ಕನ್ನಡ ಕಟ್ಟುವ ಹೊಸ ಸವಾಲು | Vartha Bharati- ವಾರ್ತಾ ಭಾರತಿ

--

ಕನ್ನಡ ಕಟ್ಟುವ ಹೊಸ ಸವಾಲು

ಹೊಸಭಾಷೆಯ ಕಲಿಕೆಯ ಮೊದಲು ಮಾತೃಭಾಷೆಯನ್ನು ವ್ಯವಸ್ಥಿತವಾಗಿ ಕಲಿತಿರಬೇಕು. ಅಂದಾಗ ಇಂಗ್ಲಿಷ್ ಕಲಿಕೆ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಇಲ್ಲವಾದಲ್ಲಿ ‘ರೆಡಿಮೇಡ್ ಉಡುಪುಗಳ’ ಹಾಗೆ ಸಿದ್ಧವಾಕ್ಯಗಳಂತೆ ಪುನರುಕ್ತಿಯಾಗುತ್ತಲೇ ಇರುತ್ತದೆ. ಆಂಗ್ಲಮಾಧ್ಯಮಕ್ಕೆ ಸೇರಿಸಿ ಮಕ್ಕಳನ್ನು ಅತೀಬೇಗ ವಿದ್ಯಾವಂತರಾಗಿಸುವುದರಲ್ಲೇ ಪೋಷಕರಿಗೆ ಆಸಕ್ತಿಯಿದೆಯೇ ವಿನಃ ಪ್ರತಿಭಾವಂತರನ್ನಾಗಿಸಲು ಪ್ರಯತ್ನಿಸುವುದಿಲ್ಲ. ಕೊನೆ ಪಕ್ಷ ಚಿಂತಿಸುವುದೂ ಇಲ್ಲ. ಅಂಕಗಳಿಕೆಯ ಎಲ್ಲ ಕಸರತ್ತುಗಳು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪ್ರತಿಭಾವಂತರಿಲ್ಲದ ಕೇವಲ ವಿದ್ಯಾವಂತರು, ಬುದ್ಧಿವಂತರಿರುವ ಸಮಾಜ ನಿರ್ಮಾಣವಾದೀತು!

ಇಂಗ್ಲಿಷ್‌ನ ಪ್ರಭಾವದಲ್ಲೂ ಕನ್ನಡವನ್ನು ಕಟ್ಟುವ ಕಾರ್ಯ ಈಗ ಹುಲುಸಾಗಿ ಬೆಳೆಯುತ್ತಿದೆ. ಬೋಧನೆ ಮತ್ತು ಕಲಿಕೆಯ ಮಾಧ್ಯಮದಲ್ಲಿ ಕನ್ನಡದ ಅಸ್ತಿತ್ವಕ್ಕೆ ಹಿನ್ನಡೆಯಾದರೂ ಕನ್ನಡ ಬೆಳೆಯುತ್ತಿದೆ. ಹೊಸ ಹೊಸ ಬರೆಹಗಾರರು ಹುಟ್ಟುತ್ತಲೇ ಇದ್ದಾರೆ. ಪತ್ರಿಕೆಗಳು ಹೊಸ ಚಿಂತನೆಯ ಬರಹಗಾರರನ್ನು ಹುಟ್ಟುಹಾಕುತ್ತಿವೆ. ಊರು-ತಾಲೂಕು-ಜಿಲ್ಲಾಮಟ್ಟದಲ್ಲಿ ಕನ್ನಡ ಸಮ್ಮೇಳನಗಳು, ಶಾಲಾಕಾಲೇಜುಗಳ ವಿಶೇಷ ಸಂಚಿಕೆಗಳು ಪ್ರಬುದ್ಧವಾಗೇ ಹೊರಹೊಮ್ಮುತ್ತಿವೆ. ಸಾಹಿತ್ಯ ಲೋಕವು ಹೊಸ ಕತೆ-ಕಾದಂಬರಿಗಳ ಮೂಲಕ ಶ್ರೀಮಂತವಾಗುತ್ತಿದೆ. ಭಾವನಾತ್ಮಕವಾಗಿ ಕನ್ನಡ-ಕನ್ನಡಿಗರನ್ನು ಒಗ್ಗೂಡಿಸಲು ಇಂಥ ಮಹತ್ ಕಾರ್ಯಗಳು ಈ ತಲೆಮಾರಿನವರಿಗೆ ಪ್ರೇರಣೆಯನ್ನೀಯುತ್ತಿವೆ. ಭಾಷೆಯ ಉಳಿವಿನೊಂದಿಗೆ ಸಂಸ್ಕೃತಿ ಊರ್ಧ್ವಮುಖಿಯಾಗುತ್ತದೆ. ಕನ್ನಡಜಗತ್ತು ವಿಸ್ತಾರವಾಗುವಲ್ಲಿ ಕನ್ನಡಿಗರು ಹೀಗೆ ಒಂದು ಸೇರುವುದು ಕನ್ನಡದ ಸಂವರ್ಧನೆಯ ಪ್ರಪಂಚವನ್ನು ಕಟ್ಟಲು ಹೇತುವಾಗುತ್ತಿದೆ. ನೆಲ-ಜಲ-ಭಾಷೆಯ ವಿಚಾರವಾಗಿ ಕನ್ನಡಿಗರು ಒಂದಾಗಲೇಬೇಕಾದ ತುರ್ತು ತೋರಿದಾಗಲೇ ಕನ್ನಡದ ಅಸ್ಮಿತೆಗೆ ಜೀವಬರುವುದು. ಕನ್ನಡ ಬ್ರಾಹ್ಮಣವಾಗುತ್ತಲೇ ಕನ್ನಡದ ಮಕ್ಕಳು ಪ್ರತಿಭಾವಂತರಾಗಬೇಕು.

ಆಂಗ್ಲ ಮಾಧ್ಯಮದಲ್ಲಿ ಬುದ್ಧಿವಂತರಾಗುವುದಕ್ಕೆ ಸಾಧ್ಯವಿದೆ. ಆದರೆ ಕನ್ನಡ ಮಾಧ್ಯಮಕ್ಕೆ ಪ್ರತಿಭೆಯನ್ನು ಬೆಳೆಸುವ ತಾಕತ್ತಿದೆ. ನಮ್ಮ ಹಿರಿಯ ತಲೆಮಾರಿನವರಲ್ಲಿ ಪ್ರತಿಭೆಯೆಂಬುದು ಸಹಜವಾಗೇ ಇತ್ತು. ಅವರ ಬರಹಗಳ ಮೂಲವನ್ನು ಅವಲೋಕಿಸಿದರೆ ಈ ಮಾತು ಸ್ಪಷ್ಟವಾಗುತ್ತದೆ. ಮಾತೃಭಾಷೆಯು ನೀಡುವ ಆತ್ಮವಿಶ್ವಾಸ ಕಡತಂದ ಸರಕುಗಳಂತಿರುವುದಿಲ್ಲ. ಇಂಗ್ಲಿಷ್ ಶೂದ್ರವಾಗಬೇಕೆಂಬ ಆಗ್ರಹ ನನಗಿಲ್ಲವೇ ಇಲ್ಲ. ಆದರೆ ಬುದ್ಧಿವಂತಿಕೆಗಿಂತ ಪ್ರತಿಭಾವಂತಿಕೆ ಬೆಳೆಯುವುದು ಮಾತೃಭಾಷಾಮಾಧ್ಯಮದ ಕಲಿಕೆಯಲ್ಲಿ. ಆಗ ವಿಷಯಜ್ಞಾನವೂ ಭಾಷಾಜ್ಞಾನವೂ ಗಾಢವಾಗುವುದು ಮತ್ತು ಅಭಿವ್ಯಕ್ತಿಗೊಳ್ಳುವುದು. ಸೃಷ್ಟಿಶೀಲತೆಯೊಂದು ಹುಟ್ಟುವುದು ಮಾತೃಭಾಷೆಯ ಪ್ರಭಾವ ಢಾಳಾಗಿದ್ದಾಗ. ಕನ್ನಡದ ಮಕ್ಕಳನ್ನು ಪ್ರತಿಭಾವಂತರಾಗಿಸುವ ಹೊಣೆ ಕನ್ನಡಿಗರದ್ದು. ಬುದ್ಧಿವಂತರಲ್ಲಿ ಜಾಗೃತವಾಗಿರಲಾರದ ವಿವೇಕ ಪ್ರತಿಭಾವಂತರಲ್ಲಿ ಜಾಗೃತವಾಗಿರುತ್ತದೆ. ವಿವೇಕವಿದ್ದಲ್ಲಿ ಜೀವನ ಮೌಲ್ಯಗಳಿರುತ್ತವೆ; ಮನುಷ್ಯ ಸಂವೇದನೆಗಳಿರುತ್ತವೆ; ಗ್ರಹಿಕೆ, ಸೂಕ್ಷ್ಮತೆಗಳಿರುತ್ತವೆ. ಬದುಕನ್ನು ಎತ್ತರಿಸಬಹುದಾದ ಸಮಗ್ರಪ್ರಜ್ಞೆಯಿರುತ್ತದೆ. ಕನ್ನಡವನ್ನು ಚೆನ್ನಾಗಿ ಮಾತಾಡಬಲ್ಲ ಮಕ್ಕಳನ್ನು ಇಂದು ಕಾಣಬಹುದು. ಅವರ ಪ್ರತಿಭೆಗೆ ಪೂರಕವಾಗಿ ಪಠ್ಯೇತರ ಚಟುವಟಿಕೆಗಳಿಗೆ ಪೋಷಕರು ಗಮನಕೊಡುತ್ತಿದ್ದಾರೆ. ಊರುಗಳಲ್ಲಿ ಆಗುವ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಮಕ್ಕಳನ್ನು ಒಳಗೊಳ್ಳಿಸುವ ಮೂಲಕ ಭರತನಾಟ್ಯ, ಯಕ್ಷಗಾನ, ಸಂಗೀತ ಶಿಬಿರಗಳಲ್ಲಿ ಭಾಗಿಯಾಗುವಂತೆ, ಸ್ಪರ್ಧಿಸುವಂತೆ ಪ್ರೋತ್ಸಾಹ ಹೆತ್ತವರಿಂದ, ಸಮಾಜದಿಂದ ಸಿಗುತ್ತಿದೆಯೆಂಬುದು ಕನ್ನಡದ ಬೆಳವಣಿಗೆಯ ದೃಷ್ಟಿಯಿಂದ ಉತ್ತಮವಾದ, ಆರೋಗ್ಯಯುತವಾದುದು.

