ದಲಿತ ದೌರ್ಜನ್ಯಗಳು: ಸಮಾಜದ ನಡೆ | Vartha Bharati- ವಾರ್ತಾ ಭಾರತಿ

--

ದಲಿತ ದೌರ್ಜನ್ಯಗಳು: ಸಮಾಜದ ನಡೆ

ಭಾರತ ದೇಶ ತನ್ನ ಒಡಲೊಳಗೆ ಅನೇಕ ಜಾತಿ, ಧರ್ಮಗಳನ್ನು ಒಳಗೊಂಡಿದ್ದು, ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಹಾಗೂ ‘ಬಹುಜನ ಹಿತಾಯ, ಬಹುಜನ ಸುಃಖಾಯ’ ಎಂಬ ಆಶಯವನ್ನು ಒಳಗೊಂಡಿರುವ ಸಂವಿಧಾನ ಜಾರಿಯಲ್ಲಿರುವ ಈ ನಾಗರಿಕ ಸಮಾಜದಲ್ಲೂ ಅನಾಗರಿಕ ಘಟನೆಗಳು ಘಟಿಸುವ ಮೂಲಕ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ಪೈಶಾಚಿಕ ಕೃತ್ಯಗಳನ್ನು ಖಂಡಿಸುವುದರ ಜೊತೆಗೆ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಹೋರಾಟ ಮಾಡುವುದು ಪ್ರತಿಯೊಬ್ಬ ನಾಗರಿಕ ಪ್ರಜೆಯ ಕರ್ತವ್ಯ. ಹಾಗಾಗಿಯೇ ದಿಲ್ಲಿಯಲ್ಲಿ ನಡೆದ ನಿರ್ಭಯಾ ಪ್ರಕರಣ ವಿರೋಧಿಸುವ ಮೂಲಕ ಅಪರಾಧಿಗಳಿಗೆ ಶಿಕ್ಷೆ ನೀಡಬೇಕೆಂದು ಮಾಧ್ಯಮಗಳು ಇಡೀ ಪ್ರಕರಣವನ್ನು ಮೇಲಿಂದ ಮೇಲೆ ತೋರಿಸುವ ಮುಖೇನ ಜನ ಮನಸ್ಸಿನಿಂದ ಮಾಸದ ಹಾಗೆ ಕಾಯ್ದು ಕೊಂಡವು. ಇದರ ಫಲ ಜಾತ್ಯತೀತ ಮನಸ್ಸುಗಳೆಲ್ಲ ಘಟನೆಯ ವಿರುದ್ಧ ಒಕ್ಕೊರಲಿನಿಂದ ಹೋರಾಟ ಮಾಡಿದರು. ನಿರೀಕ್ಷೆಯಂತೆ ನ್ಯಾಯಾಲಯ ಆರೋಪಿಗೆ ಕಠಿಣ ಶಿಕ್ಷೆಯನ್ನೇ ವಿಧಿಸಿತು. ಆದರೆ ಅದೇ ಸಮಯದಲ್ಲಿ ಮಧ್ಯ ಪ್ರದೇಶದಲ್ಲಿ ನಿರ್ಭಯಾ ಪ್ರಕರಣದ ರೀತಿಯೇ ದಲಿತ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ದುರಂತವೆಂದರೆ ಆ ಪ್ರಕರಣ ವಿರುದ್ಧ ಯಾವ ಹೋರಾಟಗಳೂ ರೂಪು ಗೊಳ್ಳಲಿಲ್ಲ. ಮಾಧ್ಯಮಗಳೂ ಸಹ ಜಾಣ ಕುರುಡರಂತೆ ವರ್ತಿಸುತ್ತಾ, ಜನ ಸಾಮಾನ್ಯರಿಗೆ ಸುದ್ದಿ ತಲುಪದ ಹಾಗೆ ಕಾಯ್ದುಕೊಂಡು ತಮ್ಮ ಗುಪ್ತ ಜಾತಿ ನಿಷ್ಠೆಯನ್ನು ಮುಂದುವರಿಸಿದ್ದು ಮಾತ್ರ ವಿಪರ್ಯಾಸ.

ಮಾಧ್ಯಮ ಹಾಗೂ ಮೇಲ್ಜಾತಿ ಮನುವಾದಿ ಮನಸ್ಸುಗಳೇ ಹಾಗೆ. ದಲಿತರ ವಿಚಾರವೆಂದರೆ ಅದೇ ಶತಮಾನದ ತಾತ್ಸಾರ. ಈ ದೇಶದಲ್ಲಿ ಮೇಲ್ಜಾತಿ ಜೀವ, ಮಾನಗಳಿಗಷ್ಟೇ ಬೆಲೆ. ದಲಿತರ ಜೀವ ಹಾಗೂ ಮಾನಕ್ಕೆ ಕಿಲುಬು ಕಾಸಿನ ಕಿಮ್ಮತ್ತೂ ಇಲ್ಲ ಎಂಬುದನ್ನು ಮೇಲಿನ ಪ್ರಕರಣಗಳು ನೇರವಾಗಿಯೇ ಸಾರುತ್ತಿವೆ.

