆಗಳು ಗ್ರಾಮೀಣ ಪ್ರದೇಶಗಳನ್ನು ನಿರ್ಲಕ್ಷಿಸಿ ನಗರಗಳತ್ತ ಕೇಂದ್ರೀಕರಣಗೊಂಡಿರುವುದು.

ಇಂದು ಪ್ರಪಂಚದಲ್ಲಿ 30 ಕೋಟಿ ಜನ ಮಲೇರಿಯಾದಿಂದ ಬಳಲುತ್ತಾರೆ. 30 ಲಕ್ಷ ಜನರು ಅಸುನೀಗುತ್ತಾರೆ ಎಂದು ಒಂದು ಅಂದಾಜು. ಆಶ್ಚರ್ಯದ ಸಂಗತಿಯಂದರೆ ಈಗ ಈ ಕಾಯಿಲೆ ನೆಲೆಯೂರಿರುವುದು ಬಡ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ಮಾತ್ರ.

ಒಂದು ಚಿಕ್ಕ ಸೊಳ್ಳೆಯಿಂದ...

ಒಂದು ಚಿಕ್ಕ ಅಕ್ಕಿಕಾಳಿನಷ್ಟು ಗಾತ್ರದ ಕೀಟ ಏನೆಲ್ಲ ಅವಾಂತರ ಗಳನ್ನು ಮಾಡಬಲ್ಲುದು ಎಂಬುದಕ್ಕೆ ಸೊಳ್ಳೆ ಒಂದು ಉತ್ತಮ ಉದಾಹರಣೆ. ಮಲೇರಿಯಾ ಮತ್ತು ಮನುಷ್ಯರ ನಡುವೆ ಸೊಳ್ಳೆಯದು ಮಧ್ಯವರ್ತಿಯ ಪಾತ್ರ. ಮಲೇರಿಯಾ ಪ್ಲಾಸ್ಮೋಡಿಯಂ ಪರೋಪಜೀವಿಯಿಂದ ಬರುತ್ತದೆ. ಇದರಲ್ಲಿ ನಾಲ್ಕು ವಿಧ. ಅವೆಂದರೆ: ಪ್ಲಾ.ವೈವಾಕ್ಸ್, ಪ್ಲಾ.ಫಾಲ್ಸಿಫಾರಂ, ಪ್ಲಾ.ಮಲೇರಿಯೆ, ಪ್ಲಾ.ಓವೆಲ್. ಭಾರತದಲ್ಲಿ ಶೇ.65-69 ರಷ್ಟು ಮಲೇರಿಯಾ ಪ್ಲಾ.ವೈವಾಕ್ಸ್‌ನಿಂದ, 25-30ರಷ್ಟು ಪ್ಲಾ.ಫಾಲ್ಸಿಫಾರಂನಿಂದ, 4 -8ರಷ್ಟು ಮಿಶ್ರ ಸೋಂಕಿನಿಂದ ಬರುತ್ತದೆ. ರೋಗ ಪ್ರಸಾರ:

ಗಂಡು ಮತ್ತು ಹೆಣ್ಣು ಕೂಟಕಣ ಜೀವಿಗಳನ್ನು ರಕ್ತದಲ್ಲಿ ಹೊಂದಿರುವ ವ್ಯಕ್ತಿ ಸೋಂಕಿನ ಮೂಲ. ಸೊಳ್ಳೆಯ ಜೊಲ್ಲು ಗ್ರಂಥಿಗಳಲ್ಲಿ ಬೀಜಕಣ ಜೀವಿಗಳು (Sporozoites) ಇದ್ದರೆ ಮಾತ್ರ ಅದು ಸೋಂಕಿನ ಲಕ್ಷಣಗಳನ್ನು ಹೊಂದಿರುತ್ತದೆ.

ಸೊಳ್ಳೆಯಿಂದ ಮಾತ್ರವೇ ಮಲೇರಿಯಾ ಹರಡುತ್ತದೆಂಬ ಕಲ್ಪನೆ ತಪ್ಪು. ಬೇರೆ ಕಾರಣಗಳಿಂದಲೂ ಅದು ಇತರರನ್ನು ಬಾಧಿಸಬಹುದು. ಮಲೇರಿಯಾ ರೋಗಾಣುಗಳಿರುವ ವ್ಯಕ್ತಿಯಿಂದ ದಾನವಾಗಿ ಪಡೆದ ರಕ್ತವನ್ನು ಸ್ವೀಕರಿಸಿದವನೂ ರೋಗದಿಂದ ನರಳಬಹುದು. ರೋಗಾಣುಗಳ ಸೋಂಕು ಗುಣ ಎರಡು ವಾರವಾದರೂ ನಾಶಗೊಳ್ಳುವುದಿಲ್ಲ. ರೋಗಕಾರಕ ಸೋಂಕು ಭ್ರೂಣವನ್ನು ಪ್ರವೇಶಿಸದಂತೆ ಗರ್ಭಚೀಲ ತಡೆಯುತ್ತದೆ. ಕೆಲವೊಮ್ಮೆ ಈ ಚೀಲದಲ್ಲಿ ದೋಷವುಂಟಾದರೆ ಗರ್ಭಿಣಿಗೆ ತಗುಲಿದ ಸೋಂಕು ಸಲೀಸಾಗಿ ಭ್ರೂಣವನ್ನು ಪ್ರವೇಶಿಸುತ್ತದೆ. ಹುಟ್ಟುವ ಶಿಶು ಮಲೇರಿಯಾದೊಂದಿಗೆ ಪ್ರಪಂಚಕ್ಕೆ ಪಾದಾರ್ಪಣೆ ಮಾಡುವುದು.

ತೊಂದರೆಗಳು:

ಸೋಂಕುಕಾರಕ ಸೊಳ್ಳೆಯ ಕಡಿತ ಮತ್ತು ಮಲೇರಿಯಾ ಪ್ರಾರಂಭವಾಗುವ ನಡುವಿನ ಅಂತರ ಸಾಮಾನ್ಯವಾಗಿ 10 ದಿನಗಳಿಗಿಂತ ಕಡಿಮೆ ಇರುವುದಿಲ್ಲ. ಇದಕ್ಕೆ ರೋಗದ ಸುಪ್ತಕಾಲ ಎನ್ನುವರು. ರೋಗಾಣುಗಳ ಪ್ರಭೇದಗಳನ್ನನುಸರಿಸಿ ಸುಪ್ತಾವಸ್ಥೆಯ ಅವಧಿ ಬೇರೆ ಬೇರೆಯಾಗಿರುತ್ತದೆ. ಮಲೇರಿಯಾ ರೋಗಾಣುಗಳು ಮನುಷ್ಯರ ರಕ್ತದಲ್ಲಿ ಜೀವವಿಷ (Toxin)ವನ್ನು ಬಿಡುಗಡೆ ಮಾಡುತ್ತವೆ. ಜೀವವಿಷ ರಾಸಾಯನಿಕ ಸಂಯೋಜನೆಗಳು ಇದುವರೆಗೂ ನಿಗೂಢ. ಆದರೆ, ಅದರ ಗುಣವಿಶೇಷಗಳು ಗುಟ್ಟಾಗಿ ಉಳಿದಿಲ್ಲ. ಜೀವವಿಷವು ಜ್ವರಕಾರಕವೂ, ರಕ್ತಕಣ ಲಯಕಾರಿಯೂ, ವಾತ ಪ್ರಚೋದಕವೂ ಆಗಿದ್ದು ಈ ಗುಣಗಳಿಂದ ರೋಗದ ಲಕ್ಷಣಗಳನ್ನು ಹೊರಹೊಮ್ಮಿಸುತ್ತದೆ.