ಕರ್ನಾಟಕದ ಅನೇಕ ಪ್ರತಿಭೆಗಳು ಜನಪ್ರೀತಿ ಮತ್ತು ಜನಪ್ರಸಿದ್ಧಿಯನ್ನು ಪಡೆಯುವಲ್ಲಿ ಮುದ್ರಣ ಮಾತ್ತು ದೃಶ್ಯಮಾಧ್ಯಮಗಳ ಪಾತ್ರ ಬಹುದೊಡ್ಡದಿದೆ. ಆಂಗ್ಲಮಾಧ್ಯಮಶಾಲೆಗಳೂ ಇಂತಹುದರ ಕಡೆಗೆ ಗಮನಹರಿಸುತ್ತಿರುವುದು ಕನ್ನಡದ ಮಟ್ಟಿಗೆ ಹಿತವಾಗಿಯೇ ಇದೆ. ಇಂಗ್ಲಿಷ್‌ನ ಪ್ರಭಾವದಿಂದಾಗಿ ಕನ್ನಡವು ಇಂದು ಅನುಭವಿಸಿರುತ್ತಿರುವ ಅಸಡ್ಡೆ, ಅವಮಾನ, ತಿರಸ್ಕಾರ, ನಿರ್ಲಕ್ಷ್ಯವನ್ನು ಇಂಗ್ಲಿಷ್ ಕೂಡ ಲ್ಯಾಟಿನ್ ಭಾಷೆಯಿಂದ ಅನುಭವಿಸಿತ್ತು. ಆಗೆಲ್ಲಾ ಶೇಕ್ಸಿಪಿಯರ್‌ನಂಥವರು ತಾವು ಬರೆದುದನ್ನು ಮುಚ್ಚಿಟ್ಟುಕೊಳ್ಳುತ್ತಿದ್ದರಂತೆ. ಅಂಥದ್ದರಲ್ಲಿ ಕೇವಲ ಕನ್ನಡಿಗರು ಮಾತ್ರ ಮಾತಾಡುವ ಕನ್ನಡಕ್ಕೆ ಆಧುನಿಕತೆಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು, ಶಕ್ತಿಯನ್ನು ಕನ್ನಡಿಗರು ಕೊಡಬೇಕೇ ವಿನಃ ಬೇರೆ ಮಾರ್ಗವಿಲ್ಲ. ಇಂಗ್ಲಿಷನ್ನೊಳಗೊಂಡಂತೆ ಅದರಲ್ಲಿರುವ ಜ್ಞಾನವನ್ನು ಓದುವಂತೆ ಸಾಧ್ಯವಾಗಿಸಿದ ದೊಡ್ಡಸ್ಥಿಕೆಯನ್ನು ತುಂಬಿದವರು ಇಂಗ್ಲಿಷನ್ನು ಚೆನ್ನಾಗಿಬಲ್ಲ ನಮ್ಮ ಹಿರಿಕಿರಿಯರು.I is a boy ತಪ್ಪು, I am a boy  ಸರಿಯೆಂಬಷ್ಟು ಇಂಗ್ಲಿಷನ್ನು ಹಳ್ಳಿಯವನೊಬ್ಬ ಕಲಿತಿದ್ದಾನೆಂದರೆ ಅದು ಅವರು ಕನ್ನಡದಲ್ಲಿ ಹೊಂದಿರುವ ಪ್ರಭುತ್ವದಿಂದ ಸಾಧ್ಯವಾದದ್ದು. ಚಿಂತಿಸುವ ಹಾಗೇ ತನ್ನೊಳಗೆ ಅರಗಿಸಿಕೊಳ್ಳುವ ಶಕ್ತಿ ಭಾಷೆಗೆ ಬರುವುದು ಹೀಗೆಯೇ. ಒಂದು ಭಾಷೆಯಲ್ಲಿ ನಾವು ಪಡೆಯುವ ಸಾಮಾನ್ಯ ಅರ್ಹತೆಯು ಉಳಿದ ಭಾಷಿಕ ರಚನೆಯನ್ನು ಅರಗಿಸಿಕೊಳ್ಳಲು ಪ್ರೇರಕವಾಗಿರುತ್ತದೆ.