ಮೂಲನಿವಾಸಿಗಳಾದ ದಲಿತರು ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ ಎರಡು ದಿನಗಳಿಗೊಮ್ಮೆ ದಲಿತ ಮಹಿಳೆ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆಂದು 2016ರಲ್ಲಿ ನ್ಯಾಷನಲ್ ಕ್ರೈಂ ಬ್ಯೂರೊ ಮಾಹಿತಿಯನ್ನು ಬಹಿರಂಗ ಗೊಳಿಸಿದೆ. ಅಲ್ಲದೆ 2014ರಿಂದ 2016ರ ವರಗೆ 96,552 ಕೊಲೆಗಳು, 2,48,244 ಅಪಹರಣಗಳು, 2,88,570 ಅತ್ಯಂತ ಕ್ರೂರ (ಅತ್ಯಾಚಾರ ಹೊಡೆದಾಟ ಪ್ರಕರಣಗಳು ಸೇರಿ) ಘಟನೆಗಳು, 2,90,553 ಮಕ್ಕಳ ದೌರ್ಜನ್ಯ ಪ್ರಕರಣಗಳು ನಡೆದಿವೆ ಎಂದು ಇದೇ ಕ್ರೈಂ ಬ್ಯೂರೊ ಗೂಗಲ್‌ನಲ್ಲಿ ಮಾಹಿತಿಯನ್ನು ನೀಡಿದೆ. ಇನ್ನು ರಾಜ್ಯದಲ್ಲಿ ದಲಿತ ದೌರ್ಜನ್ಯಗಳು ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಲ್ಲೇ ಇದೆ. ಇಲ್ಲೂ ಸಹ ಪ್ರತೀ ಎರಡು ದಿನಕ್ಕೆ ದಲಿತ ಮಹಿಳೆ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ ಎಂಬುದು ತುಂಬ ಆಘಾತಕಾರಿ ವಿಚಾರ. ಪ್ರತೀ ನಾಲ್ಕುಗಂಟೆಗಳಲ್ಲಿ ಒಬ್ಬ ದೌರ್ಜನ್ಯಕ್ಕೆ ಒಳಗಾದರೆ, ಪ್ರತೀ ಐದು ದಿನಕ್ಕೆ ಒಂದು ಕೊಲೆಯಾಗುತ್ತಿದೆ. ದಲಿತರ ಮೇಲೆ ನಡೆದಿರುವ ಒಟ್ಟು 1,912 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ತಡೆ ಕಾಯ್ದೆಯ ಅನುಷ್ಠಾನದ 2016ರ ಸಾಲಿನ ರಾಜ್ಯ ವರದಿಯಲ್ಲಿ ಈ ಎಲ್ಲಾ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ 78 ಕೊಲೆ, 164 ಅತ್ಯಾಚಾರ, ಇತರ 1,670 ಪ್ರಕರಣಗಳು. ಇನ್ನು ದಾಖಲಾಗದೆ ಪ್ರಾಣ ಭಯದಿಂದಲೋ, ಕೂಲಿಗಂಜಿಯೋ ಎದೆಯಲ್ಲಿಯೇ ಉದುಗಿ ಹೋಗಿರುವ ಪ್ರಕರಣಗಳೆಷ್ಟೊ.