 ಮಲೇರಿಯಾ ದಿನಬಿಟ್ಟು ದಿನ ಬರುವುದು ಸಾಮಾನ್ಯ. ಪ್ಲಾ. ಮಲೇರಿಯಾದ ಸೋಂಕು ಇದ್ದಾಗ ಅಥವಾ ಮಿಶ್ರ ಸೋಂಕು ತಗುಲಿದಾಗ ಬಿಟ್ಟೂಬಿಡದೆ ಜ್ವರ ಬಾಧಿಸಬಹುದು. ಈ ಕಾಯಿಲೆಯು ಚಳಿಯ ಹಂತ, ಬಿಸಿಯ ಹಂತ, ಬೆವರು ಹಂತ ಎಂಬ ಮೂರು ಘಟ್ಟಗಳಲ್ಲಿ ರೋಗಿಯನ್ನು ಹಿಂಸಿಸಿ ಮುಕ್ತಾಯಗೊಳ್ಳುವುದು. ಪ್ಲಾ. ಫಾಲ್ಸಿಫಾರಂ ಸೋಂಕಿನಲ್ಲಿ ಚಳಿಯ ಹಂತ, ಬಿಸಿಯ ಹಂತ, ಬೆವರು ಹಂತಗಳು ಕ್ವಚಿತ್ತಾಗಿ ಕಂಡು ಬರಬಹುದು. ವಿಪರೀತ ತಲೆಸಿಡಿತ, ವಾಂತಿಯಾಗುವಿಕೆ ಈ ಸೋಂಕಿನಲ್ಲಿ ಸಾಮಾನ್ಯ. ಮಲೇರಿಯಾ ರೋಗಿಯಲ್ಲಿ ಯಕೃತ್ತು, ಪ್ಲೀಹಗಳು ದೊಡ್ಡದಾಗುತ್ತವೆ. ಹೊಟ್ಟೆಯನ್ನು ಪರೀಕ್ಷಿಸುವಾಗ ಅವು ಕೈಗೂ ಎಟುಕಬಹುದು. ಈ ಅಂಗಾಂಶಗಳಲ್ಲಿ ರಕ್ತ ನೆರೆತ (Congestion)ಉಂಟಾಗುತ್ತದೆ. ಚಳಿಜ್ವರದಲ್ಲಿ ಮೇಲಿಂದ ಮೇಲೆ ಕೆಂಪು ರಕ್ತಕಣಗಳು ನಾಶವಾಗುವುದರಿಂದ ರೋಗಿ ಅಶಕ್ತನಾಗುತ್ತಾನೆ. ಬಹಳ ದಿನ ಮಲೇರಿಯಾ ಪೀಡಿಸಿದವರ ಮುಖ ನಿಸ್ತೇಜವಾಗಿರುತ್ತದೆ. ನಾಶಗೊಂಡ ಕೆಂಪು ರಕ್ತಕಣಗಳಿಂದ ಹಿಮೋಗ್ಲೋಬಿನ್ ಮೂತ್ರದಲ್ಲಿ ಕಾಣಿಸಿಕೊಂಡು ಕರಿ ಮೂತ್ರ ಜ್ವರ ಬರಬಹುದು.