 ಭಾಷೆಯ ಜೀವಂತಿಕೆಯ ಗಟ್ಟಿಬೇರೂರಿರುವುದು ಆಡುಭಾಷೆಯಲ್ಲಿ. ಶಿಷ್ಟಸಾಹಿತ್ಯಕ್ಕೆ ಆಡುಭಾಷೆಯೇ ಮೂಲ. ಇಂಗ್ಲಿಷ್‌ನ ಜ್ಞಾನರಾಶಿಯನ್ನು ಕನ್ನಡದ ತೆಕ್ಕೆಗೆ ತಂದುಕೊಳ್ಳುವ ಮಾರ್ಗವೇ ಕನ್ನಡದ ಸಿರಿಯನ್ನು ಸಂಪನ್ನಗೊಳಿಸುತ್ತದೆ. ಬಲ್ಲವರು ಮಾರ್ಗದರ್ಶನ ನೀಡಿದಾಗ ಕನ್ನಡದ ಮಕ್ಕಳು ಅವುಗಳನ್ನು ಓದಿ ಅರಗಿಸಿಕೊಂಡು ಕನ್ನಡತನಕ್ಕೆ ಹೊಂದಿಸಿ ಉದ್ದೀಪಿಸಬಲ್ಲರು. ಕಾನ್ವೆಂಟ್ ಶಾಲೆಗಳಲ್ಲಿಯಂತೆ ಇಂಗ್ಲಿಷನ್ನು ಮಾತಾಡುವುದರಿಂದ ಯಾವ ಲಾಭವಿಲ್ಲ. ಇಂಗ್ಲಿಷ್‌ನ ಜ್ಞಾನನಿಧಿಯನ್ನು ಕನ್ನಡದ ಕಣ್ಣಿನಲ್ಲಿ ಓದುವುದರಿಂದ ದ್ವಿಭಾಷೆಯಲ್ಲೂ ಪರಿಣಿತಿಯನ್ನು ಗಳಿಸಬಹುದು. ಮಾತೃಭಾಷೆಗಿರುವ ಅನನ್ಯವಾದ ಶಕ್ತಿಯಿದು. ಕೌಶಲ ಮತ್ತು ಸಾಮರ್ಥ್ಯಾಧಾರಿತ ಕಲಿಕೆ ಸಾಧ್ಯವಾಗುವುದು ಹೀಗೆ. ಇಬ್ಬರು ಕನ್ನಡಿಗರ ಸಂಭಾಷಣೆಯಲ್ಲಿ ಭಾಷಿಕರಚನೆಯ ವಿನ್ಯಾಸದ ಜೊತೆಯಲ್ಲಿ ಸಿಗುವ ವಿಷಯಜ್ಞಾನ ಕೃತಕ ಇಂಗ್ಲಿಷ್‌ನ ಸಂಭಾಷಣೆಯಲ್ಲಿ ಸಿಗುವುದಿಲ್ಲ. ಕೇವಲ ವಸ್ತುನಿಷ್ಠ ವಿಚಾರಗಳು ಪರಸ್ಪರ ವಿನಿಮಯವಾಗುವುದೇ ಹೊರತು ಜೀವನಿಷ್ಠ ಮೌಲ್ಯಗಳಲ್ಲ. ಇದು ಬೌದ್ಧಿಕ ವಿಸ್ತಾರವನ್ನು, ಭಾವನಾತ್ಮಕ ಸಂಬಂಧವನ್ನು ಗಟ್ಟಿಯಾಗಿ ಬಂಧಿಸದ ಸಾಧ್ಯತೆಯಿರುತ್ತದೆ. ಹೊರಗಿನ ಶುದ್ಧಹವೆಯನ್ನು ಪಡೆದೇ ಸಸ್ಯಗಳು ಆಕಾಶಮುಖಿಯಾಗಿ ಬೆಳೆಯುತ್ತದೆ, ಬೆಳೆಯಬೇಕು.