ಇಲ್ಲಿಯ ತನಕ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳೆಲ್ಲ ಕೇವಲ ಕ್ಷುಲ್ಲಕ ವಿಷಯಕ್ಕಷ್ಟೆ. ಆ ದೌರ್ಜನ್ಯಗಳು ಎಷ್ಟು ನಿಕೃಷ್ಟ ಮತ್ತು ಕ್ರೂರತೆಯಿಂದ ಕೂಡಿತ್ತೆಂದರೆ ಊಹಿಸಲಸಾಧ್ಯವಾದವು. ಗುಜರಾತ್‌ನಲ್ಲಿ ದಲಿತರು ದನವನ್ನು ಸಾಗಿಸುತ್ತದ್ದರೆಂದು ಕೈಗಳನ್ನು ಕಟ್ಟಿ ಮನಸೊ ಇಚ್ಛೆ ಥಳಿಸಿದ್ದಾರೆ, ದಲಿತ ಗಾರ್ಬಾ ನೃತ್ಯ ನೋಡಿದನೆಂದು ಹೊಡೆದಿದ್ದಾರೆ, ಮೀಸೆಯನ್ನು ಮೇಲಕ್ಕೆ ತಿರುವಿ ಬಿಟ್ಟಿದ್ದಕ್ಕೆ ಆತನನ್ನು ಹತ್ಯೆ ಮಾಡಿದ್ದಾರೆ, ಉತ್ತರ ಪ್ರದೇಶದಲ್ಲಿ ದಲಿತ ಗರ್ಭಿಣಿ ಕೊಡ ತೆಗೆದು ಕೊಂಡು ಹೋಗುವಾಗ ಮೇಲ್ಜಾತಿಯವರಿಗೆ ಸೋಕಿಸಿದಳೆಂದು ಹೊಡೆದು ಕೊಲೆ ಮಾಡಲಾಗಿದೆ. ಪಾಂಡವ ಪುರದಲ್ಲಿ ದಲಿತ ಬಾಲಕಿಯ ಅತ್ಯಾಚಾರ ಮಾಡಿ ಕೇಸ್ ವಾಪಸ್ ಪಡೆಯ ಬೇಕೆಂದು ಪ್ರಾಣ ಬೆದರಿಕೆಯನ್ನು ಒಡ್ಡಿದ್ದಾರೆ. ಮಂಗಳೂರಿನಲ್ಲಿ ದಲಿತ ಹುಡುಗ ಮೇಲ್ಜಾತಿ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆಂದು ಕ್ರೂರವಾಗಿ ಕೊಲೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ವಾಚ್ ಕಟ್ಟಿದಕ್ಕೆ ಅವನ ಕೈ ಕತ್ತರಿಸಿದ್ದಾರೆ.

ಇತ್ತೀಚೆಗೆ ವಿಜಯಪುರದಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ದಾನಮ್ಮ ಎಂಬ ದಲಿತ ಬಾಲಕಿಯನ್ನು ಕೇಸರಿ ಪಕ್ಷವೊಂದರ ಕಾರ್ಯಕರ್ತನನ್ನು ಒಳಗೊಂಡಂತೆ ಕೆಲವು ಹುಡುಗರು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾರೆ. ಆ ಬಾಲಕಿ ಆತ್ಯಾಚಾರಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಬಿಡದೆ ತಮ್ಮ ಕಾಮದಾಸೆ ತೀರಿಸಿಕೊಂಡು ಅವಳ ಸಾವಿಗೆ ಕಾರಣರಾಗಿರುವ ವಿಚಾರವನ್ನು ಯಾವ ಮಾಧ್ಯಮವೂ ಸುದ್ದಿ ಮಾಡದೆ ನಾವು ಮೇಲ್ಜಾತಿ ಪರ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಿವೆ. ಆದರೆ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಹರಡುತ್ತಿದ್ದಂತೆ ಕೆಲ ಮಾಧ್ಯಮಗಳು ನೆಪ ಮಾತ್ರಕ್ಕೆ ಎಂಬಂತೆ ಸುದ್ದಿ ಮಾಡಿ ಕೈ ತೊಳೆದು ಕೊಂಡವು. ಸದ್ಯಕ್ಕೆ ಸಮಾಧಾನದ ವಿಚಾರವೆಂದರೆ ಕೆಲವು ಪ್ರಿಂಟ್ ಮೀಡಿಯಗಳು ಘಟನೆ ಮತು ಹೋರಾಟದ ವಿವರವನ್ನು ಇತ್ತೀಚಿನ ವರೆಗೂ ಸುದ್ದಿ ಮಾಡಿರುವುದು.

ಇನ್ನು ಮುಖ್ಯಮಂತ್ರಿಗಳು ಶೋಷಣೆಗೊಳಗಾದ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ಒಂದಷ್ಟು ಹಣ ನೀಡಿ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಪೊಲೀಸ್ ಇಲಾಖೆ ಹಾಗೂ ಇತರ ಅಧಿಕಾರಿ ವರ್ಗ ಎಲ್ಲರೂ ಸಾಮೂಹಿಕವಾಗಿ ಮೇಲ್ಜಾತಿ ಪರ, ದಲಿತರ ವಿರುದ್ಧವಾಗಿಯೇ ಕರ್ತವ್ಯ ನಿರ್ವಹಿಸಿದ್ದಾರೆ ಎಂಬುದಕ್ಕೆ ಮೇಲಿನ ಎಲ್ಲಾ ಪ್ರಕರಣಗಳು ಸಾಕ್ಷೀಕರಿಸುತ್ತವೆ. ದಾನಮ್ಮನ ಈ ಪ್ರಕರಣದಲ್ಲೂ ತಮ್ಮ ಅದೇ ಚಾಳಿಯನ್ನೇ ಮುಂದುವರಿಸಿದ್ದಾರೆ.