ಗರ್ಭಿಣಿಯರಲ್ಲಿ ಮಲೇರಿಯಾ ಬಂದರೆ ಗರ್ಭಪಾತ ಆಗಬಹುದು. ಇಲ್ಲದಿದ್ದಲ್ಲಿ ಭಾರೀ ರಕ್ತಹೀನತೆ ತಲೆದೋರಬಹುದು. ಚಿಕ್ಕ ಮಕ್ಕಳಲ್ಲಿ ಸೆಳವು ಕಾಣಿಸಿಕೊಂಡು ಮಕ್ಕಳು ಸಾಯಲೂಬಹುದು. ಮಲೇರಿಯಾ ಹಾವಳಿ ಇದ್ದ ಪ್ರದೇಶಗಳ ಗರ್ಭಿಣಿಯರು ಚಿಕಿತ್ಸೆಯಿಂದ ವಂಚಿತರಾಗಿದ್ದರೆ, ಇಲ್ಲವೇ ಅಸಂಬದ್ಧ ಚಿಕಿತ್ಸೆ ಪಡೆದುಕೊಂಡಿದ್ದರೆ ಅವರು ಹೆರುವ ಮಗುವಿಗೆ ಮಲೇರಿಯಾ ಬರುವ ಸಂಭವ ಜಾಸ್ತಿ. ಇಂಥ ಮಗುವಿನ ತೂಕ ಕಡಿಮೆ ಇದ್ದು, ಬಿಳಿಚಿಕೊಂಡಿರುತ್ತದೆ. ಯಕೃತ್ತು ಮತ್ತು ಪ್ಲೀಹಗಳು ಸಾಮಾನ್ಯ ಗಾತ್ರಕ್ಕಿಂತ ದೊಡ್ಡವಿರುತ್ತವೆ. ರಕ್ತ ಪರೀಕ್ಷೆಯಿಂದ ತಾಯಿಯ ರಕ್ತದಲ್ಲಿರುವ ಪ್ಲಾಸ್ಮೋಡಿಯಂ ಸೂಕ್ಷ್ಮಾಣುಗಳು ಮಗುವಿನ ರಕ್ತದಲ್ಲಿರುವುದನ್ನು ಪತ್ತೆ ಮಾಡಬಹುದು. ಪ್ಲಾ. ಫಾಲ್ಸಿಫಾರಂ ರೋಗಾಣುಗಳಿಂದ ಉಂಟಾಗುವ ಕಾಯಿಲೆಗೆ ಚಿಕಿತ್ಸೆ ದೊರೆಯದಿದ್ದಲ್ಲಿ ರೋಗಿ ಒಂದೆರಡು ದಿನಗಳಲ್ಲಿ ಕೊನೆಯುಸಿರೆಳೆಯಬಹುದು. ಆದುದರಿಂದ ಇದಕ್ಕೆ ಕೆಡುಕಿನ ಜ್ವರವೆಂದು ಹೆಸರು.

ಚಿಕಿತ್ಸೆ:

ರೋಗಿ ವಿಶ್ರಾಂತಿ ಪಡೆಯಬೇಕು. ಚಳಿಯ ಹಂತದಲ್ಲಿ ಸಾಕಷ್ಟು ಹೊದಿಕೆಗಳು, ಬಿಸಿನೀರಿನ ಚೀಲಗಳೂ ಬೇಕಾಗುತ್ತವೆ. ತಲೆನೋವನ್ನು, ಮೈ ಕೈ ನೋವನ್ನು ಔಷಧಿಗಳಿಂದ ನಿವಾರಿಸಬೇಕು. ವಾಂತಿ, ಭೇದಿ ಹೆಚ್ಚಾಗಿದ್ದರೆ ರೋಗಿಯನ್ನು ಆಸ್ಪತ್ರೆಯ ಆವರಣ ದಲ್ಲಿಯೇ ಉಪಚರಿಸುವುದು ಸೂಕ್ತ. ಚಿಕಿತ್ಸೆಯಲ್ಲಿ ಪೂರ್ವಭಾವಿ ಚಿಕಿತ್ಸೆ, ಸಂಪೂರ್ಣ ಚಿಕಿತ್ಸೆ ಎಂಬ ಎರಡು ವಿಧಗಳಿವೆ.

ಕ್ಲೋರೋಕ್ವಿನ್ ಮತ್ತು ಪ್ರೈಮಾಕ್ವಿನ್‌ಗಳು ಈಗ ಬಳಕೆಯಲ್ಲಿರುವ ಮಲೇರಿಯಾ ನಿರೋಧಕ ಔಷಧಿಗಳು. ಇವುಗಳ ಪ್ರಮಾಣವನ್ನು ವಯಸ್ಸಿಗನುಗುಣವಾಗಿ ನಿಗದಿಪಡಿಸಲಾಗಿದೆ. ಕ್ಲೋರೋಕ್ವಿನ್‌ಗೆ ಪ್ರತಿರೋಧ ಕಂಡು ಬಂದಾಗ ಅಮಾಡೈಯಾಕ್ವಿನ್‌ಗಳಿಂದ ನಿಯಂತ್ರಿಸಬಹುದು. ಅಪರೂಪಕ್ಕೆ ಕ್ವಿನಿನ್ ಬಳಸಲಾಗುವುದು. ಮಲೇರಿಯಾ ಪೀಡಿತ ಪ್ರದೇಶಗಳಲ್ಲಿ ಜ್ವರವಿರುವ ಪ್ರತಿಯೊಬ್ಬರನ್ನೂ ಮಲೇರಿಯಾ ರೋಗಿಯೆಂದು ಪರಿಗಣಿಸಿ ಪರೀಕ್ಷೆ ಮಾಡಲಾಗುವುದು. ಔಷಧಿಯನ್ನು ಖಾಲಿ ಹೊಟ್ಟೆಯಲ್ಲಿ ಎಂದೂ ಯಾವ ಕಾರಣಕ್ಕೂ ತಗೆದುಕೊಳ್ಳಬಾರದೆಂಬುದನ್ನು ನೆನಪಿಡಬೇಕಾದದ್ದು ಅತ್ಯವಶ್ಯ. ಪಿಂಡದ ವಿರೂಪವನ್ನುಂಟು ಮಾಡುವ ದಾರಾಪ್ರಿಮನ್ನು ಗರ್ಭಿಣಿಯರಿಗೆ ಕೊಡಬಾರದು.