ಎಲ್ಲ ಚಿಂತನೆಗಳು ಅಭಿವ್ಯಕ್ತಿಯಾಗುವುದು ಮಾತೃಭಾಷೆಯಲ್ಲೇ. ಇಂಗ್ಲಿಷ್ ಕೂಡ ಇದಕ್ಕೆ ಹೊರತಾಗಿಲ್ಲ. ಇದು ಪ್ರತಿಭಾಷೆಯ ಮೂಲಭೂತವಾದ ಬದ್ಧತೆ, ಅನಿವಾರ್ಯತೆವೂ ಹೌದು. ಕನ್ನಡಕ್ಕೆ ಸದ್ಯ ಒದಗಬೇಕಾದುದು ಇಂಥ ಅನಿವಾರ್ಯ ಮತ್ತು ಬದ್ಧತೆ. ಕನ್ನಡದ ಆರ್ಷೇಯ ಜ್ಞಾನಸಂಪತ್ತು ಉಳಿದುಬಂದಿರುವುದು ಪೂರ್ವಿಕರಲ್ಲಿದ್ದ ಇಂಥ ಅನಿವಾರ್ಯತೆ ಮತ್ತು ಬದ್ಧತೆಯಿಂದಾಗಿ. ಇವು ಕನ್ನಡವನ್ನು ಸದ್ಯ ಮತ್ತು ಶಾಶ್ವತವಾದ ನೆಲೆಯಲ್ಲಿ ಉಳಿಸುತ್ತಿದೆ. ಮಾತೃಭಾಷೆಯ ಶಿಕ್ಷಣದ ತಳಹದಿಯಿಲ್ಲದೆ ಇಂಗ್ಲಿಷನ್ನು ಇಂಗ್ಲಿಷ್‌ನಲ್ಲಿ ಓದಲು ಸಾಧ್ಯವಾಗುವುದಾದರೂ ‘ತನ್ನದೆಂಬ ಸ್ವಂತಿಕೆ’ಯ ಕಲ್ಪನೆಯ ಕಲಿಕಾಂಶಗಳಿಗೆ ಹೊರತಾಗಿಬಿಡುವ ಸಂಭವವೇ ಹೆಚ್ಚು. ಆಗ ಬೋಧನೆ ಯಾಂತ್ರಿಕವಾಗಿಯೂ, ಕಲಿಕೆ ಅಪೂರ್ಣವಾಗಿಯೂ, ಅಲ್ಲದೇ ಪರಿಸ್ಥಿತಿ ಹಿಂಸೆಯಾಗಿಯೂ ಪರಿವರ್ತನೆಯಾಗುತ್ತದೆ. ಮಕ್ಕಳನ್ನು ನಿಯಂತ್ರಿಸಬೇಕೆಂಬ ಬಲವಂತದ ಪ್ರಯತ್ನದಲ್ಲಿ ಶಿಕ್ಷಕರು ಕೊನೆಗೂ ಮೊರೆಹೋಗುವುದು ಕನ್ನಡದ ಪದಗಳಿಗೇ! ಹೊಸಭಾಷೆಯ ಕಲಿಕೆಯ ಮೊದಲು ಮಾತೃಭಾಷೆಯನ್ನು ವ್ಯವಸ್ಥಿತವಾಗಿ ಕಲಿತಿರಬೇಕು. ಅಂದಾಗ ಇಂಗ್ಲಿಷ್ ಕಲಿಕೆ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ. ಇಲ್ಲವಾದಲ್ಲಿ ‘ರೆಡಿಮೇಡ್ ಉಡುಪುಗಳ’ ಹಾಗೆ ಸಿದ್ಧವಾಕ್ಯಗಳಂತೆ ಪುನರುಕ್ತಿಯಾಗುತ್ತಲೇ ಇರುತ್ತದೆ.