ಮೀಸಲಾತಿಯ ಫಲದಿಂದ ಗೆದ್ದಿರುವ ಜನಪ್ರತಿನಿಧಿಗಳಲ್ಲಿ ಒಬ್ಬರಾದರೂ ತಮ್ಮ ಸಮುದಾಯದ ಹೆಣ್ಣು ಮಗಳಿಗೆ ಆಗಿರುವ ಅಮಾನವೀಯ ಕೃತ್ಯದ ವಿರುದ್ಧ ಚಕಾರ ಎತ್ತದೆ ಮೌನವಾಗಿರುವ ಮುಖೇನ ನಾವು ಮೀಸಲಾತಿಯಿಂದ ಗೆದಿದ್ದರೂ ಮೇಲ್ಜಾತಿಯವರು ಆಡಿಸುವ ಕೈಗೊಂಬೆಗಳು ಎಂಬುದನ್ನು ಪರೋಕ್ಷವಾಗಿ ಸಾಬೀತು ಮಡಿದ್ದಾರೆ.

ಮೀಸಲಾತಿಯಿಂದ ಗೆದ್ದಂತಹ ಜನಪ್ರತಿನಿಧಿಗಳು ತಮ್ಮ ಸಮುದಾಯದ ಕಾವಲು ನಾಯಿಗಳಾಗಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಕನಸು ಕಂಡಿದ್ದರು. ದುರಂತವೆಂದರೆ ಅವರೆಲ್ಲ ಮೇಲ್ಜಾತಿ ಪಕ್ಷಗಳಲ್ಲಿ ಬಾಯಿಕಟ್ಟಿರುವವರಾಗಿದ್ದಾರೆ. ತಮ್ಮ ಸಮುದಾಯ ಶೋಷಣೆ, ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ ಎಂಬ ಸಣ್ಣ ಯೋಚನೆಯೂ ಇವರ ಬಳಿ ಸುಳಿಯುವುದಿಲ್ಲ. ಅವರಿಗೆ ಅಧಿಕಾರದ ಗದ್ದುಗೆಯೇ ಜೀವಾಳ. ಯಾಕೆಂದರೆ ಮನುವಾದಿಗಳ ಪಕ್ಷಗಳಲ್ಲಿ ಗುಲಾಮರಾಗಿರುವ ದಲಿತ ರಾಜಕೀಯ ನಾಯಕರು ಇಷ್ಟು ವರ್ಷಗಳಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳಲ್ಲಿ ದಲಿತರ ಪರ ನಿಂತು ಅವರಿಗೆ ರಕ್ಷಣೆ ನೀಡಿ, ನ್ಯಾಯ ದೊರಕಿಸಿಕೊಡುವ ಮೂಲಕ ನಾವು ನಿಮ್ಮ ಜೊತೆಗಿದ್ದೀವಿ ಎಂದು ಹೇಳಿರುವ ಯಾವುದೇ ಉದಾಹಾರಣೆ ಸಿಗುವುದಿಲ್ಲ. ಇಂತಹ ಚಮಚಾ ನಾಯಕರಿಂದ ದಲಿತರ ರಕ್ಷಣೆ ಅಸಾಧ್ಯದ ಮಾತು.

ಇಂತಹ ಪರಿಸ್ಥಿತಿ ಎದುರಾಗುತ್ತದೆಂದೇ ಅರಿತಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ‘‘ಶೋಷಿತರಾಗಿರುವ ಬಹುಜನರು ತಮ್ಮ ಸ್ವಂತ ಶಕ್ತಿಯಿಂದ ಅಧಿಕಾರದ ಚುಕ್ಕಾಣಿ ಹಿಡಿದರೆ ನಿಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಹಾಗೂ ಅವಕಾಶದ ಬಾಗಿಲುಗಳು ತೆರೆಯುತ್ತವೆ’’ ಎಂದು ಎಚ್ಚರಿಸಿದರು. ಇದನ್ನು ಅರ್ಥ ಮಾಡಿಕೊಳ್ಳದ ಶೋಷಿತರು ಮನುವಾದಿ ಪಕ್ಷಗಳಲ್ಲಿ ಚಮಚಾಗಳಾಗಿದ್ದು ಕೊಂಡು ತೋರಿಕೆಗೆ ಅಂಬೇಡ್ಕರ್‌ರನ್ನು ಆರಾಧಿಸುತ್ತಿರುವುದು ಮಾತ್ರ ಈ ದೇಶದ ಬಹು ದೊಡ್ಡ ವ್ಯಂಗ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top