ಪ್ರತಿಬಂಧಕೋಪಾಯಗಳು:

ಮಲೇರಿಯಾ ರೋಗಿಯನ್ನು ಗುಣಪಡಿಸಿ, ಸೊಳ್ಳೆಗಳು ರೋಗವಾಹಕಗಳಾಗದಂತೆ ತಡೆಯುವುದು ಮತ್ತು ಸೊಳ್ಳೆಗಳಿಂದ ರಕ್ಷಣೆ ಪಡೆಯುವ ವಿಧಾನ ಅನುಸರಿಸುವುದು ರೋಗಕ್ಕೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾರ್ವಜನಿಕರ ಸಹಕಾರ ಅತ್ಯವಶ್ಯವಿರುವುದರಿಂದ ಅವರಿಗೆ ಈ ಕಾಯಿಲೆ ಬರುವ ಬಗೆ, ಚಿಕಿತ್ತಾ ವಿಧಾನ, ಸೊಳ್ಳೆಗಳ ನಿಯಂತ್ರಣ ಮೊದಲಾದ ಅಂಶಗಳ ಬಗ್ಗೆ ತಿಳುವಳಿಕೆ ಕೊಡಬೇಕು.

ಸೊಳ್ಳೆಗಳಿಂದ ರಕ್ಷಣೆ ಪಡೆಯಲು...

* ಸೂಕ್ತ ಶಕ್ತಿಶಾಲಿ ಕ್ರಿಮಿನಾಶಕಗಳನ್ನು ಸಕಾಲಕ್ಕೆ ಸಿಂಪಡಿಸಬೇಕು.

*ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಮಾಡಿ ಸೊಳ್ಳೆಗಳ ವಂಶಾಭಿವೃದ್ಧಿಗೆ ಅವಕಾಶ ಕೊಡದಿರುವುದು. ಅಥವಾ ಅಂಥ ಸ್ಥಳಗಳಲ್ಲಿ ಕ್ರಿಮಿನಾಶಕಗಳನ್ನು ಸಿಂಪಡಿಸಿ ನಾಶಪಡಿಸಬೇಕು.

* ಮಲಗುವಾಗ ಸೊಳ್ಳೆಪರದೆಯನ್ನು ಉಪಯೋಗಿಸ ಬೇಕು. ಸೊಳ್ಳೆಗಳು ಮನೆಗೆ ನುಗ್ಗುವುದನ್ನು ತಡೆಹಿಡಿಯಲು ಕಿಟಕಿಗಳಿಗೆ ಜಾಳಿಗೆಗಳನ್ನು ಹಾಕಿಸಬೇಕು.

* ಸೊಳ್ಳೆಗಳ ಮೊಟ್ಟೆ ಮರಿಗಳನ್ನು ತಿಂದು ಬದುಕುವ ‘ಗಾಂಬೂಸಿಯಾ’ ಜಾತಿಯ ಮೀನುಗಳನ್ನು ಕೆರೆಕಟ್ಟೆಗಳಲ್ಲಿ ಬೆಳೆಸುವುದರಿಂದ ಸೊಳ್ಳೆಗಳ ಸಂಖ್ಯೆ ಇಳಿಮುಖವಾಗಲು ಸಹಾಯವಾಗಬಹುದು. 

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top