ಆಂಗ್ಲಮಾಧ್ಯಮಕ್ಕೆ ಸೇರಿಸಿ ಮಕ್ಕಳನ್ನು ಅತೀಬೇಗ ವಿದ್ಯಾವಂತರಾಗಿಸುವುದರಲ್ಲೇ ಪೋಷಕರಿಗೆ ಆಸಕ್ತಿಯಿದೆಯೇ ವಿನಃ ಪ್ರತಿಭಾವಂತರನ್ನಾಗಿಸಲು ಪ್ರಯತ್ನಿಸುವುದಿಲ್ಲ. ಕೊನೆ ಪಕ್ಷ ಚಿಂತಿಸುವುದೂ ಇಲ್ಲ. ಅಂಕಗಳಿಕೆಯ ಎಲ್ಲ ಕಸರತ್ತುಗಳು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಪ್ರತಿಭಾವಂತರಿಲ್ಲದ ಕೇವಲ ವಿದ್ಯಾವಂತರು, ಬುದ್ಧಿವಂತರಿರುವ ಸಮಾಜ ನಿರ್ಮಾಣವಾದೀತು! ಈಗಲೇ ಆಗುತ್ತಿದೆ. ಕನಸುಗಳು, ಅನುಭವಗಳು ಇಲ್ಲದ ಸಮಾಜಕ್ಕೆ ಯಾವ ಭವಿಷ್ಯವೂ ಇರಲಾರದು. ಇಂಗ್ಲಿಷ್‌ನ ದಟ್ಟ ಪ್ರಭಾವದಲ್ಲೂ ನಮ್ಮ ಮಕ್ಕಳು ಪಡೆಯುವ ಜ್ಞಾನ ಮತ್ತು ವಿಷಯಾನುಭವಗಳು ಬದುಕಿನ ಅಂತರಂಗಕ್ಕೆ ತಲುಪಬೇಕಾದರೆ ಕನ್ನಡ ಬ್ರಾಹ್ಮಣವಾಗಿ ಶೂದ್ರ ಇಂಗ್ಲಿಷ್‌ನಲ್ಲಿಯೂ ಪರಿಣಿತಿಯನ್ನು ಪಡೆಯುತ್ತ ಆಲದಮರದಂತೆ ಕನ್ನಡ ಬೃಹದಾಕಾರವಾಗಿ ಬೆಳೆಯಬೇಕು. ಹಾಗಾದಾಗ ಮಾತ್ರ ಕನ್ನಡದಲ್ಲಿ ಸಾರ್ವಕಾಲಿಕ ಚಿಂತನೆಗಳು ಸೃಜಿಸಬಹುದು. ಹೊರಗಿನ ಗೊಬ್ಬರವನ್ನು ಹಾಕಿ ಬೆಳೆಸಿದ ಇಂಗ್ಲಿಷ್‌ನ ಪ್ರಭುತ್ವದಿಂದ ಕನ್ನಡದ ಗಿಡವು ಕ್ಷೀಣಿಸುವುದನ್ನು ತಪ್ಪಿಸಲು ಇಂಗ್ಲಿಷನ್ನು ಚೆನ್ನಾಗಿ ಬೋಧಿಸುವ ಕನ್ನಡ ಮಾಧ್ಯಮ ಶಾಲೆಗಳು ಎಲ್ಲಾ ದೃಷ್ಟಿಯಿಂದಲೂ ಹಿತವಾದುದ್ದಾಗಿದೆ. ಮನುಷ್ಯ ಸಂವೇದನೆಯೆಂಬುದು ದೇಶಕಾಲಭಾಷೆಯನ್ನು ಮೀರಿರುವಂಥದ್ದು. ಜೀವನ ಮೌಲ್ಯಗಳನ್ನು ನಾವು ಪಡೆಯುವ ಶಿಕ್ಷಣದಿಂದಲೇ ಗಳಿಸಬೇಕೆಂಬುದು ಸತ್ಯವಾದರೂ ಮನೆ, ಸಮಾಜ, ಶಾಲೆಯ ಪಾತ್ರವೂ ಮುಖ್ಯವಾಗಿಯೇ ಇದೆ. ಮಾತೃಭಾಷೆಯ ಮಹತ್ವದ ಅರಿವಾಗುವುದು ಇವುಗಳನ್ನು ನಾವು ಕಲಿಯುವ ಸಂದರ್ಭ ಸನ್ನಿವೇಶಗಳಲ್ಲಿ. ಕರ್ನಾಟಕದಲ್ಲಿ ಈ ತರದ ಬೆಳವಣಿಗೆಗಳು ಈಗೀಗ ಬೆಳಕಿಗೆ ಬಂದುದಕ್ಕೆ ಬರಗೂರರು ಬರೆದ ತುಮಕೂರಿನ ಸಿರಾದ ಕಳ್ಳಂಬೆಳ್ಳದಂಥ ಶಾಲೆಗಳು ನಿದರ್ಶನವಾಗಿದೆ.

ಆಂಗ್ಲಮಾಧ್ಯಮದ ಶಾಲೆಗಳೇ ಹೆಚ್ಚುತ್ತಿರುವ ಕನ್ನಡದ ನೆಲದಲ್ಲಿ ಕನ್ನಡದಂಥ ಮಾತೃಭಾಷೆಯೊಂದು ಹುಟ್ಟಿಸಬಹುದಾದ ಸಂವೇದನೆಯನ್ನು ಕನ್ನಡದ ಮಕ್ಕಳು ಬಾಲ್ಯದಿಂದಲೇ ಕಳೆದುಕೊಳ್ಳುವುದನ್ನು ತಪ್ಪಿಸಬೇಕು. ಒಂದು ಜೀವಂತಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿಗೆ ನಾವೆಲ್ಲ ಹೊಣೆಗಾರರಾಗಿದ್ದೇವೆ. ‘‘ಉನ್ನತ ವಿದ್ಯಾಭ್ಯಾಸದಲ್ಲಿ ವಿಜ್ಞಾನ, ಗಣಿತವೇ ಮುಂತಾದ ವಿಷಯಗಳನ್ನು ಆಂಗ್ಲಮಾಧ್ಯಮದಲ್ಲೇ ಕಲಿಯಬೇಕೆಂಬ ವಾದವಿದ್ದರೂ ಅದು ನಿಜವೇ ಇದ್ದರೂ - ಈ ಜವಾಬ್ದಾರಿಯನ್ನು ಹೊರಲಾರದ ಹೇಡಿತನವಾಗಕೂಡದು. ಸಾಹಸವಿಲ್ಲದೆ, ಶ್ರಮವಿಲ್ಲದೆ ಯಾವ ಹೊಸ ಸೃಷ್ಟಿಯೂ ಸಾಧ್ಯವಿಲ್ಲ. ಇದು ಬರೀ ಕನ್ನಡದ ಮಮತೆಯ ಪ್ರಶ್ನೆಯಲ್ಲ. ನಮ್ಮ ಭಾಷೆಗಳು ಎಷ್ಟೊಂದು ಹೀನ ಅವಸ್ಥೆಯಲ್ಲಿದ್ದಿರಲಿ - ನಮ್ಮ ಪರಿಸ್ಥಿತಿಯನ್ನು ಸಂಪೂರ್ಣ ಅರಿತುಕೊಂಡು, ಸದಾ ವಿಮರ್ಶಾತ್ಮಕ ದೃಷ್ಟಿ ತಾಳಿದವರಾಗಿ ನಾವು ಈ ಸಾಹಸಕ್ಕೆ ಕೈಹಾಕಬೇಕು. ಅಂದರೆ ಇಂಗ್ಲಿಷ್‌ಗೆ ಆತುಕೊಂಡಿರುವುದನ್ನು ಬಿಟ್ಟುಬಿಡಬೇಕು’’ ಎನ್ನುತ್ತಾರೆ ಅನಂತ ಮೂರ್ತಿ. ಕನ್ನಡವನ್ನು ಪ್ರೀತಿಸಬೇಕು ಅಂದರೆ ಅನ್ಯಭಾಷೆಯನ್ನು ದ್ವೇಷಿಸುವುದು ಅಂತ ಅರ್ಥವಲ್ಲ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top